ಶಾಂತಿ ಪರ್ವ: ರಾಜಧರ್ಮ ಪರ್ವ
೧೦೦
ಶೂರರಿಗೆ ಸ್ವರ್ಗವೂ ಹೇಡಿಗಳಿಗೆ ನರಕವೂ ದೊರೆಯುವುದೆಂದು ಜನಕನು ತನ್ನ ಸೇನೆಗಳಿಗೆ ತೋರಿಸಿದುದು (1-18).
12100001 ಭೀಷ್ಮ ಉವಾಚ|
12100001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12100001c ಪ್ರತರ್ದನೋ ಮೈಥಿಲಶ್ಚ ಸಂಗ್ರಾಮಂ ಯತ್ರ ಚಕ್ರತುಃ||
ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರತರ್ದನ ಮತ್ತು ಮಿಥಿಲೇಶ್ವರನ ನಡುವೆ ನಡೆದ ಯುದ್ಧವನ್ನು ಉದಾಹರಿಸುತ್ತಾರೆ.
12100002a ಯಜ್ಞೋಪವೀತೀ ಸಂಗ್ರಾಮೇ ಜನಕೋ ಮೈಥಿಲೋ ಯಥಾ|
12100002c ಯೋಧಾನುದ್ಧರ್ಷಯಾಮಾಸ ತನ್ನಿಬೋಧ ಯುಧಿಷ್ಠಿರ||
ಯುಧಿಷ್ಠಿರ! ಯಜ್ಞೋಪವೀತೀ ಮಿಥಿಲರಾಜ ಜನಕನು ತನ್ನ ಯೋಧರನ್ನು ಹೇಗೆ ಹುರಿದುಂಬಿಸಿದನೆನ್ನುವುದನ್ನು ಹೇಳುತ್ತೇನೆ ಕೇಳು.
12100003a ಜನಕೋ ಮೈಥಿಲೋ ರಾಜಾ ಮಹಾತ್ಮಾ ಸರ್ವತತ್ತ್ವವಿತ್|
12100003c ಯೋಧಾನ್ಸ್ವಾನ್ದರ್ಶಯಾಮಾಸ ಸ್ವರ್ಗಂ ನರಕಮೇವ ಚ||
ಸರ್ವತತ್ತ್ವಗಳನ್ನೂ ತಿಳಿದಿದ್ದ ಮಹಾತ್ಮಾ ಮೈಥಿಲ ರಾಜಾ ಜನಕನು ಯೋಧರಿಗೆ ಸ್ವರ್ಗ-ನರಕಗಳೆರಡನ್ನೂ ತೋರಿಸಿ ಹೇಳಿದನು:
12100004a ಅಭೀತಾನಾಮಿಮೇ ಲೋಕಾ ಭಾಸ್ವಂತೋ ಹಂತ ಪಶ್ಯತ|
12100004c ಪೂರ್ಣಾ ಗಂಧರ್ವಕನ್ಯಾಭಿಃ ಸರ್ವಕಾಮದುಹೋಽಕ್ಷಯಾಃ||
“ಅದೋ ಅಲ್ಲಿ ನೋಡಿರಿ! ನಿರ್ಭಯರಾಗಿ ಯುದ್ಧಮಾಡುವ ಯೋಧರಿಗೆ ಗಂಧರ್ವ ಕನ್ಯೆಯರಿಂದ ತುಂಬಿದ ಸರ್ವಕಾಮಗಳನ್ನೂ ಪೂರೈಸುವ ಈ ಅಕ್ಷಯ ಲೋಕಗಳು ದೊರೆಯುತ್ತವೆ.
12100005a ಇಮೇ ಪಲಾಯಮಾನಾನಾಂ ನರಕಾಃ ಪ್ರತ್ಯುಪಸ್ಥಿತಾಃ|
12100005c ಅಕೀರ್ತಿಃ ಶಾಶ್ವತೀ ಚೈವ ಪತಿತವ್ಯಮನಂತರಮ್||
ಪಲಾಯನಮಾಡುವವರಿಗೆ ಈ ಲೋಕದಲ್ಲಿ ಶಾಶ್ವತವಾದ ಅಪಕೀರ್ತಿಯಲ್ಲದೇ ಮರಣಾನಂತರ ಈ ನರಕಗಳೂ ಲಭ್ಯವಾಗುತ್ತವೆ.
