Sabha Parva: Chapter 34

ಸಭಾ ಪರ್ವ: ಅರ್ಘ್ಯಾಭಿಹರಣ ಪರ್ವ

೩೪

ಶ್ರೀಕೃಷ್ಣನಿಗೆ ಅರ್ಘ್ಯವನ್ನಿತ್ತುದ್ದಕ್ಕೆ ಶಿಶುಪಾಲನ ಆಕ್ಷೇಪ

ಶಿಶುಪಾಲನು ಆಕ್ಷೇಪಿಸಿ, ಸಭೆಯನ್ನು ತ್ಯಜಿಸಿ ಹೊರಹೋದುದು (೧-೨೩).

02034001 ಶಿಶುಪಾಲ ಉವಾಚ|

02034001a ನಾಯಮರ್ಹತಿ ವಾರ್ಷ್ಣೇಯಸ್ತಿಷ್ಠತ್ಸ್ವಿಹ ಮಹಾತ್ಮಸು|

02034001c ಮಹೀಪತಿಷು ಕೌರವ್ಯ ರಾಜವತ್ಪಾರ್ಥಿವಾರ್ಹಣಂ||

ಶಿಶುಪಾಲನು ಹೇಳಿದನು: “ಕೌರವ್ಯ! ಮಹಾತ್ಮ ಮಹೀಪತಿಗಳು ಇಲ್ಲಿರವಾಗ ಪಾರ್ಥಿವನಿಗೆ ಸಲ್ಲಬೇಕಾದ ರಾಜ ಗೌರವಕ್ಕೆ ರಾಜನಲ್ಲದ ವಾರ್ಷ್ಣೇಯನು[1] ಅರ್ಹನಲ್ಲ.

02034002a ನಾಯಂ ಯುಕ್ತಃ ಸಮಾಚಾರಃ ಪಾಂಡವೇಷು ಮಹಾತ್ಮಸು|

02034002c ಯತ್ಕಾಮಾತ್ಪುಂಡರೀಕಾಕ್ಷಂ ಪಾಂಡವಾರ್ಚಿತವಾನಸಿ||

ಪಾಂಡವ! ನಿಮಗಿಷ್ಟ ಬಂದಹಾಗೆ ಈ ಪುಂಡರೀಕಾಕ್ಷನನ್ನು ಅರ್ಚಿಸುವುದು ಮಹಾತ್ಮ ಪಾಂಡವರಿಗೆ ತಕ್ಕುದಲ್ಲ!

02034003a ಬಾಲಾ ಯೂಯಂ ನ ಜಾನೀಧ್ವಂ ಧರ್ಮಃ ಸೂಕ್ಷ್ಮೋ ಹಿ ಪಾಂಡವಾಃ|

02034003c ಅಯಂ ತತ್ರಾಭ್ಯತಿಕ್ರಾಂತ ಆಪಗೇಯೋಽಲ್ಪದರ್ಶನಃ||

02034004a ತ್ವಾದೃಶೋ ಧರ್ಮಯುಕ್ತೋ ಹಿ ಕುರ್ವಾಣಃ ಪ್ರಿಯಕಾಮ್ಯಯಾ|

02034004c ಭವತ್ಯಭ್ಯಧಿಕಂ ಭೀಷ್ಮೋ ಲೋಕೇಷ್ವವಮತಃ ಸತಾಂ||

ಪಾಂಡವರೇ! ಸೂಕ್ಷ್ಮವಾದ ಧರ್ಮವು ನಿಮ್ಮಂಥ ಬಾಲಕರಿಗೆ ಅರ್ಥವಾಗುವುದಿಲ್ಲ! ಆದರೆ ಈ ದೂರದೃಷ್ಟಿಯಿಲ್ಲದ ನದಿಯ ಪುತ್ರ ಭೀಷ್ಮನು ಧರ್ಮಯುಕ್ತನಾಗಿದ್ದರೂ ಧರ್ಮವನ್ನು ಉಲ್ಲಂಘಿಸಿ ತನಗಿಷ್ಟಬಂದಹಾಗೆ ಮಾಡುತ್ತಾನೆಂದಾದರೆ ಅವನೇ ಈ ಲೋಕದ ಸಂತರಿಂದ ಹೆಚ್ಚು ಹೀಳಾಯಿಸಿಕೊಳ್ಳುತ್ತಾನೆ.

