Shanti Parva: Chapter 97

ಶಾಂತಿ ಪರ್ವ: ರಾಜಧರ್ಮ ಪರ್ವ

೯೭

ರಾಜನ ಕಪಟರಹಿತ ಧರ್ಮಯುಕ್ತ ವ್ಯವಹಾರದ ಪ್ರಶಂಸೆ (1-23).

12097001 ಭೀಷ್ಮ ಉವಾಚ|

12097001a ನಾಧರ್ಮೇಣ ಮಹೀಂ ಜೇತುಂ ಲಿಪ್ಸೇತ ಜಗತೀಪತಿಃ|

12097001c ಅಧರ್ಮವಿಜಯಂ ಲಬ್ಧ್ವಾ ಕೋಽನುಮನ್ಯೇತ ಭೂಮಿಪಃ||

ಭೀಷ್ಮನು ಹೇಳಿದನು: ಜಗತೀಪತಿಯು ಅಧರ್ಮದಿಂದ ಮಹಿಯನ್ನು ಗೆಲ್ಲಲು ಬಯಸಬಾರದು. ಅಧರ್ಮದಿಂದ ವಿಜಯವನ್ನು ಗಳಿಸಿ ಯಾರುತಾನೇ ತಾನು ಭೂಮಿಪನೆಂದೆನಿಸಿಕೊಳ್ಳುತ್ತಾನೆ?

12097002a ಅಧರ್ಮಯುಕ್ತೋ ವಿಜಯೋ ಹ್ಯಧ್ರುವೋಽಸ್ವರ್ಗ್ಯ ಏವ ಚ|

12097002c ಸಾದಯತ್ಯೇಷ ರಾಜಾನಂ ಮಹೀಂ ಚ ಭರತರ್ಷಭ||

ಅಧರ್ಮಯುಕ್ತ ವಿಜಯವು ಶಾಶ್ವತವಾದುದಲ್ಲ. ಸ್ವರ್ಗವನ್ನು ನೀಡುವಂಥಹುದೂ ಅಲ್ಲ. ಭರತರ್ಷಭ! ಅಂತಹ ಅಧರ್ಮ ವಿಜಯವು ರಾಜನನ್ನೂ ರಾಜ್ಯವನ್ನೂ ನಾಶಗೊಳಿಸುತ್ತದೆ.

12097003a ವಿಶೀರ್ಣಕವಚಂ ಚೈವ ತವಾಸ್ಮೀತಿ ಚ ವಾದಿನಮ್|

12097003c ಕೃತಾಂಜಲಿಂ ನ್ಯಸ್ತಶಸ್ತ್ರಂ ಗೃಹೀತ್ವಾ ನ ವಿಹಿಂಸಯೇತ್||

ಕವಚವು ತುಂಡಾಗಿರುವನನ್ನು, ನಾನು ನಿನ್ನವನಾಗಿದ್ದೇನೆ ಎಂದು ಹೇಳುವವನ್ನೂ, ಕೈಮುಗಿದು ಶಸ್ತ್ರವನ್ನು ಕೆಳಗಿಟ್ಟವನನ್ನೂ ಬಂಧಿಸಿ ಹಿಂಸಿಸಬಾರದು.

12097004a ಬಲೇನಾವಜಿತೋ ಯಶ್ಚ ನ ತಂ ಯುಧ್ಯೇತ ಭೂಮಿಪಃ|

12097004c ಸಂವತ್ಸರಂ ವಿಪ್ರಣಯೇತ್ತಸ್ಮಾಜ್ಜಾತಃ ಪುನರ್ಭವೇತ್||

ಬಲದಿಂದ ಸೋಲಿಸಿದವನೊಡನೆ ಭೂಮಿಪನು ಯುದ್ಧ ಮಾಡಬಾರದು. ಒಂದು ವರ್ಷದ ವರೆಗೆ ಅವನನ್ನು ಗೌರವದಿಂದ ಬಂಧನದಲ್ಲಿರಿಸಿಕೊಂಡಿರಬೇಕು. ಸೋತ ರಾಜನು ಗೆದ್ದವನಿಗೆ ಮಗನಂತೆಯೇ ಆಗುತ್ತಾನೆ.

