Shanti Parva: Chapter 111

ಶಾಂತಿ ಪರ್ವ: ರಾಜಧರ್ಮ ಪರ್ವ

೧೧೧

ಮನುಷ್ಯನನ್ನು ದುಃಖದಿಂದ ಪಾರುಮಾಡುವ ವಿಧಾನಗಳು (1-29).

12111001 ಯುಧಿಷ್ಠಿರ ಉವಾಚ|

12111001a ಕ್ಲಿಶ್ಯಮಾನೇಷು ಭೂತೇಷು ತೈಸ್ತೈರ್ಭಾವೈಸ್ತತಸ್ತತಃ|

12111001c ದುರ್ಗಾಣ್ಯತಿತರೇದ್ಯೇನ ತನ್ಮೇ ಬ್ರೂಹಿ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಜೀವಿಗಳು ಅವರವರದೇ ಭಾವಗಳಲ್ಲಿ ಅಲ್ಲಲ್ಲಿ ಕಷ್ಟಪಡುತ್ತಿರುತ್ತವೆ. ಯಾವ ಉಪಾಯದಿಂದ ಕಷ್ಟಗಳನ್ನು ದಾಟಬಹುದು ಎನ್ನುವುದನ್ನು ನನಗೆ ಹೇಳು.”

12111002 ಭೀಷ್ಮ ಉವಾಚ|

12111002a ಆಶ್ರಮೇಷು ಯಥೋಕ್ತೇಷು ಯಥೋಕ್ತಂ ಯೇ ದ್ವಿಜಾತಯಃ|

12111002c ವರ್ತಂತೇ ಸಂಯತಾತ್ಮಾನೋ ದುರ್ಗಾಣ್ಯತಿತರಂತಿ ತೇ||

ಭೀಷ್ಮನು ಹೇಳಿದನು: “ಯಥೋಕ್ತವಾದ ಆಶ್ರಮಗಳಲ್ಲಿ ಯಥೋಕ್ತವಾಗಿ ಸಂಯತಾತ್ಮರಾಗಿ ವರ್ತಿಸುವ ದ್ವಿಜಾತಿಯವರು ಕಷ್ಟಗಳಿಂದ ಪಾರಾಗುತ್ತಾರೆ.

12111003a ಯೇ ದಂಭಾನ್ನ ಜಪಂತಿ[1] ಸ್ಮ ಯೇಷಾಂ ವೃತ್ತಿಶ್ಚ ಸಂವೃತಾ[2]|

12111003c ವಿಷಯಾಂಶ್ಚ ನಿಗೃಹ್ಣಂತಿ ದುರ್ಗಾಣ್ಯತಿತರಂತಿ ತೇ||

ದಂಬಾಚಾರದಲ್ಲಿ ತೊಡಗದೇ ನಿಯಮಬದ್ಧ ವೃತ್ತಿಯಲ್ಲಿ ತೊಡಗಿರುವವರು ಮತ್ತು ವಿಷಯಾಸಕ್ತಿಯನ್ನು ನಿಗ್ರಹಿಸುವವರು ಕಷ್ಟಗಳಿಂದ ಪಾರಾಗುತ್ತಾರೆ.

[3]12111004a ವಾಸಯಂತ್ಯತಿಥೀನ್ನಿತ್ಯಂ ನಿತ್ಯಂ ಯೇ ಚಾನಸೂಯಕಾಃ|

12111004c ನಿತ್ಯಂ ಸ್ವಾಧ್ಯಾಯಶೀಲಾಶ್ಚ ದುರ್ಗಾಣ್ಯತಿತರಂತಿ ತೇ||

ನಿತ್ಯವೂ ಅತಿಥಿಗಳಿಗೆ ಉಳಿಯಲು ಅನುಕೂಲಮಾಡಿಕೊಡುವ, ನಿತ್ಯವೂ ಅಸೂಯಾರಹಿತರಾಗಿರುವ ಮತ್ತು ನಿತ್ಯವೂ ಸ್ವಾಧ್ಯಾಯಶೀಲರಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.