12100006a ತಾನ್ದೃಷ್ಟ್ವಾರೀನ್ವಿಜಯತೋ ಭೂತ್ವಾ ಸಂತ್ಯಾಗಬುದ್ಧಯಃ|
12100006c ನರಕಸ್ಯಾಪ್ರತಿಷ್ಠಸ್ಯ ಮಾ ಭೂತ ವಶವರ್ತಿನಃ||
ಇವೆರಡನ್ನೂ ನೋಡಿಕೊಂಡು ತ್ಯಾಗಬುದ್ಧಿಯುಳ್ಳವರಾಗಿ ವಿಜಯವನ್ನು ಸಂಪಾದಿಸಿರಿ. ಅಪ್ರತಿಷ್ಠವಾದ ನರಕದ ವಶವರ್ತಿಗಳಾಗಬೇಡಿರಿ.
12100007a ತ್ಯಾಗಮೂಲಂ ಹಿ ಶೂರಾಣಾಂ ಸ್ವರ್ಗದ್ವಾರಮನುತ್ತಮಮ್|
12100007c ಇತ್ಯುಕ್ತಾಸ್ತೇ ನೃಪತಿನಾ ಯೋಧಾಃ ಪರಪುರಂಜಯ||
12100008a ವ್ಯಜಯಂತ ರಣೇ ಶತ್ರೂನ್ ಹರ್ಷಯಂತೋ ಜನೇಶ್ವರಮ್|
ಶೂರರಿಗೆ ಸ್ವರ್ಗದ ಉತ್ತಮ ದ್ವಾರವು ಪ್ರಾಪ್ತವಾಗಲು ಅವರ ತ್ಯಾಗವೇ ಮೂಲಕಾರಣವಾಗಿದೆ.” ಪರಪುರಂಜಯ! ನೃಪತಿಯು ಹೀಗೆ ಹೇಳಲು ಅವನ ಯೋಧರು ರಣದಲ್ಲಿ ವಿಜಯವನ್ನು ಸಾಧಿಸಿ ಜನೇಶ್ವರನನ್ನು ಹರ್ಷಗೊಳಿಸಿದರು.
12100008c ತಸ್ಮಾದಾತ್ಮವತಾ ನಿತ್ಯಂ ಸ್ಥಾತವ್ಯಂ ರಣಮೂರ್ಧನಿ||
12100009a ಗಜಾನಾಂ ರಥಿನೋ ಮಧ್ಯೇ ರಥಾನಾಮನು ಸಾದಿನಃ|
12100009c ಸಾದಿನಾಮಂತರಾ ಸ್ಥಾಪ್ಯಂ ಪಾದಾತಮಿಹ ದಂಶಿತಮ್||
ಆದುದರಿಂದ ರಣಮೂರ್ಧನಿಯಲ್ಲಿ ನಿತ್ಯವೂ ಮನೋನಿಗ್ರಹವುಳ್ಳ ವ್ಯಕ್ತಿಯೇ ನಿಂತಿರಬೇಕು. ಗಜಾರೋಹಿಗಳ ಮಧ್ಯದಲ್ಲಿ ರಥಸೈನ್ಯವನ್ನು ಸ್ಥಾಪಿಸಬೇಕು. ರಥಸೈನ್ಯದ ಬಳಿ ಕುದುರೆಸವಾರರಿರಬೇಕು. ಕುದುರೆ ಸವಾರರ ಮಧ್ಯೆ ಕವಚಧಾರೀ ಅಸ್ತ್ರ-ಶಸ್ತ್ರಧಾರೀ ಪದಾತಿಗಳಿರಬೇಕು.
12100010a ಯ ಏವಂ ವ್ಯೂಹತೇ ರಾಜಾ ಸ ನಿತ್ಯಂ ಜಯತೇ ದ್ವಿಷಃ|
12100010c ತಸ್ಮಾದೇವಂ ವಿಧಾತವ್ಯಂ ನಿತ್ಯಮೇವ ಯುಧಿಷ್ಠಿರ||
ಯುಧಿಷ್ಠಿರ! ಈ ರೀತಿ ವ್ಯೂಹರಚಿಸಿದ ರಾಜನು ನಿತ್ಯವೂ ವಿಜಯಿಯಾಗುತ್ತಾನೆ. ಆದುದರಿಂದ ನಿತ್ಯವೂ ನೀನೂ ಕೂಡ ಹೀಗೆಯೇ ವ್ಯೂಹವನ್ನು ರಚಿಸಬೇಕು.
