ಶಾಂತಿ ಪರ್ವ: ರಾಜಧರ್ಮ ಪರ್ವ
೭
12007001 ವೈಶಂಪಾಯನ ಉವಾಚ
12007001a ಯುಧಿಷ್ಠಿರಸ್ತು ಧರ್ಮಾತ್ಮಾ ಶೋಕವ್ಯಾಕುಲಚೇತನಃ|
12007001c ಶುಶೋಚ ದುಃಖಸಂತಪ್ತಃ ಸ್ಮೃತ್ವಾ ಕರ್ಣಂ ಮಹಾರಥಮ್||
ವೈಶಂಪಾಯನನು ಹೇಳಿದನು: “ಧರ್ಮಾತ್ಮ ಯುಧಿಷ್ಠಿರನಾದರೋ ಶೋಕವ್ಯಾಕುಲ ಚೇತನನಾಗಿ ಮಹಾರಥ ಕರ್ಣನನ್ನು ಸ್ಮರಿಸಿಕೊಂಡು ದುಃಖಸಂತಪ್ತನಾಗಿ ಶೋಕಿಸಿದನು.
12007002a ಆವಿಷ್ಟೋ ದುಃಖಶೋಕಾಭ್ಯಾಂ ನಿಃಶ್ವಸಂಶ್ಚ ಪುನಃ ಪುನಃ|
12007002c ದೃಷ್ಟ್ವಾರ್ಜುನಮುವಾಚೇದಂ ವಚನಂ ಶೋಕಕರ್ಶಿತಃ||
ದುಃಖ-ಶೋಕಗಳಿಂದ ಆವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ಶೋಕಕರ್ಶಿತನಾಗಿ ಅರ್ಜುನನನ್ನು ನೋಡಿ ಹೀಗೆಂದನು:
12007003a ಯದ್ಭೈಕ್ಷಮಾಚರಿಷ್ಯಾಮ ವೃಷ್ಣ್ಯಂಧಕಪುರೇ ವಯಮ್|
12007003c ಜ್ಞಾತೀನ್ನಿಷ್ಪುರುಷಾನ್ಕೃತ್ವಾ ನೇಮಾಂ ಪ್ರಾಪ್ಸ್ಯಾಮ ದುರ್ಗತಿಮ್||
“ಒಂದು ವೇಳೆ ನಾವು ವೃಷ್ಣಿ-ಅಂಧಕರ ಪುರದಲ್ಲಿ ಭಿಕ್ಷಾಟನೆಯನ್ನೇ ಮಾಡಿದ್ದರೆ ಬಾಂಧವರನ್ನು ನಿರ್ಮೂಲನ ಮಾಡಿ ಈ ದುರ್ಗತಿಯನ್ನು ಪಡೆಯುತ್ತಿರಲಿಲ್ಲ.
12007004a ಅಮಿತ್ರಾ ನಃ ಸಮೃದ್ಧಾರ್ಥಾ ವೃತ್ತಾರ್ಥಾಃ ಕುರವಃ ಕಿಲ|
12007004c ಆತ್ಮಾನಮಾತ್ಮನಾ ಹತ್ವಾ ಕಿಂ ಧರ್ಮಫಲಮಾಪ್ನುಮಃ||
ನಮ್ಮ ಶತ್ರುಗಳಾದ ಕೌರವರೇ ಸಮೃದ್ಧರೂ ಪರಮಾರ್ಥವುಳ್ಳವರೂ ಆಗಲಿಲ್ಲವೇ? ನಮ್ಮವರನ್ನೇ ಕೊಂದ ನಾವಾದರೋ ಯಾವ ಧರ್ಮಫಲವನ್ನು ಪಡೆದೆವು?
12007005a ಧಿಗಸ್ತು ಕ್ಷಾತ್ರಮಾಚಾರಂ ಧಿಗಸ್ತು ಬಲಮೌರಸಮ್|
12007005c ಧಿಗಸ್ತ್ವಮರ್ಷಂ ಯೇನೇಮಾಮಾಪದಂ ಗಮಿತಾ ವಯಮ್||
ಯಾವುದರಿಂದಾಗಿ ನಾವು ಈ ಆಪತ್ತನ್ನು ಪಡೆದಿದ್ದೇವೋ ಆ ಕ್ಷತ್ರಿಯ ಆಚಾರಕ್ಕೆ ಧಿಕ್ಕಾರ! ಬಲವಂತಿಕೆಗೆ ಧಿಕ್ಕಾರ! ಕ್ರೋಧಕ್ಕೆ ಧಿಕ್ಕಾರ!
