ಶಾಂತಿ ಪರ್ವ: ರಾಜಧರ್ಮ ಪರ್ವ
೧೧೩
ಉಷ್ಟ್ರಶಿರೋಗ್ರೀವ ಕಥನ
ಆಲಸ್ಯ ಒಂಟೆಯ ಕಥೆ ಮತ್ತು ರಾಜನ ಕರ್ತ್ಯವ್ಯಗಳು (1-21)
12113001 ಯುಧಿಷ್ಠಿರ ಉವಾಚ|
12113001a ಕಿಂ ಪಾರ್ಥಿವೇನ ಕರ್ತವ್ಯಂ ಕಿಂ ಚ ಕೃತ್ವಾ ಸುಖೀ ಭವೇತ್|
12113001c ತನ್ಮಮಾಚಕ್ಷ್ವ ತತ್ತ್ವೇನ ಸರ್ವಂ ಧರ್ಮಭೃತಾಂ ವರ||
ಯುಧಿಷ್ಠಿರನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ! ಪಾರ್ಥಿವನ ಕರ್ತವ್ಯವೇನು? ಏನನ್ನು ಮಾಡುವುದರಿಂದ ಅವನು ಸುಖಿಯಾಗಿರಬಲ್ಲನು? ಸರ್ವವನ್ನೂ ತತ್ತ್ವಪೂರ್ಣವಾಗಿ ನನಗೆ ಹೇಳು.”
12113002 ಭೀಷ್ಮ ಉವಾಚ|
12113002a ಹಂತ ತೇಽಹಂ ಪ್ರವಕ್ಷ್ಯಾಮಿ ಶೃಣು ಕಾರ್ಯೈಕನಿಶ್ಚಯಮ್|
12113002c ಯಥಾ ರಾಜ್ಞೇಹ ಕರ್ತವ್ಯಂ ಯಚ್ಚ ಕೃತ್ವಾ ಸುಖೀ ಭವೇತ್||
ಭೀಷ್ಮನು ಹೇಳಿದನು: “ನಿಲ್ಲು! ರಾಜನ ಕರ್ತವ್ಯವೇನು ಮತ್ತು ಏನನ್ನು ಮಾಡುವುದರಿಂದ ಅವನು ಸುಖಿಯಾಗಿರಬಲ್ಲನು ಎನ್ನುವುದನ್ನು ನಿಶ್ಚಯಮಾಡಿ ನಿನಗೆ ಹೇಳುತ್ತೇನೆ. ಕೇಳು.
12113003a ನ ತ್ವೇವಂ ವರ್ತಿತವ್ಯಂ ಸ್ಮ ಯಥೇದಮನುಶುಶ್ರುಮಃ|
12113003c ಉಷ್ಟ್ರಸ್ಯ ಸುಮಹದ್ವೃತ್ತಂ ತನ್ನಿಬೋಧ ಯುಧಿಷ್ಠಿರ||
ಯುಧಿಷ್ಠಿರ! ಒಂದು ಮಹಾ ಒಂಟೆಯ ವ್ಯವಹಾರವನ್ನು ನಾನು ಕೇಳಿದ್ದೇನೆ. ಅದನ್ನು ಕೇಳು. ಅದರಂತೆ ರಾಜನು ವರ್ತಿಸಬಾರದು.
12113004a ಜಾತಿಸ್ಮರೋ ಮಹಾನುಷ್ಟ್ರಃ ಪ್ರಾಜಾಪತ್ಯಯುಗೋದ್ಭವಃ|
12113004c ತಪಃ ಸುಮಹದಾತಿಷ್ಠದರಣ್ಯೇ ಸಂಶಿತವ್ರತಃ||
ಪ್ರಾಜಾಪತ್ಯ ಯುಗ[1]ದಲ್ಲಿ ಒಂದು ದೊಡ್ಡ ಒಂಟೆಯಿದ್ದಿತು. ಅದಕ್ಕೆ ಪೂರ್ವಜನ್ಮದ ಸ್ಮರಣೆಯಿದ್ದಿತ್ತು. ಆ ಸಂಶಿತವ್ರತವು ಅರಣ್ಯದಲ್ಲಿ ಒಂದು ಮಹಾತಪಸ್ಸನ್ನು ಆರಂಭಿಸಿತು.
