ಶಾಂತಿ ಪರ್ವ: ಆಪದ್ಧರ್ಮ ಪರ್ವ
೧೪೫
ವ್ಯಾಧನಿಗೆ ಸ್ವರ್ಗಲೋಕಪ್ರಾಪ್ತಿ (1-18).
12145001 ಭೀಷ್ಮ ಉವಾಚ|
12145001a ವಿಮಾನಸ್ಥೌ ತು ತೌ ರಾಜಽಲ್ಲುಬ್ಧಕೋ ವೈ ದದರ್ಶ ಹ|
12145001c ದೃಷ್ಟ್ವಾ ತೌ ದಂಪತೀ ದುಃಖಾದಚಿಂತಯತ ಸದ್ಗತಿಮ್||
ಭೀಷ್ಮನು ಹೇಳಿದನು: “ರಾಜನ್! ಅವರಿಬ್ಬರೂ ವಿಮಾನಸ್ಥರಾಗಿದ್ದುದನ್ನು ವ್ಯಾಧನು ನೋಡಿದನು. ಆ ದಂಪತಿಗಳನ್ನು ನೋಡಿ ದುಃಖದಿಂದ ಅವನು ಸದ್ಗತಿಯ ಕುರಿತು ಚಿಂತಿಸತೊಡಗಿದನು.
12145002a ಕೀದೃಶೇನೇಹ[1] ತಪಸಾ ಗಚ್ಚೇಯಂ ಪರಮಾಂ ಗತಿಮ್|
12145002c ಇತಿ ಬುದ್ಧ್ಯಾ ವಿನಿಶ್ಚಿತ್ಯ ಗಮನಾಯೋಪಚಕ್ರಮೇ||
12145003a ಮಹಾಪ್ರಸ್ಥಾನಮಾಶ್ರಿತ್ಯ ಲುಬ್ಧಕಃ ಪಕ್ಷಿಜೀವನಃ|
12145003c ನಿಶ್ಚೇಷ್ಟೋ ಮಾರುತಾಹಾರೋ ನಿರ್ಮಮಃ ಸ್ವರ್ಗಕಾಂಕ್ಷಯಾ||
ನಾನೂ ಕೂಡ ಇಂತಹ ತಪಸ್ಸನ್ನಾಚರಿಸಿ ಪರಮಗತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಬುದ್ಧಿಯಿಂದ ನಿಶ್ಚಯಿಸಿ ಪಕ್ಷಿಗಳನ್ನು ಹಿಡಿದು ಜೀವನ ನಡೆಸುತ್ತಿದ್ದ ಆ ವ್ಯಾಧನು ಮಹಾಪ್ರಸ್ಥಾನವನ್ನಾಶ್ರಯಿಸಿ ಹೊರಟನು. ಅವನು ನಿಶ್ಚೇಷ್ಟನಾದನು. ಕೇವಲ ಗಾಳಿಯನ್ನೇ ಸೇವಿಸಿದನು. ಸ್ವರ್ಗದ ಆಕಾಂಕ್ಷೆಯಿಂದ ಮಮಕಾರವನ್ನು ತೊರೆದನು.
12145004a ತತೋಽಪಶ್ಯತ್ಸುವಿಸ್ತೀರ್ಣಂ ಹೃದ್ಯಂ ಪದ್ಮವಿಭೂಷಿತಮ್|
12145004c ನಾನಾದ್ವಿಜಗಣಾಕೀರ್ಣಂ ಸರಃ ಶೀತಜಲಂ ಶುಭಮ್|
ನಂತರ ಅವನು ಕಮಲಗಳಿಂದ ವಿಭೂಷಿತವಾಗಿದ್ದ ಒಂದು ವಿಸ್ತಾರವಾದ ಮನೋಹರ ಸರೋವರವನ್ನು ಕಂಡನು. ನಾನಾ ಪ್ರಕಾರದ ಜಲಪಕ್ಷಿಗಳು ಅಲ್ಲಿ ಕಲರವವನ್ನುಂಟುಮಾಡುತ್ತಿದ್ದವು. ಆ ಸರೋವರದಲ್ಲಿ ಶುಭ ಶೀತಜಲವಿತ್ತು.