12007006a ಸಾಧು ಕ್ಷಮಾ ದಮಃ ಶೌಚಮವೈರೋಧ್ಯಮಮತ್ಸರಃ|
12007006c ಅಹಿಂಸಾ ಸತ್ಯವಚನಂ ನಿತ್ಯಾನಿ ವನಚಾರಿಣಾಮ್||
ವನಚಾರಿಗಳಿಗೆ ಕ್ಷಮೆ, ಇಂದ್ರಿಯನಿಗ್ರಹ, ಶುದ್ಧಿ, ವಿರೋಧಿಸದಿರುವುದು, ಅಸೂಯೆಪಡದಿರುವುದು, ಅಹಿಂಸೆ ಮತ್ತು ಸತ್ಯವಚನಗಳೇ ನಿತ್ಯವೂ ಸಾಧುವೆನಿಸಿಕೊಂಡಿರುವ ಧರ್ಮಗಳು.
12007007a ವಯಂ ತು ಲೋಭಾನ್ಮೋಹಾಚ್ಚ ಸ್ತಂಭಂ ಮಾನಂ ಚ ಸಂಶ್ರಿತಾಃ|
12007007c ಇಮಾಮವಸ್ಥಾಮಾಪನ್ನಾ ರಾಜ್ಯಲೇಶಬುಭುಕ್ಷಯಾ||
ನಾವಾದರೋ ರಾಜ್ಯವನ್ನು ಗಳಿಸಿ ಭೋಗಿಸುವ ಸಲುವಾಗಿ ಲೋಭ, ಮೋಹ, ದಂಭ-ದುರಭಿಮಾನಗಳನ್ನಾಶ್ರಯಿಸಿ ಈ ಅವಸ್ಥೆಯನ್ನು ಪಡೆದುಕೊಂಡಿದ್ದೇವೆ.
12007008a ತ್ರೈಲೋಕ್ಯಸ್ಯಾಪಿ ರಾಜ್ಯೇನ ನಾಸ್ಮಾನ್ಕಶ್ಚಿತ್ಪ್ರಹರ್ಷಯೇತ್|
12007008c ಬಾಂಧವಾನ್ನಿಹತಾನ್ದೃಷ್ಟ್ವಾ ಪೃಥಿವ್ಯಾಮಾಮಿಷೈಷಿಣಃ||
ಭೂಮಿಯ ಆಸೆಯಿಂದಾಗಿ ಬಾಂಧವರು ಹತರಾಗಿರುವುದನ್ನು ನೋಡಿದರೆ ತ್ರೈಲೋಕ್ಯವೇ ನಮ್ಮ ರಾಜ್ಯವಾದರೂ ನಮಗೆ ಎಂದೂ ಸಂತೋಷವೆನಿಸುವುದಿಲ್ಲ!
12007009a ತೇ ವಯಂ ಪೃಥಿವೀಹೇತೋರವಧ್ಯಾನ್ಪೃಥಿವೀಸಮಾನ್|
12007009c ಸಂಪರಿತ್ಯಜ್ಯ ಜೀವಾಮೋ ಹೀನಾರ್ಥಾ ಹತಬಾಂಧವಾಃ||
ಭೂಮಿಗಾಗಿ ನಾವು ಅವಧ್ಯರಾದ ಪೃಥ್ವೀಶರನ್ನು ಸಂಹರಿಸಿ ಈಗ ಬಾಂಧವರನ್ನು ಕಳೆದುಕೊಂಡು ಅರ್ಥವಿಹೀನರಾಗಿ ಜೀವಿಸಬೇಕಾಗಿದೆ!
12007010a ಆಮಿಷೇ ಗೃಧ್ಯಮಾನಾನಾಮಶುನಾಂ ನಃ ಶುನಾಮಿವ|
12007010c ಆಮಿಷಂ ಚೈವ ನೋ ನಷ್ಟಮಾಮಿಷಸ್ಯ ಚ ಭೋಜಿನಃ||
ಮಾಂಸದ ತುಂಡಿಗಾಗಿ ಕಚ್ಚಾಡುವ ನಾಯಿಗಳಂತೆ ನಾವು ಆಸೆಪಟ್ಟು ಯುದ್ಧಮಾಡಿದೆವು. ಆ ಮಾಂಸದ ತುಂಡನ್ನು ತಿನ್ನುವವರೇ ಇಲ್ಲವಾದಮೇಲೆ ಅದರ ಪ್ರಯೋಜನವಾದರೂ ಏನು?
12007011a ನ ಪೃಥಿವ್ಯಾ ಸಕಲಯಾ ನ ಸುವರ್ಣಸ್ಯ ರಾಶಿಭಿಃ|
12007011c ನ ಗವಾಶ್ವೇನ ಸರ್ವೇಣ ತೇ ತ್ಯಾಜ್ಯಾ ಯ ಇಮೇ ಹತಾಃ||
ಈ ಸಕಲ ಭೂಮಿಗಾಗಿಯಾಗಲೀ, ಸುವರ್ಣ ರಾಶಿಗಳಿಗಾಗಿಯಾಗಲೀ, ಸಮಸ್ತ ಗೋವು-ಕುದುರೆಗಳಿಗಾಗಿಯಾಗಲೀ ಇವರನ್ನು ಬಲಿಕೊಡಬಾರದಾಗಿತ್ತು!