12097005a ನಾರ್ವಾಕ್ಸಂವತ್ಸರಾತ್ಕನ್ಯಾ ಸ್ಪ್ರಷ್ಟವ್ಯಾ ವಿಕ್ರಮಾಹೃತಾ|

12097005c ಏವಮೇವ ಧನಂ ಸರ್ವಂ ಯಚ್ಚಾನ್ಯತ್ಸಹಸಾಹೃತಮ್||

ವಿಕ್ರಮದಿಂದ ಅಪಹರಿಸಿದ ಕನ್ಯೆಯನ್ನು ಒಂದು ವರ್ಷದ ವರೆಗೆ ಅರಮನೆಯಲ್ಲಿ ಪ್ರತ್ಯೇಕವಾಗಿಟ್ಟಿರಬೇಕು ಮತ್ತು ಅವಳನ್ನು ಪ್ರಶ್ನಿಸಬಾರದು. ಇದೇ ಧರ್ಮವನ್ನು ಅಪಹರಿಸಿ ತಂದ ಇತರ ಧನಗಳ ಕುರಿತೂ ಪಾಲಿಸಬೇಕು.

12097006a ನ ತು ವಂಧ್ಯಂ ಧನಂ[1] ತಿಷ್ಠೇತ್ಪಿಬೇಯುರ್ಬ್ರಾಹ್ಮಣಾಃ ಪಯಃ|

12097006c ಯುಂಜೀರನ್ವಾಪ್ಯನಡುಹಃ ಕ್ಷಂತವ್ಯಂ ವಾ ತದಾ ಭವೇತ್||

ಅಪರಾಧಿಯಿಂದ ವಸೂಲಿಮಾಡಿಕೊಂಡ ಧನವನ್ನು ರಾಜನು ಭೋಗಿಸಬಾರದು. ಅಪರಾಧಿಯಿಂದ ಮುಟ್ಟುಗೋಲು ಹಾಕಿದ ಹಸುವಿನ ಹಾಲನ್ನು ಬ್ರಾಹ್ಮಣರಿಗೆ ಕುಡಿಯಲು ಕೊಡಬೇಕು. ಅಪರಾಧಿಯ ಎತ್ತನ್ನು ಬ್ರಾಹ್ಮಣರು ಕುಳಿತ ಗಾಡಿಗಳನ್ನು ಎಳೆಯಲು ಉಪಯೋಗಿಸಬೇಕು. ರಾಜನು ಅಪರಾಧಿಯನ್ನು ಕ್ಷಮಿಸಿ ಅವನ ವಸ್ತುಗಳೆಲ್ಲವನ್ನೂ ಹಿಂದೆಕೊಡಲೂ ಬಹುದು.

12097007a ರಾಜ್ಞಾ ರಾಜೈವ ಯೋದ್ಧವ್ಯಸ್ತಥಾ ಧರ್ಮೋ ವಿಧೀಯತೇ|

12097007c ನಾನ್ಯೋ ರಾಜಾನಮಭ್ಯಸೇದರಾಜನ್ಯಃ ಕಥಂ ಚನ||

ರಾಜನು ರಾಜನೊಂದಿಗೇ ಯುದ್ಧಮಾಡಬೇಕೆಂದು ಧರ್ಮವು ವಿಧಿಸಿದೆ. ರಾಜ ಅಥವಾ ರಾಜಕುಮಾರನಲ್ಲದವನು ರಾಜನ ಮೇಲೆ ಯಾವುದೇ ಕಾರಣದಿಂದಲೂ ಶಸ್ತ್ರಪ್ರಯೋಗ ಮಾಡಬಾರದು.

