ಶಾಂತಿ ಪರ್ವ: ರಾಜಧರ್ಮ ಪರ್ವ
೧೦೯
ತಂದೆ-ತಾಯಿ ಮತ್ತು ಗುರುಗಳ ಸೇವೆಯ ಮಹತ್ವ (1-28).
12109001 ಯುಧಿಷ್ಠಿರ ಉವಾಚ|
12109001a ಮಹಾನಯಂ ಧರ್ಮಪಥೋ ಬಹುಶಾಖಶ್ಚ ಭಾರತ|
12109001c ಕಿಂ ಸ್ವಿದೇವೇಹ ಧರ್ಮಾಣಾಮನುಷ್ಠೇಯತಮಂ ಮತಮ್||
ಯುಧಿಷ್ಠಿರನು ಹೇಳಿದನು: “ಭಾರತ! ಈ ಧರ್ಮಮಾರ್ಗವು ಅತಿ ದೊಡ್ಡದು ಮತ್ತು ಅದಕ್ಕೆ ಅನೇಕ ಕವಲುದಾರಿಗಳಿವೆ. ಇವುಗಳಲ್ಲಿ ಅನುಷ್ಠಾನಮಾಡಲೇ ಬೇಕಾದ ಧರ್ಮವು ಯಾವುದು?
12109002a ಕಿಂ ಕಾರ್ಯಂ ಸರ್ವಧರ್ಮಾಣಾಂ ಗರೀಯೋ ಭವತೋ ಮತಮ್|
12109002c ಯಥಾಯಂ ಪುರುಷೋ ಧರ್ಮಮಿಹ ಚ ಪ್ರೇತ್ಯ ಚಾಪ್ನುಯಾತ್||
ಪುರುಷನಿಗೆ ಇಹ ಮತ್ತು ಪರಗಳಲ್ಲಿ ಧರ್ಮವನ್ನು ಹೊಂದಿಸುವ ಸರ್ವಧರ್ಮಗಳಲ್ಲಿಯೂ ಅತಿ ಶ್ರೇಷ್ಠವಾದ ಕಾರ್ಯವು ಯಾವುದು?”
12109003 ಭೀಷ್ಮ ಉವಾಚ|
12109003a ಮಾತಾಪಿತ್ರೋರ್ಗುರೂಣಾಂ ಚ ಪೂಜಾ ಬಹುಮತಾ ಮಮ|
12109003c ಅತ್ರ ಯುಕ್ತೋ ನರೋ ಲೋಕಾನ್ಯಶಶ್ಚ ಮಹದಶ್ನುತೇ||
ಭೀಷ್ಮನು ಹೇಳಿದನು: “ಮಾತಾಪಿತೃಗಳ ಮತ್ತು ಗುರುಗಳ ಪೂಜೆಯೇ ಅತಿ ಮಹತ್ತರ ಕಾರ್ಯವೆಂದು ನನ್ನ ಮತವಾಗಿದೆ. ಅದನ್ನು ಅನುಷ್ಠಾನಮಾಡಿದ ನರನು ಮರಣಾನಂತರ ಮಹಾ ಲೋಕಗಳನ್ನು ಪಡೆದುಕೊಳ್ಳುತ್ತಾನೆ.
12109004a ಯದೇತೇ ಹ್ಯಭಿಜಾನೀಯುಃ ಕರ್ಮ ತಾತ ಸುಪೂಜಿತಾಃ|
12109004c ಧರ್ಮ್ಯಂ ಧರ್ಮವಿರುದ್ಧಂ ವಾ ತತ್ಕರ್ತವ್ಯಂ ಯುಧಿಷ್ಠಿರ||
ಅಯ್ಯಾ! ಯುಧಿಷ್ಠಿರ! ಸುಪೂಜಿತರಾದ ಅವರು ಯಾವುದೇ ಕೆಲಸವನ್ನು ಮಾಡಹೇಳಿದರೂ, ಅದು ಧರ್ಮಕಾರ್ಯವಾಗಿರಲಿ ಅಥವಾ ಧರ್ಮದ ವಿರುದ್ಧಕಾರ್ಯವಾಗಿರಲಿ, ಮಾಡಬೇಕು.
