ಶಾಂತಿ ಪರ್ವ: ರಾಜಧರ್ಮ ಪರ್ವ
೧೧೭
ಋಷಿರ್ಸಂವಾದ
ಋಷಿ ಮತ್ತು ನಾಯಿಯ ಕಥೆ (1-44).
12117001 ಭೀಷ್ಮ ಉವಾಚ|
12117001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12117001c ನಿದರ್ಶನಕರಂ ಲೋಕೇ ಸಜ್ಜನಾಚರಿತಂ ಸದಾ||
ಭೀಷ್ಮನು ಹೇಳಿದನು: “ಲೋಕದಲ್ಲಿ ಸಜ್ಜನರ ಆಚರಣೆಗಳ ಕುರಿತು ನಿದರ್ಶನಕರವಾದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
12117002a ಅಸ್ಯೈವಾರ್ಥಸ್ಯ ಸದೃಶಂ ಯಚ್ಚ್ರುತಂ ಮೇ ತಪೋವನೇ|
12117002c ಜಾಮದಗ್ನ್ಯಸ್ಯ ರಾಮಸ್ಯ ಯದುಕ್ತಮೃಷಿಸತ್ತಮೈಃ||
ಇದೇ ಅರ್ಥವನ್ನು ನೀಡುವ ವಿಷಯವನ್ನು ತಪೋವನದಲ್ಲಿ ಋಷಿಸತ್ತಮರು ಜಾಮದಗ್ನಿ ರಾಮನಿಗೆ ಹೇಳಿದುದನ್ನು ನಾನು ಕೇಳಿದ್ದೆ.
12117003a ವನೇ ಮಹತಿ ಕಸ್ಮಿಂಶ್ಚಿದಮನುಷ್ಯನಿಷೇವಿತೇ|
12117003c ಋಷಿರ್ಮೂಲಫಲಾಹಾರೋ ನಿಯತೋ ನಿಯತೇಂದ್ರಿಯಃ||
ಒಂದು ಮಹಾ ನಿರ್ಜನ ವನದಲ್ಲಿ ಮೂಲಫಲಗಳನ್ನೇ ಸೇವಿಸುತ್ತಿದ್ದ ನಿಯತಾತ್ಮ ನಿಯತೇಂದ್ರಿಯ ಋಷಿಯೋರ್ವನಿದ್ದನು.
12117004a ದೀಕ್ಷಾದಮಪರಃ ಶಾಂತಃ ಸ್ವಾಧ್ಯಾಯಪರಮಃ ಶುಚಿಃ|
12117004c ಉಪವಾಸವಿಶುದ್ಧಾತ್ಮಾ ಸತತಂ ಸತ್ಪಥೇ ಸ್ಥಿತಃ||
ಉತ್ತಮ ದೀಕ್ಷೆಯನ್ನು ಕೈಗೊಂಡಿದ್ದ ಆ ಶಾಂತ, ಸ್ವಾಧ್ಯಾಯಪರ, ಪರಮ ಶುಚಿ, ವಿಶುದ್ಧಾತ್ಮಾ, ಉಪವಾಸವ್ರತವನ್ನು ಕೈಗೊಂಡಿದ್ದ ಅವನು ಸತತವೂ ಸತ್ಪಥದಲ್ಲಿಯೇ ಸ್ಥಿತನಾಗಿದ್ದನು.
12117005a ತಸ್ಯ ಸಂದೃಶ್ಯ ಸದ್ಭಾವಮುಪವಿಷ್ಟಸ್ಯ ಧೀಮತಃ|
12117005c ಸರ್ವಸತ್ತ್ವಾಃ ಸಮೀಪಸ್ಥಾ ಭವಂತಿ ವನಚಾರಿಣಃ||
ಸದ್ಭಾವದಿಂದ ಅಲ್ಲಿ ಕುಳಿತಿದ್ದ ಧೀಮತನನ್ನು ಕಂಡು ವನಚಾರಿಣೀ ಸರ್ವ ಸತ್ತ್ವಗಳೂ ಅವನ ಸಮೀಪಕ್ಕೆ ಬರತೊಡಗಿದವು.
12117006a ಸಿಂಹವ್ಯಾಘ್ರಾಃ ಸಶರಭಾ ಮತ್ತಾಶ್ಚೈವ ಮಹಾಗಜಾಃ|
12117006c ದ್ವೀಪಿನಃ ಖಡ್ಗಭಲ್ಲೂಕಾ ಯೇ ಚಾನ್ಯೇ ಭೀಮದರ್ಶನಾಃ||
12117007a ತೇ ಸುಖಪ್ರಶ್ನದಾಃ ಸರ್ವೇ ಭವಂತಿ ಕ್ಷತಜಾಶನಾಃ|
12117007c ತಸ್ಯರ್ಷೇಃ ಶಿಷ್ಯವಚ್ಚೈವ ನ್ಯಗ್ಭೂತಾಃ ಪ್ರಿಯಕಾರಿಣಃ||
ಸಿಂಹ-ವ್ಯಾಘ್ರಗಳೂ, ಶರಭಗಳೂ, ಮದಿಸಿದ ಮಹಾಗಜಗಳೂ, ಚಿರತೆಗಳು, ಖಡ್ಗಮೃಗಗಳು, ಭಲ್ಲೂಕಗಳು ಮತ್ತು ಅನ್ಯ ಭೀಮದರ್ಶನ ಮೃಗಗಳು ಎಲ್ಲವೂ ಮಾಂಸಾಹಾರಿಗಳಾಗಿದ್ದರೂ ಆ ಋಷಿಯ ಬಳಿಬಂದು ಶಿಷ್ಯರಂತೆ ತಲೆತಗ್ಗಿಸಿ ಅವನು ಸುಖವಾಗಿದ್ದೀರಾ ಎಂದು ಕೇಳಿದುದಕ್ಕೆ ಸುಖದಿಂದಿದ್ದೇವೆ ಎಂದು ಹೇಳಿದವು.
