Sabha Parva: Chapter 32

ಸಭಾ ಪರ್ವ: ರಾಜಸೂಯ ಪರ್ವ

೩೨

ಯಜ್ಞಕರಣ

ರಾಜಸೂಯ ಯಜ್ಞ (೧-೧೮).

02032001 ವೈಶಂಪಾಯನ ಉವಾಚ|

02032001a ಪಿತಾಮಹಂ ಗುರುಂ ಚೈವ ಪ್ರತ್ಯುದ್ಗಮ್ಯ ಯುಧಿಷ್ಠಿರಃ|

02032001c ಅಭಿವಾದ್ಯ ತತೋ ರಾಜನ್ನಿದಂ ವಚನಮಬ್ರವೀತ್|

02032001e ಭೀಷ್ಮಂ ದ್ರೋಣಂ ಕೃಪಂ ದ್ರೌಣಿಂ ದುರ್ಯೋಧನವಿವಿಂಶತೀ||

ವೈಶಂಪಾಯನನು ಹೇಳಿದನು: “ರಾಜನ್! ಯುಧಿಷ್ಠಿರನು ಮೇಲೆದ್ದು ಪಿತಾಮಹ ಮತ್ತು ಗುರುವನ್ನು ಅಭಿವಂದಿಸಿ ಭೀಷ್ಮ, ದ್ರೋಣ, ಕೃಪ, ದ್ರೌಣಿ, ದುರ್ಯೋಧನ ಮತ್ತು ವಿವಿಂಶತಿಯನ್ನುದ್ದೇಶಿಸಿ ಈ ಮಾತುಗಳನ್ನಾಡಿದನು:

02032002a ಅಸ್ಮಿನ್ಯಜ್ಞೇ ಭವಂತೋ ಮಾಮನುಗೃಹ್ಣಂತು ಸರ್ವಶಃ|

02032002c ಇದಂ ವಃ ಸ್ವಮಹಂ ಚೈವ ಯದಿಹಾಸ್ತಿ ಧನಂ ಮಮ|

02032002e ಪ್ರೀಣಯಂತು ಭವಂತೋ ಮಾಂ ಯಥೇಷ್ಟಮನಿಯಂತ್ರಿತಾಃ||

“ಈ ಯಜ್ಞದಲ್ಲಿ ನೀವೆಲ್ಲರೂ ನನ್ನನ್ನು ಅನುಗ್ರಹಿಸಬೇಕು. ಇಲ್ಲಿರುವ ನನ್ನ ಈ ಧನ ನಿಮ್ಮದು ಮತ್ತು ಸ್ವಯಂ ನಾನು ನಿಮ್ಮವನು. ಯಾವುದೇ ನಿಯಂತ್ರಣಗಳಿಲ್ಲದೇ ಯಥೇಷ್ಟವಾಗಿ ನೀವು ಸಂತೋಷಹೊಂದಿರಿ.”

02032003a ಏವಮುಕ್ತ್ವಾ ಸ ತಾನ್ಸರ್ವಾನ್ದೀಕ್ಷಿತಃ ಪಾಂಡವಾಗ್ರಜಃ|

02032003c ಯುಯೋಜ ಹ ಯಥಾಯೋಗಮಧಿಕಾರೇಷ್ವನಂತರಂ||

ಎಲ್ಲರಿಗೂ ಹೀಗೆ ಹೇಳಿದ ದೀಕ್ಷಿತ ಪಾಂಡವಾಗ್ರಜನು ಪ್ರತಿಯೊಬ್ಬರಿಗೂ ಅವರಿಗೆ ತಕ್ಕುದಾದ ಕಾರ್ಯಗಳನ್ನು ವಹಿಸಿಕೊಟ್ಟನು.

02032004a ಭಕ್ಷ್ಯಭೋಜ್ಯಾಧಿಕಾರೇಷು ದುಃಶಾಸನಮಯೋಜಯತ್|

02032004c ಪರಿಗ್ರಹೇ ಬ್ರಾಹ್ಮಣಾನಾಮಶ್ವತ್ಥಾಮಾನಮುಕ್ತವಾನ್||

ಭಕ್ಷ್ಯಭೋಜ್ಯಗಳ ಅಧಿಕಾರವನ್ನು ದುಃಶಾಸನನಿಗೆ ನೀಡಲಾಯಿತು. ಬ್ರಾಹ್ಮಣರನ್ನು ಬರಮಾಡಿಕೊಳ್ಳುವ ಕೆಲಸಕ್ಕೆ ಅಶ್ವತ್ಥಾಮನು ನಿಯುಕ್ತಗೊಂಡನು.