12109005a ನ ತೈರನಭ್ಯನುಜ್ಞಾತೋ ಧರ್ಮಮನ್ಯಂ ಪ್ರಕಲ್ಪಯೇತ್|
12109005c ಯಮೇತೇಽಭ್ಯನುಜಾನೀಯುಃ ಸ ಧರ್ಮ ಇತಿ ನಿಶ್ಚಯಃ||
ಅವರ ಆಜ್ಞೆಗಳನ್ನು ಪಾಲಿಸುವವನು ಅನ್ಯ ಧರ್ಮಗಳನ್ನು ಪಾಲಿಸಬೇಕಾಗಿಲ್ಲ. ಅವರು ಯಾವುದನ್ನು ಮಾಡಲು ಆಜ್ಞಾಪಿಸುವರೋ ಅದೇ ಧರ್ಮವೆಂದು ನಿಶ್ಚಯಿಸಲ್ಪಡುತ್ತದೆ.
12109006a ಏತ ಏವ ತ್ರಯೋ ಲೋಕಾ ಏತ ಏವಾಶ್ರಮಾಸ್ತ್ರಯಃ|
12109006c ಏತ ಏವ ತ್ರಯೋ ವೇದಾ ಏತ ಏವ ತ್ರಯೋಽಗ್ನಯಃ||
ಮಾತಾ-ಪಿತೃ-ಗುರುಗಳೇ ಮೂರು ಲೋಕಗಳು. ಇವರೇ ಮೂರು ಆಶ್ರಮಗಳು. ಇವರೇ ಮೂರು ವೇದಗಳು ಮತ್ತು ಇವರೇ ಮೂರು ಅಗ್ನಿಗಳು.
12109007a ಪಿತಾ ಹ್ಯಗ್ನಿರ್ಗಾರ್ಹಪತ್ಯೋ ಮಾತಾಗ್ನಿರ್ದಕ್ಷಿಣಃ ಸ್ಮೃತಃ|
12109007c ಗುರುರಾಹವನೀಯಸ್ತು ಸಾಗ್ನಿತ್ರೇತಾ ಗರೀಯಸೀ||
ತಂದೆಯು ಗಾರ್ಹಪತ್ಯ ಅಗ್ನಿ. ಮಾತೆಯು ದಕ್ಷಿಣಾಗ್ನಿ. ಗುರುವು ಆಹವನೀಯಾಗ್ನಿ. ಈ ಮೂರು ಅಗ್ನಿಗಳೂ ಶ್ರೇಷ್ಠವಾದವುಗಳೆಂದು ಸ್ಮೃತಿವಾಕ್ಯವಿದೆ.
12109008a ತ್ರಿಷ್ವಪ್ರಮಾದ್ಯನ್ನೇತೇಷು ತ್ರೀಽಲ್ಲೋಕಾನವಜೇಷ್ಯಸಿ|
12109008c ಪಿತೃವೃತ್ತ್ಯಾ ತ್ವಿಮಂ ಲೋಕಂ ಮಾತೃವೃತ್ತ್ಯಾ ತಥಾಪರಮ್|
12109008e ಬ್ರಹ್ಮಲೋಕಂ ಗುರೋರ್ವೃತ್ತ್ಯಾ ನಿತ್ಯಮೇವ ಚರಿಷ್ಯಸಿ||
ಅಪ್ರಮತ್ತನಾಗಿ ಈ ಮೂವರ ಸೇವೆಯನ್ನು ಮಾಡಿದರೆ ಮೂರು ಲೋಕಗಳನ್ನೂ ಜಯಿಸುತ್ತೀಯೆ. ಪಿತೃಶುಶ್ರೂಷೆಯಿಂದ ಈ ಲೋಕವನ್ನೂ, ಮಾತೃಶುಶ್ರೂಷೆಯಿಂದ ಪರಲೋಕವನ್ನೂ, ಮತ್ತು ಗುರುಶುಶ್ರೂಷೆಯಿಂದ ಬ್ರಹ್ಮಲೋಕವನ್ನೂ ಜಯಿಸುತ್ತೀಯೆ.
