ಶಾಂತಿ ಪರ್ವ: ರಾಜಧರ್ಮ ಪರ್ವ
೧೧೮
ರಾಜನ ಸೇವಕ-ಸಚಿವ-ಯೋಧರ ವರ್ಣನೆ (೧-೨೮).
12118001 ಭೀಷ್ಮ ಉವಾಚ|
12118001a ಸ ಶ್ವಾ ಪ್ರಕೃತಿಮಾಪನ್ನಃ ಪರಂ ದೈನ್ಯಮುಪಾಗಮತ್|
12118001c ಋಷಿಣಾ ಹುಂಕೃತಃ ಪಾಪಸ್ತಪೋವನಬಹಿಷ್ಕೃತಃ||
ಭೀಷ್ಮನು ಹೇಳಿದನು: “ಆ ನಾಯಿಯು ತನ್ನ ಮೂಲಪ್ರಕೃತಿಯನ್ನು ಪಡೆದುಕೊಂಡು ಪರಮ ದೀನಗೊಂಡಿತು. ಋಷಿಯು ಹುಂಕರಿಸಿ ಆ ಪಾಪಿಯನ್ನು ತಪೋವನದಿಂದ ಬಹಿಷ್ಕರಿಸಿದನು.
12118002a ಏವಂ ರಾಜ್ಞಾ ಮತಿಮತಾ ವಿದಿತ್ವಾ ಶೀಲಶೌಚತಾಮ್|
12118002c ಆರ್ಜವಂ ಪ್ರಕೃತಿಂ ಸತ್ತ್ವಂ ಕುಲಂ ವೃತ್ತಂ ಶ್ರುತಂ ದಮಮ್||
12118003a ಅನುಕ್ರೋಶಂ ಬಲಂ ವೀರ್ಯಂ ಭಾವಂ ಸಂಪ್ರಶಮಂ[1] ಕ್ಷಮಾಮ್|
12118003c ಭೃತ್ಯಾ ಯೇ ಯತ್ರ ಯೋಗ್ಯಾಃ ಸ್ಯುಸ್ತತ್ರ ಸ್ಥಾಪ್ಯಾಃ ಸುಶಿಕ್ಷಿತಾಃ||
ಹೀಗೆ ಮತಿವಂತ ರಾಜನು ಅವರ ಶೀಲ, ಶೌಚ, ಸರಳತಿ, ಪ್ರಕೃತಿ, ಸತ್ತ್ವ, ಕುಲ, ನಡತೆ, ವಿದ್ಯೆ, ಜಿತೇಂದ್ರಿಯತೆ, ಅನುಕ್ರೋಶ, ಬಲ, ವೀರ್ಯ, ಭಾವ, ವಿನಯತೆ, ಮತ್ತು ಕ್ಷಮೆ ಇವುಗಳನ್ನು ಪರೀಕ್ಷಿಸಿ ಸೇವರಕರನ್ನು ಯೋಗ್ಯ ಸ್ಥಾನಗಳಲ್ಲಿ ಇರಿಸಿಕೊಂಡು ನಿಯಂತ್ರಿಸುತ್ತಿರಬೇಕು.
12118004a ನಾಪರೀಕ್ಷ್ಯ ಮಹೀಪಾಲಃ ಪ್ರಕರ್ತುಂ ಭೃತ್ಯಮರ್ಹತಿ|
12118004c ಅಕುಲೀನನರಾಕೀರ್ಣೋ ನ ರಾಜಾ ಸುಖಮೇಧತೇ||
ಮಹೀಪಾಲನಾದವನು ಪರೀಕ್ಷೆಮಾಡದೇ ಯಾರನ್ನೂ ಸೇವಕನನ್ನಾಗಿ ಆರಿಸಿಕೊಳ್ಳಬಾರದು. ಕುಲೀನರಲ್ಲದವರಿಂದ ಸಮಾಕೀರ್ಣ ರಾಜನು ಸುಖವನ್ನು ಹೊಂದುವುದಿಲ್ಲ.