12113005a ತಪಸಸ್ತಸ್ಯ ಚಾಂತೇ ವೈ ಪ್ರೀತಿಮಾನಭವತ್ ಪ್ರಭುಃ|
12113005c ವರೇಣ ಚಂದಯಾಮಾಸ ತತಶ್ಚೈನಂ ಪಿತಾಮಹಃ||
ಅದರ ತಪಸ್ಸಿನ ಅಂತ್ಯದಲ್ಲಿ ಪ್ರಭು ಪಿತಾಮಹ ಬ್ರಹ್ಮನು ಪ್ರೀತಿಮಾನನಾದನು. ಆಗ ಒಂಟೆಗೆ ವರನ್ನು ಕೇಳಲು ಹೇಳಿದನು.
12113006 ಉಷ್ಟ್ರ ಉವಾಚ|
12113006a ಭಗವಂಸ್ತ್ವತ್ಪ್ರಸಾದಾನ್ಮೇ ದೀರ್ಘಾ ಗ್ರೀವಾ ಭವೇದಿಯಮ್|
12113006c ಯೋಜನಾನಾಂ ಶತಂ ಸಾಗ್ರಂ ಯಾ ಗಚ್ಚೇಚ್ಚರಿತುಂ ವಿಭೋ||
ಒಂಟೆಯು ಹೇಳಿತು: “ವಿಭೋ! ಭಗವನ್! ನಿನ್ನ ಪ್ರಸಾದದಿಂದ ನನ್ನ ಈ ಕುತ್ತಿಗೆಯು ಉದ್ದವಾಗಲಿ. ನೂರಾರು ಯೋಜನೆಗಳ ವರೆಗೂ ನನ್ನ ಈ ಕುತ್ತಿಗೆಯು ಸಂಚರಿಸುವಂತಾಗಬೇಕು.””
12113007 ಭೀಷ್ಮ ಉವಾಚ|
12113007a ಏವಮಸ್ತ್ವಿತಿ ಚೋಕ್ತಃ ಸ ವರದೇನ ಮಹಾತ್ಮನಾ|
12113007c ಪ್ರತಿಲಭ್ಯ ವರಂ ಶ್ರೇಷ್ಠಂ ಯಯಾವುಷ್ಟ್ರಃ ಸ್ವಕಂ ವನಮ್||
ಭೀಷ್ಮನು ಹೇಳಿದನು: “ಮಹಾತ್ಮ ವರದನು ಹಾಗೆಯೇ ಆಗಲೆಂದು ಹೇಳಿದನು. ಶ್ರೇಷ್ಠ ವರವನ್ನು ಪಡೆದು ಒಂಟೆಯು ತನ್ನ ವನಕ್ಕೆ ಬಂದಿತು.
12113008a ಸ ಚಕಾರ ತದಾಲಸ್ಯಂ ವರದಾನಾತ್ಸ ದುರ್ಮತಿಃ|
12113008c ನ ಚೈಚ್ಚಚ್ಚರಿತುಂ ಗಂತುಂ ದುರಾತ್ಮಾ ಕಾಲಮೋಹಿತಃ||
ವರದಿಂದಾಗಿ ಆ ದುರ್ಮತಿಯು ಆಲಸ್ಯನಾದನು. ಕಾಲಮೋಹಿತನಾಗಿ ಆ ದುರಾತ್ಮನು ಎಲ್ಲಿಯೂ ಹೋಗಲು ಬಯಸಲಿಲ್ಲ.
12113009a ಸ ಕದಾ ಚಿತ್ಪ್ರಾಸಾರ್ಯೈವಂ ತಾಂ ಗ್ರೀವಾಂ ಶತಯೋಜನಾಮ್|
12113009c ಚಚಾರಾಶ್ರಾಂತಹೃದಯೋ ವಾತಶ್ಚಾಗಾತ್ತತೋ ಮಹಾನ್||
ಒಮ್ಮೆ ಅದು ತನ್ನ ನೂರು ಯೋಜನ ಉದ್ದದ ಕುತ್ತಿಗೆಯನ್ನು ಚಾಚಿ ಸ್ವಲ್ಪವೂ ಆಯಾಸವಿಲ್ಲದೇ ಸಂಚರಿಸುತ್ತಿರುವಾಗ ದೊಡ್ಡ ಭಿರುಗಾಳಿಯು ಬೀಸತೊಡಗಿತು.