12007012a ಸಂಯುಕ್ತಾಃ ಕಾಮಮನ್ಯುಭ್ಯಾಂ ಕ್ರೋಧಾಮರ್ಷಸಮನ್ವಿತಾಃ|
12007012c ಮೃತ್ಯುಯಾನಂ ಸಮಾರುಹ್ಯ ಗತಾ ವೈವಸ್ವತಕ್ಷಯಮ್||
ಕಾಮ-ಕ್ರೋಧಗಳಿಂದ ಕೂಡಿದ್ದ, ಕ್ರೋಧ-ರೋಷಗಳಿಂದ ಕೂಡಿದ್ದ ಅವರು ಮೃತ್ಯುಯಾನಗಳನ್ನೇರಿ ವೈವಸ್ವತಕ್ಷಯಕ್ಕೆ ತೆರಳಿದರು.
12007013a ಬಹು ಕಲ್ಯಾಣಮಿಚ್ಚಂತ ಈಹಂತೇ ಪಿತರಃ ಸುತಾನ್|
12007013c ತಪಸಾ ಬ್ರಹ್ಮಚರ್ಯೇಣ ವಂದನೇನ ತಿತಿಕ್ಷಯಾ||
ಪಿತೃಗಳು ತಪಸ್ಸು, ಬ್ರಹ್ಮಚರ್ಯೆ, ಸತ್ಯನಿಷ್ಠೆ, ಮತ್ತು ಕ್ಷಮೆಗಳನ್ನು ಆಚರಿಸಿಕೊಂಡು ಕಲ್ಯಾಣಗುಣಸಂಪನ್ನ ಮಕ್ಕಳನ್ನು ಬಯಸುತ್ತಾರೆ.
12007014a ಉಪವಾಸೈಸ್ತಥೇಜ್ಯಾಭಿರ್ವ್ರತಕೌತುಕಮಂಗಲೈಃ|
12007014c ಲಭಂತೇ ಮಾತರೋ ಗರ್ಭಾಂಸ್ತಾನ್ಮಾಸಾನ್ದಶ ಬಿಭ್ರತಿ||
ಹಾಗೆಯೇ ತಾಯಂದಿರೂ ಉಪವಾಸ, ಯಜ್ಞ, ವ್ರತ ಮತ್ತು ಅನೇಕ ಮಂಗಲ ಕಾರ್ಯಗಳ ಮೂಲಕ ಗುಣಶಾಲೀ ಪುತ್ರರನ್ನು ಪಡೆಯಲೋಸುಗ ಹತ್ತು ತಿಂಗಳ ಗರ್ಭವನ್ನು ಹೊರುತ್ತಾರೆ.
12007015a ಯದಿ ಸ್ವಸ್ತಿ ಪ್ರಜಾಯಂತೇ ಜಾತಾ ಜೀವಂತಿ ವಾ ಯದಿ|
12007015c ಸಂಭಾವಿತಾ ಜಾತಬಲಾಸ್ತೇ ದದ್ಯುರ್ಯದಿ ನಃ ಸುಖಮ್||
12007015e ಇಹ ಚಾಮುತ್ರ ಚೈವೇತಿ ಕೃಪಣಾಃ ಫಲಹೇತುಕಾಃ||
ದೀನರಾದ ತಂದೆ-ತಾಯಿಯರು “ಚೆನ್ನಾದ ಮಗುವು ಹುಟ್ಟುವುದೇ? ಹುಟ್ಟಿದ ಮಗು ಜೀವಿಸುತ್ತದೆಯೇ? ಬೆಳೆದ ಮೇಲೆ ಬಲಶಾಲಿಗಳಾಗುತ್ತಾರೆಯೇ? ನಮಗೆ ಸುಖವನ್ನು ನೀಡುತ್ತಾರೆಯೇ?” ಎಂದೆಲ್ಲ ಆಸೆಗಳನ್ನಿಟ್ಟುಕೊಂಡು ಯೋಚಿಸುತ್ತಿರುತ್ತಾರೆ.
12007016a ತಾಸಾಮಯಂ ಸಮಾರಂಭೋ ನಿವೃತ್ತಃ ಕೇವಲೋಽಫಲಃ|
12007016c ಯದಾಸಾಂ ನಿಹತಾಃ ಪುತ್ರಾ ಯುವಾನೋ ಮೃಷ್ಟಕುಂಡಲಾಃ||
ಅವರ ಪ್ರಯತ್ನ-ಆಕಾಂಕ್ಷೆಗಳು ಈ ಯುದ್ಧದಿಂದಾಗಿ ನಿಷ್ಫಲವಾಗಿಬಿಟ್ಟವು. ಸುವರ್ಣಕುಂಡಲಗಳನ್ನು ಧರಿಸಿದ್ದ ಅವರ ಯುವ ಪುತ್ರರು ಹತರಾದರು!