12118005a ಕುಲಜಃ ಪ್ರಕೃತೋ[2] ರಾಜ್ಞಾ ತತ್ಕುಲೀನತಯಾ ಸದಾ|
12118005c ನ ಪಾಪೇ ಕುರುತೇ ಬುದ್ಧಿಂ ನಿಂದ್ಯಮಾನೋಽಪ್ಯನಾಗಸಿ||
ಉತ್ತಮ ಕುಲದಲ್ಲಿ ಹುಟ್ಟಿದವನು ಅಕಸ್ಮಾತ್ತಾಗಿ ರಾಜನ ನಿಂದೆಗೊಳಗಾದರೂ ತನ್ನ ಕುಲೀನತೆಯ ಕಾರಣದಿಂದ ಪಾಪವನ್ನೆಸಗುವ ಬುದ್ಧಿಯನ್ನು ಮಾಡುವುದಿಲ್ಲ.
12118006a ಅಕುಲೀನಸ್ತು ಪುರುಷಃ ಪ್ರಕೃತಃ ಸಾಧುಸಂಕ್ಷಯಾತ್|
12118006c ದುರ್ಲಭೈಶ್ವರ್ಯತಾಂ ಪ್ರಾಪ್ತೋ ನಿಂದಿತಃ ಶತ್ರುತಾಂ ವ್ರಜೇತ್||
ಆದರೆ ಕುಲೀನನಲ್ಲದ ಪುರುಷನು ಸಾಮಾನ್ಯವಾಗಿ ಸಾಧುಸ್ವಭಾವದ ರಾಜನನ್ನು ಆಶ್ರಯಿಸಿ ದುರ್ಲಭ ಐಶ್ವರ್ಯವನ್ನು ಪಡೆದು, ರಾಜನೇನಾದರೂ ನಿಂದಿಸಿದರೆ, ಅವನೊಡನೆ ಶತ್ರುತ್ವವನ್ನು ಸಾಧಿಸುತ್ತಾನೆ.
12118007a ಕುಲೀನಂ ಶಿಕ್ಷಿತಂ ಪ್ರಾಜ್ಞಂ ಜ್ಞಾನವಿಜ್ಞಾನಕೋವಿದಮ್|
12118007c ಸರ್ವಶಾಸ್ತ್ರಾರ್ಥತತ್ತ್ವಜ್ಞಂ ಸಹಿಷ್ಣುಂ ದೇಶಜಂ ತಥಾ||
ರಾಜನ ಸೇವಕನು ಕುಲೀನನಾಗಿರಬೇಕು. ಶಿಕ್ಷಿತನಾಗಿರಬೇಕು. ಪ್ರಾಜ್ಞನೂ, ಜ್ಞಾನಕೋವಿದನೂ, ಸರ್ವಶಾಸ್ತ್ರಾರ್ಥತತ್ತ್ವಜ್ಞನೂ, ಸಹಿಷ್ಣುವೂ, ತನ್ನ ದೇಶದಲ್ಲಿಯೇ ಹುಟ್ಟಿದವನೂ ಆಗಿರಬೇಕು.
12118008a ಕೃತಜ್ಞಂ ಬಲವಂತಂ ಚ ಕ್ಷಾಂತಂ ದಾಂತಂ ಜಿತೇಂದ್ರಿಯಮ್|
12118008c ಅಲುಬ್ಧಂ ಲಬ್ಧಸಂತುಷ್ಟಂ ಸ್ವಾಮಿಮಿತ್ರಬುಭೂಷಕಮ್||
ಅವನು ಕೃತಜ್ಞನೂ, ಬಲವಂತನೂ, ಕ್ಷಮಾಶೀಲನೂ, ದಾಂತನೂ, ಜಿತೇಂದ್ರಿಯನೂ, ಅಲುಬ್ಧನೂ, ಸಿಕ್ಕಿದುದರಲ್ಲಿ ಸಂತುಷ್ಟನಾದವನೂ, ಸ್ವಾಮಿಮಿತ್ರನೂ ಮತ್ತು ಶ್ರೇಷ್ಠವಾದುದನ್ನೇ ಬಯಸುವವನೂ ಆಗಿರಬೇಕು.