12111005a ಮಾತಾಪಿತ್ರೋಶ್ಚ ಯೇ ವೃತ್ತಿಂ ವರ್ತಂತೇ ಧರ್ಮಕೋವಿದಾಃ|

12111005c ವರ್ಜಯಂತಿ ದಿವಾಸ್ವಪ್ನಂ ದುರ್ಗಾಣ್ಯತಿತರಂತಿ ತೇ||

ಮಾತಾಪಿತೃಗಳ ಸೇವೆಯಲ್ಲಿ ನಿರತರಾದ ಮತ್ತು ಹಗಲು ನಿದ್ದೆಯನ್ನು ಬಿಟ್ಟಿರುವ ಧರ್ಮಕೋವಿದರು ಕಷ್ಟಗಳಿಂದ ಪಾರಾಗುತ್ತಾರೆ.

12111006a ಸ್ವೇಷು ದಾರೇಷು ವರ್ತಂತೇ ನ್ಯಾಯವೃತ್ತೇಷ್ವೃತಾವೃತೌ|

12111006c ಅಗ್ನಿಹೋತ್ರಪರಾಃ ಸಂತೋ ದುರ್ಗಾಣ್ಯತಿತರಂತಿ ತೇ||

ತಮ್ಮ ಪತ್ನಿಯರಲ್ಲಿ ಮಾತ್ರ ದೇಹಸಂಬಂಧವನ್ನಿಟ್ಟುಕೊಂಡಿರುವ, ನ್ಯಾಯವೃತ್ತಿಯಲ್ಲಿಯೇ ತೊಡಗಿರುವ ಮತ್ತು ಅಗ್ನಿಹೋತ್ರಪರರಾದ ಸಂತರು ಕಷ್ಟಗಳಿಂದ ಪಾರಾಗುತ್ತಾರೆ.

12111007a ಯೇ ನ ಲೋಭಾನ್ನಯಂತ್ಯರ್ಥಾನ್ರಾಜಾನೋ ರಜಸಾವೃತಾಃ|

12111007c ವಿಷಯಾನ್ ಪರಿರಕ್ಷಂತೋ ದುರ್ಗಾಣ್ಯತಿತರಂತಿ ತೇ||

ರಜೋಗುಣ ಸಂಪನ್ನರಾದ, ಲೋಭದಿಂದ ಪ್ರಜೆಗಳ ಧನವನ್ನು ಅಪಹರಿಸದ ಮತ್ತು ರಾಜ್ಯವನ್ನು ಎಲ್ಲ ಕಡೆಗಳಿಂದ ಸಂರಕ್ಷಿಸುವ ರಾಜರು ಕಷ್ಟಗಳಿಂದ ಪಾರಾಗುತ್ತಾರೆ.

12111008a ಆಹವೇಷು ಚ ಯೇ ಶೂರಾಸ್ತ್ಯಕ್ತ್ವಾ ಮರಣಜಂ ಭಯಮ್|

12111008c ಧರ್ಮೇಣ ಜಯಮಿಚ್ಚಂತೋ ದುರ್ಗಾಣ್ಯತಿತರಂತಿ ತೇ||

ಯುದ್ಧದಲ್ಲಾಗುವ ಮರಣಸಂಬಂಧೀ ಭಯವನ್ನು ತೊರೆದು ಧರ್ಮದಿಂದ ಜಯವನ್ನು ಬಯಸುವ ಶೂರರು ಕಷ್ಟಗಳಿಂದ ಪಾರಾಗುತ್ತಾರೆ.

12111009a ಯೇ ಪಾಪಾನಿ ನ ಕುರ್ವಂತಿ ಕರ್ಮಣಾ ಮನಸಾ ಗಿರಾ|

12111009c ನಿಕ್ಷಿಪ್ತದಂಡಾ ಭೂತೇಷು ದುರ್ಗಾಣ್ಯತಿತರಂತಿ ತೇ||

ಕರ್ಮಗಳಿಂದಾಗಲೀ ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಪಾಪಗಳನ್ನೆಸಗದ ಮತ್ತು ಯಾವ ಜೀವಿಗಳನ್ನೂ ದಂಡಿಸದವರು ಕಷ್ಟಗಳಿಂದ ಪಾರಾಗುತ್ತಾರೆ.

12111010a ಯೇ ವದಂತೀಹ ಸತ್ಯಾನಿ ಪ್ರಾಣತ್ಯಾಗೇಽಪ್ಯುಪಸ್ಥಿತೇ|

12111010c ಪ್ರಮಾಣಭೂತಾ ಭೂತಾನಾಂ ದುರ್ಗಾಣ್ಯತಿತರಂತಿ ತೇ||

ಪ್ರಾಣತ್ಯಾಗದ ಸಮಯದಲ್ಲಿಯೂ ಸತ್ಯವನ್ನೇ ಹೇಳುವ ಮತ್ತು ಎಲ್ಲ ಭೂತಗಳಿಗೂ ಪ್ರಮಾಣಭೂತರಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.