12007017a ಅಭುಕ್ತ್ವಾ ಪಾರ್ಥಿವಾನ್ಭೋಗಾನೃಣಾನ್ಯನವದಾಯ ಚ|
12007017c ಪಿತೃಭ್ಯೋ ದೇವತಾಭ್ಯಶ್ಚ ಗತಾ ವೈವಸ್ವತಕ್ಷಯಮ್||
ಪಾರ್ಥಿವರು ಭೋಗಗಳನ್ನು ಭೋಗಿಸದೇ, ಪಿತೃ-ದೇವತೆಗಳ ಋಣಗಳನ್ನು ತೀರಿಸದೆಯೇ ವೈವಸ್ವತಕ್ಷಯಕ್ಕೆ ಹೋಗಿಬಿಟ್ಟರು!
12007018a ಯದೈಷಾಮಂಗ ಪಿತರೌ ಜಾತೌ ಕಾಮಮಯಾವಿವ|
12007018c ಸಂಜಾತಬಲರೂಪೇಷು ತದೈವ ನಿಹತಾ ನೃಪಾಃ||
ತಂದೆ-ತಾಯಿಗಳು ಹುಟ್ಟಿದ ಮಕ್ಕಳ ಬಲ-ರೂಪಗಳನ್ನು ಅನುಭವಿಸಿ ಸಂತೋಷಪಡಬೇಕೆಂದಿರುವಾಗಲೇ ನೃಪರು ಹತರಾಗಿ ಹೋದರು.
12007019a ಸಂಯುಕ್ತಾಃ ಕಾಮಮನ್ಯುಭ್ಯಾಂ ಕ್ರೋಧಹರ್ಷಾಸಮಂಜಸಾಃ|
12007019c ನ ತೇ ಜನ್ಮಫಲಂ[1] ಕಿಂ ಚಿದ್ಭೋಕ್ತಾರೋ ಜಾತು ಕರ್ಹಿ ಚಿತ್||
ಕಾಮ-ಕ್ರೋಧಗಳಿಂದ ಕೂಡಿರುವವರು ಮತ್ತು ಕ್ರೋಧ-ಹರ್ಷಗಳಲ್ಲಿ ಸಮತೋಲನವನ್ನಿಟ್ಟುಕೊಂಡಿರದೇ ಇದ್ದವರು ಜನ್ಮಫಲವನ್ನು ಎಂದೂ ಯಾವಕಾರಣಕ್ಕೂ ಭೋಗಿಸಲಾರರು.
12007020a ಪಾಂಚಾಲಾನಾಂ ಕುರೂಣಾಂ ಚ ಹತಾ ಏವ ಹಿ ಯೇಽಹತಾಃ|
12007020c ತೇ ವಯಂ ತ್ವಧಮಾಽಲ್ಲೋಕಾನ್ಪ್ರಪದ್ಯೇಮ ಸ್ವಕರ್ಮಭಿಃ||
ಕುರು-ಪಾಂಚಾಲರು ಹತರಾದರೂ ಹತರಾಗಿಲ್ಲ[2]. ಆದರೆ ನಮ್ಮ ಕರ್ಮಗಳಿಂದ[3] ನಾವು ಮಾತ್ರ ಅಧಮ ಲೋಕಗಳನ್ನು ಪಡೆದುಕೊಳ್ಳುತ್ತೇವೆ.
12007021a ವಯಮೇವಾಸ್ಯ ಲೋಕಸ್ಯ ವಿನಾಶೇ ಕಾರಣಂ ಸ್ಮೃತಾಃ|
12007021c ಧೃತರಾಷ್ಟ್ರಸ್ಯ ಪುತ್ರೇಣ ನಿಕೃತ್ಯಾ ಪ್ರತ್ಯಪತ್ಸ್ಮಹಿ||
ಲೋಕದ ವಿನಾಶಕ್ಕೇ ನಾವೇ ಕಾರಣವೆಂದು ಹೇಳುತ್ತಾರೆ. ಆದರೆ ಇದಕ್ಕೆಲ್ಲ ಧೃತರಾಷ್ಟ್ರಪುತ್ರನ ದುಷ್ಟಕರ್ಮಗಳೇ ಸಂಪೂರ್ಣ ಕಾರಣವು.
12007022a ಸದೈವ ನಿಕೃತಿಪ್ರಜ್ಞೋ ದ್ವೇಷ್ಟಾ ಮಾಯೋಪಜೀವನಃ|
12007022c ಮಿಥ್ಯಾವೃತ್ತಃ ಸ ಸತತಮಸ್ಮಾಸ್ವನಪಕಾರಿಷು||
ದ್ವೇಷದಿಂದ ಅವನು ಸದೈವವೂ ವಂಚನೆಮಾಡುವುದನ್ನೇ ಯೋಚಿಸುತ್ತಿದ್ದನು. ಮಾಯೆಗಳನ್ನು ಬಳಸುತ್ತಿದ್ದನು. ಮಿಥ್ಯಾಚಾರಿಯಾಗಿದ್ದನು. ಸತತವೂ ನಮಗೆ ಅಪಕಾರ ಮಾಡುತ್ತಿದ್ದನು.
