Shanti Parva: Chapter 148

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೪೮

ಇಂದ್ರೋತನು ಜನಮೇಜಯನಿಗೆ ಉಪದೇಶವನ್ನಿತ್ತು ಅವನಿಂದ ಅಶ್ವಮೇಧ ಯಜ್ಞವನ್ನು ಮಾಡಿಸುವುದು ಮತ್ತು ಜನಮೇಜಯನು ತನ್ನ ರಾಜ್ಯವನ್ನು ಪುನಃ ಪ್ರವೇಶಿಸುವುದು (೧-೩೫).

12148001 ಶೌನಕ ಉವಾಚ |

12148001a ತಸ್ಮಾತ್ತೇಽಹಂ ಪ್ರವಕ್ಷ್ಯಾಮಿ ಧರ್ಮಮಾವೃತ್ತಚೇತಸೇ|

12148001c ಶ್ರೀಮಾನ್ಮಹಾಬಲಸ್ತುಷ್ಟೋ ಯಸ್ತ್ವಂ ಧರ್ಮಮವೇಕ್ಷಸೇ|

ಶೌನಕನು ಹೇಳಿದನು: “ರಾಜನ್! ನಿನ್ನ ಪ್ರತಿಜ್ಞೆಯನ್ನು ನೋಡಿದರೆ ನಿನ್ನ ಮನಸ್ಸು ಪಾಪದಿಂದ ನಿವೃತ್ತವಾಯಿತೆಂದು ತಿಳಿಯುತ್ತದೆ. ಆದುದರಿಂದ ನಾನು ನಿನಗೆ ಧರ್ಮದ ಉಪದೇಶವನ್ನು ನೀಡುತ್ತೇನೆ. ಏಕೆಂದರೆ ನೀನು ಶ್ರೀಸಂಪನ್ನನೂ ಮಹಾ ಬಲಶಾಲಿಯೂ ಮತ್ತು ಸಂತುಷ್ಟನೂ ಆಗಿರುವೆ. ಮತ್ತು ನೀನು ಧರ್ಮದ ಮೇಲೆಯೇ ದೃಷ್ಟಿಯನ್ನಿಟ್ಟಿರುವೆ.

12148001e ಪುರಸ್ತಾದ್ದಾರುಣೋ ಭೂತ್ವಾ ಸುಚಿತ್ರತರಮೇವ ತತ್||

12148002a ಅನುಗೃಹ್ಣಂತಿ ಭೂತಾನಿ ಸ್ವೇನ ವೃತ್ತೇನ ಪಾರ್ಥಿವ|

ಪಾರ್ಥಿವ! ಮೊದಲು ಕಠೋರನಾಗಿದ್ದುಕೊಂಡು ನಂತರ ಕೋಮಲ ಭಾವವನ್ನು ತಾಳಿ ತನ್ನ ಸದ್ವ್ಯವಹಾರಗಳಿಂದ ಸಮಸ್ತ ಜೀವಿಗಳಿಗೆ ಅನುಗ್ರಹವನ್ನು ನೀಡುವುದು ಅತ್ಯಂತ ಆಶ್ಚರ್ಯಕರವಾದುದು.

12148002c ಕೃತ್ಸ್ನೇ ನೂನಂ ಸದಸತೀ[1] ಇತಿ ಲೋಕೋ ವ್ಯವಸ್ಯತಿ|

12148002e ಯತ್ರ ತ್ವಂ ತಾದೃಶೋ ಭೂತ್ವಾ ಧರ್ಮಮದ್ಯಾನುಪಶ್ಯಸಿ||

ತುಂಬಾ ಸಮಯ ರಾಜನು ತೀಕ್ಷ್ಣವಾಗಿಯೇ ಇದ್ದರೆ ಎಲ್ಲವನ್ನೂ ಸುಟ್ಟು ಭಸ್ಮಮಾಡುತ್ತಾನೆ ಎಂದು ಲೋಕದ ಅಭಿಪ್ರಾಯವಾಗಿದೆ. ಆದರೆ ನೀನು ಹಾಗಿದ್ದರೂ ಧರ್ಮದ ಮೇಲೆ ನಿನ್ನ ಲಕ್ಷ್ಯವನ್ನಿಟ್ಟಿರುವೆ ಎನ್ನುವುದು ಅಲ್ಪ ಆಶ್ಚರ್ಯದ ವಿಷಯವೇನೂ ಅಲ್ಲ.

12148003a ಹಿತ್ವಾ ಸುರುಚಿರಂ ಭಕ್ಷ್ಯಂ ಭೋಗಾಂಶ್ಚ ತಪ ಆಸ್ಥಿತಃ|

12148003c ಇತ್ಯೇತದಪಿ ಭೂತಾನಾಮದ್ಭುತಂ[2] ಜನಮೇಜಯ||

ಜನಮೇಜಯ! ನೀನು ದೀರ್ಘಕಾಲದಿಂದ ಭಕ್ಷ್ಯ-ಭೋಜ್ಯಾದಿ ಪದಾರ್ಥಗಳನ್ನು ಪರಿತ್ಯಜಿಸಿ ತಪಸ್ಸಿನಲ್ಲಿ ನಿರತನಾಗಿರುವೆಯೆಂದರೆ ಇದು ಜೀವಿಗಳಿಗೆ ಅದ್ಭುತವಾದುದೇ ಸರಿ.