12117008a ದತ್ತ್ವಾ ಚ ತೇ ಸುಖಪ್ರಶ್ನಂ ಸರ್ವೇ ಯಾಂತಿ ಯಥಾಗತಮ್|
12117008c ಗ್ರಾಮ್ಯಸ್ತ್ವೇಕಃ ಪಶುಸ್ತತ್ರ ನಾಜಹಾಚ್ಚ್ವಾ ಮಹಾಮುನಿಮ್||
ಅವನ ಕುಶಲ ಪ್ರಶ್ನೆಗೆ ಉತ್ತರವನ್ನಿತ್ತು ಅವೆಲ್ಲವೂ ಎಲ್ಲಿಂದ ಬಂದಿದ್ದವೋ ಅಲ್ಲಿಗೆ ಹೋದವು. ಒಂದು ಗ್ರಾಮ್ಯ ಪ್ರಾಣಿಯು ಮಾತ್ರ ಆ ಮಹಾಮುನಿಯನ್ನು ಬಿಟ್ಟು ಹೋಗಲಿಲ್ಲ.
12117009a ಭಕ್ತೋಽನುರಕ್ತಃ ಸತತಮುಪವಾಸಕೃಶೋಽಬಲಃ|
12117009c ಫಲಮೂಲೋತ್ಕರಾಹಾರಃ ಶಾಂತಃ ಶಿಷ್ಟಾಕೃತಿರ್ಯಥಾ||
ಅದು ಆ ಮುನಿಯ ಭಕ್ತನೂ ಅನುರಕ್ತನೂ ಆಗಿದ್ದುಕೊಂಡು, ಸತತವೂ ಫಲಮೂಲಗಳನ್ನು ಮಾತ್ರ ತಿಂದು ಉಪವಾಸಮಾಡುತ್ತಿತ್ತು. ಉಪವಾಸದಿಂದ ಕೃಶನೂ ಅಬಲನೂ ಆಗಿದ್ದ ಆ ಶಾಂತ ಪ್ರಾಣಿಯು ಶಿಷ್ಯನಂತೆಯೇ ನಡೆದುಕೊಳ್ಳುತ್ತಾ ಅಲ್ಲಿಯೇ ಉಳಿದುಕೊಂಡುಬಿಟ್ಟಿತು.
12117010a ತಸ್ಯರ್ಷೇರುಪವಿಷ್ಟಸ್ಯ ಪಾದಮೂಲೇ ಮಹಾಮುನೇಃ|
12117010c ಮನುಷ್ಯವದ್ಗತೋ ಭಾವಃ ಸ್ನೇಹಬದ್ಧೋಽಭವದ್ಭೃಶಮ್||
ಆ ಮಹಾಮುನಿ ಋಷಿಯ ಪಾದಮೂಲದಲ್ಲಿ ಕುಳಿತುಕೊಂಡಿದ್ದ ಅದಕ್ಕೆ ತಾನೂ ಮನುಷ್ಯನೇ ಎಂಬ ಭಾವನೆಯು ಮೂಡಿತ್ತು ಮತ್ತು ಅದು ಅವನನ್ನು ಸ್ನೇಹಪಾಶದಿಂದ ಬಂಧಿಸಿಬಿಟ್ಟಿತು.
12117011a ತತೋಽಭ್ಯಯಾನ್ಮಹಾವೀರ್ಯೋ ದ್ವೀಪೀ ಕ್ಷತಜಭೋಜನಃ|
12117011c ಶ್ವಾರ್ಥಮತ್ಯಂತಸಂದುಷ್ಟಃ ಕ್ರೂರಃ ಕಾಲ ಇವಾಂತಕಃ||
12117012a ಲೇಲಿಹ್ಯಮಾನಸ್ತೃಷಿತಃ ಪುಚ್ಚಾಸ್ಫೋಟನತತ್ಪರಃ|
12117012c ವ್ಯಾದಿತಾಸ್ಯಃ ಕ್ಷುಧಾಭಗ್ನಃ ಪ್ರಾರ್ಥಯಾನಸ್ತದಾಮಿಷಮ್||
ಆಗ ಮಹಾವೀರ್ಯ ರಕ್ತಭೋಜೀ, ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುವುದರಲ್ಲಿಯೇ ಗುರಿಯಿಟ್ಟಿದ್ದ ಚಿರತೆಯೊಂದು ಕ್ರೂರ ಕಾಲ ಅಂತಕನಂತೆ ಬಾಯಾರಿ ಬಾಯಿಕಳೆದು ನಾಲಿಗೆಚಾಚಿ, ಬಾಲವನ್ನು ಹೊಡೆಯುತ್ತಾ, ತನ್ನ ಬಾಯಾರಿಕೆಯನ್ನು ತಣಿಸುವ ಆಮಿಷವನ್ನು ಬಯಸಿ ಆಕ್ರಮಣಮಾಡಿತು.
