Shanti Parva: Chapter 146

ಶಾಂತಿ ಪರ್ವ: ಆಪದ್ಧರ್ಮ ಪರ್ವ

೧೪೬

ಇಂದ್ರೋತ ಪಾರಿಕ್ಷಿತೀಯ ಸಂವಾದ

ಇಂದ್ರೋತನು ತಿಳಿಯದೇ ಬ್ರಹ್ಮಹತ್ಯಾದೋಷವನ್ನು ಪಡೆದುಕೊಂಡ ಜನಮೇಜಯನನ್ನು ನಿಂದಿಸಿದುದು (1-18)

12146001 ಯುಧಿಷ್ಠಿರ ಉವಾಚ|

12146001a ಅಬುದ್ಧಿಪೂರ್ವಂ ಯಃ ಪಾಪಂ ಕುರ್ಯಾದ್ಭರತಸತ್ತಮ|

12146001c ಮುಚ್ಯತೇ ಸ ಕಥಂ ತಸ್ಮಾದೇನಸಸ್ತದ್ವದಸ್ವ ಮೇ||

ಯುಧಿಷ್ಠಿರನು ಹೇಳಿದನು: “ಭರತಸತ್ತಮ! ತಿಳಿಯದೇ ಪಾಪಕಾರ್ಯವನ್ನು ಮಾಡಿದರೆ ಅದರಿಂದ ಹೇಗೆ ಮುಕ್ತಿಯನ್ನು ಪಡೆಯಬಹುದು ಎನ್ನುವುದನ್ನು ನನಗೆ ಹೇಳು.”

12146002 ಭೀಷ್ಮ ಉವಾಚ|

12146002a ಅತ್ರ ತೇ ವರ್ಣಯಿಷ್ಯೇಽಹಮಿತಿಹಾಸಂ ಪುರಾತನಮ್|

12146002c ಇಂದ್ರೋತಃ ಶೌನಕೋ ವಿಪ್ರೋ ಯದಾಹ ಜನಮೇಜಯಮ್||

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಶೌನಕ[1] ವಿಪ್ರ ಇಂದ್ರೋತನು ಜನಮೇಜಯನಿಗೆ ಹೇಳಿದುದನ್ನು ಉದಾಹರಿಸುತ್ತಾರೆ.

12146003a ಆಸೀದ್ರಾಜಾ ಮಹಾವೀರ್ಯಃ ಪಾರಿಕ್ಷಿಜ್ಜನಮೇಜಯಃ|

12146003c ಅಬುದ್ಧಿಪೂರ್ವಂ ಬ್ರಹ್ಮಹತ್ಯಾ ತಮಾಗಚ್ಚನ್ಮಹೀಪತಿಮ್||

ಪರೀಕ್ಷಿತನ ಮಗ ಜನಮೇಜಯ[2]ನೆಂಬ ಮಹಾವೀರ್ಯ ರಾಜನಿದ್ದನು. ಆ ಮಹೀಪತಿಯು ತಿಳಿಯದೆಯೇ ಬ್ರಹ್ಮಹತ್ಯಾದೋಷವನ್ನು ತಂದುಕೊಂಡನು.

12146004a ತಂ ಬ್ರಾಹ್ಮಣಾಃ ಸರ್ವ ಏವ ತತ್ಯಜುಃ ಸಪುರೋಹಿತಾಃ|

12146004c ಜಗಾಮ ಸ ವನಂ ರಾಜಾ ದಹ್ಯಮಾನೋ ದಿವಾನಿಶಮ್||

ಆಗ ಪುರೋಹಿತರೂ ಸೇರಿ ಬ್ರಾಹ್ಮಣರೆಲ್ಲರೂ ಅವನನ್ನು ತ್ಯಜಿಸಿದರು. ದಿನರಾತ್ರಿ ಸುಡುತ್ತಿದ್ದ ರಾಜನು ವನಕ್ಕೆ ತೆರಳಿದನು.

12146005a ಸ ಪ್ರಜಾಭಿಃ ಪರಿತ್ಯಕ್ತಶ್ಚಕಾರ ಕುಶಲಂ ಮಹತ್|

12146005c ಅತಿವೇಲಂ ತಪಸ್ತೇಪೇ ದಹ್ಯಮಾನಃ ಸ ಮನ್ಯುನಾ||

ಪ್ರಜೆಗಳಿಂದಲೂ ಪರಿತ್ಯಕ್ತನಾದ ಅವನು ಮಹಾ ಶುಭಕರ್ಮವನ್ನು ಮಾಡಿದನು. ದುಃಖದಿಂದ ಸುಡುತ್ತಿದ್ದರೂ ಅವನು ದೀರ್ಘಕಾಲದ ವರೆಗೆ ತಪಸ್ಸನ್ನು ತಪಿಸಿದನು.

