ಶಾಂತಿ ಪರ್ವ: ರಾಜಧರ್ಮ ಪರ್ವ
೧೧೯
ರಾಜನಾದವನು ಯಾರನ್ನು ತನ್ನ ಸೇವಕರನ್ನಾಗಿ ಆರಿಸಿಕೊಳ್ಳಬೇಕು ಎನ್ನುವುದನ್ನು ಯುಧಿಷ್ಠಿರನಿಗೆ ಭೀಷ್ಮನು ಉಪದೇಶಿಸಿದುದು (೧-೨೦).
12119001 ಭೀಷ್ಮ ಉವಾಚ|
12119001a ಏವಂ ಶುನಾಸಮಾನ್ ಭೃತ್ಯಾನ್ ಸ್ವಸ್ಥಾನೇ ಯೋ ನರಾಧಿಪಃ|
12119001c ನಿಯೋಜಯತಿ ಕೃತ್ಯೇಷು ಸ ರಾಜ್ಯಫಲಮಶ್ನುತೇ||
ಭೀಷ್ಮನು ಹೇಳಿದನು: “ಹೀಗೆ ಗುಣಸಂಪನ್ನ ಸೇವಕರನ್ನು ಯೋಗ್ಯ ಸ್ಥಾನಗಳಲ್ಲಿ ನಿಯಮಿಸಿ ಅವರವರ ಕಾರ್ಯಗಳಲ್ಲಿ ನಿಯೋಜಿಸುವ ನರಾಧಿಪನು ರಾಜ್ಯದ ಫಲವನ್ನು ಪಡೆದುಕೊಳ್ಳುತ್ತಾನೆ.
12119002a ನ ಶ್ವಾ ಸ್ವಸ್ಥಾನಮುತ್ಕ್ರಮ್ಯ ಪ್ರಮಾಣಮಭಿ ಸತ್ಕೃತಃ|
12119002c ಆರೋಪ್ಯಃ ಶ್ವಾ ಸ್ವಕಾತ್ಸ್ಥಾನಾದುತ್ಕ್ರಮ್ಯಾನ್ಯತ್ ಪ್ರಪದ್ಯತೇ||
ನಾಯಿಯನ್ನು ಅಧಿಕವಾಗಿ ಸತ್ಕರಿಸಿ ಅದಕ್ಕೆ ಅದರ ಯೋಗ್ಯತೆಯನ್ನು ಮೀರಿಸ ಉತ್ತಮ ಸ್ಥಾನಕ್ಕೆ ಏರಿಸಬಾರದು. ಹಾಗೆ ಮೇಲಕ್ಕೇರಿಸಿದರೆ ಅದು ಪ್ರಮಾದವನ್ನೇ ಉಂಟುಮಾಡುತ್ತದೆ.
12119003a ಸ್ವಜಾತಿಕುಲಸಂಪನ್ನಾಃ ಸ್ವೇಷು ಕರ್ಮಸ್ವವಸ್ಥಿತಾಃ|
12119003c ಪ್ರಕರ್ತವ್ಯಾ ಬುಧಾ ಭೃತ್ಯಾ[1] ನಾಸ್ಥಾನೇ ಪ್ರಕ್ರಿಯಾ ಕ್ಷಮಾ||
ಸ್ವಜಾತಿಯ ಕುಲಸಂಪನ್ನ ವರ್ಣೋಚಿತ ಕರ್ಮಗಳಲ್ಲಿ ನಿಷ್ಠರಾದವರನ್ನು ಸೇವಕರನ್ನಾಗಿ ನಿಯಮಿಸಿಕೊಳ್ಳಬೇಕು. ಯಾರನ್ನೂ ಅವರ ಯೋಗ್ಯತೆಗೆ ತಕ್ಕುದಲ್ಲದ ಕಾರ್ಯಗಳಲ್ಲಿ ನಿಯೋಜಿಸಬಾರದು.
12119004a ಅನುರೂಪಾಣಿ ಕರ್ಮಾಣಿ ಭೃತ್ಯೇಭ್ಯೋ ಯಃ ಪ್ರಯಚ್ಚತಿ|
12119004c ಸ ಭೃತ್ಯಗುಣಸಂಪನ್ನಂ ರಾಜಾ ಫಲಮುಪಾಶ್ನುತೇ||
ಸೇವಕರಿಗೆ ಅವರಿಗೆ ಅನುರೂಪದ ಕರ್ಮಗಳನ್ನು ಕೊಡುವ ಭೃತ್ಯಗುಣಸಂಪನ್ನ ರಾಜನು ಫಲವನ್ನು ಪಡೆದುಕೊಳ್ಳುತ್ತಾನೆ.