12117013a ತಂ ದೃಷ್ಟ್ವಾ ಕ್ರೂರಮಾಯಾಂತಂ ಜೀವಿತಾರ್ಥೀ ನರಾಧಿಪ|
12117013c ಪ್ರೋವಾಚ ಶ್ವಾ ಮುನಿಂ ತತ್ರ ಯತ್ತಚ್ಚೃಣು ಮಹಾಮತೇ||
ನರಾಧಿಪ! ಮೇಲೇರಲು ಬರುತ್ತಿದ್ದ ಆ ಕ್ರೂರ ಪ್ರಾಣಿಯನ್ನು ನೋಡಿ ಜೀವಿತಾರ್ಥೀ ನಾಯಿಯು ಮುನಿಗೆ ಇದನ್ನು ಹೇಳಿತು. ಮಹಾಮತೇ! ಅದನ್ನು ಕೇಳು.
12117014a ಶ್ವಶತ್ರುರ್ಭಗವನ್ನತ್ರ ದ್ವೀಪೀ ಮಾಂ ಹಂತುಮಿಚ್ಚತಿ|
12117014c ತ್ವತ್ಪ್ರಸಾದಾದ್ಭಯಂ ನ ಸ್ಯಾತ್ತಸ್ಮಾನ್ಮಮ ಮಹಾಮುನೇ||
“ಮಹಾಮುನೇ! ನಾಯಿಗಳಿಗೆ ಶತ್ರುವಾದ ಆ ಚಿರತೆಯು ನನ್ನನ್ನು ಕೊಲ್ಲಲು ಬಯಸುತ್ತಿದೆ. ನಿನ್ನ ದಯೆಯಿಂದ ನನಗೆ ಭಯವಾಗದಂತೆ ಮಾಡು.”
12117015 ಮುನಿರುವಾಚ|
12117015a ನ ಭಯಂ ದ್ವೀಪಿನಃ ಕಾರ್ಯಂ ಮೃತ್ಯುತಸ್ತೇ ಕಥಂ ಚನ|
12117015c ಏಷ ಶ್ವರೂಪರಹಿತೋ ದ್ವೀಪೀ ಭವಸಿ ಪುತ್ರಕ||
ಮುನಿಯು ಹೇಳಿದನು: “ಈ ಚಿರತೆಯ ಮೇಲೆ ಭಯಪಡಬೇಡ! ಅದು ಎಂದೂ ನಿನ್ನ ಮೃತ್ಯುವಾಗಲಾರದು. ಪುತ್ರಕ! ನೀನೀಗಲೇ ಈ ನಾಯಿಯ ರೂಪವನ್ನು ಬಿಟ್ಟು ಚಿರತೆಯೇ ಆಗುವೆ!””
12117016 ಭೀಷ್ಮ ಉವಾಚ|
12117016a ತತಃ ಶ್ವಾ ದ್ವೀಪಿತಾಂ ನೀತೋ ಜಾಂಬೂನದನಿಭಾಕೃತಿಃ|
12117016c ಚಿತ್ರಾಂಗೋ ವಿಸ್ಫುರನ್ ಹೃಷ್ಟೋ ವನೇ ವಸತಿ ನಿರ್ಭಯಃ||
ಭೀಷ್ಮನು ಹೇಳಿದನು: “ಆಗ ನಾಯಿಯು ಚಿರತೆಯಾಗಿ ಪರಿವರ್ತಿತಗೊಂಡಿತು. ಚಿನ್ನದಂತೆ ಥಳಥಳಿಸುವ ಆಕೃತಿಯಿದ್ದ ಆ ಚಿತ್ರಾಂಗ ಚಿರತೆಯು ಸಂತೋಷದಿಂದ ನಿರ್ಭಯವಾಗಿ ವನದಲ್ಲಿ ವಾಸಿಸತೊಡಗಿತು.
12117017a ತತೋಽಭ್ಯಯಾನ್ಮಹಾರೌದ್ರೋ ವ್ಯಾದಿತಾಸ್ಯಃ ಕ್ಷುಧಾನ್ವಿತಃ|
12117017c ದ್ವೀಪಿನಂ ಲೇಲಿಹದ್ವಕ್ತ್ರೋ ವ್ಯಾಘ್ರೋ ರುಧಿರಲಾಲಸಃ||
ಆಗ ಬಾಯಾರಿಕೆಯಿಂದ ಬಳಲಿದ್ದ ಮಹಾರೌದ್ರ ವ್ಯಾಘ್ರವು ಆ ಚಿರತೆಯ ರಕ್ತವನ್ನು ಕುಡಿಯಲು ಬಯಸಿ ಬಾಯಿಕಳೆದು ಕಟವಾಯಿಗಳನ್ನು ನೆಕ್ಕುತ್ತಾ ಬಂದಿತು.