02032005a ರಾಜ್ಞಾಂ ತು ಪ್ರತಿಪೂಜಾರ್ಥಂ ಸಂಜಯಂ ಸಂನ್ಯಯೋಜಯತ್|

02032005c ಕೃತಾಕೃತಪರಿಜ್ಞಾನೇ ಭೀಷ್ಮದ್ರೋಣೌ ಮಹಾಮತೀ||

ರಾಜರ ಆತಿಥ್ಯಕ್ಕೆ ಸಂಜಯನನ್ನು ನಿಯೋಜಿಸಿದನು. ಏನನ್ನು ಮಾಡಬೇಕು ಏನನ್ನು ಮಾಡಬಾರದು ಎನ್ನುವುದನ್ನು ತಿಳಿಸುವ ಕಾರ್ಯವನ್ನು ಮಹಾಮತಿ ಭೀಷ್ಮ-ದ್ರೋಣರಿಗೆ ನೀಡಲಾಯಿತು. 

02032006a ಹಿರಣ್ಯಸ್ಯ ಸುವರ್ಣಸ್ಯ ರತ್ನಾನಾಂ ಚಾನ್ವವೇಕ್ಷಣೇ|

02032006c ದಕ್ಷಿಣಾನಾಂ ಚ ವೈ ದಾನೇ ಕೃಪಂ ರಾಜಾ ನ್ಯಯೋಜಯತ್||

02032006e ತಥಾನ್ಯಾನ್ಪುರುಷವ್ಯಾಘ್ರಾಂಸ್ತಸ್ಮಿಂಸ್ತಸ್ಮಿನ್ನ್ಯಯೋಜಯತ್|

ಹಿರಣ್ಯ, ಸುವರ್ಣ, ರತ್ನಗಳು, ದಕ್ಷಿಣೆ ಮತ್ತು ದಾನಗಳ ಮೇಲ್ವಿಚಾರಣೆಗೆಂದು ರಾಜನು ಕೃಪನನ್ನು ನಿಯೋಜಿಸಿದನು. ಹೀಗೆ ಇತರ ಪುರುಷವ್ಯಾಘ್ರರನ್ನೂ ಬೇರೆ ಬೇರೆ ಕೆಲಸಗಳಿಗೆ ನಿಯೋಜಿಸಿದನು.

02032007a ಬಾಹ್ಲಿಕೋ ಧೃತರಾಷ್ಟ್ರಶ್ಚ ಸೋಮದತ್ತೋ ಜಯದ್ರಥಃ|

02032007c ನಕುಲೇನ ಸಮಾನೀತಾಃ ಸ್ವಾಮಿವತ್ತತ್ರ ರೇಮಿರೇ||

ಬಾಹ್ಲೀಕ, ಧೃತರಾಷ್ಟ್ರ, ಸೋಮದತ್ತ, ಜಯದ್ರಥರು ನಕುಲನ ಆತಿಥ್ಯದಿಂದ ಸ್ವಾಮಿಗಳಂತೆ ರಮಿಸಿದರು. 

02032008a ಕ್ಷತ್ತಾ ವ್ಯಯಕರಸ್ತ್ವಾಸೀದ್ವಿದುರಃ ಸರ್ವಧರ್ಮವಿತ್|

02032008c ದುರ್ಯೋಧನಸ್ತ್ವರ್ಹಣಾನಿ ಪ್ರತಿಜಗ್ರಾಹ ಸರ್ವಶಃ||

ಸರ್ವಧರ್ಮವಿದು ಕ್ಷತ್ತ ವಿದುರನು ವ್ಯಯಕರನಾದನು ಮತ್ತು ದುರ್ಯೋಧನನು ಎಲ್ಲ ಕಾಣಿಕೆ-ಉಡುಗೊರೆಗಳನ್ನು ಸ್ವೀಕರಿಸಿದನು.

02032009a ಸರ್ವಲೋಕಃ ಸಮಾವೃತ್ತಃ ಪಿಪ್ರೀಷುಃ ಫಲಮುತ್ತಮಂ|

02032009c ದ್ರಷ್ಟುಕಾಮಃ ಸಭಾಂ ಚೈವ ಧರ್ಮರಾಜಂ ಚ ಪಾಂಡವಂ||

ಅಂತ್ಯದ ಉತ್ತಮ ಫಲವನ್ನು ಬಯಸಿ, ಧರ್ಮರಾಜ ಪಾಂಡವನನ್ನೂ ಅವನ ಸಭೆಯನ್ನೂ ನೋಡುವ ಉದ್ದೇಶದಿಂದ ಲೋಕದ ಸರ್ವರೂ ಬಂದು ಸೇರಿದರು.

