Sabha Parva: Chapter 35

ಸಭಾ ಪರ್ವ: ಅರ್ಘ್ಯಾಭಿಹರಣ ಪರ್ವ

೩೫

ಭೀಷ್ಮನಿಂದ ಶ್ರೀಕೃಷ್ಣನ ಅರ್ಹತೆಯ ಪ್ರತಿಪಾದನೆ

ಯುಧಿಷ್ಠಿರನು ಶಿಶುಪಾಲನನ್ನು ತಡೆಯುವುದು (೧-೫). ಭೀಷ್ಮನು ಕೃಷ್ಣನ ಗಣ್ಯತೆಯನ್ನು ಪ್ರತಿಪಾದಿಸುವುದು (೬-೨೯).

02035001 ವೈಶಂಪಾಯನ ಉವಾಚ|

02035001a ತತೋ ಯುಧಿಷ್ಠಿರೋ ರಾಜಾ ಶಿಶುಪಾಲಮುಪಾದ್ರವತ್|

02035001c ಉವಾಚ ಚೈನಂ ಮಧುರಂ ಸಾಂತ್ವಪೂರ್ವಮಿದಂ ವಚಃ||

ವೈಶಂಪಾಯನನು ಹೇಳಿದನು: “ಆಗ ರಾಜಾ ಯುಧಿಷ್ಠಿರನು ಶಿಶುಪಾಲನಲ್ಲಿಗೆ ಧಾವಿಸಿ ಈ ಮಧುರ ಸಾಂತ್ವನ ಪೂರ್ವಕ ಮಾತುಗಳನ್ನು ಹೇಳಿದನು:

02035002a ನೇದಂ ಯುಕ್ತಂ ಮಹೀಪಾಲ ಯಾದೃಶಂ ವೈ ತ್ವಮುಕ್ತವಾನ್|

02035002c ಅಧರ್ಮಶ್ಚ ಪರೋ ರಾಜನ್ಪಾರುಷ್ಯಂ ಚ ನಿರರ್ಥಕಂ||

“ಮಹೀಪಾಲ! ನೀನು ಹೀಗೆ ಮಾತನಾಡುವುದು ಸರಿಯಲ್ಲ. ರಾಜನ್! ಹೀಗೆ ಮಾತನಾಡುವುದು ಅತಿ ದೊಡ್ಡ ಅಧರ್ಮ, ನಿರರ್ಥಕ ಕೊಚ್ಚಿಕೊಳ್ಳುವ ಮಾತುಗಳು.

02035003a ನ ಹಿ ಧರ್ಮಂ ಪರಂ ಜಾತು ನಾವಬುಧ್ಯೇತ ಪಾರ್ಥಿವ|

02035003c ಭೀಷ್ಮಃ ಶಾಂತನವಸ್ತ್ವೇನಂ ಮಾವಮಂಸ್ಥಾ ಅತೋಽನ್ಯಥಾ||

ಪಾರ್ಥಿವ! ಭೀಷ್ಮ ಶಾಂತನವನು ಎಂದೂ ಪರಮ ಧರ್ಮವನ್ನು ತಪ್ಪು ತಿಳಿಯಲಾರ. ಆದುದರಿಂದ ಸುಮ್ಮನೇ ಅವನನ್ನು ತೆಗಳಬೇಡ.

02035004a ಪಶ್ಯ ಚೇಮಾನ್ಮಹೀಪಾಲಾಂಸ್ತ್ವತ್ತೋ ವೃದ್ಧತಮಾನ್ಬಹೂನ್|

02035004c ಮೃಷ್ಯಂತೇ ಚಾರ್ಹಣಾಂ ಕೃಷ್ಣೇ ತದ್ವತ್ತ್ವಂ ಕ್ಷಂತುಮರ್ಹಸಿ||

ನಿನಗಿಂತಲೂ ಹಿರಿಯರಾದ ಬಹಳಷ್ಟು ಮಹೀಪಾಲರಿದ್ದಾರೆ ನೋಡು. ಅವರೆಲ್ಲರೂ ಕೃಷ್ಣನ ಪೂಜೆಗೆ ಅನುಮತಿಯನ್ನಿತ್ತಿದ್ದಾರೆ. ನೀನೂ ಕೂಡ ಅವರಂತೆ ಇದನ್ನು ಸಹಿಸಬೇಕು.