12007023a ಅಂಶಕಾಮಾ ವಯಂ ತೇ ಚ ನ ಚಾಸ್ಮಾಭಿರ್ನ ತೈರ್ಜಿತಮ್|
12007023c ನ ತೈರ್ಭುಕ್ತೇಯಮವನಿರ್ನ ನಾರ್ಯೋ ಗೀತವಾದಿತಮ್||
ಬಯಸಿದ್ದಿದು ನಮಗೂ ಸಿಗಲಿಲ್ಲ, ಅವರಿಗೂ ದೊರಕಲಿಲ್ಲ. ನಾವೂ ಗೆಲ್ಲಲಿಲ್ಲ, ಅವರೂ ಗೆಲ್ಲಲಿಲ್ಲ. ಅವರು ಈ ಭೂಮಿಯನ್ನೂ, ನಾರಿಯರನ್ನೂ, ಗೀತವಾದ್ಯಗಳನ್ನೂ ಭೋಗಿಸಲಿಲ್ಲ.
12007024a ನಾಮಾತ್ಯಸಮಿತೌ ಕಥ್ಯಂ ನ ಚ ಶ್ರುತವತಾಂ ಶ್ರುತಮ್|
12007024c ನ ರತ್ನಾನಿ ಪರಾರ್ಧ್ಯಾನಿ ನ ಭೂರ್ನ ದ್ರವಿಣಾಗಮಃ||
ಅವರು ಅಮಾತ್ಯರ ಸಲಹೆಗಳನ್ನಾಗಲೀ ತಿಳಿದವರ ಹಿತವಚನಗಳನ್ನಾಗಲೀ ಕೇಳಲೇ ಇಲ್ಲ. ರತ್ನಗಳಾಗಲೀ, ಭೂಮಿಯಾಗಲೀ, ಕಪ್ಪ-ಕಾಣಿಕೆಗಳಾಗಲೀ ಅವರಿಗೆ ಸಂತೋಷವನ್ನು ನೀಡಲಿಲ್ಲ.
12007025a ಋದ್ಧಿಮಸ್ಮಾಸು ತಾಂ ದೃಷ್ಟ್ವಾ ವಿವರ್ಣೋ ಹರಿಣಃ ಕೃಶಃ|
12007025c ಧೃತರಾಷ್ಟ್ರಸ್ಯ ನೃಪತೇಃ ಸೌಬಲೇನ ನಿವೇದಿತಃ||
ನಮ್ಮ ಸಮೃದ್ಧಿಯನ್ನು ನೋಡಿ ದುರ್ಯೋಧನನು ಬಿಳಿಚಿಕೊಂಡು ವಿವರ್ಣನಾಗಿ ಕೃಶನಾಗಿಬಿಟ್ಟಿದ್ದನು. ಅದನ್ನು ಸೌಬಲನು ನೃಪತಿ ಧೃತರಾಷ್ಟ್ರನಿಗೆ ನಿವೇದಿಸಿದನು.
12007026a ತಂ ಪಿತಾ ಪುತ್ರಗೃದ್ಧಿತ್ವಾದನುಮೇನೇಽನಯೇ ಸ್ಥಿತಮ್|
12007026c ಅನವೇಕ್ಷ್ಯೈವ ಪಿತರಂ ಗಾಂಗೇಯಂ ವಿದುರಂ ತಥಾ||
12007026e ಅಸಂಶಯಂ ಧೃತರಾಷ್ಟ್ರೋ ಯಥೈವಾಹಂ ತಥಾ ಗತಃ||
ತಂದೆಯು ಮಗನ ಮೇಲಿನ ಪ್ರೀತಿಯಿಂದಾಗಿ ಅವನ ದುಷ್ಟಯೋಜನೆಗಳಿಗೆ ಅನುಮತಿಯನ್ನಿತ್ತನು. ತಂದೆ ಗಾಂಗೇಯ ಮತ್ತು ವಿದುರರ ಮಾತುಗಳನ್ನೂ ತಿರಸ್ಕರಿಸಿದನು. ಇದರಿಂದಾಗಿಯೇ ಇಂದು ಧೃತರಾಷ್ಟ್ರನು ನನ್ನಂತೆಯೇ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಅದರಲ್ಲಿ ಸಂಶಯವೇ ಇಲ್ಲ.
12007027a ಅನಿಯಮ್ಯಾಶುಚಿಂ ಲುಬ್ಧಂ ಪುತ್ರಂ ಕಾಮವಶಾನುಗಮ್|
12007027c ಪತಿತೋ ಯಶಸೋ ದೀಪ್ತಾದ್ಘಾತಯಿತ್ವಾ ಸಹೋದರಾನ್||
ಅಶುಚಿಯೂ, ಲುಬ್ಧನೂ, ಕಾಮವಶನಾಗಿ ನಡೆದುಕೊಳ್ಳುತ್ತಿದ್ದವನೂ ಆಗಿದ್ದ ಪುತ್ರನನ್ನು ನಿಯಂತ್ರಿಸದೇ ಧೃತರಾಷ್ಟ್ರನು ಆ ಸಹೋದರರ ಸಾವಿಗೆ ಕಾರಣನಾಗಿ ಉಜ್ವಲ ಯಶಸ್ಸಿನಿಂದ ಭ್ರಷ್ಟನಾಗಿದ್ದಾನೆ.