12097008a ಅನೀಕಯೋಃ ಸಂಹತಯೋರ್ಯದೀಯಾದ್ಬ್ರಾಹ್ಮಣೋಽಂತರಾ|

12097008c ಶಾಂತಿಮಿಚ್ಚನ್ನುಭಯತೋ ನ ಯೋದ್ಧವ್ಯಂ ತದಾ ಭವೇತ್||

ಸೇನೆಗಳು ಯುದ್ಧದಲ್ಲಿ ತೊಡಗಿರುವಾಗ ಬ್ರಾಹ್ಮಣನು ಶಾಂತಿಯನ್ನು ಬಯಸಿ ಮಧ್ಯದಲ್ಲಿ ಬಂದರೆ ಎರಡೂ ಕಡೆಯವರೂ ಯುದ್ಧವನ್ನು ಕೂಡಲೇ ನಿಲ್ಲಿಸಬೇಕು.

12097008e ಮರ್ಯಾದಾಂ ಶಾಶ್ವತೀಂ ಭಿಂದ್ಯಾದ್ಬ್ರಾಹ್ಮಣಂ ಯೋಽಭಿಲಂಘಯೇತ್|

12097009a ಅಥ ಚೇಲ್ಲಂಘಯೇದೇನಾಂ ಮರ್ಯಾದಾಂ ಕ್ಷತ್ರಿಯಬ್ರುವಃ||

12097009c ಅಪ್ರಶಸ್ಯಸ್ತದೂರ್ಧ್ವಂ ಸ್ಯಾದನಾದೇಯಶ್ಚ ಸಂಸದಿ|

ಹಾಗೆ ಬಂದ ಬ್ರಾಹ್ಮಣನನ್ನು ಯಾರೇ ಉಲ್ಲಂಘಿಸಿದರೂ ಅದು ಶಾಶ್ವತ ಮರ್ಯಾದೆಯನ್ನು ಉಲ್ಲಂಘಿಸಿದಂತೆ. ಈ ಮರ್ಯಾದೆಯನ್ನು ಉಲ್ಲಂಘಿಸದವನು ಕ್ಷತ್ರಿಯನೆಂದು ಕರೆಯಲ್ಪಡಲು ಯೋಗ್ಯನಾಗುವುದಿಲ್ಲ. ಅದರ ನಂತರ ಅವನನ್ನು ಕ್ಷತ್ರಿಯರ ಸಂಸದಿಗಳಲ್ಲಿ ಮರ್ಯಾದೆಯನ್ನು ಕೊಡಲಾಗುವುದಿಲ್ಲ.

12097010a ಯಾ ತು ಧರ್ಮವಿಲೋಪೇನ ಮರ್ಯಾದಾಭೇದನೇನ ಚ||

12097010c ತಾಂ ವೃತ್ತಿಂ ನಾನುವರ್ತೇತ ವಿಜಿಗೀಷುರ್ಮಹೀಪತಿಃ|

12097010E ಧರ್ಮಲಬ್ಧಾದ್ಧಿ ವಿಜಯಾತ್ಕೋ ಲಾಭೋಽಭ್ಯಧಿಕೋ ಭವೇತ್||

ಧರ್ಮಲೋಪವನ್ನು ಮಾಡಿ ಯುದ್ಧಮರ್ಯಾದೆಯನ್ನು ಉಲ್ಲಂಘಿಸಿ ವಿಜಯವನ್ನು ಪಡೆಯುವ ವೃತ್ತಿಯನ್ನು ಜಯವನ್ನು ಅಪೇಕ್ಷಿಸುವ ಮಹೀಪತಿಯು ಅನುಸರಿಸಬಾರದು. ಧರ್ಮದಿಂದ ಪಡೆದ ವಿಜಯಕ್ಕಿಂತಲೂ ಅಧಿಕ ಲಾಭವು ಬೇರೆ ಯಾವುದಿದೆ?

12097011a ಸಹಸಾ ನಾಮ್ಯ ಭೂತಾನಿ[2] ಕ್ಷಿಪ್ರಮೇವ ಪ್ರಸಾದಯೇತ್|

12097011c ಸಾಂತ್ವೇನ ಭೋಗದಾನೇನ ಸ ರಾಜ್ಞಾಂ ಪರಮೋ ನಯಃ||

ವಿಜಯಿಯಾದ ರಾಜನು ಬೇಗನೇ ಸಾಂತ್ವನ ಮಾತುಗಳಿಂದ ಮತ್ತು ಭೋಗವಸ್ತುಗಳನ್ನಿತ್ತು ಅವರನ್ನು ಪ್ರಸನ್ನಗೊಳಿಸಬೇಕು. ಇದೇ ವಿಜಯೀ ರಾಜನ ಪರಮ ನೀತಿ.