02035005a ವೇದ ತತ್ತ್ವೇನ ಕೃಷ್ಣಂ ಹಿ ಭೀಷ್ಮಶ್ಚೇದಿಪತೇ ಭೃಶಂ|

02035005c ನ ಹ್ಯೇನಂ ತ್ವಂ ತಥಾ ವೇತ್ಥ ಯಥೈನಂ ವೇದ ಕೌರವಃ||

ಚೇದಿಪತೇ! ಭೀಷ್ಮನು ನಿಜವಾಗಿಯೂ ಮತ್ತು ಸಂಪೂರ್ಣವಾಗಿ ಕೃಷ್ಣನನ್ನು ತಿಳಿದಿದ್ದಾನೆ. ಅವನ ಕುರಿತು ಈ ಕೌರವನಿಗೆ ತಿಳಿದಷ್ಟು ನಿನಗೆ ತಿಳಿದಿಲ್ಲ.”

02035006 ಭೀಷ್ಮ ಉವಾಚ|

02035006a ನಾಸ್ಮಾ ಅನುನಯೋ ದೇಯೋ ನಾಯಮರ್ಹತಿ ಸಾಂತ್ವನಂ|

02035006c ಲೋಕವೃದ್ಧತಮೇ ಕೃಷ್ಣೇ ಯೋಽರ್ಹಣಾಂ ನಾನುಮನ್ಯತೇ||

ಭೀಷ್ಮನು ಹೇಳಿದನು: “ಲೋಕದಲ್ಲಿ ಎಲ್ಲರಿಗಿಂಥಲೂ ಹಿರಿಯನಾದ ಕೃಷ್ಣನಿಗೆ ಗೌರವಿಸುವುದನ್ನು ತಿರಸ್ಕರಿಸುವವನಿಗೆ ಯಾವುದೇ ರೀತಿಯ ಸಭ್ಯತೆಯನ್ನು ತೋರಿಸಬಾರದು ಮತ್ತು ಅಂಥವನು ಸಾಂತ್ವನಕ್ಕೆ ಅರ್ಹನಲ್ಲ.

02035007a ಕ್ಷತ್ರಿಯಃ ಕ್ಷತ್ರಿಯಂ ಜಿತ್ವಾ ರಣೇ ರಣಕೃತಾಂ ವರಃ|

02035007c ಯೋ ಮುಂಚತಿ ವಶೇ ಕೃತ್ವಾ ಗುರುರ್ಭವತಿ ತಸ್ಯ ಸಃ||

ಕ್ಷತ್ರಿಯನನ್ನು ಗೆದ್ದು ಅವನನ್ನು ಸೆರೆಹಿಡಿದು ನಂತರ ಬಿಡುಗಡೆ ಮಾಡುವ ರಣಶ್ರೇಷ್ಠ ಕ್ಷತ್ರಿಯನು ಅವನಿಗೆ ಗುರುವೆನಿಸಿಕೊಳ್ಳುತ್ತಾನೆ.

02035008a ಅಸ್ಯಾಂ ಚ ಸಮಿತೌ ರಾಜ್ಞಾಮೇಕಮಪ್ಯಜಿತಂ ಯುಧಿ|

02035008c ನ ಪಶ್ಯಾಮಿ ಮಹೀಪಾಲಂ ಸಾತ್ವತೀಪುತ್ರತೇಜಸಾ||

ಈ ಸಾತ್ವತೀ ಪುತ್ರನ ತೇಜಸ್ಸಿನಿಂದ ಯುದ್ಧದಲ್ಲಿ ಸೋಲದೇ ಇದ್ದ ಯಾವ ಮಹೀಪಾಲನನ್ನೂ ನಾನು ಇಲ್ಲಿ ನೆರೆದಿರುವ ರಾಜರಲ್ಲಿ ನೋಡಿಲ್ಲ.