12118009a ಸಚಿವಂ ದೇಶಕಾಲಜ್ಞಂ ಸರ್ವಸಂಗ್ರಹಣೇ ರತಮ್|
12118009c ಸತ್ಕೃತಂ ಯುಕ್ತಮನಸಂ ಹಿತೈಷಿಣಮತಂದ್ರಿತಮ್||
ಅವನು ಸಚಿವನೂ, ದೇಶಕಾಲಜ್ಞನೂ, ಸರ್ವಸಂಗ್ರಹದಲ್ಲಿ ನಿರತನೂ, ಸತ್ಕೃತನೂ, ಯುಕ್ತಮನಸನೂ, ಹಿತೈಷಿಣಿಯೂ, ಆಲಸ್ಯರಹಿತನೂ ಆಗಿರಬೇಕು.
12118010a ಯುಕ್ತಾಚಾರಂ ಸ್ವವಿಷಯೇ ಸಂಧಿವಿಗ್ರಹಕೋವಿದಮ್|
12118010c ರಾಜ್ಞಸ್ತ್ರಿವರ್ಗವೇತ್ತಾರಂ ಪೌರಜಾನಪದಪ್ರಿಯಮ್||
ತನ್ನ ರಾಜ್ಯದ ಯುಕ್ತಾಚಾರಗಳನ್ನು ತಿಳಿದಿರುವವನೂ, ಸಂಧಿ-ವಿಗ್ರಹ ಕೋವಿದನೂ, ರಾಜನ ತ್ರಿವರ್ಗಗಳ ವೇತ್ತಾರನೂ, ಪೌರಜಾನಪದಪ್ರಿಯನೂ ಆಗಿರಬೇಕು.
12118011a ಖಾತಕವ್ಯೂಹತತ್ತ್ವಜ್ಞಂ ಬಲಹರ್ಷಣಕೋವಿದಮ್|
12118011c ಇಂಗಿತಾಕಾರತತ್ತ್ವಜ್ಞಂ ಯಾತ್ರಾಯಾನವಿಶಾರದಮ್||
ಕಂದಕ-ವ್ಯೂಹಗಳ ತತ್ತ್ವಜ್ಞನೂ, ಸೇನೆಯನ್ನು ಸಂತೋಷದಲ್ಲಿಡುವುದನ್ನು ಬಲ್ಲವನೂ, ಇಂಗಿತಾಕಾರ ತತ್ತ್ವಜ್ಞನೂ, ಯಾತ್ರಾಯಾನ ವಿಶಾರದನೂ ಆಗಿರಬೇಕು.
12118012a ಹಸ್ತಿಶಿಕ್ಷಾಸು ತತ್ತ್ವಜ್ಞಮಹಂಕಾರವಿವರ್ಜಿತಮ್|
12118012c ಪ್ರಗಲ್ಭಂ ದಕ್ಷಿಣಂ ದಾಂತಂ ಬಲಿನಂ ಯುಕ್ತಕಾರಿಣಮ್||
ಅವನು ಆನೆಯನ್ನು ಪಳಗಿಸುವುದರ ತತ್ತ್ವಜ್ಞನೂ, ಅಹಂಕಾರವನ್ನು ಬಿಟ್ಟವನೂ, ಭಯರಹಿತನೂ, ಉದಾರಿಯೂ, ದಾಂತನೂ, ಬಲಶಾಲಿಯೂ ಯುಕ್ತಕಾರಣಿಯೂ ಆಗಿರಬೇಕು.
12118013a ಚೋಕ್ಷಂ ಚೋಕ್ಷಜನಾಕೀರ್ಣಂ ಸುವೇಷಂ ಸುಖದರ್ಶನಮ್|
12118013c ನಾಯಕಂ ನೀತಿಕುಶಲಂ ಗುಣಷಷ್ಟ್ಯಾ[3] ಸಮನ್ವಿತಮ್||
ಅವನು ಪರಿಶುದ್ಧನೂ, ಪರಿಶುದ್ಧ ಜನರಿಂದ ಆವೃತನಾದವನೂ, ಸುಂದರ ಉಡುಪುಗಳನ್ನು ಧರಿಸುವವನೂ, ನೋಡಲು ಆನಂದದಾಯಕನೂ, ನಾಯಕನೂ, ನೀತಿ ಕುಶಲನೂ, ಆರು ಗುಣಗಳಿಂದ ಸಮನ್ವಿತನೂ ಆಗಿರಬೇಕು.