12148004a ಯೋ ದುರ್ಬಲೋ[3] ಭವೇದ್ದಾತಾ ಕೃಪಣೋ ವಾ ತಪೋಧನಃ|

12148004c ಅನಾಶ್ಚರ್ಯಂ ತದಿತ್ಯಾಹುರ್ನಾತಿದೂರೇ ಹಿ ವರ್ತತೇ||

ಧನಸಂಪನ್ನನು ದಾನಿಯಾಗಿರುವುದರಲ್ಲಿ ಅಥವಾ ದರಿದ್ರನು ತಪೋಧನನಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಇಂಥವರಿಗೆ ದಾನ ಮತ್ತು ತಪಸ್ಸುಗಳು ಅಧಿಕ ಕಠಿಣವಾದವುಗಳಲ್ಲ.

12148005a ಏತದೇವ ಹಿ ಕಾರ್ಪಣ್ಯಂ ಸಮಗ್ರಮಸಮೀಕ್ಷಿತಮ್|

12148005c ತಸ್ಮಾತ್ಸಮೀಕ್ಷಯೈವ ಸ್ಯಾದ್ಭವೇತ್ತಸ್ಮಿಂಸ್ತತೋ ಗುಣಃ||

ಸಮಗ್ರವಾಗಿ ವಿಚಾರಿಸದೇ ಕಾರ್ಯವನ್ನು ಆರಂಭಿಸುವುದು ಕಾರ್ಪಣ್ಯತೆ. ಆದುದರಿಂದ ಎಲ್ಲವನ್ನೂ ಸಮೀಕ್ಷಿಸಿ ಕಾರ್ಯಕೈಗೊಳ್ಳುವುದರಲ್ಲಿಯೇ ಉತ್ತಮ ಗುಣವಿದೆ.

12148006a ಯಜ್ಞೋ ದಾನಂ ದಯಾ ವೇದಾಃ ಸತ್ಯಂ ಚ ಪೃಥಿವೀಪತೇ|

12148006c ಪಂಚೈತಾನಿ ಪವಿತ್ರಾಣಿ ಷಷ್ಠಂ ಸುಚರಿತಂ ತಪಃ||

ಪೃಥಿವೀಪತೇ! ಯಜ್ಞ, ದಾನ, ದಯೆ, ವೇದಗಳು ಮತ್ತು ಸತ್ಯ ಈ ಐದನ್ನು ಪವಿತ್ರವೆಂದು ಹೇಳಲಾಗಿದೆ. ಇದರ ಜೊತೆ ಸುಚರಿತವಾದ ತಪಸ್ಸೂ ಕೂಡ ಆರನೆಯ ಪವಿತ್ರ ಕರ್ಮವೆಂದು ಹೇಳಲಾಗಿದೆ.

12148007a ತದೇವ ರಾಜ್ಞಾಂ ಪರಮಂ ಪವಿತ್ರಂ ಜನಮೇಜಯ|

12148007c ತೇನ ಸಮ್ಯಗ್ಗೃಹೀತೇನ ಶ್ರೇಯಾಂಸಂ ಧರ್ಮಮಾಪ್ಸ್ಯಸಿ||

ಜನಮೇಜಯ! ರಾಜರಿಗೆ ಇವೇ ಪರಮ ಪವಿತ್ರವಾದವುಗಳು. ಇವುಗಳನ್ನು ಚೆನ್ನಾಗಿ ಆಚರಣೆಗೆ ತರುವುದರಿಂದ ನೀನು ಶ್ರೇಯಸ್ಸನ್ನೂ ಧರ್ಮವನ್ನೂ ಪಡೆದುಕೊಳ್ಳುತ್ತೀಯೆ.

12148008a ಪುಣ್ಯದೇಶಾಭಿಗಮನಂ ಪವಿತ್ರಂ ಪರಮಂ ಸ್ಮೃತಮ್|

12148008c ಅಪಿ ಹ್ಯುದಾಹರಂತೀಮಾ ಗಾಥಾ ಗೀತಾ ಯಯಾತಿನಾ||

ಪುಣ್ಯ ತೀರ್ಥಗಳಿಗೆ ಯಾತ್ರೆಮಾಡುವುದನ್ನೂ ಪರಮ ಪವಿತ್ರವೆಂದು ಪರಿಗಣಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಯಾತಿಯು ಹಾಡಿದ ಈ ಗಾಥೆಯನ್ನು ಉದಾಹರಿಸುತ್ತಾರೆ.

12148009a ಯೋ ಮರ್ತ್ಯಃ ಪ್ರತಿಪದ್ಯೇತ ಆಯುರ್ಜೀವೇತ ವಾ ಪುನಃ|

12148009c ಯಜ್ಞಮೇಕಾಂತತಃ ಕೃತ್ವಾ ತತ್ಸಂನ್ಯಸ್ಯ ತಪಶ್ಚರೇತ್||

ದೀರ್ಘ ಕಾಲದ ಜೀವನವನ್ನು ಬಯಸುವವನು ಯತ್ನಪೂರ್ವಕ ಯಜ್ಞವನ್ನು ಮಾಡಬೇಕು ಮತ್ತು ನಂತರ ಅದನ್ನು ತ್ಯಜಿಸಿ ತಪಸ್ಸನ್ನಾಚರಿಸಬೇಕು.

12148010a ಪುಣ್ಯಮಾಹುಃ ಕುರುಕ್ಷೇತ್ರಂ ಸರಸ್ವತ್ಯಾಂ ಪೃಥೂದಕಮ್[4]|

12148010c ಯತ್ರಾವಗಾಹ್ಯ ಪೀತ್ವಾ ವಾ ನೈವಂ ಶ್ವೋಮರಣಂ ತಪೇತ್||

ಕುರುಕ್ಷೇತ್ರ, ಸರಸ್ವತೀ ನದಿ ಮತ್ತು ಪೃಥೂದಕಗಳನ್ನು ಪುಣ್ಯಕರವೆಂದು ಹೇಳುತ್ತಾರೆ. ಅವುಗಳಲ್ಲಿ ಸ್ನಾನಮಾಡಿದವರಿಗೆ ಮತ್ತು ಅವುಗಳ ನೀರನ್ನು ಕುಡಿದವರಿಗೆ ಮುಂದಾಗುವ ಮರಣವು ಭಯವಿರುವುದಿಲ್ಲ.