12113010a ಸ ಗುಹಾಯಾಂ ಶಿರೋಗ್ರೀವಂ ನಿಧಾಯ ಪಶುರಾತ್ಮನಃ|
12113010c ಆಸ್ತಾಥ ವರ್ಷಮಭ್ಯಾಗಾತ್ಸುಮಹತ್ ಪ್ಲಾವಯಜ್ಜಗತ್||
ಆಗ ಆ ಪಶುವು ತನ್ನ ಕುತ್ತಿಗೆ-ಶಿರಗಳನ್ನು ಒಂದು ಗುಹೆಯಲ್ಲಿರಿಸಿಕೊಂಡಿತು. ಆಗ ಜಗತ್ತನ್ನೇ ಮುಳುಗಿಸುವಂಥಹ ಅತಿದೊಡ್ಡ ಮಳೆಯೂ ಸುರಿಯತೊಡಗಿತು.
12113011a ಅಥ ಶೀತಪರೀತಾಂಗೋ ಜಂಬುಕಃ ಕ್ಷುಚ್ಚ್ರಮಾನ್ವಿತಃ|
12113011c ಸದಾರಸ್ತಾಂ ಗುಹಾಮಾಶು ಪ್ರವಿವೇಶ ಜಲಾರ್ದಿತಃ||
ಮಳೆಯಿಂದ ನೆನೆದು ಛಳಿಯಿಂದ ನಡುಗುತ್ತಿದ್ದ ಮತ್ತು ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಒಂದು ಗಂಡು ನರಿಯು ತನ್ನ ಪತ್ನಿಯೊಂದಿಗೆ ಆ ಗುಹೆಯನ್ನು ಪ್ರವೇಶಿಸಿತು.
12113012a ಸ ದೃಷ್ಟ್ವಾ ಮಾಂಸಜೀವೀ ತು ಸುಭೃಶಂ ಕ್ಷುಚ್ಚ್ರಮಾನ್ವಿತಃ|
12113012c ಅಭಕ್ಷಯತ್ತತೋ ಗ್ರೀವಾಮುಷ್ಟ್ರಸ್ಯ ಭರತರ್ಷಭ||
ಭರತರ್ಷಭ! ಒಂಟೆಯ ಕತ್ತನ್ನು ನೋಡಿ ಅತಿಯಾಗಿ ಹಸಿದಿದ್ದ ಆ ಮಾಂಸಜೀವಿ ನರಿಯು ಅದನ್ನು ತಿನ್ನತೊಡಗಿತು.
12113013a ಯದಾ ತ್ವಬುಧ್ಯತಾತ್ಮಾನಂ ಭಕ್ಷ್ಯಮಾಣಂ ಸ ವೈ ಪಶುಃ|
12113013c ತದಾ ಸಂಕೋಚನೇ ಯತ್ನಮಕರೋದ್ ಭೃಶದುಃಖಿತಃ||
ತನ್ನನ್ನು ಯಾರೋ ತಿನ್ನುತ್ತಿದ್ದಾರೆಂದು ತಿಳಿದೊಡನೆಯೇ ಅತ್ಯಂತ ದುಃಖಿತವಾದ ಆ ಪಶುವು ತನ್ನ ಕುತ್ತಿಗೆಯನ್ನು ಸಂಕುಚಿತಗೊಳಿಸಲು ಪ್ರಯತ್ನಿಸಿತು.