12117018a ವ್ಯಾಘ್ರಂ ದೃಷ್ಟ್ವಾ ಕ್ಷುಧಾಭಗ್ನಂ ದಂಷ್ಟ್ರಿಣಂ ವನಗೋಚರಮ್|
12117018c ದ್ವೀಪೀ ಜೀವಿತರಕ್ಷಾರ್ಥಮೃಷಿಂ ಶರಣಮೇಯಿವಾನ್||
ಬಾಯಾರಿಕೆಯಿಂದ ಬಳಲಿದ್ದ ಕೋರೆದಾಡೆಗಳಿದ್ದ ಆ ವನಗೋಚರ ವ್ಯಾಘ್ರವನ್ನು ನೋಡಿ ಜೀವದ ರಕ್ಷಣಾರ್ಥವಾಗಿ ಆ ಚಿರತೆಯು ಋಷಿಯನ್ನು ಶರಣುಹೊಕ್ಕಿತು.
12117019a ತತಃ ಸಂವಾಸಜಂ ಸ್ನೇಹಮೃಷಿಣಾ ಕುರ್ವತಾ ಸದಾ|
12117019c ಸ ದ್ವೀಪೀ ವ್ಯಾಘ್ರತಾಂ ನೀತೋ ರಿಪುಭಿರ್ಬಲವತ್ತರಃ|
12117019e ತತೋ ದೃಷ್ಟ್ವಾ ಸ ಶಾರ್ದೂಲೋ ನಾಭ್ಯಹಂಸ್ತಂ ವಿಶಾಂ ಪತೇ||
ಸಹವಾಸಜನಿತವಾದ ಉತ್ತಮ ಸ್ನೇಹವನ್ನು ಉಳಿಸಿಕೊಳ್ಳಲು ಆ ಋಷಿಯು ಚಿರತೆಯನ್ನು ಅದರ ಶತ್ರುವಿಗಿಂತಲೂ ಬಲಿಷ್ಠವಾದ ವ್ಯಾಘ್ರವನ್ನಾಗಿ ಪರಿವರ್ತಿಸಿದನು. ವಿಶಾಂಪತೇ! ಅದನ್ನು ನೋಡಿದ ಹುಲಿಯು ಹುಲಿಯಾದ ಚಿರತೆಯನ್ನು ಕೊಲ್ಲಲಿಲ್ಲ.
12117020a ಸ ತು ಶ್ವಾ ವ್ಯಾಘ್ರತಾಂ ಪ್ರಾಪ್ಯ ಬಲವಾನ್ ಪಿಶಿತಾಶನಃ|
12117020c ನ ಮೂಲಫಲಭೋಗೇಷು ಸ್ಪೃಹಾಮಪ್ಯಕರೋತ್ತದಾ||
ವ್ಯಾಘ್ರತ್ವವನ್ನು ಪಡೆದ ಆ ನಾಯಿಯು ಬಲಶಾಲೀ ಮಾಂಸಾಹಾರಿಯಾಯಿತು. ಫಲಮೂಲಗಳನ್ನು ತಿನ್ನುವುದರಲ್ಲಿ ಅದರ ಆಸಕ್ತಿಯು ಕಡಿಮೆಯಾಯಿತು.
12117021a ಯಥಾ ಮೃಗಪತಿರ್ನಿತ್ಯಂ ಪ್ರಕಾಂಕ್ಷತಿ ವನೌಕಸಃ|
12117021c ತಥೈವ ಸ ಮಹಾರಾಜ ವ್ಯಾಘ್ರಃ ಸಮಭವತ್ತದಾ||
ಮಹಾರಾಜ! ಮೃಗಪತಿ ಸಿಂಹವು ನಿತ್ಯವೂ ವನಚರ ಪ್ರಾಣಿಗಳ ಮಾಂಸವನ್ನು ತಿನ್ನಲು ಬಯಸುವಂತೆ ಹುಲಿಯಾದ ನಾಯಿಯೂ ಮಾಂಸಕ್ಕೆ ಹಾತೊರೆಯತೊಡಗಿತು.
12117022a ವ್ಯಾಘ್ರಸ್ತೂಟಜಮೂಲಸ್ಥಸ್ತೃಪ್ತಃ ಸುಪ್ತೋ ಹತೈರ್ಮೃಗೈಃ|
12117022c ನಾಗಶ್ಚಾಗಾತ್ತಮುದ್ದೇಶಂ ಮತ್ತೋ ಮೇಘ ಇವೋತ್ಥಿತಃ||
ಆ ವ್ಯಾಘ್ರವು ತಾನು ಕೊಂದ ಮೃಗಗಳನ್ನು ತಿಂದು ತೃಪ್ತನಾಗಿ ಆಶ್ರಮದ ಸಮೀಪದಲ್ಲಿ ಮಲಗಿದ್ದಾಗ ಅಲ್ಲಿಗೆ ಮೇಲೆದ್ದು ಬಂದ ಮೇಘದೋಪಾದಿಯಲ್ಲಿ ಮದಿಸಿದ ಆನೆಯೊಂದು ಆಗಮಿಸಿತು.