02034005a ಕಥಂ ಹ್ಯರಾಜಾ ದಾಶಾರ್ಹೋ ಮಧ್ಯೇ ಸರ್ವಮಹೀಕ್ಷಿತಾಂ|

02034005c ಅರ್ಹಣಾಮರ್ಹತಿ ತಥಾ ಯಥಾ ಯುಷ್ಮಾಭಿರರ್ಚಿತಃ||

ರಾಜನಲ್ಲದ ದಾಶಾರ್ಹನು ಸರ್ವ ಮಹೀಕ್ಷಿತರ ಮಧ್ಯೆ ಹೇಗೆ ನೀವು ಅರ್ಚಿಸಿದಂತೆ ಅಗ್ರಪೂಜೆಗೆ ಅರ್ಹನಾಗುತ್ತಾನೆ?

02034006a ಅಥ ವಾ ಮನ್ಯಸೇ ಕೃಷ್ಣಂ ಸ್ಥವಿರಂ ಭರತರ್ಷಭ|

02034006c ವಸುದೇವೇ ಸ್ಥಿತೇ ವೃದ್ಧೇ ಕಥಮರ್ಹತಿ ತತ್ಸುತಃ||

ಅಥವಾ ಕೃಷ್ಣನು ಹಿರಿಯವನೆಂದು ನೀವು ಪರಿಗಣಿಸಿದರೆ, ಭರತರ್ಷಭ! ವಸುದೇವನೇ ಇಲ್ಲಿರುವಾಗ ಅವನ ಮಗನು ಹೇಗೆ ಹಿರಿಯವನಾಗುತ್ತಾನೆ?

02034007a ಅಥ ವಾ ವಾಸುದೇವೋಽಪಿ ಪ್ರಿಯಕಾಮೋಽನುವೃತ್ತವಾನ್|

02034007c ದ್ರುಪದೇ ತಿಷ್ಠತಿ ಕಥಂ ಮಾಧವೋಽರ್ಹತಿ ಪೂಜನಂ||

ಅಥವಾ ವಾಸುದೇವನು ನಿಮ್ಮ ಪ್ರಿಯಕರ, ಬೇಕಾದುದನ್ನು ಮಾಡಿಕೊಡುತ್ತಾನೆ ಎಂದಿದ್ದರೆ ದ್ರುಪದನೇ ಇಲ್ಲಿ ಇರುವಾಗ ಮಾಧವನು ಹೇಗೆ ಈ ಪೂಜೆಗೆ ಅರ್ಹನಾಗುತ್ತಾನೆ?

02034008a ಆಚಾರ್ಯಂ ಮನ್ಯಸೇ ಕೃಷ್ಣಮಥ ವಾ ಕುರುಪುಂಗವ|

02034008c ದ್ರೋಣೇ ತಿಷ್ಠತಿ ವಾರ್ಷ್ಣೇಯಂ ಕಸ್ಮಾದರ್ಚಿತವಾನಸಿ||

ಕುರುಪುಂಗವ! ಅಥವಾ ಕೃಷ್ಣನನ್ನು ಆಚಾರ್ಯನೆಂದು ಮನ್ನಿಸಿದೆಯಾದರೆ, ದ್ರೋಣನೇ ಇಲ್ಲಿರುವಾಗ ವಾರ್ಷ್ಣೇಯನು ಹೇಗೆ ಪೂಜೆಗರ್ಹನಾಗುತ್ತಾನೆ?

02034009a ಋತ್ವಿಜಂ ಮನ್ಯಸೇ ಕೃಷ್ಣಮಥ ವಾ ಕುರುನಂದನ|

02034009c ದ್ವೈಪಾಯನೇ ಸ್ಥಿತೇ ವಿಪ್ರೇ ಕಥಂ ಕೃಷ್ಣೋಽರ್ಚಿತಸ್ತ್ವಯಾ||

ಕುರುನಂದನ! ಅಥವಾ ಕೃಷ್ಣನನ್ನು ಋತ್ವಿಜನೆಂದು ಮನ್ನಿಸಿದೆಯಾದರೆ ವಿಪ್ರ ದ್ವೈಪಾಯನನೇ ಇಲ್ಲಿರುವಾಗ ಕೃಷ್ಣನು ಹೇಗೆ ಪೂಜೆಗರ್ಹನಾಗುತ್ತಾನೆ?