02032010a ನ ಕಶ್ಚಿದಾಹರತ್ತತ್ರ ಸಹಸ್ರಾವರಮರ್ಹಣಂ|

02032010c ರತ್ನೈಶ್ಚ ಬಹುಭಿಸ್ತತ್ರ ಧರ್ಮರಾಜಮವರ್ಧಯನ್||

ಒಂದು ಸಾವಿರಕ್ಕಿಂತ ಕಡಿಮೆ ಬೆಲೆಯ ಉಡುಗೊರೆಯನ್ನು ಯಾರೂ ತರಲಿಲ್ಲ. ಅಲ್ಲಿ ಬಂದ ಬಹಳ ರತ್ನಗಳಿಂದ ಧರ್ಮರಾಜನ ಸಂಪತ್ತು ವೃದ್ಧಿಯಾಯಿತು[1].

02032011a ಕಥಂ ನು ಮಮ ಕೌರವ್ಯೋ ರತ್ನದಾನೈಃ ಸಮಾಪ್ನುಯಾತ್|

02032011c ಯಜ್ಞಮಿತ್ಯೇವ ರಾಜಾನಃ ಸ್ಪರ್ಧಮಾನಾ ದದುರ್ಧನಂ||

ನನ್ನ ರತ್ನದಾನದಿಂದ ಕೌರವ್ಯನು ಯಜ್ಞಮಾಡುವನು ಎಂಬ ಭರವಸೆಯನ್ನು ಹೊತ್ತು ಪರಸ್ಪರರಲ್ಲಿ ಸ್ಪರ್ಧೆಮಾಡುತ್ತಿರುವಂತೆ ರಾಜರು ಅವನಿಗೆ ಧನವನ್ನಿತ್ತರು.

02032012a ಭವನೈಃ ಸವಿಮಾನಾಗ್ರೈಃ ಸೋದರ್ಕೈರ್ಬಲಸಂವೃತೈಃ|

02032012c ಲೋಕರಾಜವಿಮಾನೈಶ್ಚ ಬ್ರಾಹ್ಮಣಾವಸಥೈಃ ಸಹ||

02032013a ಕೃತೈರಾವಸಥೈರ್ದಿವ್ಯೈರ್ವಿಮಾನಪ್ರತಿಮೈಸ್ತಥಾ|

02032013c ವಿಚಿತ್ರೈ ರತ್ನವದ್ಭಿಶ್ಚ ಋದ್ಧ್ಯಾ ಪರಮಯಾ ಯುತೈಃ||

02032014a ರಾಜಭಿಶ್ಚ ಸಮಾವೃತ್ತೈರತೀವಶ್ರೀಸಮೃದ್ಧಿಭಿಃ|

02032014c ಅಶೋಭತ ಸದೋ ರಾಜನ್ ಕೌಂತೇಯಸ್ಯ ಮಹಾತ್ಮನಃ||

ಅನೇಕ ಮಹಡಿ ಮತ್ತು ಗೋಪುರಗಳನ್ನು ಹೊಂದಿದ್ದ, ಸೇನೆಗಳ ಕಾವಲಿನಲಿದ್ದ, ಲೋಕದ ರಾಜರ ವಿಮಾನಗಳು ಮತ್ತು ಬ್ರಾಹ್ಮಣರ ವಸತಿ ಗೃಹಗಳು, ದಿವ್ಯವಿಮಾನಗಳಂತೆ ರಚಿಸಿದ್ದ ಬಣ್ಣ ಬಣ್ಣದ ರತ್ನಗಳಿದ ಸಿಂಗರಿಸಿದ, ಅಪರಿಮಿತ ಸಂಪತ್ತಿನ ವಸತಿ ಗೃಹಗಳು, ಸೇರಿದ್ದ ರಾಜರು ಅತಿ ಶ್ರೀ ಸಮೃದ್ಧಿಯಿಂದ ಮಹಾತ್ಮ ಕೌಂತೇಯನ ಸದಸ್ಸು ಸುಶೋಭಿಸಿತು.