12145004e ಪಿಪಾಸಾರ್ತೋಽಪಿ ತದ್ದೃಷ್ಟ್ವಾ ತೃಪ್ತಃ ಸ್ಯಾನ್ನಾತ್ರ ಸಂಶಯಃ||
12145005a ಉಪವಾಸಕೃಶೋಽತ್ಯರ್ಥಂ ಸ ತು ಪಾರ್ಥಿವ ಲುಬ್ಧಕಃ|
12145005c ಉಪಸರ್ಪತ ಸಂಹೃಷ್ಟಃ ಶ್ವಾಪದಾಧ್ಯುಷಿತಂ ವನಮ್||
12145006a ಮಹಾಂತಂ ನಿಶ್ಚಯಂ ಕೃತ್ವಾ ಲುಬ್ಧಕಃ ಪ್ರವಿವೇಶ ಹ|
12145006c ಪ್ರವಿಶನ್ನೇವ ಚ ವನಂ ನಿಗೃಹೀತಃ ಸ ಕಂಟಕೈಃ||
12145007a ಸ ಕಂಟಕವಿಭುಗ್ನಾಂಗೋ ಲೋಹಿತಾರ್ದ್ರೀಕೃತಚ್ಚವಿಃ|
ಪಾರ್ಥಿವ! ಆ ಸರೋವರವು ಬಾಯಾರಿಕೆಯಿಂದ ಎಷ್ಟೇ ಪೀಡಿತನಾದವನಿಗೂ ನೋಡಿದ ಮಾತ್ರಕ್ಕೇ ತೃಪ್ತನಾಗುವಂತಿತ್ತು. ಆ ವ್ಯಾಧನಾದರೋ ಉಪವಾಸದಿಂದ ಅತ್ಯಂತ ದುರ್ಬಲನಾಗಿಬಿಟ್ಟಿದ್ದನು. ಆದರೂ ಅವನು ಸರೋವರದ ಕಡೆ ದೃಷ್ಟಿಯನ್ನೂ ಹಾಯಿಸದೇ ಅತ್ಯಂತ ಹರ್ಷದೊಂದಿಗೆ ಕ್ರೂರ ಪ್ರಾಣಿಗಳಿಂದ ತುಂಬಿದ್ದ ವನವನ್ನು ಪ್ರವೇಶಿಸಿದನು. ಮಹಾ ಅಂತ್ಯದ ನಿಶ್ಚಯವನ್ನು ಮಾಡಿ ವ್ಯಾಧನು ಆ ವನವನ್ನು ಪ್ರವೇಶಿಸಿದನು. ಪ್ರವೇಶಿಸುತ್ತಲೇ ಮುಳ್ಳಿನ ಪೊದೆಗಳಲ್ಲಿ ಸಿಲುಕಿಹಾಕಿಕೊಂಡನು. ಮುಳ್ಳುಗಳಿಂದ ಅವನ ಶರೀರವೆಲ್ಲಾ ಗಾಯಗೊಂಡು ರಕ್ತಸುರಿಯಲು ಪ್ರಾರಂಭಿಸಿತು.
12145007c ಬಭ್ರಾಮ ತಸ್ಮಿನ್ವಿಜನೇ ನಾನಾಮೃಗಸಮಾಕುಲೇ||
12145008a ತತೋ ದ್ರುಮಾಣಾಂ ಮಹತಾಂ ಪವನೇನ ವನೇ ತದಾ|
12145008c ಉದತಿಷ್ಠತ ಸಂಘರ್ಷಾತ್ಸುಮಹಾನ್ ಹವ್ಯವಾಹನಃ||
12145009a ತದ್ವನಂ ವೃಕ್ಷಸಂಕೀರ್ಣಂ ಲತಾವಿಟಪಸಂಕುಲಮ್|
12145009c ದದಾಹ ಪಾವಕಃ ಕ್ರುದ್ಧೋ ಯುಗಾಂತಾಗ್ನಿಸಮಪ್ರಭಃ||
ನಾನಾಮೃಗ ಸಂಕುಲಗಳಿಂದ ತುಂಬಿದ್ದ ಆ ನಿರ್ಜನ ವನದಲ್ಲಿ ಅವನು ಅಲಿಂದಿಲ್ಲಿಗೆ ಸುತ್ತಾಡತೊಡಗಿದನು. ಅಷ್ಟರಲ್ಲಿಯೇ ಪ್ರಚಂಡ ಗಾಳಿಯು ಬೀಸಿ ವನದಲ್ಲಿದ್ದ ದೊಡ್ಡ ದೊಡ್ಡ ಮರಗಳು ಒಂದಕ್ಕೊಂದು ತಾಗಿ ಅತಿ ದೊಡ್ಡ ಕಾಡಾಗ್ನಿಯು ಹುಟ್ಟಿಕೊಂಡಿತು. ಬೆಂಕಿಯ ದೊಡ್ಡ ದೊಡ್ಡ ಜ್ವಾಲೆಗಳು ಮೇಲೇಳತೊಡಗಿದವು. ಪ್ರಲಯಕಾಲದ ಸಂವರ್ತಕ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಆ ಕುಪಿತ ಅಗ್ನಿದೇವನು ಲತೆಗಳು, ಪೊದೆಗಳು ಮತ್ತು ವೃಕ್ಷಗಳಿಂದ ವ್ಯಾಪ್ತವಾಗಿದ್ದ ಆ ವನವನ್ನು ಸುಡಲು ತೊಡಗಿದನು.