12119005a ಶರಭಃ ಶರಭಸ್ಥಾನೇ ಸಿಂಹಃ ಸಿಂಹ ಇವೋರ್ಜಿತಃ|
12119005c ವ್ಯಾಘ್ರೋ ವ್ಯಾಘ್ರ ಇವ ಸ್ಥಾಪ್ಯೋ ದ್ವೀಪೀ ದ್ವೀಪೀ ಯಥಾ ತಥಾ||
ಶರಭವು ಶರಭದ ಸ್ಥಾನದಲ್ಲಿ, ಬಲಿಷ್ಠ ಸಿಂಹವು ಸಿಂಹದ ಸ್ಥಾನದಲ್ಲಿ, ಹುಲಿಯು ಹುಲಿಯ ಸ್ಥಾನದಲ್ಲಿ ಮತ್ತು ಚಿರತೆಯು ಚಿರತೆಯ ಸ್ಥಾನದಲ್ಲಿ ಹೀಗೆ ಅವರವರು ಅವರವರ ಸ್ಥಾನಗಳಲ್ಲಿ ಇರಬೇಕು.
12119006a ಕರ್ಮಸ್ವಿಹಾನುರೂಪೇಷು ನ್ಯಸ್ಯಾ ಭೃತ್ಯಾ ಯಥಾವಿಧಿ|
12119006c ಪ್ರತಿಲೋಮಂ ನ ಭೃತ್ಯಾಸ್ತೇ ಸ್ಥಾಪ್ಯಾಃ ಕರ್ಮಫಲೈಷಿಣಾ||
ಸೇವಕರನ್ನು ಅವರವರ ಯೋಗ್ಯತೆಗೆ ತಕ್ಕಂತೆ ಕಾರ್ಯಗಳಲ್ಲಿ ಯಥಾವಿಧಿಯಾಗಿ ನಿಯಮಿಸಬೇಕು. ಕರ್ಮಫಲಗಳನ್ನು ಬಯಸುವವರು ಯೋಗ್ಯತೆಗೆ ವಿರುದ್ಧವಾದ ರೀತಿಯಲ್ಲಿ ಸೇವಕರನ್ನು ನಿಯಮಿಸಿಕೊಳ್ಳಬಾರದು.
12119007a ಯಃ ಪ್ರಮಾಣಮತಿಕ್ರಮ್ಯ ಪ್ರತಿಲೋಮಂ ನರಾಧಿಪಃ|
12119007c ಭೃತ್ಯಾನ್ ಸ್ಥಾಪಯತೇಽಬುದ್ಧಿರ್ನ ಸ ರಂಜಯತೇ ಪ್ರಜಾಃ||
ಮರ್ಯಾದೆಯನ್ನು ಉಲ್ಲಂಘಿಸಿ ಭೃತ್ಯರನ್ನು ನೀತಿಗೆ ವಿರುದ್ಧ ರೀತಿಯಲ್ಲಿ ನಿಯಮಿಸಿಕೊಳ್ಳುವ ಅಬುದ್ಧಿ ರಾಜನಿಗೆ ಪ್ರಜೆಗಳನ್ನು ರಂಜಿಸಲು ಸಾಧ್ಯವಾಗುವುದಿಲ್ಲ.
12119008a ನ ಬಾಲಿಶಾ ನ ಚ ಕ್ಷುದ್ರಾ ನ ಚಾಪ್ರತಿಮಿತೇಂದ್ರಿಯಾಃ[2]|
12119008c ನಾಕುಲೀನಾ ನರಾಃ ಪಾರ್ಶ್ವೇ ಸ್ಥಾಪ್ಯಾ ರಾಜ್ಞಾ ಹಿತೈಷಿಣಾ[3]||
ರಾಜನ ಹಿತೈಷಿಗಳಾಗಿ ಬಾಲಿಶರನ್ನೂ, ಕ್ಷುದ್ರರನ್ನೂ, ಇಂದ್ರಿಯಗಳನ್ನು ನಿಗ್ರಹಿಸದಿರುವವರನ್ನೂ, ಕುಲೀನರಲ್ಲದ ನರರನ್ನೂ ಹತ್ತಿರ ಇರಿಸಿಕೊಳ್ಳಬಾರದು.