12111011a ಅನಧ್ಯಾಯೇಷು ಯೇ ವಿಪ್ರಾಃ ಸ್ವಾಧ್ಯಾಯಂ ನೈವ ಕುರ್ವತೇ|

12111011c ತಪೋನಿತ್ಯಾಃ ಸುತಪಸೋ ದುರ್ಗಾಣ್ಯತಿತರಂತಿ ತೇ||

ಅನಧ್ಯಾಯದ ದಿನಗಳಲ್ಲಿ ಸ್ವಾಧ್ಯಾಯವನ್ನು ಮಾಡದಿರುವ ತಪೋನಿತ್ಯ ಉತ್ತಮ ತಪಸ್ವೀ ವಿಪ್ರರು ಕಷ್ಟಗಳಿಂದ ಪಾರಾಗುತ್ತಾರೆ.

12111012a ಕರ್ಮಾಣ್ಯಕುಹಕಾರ್ಥಾನಿ ಯೇಷಾಂ ವಾಚಶ್ಚ ಸೂನೃತಾಃ|

12111012c ಯೇಷಾಮರ್ಥಾಶ್ಚ ಸಾಧ್ವರ್ಥಾ ದುರ್ಗಾಣ್ಯತಿತರಂತಿ ತೇ||

ತೋರಿಸಿಕೊಳ್ಳಲು ಮಾತ್ರ ಕರ್ಮಗಳನ್ನು ಮಾಡದಿರುವ, ಸುಮಧುರವಾಗಿ ಮಾತನಾಡುವ, ಐಶ್ವರ್ಯವನ್ನು ಸತ್ಕಾರ್ಯಗಳಿಗಾಗಿಯೇ ಮೀಸಲಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.

12111013a ಯೇ ತಪಶ್ಚ ತಪಸ್ಯಂತಿ ಕೌಮಾರಬ್ರಹ್ಮಚಾರಿಣಃ|

12111013c ವಿದ್ಯಾವೇದವ್ರತಸ್ನಾತಾ ದುರ್ಗಾಣ್ಯತಿತರಂತಿ ತೇ||

ತಪಸ್ಸನ್ನು ತಪಿಸುವ, ಕೌಮಾರ್ಯದಲ್ಲಿ ಬ್ರಹ್ಮಚಾರಿಗಳಾಗಿರುವ, ವಿದ್ಯಾವೇದಗಳನ್ನು ಪೂರೈಸಿ ಸ್ನಾತಕರಾಗುವವರು ಕಷ್ಟಗಳಿಂದ ಪಾರಾಗುತ್ತಾರೆ.

12111014a ಯೇ ಚ ಸಂಶಾಂತರಜಸಃ ಸಂಶಾಂತತಮಸಶ್ಚ ಯೇ|

12111014c ಸತ್ಯೇ ಸ್ಥಿತಾ ಮಹಾತ್ಮಾನೋ ದುರ್ಗಾಣ್ಯತಿತರಂತಿ ತೇ||

ರಜೋ-ತಮೋಗುಣಗಳು ಶಾಂತವಾಗಿರುವ ಮತ್ತು ಸತ್ಯದಲ್ಲಿ ಸ್ಥಿತರಾಗಿರುವ ಮಹಾತ್ಮರು ಕಷ್ಟಗಳಿಂದ ಪಾರಾಗುತ್ತಾರೆ.

12111015a ಯೇಷಾಂ ನ ಕಶ್ಚಿತ್ತ್ರಸತಿ ತ್ರಸಂತಿ ನ ಚ ಕಸ್ಯ ಚಿತ್|

12111015c ಯೇಷಾಮಾತ್ಮಸಮೋ ಲೋಕೋ ದುರ್ಗಾಣ್ಯತಿತರಂತಿ ತೇ||

ಯಾರಿಂದ ಯಾರಿಗೂ ಯಾವ ವಿಧದ ಭಯವೂ ಆಗುವುದಿಲ್ಲವೋ, ಯಾರು ಯಾರಿಗೂ ಭಯಪಡುವುದಿಲ್ಲವೋ, ಯಾರ ದೃಷ್ಟಿಯಲ್ಲಿ ಈ ಸಕಲಜಗತ್ತು ತನ್ನ ಆತ್ಮಕ್ಕೇ ಸಮಾನವಾಗಿರುವುದೋ, ಜಗತ್ತಿನ ಸಮಸ್ತಪ್ರಾಣಿಗಳ ಸುಖ-ದುಃಖಗಳನ್ನೂ ತಮ್ಮವೆಂದೇ ಭಾವಿಸುವರೋ ಅಂಥವರು ಕಷ್ಟಗಳಿಂದ ಪಾರಾಗುತ್ತಾರೆ.