12145010a ಸಜ್ವಾಲೈಃ ಪವನೋದ್ಧೂತೈರ್ವಿಸ್ಫುಲಿಂಗೈಃ ಸಮನ್ವಿತಃ|
12145010c ದದಾಹ ತದ್ವನಂ ಘೋರಂ ಮೃಗಪಕ್ಷಿಸಮಾಕುಲಮ್||
ಗಾಳಿಯಿಂದ ಮೇಲೆದ್ದ ಕಿಡಿಗಳಿಂದ ಮತ್ತು ಜ್ವಾಲೆಗಳಿಂದ ಸಮನ್ವಿತನಾದ ಅಗ್ನಿಯು ಘೋರ ಮೃಗಪಕ್ಷಿಗಳಿಂದ ಕೂಡಿದ್ದ ಆ ವನವನ್ನು ಸುಟ್ಟನು.
12145011a ತತಃ ಸ ದೇಹಮೋಕ್ಷಾರ್ಥಂ ಸಂಪ್ರಹೃಷ್ಟೇನ ಚೇತಸಾ|
12145011c ಅಭ್ಯಧಾವತ ಸಂವೃದ್ಧಂ ಪಾವಕಂ ಲುಬ್ಧಕಸ್ತದಾ||
ಆಗ ದೇಹಮೋಕ್ಷಕ್ಕಾಗಿ ಪ್ರಹೃಷ್ಟ ಚೇತನನಾದ ವ್ಯಾಧನು ಜೋರಾಗಿ ಉರಿಯುತ್ತಿದ್ದ ಬೆಂಕಿಯ ಕಡೆ ಓಡಿದನು.
12145012a ತತಸ್ತೇನಾಗ್ನಿನಾ ದಗ್ಧೋ ಲುಬ್ಧಕೋ ನಷ್ಟಕಿಲ್ಬಿಷಃ|
12145012c ಜಗಾಮ ಪರಮಾಂ ಸಿದ್ಧಿಂ ತದಾ ಭರತಸತ್ತಮ||
ಭರತಸತ್ತಮ! ಆ ಅಗ್ನಿಯಿಂದ ಸುಟ್ಟ ವ್ಯಾಧನು ಪಾಪಗಳನ್ನು ಕಳೆದುಕೊಂಡು ಪರಮ ಸಿದ್ಧಿಯನ್ನು ಪಡೆದುಕೊಂಡನು.
12145013a ತತಃ ಸ್ವರ್ಗಸ್ಥಮಾತ್ಮಾನಂ ಸೋಽಪಶ್ಯದ್ವಿಗತಜ್ವರಃ|
12145013c ಯಕ್ಷಗಂಧರ್ವಸಿದ್ಧಾನಾಂ ಮಧ್ಯೇ ಭ್ರಾಜಂತಮಿಂದ್ರವತ್||
ಅನಂತರ ತಾನು ವಿಗತಜ್ವರನಾಗಿ ಸ್ವರ್ಗಸ್ಥನಾಗಿ ಯಕ್ಷಗಂಧರ್ವಸಿದ್ಧರ ಮಧ್ಯೆ ಇಂದ್ರನಂತೆ ಹೊಳೆಯುತ್ತಿರುವುದನ್ನು ಕಂಡನು.
12145014a ಏವಂ ಖಲು ಕಪೋತಶ್ಚ ಕಪೋತೀ ಚ ಪತಿವ್ರತಾ|
12145014c ಲುಬ್ಧಕೇನ ಸಹ ಸ್ವರ್ಗಂ ಗತಾಃ ಪುಣ್ಯೇನ ಕರ್ಮಣಾ||
ಹೀಗೆ ಆ ಧರ್ಮಾತ್ಮ ಪಾರಿವಾಳ, ಅವನ ಪತಿವ್ರತಾ ಪತ್ನಿ, ಮತ್ತು ವ್ಯಾಧ ಈ ಮೂವರೂ ಒಟ್ಟಿಗೇ ತಮ್ಮ ಪುಣ್ಯಕರ್ಮಗಳ ಬಲದಿಂದ ಸ್ವರ್ಗಲೋಕವನ್ನು ಸೇರಿದರು.
