ಶಾಂತಿ ಪರ್ವ: ರಾಜಧರ್ಮ ಪರ್ವ
೧೧೪
ಸರಿತ್ಸಾಗರ ಸಂವಾದ
ಪ್ರಬಲ ಶತ್ರುವಿನ ಮುಂದೆ ವಿನೀತನಾಗಿರಬೇಕೆಂದು ಸೂಚಿಸುವ ಗಂಗೆ ಮತ್ತು ಸಮುದ್ರಗಳ ಸಂವಾದ (1-14).
12114001 ಯುಧಿಷ್ಠಿರ ಉವಾಚ|
12114001a ರಾಜಾ ರಾಜ್ಯಮನುಪ್ರಾಪ್ಯ ದುರ್ಬಲೋ ಭರತರ್ಷಭ|
12114001c ಅಮಿತ್ರಸ್ಯಾತಿವೃದ್ಧಸ್ಯ ಕಥಂ ತಿಷ್ಠೇದಸಾಧನಃ||
ಯುಧಿಷ್ಠಿರನು ಹೇಳಿದನು: “ಭರತರ್ಷಭ! ರಾಜ್ಯವನ್ನು ಪಡೆದುಕೊಂಡಿದ್ದರೂ ದುರ್ಬಲನೂ ಮಿತ್ರರಹಿತನೂ ಅತಿವೃದ್ಧನೂ ಮತ್ತು ಸಾಧನರಹಿತನೂ ಆಗಿದ್ದರೆ ಅವನು ಬಲಶಾಲೀ ಶತ್ರುವಿನ ಮುಂದೆ ಹೇಗೆ ನಿಲ್ಲಬೇಕು?”
12114002 ಭೀಷ್ಮ ಉವಾಚ|
12114002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12114002c ಸರಿತಾಂ ಚೈವ ಸಂವಾದಂ ಸಾಗರಸ್ಯ ಚ ಭಾರತ||
ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಸಮುದ್ರ-ನದಿಗಳ ಸಂವಾದವನ್ನು ಉದಾಹರಿಸುತ್ತಾರೆ.
12114003a ಸುರಾರಿನಿಲಯಃ ಶಶ್ವತ್ಸಾಗರಃ ಸರಿತಾಂ ಪತಿಃ|
12114003c ಪಪ್ರಚ್ಚ ಸರಿತಃ ಸರ್ವಾಃ ಸಂಶಯಂ ಜಾತಮಾತ್ಮನಃ||
ಸುರಾರಿಗಳಿಗೆ ಆಶ್ರಯಸ್ಥಾನನಾದ ನದಿಗಳ ಒಡೆಯ ಸಮುದ್ರನು ತನ್ನಲ್ಲಿ ಹುಟ್ಟಿದ ಸಂಶಯವನ್ನು ಹೋಗಲಾಡಿಸಲೋಸುಗ ಸರ್ವ ಸರಿತ್ತುಗಳನ್ನೂ ಪ್ರಶ್ನಿಸಿದನು:
12114004a ಸಮೂಲಶಾಖಾನ್ಪಶ್ಯಾಮಿ ನಿಹತಾಂಶ್ಚಾಯಿನೋ ದ್ರುಮಾನ್|
12114004c ಯುಷ್ಮಾಭಿರಿಹ ಪೂರ್ಣಾಭಿರನ್ಯಾಂಸ್ತತ್ರ ನ ವೇತಸಮ್||
“ನೀವು ತುಂಬಿ ಹರಿಯುವಾಗ ದೊಡ್ಡ ದೊಡ್ಡ ವೃಕ್ಷಗಳನ್ನೇ ಬೇರು-ರೆಂಬೆಗಳ ಸಮೇತ ಕಿತ್ತು ಕೊಚ್ಚಿಸಿಕೊಂಡು ಬರುವುದನ್ನು ನಾನು ನೋಡಿದ್ದೇನೆ. ಆದರೆ ಅಲ್ಲಿರುವ ಬೆತ್ತದ ಗಿಡಗಳನ್ನು ನೀವು ಕೊಚ್ಚಿಕೊಂಡು ಬರುವುದಿಲ್ಲ.
12114005a ಅಕಾಯಶ್ಚಾಲ್ಪಸಾರಶ್ಚ ವೇತಸಃ ಕೂಲಜಶ್ಚ ವಃ|
12114005c ಅವಜ್ಞಾಯ ನಶಕ್ಯೋ ವಾ[1] ಕಿಂ ಚಿದ್ವಾ ತೇನ ವಃ ಕೃತಮ್||
ಗಾತ್ರವಿಲ್ಲದ, ಅಲ್ಪಶಕ್ತಿಯುಳ್ಳ, ಮತ್ತು ದಡದ ಬುಡದಲ್ಲಿಯೇ ಹುಟ್ಟಿ ಬೆಳೆದ ಬೆತ್ತದ ಗಿಡಗಳನ್ನು ನೀವು ಏಕೆ ಕೊಚ್ಚಿಕೊಂಡು ಬರುತ್ತಿಲ್ಲ? ಅವುಗಳ ಮೇಲಿನ ತಿರಸ್ಕಾರದಿಂದಲೋ ಅಥವಾ ನಿಮಗೆ ಅದು ಶಕ್ಯವಿಲ್ಲವೆಂದೋ?