12109009a ಸಮ್ಯಗೇತೇಷು ವರ್ತಸ್ವ ತ್ರಿಷು ಲೋಕೇಷು ಭಾರತ|
12109009c ಯಶಃ ಪ್ರಾಪ್ಸ್ಯಸಿ ಭದ್ರಂ ತೇ ಧರ್ಮಂ ಚ ಸುಮಹಾಫಲಮ್||
ಭಾರತ! ನಿನಗೆ ಮಂಗಳವಾಗಲಿ! ತಂದೆ-ತಾಯಿ-ಗುರುಗಳಲ್ಲಿ ಸದ್ವ್ಯವಹಾರದಿಂದ ವರ್ತಿಸುತ್ತಿರು. ಅದರಿಂದ ಮೂರುಲೋಕಗಳಲ್ಲಿಯೂ ಯಶಸ್ಸನ್ನು ಪಡೆದುಕೊಳ್ಳುತ್ತೀಯೆ. ಮಹಾಫಲದಾಯಕವಾದ ಧರ್ಮವನ್ನೂ ಸಾಧಿಸುವೆ.
12109010a ನೈತಾನತಿಶಯೇಜ್ಜಾತು ನಾತ್ಯಶ್ನೀಯಾನ್ನ ದೂಷಯೇತ್|
12109010c ನಿತ್ಯಂ ಪರಿಚರೇಚ್ಚೈವ ತದ್ವೈ ಸುಕೃತಮುತ್ತಮಮ್|
12109010e ಕೀರ್ತಿಂ ಪುಣ್ಯಂ ಯಶೋ ಲೋಕಾನ್ ಪ್ರಾಪ್ಸ್ಯಸೇ ಚ ಜನಾಧಿಪ[1]||
ಜನಾಧಿಪ! ಇವರನ್ನು ಮೀರಿ ನಡೆಯಬಾರದು. ಅವರ ಆಹಾರಕ್ಕಿಂತಲೂ ಉತ್ತಮ ಆಹಾರವನ್ನು ಸೇವಿಸಬಾರದು. ಅವರನ್ನು ದೂಷಿಸಬಾರದು. ನಿತ್ಯವೂ ಅವರ ಪರಿಚರಿಯನ್ನು ಮಾಡಬೇಕು. ಅದೇ ಉತ್ತಮ ಸುಕೃತವು. ಅದರಿಂದ ಕೀರ್ತಿ, ಪುಣ್ಯ, ಯಶಸ್ಸು ಮತ್ತು ಪುಣ್ಯ ಲೋಕಗಳನ್ನು ಪಡೆದುಕೊಳ್ಳುತ್ತೀಯೆ.
12109011a ಸರ್ವೇ ತಸ್ಯಾದೃತಾ ಲೋಕಾ ಯಸ್ಯೈತೇ ತ್ರಯ ಆದೃತಾಃ|
12109011c ಅನಾದೃತಾಸ್ತು ಯಸ್ಯೈತೇ ಸರ್ವಾಸ್ತಸ್ಯಾಫಲಾಃ ಕ್ರಿಯಾಃ||
ಈ ಮೂವರನ್ನೂ ಆದರಿಸಿದರೆ ಮೂರು ಲೋಕಗಳನ್ನೂ ಆದರಿಸಿದಂತಾಗುತ್ತದೆ. ಇವರನ್ನು ಅನಾದರಿಸಿದವರು ಮಾಡುವ ಕ್ರಿಯೆಗಳೆಲ್ಲವೂ ಅಸಫಲವಾಗುತ್ತವೆ.
12109012a ನೈವಾಯಂ ನ ಪರೋ ಲೋಕಸ್ತಸ್ಯ ಚೈವ ಪರಂತಪ|
12109012c ಅಮಾನಿತಾ ನಿತ್ಯಮೇವ ಯಸ್ಯೈತೇ ಗುರವಸ್ತ್ರಯಃ||
ಪರಂತಪ! ನಿತ್ಯವೂ ಈ ಮೂವರು ಗುರುಗಳನ್ನು ಅಪಮಾನಿಸುವವನಿಗೆ ಈ ಲೋಕದಲ್ಲಿಯೂ ಸುಖವಿರುವುದಿಲ್ಲ ಮತ್ತು ಉತ್ತಮ ಲೋಕಗಳೂ ದೊರಕುವುದಿಲ್ಲ.