12117023a ಪ್ರಭಿನ್ನಕರಟಃ ಪ್ರಾಂಶುಃ ಪದ್ಮೀ ವಿತತಮಸ್ತಕಃ|
12117023c ಸುವಿಷಾಣೋ ಮಹಾಕಾಯೋ ಮೇಘಗಂಭೀರನಿಸ್ವನಃ||
ಅದರ ಗಂಡಸ್ಥಳದಿಂದ ಮದೋದಕವು ಸುರಿಯುತ್ತಿತ್ತು. ಅದರ ವಿಶಾಲ ಕುಂಭಸ್ಥಲದ ಮೇಲೆ ಕಮಲದ ಚಿಹ್ನೆಯಿತ್ತು. ಸುಂದರ ದಂತಗಳಿದ್ದ ಆ ಮಹಾಕಾಯವು ಮೇಘದಂತೆ ಗಂಭೀರವಾಗಿ ಘೀಂಗಕರಿಸುತ್ತಿತ್ತು.
12117024a ತಂ ದೃಷ್ಟ್ವಾ ಕುಂಜರಂ ಮತ್ತಮಾಯಾಂತಂ ಮದಗರ್ವಿತಮ್|
12117024c ವ್ಯಾಘ್ರೋ ಹಸ್ತಿಭಯಾತ್ತ್ರಸ್ತಸ್ತಮೃಷಿಂ ಶರಣಂ ಯಯೌ||
ಮದಗರ್ವಿತನಾಗಿ ಮುಂದೆ ಬರುತ್ತಿದ್ದ ಆ ಮದಿಸಿದ ಆನೆಯನ್ನು ನೋಡಿ ವ್ಯಾಘ್ರವು ಆನೆಯ ಭಯದಿಂದ ನಡುಗುತ್ತಾ ಋಷಿಯ ಶರಣುಹೊಕ್ಕಿತು.
12117025a ತತೋಽನಯತ್ಕುಂಜರತಾಂ ತಂ ವ್ಯಾಘ್ರಮೃಷಿಸತ್ತಮಃ|
12117025c ಮಹಾಮೇಘೋಪಮಂ ದೃಷ್ಟ್ವಾ ತಂ ಸ ಭೀತೋಽಭವದ್ಗಜಃ||
ಆಗ ಋಷಿಸತ್ತಮನು ಆ ವ್ಯಾಘ್ರಕ್ಕೆ ಕುಂಜರತೆಯನ್ನು ನೀಡಿದನು. ಮಹಾಮೇಘದಂತಿದ್ದ ಆ ಆನೆಯನ್ನು ನೋಡಿ, ಬಂದಿದ್ದ ಆನೆಯು ಭಯಗೊಂಡಿತು.
12117026a ತತಃ ಕಮಲಷಂಡಾನಿ ಶಲ್ಲಕೀಗಹನಾನಿ ಚ|
12117026c ವ್ಯಚರತ್ಸ ಮುದಾ ಯುಕ್ತಃ ಪದ್ಮರೇಣುವಿಭೂಷಿತಃ||
ಅನಂತರ ಆನೆಯ ರೂಪದಲ್ಲಿದ್ದ ಆ ನಾಯಿಯು ಕಮಲಗಳ ಸಮೂಹಗಳಲ್ಲಿಯೂ ಗಹನ ಸಲ್ಲಕೀಲತೆಗಳ ಮಧ್ಯವೂ ನುಗ್ಗುತ್ತಾ ಕಮಲ ಪರಾಗದಿಂದ ವಿಭೂಷಿತವಾಗಿ ಮುದದಿಂದ ಸಂಚರಿಸುತ್ತಿತ್ತು.
12117027a ಕದಾ ಚಿದ್ರಮಮಾಣಸ್ಯ ಹಸ್ತಿನಃ ಸುಮುಖಂ ತದಾ|
12117027c ಋಷೇಸ್ತಸ್ಯೋಟಜಸ್ಥಸ್ಯ ಕಾಲೋಽಗಚ್ಚನ್ನಿಶಾನಿಶಮ್||
ಒಮ್ಮೊಮ್ಮೆ ಆ ಸುಂದರ ಮುಖದ ಆನೆಯು ತಿರುಗಾಡುತ್ತಾ ಋಷಿಯ ಆಶ್ರಮದ ಬಳಿಯೂ ಬರುತ್ತಿತ್ತು. ಹೀಗೆ ಅನೇಕ ದಿನಗಳು ಕಳೆದುಹೋದವು.