12118014a ಅಸ್ತಬ್ಧಂ ಪ್ರಶ್ರಿತಂ ಶಕ್ತಂ ಮೃದುವಾದಿನಮೇವ ಚ|
12118014c ಧೀರಂ ಶ್ಲಕ್ಷ್ಣಂ ಮಹರ್ದ್ಧಿಂ ಚ ದೇಶಕಾಲೋಪಪಾದಕಮ್||
ಅವನು ದಕ್ಷನೂ, ಉದ್ಧತನವಿಲ್ಲದವನೂ, ಶಕ್ತನೂ, ಮೃದುಭಾಷಿಣಿಯೂ, ಧೀರನೂ, ಪ್ರೀತಿಯುಕ್ತನೂ, ಶ್ರೀಮಂತನೂ, ದೇಶಕಾಲಗಳನ್ನು ಅರಿತು ಕಾರ್ಯನಿರ್ವಹಿಸುವವನೂ ಆಗಿರಬೇಕು.
12118015a ಸಚಿವಂ ಯಃ ಪ್ರಕುರುತೇ ನ ಚೈನಮವಮನ್ಯತೇ|
12118015c ತಸ್ಯ ವಿಸ್ತೀರ್ಯತೇ ರಾಜ್ಯಂ ಜ್ಯೋತ್ಸ್ನಾ ಗ್ರಹಪತೇರಿವ||
ಅಂಥವನನ್ನು ಸಚಿವನನ್ನಾಗಿ ಮಾಡಿಕೊಳ್ಳುವ ಮತ್ತು ಅಂಥವನನ್ನು ಅಪಮಾನಿಸದ ರಾಜನ ರಾಜ್ಯವು ಚಂದ್ರನ ಬೆಳದಿಂಗಳಿನಂತೆ ವಿಸ್ತೃತವಾಗುತ್ತದೆ.
12118016a ಏತೈರೇವ ಗುಣೈರ್ಯುಕ್ತೋ ರಾಜಾ ಶಾಸ್ತ್ರವಿಶಾರದಃ|
12118016c ಏಷ್ಟವ್ಯೋ ಧರ್ಮಪರಮಃ ಪ್ರಜಾಪಾಲನತತ್ಪರಃ||
ರಾಜನೂ ಕೂಡ ಇದೇ ಗುಣಗಳಿಂದ ಕೂಡಿರಬೇಕು. ಶಾಸ್ತ್ರವಿಶಾರದನಾಗಿರಬೇಕು. ಪ್ರಜಾಪಾಲನ ತತ್ಪರನಾಗಿರಬೇಕು. ಪರಮ ಧಾರ್ಮಿಕನಾಗಿರಬೇಕು.
12118017a ಧೀರೋ ಮರ್ಷೀ ಶುಚಿಃ ಶೀಘ್ರಃ ಕಾಲೇ ಪುರುಷಕಾರವಿತ್|
12118017c ಶುಶ್ರೂಷುಃ ಶ್ರುತವಾನ್ ಶ್ರೋತಾ ಊಹಾಪೋಹವಿಶಾರದಃ||
ರಾಜನು ಧೀರನಾಗಿರಬೇಕು. ಕ್ಷಮಾಶೀಲನಾಗಿರಬೇಕು. ಶುಚಿಯೂ, ಶೀಘ್ರನೂ ಮತ್ತು ಕಾಲಬಂದಾಗ ಪುರುಷಪ್ರಯತ್ನವನ್ನು ಮಾಡುವವನೂ ಆಗಿರಬೇಕು. ಹಿರಿಯರ ಶುಶ್ರೂಷೆಯನ್ನು ಮಾಡಿದವನಾಗಿರಬೇಕು. ಶ್ರುತವಾನನೂ, ವಿದ್ಯಾವಂತನೂ, ಊಹಾಪೋಹ ವಿಶಾರದನೂ ಆಗಿರಬೇಕು.
