Sabha Parva: Chapter 23

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸಭಾ ಪರ್ವ: ದಿಗ್ವಿಜಯ ಪರ್ವ

೨೩

ಅರ್ಜುನನ ಉತ್ತರ ದಿಗ್ವಿಜಯ

ಅರ್ಜುನನು ಉತ್ತರ ದೇಶಗಳನ್ನು ಗೆದ್ದುದು (೧-೧೬). ಭಗದತ್ತನೊಡನೆ ಅರ್ಜುನನ ಎಂಟು ದಿನಗಳ ಯುದ್ಧ (೧೭-೨೬).

02023001 ವೈಶಂಪಾಯನ ಉವಾಚ|

02023001a ಪಾರ್ಥಃ ಪ್ರಾಪ್ಯ ಧನುಃಶ್ರೇಷ್ಠಮಕ್ಷಯ್ಯೌ ಚ ಮಹೇಷುಧೀ|

02023001c ರಥಂ ಧ್ವಜಂ ಸಭಾಂ ಚೈವ ಯುಧಿಷ್ಠಿರಮಭಾಷತ||

ವೈಶಂಪಾಯನನು ಹೇಳಿದನು: “ಶ್ರೇಷ್ಠ ಧನುಸ್ಸು, ಎರಡು ಅಕ್ಷಯ ಬತ್ತಳಿಕೆಗಳು, ರಥ, ಮತ್ತು ಧ್ವಜಗಳನ್ನು ಪಡೆದ ಮಹೇಷುಧಿ ಪಾರ್ಥನು ಸಭೆಯಲ್ಲಿ ಯುಧಿಷ್ಠಿರನಿಗೆ ಹೇಳಿದನು:

02023002a ಧನುರಸ್ತ್ರಂ ಶರಾ ವೀರ್ಯಂ ಪಕ್ಷೋ ಭೂಮಿರ್ಯಶೋ ಬಲಂ|

02023002c ಪ್ರಾಪ್ತಮೇತನ್ಮಯಾ ರಾಜನ್ದುಷ್ಪ್ರಾಪಂ ಯದಭೀಪ್ಸಿತಂ||

“ರಾಜನ್! ಬಯಸಿದರೂ ಪಡೆಯಲು ದುಷ್ಕರವಾದ ಧನಸ್ಸು, ಅಸ್ತ್ರ, ಬಾಣ, ವೀರ್ಯ, ಬೆಂಬಲಿಗರು, ಭೂಮಿ, ಯಶಸ್ಸು, ಬಲಗಳನ್ನು ನಾನು ಗಳಿಸಿದ್ದೇನೆ.

02023003a ತತ್ರ ಕೃತ್ಯಮಹಂ ಮನ್ಯೇ ಕೋಶಸ್ಯಾಸ್ಯ ವಿವರ್ಧನಂ|

02023003c ಕರಮಾಹಾರಯಿಷ್ಯಾಮಿ ರಾಜ್ಞಃ ಸರ್ವಾನ್ನೃಪೋತ್ತಮ||

ನೃಪೋತ್ತಮ! ಈಗ ನಮ್ಮ ಕೋಶವನ್ನು ವೃದ್ಧಿಗೊಳಿಸುವ ಕೃತ್ಯವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಎಲ್ಲ ರಾಜರುಗಳಿಂದ ಕರ-ಕಪ್ಪಗಳನ್ನು ತರುತ್ತೇನೆ.

02023004a ವಿಜಯಾಯ ಪ್ರಯಾಸ್ಯಾಮಿ ದಿಶಂ ಧನದರಕ್ಷಿತಾಂ|

02023004c ತಿಥಾವಥ ಮುಹೂರ್ತೇ ಚ ನಕ್ಷತ್ರೇ ಚ ತಥಾ ಶಿವೇ||

ಶುಭ ತಿಥಿ, ಮುಹೂರ್ತ ಮತ್ತು ನಕ್ಷತ್ರದಲ್ಲಿ ವಿಜಯಕ್ಕಾಗಿ ಧನರಾಜನಿಂದ ರಕ್ಷಿತ ದಿಕ್ಕಿಗೆ ಹೊರಡುತ್ತೇನೆ.”