12148011a ಮಹಾಸರಃ ಪುಷ್ಕರಾಣಿ ಪ್ರಭಾಸೋತ್ತರಮಾನಸೇ|

12148011c ಕಾಲೋದಂ ತ್ವೇವ ಗಂತಾಸಿ ಲಬ್ಧಾಯುರ್ಜೀವಿತೇ ಪುನಃ||

12148012a ಸರಸ್ವತೀದೃಷದ್ವತ್ಯೌ ಸೇವಮಾನೋಽನುಸಂಚರೇಃ[5]|

12148012c ಸ್ವಾಧ್ಯಾಯಶೀಲಃ ಸ್ಥಾನೇಷು ಸರ್ವೇಷು ಸಮುಪಸ್ಪೃಶೇಃ||

ಮಹಾಸರೋವರ ಪುಷ್ಕರ, ಪ್ರಭಾಸ, ಉತ್ತರ ಮಾನಸ, ಕಾಲೋದಕ, ಸರಸ್ವತೀ ಮತ್ತು ದೃಷದ್ವತಿಗಳನ್ನು ಸೇವಿಸುತ್ತಾ ಸಂಚರಿಸಿದರೆ ನಿನಗೆ ಪುನಃ ಜೀವನದಲ್ಲಿ ದೀರ್ಘಾಯುವು ಪ್ರಾಪ್ತವಾಗುತ್ತದೆ. ಈ ಎಲ್ಲ ತೀರ್ಥಸ್ಥಾನಗಳಲ್ಲಿ ಸ್ವಾಧ್ಯಾಯಶೀಲನಾಗಿ ಸ್ನಾನಮಾಡಬೇಕು.

12148013a ತ್ಯಾಗಧರ್ಮಂ ಪವಿತ್ರಾಣಾಂ ಸಂನ್ಯಾಸಂ ಪರಮಬ್ರವೀತ್[6]|

12148013c ಅತ್ರಾಪ್ಯುದಾಹರಂತೀಮಾ ಗಾಥಾಃ ಸತ್ಯವತಾ ಕೃತಾಃ||

ಸರ್ವತ್ಯಾಗರೂಪ ಸಂನ್ಯಾಸವೇ ಪರಮ ಪವಿತ್ರವೆಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸತ್ಯವಾನನು ರಚಿಸಿದ ಈ ಗಾಥೆಯನ್ನು ಉದಾಹರಿಸುತ್ತಾರೆ.

12148014a ಯಥಾ ಕುಮಾರಃ ಸತ್ಯೋ ವೈ ನ ಪುಣ್ಯೋ ನ ಚ ಪಾಪಕೃತ್|

12148014c ನ ಹ್ಯಸ್ತಿ ಸರ್ವಭೂತೇಷು ದುಃಖಮಸ್ಮಿನ್ಕುತಃ ಸುಖಮ್||

ಬಾಲಕರು ರಾಗ-ದ್ವೇಷಗಳಿಂದ ಶೂನ್ಯರಾಗಿರುವ ಕಾರಣ ಸದಾ ಸತ್ಯಪರಾಯಣರಾಗಿಯೇ ಇರುತ್ತಾರೆ. ಅವರು ಪುಣ್ಯವನ್ನೂ ಮಾಡುವುದಿಲ್ಲ ಮತ್ತು ಪಾಪವನ್ನೂ ಮಾಡುವುದಿಲ್ಲ. ಈ ಲೋಕದಲ್ಲಿ ಸರ್ವಜೀವಿಗಳಿಗೂ ದುಃಖವೇ ಇಲ್ಲದಿರುವಾಗ ಸುಖವೆಲ್ಲಿಂದ?

12148015a ಏವಂ ಪ್ರಕೃತಿಭೂತಾನಾಂ ಸರ್ವಸಂಸರ್ಗಯಾಯಿನಾಮ್|

12148015c ತ್ಯಜತಾಂ ಜೀವಿತಂ ಪ್ರಾಯೋ ವಿವೃತೇ ಪುಣ್ಯಪಾತಕೇ||

ಈ ಸುಖ ಮತ್ತು ದುಃಖಗಳೆರಡೂ ಸರ್ವ ಸಂಸರ್ಗದೋಷಗಳನ್ನು ಸ್ವೀಕರಿಸಿ ಅವುಗಳನ್ನು ಅನುಸರಿಸಿ ನಡೆಯುವ ಪ್ರಕೃತಿಸ್ಥ ಪ್ರಾಣಿಗಳ ಧರ್ಮಗಳು. ಮಮತೆ ಮತ್ತು ಅಹಂಕಾರಾದಿಗಳೊಂದಿಗೆ ಎಲ್ಲವನ್ನೂ ತ್ಯಾಗಮಾಡಿದವರಿಗೆ ಪುಣ್ಯ ಮತ್ತು ಪಾಪಗಳೆಲ್ಲವೂ ನಿವೃತ್ತವಾಗಿರುತ್ತವೆ. ಅಂಥವರ ಜೀವನವೇ ಕಲ್ಯಾಣಮಯವಾದುದು.