12117028a ಅಥಾಜಗಾಮ ತಂ ದೇಶಂ ಕೇಸರೀ ಕೇಸರಾರುಣಃ|
12117028c ಗಿರಿಕಂದರಜೋ ಭೀಮಃ ಸಿಂಹೋ ನಾಗಕುಲಾಂತಕಃ||
ಒಮ್ಮೆ ಆ ಪ್ರದೇಶಕ್ಕೆ ಎಣೆಗೆಂಪಿನ ಬಣ್ಣದ ಕೂದಲಿನ ಸಿಂಹವೊಂದು ಆಗಮಿಸಿತು. ಗಿರಿಕಂದರಗಳಲ್ಲಿ ಹುಟ್ಟಿದ್ದ ಆ ಭಯಂಕರ ಸಿಂಹವು ಆನೆಗಳ ಕುಲಗಳನ್ನೇ ನಾಶಪಡಿಸುವಂಥದ್ದಾಗಿತ್ತು.
12117029a ತಂ ದೃಷ್ಟ್ವಾ ಸಿಂಹಮಾಯಾಂತಂ ನಾಗಃ ಸಿಂಹಭಯಾಕುಲಃ|
12117029c ಋಷಿಂ ಶರಣಮಾಪೇದೇ ವೇಪಮಾನೋ ಭಯಾತುರಃ||
ಮುಂದೆ ಬರುತ್ತಿದ್ದ ಆ ಸಿಂಹವನ್ನು ನೋಡಿ ಸಿಂಹಕ್ಕೆ ಹೆದರಿದ ಆನೆಯು ಭಯಾತುರನಾಗಿ ನಡುಗುತ್ತಾ ಋಷಿಯನ್ನು ಶರಣುಹೊಕ್ಕಿತು.
12117030a ತತಃ ಸ ಸಿಂಹತಾಂ ನೀತೋ ನಾಗೇಂದ್ರೋ ಮುನಿನಾ ತದಾ|
12117030c ವನ್ಯಂ ನಾಗಣಯತ್ಸಿಂಹಂ ತುಲ್ಯಜಾತಿಸಮನ್ವಯಾತ್||
ಆಗ ಮುನಿಯು ಆನೆಗೆ ಸಿಂಹತ್ವವನ್ನು ನೀಡಿದನು. ತನ್ನ ಜಾತಿಯ ಸಿಂಹದಂತೆಯೇ ಆದ ಆ ಆನೆಯನ್ನು, ಬಂದಿದ್ದ ಸಿಂಹವು ಗಣನೆಗೇ ತೆಗೆದುಕೊಳ್ಳಲಿಲ್ಲ.
12117031a ದೃಷ್ಟ್ವಾ ಚ ಸೋಽನಶತ್ಸಿಂಹೋ ವನ್ಯೋ ಭೀಸನ್ನವಾಗ್ಬಲಃ|
12117031c ಸ ಚಾಶ್ರಮೇಽವಸತ್ಸಿಂಹಸ್ತಸ್ಮಿನ್ನೇವ ವನೇ ಸುಖೀ||
ಅರಣ್ಯದ ಸಿಂಹವು ತನ್ನ ಎದುರಿಗಿದ್ದ ಸಿಂಹವನ್ನು ನೋಡಿ ಭಯಗೊಂಡು ಓಡಿ ಹೋಯಿತು. ಸಿಂಹದ ರೂಪದಲ್ಲಿದ್ದ ಆ ನಾಯಿಯು ಆಶ್ರಮದಲ್ಲಿಯೇ ವಾಸಮಾಡತೊಡಗಿತು.
12117032a ನ ತ್ವನ್ಯೇ ಕ್ಷುದ್ರಪಶವಸ್ತಪೋವನನಿವಾಸಿನಃ|
12117032c ವ್ಯದೃಶ್ಯಂತ ಭಯತ್ರಸ್ತಾ ಜೀವಿತಾಕಾಂಕ್ಷಿಣಃ ಸದಾ||
ಜೀವವನ್ನು ಉಳಿಸಿಕೊಳ್ಳುವ ಇಚ್ಛೆಯಿದ್ದ ಮತ್ತು ಭಯಭೀತ ಕ್ಷುದ್ರ ಪಶುಗಳು ಆ ಸಿಂಹದ ಭಯದಿಂದ ಆಶ್ರಮದ ಸಮೀಪದಲ್ಲಿಯೂ ಸುಳಿದಾಡುತ್ತಿರಲಿಲ್ಲ.