12097012a ಭುಜ್ಯಮಾನಾ ಹ್ಯಯೋಗೇನ ಸ್ವರಾಷ್ಟ್ರಾದಭಿತಾಪಿತಾಃ|

12097012c ಅಮಿತ್ರಾನ್ ಪರ್ಯುಪಾಸೀರನ್ ವ್ಯಸನೌಘಪ್ರತೀಕ್ಷಿಣಃ||

ಅನುಚಿತ ರೀತಿಯಲ್ಲಿ ಅವರನ್ನು ತನ್ನ ರಾಷ್ಟ್ರದಿಂದ ಹೊರಹಾಕಿದ್ದೇ ಆದರೆ ಅವರೇ ಶತ್ರುಗಳಾಗಿ ವಿಜಯಿಯು ವ್ಯಸನಕ್ಕೀಡಾಗುವುದನ್ನೇ ಕಾಯುತ್ತಿರುತ್ತಾರೆ.

12097013a ಅಮಿತ್ರೋಪಗ್ರಹಂ ಚಾಸ್ಯ ತೇ ಕುರ್ಯುಃ ಕ್ಷಿಪ್ರಮಾಪದಿ|

12097013c ಸಂದುಷ್ಟಾಃ ಸರ್ವತೋ ರಾಜನ್ ರಾಜವ್ಯಸನಕಾಂಕ್ಷಿಣಃ||

ರಾಜನ್! ರಾಜನು ವ್ಯಸನಕ್ಕೊಳಗಾಗುವುದನ್ನೇ ಕಾಯುತ್ತಿರುವ ಆ ಸುದುಷ್ಟರು ಆಪತ್ತಿನ ಸಮಯದಲ್ಲಿ ಶತ್ರುವಿನ ಪಕ್ಷವನ್ನು ಸೇರಿಕೊಳ್ಳುತ್ತಾರೆ.

12097014a ನಾಮಿತ್ರೋ ವಿನಿಕರ್ತವ್ಯೋ ನಾತಿಚ್ಚೇದ್ಯಃ ಕಥಂ ಚನ|

12097014c ಜೀವಿತಂ ಹ್ಯಪ್ಯತಿಚ್ಚಿನ್ನಃ ಸಂತ್ಯಜತ್ಯೇಕದಾ ನರಃ||

ಶತ್ರುವನ್ನು ವಂಚಿಸಬಾರದು. ಅವನನ್ನು ಯಾವುದೇ ಕಾರಣಕ್ಕೂ ಅತಿಯಾಗಿ ಹಿಂಸಿಸಬಾರದು. ಅವನು ಅತಿಯಾಗಿ ಗಾಯಗೊಂಡರೆ ಜೀವವನ್ನೇ ಬಿಟ್ಟುಬಿಡಬಹುದು.

12097015a ಅಲ್ಪೇನಾಪಿ ಹಿ ಸಂಯುಕ್ತಸ್ತುಷ್ಯತ್ಯೇವಾಪರಾಧಿಕಃ|

12097015c ಶುದ್ಧಂ ಜೀವಿತಮೇವಾಪಿ ತಾದೃಶೋ ಬಹು ಮನ್ಯತೇ||

ಅಂಥಹ ರಾಜನು ಅಲ್ಪಲಾಭದಿಂದಲೇ ಸಂತುಷ್ಟನಾಗುತ್ತಾನೆ. ಅಂಥವನು ಪರಿಶುದ್ಧ ಜೀವನವೇ ಅತ್ಯಂತ ಮಹತ್ತ್ವದ್ದೆಂದು ಭಾವಿಸುತ್ತಾನೆ.