12109013a ನ ಚಾಸ್ಮಿನ್ನ ಪರೇ ಲೋಕೇ ಯಶಸ್ತಸ್ಯ ಪ್ರಕಾಶತೇ|
12109013c ನ ಚಾನ್ಯದಪಿ ಕಲ್ಯಾಣಂ ಪಾರತ್ರಂ ಸಮುದಾಹೃತಮ್||
ಅಂಥವನ ಯಶಸ್ಸು ಇಹದಲ್ಲಾದಲೀ ಪರದಲ್ಲಾಗಲೀ ಪ್ರಕಾಶಿಸುವುದಿಲ್ಲ. ಇತರ ಕರ್ಮಗಳಿಂದ ಪರಲೋಕದಲ್ಲಿ ದೊರೆಯುವ ಸುಖವೂ ಅಂಥವನಿಗೆ ದುರ್ಲಭವೇ ಸರಿ.
12109014a ತೇಭ್ಯ ಏವ ತು ತತ್ಸರ್ವಂ ಕೃತ್ಯಯಾ ವಿಸೃಜಾಮ್ಯಹಮ್|
12109014c ತದಾಸೀನ್ಮೇ ಶತಗುಣಂ ಸಹಸ್ರಗುಣಮೇವ ಚ|
12109014e ತಸ್ಮಾನ್ಮೇ ಸಂಪ್ರಕಾಶಂತೇ ತ್ರಯೋ ಲೋಕಾ ಯುಧಿಷ್ಠಿರ||
ನಾನಾದರೋ ಎಲ್ಲ ಪುಣ್ಯ ಕರ್ಮಗಳನ್ನೂ ಮಾಡಿ ಅವುಗಳನ್ನು ಗುರುತ್ರಯರಿಗೇ ಸಮರ್ಪಿಸುತ್ತಿದ್ದೆನು. ಆದುದರಿಂದ ಆ ಪುಣ್ಯಕರ್ಮಗಳ ಫಲವು ನನಗೆ ನೂರು ಪಟ್ಟು ಮತ್ತು ಸಾವಿರಪಟ್ಟು ದೊರಕಿದವು. ಯುಧಿಷ್ಠಿರ! ಇದರಿಂದಲೇ ಮೂರೂ ಲೋಕಗಳು ನನ್ನ ಕಣ್ಮುಂದೆ ಪ್ರಕಾಶಿಸುತ್ತವೆ.
12109015a ದಶೈವ ತು ಸದಾಚಾರ್ಯಃ ಶ್ರೋತ್ರಿಯಾನತಿರಿಚ್ಯತೇ|
12109015c ದಶಾಚಾರ್ಯಾನುಪಾಧ್ಯಾಯ ಉಪಾಧ್ಯಾಯಾನ್ಪಿತಾ ದಶ||
ಆಚಾರ್ಯನು ಸದಾ ಶ್ರೋತ್ರಿಗಳಿಗಿಂತಲೂ ಹತ್ತುಪಟ್ಟು ಅಧಿಕನಾದವನು. ಉಪಾಧ್ಯಾಯನು ಹತ್ತು ಆಚಾರ್ಯರಿಗಿಂತಲೂ ಮತ್ತು ತಂದೆಯು ಹತ್ತು ಉಪಾಧ್ಯಾಯರಿಗಿಂತಲೂ ಅಧಿಕನಾದವನು.
12109016a ಪಿತೃನ್ದಶ ತು ಮಾತೈಕಾ ಸರ್ವಾಂ ವಾ ಪೃಥಿವೀಮಪಿ|
12109016c ಗುರುತ್ವೇನಾಭಿಭವತಿ ನಾಸ್ತಿ ಮಾತೃಸಮೋ ಗುರುಃ|
12109016e ಗುರುರ್ಗರೀಯಾನ್ಪಿತೃತೋ ಮಾತೃತಶ್ಚೇತಿ ಮೇ ಮತಿಃ||
ತಾಯಿಯು ಹತ್ತು ಪಿತೃಗಳಿಗಿಂತಲೂ ಅಧಿಕವಾದವಳು. ಅವಳೊಬ್ಬಳೇ ಇಡೀ ಪೃಥ್ವಿಗಿಂತಲೂ ಅಧಿಕಳು. ಗುರುತ್ವದಲ್ಲಿಯೂ ತಾಯಿಯು ಭೂಮಿಯನ್ನು ಮೀರಿಸುತ್ತಾಳೆ. ಮಾತೃಸಮ ಗುರುವಿಲ್ಲ. ಆದರೆ ನನ್ನ ಅಭಿಪ್ರಾಯದಲ್ಲಿ ಮಾತಾ-ಪಿತೃಗಳಿಗಿಂತಲೂ ಗುರುವೇ ಅಧಿಕನಾದವನು.