12119009a ಸಾಧವಃ ಕುಶಲಾಃ[4] ಶೂರಾ ಜ್ಞಾನವಂತೋಽನಸೂಯಕಾಃ|
12119009c ಅಕ್ಷುದ್ರಾಃ ಶುಚಯೋ ದಕ್ಷಾ ನರಾಃ ಸ್ಯುಃ ಪಾರಿಪಾರ್ಶ್ವಕಾಃ||
ಸಾಧುಗಳೂ, ಕುಶಲರೂ, ಶೂರರೂ, ಜ್ಞಾನವಂತರೂ, ಅನಸೂಯಕರೂ, ಅಕ್ಷುದ್ರರೂ, ಶುಚಿಗಳೂ ಮತ್ತು ದಕ್ಷರಾದ ನರರೇ ರಾಜನ ಪಾರ್ಶ್ವವರ್ತೀ ಸೇವಕರಾಗಿ ನೇಮಕಗೊಂಡಿರಬೇಕು.
12119010a ನ್ಯಗ್ಭೂತಾಸ್ತತ್ಪರಾಃ ಕ್ಷಾಂತಾಶ್ಚೌಕ್ಷಾಃ ಪ್ರಕೃತಿಜಾಃ[5] ಶುಭಾಃ|
12119010c ಸ್ವೇ ಸ್ವೇ ಸ್ಥಾನೇಽಪರಿಕ್ರುಷ್ಟಾಸ್ತೇ ಸ್ಯೂ ರಾಜ್ಞೋ ಬಹಿಶ್ಚರಾಃ[6]||
ವಿನೀತರೂ, ಕಾರ್ಯತತ್ಪರರೂ, ಶಾಂತಸ್ವಭಾವವದವರೂ, ಚತುರರೂ, ಸ್ವಾಭಾವಿಕವಾಗಿಯೇ ಶುಭವಾಗಿರುವವರು ತಮ್ಮ ತಮ್ಮ ಸ್ಥಾನಗಳಲ್ಲಿ ಅನಿಂದಿತರಾಗಿ ರಾಜನ ಬಾಹ್ಯ ಸೇವಕರಾಗಿರಲು ಯೋಗ್ಯರಾಗಿರುತ್ತಾರೆ.
12119011a ಸಿಂಹಸ್ಯ ಸತತಂ ಪಾರ್ಶ್ವೇ ಸಿಂಹ ಏವ ಜನೋ[7] ಭವೇತ್|
12119011c ಅಸಿಂಹಃ ಸಿಂಹಸಹಿತಃ ಸಿಂಹವಲ್ಲಭತೇ ಫಲಮ್||
ಸಿಂಹದ ಪಕ್ಕದಲ್ಲಿ ಸತತವೂ ಸಿಂಹವೇ ಇರಬೇಕು. ಸಿಂಹದ ಸಹಿತ ಸಿಂಹವಲ್ಲದ ಪ್ರಾಣಿಯಿದ್ದರೆ ಅದಕ್ಕೂ ಸಿಂಹಕ್ಕೆ ಸಿಗುವ ಗೌರವವೇ ದೊರಕುತ್ತದೆ.
12119012a ಯಸ್ತು ಸಿಂಹಃ ಶ್ವಭಿಃ ಕೀರ್ಣಃ ಸಿಂಹಕರ್ಮಫಲೇ ರತಃ|
12119012c ನ ಸ ಸಿಂಹಫಲಂ ಭೋಕ್ತುಂ ಶಕ್ತಃ ಶ್ವಭಿರುಪಾಸಿತಃ||
ನಾಯಿಗಳಿಂದ ಪರಿವೃತವಾಗಿದ್ದ ಸಿಂಹವು ಸಿಂಹೋಚಿತವಾದ ಕರ್ಮಫಲಗಳಲ್ಲಿ ಅನುರಕ್ತನಾಗಿದ್ದರೂ ನಾಯಿಗಳಿಂದ ಸಂಸೇವಿಸಲ್ಪಡುವುದರಿಂದ ಸಿಂಹಕ್ಕೆ ದೊರಕಬೇಕಾದ ಕರ್ಮಫಲವನ್ನು ಭೋಗಿಸಲು ಶಕ್ತನಾಗುವುದಿಲ್ಲ[8].
12119013a ಏವಮೇತೈರ್ಮನುಷ್ಯೇಂದ್ರ ಶೂರೈಃ ಪ್ರಾಜ್ಞೈರ್ಬಹುಶ್ರುತೈಃ|
12119013c ಕುಲೀನೈಃ ಸಹ ಶಕ್ಯೇತ ಕೃತ್ಸ್ನಾಂ ಜೇತುಂ ವಸುಂಧರಾಮ್||
ಮನುಷ್ಯೇಂದ್ರ! ಶೂರರಿಂದ, ಪ್ರಾಜ್ಞರಿಂದ, ಬಹುಶ್ರುತರಿಂದ, ಸತ್ಕುಲಪ್ರಸೂತರಿಂದ ಸಂವೃತನಾದ ರಾಜನು ಅಖಂಡ ಭೂಮಂಡಲವನ್ನೂ ಜಯಿಸಲು ಸಮರ್ಥನಾಗುತ್ತಾನೆ.