[3]12146006a ತತ್ರೇತಿಹಾಸಂ ವಕ್ಷ್ಯಾಮಿ ಧರ್ಮಸ್ಯಾಸ್ಯೋಪಬೃಂಹಣಮ್|

12146006c ದಹ್ಯಮಾನಃ ಪಾಪಕೃತ್ಯಾ ಜಗಾಮ ಜನಮೇಜಯಃ||

12146007a ವರಿಷ್ಯಮಾಣ ಇಂದ್ರೋತಂ ಶೌನಕಂ ಸಂಶಿತವ್ರತಮ್|

ನಾನು ಹೇಳುವ ಈ ಇತಿಹಾಸವು ಧರ್ಮವನ್ನು ವೃದ್ಧಿಸುತ್ತದೆ. ತನ್ನ ಪಾಪಕರ್ಮದಿಂದ ಸುಡುತ್ತಿದ್ದ ಜನಮೇಜಯನು ಸಂಶಿತವ್ರತ ಶೌನಕ ಇಂದ್ರೋತನ ಬಳಿ ಹೋದನು.

12146007c ಸಮಾಸಾದ್ಯೋಪಜಗ್ರಾಹ ಪಾದಯೋಃ ಪರಿಪೀಡಯನ್||

12146008a ತತೋ ಭೀತೋ ಮಹಾಪ್ರಾಜ್ಞೋ ಜಗರ್ಹೇ ಸುಭೃಶಂ ತದಾ|

12146008c ಕರ್ತಾ ಪಾಪಸ್ಯ ಮಹತೋ ಭ್ರೂಣಹಾ ಕಿಮಿಹಾಗತಃ||

12146009a ಕಿಂ ತವಾಸ್ಮಾಸು ಕರ್ತವ್ಯಂ ಮಾ ಮಾ ಸ್ಪ್ರಾಕ್ಷೀಃ ಕಥಂ ಚನ|

12146009c ಗಚ್ಚ ಗಚ್ಚ ನ ತೇ ಸ್ಥಾನಂ ಪ್ರೀಣಾತ್ಯಸ್ಮಾನಿಹ ಧ್ರುವಮ್||

ಕೂಡಲೇ ಅವನು ಮುನಿಯ ಪಾದಗಳನ್ನು ಹಿಡಿದುಕೊಂಡು ಮೆಲ್ಲ ಮೆಲ್ಲನೆ ಒತ್ತತೊಡಗಿದನು. ಭೀತನಾದ ಅವನನ್ನು ಮಹಾಪ್ರಾಜ್ಞನು ಬಹಳವಾಗಿ ನಿಂದಿಸಿದನು. “ನೀನಾದರೋ ಮಹಾ ಪಾಪವನ್ನು ಮಾಡಿದವನು. ಭ್ರೂಣಹತ್ಯೆಯನ್ನು ಮಾಡಿದವನೇ! ಇಲ್ಲಿಗೆ ಏಕೆ ಬಂದೆ? ನಮ್ಮಲ್ಲಿ ನಿನಗೆ ಯಾವ ಕೆಲಸವಿದೆ? ನನ್ನನ್ನು ಯಾವುದೇ ರೀತಿಯಲ್ಲಿಯೂ ಮುಟ್ಟದಿರು! ಹೊರಟು ಹೋಗು! ನೀನು ಇಲ್ಲಿರುವುದು ನಿಶ್ಚಯವಾಗಿಯೂ ನಮಗೆ ಇಷ್ಟವಾಗುವುದಿಲ್ಲ.

12146010a ರುಧಿರಸ್ಯೇವ ತೇ ಗಂಧಃ ಶವಸ್ಯೇವ ಚ ದರ್ಶನಮ್|

12146010c ಅಶಿವಃ ಶಿವಸಂಕಾಶೋ ಮೃತೋ ಜೀವನ್ನಿವಾಟಸಿ||

ನಿನ್ನಿಂದ ರಕ್ತದ ವಾಸನೆಯು ಬರುತ್ತಿದೆ. ಶವದಂತೆಯೇ ತೋರುತ್ತಿದ್ದೀಯೆ. ಮಂಗಲನಂತಿದ್ದರೂ ಅಮಂಗಲನಾಗಿದ್ದೀಯೆ. ಮೃತನಾಗಿದ್ದರೂ ಜೀವವಿರುವವನಂತೆ ತಿರುಗಾಡುತ್ತಿದ್ದೀಯೆ.