12109017a ಉಭೌ ಹಿ ಮಾತಾಪಿತರೌ ಜನ್ಮನಿ ವ್ಯುಪಯುಜ್ಯತಃ|
12109017c ಶರೀರಮೇತೌ ಸೃಜತಃ ಪಿತಾ ಮಾತಾ ಚ ಭಾರತ|
12109017e ಆಚಾರ್ಯಶಿಷ್ಟಾ ಯಾ ಜಾತಿಃ ಸಾ ದಿವ್ಯಾ ಸಾಜರಾಮರಾ||
ಏಕೆಂದರೆ ಮಾತಾಪಿತೃಗಳು ಜನ್ಮಪಡೆಯುವುದರಲ್ಲಿ ಉಪಯೋಗಕ್ಕೆ ಬರುತ್ತಾರೆ. ಭಾರತ! ಮಾತಾ-ಪಿತೃಗಳೇ ಈ ಶರೀರವನ್ನು ಸೃಷ್ಟಿಸುತ್ತಾರೆ. ಆದರೆ ಆಚಾರ್ಯನ ಉಪದೇಶದಿಂದ ಯಾವ ಜನ್ಮವು ಪ್ರಾಪ್ತವಾಗುವುದೋ ಅದು ದಿವ್ಯವಾದುದು. ಅದಕ್ಕೆ ಮುಪ್ಪಿಲ್ಲ. ಅಮರವಾದುದು.
12109018a ಅವಧ್ಯಾ ಹಿ ಸದಾ ಮಾತಾ ಪಿತಾ ಚಾಪ್ಯಪಕಾರಿಣೌ|
12109018c ನ ಸಂದುಷ್ಯತಿ ತತ್ಕೃತ್ವಾ ನ ಚ ತೇ ದೂಷಯಂತಿ ತಮ್|
12109018e ಧರ್ಮಾಯ ಯತಮಾನಾನಾಂ ವಿದುರ್ದೇವಾಃ ಸಹರ್ಷಿಭಿಃ||
ಮಾತಾಪಿತೃಗಳು ಅಪಕಾರವನ್ನೆಸಗಿದರೂ ಸದಾ ಅವಧ್ಯರು. ಏಕೆಂದರೆ ಅಪಕಾರ ಮಾಡಿದ ಮಗನನ್ನಾಗಲೀ ಶಿಷ್ಯನನ್ನಾಗಲೀ ಮಾತಾ-ಪಿತೃ-ಗುರುಗಳು ಅಪರಾಧಿಯೆಂದು ಪರಿಗಣಿಸುವುದಿಲ್ಲ. ತಂದೆ-ತಾಯಿಯರು ದುಷ್ಟರಾಗಿದ್ದರೂ ಧರ್ಮದ ಕಾರಣದಿಂದ ಅವರ ಶುಶ್ರೂಷೆಯನ್ನು ಪ್ರಯತ್ನಪಟ್ಟು ಮಾಡುವವರನ್ನು ದೇವತೆಗಳೂ ಮಹರ್ಷಿಗಳೂ ಅನುಗ್ರಾಹ್ಯವೆಂದೇ ಭಾವಿಸುತ್ತಾರೆ.