02034010a ನೈವ ಋತ್ವಿಮ್ನ ಚಾಚಾರ್ಯೋ ನ ರಾಜಾ ಮಧುಸೂದನಃ|

02034010c ಅರ್ಚಿತಶ್ಚ ಕುರುಶ್ರೇಷ್ಠ ಕಿಮನ್ಯತ್ಪ್ರಿಯಕಾಮ್ಯಯಾ||

ಈ ಮಧುಸೂದನನು ಋತ್ವಿಜನೂ ಅಲ್ಲ, ಆಚಾರ್ಯನೂ ಅಲ್ಲ, ರಾಜನೂ ಅಲ್ಲ. ಕುರುಶ್ರೇಷ್ಠ! ಅಂಥವನನ್ನು ನೀನು ಪೂಜೆಸಿದ್ದೀಯೆಂದರೆ ಇದು ಕೇವಲ ನಿನಗಿಷ್ಟಬಂದಹಾಗೆ ಮಾಡಿದಹಾಗಾಗಲಿಲ್ಲವೇ?

02034011a ಅಥ ವಾಪ್ಯರ್ಚನೀಯೋಽಯಂ ಯುಷ್ಮಾಕಂ ಮಧುಸೂದನಃ|

02034011c ಕಿಂ ರಾಜಭಿರಿಹಾನೀತೈರವಮಾನಾಯ ಭಾರತ||

ಭಾರತ! ನಿನಗೆ ಮಧುಸೂದನನನ್ನೇ ಪೂಜಿಸಬೇಕೆಂದಿದ್ದಿದ್ದರೆ  ಈ ರಾಜರೆನ್ನೆಲ್ಲಾ ಇಲ್ಲಿಗೆ ಕರೆದಿದ್ದೇಕೆ? ಅವಮಾನ ಮಾಡಲಿಕ್ಕೆಂದೇ? 

02034012a ವಯಂ ತು ನ ಭಯಾದಸ್ಯ ಕೌಂತೇಯಸ್ಯ ಮಹಾತ್ಮನಃ|

02034012c ಪ್ರಯಚ್ಛಾಮಃ ಕರಾನ್ಸರ್ವೇ ನ ಲೋಭಾನ್ನ ಚ ಸಾಂತ್ವನಾತ್||

ನಾವೆಲ್ಲ ಮಹಾತ್ಮ ಕೌಂತೇಯನಿಗೆ ಕರವನ್ನು ಕೊಟ್ಟಿದ್ದುದು ಭಯದಿಂದಲ್ಲ, ಲೋಭದಿಂದಲೂ ಅಲ್ಲ ಅಥವಾ ನಿನ್ನನ್ನು ಮೆಚ್ಚಿಸಬೇಕೆಂದೂ ಅಲ್ಲ.

02034013a ಅಸ್ಯ ಧರ್ಮಪ್ರವೃತ್ತಸ್ಯ ಪಾರ್ಥಿವತ್ವಂ ಚಿಕೀರ್ಷತಃ|

02034013c ಕರಾನಸ್ಮೈ ಪ್ರಯಚ್ಛಾಮಃ ಸೋಽಯಮಸ್ಮಾನ್ನ ಮನ್ಯತೇ||

ಈ ಧರ್ಮಪ್ರವೃತ್ತನು ಪಾರ್ಥಿವತ್ವವನ್ನು ಬಯಸಿದನು. ಆದುದರಿಂದ ಅವನಿಗೆ ಕರವನಿತ್ತೆವು. ಆದರೆ ಈಗ ಅವನು ನಮ್ಮನ್ನು ಪರಿಗಣಿಸುವುದೇ ಇಲ್ಲ!

02034014a ಕಿಮನ್ಯದವಮಾನಾದ್ಧಿ ಯದಿಮಂ ರಾಜಸಂಸದಿ|

02034014c ಅಪ್ರಾಪ್ತಲಕ್ಷಣಂ ಕೃಷ್ಣಮರ್ಘ್ಯೇಣಾರ್ಚಿತವಾನಸಿ||

ಈ ರಾಜ ಸಂಸದಿಯಲ್ಲಿ ಅದರ ಚಿಹ್ನೆಯೇ ಇಲ್ಲದ ಕೃಷ್ಣನಿಗೆ ಅರ್ಘ್ಯವನ್ನಿತ್ತು ಪೂಜಿಸಿದ್ದೀಯೆಂದರೆ ಇದು ನಮ್ಮನ್ನು ಅವಮಾನಿಸುವ ಬುದ್ಧಿಯಿಂದಲ್ಲದೇ ಮತ್ತ್ಯಾವ ಕಾರಣದಿಂದ?  