02035009a ನ ಹಿ ಕೇವಲಮಸ್ಮಾಕಮಯಮರ್ಚ್ಯತಮೋಽಚ್ಯುತಃ|

02035009c ತ್ರಯಾಣಾಮಪಿ ಲೋಕಾನಾಮರ್ಚನೀಯೋ ಜನಾರ್ದನಃ||

ಅಚ್ಯುತನು ಕೇವಲ ನಮ್ಮಿಂದ ಮಾತ್ರ ಪೂಜಾರ್ಹನಲ್ಲ.  ಜನಾರ್ದನನು ಮೂರು ಲೋಕಗಳಿಂದಲೂ ಅರ್ಚನೀಯ.

02035010a ಕೃಷ್ಣೇನ ಹಿ ಜಿತಾ ಯುದ್ಧೇ ಬಹವಃ ಕ್ಷತ್ರಿಯರ್ಷಭಾಃ|

02035010c ಜಗತ್ಸರ್ವಂ ಚ ವಾರ್ಷ್ಣೇಯೇ ನಿಖಿಲೇನ ಪ್ರತಿಷ್ಠಿತಂ||

ಬಹಳಷ್ಟು ಕ್ಷತ್ರಿಯರ್ಷಭರು ಯುದ್ಧದಲ್ಲಿ ಕೃಷ್ಣನಿಂದ ಪರಾಜಯಗೊಂಡಿದ್ದಾರೆ. ಸರ್ವ ಜಗತ್ತೂ ಒಂದಾಗಿ ವಾರ್ಷ್ಣೇಯನನ್ನೇ ಆಧರಿಸಿದೆ.

02035011a ತಸ್ಮಾತ್ಸತ್ಸ್ವಪಿ ವೃದ್ಧೇಷು ಕೃಷ್ಣಮರ್ಚಾಮ ನೇತರಾನ್|

02035011c ಏವಂ ವಕ್ತುಂ ನ ಚಾರ್ಹಸ್ತ್ವಂ ಮಾ ಭೂತ್ತೇ ಬುದ್ಧಿರೀದೃಶೀ||

ಆದುದರಿಂದ ವೃದ್ಧರ ಸಮಕ್ಷಮದಲ್ಲಿಯೂ ಕೃಷ್ಣನನ್ನೇ ಅರ್ಚಿಸುತ್ತೇವೆ. ಬೇರೆ ಯಾರನ್ನೂ ಅಲ್ಲ. ಈ ರೀತಿ ಮಾತನಾಡಲು ನೀನು ಅರ್ಹನಲ್ಲ. ಈ ರೀತಿಯ ಯೋಚನೆಯನ್ನು ತೆಗೆದುಹಾಕು!

02035012a ಜ್ಞಾನವೃದ್ಧಾ ಮಯಾ ರಾಜನ್ಬಹವಃ ಪರ್ಯುಪಾಸಿತಾಃ|

02035012c ತೇಷಾಂ ಕಥಯತಾಂ ಶೌರೇರಹಂ ಗುಣವತೋ ಗುಣಾನ್|

02035012e ಸಮಾಗತಾನಾಮಶ್ರೌಷಂ ಬಹೂನ್ಬಹುಮತಾನ್ಸತಾಂ||

ರಾಜನ್! ನಾನು ಬಹಳಷ್ಟು ಜ್ಞಾನ ವೃದ್ಧರ ಸೇವೆ ಮಾಡಿದ್ದೇನೆ. ಅವರೇ ಹೇಳಿದಂತೆ ಈ ಶೌರಿಯು ಸಂತರ ಬಹುಮತದಲ್ಲಿ ಯಾವ ಗುಣಗಳು ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತವೆಯೋ ಆ ಎಲ್ಲ ಗುಣಗಳು ಸಮಾಗತವಾಗಿರುವ ಗುಣವಂತನು.