12109019a ಯ ಆವೃಣೋತ್ಯವಿತಥೇನ ಕರ್ಣಾ-
ವೃತಂ[2] ಬ್ರುವನ್ನಮೃತಂ ಸಂಪ್ರಯಚ್ಚನ್|
12109019c ತಂ ವೈ ಮನ್ಯೇ ಪಿತರಂ ಮಾತರಂ ಚ
ತಸ್ಮೈ ನ ದ್ರುಹ್ಯೇತ್ ಕೃತಮಸ್ಯ ಜಾನನ್||
ಸತ್ಯ-ಧರ್ಮದ ಮೂಲಕ ಶಿಷ್ಯನನ್ನು ಅನುಗ್ರಹಿಸುವ, ಮತ್ತು ಸತ್ಯಸ್ವರೂಪ ವೇದೋಪದೇಶವನ್ನು ಮಾಡಿ ಅಸತ್ಯವನ್ನು ತಡೆಯುವ ಪರಮ ಗುರುವೇ ತಂದೆ-ತಾಯಿಯೆಂದು ತಿಳಿಯಬೇಕು. ಗುರುವು ಮಾಡಿದ ಉಪಕಾರವನ್ನು ಸ್ಮರಿಸುತ್ತಾ ಅವನ ವಿಷಯದಲ್ಲಿ ಎಂದೂ ದ್ರೋಹವನ್ನೆಸಗಬಾರದು.
12109020a ವಿದ್ಯಾಂ ಶ್ರುತ್ವಾ ಯೇ ಗುರುಂ ನಾದ್ರಿಯಂತೇ
ಪ್ರತ್ಯಾಸನ್ನಂ ಮನಸಾ ಕರ್ಮಣಾ ವಾ|
[3]12109020c ಯಥೈವ ತೇ ಗುರುಭಿರ್ಭಾವನೀಯಾಸ್
ತಥಾ ತೇಷಾಂ ಗುರವೋಽಪ್ಯರ್ಚನೀಯಾಃ||
ಗುರುವಿಗೆ ಶಿಷ್ಯನ ಮೇಲೆ ಯಾವ ಭಾವವಿರುತ್ತದೆಯೋ ಹಾಗೆ ಶಿಷ್ಯನೂ ಗುರುವನ್ನು ಅರ್ಚಿಸಬೇಕು. ವಿದ್ಯೆಯನ್ನು ಕೇಳಿ ಗುರುವನ್ನು ಆದರಿಸದೇ ಇರಬಾರದು. ಹತ್ತಿರವಿದ್ದು ಮನಸಾ ಮತ್ತು ಕರ್ಮಪೂರ್ವಕವಾಗಿ ಅವನ ಶುಶ್ರೂಷೆಯನ್ನು ಮಾಡಬೇಕು.
12109021a ತಸ್ಮಾತ್ ಪೂಜಯಿತವ್ಯಾಶ್ಚ ಸಂವಿಭಜ್ಯಾಶ್ಚ ಯತ್ನತಃ|
12109021c ಗುರವೋಽರ್ಚಯಿತವ್ಯಾಶ್ಚ ಪುರಾಣಂ ಧರ್ಮಮಿಚ್ಚತಾ||
ಆದುದರಿಂದ ಪುರಾಣಧರ್ಮವನ್ನು ಇಚ್ಛಿಸುವವರು ಗುರುತ್ರಯರನ್ನು ಅರ್ಚಿಸಬೇಕು. ಪೂಜಿಸಬೇಕು. ಪ್ರಯತ್ನಪೂರ್ವಕವಾಗಿ ಅವರಿಗೆ ಬೇಕಾದುದನ್ನು ಒದಗಿಸಿಕೊಡಬೇಕು.
12109022a ಯೇನ ಪ್ರೀತಾಶ್ಚ ಪಿತರಸ್ತೇನ ಪ್ರೀತಃ ಪಿತಾಮಹಃ|[4]
12109022c ಪ್ರೀಣಾತಿ ಮಾತರಂ ಯೇನ ಪೃಥಿವೀ ತೇನ ಪೂಜಿತಾ||
ತಂದೆಯನ್ನು ಸಂತೋಷಗೊಳಿಸುವವನ ಮೇಲೆ ಪಿತಾಮಹ ಬ್ರಹ್ಮನೂ ಪ್ರೀತನಾಗುತ್ತಾನೆ. ತಾಯಿಯನ್ನು ಸಂತೋಷಗೊಳಿಸುವವನ ಮೇಲೆ ಪೃಥ್ವಿಯು ಸುಪ್ರೀತಳಾಗುತ್ತಾಳೆ.