12146011a ಅಂತರ್ಮೃತ್ಯುರಶುದ್ಧಾತ್ಮಾ[4] ಪಾಪಮೇವಾನುಚಿಂತಯನ್|

12146011c ಪ್ರಬುಧ್ಯಸೇ ಪ್ರಸ್ವಪಿಷಿ ವರ್ತಸೇ ಚರಸೇ ಸುಖೀ||

ಅಶುದ್ಧಾತ್ಮಾ! ಒಳಗಿಂದ ನೀನು ಮೃತನಾಗಿದ್ದೀಯೆ. ಪಾಪದ ಕುರಿತೇ ಚಿಂತಿಸುತ್ತಾ ಎಚ್ಚರಿರುತ್ತೀಯೆ ಮತ್ತು ನಿದ್ರಿಸುತ್ತೀಯೆ. ಇದರಿಂದಲೇ ಸುಖಿಯಂತೆ ಸಂಚರಿಸುತ್ತಿದ್ದೀಯೆ.

12146012a ಮೋಘಂ ತೇ ಜೀವಿತಂ ರಾಜನ್ ಪರಿಕ್ಲಿಷ್ಟಂ ಚ ಜೀವಸಿ|

12146012c ಪಾಪಾಯೇವ ಚ ಸೃಷ್ಟೋಽಸಿ ಕರ್ಮಣೇ ಹ ಯವೀಯಸೇ||

ರಾಜನ್! ನಿನ್ನ ಜೀವನವು ವ್ಯರ್ಥವಾದುದು ಮತ್ತು ಕಷ್ಟದಿಂದ ಜೀವಿಸುತ್ತಿದ್ದೀಯೆ. ಪಾಪಕ್ಕಾಗಿಯೇ ನೀನು ಹುಟ್ಟಿದ್ದೀಯೆ. ಪಾಪಕರ್ಮಕ್ಕಾಗಿಯೇ ನಿನ್ನ ಜನ್ಮವಾಗಿದೆ.

12146013a ಬಹು ಕಲ್ಯಾಣಮಿಚ್ಚಂತ ಈಹಂತೇ ಪಿತರಃ ಸುತಾನ್|

12146013c ತಪಸಾ ದೇವತೇಜ್ಯಾಭಿರ್ವಂದನೇನ ತಿತಿಕ್ಷಯಾ||

ತಂದೆ-ತಾಯಿಗಳು ತಪಸ್ಸು, ದೇವಪೂಜೆ, ನಮಸ್ಕಾರ ಮತ್ತು ಕ್ಷಮೆ ಮೊದಲಾದವುಗಳ ಮೂಲಕ ಪುತ್ರನನ್ನು ಪಡೆಯಲು ಬಯಸುತ್ತಾರೆ ಮತ್ತು ಪುತ್ರನಿಗೆ ಪರಮ ಕಲ್ಯಾಣವನ್ನು ಇಚ್ಛಿಸುತ್ತಾರೆ.

12146014a ಪಿತೃವಂಶಮಿಮಂ ಪಶ್ಯ ತ್ವತ್ಕೃತೇ ನರಕಂ ಗತಮ್|

12146014c ನಿರರ್ಥಾಃ ಸರ್ವ ಏವೈಷಾಮಾಶಾಬಂಧಾಸ್ತ್ವದಾಶ್ರಯಾಃ||

ಆದರೆ ನೋಡು! ನಿನ್ನಿಂದಾಗಿ ನಿನ್ನ ಪಿತೃವಂಶವು ನರಕಕ್ಕೆ ಹೋಗಿದೆ. ನಿನ್ನ ಕುರಿತು ಅವರು ಏನೆಲ್ಲ ಆಶಯಗಳನ್ನು ಕಟ್ಟಿಕೊಂಡಿದ್ದರೋ ಆ ಎಲ್ಲ ಆಶಯಗಳೂ ವ್ಯರ್ಥವಾಗಿಬಿಟ್ಟವು.

12146015a ಯಾನ್ಪೂಜಯಂತೋ ವಿಂದಂತಿ ಸ್ವರ್ಗಮಾಯುರ್ಯಶಃ ಸುಖಮ್[5]|

12146015c ತೇಷು ತೇ ಸತತಂ ದ್ವೇಷೋ ಬ್ರಾಹ್ಮಣೇಷು ನಿರರ್ಥಕಃ||

ಯಾರನ್ನು ಪೂಜಿಸಿ ಜನರು ಸ್ವರ್ಗ, ಆಯಸ್ಸು, ಯಶಸ್ಸು ಮತ್ತು ಸುಖವನ್ನು ಪಡೆದುಕೊಳ್ಳುತ್ತಾರೋ ಆ ಬ್ರಾಹ್ಮಣರನ್ನೇ ನೀನು ಸದಾ ದ್ವೇಷಿಸುತ್ತಿದ್ದೀಯೆ.