12148016a ಯತ್ತ್ವೇವ ರಾಜ್ಞೋ ಜ್ಯಾಯೋ ವೈ ಕಾರ್ಯಾಣಾಂ ತದ್ವದಾಮಿ ತೇ|

12148016c ಬಲೇನ ಸಂವಿಭಾಗೈಶ್ಚ ಜಯ ಸ್ವರ್ಗಂ ಪುನೀಷ್ವ ಚ||

ಈಗ ನಾನು ರಾಜನ ಶ್ರೇಷ್ಠ ಕಾರ್ಯಗಳ ಕುರಿತು ಹೇಳುತ್ತೇನೆ. ಧರ್ಮಯುಕ್ತ ಬಲ ಮತ್ತು ದಾನಗಳ ಮೂಲಕ ಸ್ವರ್ಗಲೋಕವನ್ನು ಜಯಿಸು.

12148017a ಯಸ್ಯೈವಂ ಬಲಮೋಜಶ್ಚ ಸ ಧರ್ಮಸ್ಯ ಪ್ರಭುರ್ನರಃ|

12148017c ಬ್ರಾಹ್ಮಣಾನಾಂ ಸುಖಾರ್ಥಂ ತ್ವಂ ಪರ್ಯೇಹಿ ಪೃಥಿವೀಮಿಮಾಮ್||

ಯಾರಲ್ಲಿ ಬಲ ಮತ್ತು ಓಜಸ್ಸುಗಳಿವೆಯೋ ಅವನೇ ಧರ್ಮಾಚರಣೆಯಲ್ಲಿ ಸಮರ್ಥನಾಗುತ್ತಾನೆ. ಬ್ರಾಹ್ಮಣರ ಸುಖಕ್ಕಾಗಿಯೇ ನೀನು ಈ ಪೃಥ್ವಿಯನ್ನು ಪಾಲಿಸು.

12148018a ಯಥೈವೈನಾನ್ ಪುರಾಕ್ಷೈಪ್ಸೀಸ್ತಥೈವೈನಾನ್ ಪ್ರಸಾದಯ|

12148018c ಅಪಿ ಧಿಕ್ಕ್ರಿಯಮಾಣೋಽಪಿ ತ್ಯಜ್ಯಮಾನೋಽಪ್ಯನೇಕಧಾ||

12148019a ಆತ್ಮನೋ ದರ್ಶನಂ ವಿದ್ವನ್ನಾಹಂತಾಸ್ಮೀತಿ ಮಾ ಕ್ರುಧಃ|

12148019c ಘಟಮಾನಃ ಸ್ವಕಾರ್ಯೇಷು ಕುರು ನೈಃಶ್ರೇಯಸಂ ಪರಮ್||

ಹಿಂದೆ ಹೇಗೆ ಈ ಬ್ರಾಹ್ಮಣರನ್ನು ನೀನು ಆಕ್ಷೇಪಿಸಿದ್ದೆಯೋ ಅದೇ ರೀತಿ ಈಗ ಅವರನ್ನು ಪ್ರಸನ್ನಗೊಳಿಸು. ಅವರು ನಿನ್ನನ್ನು ಧಿಕ್ಕರಿಸಿ ಅನೇಕ ಬಾರಿ ತ್ಯಜಿಸಿದ್ದರೂ ನೀನು ನಿನ್ನ ಆತ್ಮದೃಷ್ಟಿಯನ್ನಿಟ್ಟುಕೊಂಡು ಇನ್ನು ಬ್ರಾಹ್ಮಣರನ್ನು ಕ್ರೋಧಿತನಾಗಿ ಕೊಲ್ಲುವುದಿಲ್ಲ ಎಂದು ನಿಶ್ಚಯಿಸು. ನಿನ್ನ ಕರ್ತವ್ಯಪಾಲನೆಗಾಗಿ ಸಂಪೂರ್ಣ ಪ್ರಯತ್ನಪಡುತ್ತಾ ಪರಮ ಕಲ್ಯಾಣದ ಸಾಧನೆಯನ್ನು ಮಾಡು.

12148020a ಹಿಮಾಗ್ನಿಘೋರಸದೃಶೋ ರಾಜಾ ಭವತಿ ಕಶ್ಚನ|

12148020c ಲಾಂಗಲಾಶನಿಕಲ್ಪೋ ವಾ ಭವತ್ಯನ್ಯಃ ಪರಂತಪ||

ಪರಂತಪ! ಕೆಲವು ರಾಜರು ಹಿಮದಂತೆ ಶೀತಲರಾಗಿರುತ್ತಾರೆ. ಕೆಲವರು ಅಗ್ನಿಯಂತೆ ತಾಪವುಳ್ಳವರಾಗಿರುತ್ತಾರೆ. ಇನ್ನು ಕೆಲವರು ಯಮರಾಜನಂತೆ ಘೋರರಾಗಿರುತ್ತಾರೆ. ಕೆಲವರು ಕಳೆಯನ್ನು ಮೂಲಸಹಿತ ಕಿತ್ತೊಗೆಯುವ ನೇಗಿಲಿನಂತಿರುತ್ತಾರೆ. ಇನ್ನು ಕೆಲವು ರಾಜರು ಪಾಪಚಾರಿಗಳ ಮೇಲೆ ಅಕಸ್ಮಾತ್ತಾಗಿ ಬೀಳುವ ಸಿಡಿಲಿನಂತಿರುತ್ತಾರೆ.