12109023a ಯೇನ ಪ್ರೀಣಾತ್ಯುಪಾಧ್ಯಾಯಂ ತೇನ ಸ್ಯಾದ್ಬ್ರಹ್ಮ ಪೂಜಿತಮ್|
12109023c ಮಾತೃತಃ ಪಿತೃತಶ್ಚೈವ ತಸ್ಮಾತ್ಪೂಜ್ಯತಮೋ ಗುರುಃ|
12109023e ಋಷಯಶ್ಚ ಹಿ ದೇವಾಶ್ಚ ಪ್ರೀಯಂತೇ ಪಿತೃಭಿಃ ಸಹ||
ಉಪಾಧ್ಯಾಯನನ್ನು ಪೂಜಿಸುವವನು ಬ್ರಹ್ಮವಸ್ತುವನ್ನೇ ಪೂಜಿಸಿದಂತೆ. ಆದುದರಿಂದ ತಂದೆ-ತಾಯಿಯರಿಗಿಂತಲೂ ಗುರುವೇ ಅಧಿಕ ಪೂಜಾರ್ಹನು. ಗುರುವನ್ನು ಪೂಜಿಸಿದರೆ ಪಿತೃಗಳೊಂದಿಗೆ ಋಷಿಗಳೂ ದೇವತೆಗಳೂ ಪ್ರೀತರಾಗುತ್ತಾರೆ.
12109024a ನ ಕೇನ ಚನ[5] ವೃತ್ತೇನ ಹ್ಯವಜ್ಞೇಯೋ ಗುರುರ್ಭವೇತ್|
12109024c ನ ಚ ಮಾತಾ ನ ಚ ಪಿತಾ ತಾದೃಶೋ ಯಾದೃಶೋ ಗುರುಃ||
ಯಾವುದೋ ವ್ಯವಹಾರದಲ್ಲಿ ತೊಡಗಿ ಗುರುವನ್ನು ಮರೆಯಬಾರದು. ಗುರುವು ಹೇಗೋ ಹಾಗೆ ತಂದೆ-ತಾಯಂದಿರೂ ಕೂಡ.
12109025a ನ ತೇಽವಮಾನಮರ್ಹಂತಿ ನ ಚ ತೇ ದೂಷಯಂತಿ ತಮ್|
12109025c ಗುರೂಣಾಮೇವ ಸತ್ಕಾರಂ ವಿದುರ್ದೇವಾಃ ಸಹರ್ಷಿಭಿಃ||
ಅವರು ಅಪಮಾನಕ್ಕೆ ಅರ್ಹರಲ್ಲ. ಅವರನ್ನು ದೂಷಿಸಬಾರದು. ಗುರುತ್ರಯರಿಗೆ ಮಾಡಿದ ಸತ್ಕಾರವು ತಮಗೇ ಮಾಡಿದ ಸತ್ಕಾರವೆಂದು ದೇವತೆಗಳು ಋಷಿಗಳು ತಿಳಿಯುತ್ತಾರೆ.
12109026a ಉಪಾಧ್ಯಾಯಂ ಪಿತರಂ ಮಾತರಂ ಚ
ಯೇಽಭಿದ್ರುಹ್ಯಂತಿ ಮನಸಾ ಕರ್ಮಣಾ ವಾ|
12109026c ತೇಷಾಂ ಪಾಪಂ ಭ್ರೂಣಹತ್ಯಾವಿಶಿಷ್ಟಂ
ತಸ್ಮಾನ್ನಾನ್ಯಃ ಪಾಪಕೃದಸ್ತಿ ಲೋಕೇ||
ಉಪಾಧ್ಯಾಯ, ತಂದೆ ಮತ್ತು ತಾಯಿಗೆ ಮನಸಾ ಅಥವಾ ಕರ್ಮದಿಂದ ಯಾರು ದ್ರೋಹವನ್ನೆಸಗುತ್ತಾರೋ ಅವರಿಗೆ ಭ್ರೂಣಹತ್ಯೆಗಿಂತಲೂ ಹೆಚ್ಚಿನ ಪಾಪವು ತಗಲುತ್ತದೆ. ಅವರಿಗಿಂತ ಹೆಚ್ಚಿನ ಪಾಪಿಯು ಈ ಲೋಕದಲ್ಲಿ ಬೇರೆ ಯಾರೂ ಇಲ್ಲ.
