Sabha Parva: Chapter 36

ಸಭಾ ಪರ್ವ: ಅರ್ಘ್ಯಾಭಿಹರಣ ಪರ್ವ

೩೬

ರಾಜರ ಮಂತ್ರಾಲೋಚನೆ

ಸಹದೇವನು ಕೋಪದಿಂದ ಶಿಶುಪಾಲನಿಗೆ ತನ್ನ ಕಾಲನ್ನು ತೋರಿಸಿದುದು (೧-೬). ಶಿಶುಪಾಲನು ಯುದ್ಧಕ್ಕೆ ಸನ್ನದ್ಧನಾದುದು (೭-೧೫).

02036001 ವೈಶಂಪಾಯನ ಉವಾಚ|

02036001a ಏವಮುಕ್ತ್ವಾ ತತೋ ಭೀಷ್ಮೋ ವಿರರಾಮ ಮಹಾಯಶಾಃ|

02036001c ವ್ಯಾಜಹಾರೋತ್ತರಂ ತತ್ರ ಸಹದೇವೋಽರ್ಥವದ್ವಚಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿದ ಮಹಾಯಶಸ್ವಿ ಭೀಷ್ಮನು ಸುಮ್ಮನಾದನು. ಅದಕ್ಕೆ ಉತ್ತರವಾಗಿ ಸಹದೇವನು ಅರ್ಥವತ್ತಾದ ಮಾತುಗಳನ್ನಾಡಿದನು:

02036002a ಕೇಶವಂ ಕೇಶಿಹಂತಾರಮಪ್ರಮೇಯಪರಾಕ್ರಮಂ|

02036002c ಪೂಜ್ಯಮಾನಂ ಮಯಾ ಯೋ ವಃ ಕೃಷ್ಣಂ ನ ಸಹತೇ ನೃಪಾಃ||

02036003a ಸರ್ವೇಷಾಂ ಬಲಿನಾಂ ಮೂರ್ಧ್ನಿ ಮಯೇದಂ ನಿಹಿತಂ ಪದಂ|

02036003c ಏವಮುಕ್ತೇ ಮಯಾ ಸಮ್ಯಗುತ್ತರಂ ಪ್ರಬ್ರವೀತು ಸಃ||

“ಅಪ್ರಮೇಯ ಪರಾಕ್ರಮಿ ಕೇಶಿಹಂತಾರ ಕೇಶವ ಕೃಷ್ಣನನ್ನು ನಾನು ಪೂಜಿಸಿದ್ದುದನ್ನು ಯಾರಿಗೆ ಸಹಿಸಲಿಕ್ಕಾಗಲಿಲ್ಲವೋ ಅವರೆಲ್ಲ ಬಲಿಗಳ ಶಿರಗಳನ್ನು ನನ್ನ ಈ ಪಾದದಿಂದ ತುಳಿಯುತ್ತೇನೆ. ನನ್ನ ಈ ಮಾತಿಗೆ ಅವನು ಸರಿಯಾದ ಉತ್ತರವನ್ನು ನೀಡಲಿ!

02036004a ಮತಿಮಂತಸ್ತು ಯೇ ಕೇ ಚಿದಾಚಾರ್ಯಂ ಪಿತರಂ ಗುರುಂ|

02036004c ಅರ್ಚ್ಯಮರ್ಚಿತಮರ್ಚಾರ್ಹಮನುಜಾನಂತು ತೇ ನೃಪಾಃ||

ಆದರೆ ಮತಿವಂತ ನೃಪರು ಅವನು ಆಚಾರ್ಯ, ಪಿತ, ಗುರು, ಅರ್ಚಿತನು, ಅರ್ಚನೆಗರ್ಹ, ಮತ್ತು ಅರ್ಚಿಸಬೇಕಾದವನು ಎಂದು ತಿಳಿದಿದ್ದಾರೆ.”

02036005a ತತೋ ನ ವ್ಯಾಜಹಾರೈಷಾಂ ಕಶ್ಚಿದ್ಬುದ್ಧಿಮತಾಂ ಸತಾಂ|

02036005c ಮಾನಿನಾಂ ಬಲಿನಾಂ ರಾಜ್ಞಾಂ ಮಧ್ಯೇ ಸಂದರ್ಶಿತೇ ಪದೇ||

ಹೀಗೆ ಅವನು ತನ್ನ ಪಾದವನ್ನು ತೋರಿಸಿದಾಗ ಅಲ್ಲಿದ್ದ ಬುದ್ಧಿವಂತ, ಸಂತ, ಗೌರವಾನ್ವಿತ, ಬಲಶಾಲಿ ರಾಜರು ಯಾರೂ ಮಾತನಾಡಲಿಲ್ಲ.