02023005a ಧನಂಜಯವಚಃ ಶ್ರುತ್ವಾ ಧರ್ಮರಾಜೋ ಯುಧಿಷ್ಠಿರಃ|

02023005c ಸ್ನಿಗ್ಧಗಂಭೀರನಾದಿನ್ಯಾ ತಂ ಗಿರಾ ಪ್ರತ್ಯಭಾಷತ||

ಧನಂಜಯನ ಮಾತುಗಳನ್ನು ಕೇಳಿದ ಧರ್ಮರಾಜ ಯುಧಿಷ್ಠಿರನು ಪ್ರೀತಿ ಮತ್ತು ಗಂಭೀರಧ್ವನಿಯಲ್ಲಿ ಈ ಮಾತುಗಳನ್ನಾಡಿದನು:

02023006a ಸ್ವಸ್ತಿ ವಾಚ್ಯಾರ್ಹತೋ ವಿಪ್ರಾನ್ಪ್ರಯಾಹಿ ಭರತರ್ಷಭ|

02023006c ದುರ್ಹೃದಾಮಪ್ರಹರ್ಷಾಯ ಸುಹೃದಾಂ ನಂದನಾಯ ಚ||

02023006e ವಿಜಯಸ್ತೇ ಧ್ರುವಂ ಪಾರ್ಥ ಪ್ರಿಯಂ ಕಾಮಮವಾಪ್ನುಹಿ||

“ಭರತರ್ಷಭ! ಶತ್ರುಗಳಿಗೆ ದುಃಖವನ್ನು ತರಲು ಮತ್ತು ಸುಹೃದಯರಿಗೆ ಸಂತೋಷವನ್ನು ತರಲು ಅರ್ಹ ವಿಪ್ರರ ಸ್ವಸ್ತಿವಾಚನಗಳೊಂದಿಗೆ ಹೊರಡು. ಪಾರ್ಥ! ನಿನಗೆ ವಿಜಯವು ನಿಶ್ಚಯವಾದದ್ದು. ನಿನ್ನ ಪ್ರಿಯಕಾಮಗಳೆಲ್ಲವನ್ನೂ ಪಡೆಯುತ್ತೀಯೆ!”

02023007a ಇತ್ಯುಕ್ತಃ ಪ್ರಯಯೌ ಪಾರ್ಥಃ ಸೈನ್ಯೇನ ಮಹತಾ ವೃತಃ|

02023007c ಅಗ್ನಿದತ್ತೇನ ದಿವ್ಯೇನ ರಥೇನಾದ್ಭುತಕರ್ಮಣಾ||

ಇದನ್ನು ಕೇಳಿ ಪಾರ್ಥನು ಮಹಾ ಸೇನೆಯೊಂದಿಗೆ ಅಗ್ನಿದತ್ತ ಅದ್ಭುತಕರ್ಮಿ ದಿವ್ಯ ರಥದಲ್ಲಿ ಹೊರಟನು.

02023008a ತಥೈವ ಭೀಮಸೇನೋಽಪಿ ಯಮೌ ಚ ಪುರುಷರ್ಷಭೌ|

02023008c ಸಸೈನ್ಯಾಃ ಪ್ರಯಯುಃ ಸರ್ವೇ ಧರ್ಮರಾಜಾಭಿಪೂಜಿತಾಃ||

ಹಾಗೆಯೇ ಭೀಮಸೇನ ಮತ್ತು ಯಮಳ ಪುರುಷರ್ಷಭರೀರ್ವರೆಲ್ಲರೂ ಸೈನ್ಯಗಳೊಂದಿಗೆ ಧರ್ಮರಾಜನ ಆಶೀರ್ವಾದದೊಂದಿಗೆ ಹೊರಟರು.