12117033a ಕದಾ ಚಿತ್ಕಾಲಯೋಗೇನ ಸರ್ವಪ್ರಾಣಿವಿಹಿಂಸಕಃ|
12117033c ಬಲವಾನ್ ಕ್ಷತಜಾಹಾರೋ ನಾನಾಸತ್ತ್ವಭಯಂಕರಃ||
12117034a ಅಷ್ಟಪಾದೂರ್ಧ್ವಚರಣಃ ಶರಭೋ ವನಗೋಚರಃ|
12117034c ತಂ ಸಿಂಹಂ ಹಂತುಮಾಗಚ್ಚನ್ಮುನೇಸ್ತಸ್ಯ ನಿವೇಶನಮ್||
ಒಮ್ಮೆ ಕಾಲಯೋಗದಿಂದ ಸರ್ವಪ್ರಾಣಿಗಳನ್ನೂ ಹಿಂಸಿಸುವ, ಬಲಶಾಲೀ, ರಕ್ತವನ್ನು ಕುಡಿಯುವ, ನಾನಾಸತ್ತ್ವಭಯಂಕರ, ಎಂಟು ಕಾಲುಗಳಿದ್ದ, ಕಣ್ಣುಗಳು ಮೇಲ್ಮುಖವಾಗಿದ್ದ ವನಗೋಚರ ಶರಭವೊಂದು ಆ ಸಿಂಹವನ್ನು ಸಂಹರಿಸಲು ಮುನಿಯ ಆಶ್ರಮಕ್ಕೆ ಬಂದಿತು.
12117035a ತಂ ಮುನಿಃ ಶರಭಂ ಚಕ್ರೇ ಬಲೋತ್ಕಟಮರಿಂದಮ|
12117035c ತತಃ ಸ ಶರಭೋ ವನ್ಯೋ ಮುನೇಃ ಶರಭಮಗ್ರತಃ|
12117035e ದೃಷ್ಟ್ವಾ ಬಲಿನಮತ್ಯುಗ್ರಂ ದ್ರುತಂ ಸಂಪ್ರಾದ್ರವದ್ಭಯಾತ್||
ಅರಿಂದಮ! ಆಗ ಮುನಿಯು ಆ ಸಿಂಹವನ್ನು ಬಲೋತ್ಕಟ ಶರಭವನ್ನಾಗಿ ಮಾಡಿದನು. ವನ್ಯ ಶರಭವು ಮುನಿಯ ಮುಂದಿದ್ದ ಬಲಶಾಲೀ ಅತ್ಯುಗ್ರ ಶರಭವನ್ನು ನೋಡಿ ಭಯದಿಂದ ಓಡಿಹೋಯಿತು.
12117036a ಸ ಏವಂ ಶರಭಸ್ಥಾನೇ ನ್ಯಸ್ತೋ ವೈ ಮುನಿನಾ ತದಾ|
12117036c ಮುನೇಃ ಪಾರ್ಶ್ವಗತೋ ನಿತ್ಯಂ ಶಾರಭ್ಯಂ ಸುಖಮಾಪ್ತವಾನ್||
ಹಾಗೆ ಮುನಿಯಿಂದ ಶರಭಸ್ಥಾನದಲ್ಲಿರಿಸಲ್ಪಟ್ಟಿದ್ದ ಆ ನಾಯಿಯು ಶಾರಭ್ಯತ್ವವನ್ನು ಪಡೆದು ಮುನಿಯ ಬಳಿಯಲ್ಲಿಯೇ ವಾಸವಾಗಿದ್ದುಕೊಂಡಿತು.
12117037a ತತಃ ಶರಭಸಂತ್ರಸ್ತಾಃ ಸರ್ವೇ ಮೃಗಗಣಾ ವನಾತ್|
12117037c ದಿಶಃ ಸಂಪ್ರಾದ್ರವನ್ರಾಜನ್ ಭಯಾಜ್ಜೀವಿತಕಾಂಕ್ಷಿಣಃ||
ರಾಜನ್! ಅಗ ಆ ಶರಭಕ್ಕೆ ಹೆದರಿದ ಸರ್ವ ಮೃಗಗಣಗಳೂ ಭಯದಿಂದ ಜೀವವನ್ನು ಉಳಿಸಿಕೊಳ್ಳಲು ಬಯಸಿ ದಿಕ್ಕುದಿಕ್ಕುಗಳಲ್ಲಿ ಓಡಿ ಹೋದವು.
12117038a ಶರಭೋಽಪ್ಯತಿಸಂದುಷ್ಟೋ ನಿತ್ಯಂ ಪ್ರಾಣಿವಧೇ ರತಃ|
12117038c ಫಲಮೂಲಾಶನಂ ಶಾಂತಂ ನೈಚ್ಚತ್ಸ ಪಿಶಿತಾಶನಃ||
ನಿತ್ಯವೂ ಪ್ರಾಣಿವಧೆಯಲ್ಲಿಯೇ ನಿರತನಾಗಿ ಮಾಂಸಾಶಿಯಾಗಿದ್ದ ಆ ದುಷ್ಟ ಶರಭವು ಫಲಮೂಲಗಳನ್ನು ತಿನ್ನಲು ಇಚ್ಛಿಸುತ್ತಿರಲಿಲ್ಲ.
12117039a ತತೋ ರುಧಿರತರ್ಷೇಣ ಬಲಿನಾ ಶರಭೋಽನ್ವಿತಃ|
12117039c ಇಯೇಷ ತಂ ಮುನಿಂ ಹಂತುಮಕೃತಜ್ಞಃ ಶ್ವಯೋನಿಜಃ||
ಆಗ ನಾಯಿಯಾಗಿ ಹುಟ್ಟಿದ್ದ ಆ ಬಲಶಾಲೀ ಶರಭವು ರಕ್ತದಾಹದಿಂದ ಪೀಡಿತನಾಗಿ ಕೃತಜ್ಞತೆಯಿಲ್ಲದೇ ಅದೇ ಮುನಿಯನ್ನು ಕೊಲ್ಲಲು ಬಯಸಿತು.