02032015a ಋದ್ಧ್ಯಾ ಚ ವರುಣಂ ದೇವಂ ಸ್ಪರ್ಧಮಾನೋ ಯುಧಿಷ್ಠಿರಃ|

02032015c ಷಡಗ್ನಿನಾಥ ಯಜ್ಞೇನ ಸೋಽಯಜದ್ದಕ್ಷಿಣಾವತಾ|

02032015e ಸರ್ವಾಂ ಜನಾನ್ಸರ್ವಕಾಮೈಃ ಸಮೃದ್ಧೈಃ ಸಮತರ್ಪಯತ್||

ಸಂಪತ್ತಿನಲ್ಲಿ ವರುಣದೇವನೊಂದಿಗೆ ಸ್ಪರ್ಧಿಸುತ್ತಿರುವನೋ ಎಂದಿದ್ದ ಯುಧಿಷ್ಠಿರನು ಆರು ಅಗ್ನಿಗಳಿಂದ ಉತ್ತಮ ದಕ್ಷಿಣೆಗಳನ್ನೊಡಗೂಡಿದ ಯಜ್ಞವನ್ನು ಕೈಗೊಂಡು ಸರ್ವಜನರ ಸರ್ವ ಕಾಮಗಳನ್ನೂ ಸಮೃದ್ಧವಾಗಿ ತೃಪ್ತಿಗೊಳಿಸಿದನು.

02032016a ಅನ್ನವಾನ್ಬಹುಭಕ್ಷ್ಯಶ್ಚ ಭುಕ್ತವಜ್ಜನಸಂವೃತಃ|

02032016c ರತ್ನೋಪಹಾರಕರ್ಮಣ್ಯೋ ಬಭೂವ ಸ ಸಮಾಗಮಃ||

ಬಹಳ ಆಹಾರ ಭಕ್ಷ್ಯಗಳಿಂದ ತೃಪ್ತಿಗೊಂಡ ಜನಸನ್ನಿಧಿಯಲ್ಲಿ ರತ್ನಗಳ ಉಡುಗೊರೆಗಳ್ನು ನೀಡುವ ಕಾರ್ಯಕ್ರಮವು ಕೂಡಿಬಂದಿತು.

02032017a ಇಡಾಜ್ಯಹೋಮಾಹುತಿಭಿರ್ಮಂತ್ರಶಿಕ್ಷಾಸಮನ್ವಿತೈಃ|

02032017c ತಸ್ಮಿನ್ ಹಿ ತತೃಪುರ್ದೇವಾಸ್ತತೇ ಯಜ್ಞೇ ಮಹರ್ಷಿಭಿಃ||

ಯಜ್ಞದಲ್ಲಿ ಮಂತ್ರಶಿಕ್ಷಾಸಮನ್ವಿತ ಈಡಾಜ್ಯಹೋಮ ಆಹುತಿಗಳಿಂದ ದೇವತೆಗಳೂ ಮಹರ್ಷಿಗಳೂ ತೃಪ್ತಿಹೊಂದಿದರು.

02032018a ಯಥಾ ದೇವಾಸ್ತಥಾ ವಿಪ್ರಾ ದಕ್ಷಿಣಾನ್ನಮಹಾಧನೈಃ|

02032018c ತತೃಪುಃ ಸರ್ವವರ್ಣಾಶ್ಚ ತಸ್ಮಿನ್ಯಜ್ಞೇ ಮುದಾನ್ವಿತಾಃ||

ದೇವತೆಗಳಂತೆ ವಿಪ್ರರೂ ದಕ್ಷಿಣೆ, ಅನ್ನ ಮತ್ತು ಮಹಾಧನಗಳಿಂದ ತೃಪ್ತಿಹೊಂದಿದರು ಮತ್ತು ಆ ಯಜ್ಞದಿಂದ ಸರ್ವ ವರ್ಣದವರೂ ಮುದಿತರಾದರು.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ರಾಜಸೂಯಪರ್ವಣಿ ಯಜ್ಞಕರಣೇ ದ್ವಾತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ರಾಜಸೂಯಪರ್ವದಲ್ಲಿ ಯಜ್ಞಕರಣ ಎನ್ನುವ ಮೂವತ್ತೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ರಾಜಸೂಯಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ರಾಜಸೂಯಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೧/೧೮, ಉಪಪರ್ವಗಳು-೨೪/೧೦೦, ಅಧ್ಯಾಯಗಳು-೨೫೭/೧೯೯೫, ಶ್ಲೋಕಗಳು-೮೩೨೪/೭೩೭೮೪

Related image

[1] ಯುಧಿಷ್ಠಿರನಿಗೆ ರಾಜಸೂಯ ಯಾಗದ ಸಮಯದಲ್ಲಿ ಬಂದ ಕಾಣಿಕೆಗಳ ವರ್ಣನೆಯನ್ನು ದುರ್ಯೋಧನನು ಶಕುನಿಗೆ ಮಾಡಿದುದು ದ್ಯೂತಪರ್ವದಲ್ಲಿ ಬರುತ್ತದೆ.

Comments are closed.