12148021a ನ ನಿಃಶೇಷೇಣ ಮಂತವ್ಯಮಚಿಕಿತ್ಸ್ಯೇನ[7] ವಾ ಪುನಃ|

12148021c ನ ಜಾತು ನಾಹಮಸ್ಮೀತಿ ಪ್ರಸಕ್ತವ್ಯಮಸಾಧುಷು||

ಎಂದೂ ನನ್ನ ಅಭಾವವು ಉಂಟಾಗದಿರಲೆಂದು ರಾಜನು ದುಷ್ಟ ಪುರುಷರೊಡನೆ ಸಂಬಂಧವೆನ್ನೆಂದೂ ಇಟ್ಟುಕೊಂಡಿರಬಾರದು. ಅವರೊಂದಿಗೆ ಯಾವ ಮಂತ್ರಾಲೋಚನೆಯನ್ನೂ ಮಾಡಬಾರದು ಮತ್ತು ಪುನಃ ಅವರೊಂದಿಗೆ ಉತ್ತಮವಾಗಿ ವ್ಯವಹರಿಸಲೂ ಬಾರದು.

12148022a ವಿಕರ್ಮಣಾ ತಪ್ಯಮಾನಃ ಪಾದಾತ್ಪಾಪಸ್ಯ ಮುಚ್ಯತೇ|

12148022c ನೈತತಕಾರ್ಯಂ ಪುನರಿತಿ ದ್ವಿತೀಯಾತ್ಪರಿಮುಚ್ಯತೇ|

12148022e ಚರಿಷ್ಯೇ ಧರ್ಮಮೇವೇತಿ ತೃತೀಯಾತ್ಪರಿಮುಚ್ಯತೇ[8]||

ದುಷ್ಕರ್ಮವನ್ನು ಮಾಡಿದವನು ಪಶ್ಚಾತ್ತಾಪ ಪಟ್ಟರೆ ಪಾಪದಿಂದ ಮುಕ್ತರಾಗುತ್ತಾರೆ. ಎರಡನೇ ಬಾರಿ ದುಷ್ಕರ್ಮವನ್ನು ಮಾಡಿದರೆ “ಇನ್ನು ನಾನು ಇದನ್ನು ಮಾಡುವುದಿಲ್ಲ” ಎಂದು ಪ್ರತಿಜ್ಞೆ ಮಾಡುವುದರಿಂದ ಪಾಪಮುಕ್ತನಾಗುತ್ತಾನೆ. ಮೂರನೆ ಬಾರಿ ದುಷ್ಕರ್ಮವನ್ನು ಮಾಡಿದರೆ “ಇನ್ನು ಮುಂದೆ ಧರ್ಮವನ್ನೇ ಆಚರಿಸುತ್ತೇನೆ” ಎಂದು ಶಪಥ ಮಾಡುವುದರಿಂದ ಪಾಪಮುಕ್ತನಾಗುತ್ತಾನೆ.

12148023a ಕಲ್ಯಾಣಮನುಮಂತವ್ಯಂ ಪುರುಷೇಣ ಬುಭೂಷತಾ|

12148023c ಯೇ ಸುಗಂಧೀನಿ ಸೇವಂತೇ ತಥಾಗಂಧಾ ಭವಂತಿ ತೇ|

12148023e ಯೇ ದುರ್ಗಂಧೀನಿ ಸೇವಂತೇ ತಥಾಗಂಧಾ ಭವಂತಿ ತೇ||

ಅಭಿವೃದ್ಧಿಯನ್ನು ಬಯಸುವ ಪುರುಷನು ಕಲ್ಯಾಣಕಾರೀ ಕರ್ಮಗಳನ್ನು ಮಾಡಬೇಕು. ಸುಗಂಧಿತ ಪದಾರ್ಥಗಳನ್ನು ಸೇವಿಸುವವರ ದೇಹದಿಂದ ಸುಗಂಧವು ಹೊರಹೊಮ್ಮುತ್ತದೆ ಮತ್ತು ಸದಾ ದುರ್ಗಂಧವನ್ನು ಸೇವಿಸುವವರ ಶರೀರದಿಂದ ದುರ್ಗಂಧವೇ ಪಸರಿಸುತ್ತದೆ.

12148024a ತಪಶ್ಚರ್ಯಾಪರಃ ಸದ್ಯಃ ಪಾಪಾದ್ಧಿ ಪರಿಮುಚ್ಯತೇ|

12148024c ಸಂವತ್ಸರಮುಪಾಸ್ಯಾಗ್ನಿಮಭಿಶಸ್ತಃ ಪ್ರಮುಚ್ಯತೇ|

12148024e ತ್ರೀಣಿ ವರ್ಷಾಣ್ಯುಪಾಸ್ಯಾಗ್ನಿಂ ಭ್ರೂಣಹಾ ವಿಪ್ರಮುಚ್ಯತೇ||

ತಪಸ್ಸಿನಲ್ಲಿ ತತ್ಪರನಾದ ಮನುಷ್ಯನು ತಕ್ಷಣವೇ ಪಾಪಗಳಿಂದ ಮುಕ್ತನಾಗುತ್ತಾನೆ. ಒಂದು ವರ್ಷದ ಪರ್ಯಂತ ಅಗ್ನಿಹೋತ್ರವನ್ನು ಮಾಡುವ ಕಲಂಕಿತ ಪುರುಷನು ತನ್ನ ಮೇಲಿರುವ ಕಲಂಕದಿಂದ ಮುಕ್ತನಾಗುತ್ತಾನೆ. ಮೂರು ವರ್ಷಗಳು ಅಗ್ನಿಯ ಉಪಾಸನೆಯನ್ನು ಮಾಡಿದರೆ ಭ್ರೂಣಹತ್ಯಾ ಪಾಪದಿಂದಲೂ ಮುಕ್ತನಾಗುತ್ತಾನೆ.