12113014a ಯಾವದೂರ್ಧ್ವಮಧಶ್ಚೈವ ಗ್ರೀವಾಂ ಸಂಕ್ಷಿಪತೇ ಪಶುಃ|
12113014c ತಾವತ್ತೇನ ಸದಾರೇಣ ಜಂಬುಕೇನ ಸ ಭಕ್ಷಿತಃ||
ಆ ಪಶುವು ಮೇಲಕ್ಕೆ ಕೆಳಕ್ಕೆ ಮಾಡಿ ತನ್ನ ಕುತ್ತಿಗೆಯನ್ನು ಸಂಕ್ಷಿಪ್ತಗೊಳಿಸಲು ಪ್ರಯತ್ನಿಸುತ್ತಿರುವಾಗಲೇ ತನ್ನ ಪತ್ನಿಯೊಡನಿದ್ದ ನರಿಯು ಕುತ್ತಿಗೆಯನ್ನು ತಿಂದು ಹಾಕಿತು.
12113015a ಸ ಹತ್ವಾ ಭಕ್ಷಯಿತ್ವಾ ಚ ಜಂಬುಕೋಷ್ಟ್ರಂ ತತಸ್ತದಾ|
12113015c ವಿಗತೇ ವಾತವರ್ಷೇ ಚ ನಿಶ್ಚಕ್ರಾಮ ಗುಹಾಮುಖಾತ್||
ಒಂಟೆಯನ್ನು ಕೊಂದು ಭಕ್ಷಿಸಿದ ನಂತರ, ಮಳೆ-ಗಾಳಿಗಳು ನಿಂತನಂತರ, ಆ ನರಿಯು ಗುಹೆಯಿಂದ ಹೊರಬಂದಿತು.
12113016a ಏವಂ ದುರ್ಬುದ್ಧಿನಾ ಪ್ರಾಪ್ತಮುಷ್ಟ್ರೇಣ ನಿಧನಂ ತದಾ|
12113016c ಆಲಸ್ಯಸ್ಯ ಕ್ರಮಾತ್ಪಶ್ಯ ಮಹದ್ದೋಷಮುಪಾಗತಮ್||
ಹೀಗೆ ದುರ್ಬುದ್ಧಿ ಒಂಟೆಯು ನಿಧನವನ್ನು ಹೊಂದಿತು. ನೋಡು. ಆಲಸ್ಯದಿಂದಾಗಿ ಅದು ಮಹಾದೋಷವನ್ನು ತಂದುಕೊಂಡಿತು.
12113017a ತ್ವಮಪ್ಯೇತಂ ವಿಧಿಂ ತ್ಯಕ್ತ್ವಾ ಯೋಗೇನ ನಿಯತೇಂದ್ರಿಯಃ|
12113017c ವರ್ತಸ್ವ ಬುದ್ಧಿಮೂಲಂ ಹಿ ವಿಜಯಂ ಮನುರಬ್ರವೀತ್||
ನೀನೂ ಕೂಡ ಈ ವಿಧಿಯನ್ನು ತೊರೆದು ಯೋಗದಿಂದ ನಿಯತೇಂದ್ರಿಯನಾಗಿರು. ವಿಜಯಕ್ಕೆ ಬುದ್ಧಿಯೇ ಮೂಲವೆಂದು ಮನುವು ಹೇಳಿದ್ದಾನೆ.
12113018a ಬುದ್ಧಿಶ್ರೇಷ್ಠಾನಿ ಕರ್ಮಾಣಿ ಬಾಹುಮಧ್ಯಾನಿ ಭಾರತ|
12113018c ತಾನಿ ಜಂಘಾಜಘನ್ಯಾನಿ ಭಾರಪ್ರತ್ಯವರಾಣಿ ಚ||
ಭಾರತ! ಬುದ್ಧಿಯಿಂದ ಮಾಡುವ ಕರ್ಮಗಳು ಶ್ರೇಷ್ಠವಾದವು. ಬಾಹುಬಲದಿಂದ ಮಾಡುವ ಕರ್ಮಗಳು ಮಧ್ಯಮವಾದವುಗಳು. ಜಂಘಾಬಲದಿಂದ ಮಾಡುವ ಕರ್ಮಗಳು ಅಧಮಶ್ರೇಣಿಯವು. ಭಾರವನ್ನು ಹೊರುವ ಕಾರ್ಯವು ಅಧಮಾಧಮಶ್ರೇಣಿಯದು.