12097016a ಯಸ್ಯ ಸ್ಫೀತೋ ಜನಪದಃ ಸಂಪನ್ನಃ ಪ್ರಿಯರಾಜಕಃ|

12097016c ಸಂತುಷ್ಟಭೃತ್ಯಸಚಿವೋ ದೃಢಮೂಲಃ ಸ ಪಾರ್ಥಿವಃ||

ಯಾರ ಜನಪದವು ಧನ-ಧಾನ್ಯಗಳಿಂದ ಸಮೃದ್ಧವಾಗಿದೆಯೋ, ರಾಜನನ್ನು ಪ್ರೀತಿಸುವ ಪ್ರಜೆಗಳಿಂದ ತುಂಬಿದೆಯೋ, ಯಾರ ಭೃತ್ಯ-ಸಚಿವರು ಸಂತುಷ್ಟರಾಗಿರುವರೋ ಆ ರಾಜನ ಮೂಲವು ದೃಢವಾಗಿರುತ್ತದೆ.

12097017a ಋತ್ವಿಕ್ಪುರೋಹಿತಾಚಾರ್ಯಾ ಯೇ ಚಾನ್ಯೇ ಶ್ರುತಸಂಮತಾಃ|

12097017c ಪೂಜಾರ್ಹಾಃ ಪೂಜಿತಾ ಯಸ್ಯ ಸ ವೈ ಲೋಕಜಿದುಚ್ಯತೇ[3]||

ಯಾವ ರಾಜನು ಋತ್ವಿಜರನ್ನೂ, ಪುರೋಹಿತರನ್ನೂ, ಆಚಾರ್ಯರನ್ನೂ ಮತ್ತು ಅನ್ಯ ಶ್ರುತಸಂಮತ ಪೂಜರ್ಹರನ್ನು ಪೂಜಿಸುತ್ತಾನೋ ಅವನು ಲೋಕವಿಜಯಿಯು ಎಂದು ಕರೆಯಲ್ಪಡುತ್ತಾನೆ.

12097018a ಏತೇನೈವ ಚ ವೃತ್ತೇನ ಮಹೀಂ ಪ್ರಾಪ ಸುರೋತ್ತಮಃ|

12097018c ಅನ್ವೇವ ಚೈಂದ್ರಂ ವಿಜಯಂ ವ್ಯಜಿಗೀಷಂತ ಪಾರ್ಥಿವಾಃ||

ಇದೇ ವರ್ತನೆಯಿಂದ ಸುರೋತ್ತಮನು ಮಹಿಯನ್ನು ಪಡೆದುಕೊಂಡನು. ಇದನ್ನು ಅನುಸರಿಸಿಯೇ ಪಾರ್ಥಿವರು ಇಂದ್ರನ ವಿಜಯವನ್ನು ಪಡೆದುಕೊಳ್ಳಲು ಬಯಸುತ್ತಾರೆ.

12097019a ಭೂಮಿವರ್ಜಂ ಪುರಂ ರಾಜಾ ಜಿತ್ವಾ ರಾಜಾನಮಾಹವೇ|

12097019c ಅಮೃತಾಶ್ಚೌಷಧೀಃ ಶಶ್ವದಾಜಹಾರ ಪ್ರತರ್ದನಃ||

ಹಿಂದೆ ರಾಜಾ ಪ್ರತರ್ದನನು ರಾಜನನ್ನು ಯುದ್ಧದಲ್ಲಿ ಗೆದ್ದು ಅವನಿಗೆ ಭೂಮಿಯೊಂದನ್ನು ಬಿಟ್ಟು ಉಳಿದೆಲ್ಲ ಧನ-ಧಾನ್ಯಗಳನ್ನು ತನ್ನ ರಾಜಧಾನಿಗೆ ತೆಗೆದುಕೊಂಡು ಬಂದನು.