12111016a ಪರಶ್ರಿಯಾ ನ ತಪ್ಯಂತೇ ಯೇ ಸಂತಃ ಪುರುಷರ್ಷಭಾಃ|

12111016c ಗ್ರಾಮ್ಯಾದನ್ನಾನ್ನಿವೃತ್ತಾಶ್ಚ ದುರ್ಗಾಣ್ಯತಿತರಂತಿ ತೇ||

ಇತರರ ಸಂಪತ್ತನ್ನು ನೋಡಿ ಪರಿತಪಿಸದಿರುವ, ಮತ್ತು ಗ್ರಾಮ್ಯ ವಿಷಯ ಭೋಗಗಳಿಂದ ನಿವೃತ್ತರಾಗಿರುವ ಸಂತ ಪುರುಷರ್ಷಭರು ಕಷ್ಟಗಳಿಂದ ಪಾರಾಗುತ್ತಾರೆ.

12111017a ಸರ್ವಾನ್ದೇವಾನ್ನಮಸ್ಯಂತಿ ಸರ್ವಾನ್ ಧರ್ಮಾಂಶ್ಚ ಶೃಣ್ವತೇ|

12111017c ಯೇ ಶ್ರದ್ದಧಾನಾ ದಾಂತಾಶ್ಚ[4] ದುರ್ಗಾಣ್ಯತಿತರಂತಿ ತೇ||

ಸಕಲ ದೇವತೆಗಳನ್ನೂ ನಮಸ್ಕರಿಸುವ, ಸರ್ವಧರ್ಮಗಳನ್ನೂ ಕೇಳುವ, ಶ್ರದ್ಧಾಸಂಪನ್ನ ಇಂದ್ರಿಯನಿಗ್ರಹಿಗಳು ಕಷ್ಟಗಳಿಂದ ಪಾರಾಗುತ್ತಾರೆ.

12111018a ಯೇ ನ ಮಾನಿತಮಿಚ್ಚಂತಿ ಮಾನಯಂತಿ ಚ ಯೇ ಪರಮ್|

12111018c ಮಾನ್ಯಮಾನಾ ನ ಮನ್ಯಂತೇ ದುರ್ಗಾಣ್ಯತಿತರಂತಿ ತೇ||

ಇತರರಿಂದ ಸಮ್ಮಾನವನ್ನು ಇಚ್ಛಿಸದ, ಇತರರನ್ನು ಪರಮ ಗೌರವದಿಂದ ಕಾಣುವ, ಮತ್ತು ಗೌರವಾನ್ವಿತರನ್ನು ಗೌರವಿಸುವವರು ಕಷ್ಟಗಳಿಂದ ಪಾರಾಗುತ್ತಾರೆ.

12111019a ಯೇ ಶ್ರಾದ್ಧಾನಿ ಚ ಕುರ್ವಂತಿ ತಿಥ್ಯಾಂ ತಿಥ್ಯಾಂ ಪ್ರಜಾರ್ಥಿನಃ|

12111019c ಸುವಿಶುದ್ಧೇನ ಮನಸಾ ದುರ್ಗಾಣ್ಯತಿತರಂತಿ ತೇ||

ವಿಶುದ್ಧ ಮನಸ್ಸಿನಿಂದ ತಿಥಿ-ತಿಥಿಗಳಲ್ಲಿ ಶ್ರಾದ್ಧಗಳನ್ನು ಮಾಡುವ ಪ್ರಜಾರ್ಥಿಗಳು ಕಷ್ಟಗಳಿಂದ ಪಾರಾಗುತ್ತಾರೆ.