12114006a ತದಹಂ ಶ್ರೋತುಮಿಚ್ಚಾಮಿ ಸರ್ವಾಸಾಮೇವ ವೋ ಮತಮ್|
12114006c ಯಥಾ ಕೂಲಾನಿ ಚೇಮಾನಿ ಭಿತ್ತ್ವಾ ನಾನೀಯತೇ ವಶಮ್||
ಆ ಬೆತ್ತದ ಗಿಡಗಳನ್ನು ಕಿತ್ತು ನೀವು ಏಕೆ ಹೊತ್ತುಕೊಂಡು ಬರುತ್ತಿಲ್ಲ? ನಿಮ್ಮೆಲ್ಲರಿಂದಲೂ ನಾನು ಈ ವಿಷಯವನ್ನು ಕೇಳಬಯಸುತ್ತೇನೆ.”
12114007a ತತಃ ಪ್ರಾಹ ನದೀ ಗಂಗಾ ವಾಕ್ಯಮುತ್ತರಮರ್ಥವತ್|
12114007c ಹೇತುಮದ್ ಗ್ರಾಹಕಂ ಚೈವ ಸಾಗರಂ ಸರಿತಾಂ ಪತಿಮ್||
ಆಗ ಗಂಗಾನದಿಯು ತನ್ನ ಗ್ರಾಹಕ ಸರಿತ್ತುಗಳ ಒಡೆಯ ಸಾಗರನಿಗೆ ಈ ಅರ್ಥವತ್ತಾದ ಉತ್ತರವನ್ನು ನೀಡಿ ಹೇಳಿದಳು:
12114008a ತಿಷ್ಠಂತ್ಯೇತೇ ಯಥಾಸ್ಥಾನಂ ನಗಾ ಹ್ಯೇಕನಿಕೇತನಾಃ|
12114008c ತತಸ್ತ್ಯಜಂತಿ ತತ್ ಸ್ಥಾನಂ ಪ್ರಾತಿಲೋಮ್ಯಾದಚೇತಸಃ|[2]|
“ವೃಕ್ಷಗಳು ತಮ್ಮ ತಮ್ಮ ಸ್ಥಾನಗಳಲ್ಲಿಯೇ ಬಲವಾಗಿ ನಿಂತಿರುತ್ತವೆ. ನಮ್ಮ ಪ್ರವಾಹಕ್ಕೆ ಅವು ತಲೆತಗ್ಗಿಸುವುದಿಲ್ಲ. ಪ್ರವಾಹದ ಸಮಯದಲ್ಲಿ ನಮ್ಮ ಪ್ರತಿಕೂಲವಾಗಿ ವ್ಯವಹರಿಸುವುದರಿಂದ ಆ ಮೂಢಚೇತನಗಳು ತಮ್ಮಸ್ಥಾನವನ್ನು ತ್ಯಜಿಸಬೇಕಾಗುತ್ತದೆ.
12114009a ವೇತಸೋ ವೇಗಮಾಯಾಂತಂ ದೃಷ್ಟ್ವಾ ನಮತಿ ನೇತರಃ|
12114009c ಸ ಚ ವೇಗೇಽಭ್ಯತಿಕ್ರಾಂತೇ ಸ್ಥಾನಮಾಸಾದ್ಯ ತಿಷ್ಠತಿ||
ಬೆತ್ತದ ಗಿಡಗಳಾದರೋ ಬರುತ್ತಿರುವ ಪ್ರವಾಹದ ವೇಗವನ್ನು ಕಂಡೊಡನೆಯೇ ಬಾಗಿಕೊಂಡುಬಿಡುತ್ತವೆ. ನಮ್ಮ ಪ್ರವಾಹಕ್ಕೆ ಎದುರಾಗಿ ನಿಲ್ಲುವ ಸಾಹಸವನ್ನು ಮಾಡುವುದಿಲ್ಲ. ಪ್ರವಾಹವು ಕಡಿಮೆಯಾದೊಡನೆಯೇ ತಮ್ಮ ಸ್ಥಾನದಲ್ಲಿಯೇ ನಿಂತಿರುತ್ತವೆ.