12100011a ಸರ್ವೇ ಸುಕೃತಮಿಚ್ಚಂತಃ[1] ಸುಯುದ್ಧೇನಾತಿಮನ್ಯವಃ|
12100011c ಕ್ಷೋಭಯೇಯುರನೀಕಾನಿ ಸಾಗರಂ ಮಕರಾ ಇವ||
ಸರ್ವ ಕ್ಷತ್ರಿಯರೂ ಉತ್ತಮ ಯುದ್ಧದ ಮೂಲಕ ಪುಣ್ಯವನ್ನು ಪಡೆದುಕೊಳ್ಳಲು ಬಯಸುತ್ತಾರೆ ಮತ್ತು ಮೊಸಳೆಗಳು ಸಾಗರವನ್ನು ಹೇಗೋ ಹಾಗೆ ಸೇನೆಗಳನ್ನು ಕ್ಷೋಭೆಗೊಳಿಸುತ್ತಾರೆ.
12100012a ಹರ್ಷಯೇಯುರ್ವಿಷಣ್ಣಾಂಶ್ಚ ವ್ಯವಸ್ಥಾಪ್ಯ ಪರಸ್ಪರಮ್|
12100012c ಜಿತಾಂ ಚ ಭೂಮಿಂ ರಕ್ಷೇತ ಭಗ್ನಾನ್ನಾತ್ಯನುಸಾರಯೇತ್||
ಸೈನಿಕರು ವಿಷಣ್ಣರಾಗಿರುವಾಗ ಪರಸ್ಪರರನ್ನು ವ್ಯವಸ್ಥಿತವಾಗಿರಿಸಿ ಹರ್ಷವನ್ನುಂಟುಮಾಡಬೇಕು. ಗೆದ್ದ ಭೂಮಿಯನ್ನು ರಕ್ಷಿಸಬೇಕು. ಪಲಾಯನಮಾಡುತ್ತಿರುವವರನ್ನು ಬಹಳ ದೂರದ ವರೆಗೆ ಬೆನ್ನಟ್ಟಿ ಹೋಗಬಾರದು.
12100013a ಪುನರಾವರ್ತಮಾನಾನಾಂ ನಿರಾಶಾನಾಂ ಚ ಜೀವಿತೇ|
12100013c ನ ವೇಗಃ ಸುಸಹೋ ರಾಜಂಸ್ತಸ್ಮಾನ್ನಾತ್ಯನುಸಾರಯೇತ್||
ರಾಜನ್! ಜೀವಿತದಲ್ಲಿಯೇ ನಿರಾಶರಾದ ಅವರು ಅತಿ ವೇಗದಲ್ಲಿ ಹಿಂದಿರುಗಿಬಿಡಬಲ್ಲರು. ಆದುದರಿಂದ ಅವರನ್ನು ಅತಿಯಾಗಿ ಬೆನ್ನಟ್ಟಿಹೋಗಬಾರದು.
12100014a ನ ಹಿ ಪ್ರಹರ್ತುಮಿಚ್ಚಂತಿ ಶೂರಾಃ ಪ್ರಾದ್ರವತಾಂ ಭಯಾತ್|
12100014c ತಸ್ಮಾತ್ಪಲಾಯಮಾನಾನಾಂ ಕುರ್ಯಾನ್ನಾತ್ಯನುಸಾರಣಮ್||
ಭಯದಿಂದ ಓಡಿಹೋಗುತ್ತಿರುವವರ ಮೇಲೆ ಶೂರರು ಪ್ರಹರಿಸಲು ಇಚ್ಛಿಸುವುದಿಲ್ಲ. ಆದುದರಿಂದ ಪಲಾಯನಮಾಡುವವರನ್ನು ಅತಿ ದೂರದವರೆಗೆ ಅನುಸರಿಸಬಾರದು.
12100015a ಚರಾಣಾಮಚರಾ ಹ್ಯನ್ನಮದಂಷ್ಟ್ರಾ ದಂಷ್ಟ್ರಿಣಾಮಪಿ|
12100015c ಅಪಾಣಯಃ ಪಾಣಿಮತಾಮನ್ನಂ[2] ಶೂರಸ್ಯ ಕಾತರಾಃ||
ಚರಪ್ರಾಣಿಗಳಿಗೆ ಅಚರ ಹುಲ್ಲು ಮೊದಲಾದವುಗಳು ಹೇಗೆ ಅನ್ನವೋ, ಕೋರೆದಾಡೆಗಳಿರುವ ಪ್ರಾಣಿಗಳಿಗೆ ಕೋರೆದಾಡೆಗಳಿಲ್ಲದಿರುವ ಪ್ರಾಣಿಗಳು ಹೇಗೆ ಅನ್ನವೋ, ಕೈಗಳಿಲ್ಲದವಕ್ಕೆ ಕೈಗಳಿದ್ದವು ಹೇಗೆ ಅನ್ನವೋ ಹಾಗೆ ಶೂರನಿಗೆ ಹೇಡಿಗಳೇ ಅನ್ನಪ್ರಾಯರು.