02023009a ದಿಶಂ ಧನಪತೇರಿಷ್ಟಾಮಜಯತ್ಪಾಕಶಾಸನಿಃ|

02023009c ಭೀಮಸೇನಸ್ತಥಾ ಪ್ರಾಚೀಂ ಸಹದೇವಸ್ತು ದಕ್ಷಿಣಾಂ||

02023010a ಪ್ರತೀಚೀಂ ನಕುಲೋ ರಾಜನ್ದಿಶಂ ವ್ಯಜಯದಸ್ತ್ರವಿತ್|

02023010c ಖಾಂಡವಪ್ರಸ್ಥಮಧ್ಯಾಸ್ತೇ ಧರ್ಮರಾಜೋ ಯುಧಿಷ್ಠಿರಃ||

ರಾಜನ್! ಧನಪತಿಯ ಇಷ್ಟದಿಶವನ್ನು ಪಾಕಶಾಸನಿಯು ಜಯಿಸಿದನು, ಹಾಗೆಯೇ ಭೀಮಸೇನನು ಪೂರ್ವ, ಸಹದೇವನು ದಕ್ಷಿಣ ಮತ್ತು ಅಸ್ತ್ರವಿದುಶಿ ನಕುಲನು ಪಶ್ಚಿಮ ದಿಕ್ಕುಗಳನ್ನು ಜಯಿಸಿದರು. ಧರ್ಮರಾಜ ಯುಧಿಷ್ಠಿರನು ಮಧ್ಯದಲ್ಲಿದ್ದ ಖಾಂಡವಪ್ರಸ್ಥದಲ್ಲಿಯೇ ಉಳಿದುಕೊಂಡನು.”

02023011 ಜನಮೇಜಯ ಉವಾಚ|

02023011a ದಿಶಾಮಭಿಜಯಂ ಬ್ರಹ್ಮನ್ವಿಸ್ತರೇಣಾನುಕೀರ್ತಯ|

02023011c ನ ಹಿ ತೃಪ್ಯಾಮಿ ಪೂರ್ವೇಷಾಂ ಶೃಣ್ವಾನಶ್ಚರಿತಂ ಮಹತ್||

ಜನಮೇಜಯನು ಹೇಳಿದನು: “ಬ್ರಹ್ಮನ್! ಅವರು ದಿಕ್ಕುಗಳ ಮೇಲೆ ವಿಜಯ ಸಾಧಿಸಿದುದರ ಕುರಿತು ವಿಸ್ತಾರವಾಗಿ ಹೇಳು. ಪೂರ್ವಜರ ಮಹಾ ಚರಿತ್ರವನ್ನು ಎಷ್ಟು ಕೇಳಿದರೂ ತೃಪ್ತಿಯಾಗುತ್ತಿಲ್ಲ.”

02023012 ವೈಶಂಪಾಯನ ಉವಾಚ|

02023012a ಧನಂಜಯಸ್ಯ ವಕ್ಷ್ಯಾಮಿ ವಿಜಯಂ ಪೂರ್ವಮೇವ ತೇ|

02023012c ಯೌಗಪದ್ಯೇನ ಪಾರ್ಥೈರ್ಹಿ ವಿಜಿತೇಯಂ ವಸುಂಧರಾ||

ವೈಶಂಪಾಯನನು ಹೇಳಿದನು: “ಮೊದಲನೆಯದಾಗಿ ನಿನಗೆ ಧನಂಜಯನ ವಿಜಯದ ಕುರಿತು ಹೇಳುತ್ತೇನೆ. ಪಾರ್ಥರು ಒಂದೇ ವೇಳೆಯಲ್ಲಿ ವಸುಂಧರೆಯನ್ನು ಜಯಿಸಿದರು[1].