02034015a ಅಕಸ್ಮಾದ್ಧರ್ಮಪುತ್ರಸ್ಯ ಧರ್ಮಾತ್ಮೇತಿ ಯಶೋ ಗತಂ|

02034015c ಕೋ ಹಿ ಧರ್ಮಚ್ಯುತೇ ಪೂಜಾಮೇವಂ ಯುಕ್ತಾಂ ಪ್ರಯೋಜಯೇತ್|

02034015e ಯೋಽಯಂ ವೃಷ್ಣಿಕುಲೇ ಜಾತೋ ರಾಜಾನಂ ಹತವಾನ್ಪುರಾ||

ಅಕಸ್ಮಾತ್ ಧರ್ಮಪುತ್ರನ ಧರ್ಮಾತ್ಮನೆನ್ನುವ ಯಶಸ್ಸು ಹೊರಟುಹೋಯಿತು! ವೃಷ್ಣಿಕುಲದಲ್ಲಿ ಹುಟ್ಟಿ ಹಿಂದೆ ರಾಜನನ್ನು ಕೊಂದ ಧರ್ಮಚ್ಯುತನಿಗೆ ಯಾರುತಾನೇ ಈ ರೀತಿಯ ಗೌರವವನ್ನಿತ್ತು ಪೂಜಿಸುತ್ತಾರೆ?

02034016a ಅದ್ಯ ಧರ್ಮಾತ್ಮತಾ ಚೈವ ವ್ಯಪಕೃಷ್ಟಾ ಯುಧಿಷ್ಠಿರಾತ್|

02034016c ಕೃಪಣತ್ವಂ ನಿವಿಷ್ಟಂ ಚ ಕೃಷ್ಣೇಽರ್ಘ್ಯಸ್ಯ ನಿವೇದನಾತ್||

ಕೃಷ್ಣನಿಗೆ ಅರ್ಘ್ಯವನ್ನು ನೀಡುವುದರಿಂದ ಇಂದು ಯುಧಿಷ್ಠಿರನ ಧರ್ಮಾತ್ಮತೆಯು ಹರಿದು ಚಿಂದಿಯಾಗಿ ಹೋಗಿ ಅವನ ಕೃಪಣತ್ವವು ತೋರಿಸಿಕೊಂಡಿತು! 

02034017a ಯದಿ ಭೀತಾಶ್ಚ ಕೌಂತೇಯಾಃ ಕೃಪಣಾಶ್ಚ ತಪಸ್ವಿನಃ|

02034017c ನನು ತ್ವಯಾಪಿ ಬೋದ್ಧವ್ಯಂ ಯಾಂ ಪೂಜಾಂ ಮಾಧವೋಽರ್ಹತಿ||

ಒಂದು ವೇಳೆ ಕೌಂತೇಯರು ಭೀತರೂ, ಕೃಪಣರೂ, ಬೆಂದವರೂ ಆಗಿದ್ದಾರೆಂದರೆ ಮಾಧವ! ಅವರಿಗೆ ನೀನಾದರೂ ಎಂಥವರು ಪೂಜೆಗೆ ಅರ್ಹರು ಎಂದು ತಿಳಿಸಿಕೊಡಬಹುದಿದ್ದಲ್ಲವೇ?

02034018a ಅಥ ವಾ ಕೃಪಣೈರೇತಾಮುಪನೀತಾಂ ಜನಾರ್ದನ|

02034018c ಪೂಜಾಮನರ್ಹಃ ಕಸ್ಮಾತ್ತ್ವಮಭ್ಯನುಜ್ಞಾತವಾನಸಿ||

ಅಥವಾ ತಮ್ಮ ಸಣ್ಣಬುದ್ಧಿಯಿಂದ ಅನರ್ಹನಾದ ನಿನಗೆ ಪೂಜೆಯನ್ನಿತ್ತರೂ ಜನಾರ್ದನ! ನೀನು ಹೇಗೆ ಅದನ್ನು ಒಪ್ಪಿಕೊಂಡು ಸ್ವೀಕರಿಸಿದೆ?

02034019a ಅಯುಕ್ತಾಮಾತ್ಮನಃ ಪೂಜಾಂ ತ್ವಂ ಪುನರ್ಬಹು ಮನ್ಯಸೇ|

02034019c ಹವಿಷಃ ಪ್ರಾಪ್ಯ ನಿಷ್ಯಂದಂ ಪ್ರಾಶಿತುಂ ಶ್ವೇವ ನಿರ್ಜನೇ||

ಇಲ್ಲ! ಚೆಲ್ಲಿದ ಹವಿಸ್ಸನ್ನು ಎತ್ತಿಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ತಿಂದು ಸಂತೋಷಪಡುವ ನಾಯಿಯ ಹಾಗೆ ನೀನು ನಿನಗರ್ಹವಾಗಿರದ ಪೂಜೆಯನ್ನು ಉತ್ತಮ ಉಡುಗೊರೆಯೆಂದು ಸಂತೋಷಪಡುತ್ತಿದ್ದೀಯೆ!