02035013a ಕರ್ಮಾಣ್ಯಪಿ ಚ ಯಾನ್ಯಸ್ಯ ಜನ್ಮಪ್ರಭೃತಿ ಧೀಮತಃ|

02035013c ಬಹುಶಃ ಕಥ್ಯಮಾನಾನಿ ನರೈರ್ಭೂಯಃ ಶ್ರುತಾನಿ ಮೇ||

ಎಷ್ಟೋ ಬಾರಿ ಮತ್ತು ಬಹಳಷ್ಟು ರೀತಿಗಳಲ್ಲಿ ಜನರು ಈ ಧೀಮಂತನು ಜನ್ಮಪ್ರಭೃತಿ ಮಾಡಿದ ಕಾರ್ಯಗಳ ಬಗ್ಗೆ ಹೇಳಿದ್ದುದನ್ನು ಕೇಳಿದ್ದೇನೆ.

02035014a ನ ಕೇವಲಂ ವಯಂ ಕಾಮಾಚ್ಚೇದಿರಾಜ ಜನಾರ್ದನಂ|

02035014c ನ ಸಂಬಂಧಂ ಪುರಸ್ಕೃತ್ಯ ಕೃತಾರ್ಥಂ ವಾ ಕಥಂ ಚನ||

02035015a ಅರ್ಚಾಮಹೇಽರ್ಚಿತಂ ಸದ್ಭಿರ್ಭುವಿ ಭೌಮಸುಖಾವಹಂ|

02035015c ಯಶಃ ಶೌರ್ಯಂ ಜಯಂ ಚಾಸ್ಯ ವಿಜ್ಞಾಯಾರ್ಚಾಂ ಪ್ರಯುಜ್ಮಹೇ||

ಚೇದಿರಾಜ! ಕೇವಲ ಅವನಿಗಿಷ್ಟವಾದುದನ್ನು ಮಾಡಲೆಂದಾಗಲೀ ಅಥವಾ ಅವನೊಡನೆ ನಮಗಿರುವ ಸಂಬಂಧದಿಂದಾಗಲೀ, ಅಥವಾ ಅವನಿಂದ ನಮಗೆ ಏನೋ ಲಾಭ ದೊರೆಯಬೇಕೆಂದಾಗಲೀ ನಾವು ಜನಾರ್ದನನನ್ನು ಪುರಸ್ಕರಿಸಲಿಲ್ಲ. ಭೂಮಿಯ ಸದ್ಭಾವರಿಂದ ಪೂಜಿತನಾದ ಭೂಮಿಯ ಸುಖವೆಲ್ಲವನ್ನೂ ನೀಡಬಲ್ಲ ಇವನನ್ನು ನಾವು ಅವನ ಯಶಸ್ಸು, ಶೌರ್ಯ, ಮತ್ತು ವಿಜಯಗಳನ್ನು ತಿಳಿದೇ ಪೂಜಿಸಿದ್ದೇವೆ.

02035016a ನ ಹಿ ಕಶ್ಚಿದಿಹಾಸ್ಮಾಭಿಃ ಸುಬಾಲೋಽಪ್ಯಪರೀಕ್ಷಿತಃ|

02035016c ಗುಣೈರ್ವೃದ್ಧಾನತಿಕ್ರಮ್ಯ ಹರಿರರ್ಚ್ಛತಮೋ ಮತಃ||

ಎಷ್ಟೇ ಸಣ್ಣವರಿರಲಿ ಯಾರನ್ನೂ ಬಿಡದೇ ಎಲ್ಲರನ್ನೂ ಪರಿಶೀಲಿಸಿದ್ದೇವೆ ಮತ್ತು ಗುಣಗಳಲ್ಲಿ ವೃದ್ಧರಾದವರಲ್ಲಿ ಹರಿಯೇ ಅರ್ಚನೆಗೆ ಅರ್ಹನೆಂದು ನಮ್ಮ ಮತ.