02023013a ಪೂರ್ವಂ ಕುಣಿಂದವಿಷಯೇ ವಶೇ ಚಕ್ರೇ ಮಹೀಪತೀನ್|

02023013c ಧನಂಜಯೋ ಮಹಾಬಾಹುರ್ನಾತಿತೀವ್ರೇಣ ಕರ್ಮಣಾ||

ಮೊಟ್ಟಮೊದಲನೆಯದಾಗಿ ಮಹಾಬಾಹು ಧನಂಜಯನು ಅತಿ ತೀವ್ರäಕರ್ಮಗಳಿಂದ ಕುಣಿಂದ ದೇಶದ ಮಹೀಪತಿಗಳನ್ನು ವಶೀಕರಿಸಿದನು.

02023014a ಆನರ್ತಾನ್ಕಾಲಕೂಟಾಂಶ್ಚ ಕುಣಿಂದಾಂಶ್ಚ ವಿಜಿತ್ಯ ಸಃ|

02023014c ಸುಮಂಡಲಂ ಪಾಪಜಿತಂ ಕೃತವಾನನುಸೈನಿಕಂ ||

ಅನಾರ್ತ, ಕಾಲಕೂಟ ಮತ್ತು ಕುಣಿಂದರನ್ನು ಜಯಿಸಿ, ಆ ಪಾಪಜಿತನು ಸುಮಂಡಲನನ್ನು ತನ್ನ ಅನುಸೈನಿಕನನ್ನಾಗಿ ಮಾಡಿದನು.

02023015a ಸ ತೇನ ಸಹಿತೋ ರಾಜನ್ಸವ್ಯಸಾಚೀ ಪರಂತಪಃ|

02023015c ವಿಜಿಗ್ಯೇ ಸಕಲಂ ದ್ವೀಪಂ ಪ್ರತಿವಿಂಧ್ಯಂ ಚ ಪಾರ್ಥಿವಂ||

02023016a ಸಕಲದ್ವೀಪವಾಸಾಂಶ್ಚ ಸಪ್ತದ್ವೀಪೇ ಚ ಯೇ ನೃಪಾಃ|

02023016c ಅರ್ಜುನಸ್ಯ ಚ ಸೈನ್ಯಾನಾಂ ವಿಗ್ರಹಸ್ತುಮುಲೋಽಭವತ್||

ರಾಜನ್! ಅವನೊಂದಿಗೆ ಸವ್ಯಸಾಚೀ ಪರಂತಪನು ಸಕಲ ದ್ವೀಪವನ್ನು ಮತ್ತು ಸಕಲದ್ವೀಪವಾಸಿ ಪಾರ್ಥಿವ ಪ್ರತಿವಿಂಧ್ಯನನ್ನು ಜಯಿಸಿದನು. ಏಳು ದ್ವೀಪಗಳ ನೃಪರ ಮತ್ತು ಅರ್ಜುನನ ಸೇನೆಗಳ ಮಧ್ಯೆ ತುಮುಲ ಯುದ್ಧವೇ ನಡೆಯಿತು.

02023017a ಸ ತಾನಪಿ ಮಹೇಷ್ವಾಸೋ ವಿಜಿತ್ಯ ಭರತರ್ಷಭ|

02023017c ತೈರೇವ ಸಹಿತಃ ಸರ್ವೈಃ ಪ್ರಾಗ್ಜ್ಯೋತಿಷಮುಪಾದ್ರವತ್||

ಭರತರ್ಷಭ! ಅವರನ್ನು ಜಯಿಸಿದ ಆ ಮಹೇಷ್ವಾಸನು ಅವರೆಲ್ಲರ ಸಹಿತ ಪ್ರಾಗ್ಜ್ಯೋತಿಷ ಪುರದ ಮೇಲೆ ಆಕ್ರಮಣ ಮಾಡಿದನು.

02023018a ತತ್ರ ರಾಜಾ ಮಹಾನಾಸೀದ್ಭಗದತ್ತೋ ವಿಶಾಂ ಪತೇ|

02023018c ತೇನಾಸೀತ್ಸುಮಹದ್ಯುದ್ಧಂ ಪಾಂಡವಸ್ಯ ಮಹಾತ್ಮನಃ||

ವಿಶಾಂಪತೇ! ಅಲ್ಲಿಯ ಮಹಾರಾಜ ಭಗದತ್ತನೊಂದಿಗೆ ಮಹಾತ್ಮ ಪಾಂಡವನ ಮಹಾಯುದ್ಧವಾಯಿತು.