02034020a ನ ತ್ವಯಂ ಪಾರ್ಥಿವೇಂದ್ರಾಣಾಮವಮಾನಃ ಪ್ರಯುಜ್ಯತೇ|

02034020c ತ್ವಾಮೇವ ಕುರವೋ ವ್ಯಕ್ತಂ ಪ್ರಲಂಭಂತೇ ಜನಾರ್ದನ||

ಜನಾರ್ದನ! ಕೌರವರು ಈ ಪಾರ್ಥಿವೇಂದ್ರರಿಗೆ ಅಪಮಾನ ಮಾಡಿದ್ದುದಲ್ಲದೇ ನಿನ್ನನ್ನು ಪೂಜಿಸಿ ನೀನೂ ಕೂಡ ಎಂಥವನೆಂದು ಪ್ರದರ್ಶಿಸಿದ್ದಾರೆ!

02034021a ಕ್ಲೀಬೇ ದಾರಕ್ರಿಯಾ ಯಾದೃಗಂಧೇ ವಾ ರೂಪದರ್ಶನಂ|

02034021c ಅರಾಜ್ಞೋ ರಾಜವತ್ಪೂಜಾ ತಥಾ ತೇ ಮಧುಸೂದನ||

ಮಧುಸೂದನ! ಶಿಖಂಡಿಗೆ ಮದುವೆಯು ಹೇಗೋ ಹಾಗೆ, ಅಂಧನಿಗೆ ರೂಪದರ್ಶನವು ಹೇಗೋ ಹಾಗೆ, ರಾಜನಲ್ಲದ ನಿನಗೆ ಸಲ್ಲಿಸಿದ ಈ ರಾಜಪೂಜೆ!

02034022a ದೃಷ್ಟೋ ಯುಧಿಷ್ಠಿರೋ ರಾಜಾ ದೃಷ್ಟೋ ಭೀಷ್ಮಶ್ಚ ಯಾದೃಶಃ|

02034022c ವಾಸುದೇವೋಽಪ್ಯಯಂ ದೃಷ್ಟಃ ಸರ್ವಮೇತದ್ಯಥಾತಥಂ||

ರಾಜ ಯುಧಿಷ್ಠಿರನು ಎಂಥವನು ಎಂದು ನೋಡಿದೆವು, ಭೀಷ್ಮನೂ ಎಂಥವನೆಂದು ನೋಡಿದೆವು, ಮತ್ತು ವಾಸುದೇವನನ್ನೂ ಇಂದು ನಾವೆಲ್ಲರೂ ನೋಡಿಯಾಯಿತು.”

02034023a ಇತ್ಯುಕ್ತ್ವಾ ಶಿಶುಪಾಲಸ್ತಾನುತ್ಥಾಯ ಪರಮಾಸನಾತ್|

02034023c ನಿರ್ಯಯೌ ಸದಸಸ್ತಸ್ಮಾತ್ಸಹಿತೋ ರಾಜಭಿಸ್ತದಾ||

ಹೀಗೆ ಹೇಳಿ ಶಿಶುಪಾಲನು ಉನ್ನತ ಆಸನದಿಂದ ಮೇಲೆದ್ದು ಕೆಲವು ರಾಜರೊಂದಿಗೆ ಸಭೆಯನ್ನು ಬಿಟ್ಟು ಹೊರಟನು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಅರ್ಘಾಭಿಹರಣಪರ್ವಣಿ ಶಿಶುಪಾಲಕ್ರೋಧೇ ಚತುಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ಅರ್ಘಾಭಿಹರಣಪರ್ವದಲ್ಲಿ ಶಿಶುಪಾಲಕ್ರೋಧ ಎನ್ನುವ ಮೂವತ್ನಾಲ್ಕನೆಯ ಅಧ್ಯಾಯವು.

Image result for indian motifs

[1]ಯದುಕುಲದಲ್ಲಿ ಹುಟ್ಟಿದ ಶ್ರೀಕೃಷ್ಣನು ರಾಜನಲ್ಲ. ಯಯಾತಿಯ ಶಾಪದಿಂದ ಯಾದವರು ರಾಜ್ಯಭ್ರಷ್ಟರಾಗಿದ್ದರು.

Comments are closed.