12119014a ನಾವೈದ್ಯೋ[9] ನಾನೃಜುಃ ಪಾರ್ಶ್ವೇ ನಾವಿದ್ಯೋ[10] ನಾಮಹಾಧನಃ|
12119014c ಸಂಗ್ರಾಹ್ಯೋ ವಸುಧಾಪಾಲೈರ್ಭೃತ್ಯೋ ಭೃತ್ಯವತಾಂ ವರ||
ಭೃತ್ಯವಂತರಲ್ಲಿ ಶ್ರೇಷ್ಠನೇ! ವಿದ್ಯಾವಂತನಲ್ಲದವನನ್ನೂ, ಸರಳತೆಯಿಲ್ಲದವನನ್ನೂ, ಮೂರ್ಖರನ್ನೂ, ದರಿದ್ರರನ್ನೂ ರಾಜನು ಸಮೀಪದಲ್ಲಿ ಇಟ್ಟುಕೊಳ್ಳಬಾರದು. ಅಂಥವರನ್ನು ಭೃತ್ಯರನ್ನಾಗಿ ಸಂಗ್ರಹಿಸಿಕೊಳ್ಳಬಾರದು.
12119015a ಬಾಣವದ್ವಿಸೃತಾ ಯಾಂತಿ ಸ್ವಾಮಿಕಾರ್ಯಪರಾ ಜನಾಃ|
12119015c ಯೇ ಭೃತ್ಯಾಃ ಪಾರ್ಥಿವಹಿತಾಸ್ತೇಷಾಂ ಸಾಂತ್ವಂ ಪ್ರಯೋಜಯೇತ್||
ಸ್ವಾಮಿಕಾರ್ಯದಲ್ಲಿ ತತ್ಪರರಾಗಿರುವ ಜನರು ಪ್ರಯೋಗಿಸ ಬಾಣದಂತೆ ನೇರವಾಗಿ ಕಾರ್ಯಸಾಧನೆಯನ್ನು ಮಾಡುತ್ತಾರೆ. ಪಾರ್ಥಿವನ ಹಿತಸಾಧನೆಯಲ್ಲಿಯೇ ನಿರತರಾಗಿರುವ ಸೇವಕರಲ್ಲಿ ರಾಜನು ಸಮಾಧಾನಕರ ಮಾತುಗಳನ್ನಾಡುತ್ತಾ ಅವರನ್ನು ಪ್ರೋತ್ಸಾಹಿಸುತ್ತಿರಬೇಕು.
12119016a ಕೋಶಶ್ಚ ಸತತಂ ರಕ್ಷ್ಯೋ ಯತ್ನಮಾಸ್ಥಾಯ ರಾಜಭಿಃ|
12119016c ಕೋಶಮೂಲಾ ಹಿ ರಾಜಾನಃ ಕೋಶಮೂಲಕರೋ ಭವ[11]||
ರಾಜರು ಸತತವೂ ಪ್ರಯತ್ನಪಟ್ಟು ಕೋಶವನ್ನು ರಕ್ಷಿಸಬೇಕು. ರಾಜರಿಗೆ ಕೋಶವೇ ಮೂಲವು. ಕೋಶದ ಮೂಲಕರನಾಗು.
12119017a ಕೋಷ್ಠಾಗಾರಂ ಚ ತೇ ನಿತ್ಯಂ ಸ್ಫೀತಂ ಧಾನ್ಯೈಃ ಸುಸಂಚಿತಮ್|
12119017c ಸದಾಸ್ತು ಸತ್ಸು ಸಂನ್ಯಸ್ತಂ ಧನಧಾನ್ಯಪರೋ ಭವ||
ನಿನ್ನ ಉಗ್ರಾಣಗಳು ನಿತ್ಯವೂ ಒಳ್ಳೆಯ ರೀತಿಯಿಂದ ಸಂಗ್ರಹಿಸಿದ ಧಾನ್ಯಗಳಿಂದ ತುಂಬಿರಲಿ. ಸದಾ ಅದು ಸತ್ಪುರುಷರ ರಕ್ಷಣೆಯಲ್ಲಿರಲಿ. ಧನಧಾನ್ಯಪರನಾಗು.