02035017a ಜ್ಞಾನವೃದ್ಧೋ ದ್ವಿಜಾತೀನಾಂ ಕ್ಷತ್ರಿಯಾಣಾಂ ಬಲಾಧಿಕಃ|

02035017c ಪೂಜ್ಯೇ ತಾವಿಹ ಗೋವಿಂದೇ ಹೇತೂ ದ್ವಾವಪಿ ಸಂಸ್ಥಿತೌ||

ದ್ವಿಜರಲ್ಲಿ ಇವನೇ ಜ್ಞಾನವೃದ್ಧ. ಕ್ಷತ್ರಿಯರಲ್ಲಿ ಅಧಿಕ ಬಲವುಳ್ಳವನು ಇವನು. ಇವೆರಡೂ ಪೂಜಾರ್ಹ ಗುಣಗಳು ಗೋವಿಂದನಲ್ಲಿವೆ.

02035018a ವೇದವೇದಾಂಗವಿಜ್ಞಾನಂ ಬಲಂ ಚಾಪ್ಯಮಿತಂ ತಥಾ|

02035018c ನೃಣಾಂ ಹಿ ಲೋಕೇ ಕಸ್ಯಾಸ್ತಿ ವಿಶಿಷ್ಟಂ ಕೇಶವಾದೃತೇ||

ವೇದವೇದಾಂಗ ವಿಜ್ಞಾನವನ್ನೂ ಮತ್ತು ಅಪ್ಯಮಿತ ಬಲವನ್ನು ಈ ಲೋಕದ ಯಾವ ಮನುಷ್ಯನು ತಾನೇ ಕೇಶವನಷ್ಟು ವಿಶಿಷ್ಟವಾಗಿ ಹೊಂದಿದ್ದಾನೆ?

02035019a ದಾನಂ ದಾಕ್ಷ್ಯಂ ಶ್ರುತಂ ಶೌರ್ಯಂ ಹ್ರೀಃ ಕೀರ್ತಿರ್ಬುದ್ಧಿರುತ್ತಮಾ|

02035019c ಸನ್ನತಿಃ ಶ್ರೀರ್ಧೃತಿಸ್ತುಷ್ಟಿಃ ಪುಷ್ಟಿಶ್ಚ ನಿಯತಾಚ್ಯುತೇ||

ದಾನ, ದಾಕ್ಷ್ಯ, ಶಿಕ್ಷಣ, ಶೌರ್ಯ, ವಿನಯತೆ, ಕೀರ್ತಿ, ಉತ್ತಮ ಬುದ್ಧಿ, ಸನ್ನತಿ, ಶ್ರೀ, ಧೃತಿ, ತುಷ್ಟಿ, ಮತ್ತು ಪುಷ್ಟಿಗಳು ನಿರಂತರವಾಗಿ ಅಚ್ಯುತನಲ್ಲಿವೆ.

02035020a ತಮಿಮಂ ಸರ್ವಸಂಪನ್ನಮಾಚಾರ್ಯಂ ಪಿತರಂ ಗುರುಂ|

02035020c ಅರ್ಚ್ಯಮರ್ಚಿತಮರ್ಚಾರ್ಹಂ ಸರ್ವೇ ಸಮ್ಮಂತುಮರ್ಹಥ||

ಆದುದರಿಂದ ಈ ಸರ್ವಸಂಪನ್ನ, ಆಚಾರ್ಯ, ತಂದೆ, ಗುರು, ಅರ್ಚನಾರ್ಹ ಮತ್ತು ಅರ್ಚಿತನನ್ನು ಅರ್ಚಿಸಬೇಕು ಎನ್ನುವುದಕ್ಕೆ ನೀವೆಲ್ಲರೂ ಸಮ್ಮತಿಯನ್ನು ನೀಡಬೇಕು.

02035021a ಋತ್ವಿಗ್ಗುರುರ್ವಿವಾಹ್ಯಶ್ಚ ಸ್ನಾತಕೋ ನೃಪತಿಃ ಪ್ರಿಯಃ|

02035021c ಸರ್ವಮೇತದ್ಧೃಷೀಕೇಶೇ ತಸ್ಮಾದಭ್ಯರ್ಚಿತೋಽಚ್ಯುತಃ||

ಋತ್ವಿಗ, ಗುರು, ವಿವಾಹಕ್ಕೆ ಯೋಗ್ಯ, ಸ್ನಾತಕ, ನೃಪತಿ, ಪ್ರಿಯಕರ ಇವರೆಲ್ಲರೂ ಹೃಷೀಕೇಶನಲ್ಲಿಯೇ ಇವೆ. ಆದುದರಿಂದ ಅಚ್ಯುತನನ್ನು ಅರ್ಚಿಸಬೇಕು.