[9]12148025a ಯಾವತಃ ಪ್ರಾಣಿನೋ ಹನ್ಯಾತ್ತಜ್ಜಾತೀಯಾನ್ ಸ್ವಭಾವತಃ|

12148025c ಪ್ರಮೀಯಮಾಣಾನುನ್ಮೋಚ್ಯ ಭ್ರೂಣಹಾ[10] ವಿಪ್ರಮುಚ್ಯತೇ||

ಪ್ರಾಣಿಗಳ ಹತ್ಯೆಮಾಡುವವನು ಎಷ್ಟು ಪ್ರಾಣಿಗಳನ್ನು ವಧಿಸಿದ್ದನೋ ಅದೇ ಜಾತಿಯ ಅಷ್ಟೇ ಪ್ರಾಣಿಗಳನ್ನು ಮೃತ್ಯುವಿನಿಂದ ಉಳಿಸಿದ್ದೇ ಆದರೆ ಪ್ರಾಣಿಗಳನ್ನು ಕೊಂದ ಪಾಪದಿಂದ ಮುಕ್ತನಾಗುತ್ತಾನೆ.

12148026a ಅಪಿ ವಾಪ್ಸು ನಿಮಜ್ಜೇತ ತ್ರಿರ್ಜಪನ್ನಘಮರ್ಷಣಮ್|

12148026c ಯಥಾಶ್ವಮೇಧಾವಭೃಥಸ್ತಥಾ ತನ್ಮನುರಬ್ರವೀತ್||

ಅಘಮರ್ಷಣ ಮಂತ್ರ[11]ವನ್ನು ಜಪಿಸುತ್ತಾ ಮೂರು ಬಾರಿ ನೀರಿನಲ್ಲಿ ಮುಳುಗುವವನಿಗೆ ಅಶ್ವಮೇಧ ಯಜ್ಞದ ಅವಭೃತ ಸ್ನಾನದ ಫಲವು ದೊರೆಯುತ್ತದೆ ಎಂದು ಮನುವು ಹೇಳಿದ್ದಾನೆ.

12148027a ಕ್ಷಿಪ್ರಂ ಪ್ರಣುದತೇ ಪಾಪಂ ಸತ್ಕಾರಂ ಲಭತೇ ತಥಾ|

12148027c ಅಪಿ ಚೈನಂ ಪ್ರಸೀದಂತಿ ಭೂತಾನಿ ಜಡಮೂಕವತ್||

ಅಘಮರ್ಷಣ ಮಂತ್ರವನ್ನು ಜಪಿಸುವವನು ಶೀಘ್ರದಲ್ಲಿಯೇ ತನ್ನ ಪಾಪಗಳನ್ನು ಕಳೆದುಕೊಳ್ಳುತ್ತಾನೆ ಮತ್ತು ಅವನಿಗೆ ಸರ್ವತ್ರ ಸತ್ಕಾರವು ದೊರೆಯುತ್ತದೆ. ಅವನ ಕುರಿತು ಜಡ ಮತ್ತು ಮೂಕ ಎಲ್ಲ ಭೂತಗಳೂ  ಪ್ರಸನ್ನಗೊಳ್ಳುತ್ತವೆ.

12148028a ಬೃಹಸ್ಪತಿಂ ದೇವಗುರುಂ ಸುರಾಸುರಾಃ

ಸಮೇತ್ಯ ಸರ್ವೇ ನೃಪತೇಽನ್ವಯುಂಜನ್|

12148028c ಧರ್ಮೇ ಫಲಂ ವೇತ್ಥ ಕೃತೇ ಮಹರ್ಷೇ

ತಥೇತರಸ್ಮಿನ್ನರಕೇ ಪಾಪಲೋಕೇ||

12148029a ಉಭೇ ತು ಯಸ್ಯ ಸುಕೃತೇ ಭವೇತಾಂ

ಕಿಂ ಸ್ವಿತ್ತಯೋಸ್ತತ್ರ ಜಯೋತ್ತರಂ ಸ್ಯಾತ್|

12148029c ಆಚಕ್ಷ್ವ ನಃ ಕರ್ಮಫಲಂ ಮಹರ್ಷೇ

ಕಥಂ ಪಾಪಂ ನುದತೇ ಪುಣ್ಯಶೀಲಃ||

ಒಮ್ಮೆ ಎಲ್ಲ ದೇವತೆಗಳು ಮತ್ತು ಅಸುರರು ಅತಿ ಆದರದಿಂದ ದೇವಗುರು ಬೃಹಸ್ಪತಿಯ ಬಳಿ ಹೋಗಿ ಕೇಳಿದರು: “ಮಹರ್ಷೇ! ನೀನು ಧರ್ಮಫಲವನ್ನು ತಿಳಿದಿರುವೆ. ಮತ್ತು ಎಂಥವರಿಗೆ ನರಕದ ಪಾಪಲೋಕವು ದೊರೆಯುತ್ತದೆ ಎನ್ನುವುದನ್ನೂ ನೀನು ತಿಳಿದಿದ್ದೀಯೆ. ಆದರೆ ಯಾರಿಗೆ ಸುಖ ಮತ್ತು ದುಃಖ ಎರಡೂ ಸಮನಾಗಿರುವವೋ ಅವನು ಪುಣ್ಯ-ಪಾಪಗಳ ಫಲವನ್ನು ಜಯಿಸುತ್ತಾನೆಯೇ? ಮಹರ್ಷೇ! ನಮಗೆ ಕರ್ಮಫಲಗಳನ್ನು ವರ್ಣಿಸು ಮತ್ತ ಪುಣ್ಯಶೀಲನು ಪಾಪಗಳನ್ನು ಹೇಗೆ ಕಳೆದುಕೊಳ್ಳುತ್ತಾನೆ ಎನ್ನುವದನ್ನೂ ಹೇಳು.”