12117040a ತತಸ್ತೇನ ತಪಃಶಕ್ತ್ಯಾ ವಿದಿತೋ ಜ್ಞಾನಚಕ್ಷುಷಾ|
12117040c ವಿಜ್ಞಾಯ ಚ ಮಹಾಪ್ರಾಜ್ಞೋ ಮುನಿಃ ಶ್ವಾನಂ ತಮುಕ್ತವಾನ್||
ಆಗ ತನ್ನ ತಪಃಶಕ್ತಿಯ ಜ್ಞಾನದೃಷ್ಟಿಯಿಂದ ಅದರ ಇಂಗಿತವನ್ನು ತಿಳಿದುಕೊಂಡ ಮಹಾಪ್ರಾಜ್ಞ ಮುನಿಯು ನಾಯಿಗೆ ಹೇಳಿದನು:
12117041a ಶ್ವಾ ತ್ವಂ ದ್ವೀಪಿತ್ವಮಾಪನ್ನೋ ದ್ವೀಪೀ ವ್ಯಾಘ್ರತ್ವಮಾಗತಃ|
12117041c ವ್ಯಾಘ್ರೋ ನಾಗೋ ಮದಪಟುರ್ನಾಗಃ ಸಿಂಹತ್ವಮಾಪ್ತವಾನ್||
“ನಾಯಿಯಾಗಿದ್ದ ನೀನು ಚಿರತೆಯಾದೆ. ಚಿರತೆಯಾಗಿದ್ದವನು ಹುಲಿಯಾದೆ. ವ್ಯಾಘ್ರದಿಂದ ಆನೆಯಾದೆ ಮತ್ತು ಮದಿಸಿದ ಆನೆಯಾಗಿದ್ದವನು ಸಿಂಹತ್ವವನ್ನು ಪಡೆದುಕೊಂಡೆ.
12117042a ಸಿಂಹೋಽತಿಬಲಸಂಯುಕ್ತೋ ಭೂಯಃ ಶರಭತಾಂ ಗತಃ|
12117042c ಮಯಾ ಸ್ನೇಹಪರೀತೇನ ನ ವಿಮೃಷ್ಟಃ ಕುಲಾನ್ವಯಃ||
ಅತಿಬಲಸಂಯುಕ್ತನಾದ ಸಿಂಹದಿಂದ ಪುನಃ ಶರಭನಾದೆ. ನೀಚ ಕುಲದಲ್ಲಿ ಹುಟ್ಟಿದ್ದರೂ ಸ್ನೇಹಬೆಳೆದುದರಿಂದ ನಿನ್ನನ್ನು ನಾನು ಪರಿತ್ಯಜಿಸಲಿಲ್ಲ.
12117043a ಯಸ್ಮಾದೇವಮಪಾಪಂ ಮಾಂ ಪಾಪ ಹಿಂಸಿತುಮಿಚ್ಚಸಿ|
12117043c ತಸ್ಮಾತ್ ಸ್ವಯೋನಿಮಾಪನ್ನಃ ಶ್ವೈವ ತ್ವಂ ಹಿ ಭವಿಷ್ಯಸಿ||
ಯಾವುದೇ ರೀತಿಯ ಪಾಪಭಾವವೂ ಇಲ್ಲದ ನನ್ನನ್ನೇ ಪಾಪಿಯಾದ ನೀನು ಹಿಂಸಿಸಲು ಇಚ್ಛಿಸುತ್ತಿರುವೆ. ಆದುದರಿಂದ ನಿನ್ನದೇ ಯೋನಿಯನ್ನು ಪಡೆದುಕೊಂಡು ನೀನು ನಾಯಿಯೇ ಆಗುತ್ತೀಯೆ.”
12117044a ತತೋ ಮುನಿಜನದ್ವೇಷಾದ್ದುಷ್ಟಾತ್ಮಾ ಶ್ವಾಕೃತೋಽಬುಧಃ|
12117044c ಋಷಿಣಾ ಶರಭಃ ಶಪ್ತಃ ಸ್ವಂ ರೂಪಂ ಪುನರಾಪ್ತವಾನ್||
ಋಷಿಯಿಂದ ಶಪ್ತವಾದ ಆ ದುಷ್ಟಾತ್ಮ ಶರಭವು ಮುನಿಜನರ ದ್ವೇಷದಿಂದಾಗಿ ಪುನಃ ತನ್ನ ನಾಯಿಯ ರೂಪವನ್ನು ಪಡೆದುಕೊಂಡಿತು.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಋಷಿರ್ಸಂವಾದೇ ಸಪ್ತದಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಋಷಿರ್ಸಂವಾದ ಎನ್ನುವ ನೂರಾಹದಿನೇಳನೇ ಅಧ್ಯಾಯವು.