02036006a ತತೋಽಪತತ್ಪುಷ್ಪವೃಷ್ಟಿಃ ಸಹದೇವಸ್ಯ ಮೂರ್ಧನಿ|

02036006c ಅದೃಶ್ಯರೂಪಾ ವಾಚಶ್ಚಾಪ್ಯಬ್ರುವನ್ಸಾಧು ಸಾಧ್ವಿತಿ||

ಆಗ ಸಹದೇವನ ತಲೆಯಮೇಲೆ ಪುಷ್ಪವೃಷ್ಠಿಯು ಬಿದ್ದಿತು ಮತ್ತು “ಸಾಧು! ಸಾಧು!” ಎಂಬ ಅದೃಶ್ಯ ರೂಪೀ ಮಾತುಗಳು ಕೇಳಿಬಂದವು.

02036007a ಆವಿಧ್ಯದಜಿನಂ ಕೃಷ್ಣಂ ಭವಿಷ್ಯದ್ಭೂತಜಲ್ಪಕಃ|

02036007c ಸರ್ವಸಂಶಯನಿರ್ಮೋಕ್ತಾ ನಾರದಃ ಸರ್ವಲೋಕವಿತ್||

ಆಗ ಭೂತಭವಿಷ್ಯಗಳನ್ನು ತಿಳಿದಿರುವ, ಸರ್ವಸಂಶಯ ನಿರ್ಮೋಕ್ತ, ಸರ್ವಲೋಕವಿದು ನಾರದನು ತನ್ನ ಕೃಷ್ಣಾಜಿನವನ್ನು ಮುಟ್ಟಿದನು.

02036008a ತತ್ರಾಹೂತಾಗತಾಃ ಸರ್ವೇ ಸುನೀಥಪ್ರಮುಖಾ ಗಣಾಃ|

02036008c ಸಂಪ್ರಾದೃಶ್ಯಂತ ಸಂಕ್ರುದ್ಧಾ ವಿವರ್ಣವದನಾಸ್ತಥಾ||

ಸುನೀಥ[1]ನ ನಾಯಕತ್ವದಲ್ಲಿ ಆಗಮಿಸಿದ್ದ ಅತಿಥಿ ಗಣಗಳಲ್ಲಿದ್ದ ಎಲ್ಲರೂ ಸಂಕೃದ್ಧರಾಗಿ ವಿವರ್ಣವದನರಾಗಿ ಕಂಡು ಬಂದರು.

02036009a ಯುಧಿಷ್ಠಿರಾಭಿಷೇಕಂ ಚ ವಾಸುದೇವಸ್ಯ ಚಾರ್ಹಣಂ|

02036009c ಅಬ್ರುವಂಸ್ತತ್ರ ರಾಜಾನೋ ನಿರ್ವೇದಾದಾತ್ಮನಿಶ್ಚಯಾತ್||

ಯುಧಿಷ್ಠಿರನ ಅಭಿಷೇಕ ಮತ್ತು ವಾಸುದೇವನಿಗಿತ್ತ ಪೂಜೆಯ ಕುರಿತು ಇವಕ್ಕೆಲ್ಲ ತಾವೇ ಅರ್ಹರಾಗಿದ್ದರೆಂದು ತಿಳಿದ ರಾಜರು ಮಾತನಾಡಿಕೊಂಡರು.

02036010a ಸುಹೃದ್ಭಿರ್ವಾರ್ಯಮಾಣಾನಾಂ ತೇಷಾಂ ಹಿ ವಪುರಾಬಭೌ|

02036010c ಆಮಿಷಾದಪಕೃಷ್ಟಾನಾಂ ಸಿಂಹಾನಾಮಿವ ಗರ್ಜತಾಂ||

ಮಿತ್ರರು ಅವರನ್ನು ತಡೆಯಲು ಹಸಿಮಾಂಸದ ತುಂಡಿನಿಂದ ದೂರಕ್ಕೆ ಎಳೆಯಲ್ಪಡುತ್ತಿರುವ ಸಿಂಹಗಳು ಗರ್ಜಿಸುವಂತೆ ಕಂಡುಬರುತ್ತಿದ್ದರು.