02023019a ಸ ಕಿರಾತೈಶ್ಚ ಚೀನೈಶ್ಚ ವೃತಃ ಪ್ರಾಗ್ಜ್ಯೋತಿಷೋಽಭವತ್|

02023019c ಅನ್ಯೈಶ್ಚ ಬಹುಭಿರ್ಯೋಧೈಃ ಸಾಗರಾನೂಪವಾಸಿಭಿಃ||

ಪ್ರಾಗ್ಜ್ಯೋತಿಷವು ಕಿರಾತ ಮತ್ತು ಚೀನರಿಂದ ಹಾಗೂ ಸಾಗರ ಮಡುವಿನಲ್ಲಿ ವಾಸಿಸುತ್ತಿದ್ದ ಇನ್ನೂ ಇತರ ಬಹಳಷ್ಟು ಯೋದ್ಧರಿಂದ ಸುತ್ತುವರೆಯಲ್ಪಟ್ಟಿತ್ತು.

02023020a ತತಃ ಸ ದಿವಸಾನಷ್ಟೌ ಯೋಧಯಿತ್ವಾ ಧನಂಜಯಂ|

02023020c ಪ್ರಹಸನ್ನಬ್ರವೀದ್ರಾಜಾ ಸಂಗ್ರಾಮೇ ವಿಗತಕ್ಲಮಃ||

ಧನಂಜಯನೊಡನೆ ಎಂಟು ದಿನಗಳು ಯುದ್ಧಮಾಡಿದ ಆ ರಾಜನು ರಣರಂಗದಲ್ಲಿ ಅಯಾಸಹೊಂದದೇ ಮುಗುಳ್ನಗುತ್ತಾ ಹೇಳಿದನು:

02023021a ಉಪಪನ್ನಂ ಮಹಾಬಾಹೋ ತ್ವಯಿ ಪಾಂಡವನಂದನ|

02023021c ಪಾಕಶಾಸನದಾಯಾದೇ ವೀರ್ಯಮಾಹವಶೋಭಿನಿ||

“ಮಹಾಬಾಹು ಪಾಂಡವನಂದನ! ಪಾಕಶಾಸನ ದಾಯಾದಿ! ಯುದ್ಧದಲ್ಲಿ ಶೋಭಿಸುವ ನಿನ್ನ ಈ ವೀರ್ಯವು ಯಾವುದಕ್ಕೂ ಕಡಿಮೆಯಿಲ್ಲ.

02023022a ಅಹಂ ಸಖಾ ಸುರೇಂದ್ರಸ್ಯ ಶಕ್ರಾದನವಮೋ ರಣೇ|

02023022c ನ ಚ ಶಕ್ನೋಮಿ ತೇ ತಾತ ಸ್ಥಾತುಂ ಪ್ರಮುಖತೋ ಯುಧಿ||

ಸುರೇಂದ್ರನ ಸಖನಾದ ನಾನು ರಣದಲ್ಲಿ ಶಕ್ರನನಿಗೆ ಸರಿಸಮ. ಆದರೂ ಮಗು! ಯುದ್ಧದಲ್ಲಿ ನಿನ್ನನ್ನು ಎದುರಿಸಲು ಸಾಧ್ಯವಿಲ್ಲ!

02023023a ಕಿಮೀಪ್ಸಿತಂ ಪಾಂಡವೇಯ ಬ್ರೂಹಿ ಕಿಂ ಕರವಾಣಿ ತೇ|

02023023c ಯದ್ವಕ್ಷ್ಯಸಿ ಮಹಾಬಾಹೋ ತತ್ಕರಿಷ್ಯಾಮಿ ಪುತ್ರಕ||

ಪಾಂಡವೇಯ! ನಿನಗಾಗಿ ನಾನು ಏನುಮಾಡಬೇಕೆಂದು ಬಯಸುತ್ತೀಯೆ ಹೇಳು! ಪುತ್ರಕ! ಮಹಾಬಾಹು! ನನಗೆ ಕೇಳಿದ್ದುದನ್ನು ಮಾಡಿಕೊಡುತ್ತೇನೆ.”