12100016a ಸಮಾನಪೃಷ್ಠೋದರಪಾಣಿಪಾದಾಃ
ಪಶ್ಚಾಚ್ಚೂರಂ ಭೀರವೋಽನುವ್ರಜಂತಿ[3]|
12100016c ಅತೋ ಭಯಾರ್ತಾಃ ಪ್ರಣಿಪತ್ಯ ಭೂಯಃ
ಕೃತ್ವಾಂಜಲೀನುಪತಿಷ್ಠಂತಿ ಶೂರಾನ್||
ಶೂರರು ಮತ್ತು ಹೇಡಿಗಳ ಹೊಟ್ಟೆ, ಪೃಷ್ಠ, ಕೈಗಳು ಮತ್ತು ಕಾಲುಗಳು ಒಂದೇ ಸಮನಾಗಿರುತ್ತವೆ. ಆದರೆ ಹೇಡಿಗಳು ಶೂರರನ್ನು ಹಿಂಬಾಲಿಸುತ್ತಾರೆ. ಭಯಾರ್ತರು ಪುನಃ ಪುನಃ ಕೈಮುಗಿದು ನಮಸ್ಕರಿಸುತ್ತಾ ಶೂರರನ್ನು ಬೇಡಿಕೊಳ್ಳುತ್ತಾರೆ.
12100017a ಶೂರಬಾಹುಷು ಲೋಕೋಽಯಂ ಲಂಬತೇ ಪುತ್ರವತ್ಸದಾ|
12100017c ತಸ್ಮಾತ್ಸರ್ವಾಸ್ವವಸ್ಥಾಸು ಶೂರಃ ಸಂಮಾನಮರ್ಹತಿ||
ಪುತ್ರರು ತಂದೆಯನ್ನು ಹೇಗೋ ಹಾಗೆ ಈ ಲೋಕವು ಶೂರರ ಬಾಹುಗಳನ್ನು ಅವಲಂಬಿಸಿದೆ. ಆದುದರಿಂದ ಸರ್ವಾವಸ್ಥೆಗಳಲ್ಲಿ ಶೂರನನ್ನು ಸಮ್ಮಾನಿಸಬೇಕು.
12100018a ನ ಹಿ ಶೌರ್ಯಾತ್ಪರಂ ಕಿಂ ಚಿತ್ತ್ರಿಷು ಲೋಕೇಷು ವಿದ್ಯತೇ|
12100018c ಶೂರಃ ಸರ್ವಂ ಪಾಲಯತಿ ಸರ್ವಂ ಶೂರೇ ಪ್ರತಿಷ್ಠಿತಮ್||
ಶೌರ್ಯಕ್ಕಿಂತಲೂ ಶ್ರೇಷ್ಠವಾದುದು ಮೂರು ಲೋಕಗಳಲ್ಲಿಯೂ ಇಲ್ಲ. ಶೂರನು ಸರ್ವವನ್ನು ಪಾಲಿಸುತ್ತಾನೆ ಮತ್ತು ಎಲ್ಲವೂ ಶೂರನಲ್ಲಿಯೇ ಪ್ರತಿಷ್ಠಿತವಾಗಿವೆ.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ಶತತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ನೂರನೇ ಅಧ್ಯಾಯವು.
[1] ಸ್ವರ್ಗತಿಮಿಚ್ಛಂತಿ ಎಂಬ ಪಾಠಾಂತರವಿದೆ (ಭಾರತ ದರ್ಶನ).
[2] ಆಪಃ ಪಿಪಾಸತಾಮನ್ನಂ ಎಂಬ ಪಾಠಾಂತರವಿದೆ (ಭಾರತ ದರ್ಶನ).
[3] ಪರಾಭವಂ ಭೀರವೋ ವೈ ವ್ರಜಂತಿ| ಎಂಬ ಪಾಠಾಂತರವಿದೆ (ಭಾರತ ದರ್ಶನ).