12118018a ಮೇಧಾವೀ ಧಾರಣಾಯುಕ್ತೋ ಯಥಾನ್ಯಾಯೋಪಪಾದಕಃ|
12118018c ದಾಂತಃ ಸದಾ ಪ್ರಿಯಾಭಾಷೀ ಕ್ಷಮಾವಾಂಶ್ಚ ವಿಪರ್ಯಯೇ||
ಮೇಧಾವಿಯೂ, ಧಾರಣಾಶಕ್ತಿಯುಳ್ಳವನೂ, ನ್ಯಾಯಾನುಸಾರವಾಗಿ ಕಾರ್ಯಗಳನ್ನು ಮಾಡುವವನೂ, ದಾಂತನೂ, ಸದಾ ಪ್ರಿಯಭಾಷಿಯೂ, ಮತ್ತು ಶತ್ರುಗಳ ವಿಷಯದಲ್ಲಿಯೂ ಕ್ಷಮಾವಂತನಾಗಿರಬೇಕು.
12118019a ದಾನಾಚ್ಚೇದೇ ಸ್ವಯಂಕಾರೀ ಸುದ್ವಾರಃ[4] ಸುಖದರ್ಶನಃ|
12118019c ಆರ್ತಹಸ್ತಪ್ರದೋ ನಿತ್ಯಮಾಪ್ತಂಮನ್ಯೋ[5] ನಯೇ ರತಃ||
ದಾನಕೊಡುವುದರಲ್ಲಿ ಅಡ್ಡಿಯುಂಟಾದರೆ ತಾನೇ ದಾನವನ್ನು ಕೊಡಿಸುವವನಾಗಿರಬೇಕು. ಸುದ್ವಾರನಾಗಿರಬೇಕು. ದರ್ಶನಮಾತ್ರದಿಂದಲೇ ಸುಖವನ್ನುಂಟುಮಾಡುವವನಾಗಿರಬೇಕು. ನಿತ್ಯವೂ ಆರ್ತರಿಗೆ ಹಸ್ತಾವಲಂಬನವನ್ನು ನೀಡುವವನಾಗಿರಬೇಕು. ಆಪ್ತರಿಂದ ಕೂಡಿರಬೇಕು. ಕೋಪವಿಲ್ಲದವನಾಗಿರಬೇಕು. ಮತ್ತು ನೀತಿ ಪರಾಯಣನಾಗಿರಬೇಕು.
12118020a ನಾಹಂವಾದೀ ನ ನಿರ್ದ್ವಂದ್ವೋ ನ ಯತ್ಕಿಂಚನಕಾರಕಃ|
12118020c ಕೃತೇ ಕರ್ಮಣ್ಯಮೋಘಾನಾಂ[6] ಕರ್ತಾ ಭೃತ್ಯಜನಪ್ರಿಯಃ||
ಅಹಂಕಾರರಹಿತನಾಗಿರಬೇಕು. ನಿರ್ದ್ವಂದ್ವನಾಗಿರಬೇಕು. ಅಮೋಘ ಕರ್ಮಗಳನ್ನು ಮಾಡುವವನಾಗಿರಬೇಕು. ಸೇವಕರಿಗೆ ಪ್ರಿಯನಾಗಿರಬೇಕು.
12118021a ಸಂಗೃಹೀತಜನೋಽಸ್ತಬ್ಧಃ ಪ್ರಸನ್ನವದನಃ ಸದಾ|
12118021c ದಾತಾ ಭೃತ್ಯಜನಾವೇಕ್ಷೀ[7] ನ ಕ್ರೋಧೀ ಸುಮಹಾಮನಾಃ||
ಸತ್ಪುರುಷರ ಸಂಗ್ರಹಶೀಲನಾಗಿರಬೇಕು. ಜಡಸ್ವಭಾವವನ್ನು ತ್ಯಜಿಸಿದವನಾಗಿರಬೇಕು. ಸರ್ವಕಾಲದಲ್ಲಿಯೂ ಪ್ರಸನ್ನವದನನಾಗಿರಬೇಕು. ಸೇವಕರಿಗೆ ಕೊಡುವವನಾಗಿರಬೇಕು. ಕ್ರೋಧರಹಿತನಾಗಿರಬೇಕು ಮತ್ತು ವಿಶಾಲಹೃದಯಿಯಾಗಿರಬೇಕು.