12113019a ರಾಜ್ಯಂ ತಿಷ್ಠತಿ ದಕ್ಷಸ್ಯ ಸಂಗೃಹೀತೇಂದ್ರಿಯಸ್ಯ ಚ|
[2]12113019c ಗುಪ್ತಮಂತ್ರಶ್ರುತವತಃ ಸುಸಹಾಯಸ್ಯ ಚಾನಘ||
ಅನಘ! ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿರುವ ದಕ್ಷನಲ್ಲಿ, ಗುಪ್ತವಾಗಿ ಸಮಾಲೋಚನೆಗಳನ್ನು ಮಾಡಿ ಸಲಹೆಗಳನ್ನು ಕೇಳುವವನಲ್ಲಿ ಮತ್ತು ಉತ್ತಮಸಹಾಯಕರನ್ನು ಹೊಂದಿದವನಲ್ಲಿ ರಾಜ್ಯವು ನಿಂತುಕೊಳ್ಳುತ್ತದೆ.
12113020a ಪರೀಕ್ಷ್ಯಕಾರಿಣೋಽರ್ಥಾಶ್ಚ ತಿಷ್ಠಂತೀಹ ಯುಧಿಷ್ಠಿರ|
12113020c ಸಹಾಯಯುಕ್ತೇನ ಮಹೀ ಕೃತ್ಸ್ನಾ ಶಕ್ಯಾ ಪ್ರಶಾಸಿತುಮ್||
ಯುಧಿಷ್ಠಿರ! ಚೆನ್ನಾಗಿ ಪರೀಕ್ಷಿಸಿ ಕಾರ್ಯಗಳನ್ನು ಮಾಡುವವನಲ್ಲಿ ಅರ್ಥಗಳು ಸ್ಥಿರವಾಗಿ ಉಳಿಯುತ್ತವೆ. ಸಹಾಯಕರಿಂದ ಸಂಪನ್ನನಾದ ರಾಜನು ಅಖಂಡ ಭೂಮಂಡಲವನ್ನೂ ಶಾಸನಮಾಡಲು ಸಮರ್ಥನಾಗುತ್ತಾನೆ.
12113021a ಇದಂ ಹಿ ಸದ್ಭಿಃ ಕಥಿತಂ ವಿಧಿಜ್ಞೈಃ
ಪುರಾ ಮಹೇಂದ್ರಪ್ರತಿಮಪ್ರಭಾವ|
12113021c ಮಯಾಪಿ ಚೋಕ್ತಂ ತವ ಶಾಸ್ತ್ರದೃಷ್ಟ್ಯಾ
ತ್ವಮತ್ರ ಯುಕ್ತಃ ಪ್ರಚರಸ್ವ ರಾಜನ್||
ರಾಜನ್! ಮಹೇಂದ್ರಪ್ರತಿಮಪ್ರಭಾವ! ಹಿಂದೆ ವಿಧಿಗಳನ್ನು ತಿಳಿದ ಸತ್ಪುರುಷರು ಇದನ್ನು ಹೇಳಿದ್ದರು. ನಾನೂ ಕೂಡ ಶಾಸ್ತ್ರಗಳಲ್ಲಿ ಕಂಡುಕೊಂಡಂತೆ ನಿನಗೆ ಈ ವಿಷಯಗಳನ್ನು ಹೇಳಿದ್ದೇನೆ. ನೀನು ಇವುಗಳನ್ನು ಅಳವಡಿಸಿಕೊಂಡು ವ್ಯವಹರಿಸು.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಉಷ್ಟ್ರಗ್ರೀವೋಪಾಖ್ಯಾನೇ ತ್ರಯೋದಶಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಉಷ್ಟ್ರಗ್ರೀವೋಪಾಖ್ಯಾನ ಎನ್ನುವ ನೂರಾಹದಿಮೂರನೇ ಅಧ್ಯಾಯವು.
[1] ಕೃತಯುಗ
[2] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ಆರ್ತಸ್ಯ ಬುದ್ಧಿಮೂಲಂ ಹಿ ವಿಜಯಂ ಮನುರಬ್ರವೀತ್|