02035022a ಕೃಷ್ಣ ಏವ ಹಿ ಲೋಕಾನಾಮುತ್ಪತ್ತಿರಪಿ ಚಾಪ್ಯಯಃ|

02035022c ಕೃಷ್ಣಸ್ಯ ಹಿ ಕೃತೇ ಭೂತಮಿದಂ ವಿಶ್ವಂ ಸಮರ್ಪಿತಂ||

ಲೋಕಗಳ ಉತ್ಪತ್ತಿ ಮತ್ತು ಲಯಗಳಿಗೆ ಕೃಷ್ಣನೇ ಕಾರಣ. ಈ ವಿಶ್ವ ಮತ್ತು ಅದರಲ್ಲಿರುವವು ಕೃಷ್ಣನಿಗೆ ಸಮರ್ಪಿತವೆಂದೇ ಸೃಷ್ಠಿಸಲ್ಪಟ್ಟಿವೆ.

02035023a ಏಷ ಪ್ರಕೃತಿರವ್ಯಕ್ತಾ ಕರ್ತಾ ಚೈವ ಸನಾತನಃ|

02035023c ಪರಶ್ಚ ಸರ್ವಭೂತೇಭ್ಯಸ್ತಸ್ಮಾದ್ವೃದ್ಧತಮೋಽಚ್ಯುತಃ||

ಇವನೇ ಈ ಪ್ರಕೃತಿಯ ಅವ್ಯಕ್ತ ಮತ್ತು ಸನಾತನ ಕರ್ತ, ಆದುದರಿಂದ ಅಚ್ಯುತನು ಸರ್ವ ಭೂತಗಳಿಗೂ ಹಿರಿಯವನು ಮತ್ತು ವೃದ್ಧನು.

02035024a ಬುದ್ಧಿರ್ಮನೋ ಮಹಾನ್ವಾಯುಸ್ತೇಜೋಽಂಭಃ ಖಂ ಮಹೀ ಚ ಯಾ|

02035024c ಚತುರ್ವಿಧಂ ಚ ಯದ್ಭೂತಂ ಸರ್ವಂ ಕೃಷ್ಣೇ ಪ್ರತಿಷ್ಠಿತಂ||

ಬುದ್ಧಿ, ಮನಸ್ಸು, ಮಹಾನ್ ವಾಯು, ತೇಜಸ್ಸು, ನೀರು, ಆಕಾಶ, ಮಹಿ ಮತ್ತು ಚತುರ್ವಿಧ ಭೂತಗಳಲ್ಲೆವೂ ಕೃಷ್ಣನಲ್ಲಿಯೇ ಇವೆ.

02035025a ಆದಿತ್ಯಶ್ಚಂದ್ರಮಾಶ್ಚೈವ ನಕ್ಷತ್ರಾಣಿ ಗ್ರಹಾಶ್ಚ ಯೇ|

02035025c ದಿಶಶ್ಚೋಪದಿಶಶ್ಚೈವ ಸರ್ವಂ ಕೃಷ್ಣೇ ಪ್ರತಿಷ್ಠಿತಂ||

ಆದಿತ್ಯ, ಚಂದ್ರಮ, ನಕ್ಷತ್ರಗಳು, ಗ್ರಹಗಳು, ದಿಕ್ಕುಗಳು, ಉಪದಿಕ್ಕುಗಳು ಎಲ್ಲವೂ ಕೃಷ್ಣನಲ್ಲಿಯೇ ಇವೆ[1].