12118022a ಯುಕ್ತದಂಡೋ ನ ನಿರ್ದಂಡೋ ಧರ್ಮಕಾರ್ಯಾನುಶಾಸಕಃ[8]|
12118022c ಚಾರನೇತ್ರಃ ಪರಾವೇಕ್ಷೀ[9] ಧರ್ಮಾರ್ಥಕುಶಲಃ ಸದಾ||
ದಂಡನೀತಿಯನ್ನು ಸರಿಯಾಗಿ ಉಪಯೋಗಿಸುವವನಾಗಿರಬೇಕು. ದಂಡನೀತಿಯನ್ನು ಬಿಟ್ಟಿರಬಾರದು. ಧರ್ಮಕಾರ್ಯಗಳ ಅನುಶಾಸಕನಾಗಿರಬೇಕು. ಚಾರರನ್ನೇ ಕಣ್ಣಾಗಿ ಹೊಂದಿ, ಶತ್ರುಗಳನ್ನು ಗುರುತಿಸುತ್ತಿರಬೇಕು. ಸದಾ ಧರ್ಮಾರ್ಥಕುಶಲನಾಗಿರಬೇಕು.
12118023a ರಾಜಾ ಗುಣಶತಾಕೀರ್ಣ ಏಷ್ಟವ್ಯಸ್ತಾದೃಶೋ ಭವೇತ್|
12118023c ಯೋಧಾಶ್ಚೈವ ಮನುಷ್ಯೇಂದ್ರ ಸರ್ವೈರ್ಗುಣಗುಣೈರ್ವೃತಾಃ||
ಹೀಗೆ ನೂರಾರು ಸದ್ಗುಣಗಳಿಂದ ಸಂಪನ್ನನಾದ ರಾಜನು ಪ್ರಜೆಗಳಿಗೆ ಬೇಕಾದವನಾಗುತ್ತಾನೆ. ಮನುಷ್ಯೇಂದ್ರ! ಯೋಧರೂ ಕೂಡ ಹೀಗೆಯೇ ಸರ್ವಗುಣಸಂಪನ್ನರಾಗಿರಬೇಕು.
12118024a ಅನ್ವೇಷ್ಟವ್ಯಾಃ ಸುಪುರುಷಾಃ ಸಹಾಯಾ ರಾಜ್ಯಧಾರಣಾಃ|
12118024c ನ ವಿಮಾನಯಿತವ್ಯಾಶ್ಚ ರಾಜ್ಞಾ ವೃದ್ಧಿಮಭೀಪ್ಸತಾ||
ರಾಜ್ಯದ ಪರಿಪಾಲನೆಗಾಗಿ ಒಳ್ಳೆಯ ಪುರುಷರನ್ನೇ ಹುಡುಕಿ ನಿಯಮಿಸಿಕೊಳ್ಳಬೇಕು. ಅಭಿವೃದ್ಧಿಯನ್ನು ಅಪೇಕ್ಷಿಸುವ ರಾಜನು ಯೋಧರನ್ನು ಎಂದೂ ಅವಮಾನಗೊಳಿಸಬಾರದು.
12118025a ಯೋಧಾಃ ಸಮರಶೌಟೀರಾಃ ಕೃತಜ್ಞಾಃ ಶಸ್ತ್ರಕೋವಿದಾಃ|
12118025c ಧರ್ಮಶಾಸ್ತ್ರಸಮಾಯುಕ್ತಾಃ ಪದಾತಿಜನಸಂಯುತಾಃ||
ಯೋಧರು ಯುದ್ಧದಲ್ಲಿ ಶೌರ್ಯವನ್ನು ತೋರಿಸುವವರಾಗಿರಬೇಕು. ಕೃತಜ್ಞರೂ, ಶಸ್ತ್ರಕೋವಿದರು, ಧರ್ಮಶಾಸ್ತ್ರ ಸಮಾಯುಕ್ತರೂ ಆಗಿರಬೇಕು ಮತ್ತು ಪದಾತಿ ಸೈನಿಕರಿಂದ ಪರಿವೃತರಾಗಿರಬೇಕು.