12148030 ಬೃಹಸ್ಪತಿರುವಾಚ |

12148030a ಕೃತ್ವಾ ಪಾಪಂ ಪೂರ್ವಮಬುದ್ಧಿಪೂರ್ವಂ

ಪುಣ್ಯಾನಿ ಯಃ ಕುರುತೇ ಬುದ್ಧಿಪೂರ್ವಮ್|

12148030c ಸ ತತ್ಪಾಪಂ ನುದತೇ ಪುಣ್ಯಶೀಲೋ

ವಾಸೋ ಯಥಾ ಮಲಿನಂ ಕ್ಷಾರಯುಕ್ತ್ಯಾ||

ಬೃಹಸ್ಪತಿಯು ಹೇಳಿದನು: “ಮೊದಲು ತಿಳಿಯದೆಯೇ ಪಾಪವನ್ನು ಮಾಡಿ ನಂತರ ಬುದ್ಧಿಪೂರ್ವಕವಾಗಿ ಪುಣ್ಯಕರ್ಮಗಳನ್ನು ಮಾಡಿದರೆ ಆ ಪುಣ್ಯಶೀಲನು ಕ್ಷಾರವನ್ನು ಬಳಸಿ ಬಟ್ಟೆಯಲ್ಲಿಯ ಕೊಳೆಯನ್ನು ತೊಳೆಯುವಂತೆ ತನ್ನ ಪಾಪವನ್ನು ತೊಳೆದುಕೊಳ್ಳುತ್ತಾನೆ.

12148031a ಪಾಪಂ ಕೃತ್ವಾ ನ ಮನ್ಯೇತ ನಾಹಮಸ್ಮೀತಿ ಪೂರುಷಃ|

12148031c ಚಿಕೀರ್ಷೇದೇವ ಕಲ್ಯಾಣಂ ಶ್ರದ್ದಧಾನೋಽನಸೂಯಕಃ||

ಪಾಪವನ್ನೆಸಗಿ ಅಭಿಮಾನಪಡಬಾರದು. ಪೌರುಷವನ್ನು ತೋರಿಸಬಾರದು. ಇನ್ನಾದರೂ ಶ್ರದ್ಧಾಪೂರ್ವಕನಾಗಿ ಅನಸೂಯಕನಾಗಿ ಕಲ್ಯಾಣಯುಕ್ತ ಕರ್ಮಗಳನ್ನೇ ಮಾಡಬೇಕು.

12148032a ಚಿದ್ರಾಣಿ ವಸನಸ್ಯೇವ ಸಾಧುನಾ ವಿವೃಣೋತಿ ಯಃ|

12148032c ಯಃ ಪಾಪಂ ಪುರುಷಃ ಕೃತ್ವಾ ಕಲ್ಯಾಣಮಭಿಪದ್ಯತೇ||

ಸತ್ಪುರುಷರ ವಸ್ತ್ರಗಳಲ್ಲಿರುವ ಛಿದ್ರಗಳನ್ನು ಮುಚ್ಚುವವನು ಮತ್ತು ಪಾಪಕರ್ಮಗಳನ್ನು ಮಾಡಿ ನಂತರವಾದರೂ ಕಲ್ಯಾಣ ಕರ್ಮಗಳನ್ನೆಸಗುವನು ಇಬ್ಬರೂ ಪಾಪರಹಿತರಾಗುತ್ತಾರೆ.

12148033a ಯಥಾದಿತ್ಯಃ ಪುನರುದ್ಯಂಸ್ತಮಃ ಸರ್ವಂ ವ್ಯಪೋಹತಿ|

12148033c ಕಲ್ಯಾಣಮಾಚರನ್ನೇವಂ ಸರ್ವಂ ಪಾಪಂ ವ್ಯಪೋಹತಿ||

ಆದಿತ್ಯನು ಹೇಗೆ ಉದಯವಾಗಿ ಸರ್ವ ಕತ್ತಲೆಯನ್ನೂ ಹೋಗಲಾಡಿಸುತ್ತಾನೋ ಹಾಗೆ ಕಲ್ಯಾಣಕರ ಕರ್ಮಗಳನ್ನು ಮಾಡಿದರೆ ಸರ್ವ ಪಾಪಗಳೂ ಕಳೆದುಹೋಗುತ್ತವೆ.”””

12148034 ಭೀಷ್ಮ ಉವಾಚ |

12148034a ಏವಮುಕ್ತ್ವಾ ಸ ರಾಜಾನಮಿಂದ್ರೋತೋ ಜನಮೇಜಯಮ್|

12148034c ಯಾಜಯಾಮಾಸ ವಿಧಿವದ್ವಾಜಿಮೇಧೇನ ಶೌನಕಃ||

ಭೀಷ್ಮನು ಹೇಳಿದನು: “ರಾಜಾ ಜನಮೇಜಯನಿಗೆ ಹೀಗೆ ಹೇಳಿ ಶೌನಕ ಇಂದ್ರೋತನು ಅವನಿಂದ ವಿಧಿವತ್ತಾಗಿ ಅಶ್ವಮೇಧ ಯಜ್ಞವನ್ನು ಮಾಡಿಸಿದನು.