02023024 ಅರ್ಜುನ ಉವಾಚ|

02023024a ಕುರೂಣಾಂ ಋಷಭೋ ರಾಜಾ ಧರ್ಮಪುತ್ರೋ ಯುಧಿಷ್ಠಿರಃ|

02023024c ತಸ್ಯ ಪಾರ್ಥಿವತಾಮೀಪ್ಸೇ ಕರಸ್ತಸ್ಮೈ ಪ್ರದೀಯತಾಂ||

ಅರ್ಜುನನು ಹೇಳಿದನು: “ಕುರುವೃಷಭ ಧರ್ಮಪುತ್ರ ರಾಜಾ ಯುಧಿಷ್ಠಿರನನ್ನು ಪಾರ್ಥಿವನೆಂದು ಪರಿಗಣಿಸಿ ಅವನಿಗೆ ಕರವನ್ನು ಕೊಡಬೇಕೆಂಬುದೇ ನನ್ನ ಇಚ್ಛೆ.

02023025a ಭವಾನ್ಪಿತೃಸಖಾ ಚೈವ ಪ್ರೀಯಮಾಣೋ ಮಯಾಪಿ ಚ|

02023025c ತತೋ ನಾಜ್ಞಾಪಯಾಮಿ ತ್ವಾಂ ಪ್ರೀತಿಪೂರ್ವಂ ಪ್ರದೀಯತಾಂ||

ನೀನು ನನ್ನ ತಂದೆಯ ಮಿತ್ರ ಮತ್ತು ನನ್ನ ಮೇಲೆಯೂ ಪ್ರೀತಿಯನ್ನು ತೋರಿಸುತ್ತಿದ್ದೀಯೆ. ಆದುದರಿಂದ ನಾನು ನಿನಗೆ ಆಜ್ಞೆಯನ್ನು ಮಾಡುತ್ತಿಲ್ಲ. ಪ್ರೀತಿಪೂರ್ವಕವಾಗಿ ಕೊಡು.”

02023026 ಭಗದತ್ತ ಉವಾಚ|

02023026a ಕುಂತೀಮಾತರ್ಯಥಾ ಮೇ ತ್ವಂ ತಥಾ ರಾಜಾ ಯುಧಿಷ್ಠಿರಃ|

02023026c ಸರ್ವಮೇತತ್ಕರಿಷ್ಯಾಮಿ ಕಿಂ ಚಾನ್ಯತ್ಕರವಾಣಿ ತೇ||

ಭಗದತ್ತನು ಹೇಳಿದನು: “ಕುಂತಿಯ ಮಗನಾದ ನೀನು ನನಗೆ ಹೇಗೋ ಹಾಗೆ ರಾಜ ಯುಧಿಷ್ಠಿರನು ಕೂಡ ಹೌದು. ಎಲ್ಲವನ್ನೂ ಮಾಡುತ್ತೇನೆ. ನಿನಗಾಗಿ ಬೇರೆ ಏನನ್ನು ಮಾಡಬೇಕು?””

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನದಿಗ್ವಿಜಯೇ ಭಗದತ್ತಪರಾಜಯೇ ತ್ರಯೋವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನದಿಗ್ವಿಜಯದಲ್ಲಿ ಭಗದತ್ತನ ಪರಾಭವ ಎನ್ನುವ ಇಪ್ಪತ್ತ್ಮೂರನೆಯ ಅಧ್ಯಾಯವು.

Related image

[1]ಅರ್ಜುನ, ಭೀಮ ಮತ್ತು ನಕುಲ-ಸಹದೇವರು ಒಂದೇ ಸಮಯದಲ್ಲಿ ನಾಲ್ಕೂ ದಿಕ್ಕುಗಳನ್ನು ಜಯಿಸಿದರು.

Comments are closed.