12145015a ಯಾಪಿ ಚೈವಂವಿಧಾ ನಾರೀ ಭರ್ತಾರಮನುವರ್ತತೇ|
12145015c ವಿರಾಜತೇ ಹಿ ಸಾ ಕ್ಷಿಪ್ರಂ ಕಪೋತೀವ ದಿವಿ ಸ್ಥಿತಾ||
ಈ ರೀತಿ ತನ್ನ ಪತಿಯನ್ನು ಅನುಸರಿಸುವ ಸ್ತ್ರೀಯು ಆ ಕಪೋತಿಯಂತೆ ಶೀಘ್ರದಲ್ಲಿಯೇ ಸ್ವರ್ಗಲೋಕದಲ್ಲಿ ತನ್ನ ತೇಜಸ್ಸಿನಿಂದ ಪ್ರಕಾಶಿಸುತ್ತಾಳೆ.
12145016a ಏವಮೇತತ್ಪುರಾ ವೃತ್ತಂ ಲುಬ್ಧಕಸ್ಯ ಮಹಾತ್ಮನಃ|
12145016c ಕಪೋತಸ್ಯ ಚ ಧರ್ಮಿಷ್ಠಾ ಗತಿಃ ಪುಣ್ಯೇನ ಕರ್ಮಣಾ||
ಹಿಂದೆ ಇದು ಹೀಗೆಯೇ ನಡೆಯಿತು. ಮಹಾತ್ಮ ವ್ಯಾಧ ಮತ್ತು ಧರ್ಮಿಷ್ಠ ಪಾರಿವಾಳಗಳು ಪುಣ್ಯ ಕರ್ಮಗಳಿಂದ ಉತ್ತಮ ಗತಿಯನ್ನು ಪಡೆದುಕೊಂಡರು.
12145017a ಯಶ್ಚೇದಂ ಶೃಣುಯಾನ್ನಿತ್ಯಂ ಯಶ್ಚೇದಂ ಪರಿಕೀರ್ತಯೇತ್|
12145017c ನಾಶುಭಂ ವಿದ್ಯತೇ ತಸ್ಯ ಮನಸಾಪಿ ಪ್ರಮಾದ್ಯತಃ||
ನಿತ್ಯವೂ ಇದನ್ನು ಯಾರು ಕೇಳುತ್ತಾರೋ ಮತ್ತು ಇದನ್ನು ವರ್ಣಿಸುತ್ತಾರೋ ಅವರಿಬ್ಬರು ಮನಸ್ಸಿನಲ್ಲಿ ಹುಟ್ಟಿದ ಪ್ರಮಾದಗಳಿಂದಲೂ ಅಶುಭವನ್ನು ಹೊಂದುವುದಿಲ್ಲ.
12145018a ಯುಧಿಷ್ಠಿರ ಮಹಾನೇಷ ಧರ್ಮೋ ಧರ್ಮಭೃತಾಂ ವರ|
12145018c ಗೋಘ್ನೇಷ್ವಪಿ ಭವೇದಸ್ಮಿನ್ನಿಷ್ಕೃತಿಃ ಪಾಪಕರ್ಮಣಃ|
12145018e ನಿಷ್ಕೃತಿರ್ನ ಭವೇತ್ತಸ್ಮಿನ್ಯೋ ಹನ್ಯಾಚ್ಚರಣಾಗತಮ್[2]||
ಯುಧಿಷ್ಠಿರ! ಧರ್ಮಭೃತರಲ್ಲಿ ಶ್ರೇಷ್ಠ! ಈ ಶರಣಾಗತ ಪಾಲನೆಯು ಮಹಾ ಧರ್ಮವು. ಇದರಿಂದ ಗೋವಧೆಯನ್ನು ಮಾಡಿದ ಪುರುಷನಿಗೂ ಪಾಪದ ಪ್ರಾಯಶ್ಚಿತ್ತವಾಗುತ್ತದೆ. ಶರಣಾಗತನನ್ನು ವಧಿಸುವವನು ಎಂದೂ ಪಾಪದಿಂದ ಮುಕ್ತನಾಗುವುದಿಲ್ಲ.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲುಬ್ಧಕಸ್ವರ್ಗಗಮನೇ ಪಂಚಚತ್ವಾರಿಂಶದಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲುಬ್ಧಕಸ್ವರ್ಗಗಮನ ಎನ್ನುವ ನೂರಾನಲ್ವತ್ತೈದನೇ ಅಧ್ಯಾಯವು.
[1] ಈದೃಶೇನೈವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).
[2] ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಇತಿಹಾಸಮಿಮಂ ಶ್ರುತ್ವಾ ಪುಣ್ಯಂ ಪಾಪಪ್ರಣಾಶನಮ್| ನ ದುರ್ಗತಿಮವಾಪ್ನೋತಿ ಸ್ವರ್ಗಲೋಕಂ ಚ ಗಚ್ಛತಿ||