02036011a ತಂ ಬಲೌಘಮಪರ್ಯಂತಂ ರಾಜಸಾಗರಮಕ್ಷಯಂ|

02036011c ಕುರ್ವಾಣಂ ಸಮಯಂ ಕೃಷ್ಣೋ ಯುದ್ಧಾಯ ಬುಬುಧೇ ತದಾ||

ಆಗ ಆ ಅಕ್ಷಯ ರಾಜಸಾಗರವು ತಮ್ಮ ಸೇನೆಗಳನ್ನು ಒಟ್ಟುಮಾಡಿಕೊಂಡು ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎನ್ನುವುದನ್ನು ಕೃಷ್ಣನು ಅರ್ಥಮಾಡಿಕೊಂಡನು.

02036012a ಪೂಜಯಿತ್ವಾ ತು ಪೂಜಾರ್ಹಂ ಬ್ರಹ್ಮಕ್ಷತ್ರಂ ವಿಶೇಷತಃ|

02036012c ಸಹದೇವೋ ನೃಣಾಂ ದೇವಃ ಸಮಾಪಯತ ಕರ್ಮ ತತ್||

ಮನುಷ್ಯರಲ್ಲಿ ದೇವನಂತಿದ್ದ ಸಹದೇವನು ಪೂಜಾರ್ಹ ಬ್ರಾಹ್ಮಣ-ಕ್ಷತ್ರಿಯರನ್ನು ವಿಶೇಷವಾಗಿ ಪೂಜಿಸಿ ಆ ಕರ್ಮವನ್ನು ಪೂರೈಸಿದನು.

02036013a ತಸ್ಮಿನ್ನಭ್ಯರ್ಚಿತೇ ಕೃಷ್ಣೇ ಸುನೀಥಃ ಶತ್ರುಕರ್ಷಣಃ|

02036013c ಅತಿತಾಮ್ರೇಕ್ಷಣಃ ಕೋಪಾದುವಾಚ ಮನುಜಾಧಿಪಾನ್||

ಕೃಷ್ಣನನ್ನು ಅರ್ಚಿಸಿದ ನಂತರ ಶತ್ರುಕರ್ಷಣ ಸುನೀಥನು ಕೋಪದಿಂದ ತನ್ನ ಕಣ್ಣುಗಳನ್ನು ಅತೀವ ಕೆಂಪಾಗಿಸಿಕೊಂಡು ಮನುಜಾಧಿಪರನ್ನುದ್ದೇಶಿಸಿ ಹೇಳಿದನು:

02036014a ಸ್ಥಿತಃ ಸೇನಾಪತಿರ್ವೋಽಹಂ ಮನ್ಯಧ್ವಂ ಕಿಂ ನು ಸಾಂಪ್ರತಂ|

02036014c ಯುಧಿ ತಿಷ್ಠಾಮ ಸಮ್ನಹ್ಯ ಸಮೇತಾನ್ವೃಷ್ಣಿಪಾಂಡವಾನ್||

“ನಾನು ನಿಮ್ಮ ಸೇನಾಪತಿಯಾಗಿ ನಿಂತಿದ್ದೇನೆ. ನಿಮಗೆಲ್ಲರಿಗೂ ಸ್ವೀಕಾರವಿದೆ ತಾನೆ? ಇಲ್ಲಿ ಒಂದಾಗಿರುವ ವೃಷ್ಣಿ ಪಾಂಡವರೊಂದಿಗೆ ಯುದ್ಧಕ್ಕೆ ಸನ್ನದ್ಧನಾಗಿ ನಿಂತಿದ್ದೇನೆ.”

02036015a ಇತಿ ಸರ್ವಾನ್ಸಮುತ್ಸಾಹ್ಯ ರಾಜ್ಞಸ್ತಾಂಶ್ಚೇದಿಪುಂಗವಃ|

02036015c ಯಜ್ಞೋಪಘಾತಾಯ ತತಃ ಸೋಽಮಂತ್ರಯತ ರಾಜಭಿಃ||

ಹೀಗೆ ರಾಜರೆಲ್ಲರೂ ಉತ್ಸಾಹದಿಂದ ಮೇಲೇಳಲು, ಚೇದಿಪುಂಗವನು ರಾಜರೊಂದಿಗೆ ಈ ಯಜ್ಞವನ್ನು ಭಂಗಪಡಿಸುವ ಕುರಿತು ಯೋಚಿಸಿದನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ರಾಜಮಂತ್ರಣೇ ಷಟ್‌ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ರಾಜಮಂತ್ರಣ ಎನ್ನುವ ಮೂವತ್ತಾರನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘ್ಯಾಭಿಹರಣಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘ್ಯಾಭಿಹರಣಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೫/೧೦೦, ಅಧ್ಯಾಯಗಳು-೨೬೧/೧೯೯೫, ಶ್ಲೋಕಗಳು-೮೪೨೩/೭೩೭೮೪

Related image

[1] ಶಿಶುಪಾಲ

Comments are closed.