02035026a ಅಯಂ ತು ಪುರುಷೋ ಬಾಲಃ ಶಿಶುಪಾಲೋ ನ ಬುಧ್ಯತೇ|

02035026c ಸರ್ವತ್ರ ಸರ್ವದಾ ಕೃಷ್ಣಂ ತಸ್ಮಾದೇವಂ ಪ್ರಭಾಷತೇ||

ಈ ಶಿಶುಪಾಲನು ಕೃಷ್ಣನು ಎಲ್ಲೆಲ್ಲಿಯೂ ಎಲ್ಲ ಕಾಲದಲ್ಲಿಯು ಇರುವವನೆಂದು ತಿಳಿಯದ ದಡ್ಡ ಪುರುಷ. ಆದುದರಿಂದಲೇ ಅವನು ಹೀಗೆ ಮಾತನಾಡುತ್ತಿದ್ದಾನೆ.

02035027a ಯೋ ಹಿ ಧರ್ಮಂ ವಿಚಿನುಯಾದುತ್ಕೃಷ್ಟಂ ಮತಿಮಾನ್ನರಃ|

02035027c ಸ ವೈ ಪಶ್ಯೇದ್ಯಥಾಧರ್ಮಂ ನ ತಥಾ ಚೇದಿರಾಡಯಂ||

ಯಾಕೆಂದರೆ ಧರ್ಮನಿಷ್ಠ ಮತಿವಂತ ಮನುಷ್ಯರು ಮಾತ್ರ ಧರ್ಮವೇನೆಂದು ತಿಳಿಯಬಲ್ಲರು. ಈ ಚೇದಿರಾಜನು ಅಂಥವನಲ್ಲ.

02035028a ಸವೃದ್ಧಬಾಲೇಷ್ವಥ ವಾ ಪಾರ್ಥಿವೇಷು ಮಹಾತ್ಮಸು|

02035028c ಕೋ ನಾರ್ಹಂ ಮನ್ಯತೇ ಕೃಷ್ಣಂ ಕೋ ವಾಪ್ಯೇನಂ ನ ಪೂಜಯೇತ್||

ಇಲ್ಲಿರುವ ಯಾವ ಮಹಾತ್ಮ ವೃದ್ಧ ಅಥವಾ ಬಾಲಕ ಪಾರ್ಥಿವನು ಕೃಷ್ಣನು ಪೂಜೆಗರ್ಹನೆಂದು ಒಪ್ಪಿಕೊಳ್ಳುವುದಿಲ್ಲ? ಅಥವಾ ಯಾರು ತಾನೆ ಅವನನ್ನು ಪೂಜಿಸುವುದಿಲ್ಲ?

02035029a ಅಥೇಮಾಂ ದುಷ್ಕೃತಾಂ ಪೂಜಾಂ ಶಿಶುಪಾಲೋ ವ್ಯವಸ್ಯತಿ|

02035029c ದುಷ್ಕೃತಾಯಾಂ ಯಥಾನ್ಯಾಯಂ ತಥಾಯಂ ಕರ್ತುಮರ್ಹತಿ||

ಈ ಪೂಜೆಯು ದುಷ್ಕೃತವೆಂದು ಶಿಶುಪಾಲನು ತಿಳಿದರೆ, ದುಷ್ಕೃತಗಳಿಗೆ ಹೇಗೆ ಪ್ರತಿಕ್ರಯಿಸಬೇಕೋ ಹಾಗೆಯೇ ಮಾಡಲಿ!””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ಭೀಷ್ಮವಾಕ್ಯೇ ಪಂಚಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ಭೀಷ್ಮವಾಕ್ಯ ಎನ್ನುವ ಮೂವತ್ತೈದನೆಯ ಅಧ್ಯಾಯವು.

Related image

[1]ದಕ್ಷಿಣಾತ್ಯ ಕುಂಭಕೋಣ ಸಂಪುಟದಲ್ಲಿ ಭೀಷ್ಮನು ಶ್ರೀಕೃಷ್ಣನ ದೇವತ್ವವನ್ನು ಪ್ರತಿಪಾದಿಸಿದುದರ ಕುರಿತಾದ ಸುಮಾರು ೭೦೦ ಶ್ಲೋಕಗಳಿವೆ. ಇವುಗಳನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ.

Comments are closed.