12007028a ಇಮೌ ವೃದ್ಧೌ ಚ ಶೋಕಾಗ್ನೌ ಪ್ರಕ್ಷಿಪ್ಯ ಸ ಸುಯೋಧನಃ|
12007028c ಅಸ್ಮತ್ಪ್ರದ್ವೇಷಸಂಯುಕ್ತಃ ಪಾಪಬುದ್ಧಿಃ ಸದೈವ ಹಿ||
ನಮ್ಮೊಡನೆ ಸದೈವವೂ ದ್ವೇಷಯುಕ್ತನಾಗಿದ್ದ ಆ ಪಾಪಬುದ್ಧಿ ಸುಯೋಧನನು ಈ ಇಬ್ಬರು ವೃದ್ಧರನ್ನೂ ಶೋಕಾಗ್ನಿಯಲ್ಲಿ ನೂಕಿ ಬೀಳಿಸಿ ಹೊರಟು ಹೋದನು!
12007029a ಕೋ ಹಿ ಬಂಧುಃ ಕುಲೀನಃ ಸಂಸ್ತಥಾ ಬ್ರೂಯಾತ್ಸುಹೃಜ್ಜನೇ|
12007029c ಯಥಾಸಾವುಕ್ತವಾನ್ಕ್ಷುದ್ರೋ ಯುಯುತ್ಸುರ್ವೃಷ್ಣಿಸಂನಿಧೌ||
ವೃಷ್ಣಿವೀರರಾದ ಕೃಷ್ಣ ಮತ್ತು ಸಾತ್ಯಕಿಯರ ಸನ್ನಿಧಿಯಲ್ಲಿ ಯುದ್ಧೋತ್ಸುಕನಾಗಿ ಆ ಕ್ಷುದ್ರ ದುರ್ಯೋಧನನು ಹೇಳಿದ ಮಾತನ್ನು ಕುಲೀನನಾದ ಯಾವ ಬಂಧುವು ತಾನೇ ಸುಹೃದಯರ ವಿಷಯದಲ್ಲಿ ಆಡುತ್ತಾನೆ?
12007030a ಆತ್ಮನೋ ಹಿ ವಯಂ ದೋಷಾದ್ವಿನಷ್ಟಾಃ ಶಾಶ್ವತೀಃ ಸಮಾಃ|
12007030c ಪ್ರದಹಂತೋ ದಿಶಃ ಸರ್ವಾಸ್ತೇಜಸಾ ಭಾಸ್ಕರಾ ಇವ||
ಭಾಸ್ಕರನು ತೇಜಸ್ಸಿನಿಂದ ಸರ್ವ ದಿಕ್ಕುಗಳನ್ನೂ ಸುಡುವಂತೆ ನಮ್ಮದೇ ದೋಷದಿಂದಾಗಿ ನಾವು ಶಾಶ್ವತವಾಗಿ ವಿನಾಶಹೊಂದಿದೆವು.
12007031a ಸೋಽಸ್ಮಾಕಂ ವೈರಪುರುಷೋ ದುರ್ಮಂತ್ರಿಪ್ರಗ್ರಹಂ ಗತಃ|
12007031c ದುರ್ಯೋಧನಕೃತೇ ಹ್ಯೇತತ್ಕುಲಂ ನೋ ವಿನಿಪಾತಿತಮ್||
ದುಷ್ಟಮಂತ್ರಿಗಳ ಹಿಡಿತದಲ್ಲಿದ್ದ ನಮ್ಮ ಆ ವೈರಪುರುಷ ದುರ್ಯೋಧನನು ಮಾಡಿದ ಕರ್ಮಗಳಿಂದಾಗಿಯೇ ನಮ್ಮ ಈ ಕುಲವು ವಿನಾಶವಾಗಿಹೋಯಿತು.
12007031e ಅವಧ್ಯಾನಾಂ ವಧಂ ಕೃತ್ವಾ ಲೋಕೇ ಪ್ರಾಪ್ತಾಃ ಸ್ಮ ವಾಚ್ಯತಾಮ್||
12007032a ಕುಲಸ್ಯಾಸ್ಯಾಂತಕರಣಂ ದುರ್ಮತಿಂ ಪಾಪಕಾರಿಣಮ್|
12007032c ರಾಜಾ ರಾಷ್ಟ್ರೇಶ್ವರಂ ಕೃತ್ವಾ ಧೃತರಾಷ್ಟ್ರೋಽದ್ಯ ಶೋಚತಿ||
ಅವಧ್ಯರ ವಧೆಗೈದು ನಾವು ಲೋಕನಿಂದೆಗೆ ಪಾತ್ರರಾದೆವು. ಕುಲದ ಅಂತಕನಂತಿದ್ದ ದುರ್ಮತಿ ಪಾಪಕಾರಿಣಿ ದುರ್ಯೋಧನನನ್ನು ರಾಷ್ಟ್ರೇಶ್ವರನನ್ನಾಗಿ ಮಾಡಿ ರಾಜಾ ಧೃತರಾಷ್ಟ್ರನು ಇಂದು ಶೋಕಿಸುತ್ತಿದ್ದಾನೆ.