12109027a ಮಿತ್ರದ್ರುಹಃ ಕೃತಘ್ನಸ್ಯ ಸ್ತ್ರೀಘ್ನಸ್ಯ ಪಿಶುನಸ್ಯ ಚ[6]|
12109027c ಚತುರ್ಣಾಂ ವಯಮೇತೇಷಾಂ ನಿಷ್ಕೃತಿಂ ನಾನುಶುಶ್ರುಮಃ||
ಮಿತ್ರದ್ರೋಹೀ, ಕೃತಘ್ನ, ಸ್ತ್ರೀಹಂತಕ ಮತ್ತು ಚಾಡಿಕೋರ ಈ ನಾಲ್ವರಿಗೆ ಪ್ರಾಯಶ್ಚಿತ್ತವೇ ಇಲ್ಲವೆಂದು ನಾವು ಕೇಳಿದ್ದೇವೆ.
12109028a ಏತತ್ಸರ್ವಮತಿದೇಶೇನ ಸೃಷ್ಟಂ[7]
ಯತ್ಕರ್ತವ್ಯಂ ಪುರುಷೇಣೇಹ ಲೋಕೇ|
12109028c ಏತಚ್ಚ್ರೇಯೋ ನಾನ್ಯದಸ್ಮಾದ್ವಿಶಿಷ್ಟಂ
ಸರ್ವಾನ್ ಧರ್ಮಾನನುಸೃತ್ಯೈತದುಕ್ತಮ್||
ಈ ಲೋಕದಲ್ಲಿ ಪುರುಷನಿಗೆ ಯಾವುದು ಕರ್ತವ್ಯವೆನಿಸಿದೆಯೋ ಅವೆಲ್ಲವನ್ನೂ ಹೇಳಲಾಗಿದೆ. ಗುರುತ್ರಯರ ಶುಶ್ರೂಷೆಯು ಎಲ್ಲಕರ್ತ್ಯವ್ಯಗಳಿಗಿಂತಲೂ ಶ್ರೇಷ್ಠವಾದುದು. ಇದಕ್ಕಿಂತಲೂ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಎಲ್ಲ ಧರ್ಮಗಳನ್ನೂ ಅನುಸರಿಸಿಯೇ ಇದನ್ನು ಹೇಳಲಾಗಿದೆ.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಮಾತೃಪಿತೃಗುರುಮಹಾತ್ಮ್ಯೇ ನವಾಧಿಕಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ಮಾತೃಪಿತೃಗುರುಮಹಾತ್ಮ್ಯೆ ಎನ್ನುವ ನೂರಾಒಂಭತ್ತನೇ ಅಧ್ಯಾಯವು.
[1] ರಾಜಸತ್ತಮ ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಕರ್ಮಣಾ ಋತಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ತೇಷಾಂ ಪಾಪಂ ಭ್ರೂಣಹತ್ಯಾವಿಶಿಷ್ಟಂ ನಾನ್ಯಸ್ತೇಭ್ಯಃ ಪಾಪಕೃದಸ್ತಿ ಲೋಕೇ| ಈ ಶ್ಲೋಕಾರ್ಧವಿಲ್ಲದೇ ಇದರ ಅರ್ಥದಲ್ಲಿ ವ್ಯತ್ಯಾಸ ಬರುತ್ತದೆ.
[4] ಯೇನ ಪ್ರೀಣಾತಿ ಪಿತರಂ ತೇನ ಪ್ರೀತಃ ಪ್ರಜಾಪತಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).
[5] ಕೇನಚಿನ್ನ ಚ ಎಂಬ ಪಾಠಾಂತರವಿದೆ (ಭಾರತ ದರ್ಶನ).
[6] ಗುರುಘಾತಿನಃ ಎಂಬ ಪಾಠಾಂತರವಿದೆ (ಭಾರತ ದರ್ಶನ).
[7] ಏತತ್ಸರ್ವಮನಿರ್ದೇಶೇನೈವಮುಕ್ತಂ| ಎಂಬ ಪಾಠಾಂತರವಿದೆ (ಭಾರತ ದರ್ಶನ).