12148035a ತತಃ ಸ ರಾಜಾ ವ್ಯಪನೀತಕಲ್ಮಷಃ

ಶ್ರಿಯಾ ಯುತಃ ಪ್ರಜ್ವಲಿತಾಗ್ನಿರೂಪಯಾ|

12148035c ವಿವೇಶ ರಾಜ್ಯಂ ಸ್ವಮಮಿತ್ರಕರ್ಶನೋ

ದಿವಂ ಯಥಾ ಪೂರ್ಣವಪುರ್ನಿಶಾಕರಃ||

ಅನಂತರ  ಆ ರಾಜನು ದೋಷಗಳನ್ನು ಕಳೆದುಕೊಂಡು ಶ್ರೀಯಿಂದ ಕೂಡಿದವನಾಗಿ ಅಗ್ನಿರೂಪದಲ್ಲಿ ಪ್ರಜ್ವಲಿಸಿದನು. ಆ ಅಮಿತ್ರಕರ್ಶನನು ಪೂರ್ಣಿಮೆಯ ಚಂದ್ರನು ದಿವವನ್ನು ಹೇಗೋ ಹಾಗೆ ತನ್ನ ರಾಜ್ಯವನ್ನು ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಇಂದ್ರೋತಪಾರಿಕ್ಷಿತೀಯೇ ಅಷ್ಟಾಚತ್ವಾರಿಂಶದಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಇಂದ್ರೋತಪಾರಿಕ್ಷಿತೀಯ ಎನ್ನುವ ನೂರಾನಲ್ವತ್ತೆಂಟನೇ ಅಧ್ಯಾಯವು.

[1] ಕೃತ್ಸಂ ನೂನಂ ಸ ದಹತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[2] ಇತ್ಯೇತದಭಿಭೂತಾನಾಮದ್ಭುತಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[3] ಯೋಽದುರ್ಲಭೋ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇದೇ ಇಲ್ಲಿ ಸರಿಯಾದುದೆಂದು ನನ್ನ ಅಭಿಪ್ರಾಯ.

[4] ಪುಣ್ಯಮಾಹುಃ ಕುರುಕ್ಷೇತ್ರಂ ಕುರುಕ್ಷೇತ್ರಾತ್ ಸರಸ್ವತೀಂ| ಎಂಬ ಪಾಠಾಂತರವಿದೆ (ಗೀತಾ ಪ್ರೆಸ್) ಮತ್ತು ಇದರ ನಂತರ ಇನ್ನೊಂದು ಅಧಿಕ ಶ್ಲೋಕಾರ್ಧವಿದೆ: ಸರಸ್ವತ್ಯಾಶ್ಚ ತೀರ್ಥಾನಿ ತೀರ್ಥೇಭ್ಯಶ್ಚ ಪೃಥೂದಕಮ್||

[5] ಸಂಗಮೋ ಮಾನಸಃ ಸರಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[6] ಮನರಬ್ರವೀತ್ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[7] ಗಂತವ್ಯಮವಿಚ್ಛಿನ್ನೇನ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[8] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಶುಚಿಸ್ತೀರ್ಥಾನ್ಯನುಚರನ್ ಬಹುತ್ವಾತ್ಪರಿಮುಚ್ಯತೇ|

[9] ಗೀತಾ ಪ್ರೆಸ್ ನಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಮಹಾಸರಃ ಪುಷ್ಕರಾಣಿ ಪ್ರಭಾಸೋತ್ತರಮಾನಸೇ| ಅಭ್ಯೇತ್ಯ ಯೋಜನಶತಂ ಭ್ರೂಣಹಾ ವಿಪ್ರಮುಚ್ಯತೇ||

[10] ಪ್ರಾಣಿಹಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ಇದೇ ಇಲ್ಲಿ ಸೂಕ್ತವಾಗಿದೆ ಎಂದೆನಿಸುತ್ತದೆ.

[11] https://soundcloud.com/dr-harisha-b-s/10-1 ಅಘಮಷ೯ಣ ಮಂತ್ರ: ಅಘ=ನ ಗಚ್ಛಂತೀತಿ ಅಘಾಃ ನಮ್ಮನ್ನು ಬಿಟ್ಟು ಹೋಗದೇ ಇರುವುದು. ನಾವು ಮಾಡಿದ ಪಾಪಗಳು. ಪರಿಹರಿಸಿಕೊಳ್ಳದ ಹೊರತು ನಮ್ಮನ್ನು ಬಿಟ್ಟು ಹೋಗದೇ ಇರುವವು. ತೇಷಾಂ ಮರ್ಷಣಂ ಅವುಗಳನ್ನು ಹೊಡೆದೋಡಿಸುವ ಮಂತ್ರ ಅಘಮಷ೯ಣ ಮಂತ್ರ. ಋತಂ ಚ ಸತ್ಯಂಚೇತಿ ಸೂಕ್ತಸ್ಯ ಅಘಮರ್ಷಣ ಋಷಿಃ ಇತಿ ಶಿರಸಿ| ಅನುಷ್ಟುಪ್ ಛಂದಃ ಇತಿ ಮುಖೇ| ಭಾವವೃತ್ತೋ ದೇವತಾ ಇತಿ ಹೃದಯೇ| ಪಾಪ ಪುರುಷ ವಿಸರ್ಜನೇ ವಿನಿಯೋಗಃ ಇತಿ ನಮನಮ್| ಓಮ್ ಋತಂ ಚ ಸತ್ಯಂ ಚಾಭೀದ್ಧಾತ್ತಪಸೋಧ್ಯಜಾಯತ| ತತೋ ರಾತ್ರ್ಯಜಾಯತ ತತಃ ಸಮುದ್ರೋ ಅರ್ಣವಃ|| ಸಮುದ್ರಾದರ್ಣವಾದಧಿ ಸಂವತ್ಸರೋ ಅಜಾಯತ| ಅಹೋರಾತ್ರಾಣಿ ವಿದಧದ್ವಿಶ್ವಸ್ಯ ಮಿಷತೋ ವಶೀ|| ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್| ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ||

Comments are closed.