12146016a ಇಮಂ ಲೋಕಂ ವಿಮುಚ್ಯ ತ್ವಮವಾಙ್ಮೂರ್ಧಾ ಪತಿಷ್ಯಸಿ|

12146016c ಅಶಾಶ್ವತೀಃ ಶಾಶ್ವತೀಶ್ಚ ಸಮಾಃ ಪಾಪೇನ ಕರ್ಮಣಾ||

ಈ ಲೋಕವನ್ನು ಬಿಟ್ಟಮೇಲೆ ನೀನು ನಿನ್ನ ಪಾಪಕರ್ಮಗಳ ಫಲವಾಗಿ ಅನಂತ ವರ್ಷಗಳ ವರೆಗೆ ತಲೆ ಕೆಳಗಾಗಿ ನರಕದಲ್ಲಿ ಬಿದ್ದಿರುತ್ತೀಯೆ.

12146017a ಅದ್ಯಮಾನೋ ಜಂತುಗೃಧ್ರೈಃ ಶಿತಿಕಂಠೈರಯೋಮುಖೈಃ|

12146017c ತತೋಽಪಿ ಪುನರಾವೃತ್ತಃ ಪಾಪಯೋನಿಂ ಗಮಿಷ್ಯಸಿ||

ಅಲ್ಲಿ ಲೋಹದ ಕೊಕ್ಕುಳ್ಳ ಹದ್ದುಗಳು ಮತ್ತು ನವಿಲುಗಳು ನಿನ್ನನ್ನು ಕುಕ್ಕಿ-ಕುಕ್ಕಿ ಪೀಡಿಸುತ್ತವೆ. ನೀನು ನರಕದಿಂದ ಹಿಂದಿರುಗಿದ ನಂತರವೂ ನೀನು ಪಾಪಯೋನಿಯಲ್ಲಿ ಜನ್ಮತಾಳುತ್ತೀಯೆ.

12146018a ಯದಿದಂ ಮನ್ಯಸೇ ರಾಜನ್ನಾಯಮಸ್ತಿ ಪರಃ ಕುತಃ|

12146018c ಪ್ರತಿಸ್ಮಾರಯಿತಾರಸ್ತ್ವಾಂ ಯಮದೂತಾ ಯಮಕ್ಷಯೇ||

ರಾಜನ್!  ಈ ಲೋಕದಲ್ಲಿಯೇ ಪಾಪದ ಫಲವು ದೊರಕದಿದ್ದಾಗ ಪರಲೋಕದ ಅಸ್ತಿತ್ವವಾದರೂ ಏನು ಎಂದು ನೀನು ಯೋಚಿಸುತ್ತಿರಬಹುದು. ಯಮಲೋಕದಲ್ಲಿ ಯಮದೂತರು ನಿನಗೆ ಈ ವಿಷಯದ ಕುರಿತು ನೆನಪಿಸುತ್ತಾರೆ.””

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಇಂದ್ರೋತಪಾರಿಕ್ಷಿತೀಯಸಂವಾದೇ ಷಟ್ಚತ್ವಾರಿಂಶದಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಇಂದ್ರೋತಪಾರಿಕ್ಷಿತೀಯಸಂವಾದ ಎನ್ನುವ ನೂರಾನಲ್ವತ್ತಾರನೇ ಅಧ್ಯಾಯವು.

[1] ಶುನಕನ ವಂಶದಲ್ಲಿ ಹುಟ್ಟಿದವನು.

[2] ಇಲ್ಲಿ ಹೇಳಿರುವ ಪರೀಕ್ಷಿತ ಮತ್ತು ಜನಮೇಜಯರು ಅಭಿಮನ್ಯುವಿನ ಪುತ್ರ ಪೌತ್ರರಲ್ಲ.

[3] ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಬ್ರಹ್ಮಹತ್ಯಾಪನೋದಾರ್ಥಮಪೃಚ್ಛದ್ ಬ್ರಾಹ್ಮಣಾನ್ ಬಹೂನ್| ಪರ್ಯಟನ್ ಪೃಥಿವೀಂ ಕೃತ್ಸ್ನಾಂ ದೇಶೇ ದೇಶೇ ನರಾಧಿಪಃ||

[4] ಬ್ರಹ್ಮಮೃತ್ಯುರಶುದ್ಧಾತ್ಮಾ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

[5] ಪ್ರಜಾಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).

Comments are closed.