12118026a ಅರ್ಥಮಾನವಿವೃದ್ಧಾಶ್ಚ[10] ರಥಚರ್ಯಾವಿಶಾರದಾಃ|
12118026c ಇಷ್ವಸ್ತ್ರಕುಶಲಾ ಯಸ್ಯ ತಸ್ಯೇಯಂ ನೃಪತೇರ್ಮಹೀ||
ಅರ್ಥಮಾನವಿವೃದ್ಧರಾಗಿರಬೇಕು. ರಥಸಂಚಾಲನೆಯಲ್ಲಿ ನಿಪುಣರಾಗಿರಬೇಕು. ಅಸ್ತ್ರಗಳನ್ನು ಅಭಿಮಂತ್ರಿಸಿ ಬಾಣಗಳನ್ನು ಬಿಡುವುದರಲ್ಲಿ ಕುಶಲರಾಗಿರಬೇಕು. ಇಂಥವರಿರುವ ರಾಜನ ಅಧೀನದಲ್ಲಿ ಇಡೀ ಭೂಮಂಡಲವೇ ಇರುತ್ತದೆ.
12118027a ಸರ್ವಸಂಗ್ರಹಣೇ ಯುಕ್ತೋ ನೃಪೋ ಭವತಿ ಯಃ ಸದಾ|
12118027c ಉತ್ಥಾನಶೀಲೋ ಮಿತ್ರಾಢ್ಯಃ ಸ ರಾಜಾ ರಾಜಸತ್ತಮಃ||
ಯಾವ ರಾಜನು ಸದಾ ಪ್ರಜಾಸಂಗ್ರಹಣೆಯಲ್ಲಿಯೇ ನಿರತನಾಗಿರುತ್ತಾನೋ, ಉದ್ಯೋಗಶೀಲನಾಗಿರುತ್ತಾನೋ, ಮಿತ್ರಸಂಪತ್ತನ್ನು ಹೊಂದಿರುತ್ತಾನೋ ಅಂತಹ ರಾಜನು ರಾಜರಲ್ಲಿಯೇ ಶ್ರೇಷ್ಠನು.
12118028a ಶಕ್ಯಾ ಅಶ್ವಸಹಸ್ರೇಣ ವೀರಾರೋಹೇಣ ಭಾರತ|
12118028c ಸಂಗೃಹೀತಮನುಷ್ಯೇಣ ಕೃತ್ಸ್ನಾ ಜೇತುಂ ವಸುಂಧರಾ||
ಭಾರತ! ಅಂಥಹ ಯೋಧರನ್ನು ಸಂಗ್ರಹಿಸಿಟ್ಟುಕೊಂಡಿರುವ ವೀರ ರಾಜನು ಒಂದೇ ಒಂದು ಸಾವಿರ ಅಶ್ವಸೈನಿಕರ ಬೆಂಬಲದಿಂದ ಅಖಂಡ ಭೂಮಂಡಲವನ್ನೂ ಜಯಿಸಬಲ್ಲನು.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಿರ್ಸಂವಾದೇ ಅಷ್ಟಾದಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಿರ್ಸಂವಾದ ಎನ್ನುವ ನೂರಾಹದಿನೆಂಟನೇ ಅಧ್ಯಾಯವು.
[1] ಪ್ರಶ್ರಯಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಪ್ರಾಕೃತೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಗುಣಚೇಷ್ಟಾ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಶ್ರದ್ಧಾಲುಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ನಿತ್ಯಮಾಪ್ತಾಮಾತ್ಯೋ ಎಂಬ ಪಾಠಾಂತರವಿದೆ (ಭಾರತ ದರ್ಶನ).
[6] ಕರ್ಮಣ್ಯಮಾತ್ಯಾನಾಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[7] ಸದಾ ಭೃತ್ಯಜನಾಪೇಕ್ಷೀ ಎಂಬ ಪಾಠಾಂತರವಿದೆ (ಭಾರತ ದರ್ಶನ).
[8] ಧರ್ಮಕಾರ್ಯಾನುಶಾಸನಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[9] ಪ್ರಜಾಪೇಕ್ಷೀ ಎಂಬ ಪಾಠಾಂತರವಿದೆ (ಭಾರತ ದರ್ಶನ).
[10] ಅಭಯಾ ಗಜಪೃಷ್ಠಸ್ಥಾ ಎಂಬ ಪಾಠಾಂತರವಿದೆ (ಭಾರತ ದರ್ಶನ).