12007033a ಹತಾಃ ಶೂರಾಃ ಕೃತಂ ಪಾಪಂ ವಿಷಯಃ ಸ್ವೋ ವಿನಾಶಿತಃ|
12007033c ಹತ್ವಾ ನೋ ವಿಗತೋ ಮನ್ಯುಃ ಶೋಕೋ ಮಾಂ ರುಂಧಯತ್ಯಯಮ್||
ಶೂರರು ಹತರಾದರು. ಪಾಪಕರ್ಮವು ನಡೆದುಹೋಯಿತು. ರಾಷ್ಟ್ರವೂ ವಿನಾಶವಾಯಿತು. ಶತ್ರುಗಳನ್ನು ಸಂಹರಿಸಿ ಕ್ರೋಧವೇನೋ ಹೊರಟುಹೋಯಿತು. ಆದರೆ ಈ ಶೋಕವು ನನ್ನನ್ನು ಪೀಡಿಸುತ್ತಿದೆ.
12007034a ಧನಂಜಯ ಕೃತಂ ಪಾಪಂ ಕಲ್ಯಾಣೇನೋಪಹನ್ಯತೇ|
12007034c ತ್ಯಾಗವಾಂಶ್ಚ ಪುನಃ ಪಾಪಂ ನಾಲಂ ಕರ್ತುಮಿತಿ ಶ್ರುತಿಃ||
ಧನಂಜಯ! ಮಾಡಿದ ಪಾಪವನ್ನು ಕಲ್ಯಾಣಕರ್ಮಗಳಿಂದ ಉಪಶಮನಗೊಳಿಸಬಹುದು. ಆದರೆ ತ್ಯಾಗಮಾಡಿದವನು ಪುನಃ ಪಾಪವನ್ನೇ ಮಾಡುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ.
12007035a ತ್ಯಾಗವಾನ್ಜನ್ಮಮರಣೇ ನಾಪ್ನೋತೀತಿ ಶ್ರುತಿರ್ಯದಾ|
12007035c ಪ್ರಾಪ್ತವರ್ತ್ಮಾ ಕೃತಮತಿರ್ಬ್ರಹ್ಮ ಸಂಪದ್ಯತೇ ತದಾ||
ತ್ಯಾಗಿಯು ಜನನ-ಮರಣಗಳನ್ನೂ ಹೊಂದುವುದಿಲ್ಲವೆಂದು ಶ್ರುತಿಗಳು ಹೇಳುತ್ತವೆ. ತ್ಯಾಗಿಯು ನಿಯತ ಬುದ್ಧಿಯುಳ್ಳವನಾಗಿ ಬ್ರಹ್ಮಸಾಕ್ಷಾತ್ಕಾರವನ್ನು ಸುಲಭವಾಗಿ ಪಡೆದುಕೊಳ್ಳುತ್ತಾನೆ.
12007036a ಸ ಧನಂಜಯ ನಿರ್ದ್ವಂದ್ವೋ ಮುನಿರ್ಜ್ಞಾನಸಮನ್ವಿತಃ|
12007036c ವನಮಾಮಂತ್ರ್ಯ ವಃ ಸರ್ವಾನ್ಗಮಿಷ್ಯಾಮಿ ಪರಂತಪ||
ಧನಂಜಯ! ಜ್ಞಾನಸಮನ್ವಿತನಾದ ಮುನಿಯು ನಿರ್ದ್ವಂದ್ವನಾಗಿರುತ್ತಾನೆ. ಪರಂತಪ! ನಿಮ್ಮೆಲ್ಲರ ಅನುಮತಿಯನ್ನು ಪಡೆದು ನಾನು ವನಕ್ಕೆ ಹೋಗುತ್ತೇನೆ.
12007037a ನ ಹಿ ಕೃತ್ಸ್ನತಮೋ ಧರ್ಮಃ ಶಕ್ಯಃ ಪ್ರಾಪ್ತುಮಿತಿ ಶ್ರುತಿಃ|
12007037c ಪರಿಗ್ರಹವತಾ ತನ್ಮೇ ಪ್ರತ್ಯಕ್ಷಮರಿಸೂದನ||
ತ್ಯಾಗಿಯಲ್ಲದವನಿಗೆ ಸಂಪೂರ್ಣ ಧರ್ಮಾಚರಣೆಯು ಶಕ್ಯವಿಲ್ಲವೆಮ್ದು ಶ್ರುತಿಗಳು ಹೇಳುತ್ತವೆ. ಅರಿಸೂದನ! ಅದನ್ನು ನಾನು ಪ್ರತ್ಯಕ್ಷ್ಯವಾಗಿ ಕಂಡುಕೊಂಡಿದ್ದೇನೆ ಕೂಡ.