12111020a ಯೇ ಕ್ರೋಧಂ ನೈವ ಕುರ್ವಂತಿ ಕ್ರುದ್ಧಾನ್ಸಂಶಮಯಂತಿ ಚ|

12111020c ನ ಚ ಕುಪ್ಯಂತಿ ಭೃತ್ಯೇಭ್ಯೋ[5] ದುರ್ಗಾಣ್ಯತಿತರಂತಿ ತೇ||

ತಮ್ಮ ಕ್ರೋಧವನ್ನು ನಿಯಂತ್ರಿಸಿಕೊಳ್ಳುವ, ಕೋಪಿಷ್ಟರಾದವನ್ನು ಸಮಾಧಾನಗೊಳಿಸುವ, ಸೇವಕರ ಮೇಲೆ ಕೋಪಗೊಳ್ಳದವರು ಕಷ್ಟಗಳಿಂದ ಪಾರಾಗುತ್ತಾರೆ.

12111021a ಮಧು ಮಾಂಸಂ ಚ ಯೇ ನಿತ್ಯಂ ವರ್ಜಯಂತೀಹ ಮಾನವಾಃ|

12111021c ಜನ್ಮಪ್ರಭೃತಿ ಮದ್ಯಂ ಚ ದುರ್ಗಾಣ್ಯತಿತರಂತಿ ತೇ||

ಜನ್ಮಪ್ರಭೃತಿ ಮಧು-ಮಾಂಸ-ಮದ್ಯಗಳನ್ನು ವರ್ಜಿಸುವ ಮಾನವರು ಕಷ್ಟಗಳಿಂದ ಪಾರಾಗುತ್ತಾರೆ.

12111022a ಯಾತ್ರಾರ್ಥಂ ಭೋಜನಂ ಯೇಷಾಂ ಸಂತಾನಾರ್ಥಂ ಚ ಮೈಥುನಮ್|

12111022c ವಾಕ್ಸತ್ಯವಚನಾರ್ಥಾಯ ದುರ್ಗಾಣ್ಯತಿತರಂತಿ ತೇ||

ಜೀವನಯಾತ್ರೆಗೋಸ್ಕರ ಮಾತ್ರ ಭೋಜನವನ್ನು ಮಾಡುವ, ಸಂತಾನಾರ್ಥಕ್ಕಾಗಿಯೇ ಸ್ತ್ರೀಸಮಾಗಮವನ್ನು ಮಾಡುವ, ಸತ್ಯವಚನಾರ್ಥಕ್ಕಾಗಿಯೇ ಮಾತನಾಡುವವರು ಕಷ್ಟಗಳಿಂದ ಪಾರಾಗುತ್ತಾರೆ.

12111023a ಈಶ್ವರಂ ಸರ್ವಭೂತಾನಾಂ ಜಗತಃ ಪ್ರಭವಾಪ್ಯಯಮ್|

12111023c ಭಕ್ತಾ ನಾರಾಯಣಂ ಯೇ ಚ ದುರ್ಗಾಣ್ಯತಿತರಂತಿ ತೇ||

ಸರ್ವಭೂತಗಳಿಗೂ ಈಶ್ವರನಾದ ಜಗತ್ತಿನ ಸೃಷ್ಟಿ-ಪಲಯಗಳಿಗೆ ಕಾರಣನಾದ ನಾರಾಯಣನ ಭಕ್ತರು ಕಷ್ಟಗಳಿಂದ ಪಾರಾಗುತ್ತಾರೆ.

12111024a ಯ ಏಷ ರಕ್ತಪದ್ಮಾಕ್ಷಃ ಪೀತವಾಸಾ ಮಹಾಭುಜಃ|

12111024c ಸುಹೃದ್ ಭ್ರಾತಾ ಚ ಮಿತ್ರಂ ಚ ಸಂಬಂಧೀ ಚ ತವಾಚ್ಯುತಃ||

ಅವನೇ ನಿನ್ನ ಸುಹೃದ್ಭ್ರಾತನೂ ಮಿತ್ರನೂ ಸಂಬಂಧಿಯೂ ಆದ ಈ ರಕ್ತಪದ್ಮಾಕ್ಷ ಪೀತವಾಸಸ ಮಹಾಭುಜ ಅಚ್ಯುತ.

12111025a ಯ ಇಮಾನ್ಸಕಲಾಽಲ್ಲೋಕಾಂಶ್ಚರ್ಮವತ್ ಪರಿವೇಷ್ಟಯೇತ್|

12111025c ಇಚ್ಚನ್ ಪ್ರಭುರಚಿಂತ್ಯಾತ್ಮಾ ಗೋವಿಂದಃ ಪುರುಷೋತ್ತಮಃ||

ಈ ಪ್ರಭು ಅಚಿಂತ್ಯಾತ್ಮಾ ಪುರುಷೋತ್ತಮ ಗೋವಿಂದನು ಇಚ್ಛಿಸಿದರೆ ಸಕಲ ಲೋಕಗಳನ್ನೂ ಚರ್ಮದಂತೆ ಹೊದೆದುಕೊಳ್ಳಬಲ್ಲನು.