12097020a ಅಗ್ನಿಹೋತ್ರಾಣ್ಯಗ್ನಿಶೇಷಂ ಹವಿರ್ಭಾಜನಮೇವ ಚ|

12097020c ಆಜಹಾರ ದಿವೋದಾಸಸ್ತತೋ ವಿಪ್ರಕೃತೋಽಭವತ್||

ದಿವೋದಾಸನೆಂಬ ರಾಜನು ತಾನು ಗೆದ್ದ ರಾಜ್ಯದಲ್ಲಿ ಅಗ್ನಿಹೋತ್ರಾಗ್ನಿಯೊಂದನ್ನುಳಿಸಿ ಹವಿಸ್ಸನ್ನೂ ಭೋಜನ ಸಾಮಗ್ರಿಗಳನ್ನೂ ತನ್ನ ದೇಶಕ್ಕೆ ತಂದನು. ಅದರಿಂದಾಗಿ ಅವನು ತಿರಸ್ಕೃತನಾದನು.

12097021a ಸರಾಜಕಾನಿ ರಾಷ್ಟ್ರಾಣಿ ನಾಭಾಗೋ ದಕ್ಷಿಣಾಂ ದದೌ|

12097021c ಅನ್ಯತ್ರ ಶ್ರೋತ್ರಿಯಸ್ವಾಚ್ಚ ತಾಪಸಸ್ವಾಚ್ಚ ಭಾರತ||

ಭಾರತ! ನಾಭಾಗನೆಂಬ ರಾಜನು ತಾನು ಗೆದ್ದ ರಾಜ್ಯದಲ್ಲಿದ್ದ ಶ್ರೋತ್ರಿಯರ ಮತ್ತು ತಪಸ್ವಿಗಳ ಸಂಪತ್ತನ್ನು ಬಿಟ್ಟು ರಾಜರೊಂದಿಗೆ ರಾಷ್ಟ್ರಗಳನ್ನು ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿತ್ತನು.

12097022a ಉಚ್ಚಾವಚಾನಿ ವೃತ್ತಾನಿ ಧರ್ಮಜ್ಞಾನಾಂ ಯುಧಿಷ್ಠಿರ|

12097022c ಆಸನ್ರಾಜ್ಞಾಂ ಪುರಾಣಾನಾಂ ಸರ್ವಂ ತನ್ಮಮ ರೋಚತೇ||

ಯುಧಿಷ್ಠಿರ! ಹಿಂದಿನ ಧರ್ಮಜ್ಞ ರಾಜರ ಬಳಿಯಲ್ಲಿದ್ದ ವಿವಿಧ ಐಶ್ವರ್ಯಗಳೆಲ್ಲವನ್ನೂ ಯುದ್ಧದ ಮೂಲಕ ಸ್ವಾಧೀನಪಡಿಸಿಕೊಳ್ಳುವ ಅಭಿಲಾಷೆಯು ನನ್ನಲ್ಲಿಯೂ ಇದ್ದಿತ್ತು.

12097023a ಸರ್ವವಿದ್ಯಾತಿರೇಕಾದ್ವಾ ಜಯಮಿಚ್ಚೇನ್ಮಹೀಪತಿಃ|

12097023c ನ ಮಾಯಯಾ ನ ದಂಭೇನ ಯ ಇಚ್ಚೇದ್ ಭೂತಿಮಾತ್ಮನಃ||

ಮಹೀಪತಿಯು ಸರ್ವವಿದ್ಯೆಗಳ ಅತಿರೇಕದ ಮೂಲಕ ಜಯವನ್ನು ಗಳಿಸಲು ಇಚ್ಛಿಸಬೇಕು. ಮೋಸ ಮತ್ತು ದಂಭದಿಂದ ತನ್ನ ಅಭಿವೃದ್ಧಿಯನ್ನು ಇಚ್ಛಿಸಬಾರದು.”  

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ಸಪ್ತನವತಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ತೊಂಭತ್ತೇಳನೇ ಅಧ್ಯಾಯವು.

Blue Dahlia Flower, White Background Isolated With Clipping Path Closeup  With No Shadows Macro Nature Wall Mural-nadya76

[1] ನ ತು ವಧ್ಯಧನಂ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಸಹಸಾನಾರ್ಯಭೂತಾನಿ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಲೋಕವಿದುಚ್ಯತೇ ಎಂಬ ಪಾಠಾಂತರವಿದೆ (ಭಾರತ ದರ್ಶನ).

Comments are closed.