12007038a ಮಯಾ ನಿಸೃಷ್ಟಂ ಪಾಪಂ ಹಿ ಪರಿಗ್ರಹಮಭೀಪ್ಸತಾ|
12007038c ಜನ್ಮಕ್ಷಯನಿಮಿತ್ತಂ ಚ ಶಕ್ಯಂ ಪ್ರಾಪ್ತುಮಿತಿ ಶ್ರುತಿಃ||
ಪಡೆದುಕೊಳ್ಳಲು ಬಯಸುತ್ತಿದ್ದ ನಾನು ಪಾಪದ ರಾಶಿಯನ್ನೇ ಕೂಡಿಕೊಂಡೆನು. ಜನ್ಮ-ಮೃತ್ಯುಗಳಿಗೆ ಕಾರಣವಾದ ಇದು ಮುಕ್ತಿಯನ್ನು ನೀಡಲು ಶಕ್ಯವಿಲ್ಲವೆಂದು ಶ್ರುತಿಗಳು ಹೇಳುತ್ತವೆ.
12007039a ಸ ಪರಿಗ್ರಹಮುತ್ಸೃಜ್ಯ ಕೃತ್ಸ್ನಂ ರಾಜ್ಯಂ ತಥೈವ ಚ|
12007039c ಗಮಿಷ್ಯಾಮಿ ವಿನಿರ್ಮುಕ್ತೋ ವಿಶೋಕೋ ವಿಜ್ವರಸ್ತಥಾ||
ಆ ಪಡೆದುಕೊಳ್ಳಬೇಕೆಂಬ ಆಸೆಯನ್ನು ಮತ್ತು ಸಂಪೂರ್ಣ ರಾಜ್ಯವನ್ನು ತೊರೆದು ವಿಮುಕ್ತನಾಗಿ, ಶೋಕರಹಿತನಾಗಿ, ಮಮತಾರಹಿತನಾಗಿ ಕಾಡಿಗೆ ಹೊರಟುಹೋಗುತ್ತೇನೆ!
12007040a ಪ್ರಶಾಧಿ ತ್ವಮಿಮಾಮುರ್ವೀಂ ಕ್ಷೇಮಾಂ ನಿಹತಕಂಟಕಾಮ್|
12007040c ನ ಮಮಾರ್ಥೋಽಸ್ತಿ ರಾಜ್ಯೇನ ನ ಭೋಗೈರ್ವಾ ಕುರೂತ್ತಮ||
ಕುರೂತ್ತಮ! ಕಂಟಕರನ್ನು ಕಳೆದುಕೊಂಡು ಕ್ಷೇಮದಿಂದಿರುವ ಈ ಭೂಮಿಯನ್ನು ನೀನು ಆಳು. ನನಗೆ ಈ ರಾಜ್ಯವಾಗಲೀ ಭೋಗವಾಗಲೀ ಯಾವ ಪ್ರಯೋಜನಕ್ಕೂ ಇಲ್ಲ.”
12007041a ಏತಾವದುಕ್ತ್ವಾ ವಚನಂ ಧರ್ಮರಾಜೋ ಯುಧಿಷ್ಠಿರಃ|
12007041c ವ್ಯುಪಾರಮತ್ತತಃ ಪಾರ್ಥಃ ಕನೀಯಾನ್ಪ್ರತ್ಯಭಾಷತ||
ಹೀಗೆ ಹೇಳಿ ಧರ್ಮರಾಜ ಯುಧಿಷ್ಠಿರನು ಸುಮ್ಮನಾದನು. ಅನಂತರ ಕುಂತಿಯ ಮಕ್ಕಳಲ್ಲಿ ಕಡೆಯವನಾದ ಪಾರ್ಥನು ಅದಕ್ಕುತ್ತರವಾಗಿ ಮಾತನಾಡಿದನು.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಪರಿವೇದನಂ ನಾಮ ಸಪ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಪರಿವೇದನೆಯೆನ್ನುವ ಏಳನೇ ಅಧ್ಯಾಯವು.
[1] “ಜನ್ಮಫಲಂ” ಎನ್ನುವುದರ ಬದಲಾಗಿ “ಜಯಫಲಂ” ಎನ್ನುವ ಪಾಠವೂ ಇದೆ [ಭಾರತದರ್ಶನ, ಸಂಪುಟ ೨೧, ಪುಟ ೩೨]
[2] ಕೀರ್ತಿ-ಸ್ವರ್ಗಗಳನ್ನು ಪಡೆದು ಅಮರರೇ ಆಗಿದ್ದಾರೆ.
[3] ಅವರ ಸಾವಿಗೆ ಕಾರಣರಾದುದರಿಂದ