12114010a ಕಾಲಜ್ಞಃ ಸಮಯಜ್ಞಶ್ಚ ಸದಾ ವಶ್ಯಶ್ಚ ನೋದ್ರುಮಃ[3]|
12114010c ಅನುಲೋಮಸ್ತಥಾಸ್ತಬ್ಧಸ್ತೇನ ನಾಭ್ಯೇತಿ ವೇತಸಃ||
ಬೆತ್ತದ ಗಿಡಗಳು ಸದಾ ಕಾಲ-ಸಮಯಗಳನ್ನು ತಿಳಿದುಕೊಂಡಿರುತ್ತವೆ. ಮರಗಳು ಹಾಗಲ್ಲ. ನಾವು ಪ್ರವಹಿಸುವ ಕಡೆಯೇ ಅದು ಬಗ್ಗಿಕೊಂಡಿರುತ್ತದೆ. ಪ್ರವಾಹಕ್ಕೆ ಎದುರಾಗಿ ನಿಲ್ಲುವುದಿಲ್ಲ. ಆದುದರಿಂದ ಅಹಂಕಾರವಿಲ್ಲದ ಬೆತ್ತದ ಗಿಡಗಳು ನಮ್ಮೊಡನೆ ಬರುವುದಿಲ್ಲ.
12114011a ಮಾರುತೋದಕವೇಗೇನ ಯೇ ನಮಂತ್ಯುನ್ನಮಂತಿ ಚ|
12114011c ಓಷಧ್ಯಃ ಪಾದಪಾ ಗುಲ್ಮಾ ನ ತೇ ಯಾಂತಿ ಪರಾಭವಮ್||
ಗಾಳಿಯ ಮತ್ತು ನೀರಿನ ವೇಗಕ್ಕೆ ಬಾಗುವ ಮತ್ತು ವೇಗವು ಕಡಿಮೆಯಾದೊಡನೆ ಎದ್ದು ನಿಲ್ಲುವ ಔಷಧದ ಗಿಡಗಳು, ಗುಲ್ಮಗಳು ಎಂದೂ ಪರಾಭವವನ್ನು ಹೊಂದುವುದಿಲ್ಲ.”
12114012a ಯೋ ಹಿ ಶತ್ರೋರ್ವಿವೃದ್ಧಸ್ಯ ಪ್ರಭೋರ್ವಧವಿನಾಶನೇ[4]|
12114012c ಪೂರ್ವಂ ನ ಸಹತೇ ವೇಗಂ ಕ್ಷಿಪ್ರಮೇವ ಸ ನಶ್ಯತಿ||
ಹೀಗೆ ಬಲದಲ್ಲಿ ಅಧಿಕನಾದ, ಮತ್ತು ವಧ-ವಿನಾಶಗಳಲ್ಲಿ ಪ್ರಭುವೆನಿಸಿದ ಶತ್ರುವಿನ ವೇಗವನ್ನು ಮೊದಲೇ ನತಶಿರನಾಗಿ ಸಹಿಸಿಕೊಳ್ಳದವನು ಬೇಗನೇ ನಾಶಹೊಂದುತ್ತಾನೆ.
12114013a ಸಾರಾಸಾರಂ ಬಲಂ ವೀರ್ಯಮಾತ್ಮನೋ ದ್ವಿಷತಶ್ಚ ಯಃ|
12114013c ಜಾನನ್ವಿಚರತಿ ಪ್ರಾಜ್ಞೋ ನ ಸ ಯಾತಿ ಪರಾಭವಮ್||
ತನ್ನ ಮತ್ತು ಶತ್ರುವಿನ ಸಾರಾಸಾರಗಳನ್ನೂ ಬಲವನ್ನೂ ವೀರ್ಯವನ್ನೂ ತಿಳಿದು ವಿಚಾರಿಸಿ ನಡೆದುಕೊಳ್ಳುವ ಪ್ರಾಜ್ಞನು ಪರಾಭವವನ್ನು ಹೊಂದುವುದಿಲ್ಲ.
12114014a ಏವಮೇವ ಯದಾ ವಿದ್ವಾನ್ಮನ್ಯೇತಾತಿಬಲಂ ರಿಪುಮ್|
12114014c ಸಂಶ್ರಯೇದ್ವೈತಸೀಂ ವೃತ್ತಿಮೇವಂ ಪ್ರಜ್ಞಾನಲಕ್ಷಣಮ್||
ಹೀಗೆಯೇ ವಿದ್ವಾಂಸ ರಾಜನು ಶತ್ರುವು ತನಗಿಂತಲೂ ಅಧಿಕ ಬಲಶಾಲಿಯೆಂದು ತಿಳಿದಾಗ ತಲೆತಗ್ಗಿಸುವ ವೈತಸೀವೃತ್ತಿಯನ್ನು ಆಶ್ರಯಿಸಬೇಕು. ಇದೇ ಬುದ್ಧಿಶಾಲಿಯ ಲಕ್ಷಣವು.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಸರಿತ್ಸಾಗರಸಂವಾದೇ ಚತುರ್ದಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಸರಿತ್ಸಾಗರಸಂವಾದ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.
[1] ಅವಜ್ಞಯಾ ವಾ ನಾನೀತಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಪ್ರಾತಿಲೋಮ್ಯಾನ್ನ ವೇತಸಃ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ನೋದ್ಧತಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[4] ಪ್ರಭೋರ್ಬಂಧವಿನಾಶನೇ ಎಂಬ ಪಾಠಾಂತರವಿದೆ (ಭಾರತ ದರ್ಶನ).