12111026a ಸ್ಥಿತಃ ಪ್ರಿಯಹಿತೇ ಜಿಷ್ಣೋಃ ಸ ಏಷ ಪುರುಷರ್ಷಭ|

12111026c ರಾಜಂಸ್ತವ ಚ ದುರ್ಧರ್ಷೋ ವೈಕುಂಠಃ ಪುರುಷೋತ್ತಮಃ||

ರಾಜನ್! ಈ ಪುರುಷೋತ್ತಮನು ನಿನ್ನ ಮತ್ತು ಜಿಷ್ಣುವಿನ ಪ್ರಿಯಹಿತದಲ್ಲಿಯೇ ನಿರತನಾಗಿರುವನು. ಇವನು ದುರ್ಧರ್ಷ, ವೈಕುಂಠ ಮತ್ತು ಪುರುಷೋತ್ತಮ.

12111027a ಯ ಏನಂ ಸಂಶ್ರಯಂತೀಹ ಭಕ್ತ್ಯಾ ನಾರಾಯಣಂ ಹರಿಮ್|

12111027c ತೇ ತರಂತೀಹ ದುರ್ಗಾಣಿ ನ ಮೇಽತ್ರಾಸ್ತಿ ವಿಚಾರಣಾ||

ಭಕ್ತಿಯಿಂದ ಹರಿ ನಾರಾಯಣನನ್ನು ಆಶ್ರಯಿಸುವವರು ಕಷ್ಟಗಳಿಂದ ಪಾರಾಗುತ್ತಾರೆ. ಅದರಲ್ಲಿ ವಿಚಾರಿಸಬೇಕಾಗಿಲ್ಲ.

12111028a ದುರ್ಗಾತಿತರಣಂ ಯೇ ಚ ಪಠಂತಿ ಶ್ರಾವಯಂತಿ ಚ|

12111028c ಪಾಠಯಂತಿ ಚ ವಿಪ್ರೇಭ್ಯೋ ದುರ್ಗಾಣ್ಯತಿತರಂತಿ ತೇ||

ಈ ದುರ್ಗಾತಿತರಣವನ್ನು ಯಾವ ವಿಪ್ರರು ಓದುತ್ತಾರೋ, ಕೇಳುತ್ತಾರೋ ಮತ್ತು ಓದಿಸುತ್ತಾರೋ ಅವರು ಕಷ್ಟಗಳಿಂದ ಪಾರಾಗುತ್ತಾರೆ.

12111029a ಇತಿ ಕೃತ್ಯಸಮುದ್ದೇಶಃ ಕೀರ್ತಿತಸ್ತೇ ಮಯಾನಘ|

12111029c ಸಂತರೇದ್ಯೇನ ದುರ್ಗಾಣಿ ಪರತ್ರೇಹ ಚ ಮಾನವಃ||

ಅನಘ! ಹೀಗೆ ನಾನು ಕಷ್ಟಗಳಿಂದ ಪಾರಾಗಲು ಮಾಡಬೇಕಾದ ಕರ್ತವ್ಯಗಳ ಕುರಿತು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇದರಿಂದ ಮಾನವರು ಇಹ-ಪರಗಳೆರಡರಲ್ಲಿಯೂ ಕಷ್ಟಗಳಿಂದ ಪಾರಾಗುತ್ತಾರೆ.”

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದುರ್ಗಾತಿತರಣೇ ಏಕಾದಶಾಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ದುರ್ಗಾತಿತರಣ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.

Free Photo | Yellow flower on a white background

[1] ದಂಭಾನ್ನಾಚರಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸಂಯತಾ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಪ್ರತ್ಯಾಹುರ್ನೋಚ್ಯಮಾನಾ ಯೇ ನ ಹಿಂಸಂತಿ ಚ ಹಿಂಸಿತಾಃ| ಪ್ರಯಚ್ಛಂತಿ ನ ಯಾಚಂತೇ ದುರ್ಗಾಣ್ಯತಿತರಂತಿ ತೇ||

[4] ಶಾಂತಾಶ್ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).

[5] ಭೂತೇಭ್ಯೋ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.