12119018a ನಿತ್ಯಯುಕ್ತಾಶ್ಚ ತೇ ಭೃತ್ಯಾ ಭವಂತು ರಣಕೋವಿದಾಃ|
12119018c ವಾಜಿನಾಂ ಚ ಪ್ರಯೋಗೇಷು ವೈಶಾರದ್ಯಮಿಹೇಷ್ಯತೇ||
ನಿನ್ನ ಸೇವಕರು ಯಾವಾಗಲೂ ಉದ್ಯೋಗಶೀಲರಾಗಿರಲಿ. ರಣಕೋವಿದರಾಗಿರಲಿ. ಕುದುರೆಗಳ ಸವಾರಿಯಲ್ಲಿಯೂ ಕುದುರೆಗಳನ್ನು ಪಳಗಿಸುವುದರಲ್ಲಿಯೂ ವಿಶೇಷರೂಪದಲ್ಲಿ ಚತುರರಾಗಿರಲಿ.
12119019a ಜ್ಞಾತಿಬಂಧುಜನಾವೇಕ್ಷೀ ಮಿತ್ರಸಂಬಂಧಿಸಂವೃತಃ|
12119019c ಪೌರಕಾರ್ಯಹಿತಾನ್ವೇಷೀ ಭವ ಕೌರವನಂದನ||
ಕೌರವನಂದನ! ಜ್ಞಾತಿಬಂಧುಗಳ ಯೋಗ-ಕ್ಷೇಮಗಳ ಕಡೆಗೆ ಗಮನವನ್ನು ಕೊಡು. ಮಿತ್ರರಿಂದಲೂ ಸಂಬಂಧಿಕರಿಂದಲೂ ಕೂಡಿಕೊಂಡಿರು. ಪೌರಕಾರ್ಯಹಿತಾನ್ವೇಷಿಯಾಗಿರು.
12119020a ಏಷಾ ತೇ ನೈಷ್ಠಿಕೀ ಬುದ್ಧಿಃ ಪ್ರಜ್ಞಾ ಚಾಭಿಹಿತಾ ಮಯಾ|
12119020c ಶ್ವಾ ತೇ ನಿದರ್ಶನಂ ತಾತ ಕಿಂ ಭೂಯಃ ಶ್ರೋತುಮಿಚ್ಚಸಿ||
ಮಗೂ! ಪ್ರಜಾಪಾಲನೆಯಲ್ಲಿ ನಿನ್ನ ಬುದ್ಧಿಯು ಇಷ್ಟು ನಿಷ್ಠೆಯಿಂದರಬೇಕು. ನಾಯಿಯ ನಿದರ್ಶನವನ್ನು ಕೊಟ್ಟು ನಾನು ಈ ವಿಷಯವನ್ನು ನಿನಗೆ ಹೇಳಿರುತ್ತೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಿರ್ಸಂವಾದೇ ಏಕೋನವಿಂಶತ್ಯಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಿರ್ಸಂವಾದ ಎನ್ನುವ ನೂರಾಹತ್ತೊಂಭತ್ತನೇ ಅಧ್ಯಾಯವು.
[1] ಹ್ಯಮಾತ್ಯಾಸ್ತು ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ನಾಪ್ರಾಜ್ಞಾನಾಜಿತೇಂದ್ರಿಯಾಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ನಾಕುಲೀನಾ ನರಾಃ ಸರ್ವೇ ಸ್ಥಾಪ್ಯಾ ಗುಣಗಣೈಷಿಣಾ|| ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಕುಲಜಾಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಪ್ರಕೃತಿಜೈಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[6] ಸ್ವಸ್ಥಾನಾದಪಕ್ರುಷ್ಟಾ ಯೇ ತೇ ಸ್ಯೂ ರಾಜ್ಞಾಂ ಬಹಿಶ್ಚರಾಃ|| ಎಂಬ ಪಾಠಾಂತರವಿದೆ (ಭಾರತ ದರ್ಶನ).
[7] ಏವಾನುಗೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[8] ಹೀಗೆ ನೀಚಪುರುಷರಿಂದ ಪರಿವೃತನಾದ ರಾಜನು ತಾನು ಶ್ರೇಷ್ಠನಾಗಿದ್ದರೂ ಶ್ರೇಷ್ಠತೆಯ ಫಲವನ್ನು ಪಡೆಯುವುದಿಲ್ಲ (ಭಾರತ ದರ್ಶನ).
[9] ನಾವಿದ್ಯೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[10] ನಾಪ್ರಾಜ್ಞೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[11] ಕೋಶೋ ವೃದ್ಧಿಕರೋ ಭವೇತ್| ಎಂಬ ಪಾಠಾಂತರವಿದೆ (ಭಾರತ ದರ್ಶನ).