ಶಾಂತಿ ಪರ್ವ: ರಾಜಧರ್ಮ ಪರ್ವ

೬೨

12062001 ಯುಧಿಷ್ಠಿರ ಉವಾಚ

12062001a ಶಿವಾನ್ಸುಖಾನ್ಮಹೋದರ್ಕಾನಹಿಂಸ್ರಾಽಲ್ಲೋಕಸಂಮತಾನ್|

12062001c ಬ್ರೂಹಿ ಧರ್ಮಾನ್ಸುಖೋಪಾಯಾನ್ಮದ್ವಿಧಾನಾಂ ಸುಖಾವಹಾನ್||

ಯುಧಿಷ್ಠಿರನು ಹೇಳಿದನು: “ಕಲ್ಯಾಣಕರವಾದ, ಸುಖಮಯವಾದ, ಅಭ್ಯುದಯವನ್ನುಂಟುಮಾಡುವ, ಅಹಿಂಸಾತ್ಮಕವಾದ, ಲೋಕಸಮ್ಮತವಾದ, ನಮ್ಮಂಥವರಿಗೆ ಸುಖಾವಹವಾದ ಧರ್ಮಗಳ ಕುರಿತು ಹೇಳು!”

12062002 ಭೀಷ್ಮ ಉವಾಚ

12062002a ಬ್ರಾಹ್ಮಣಸ್ಯೇಹ ಚತ್ವಾರ ಆಶ್ರಮಾ ವಿಹಿತಾಃ ಪ್ರಭೋ|

12062002c ವರ್ಣಾಸ್ತಾನನುವರ್ತಂತೇ ತ್ರಯೋ ಭರತಸತ್ತಮ||

ಭೀಷ್ಮನು ಹೇಳಿದನು: “ಪ್ರಭೋ! ಭರತಸತ್ತಮ! ಬ್ರಾಹ್ಮಣನಿಗೆ ನಾಲ್ಕೂ ಆಶ್ರಮಗಳೂ ವಿಹಿತವಾಗಿವೆ. ಉಳಿದ ಮೂರು ವರ್ಣದವರು ಮೂರು ಆಶ್ರಮಗಳನ್ನು ಅನುಸರಿಸುತ್ತಾರೆ.

12062003a ಉಕ್ತಾನಿ ಕರ್ಮಾಣಿ ಬಹೂನಿ ರಾಜನ್

ಸ್ವರ್ಗ್ಯಾಣಿ ರಾಜನ್ಯಪರಾಯಣಾನಿ|

12062003c ನೇಮಾನಿ ದೃಷ್ಟಾಂತವಿಧೌ ಸ್ಮೃತಾನಿ

ಕ್ಷಾತ್ರೇ ಹಿ ಸರ್ವಂ ವಿಹಿತಂ ಯಥಾವತ್||

ರಾಜನ್! ಸ್ವರ್ಗದಾಯಕವಾದ ಅನೇಕ ಕರ್ಮಗಳು ಹೇಳಲ್ಪಟ್ಟಿವೆ. ಯುದ್ಧವೇ ಮೊದಲಾದ ಹಿಂಸಾಕರ್ಮಗಳು ಕ್ಷತ್ರಿಯರಿಗೆ ಮಾತ್ರ ವಿಹಿತಗೊಂಡಿವೆ.

12062004a ಕ್ಷಾತ್ರಾಣಿ ವೈಶ್ಯಾನಿ ಚ ಸೇವಮಾನಃ

ಶೌದ್ರಾಣಿ ಕರ್ಮಾಣಿ ಚ ಬ್ರಾಹ್ಮಣಃ ಸನ್|

12062004c ಅಸ್ಮಿಽಲ್ಲೋಕೇ ನಿಂದಿತೋ ಮಂದಚೇತಾಃ

ಪರೇ ಚ ಲೋಕೇ ನಿರಯಂ ಪ್ರಯಾತಿ||

ಬ್ರಾಹ್ಮಣನಾಗಿದ್ದರೂ ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರರ ಸೇವಾಕರ್ಮಗಳನ್ನು ಮಾಡುವ ಮಂದಚೇತಸನು ಈ ಲೋಕದಲ್ಲಿ ನಿಂದಿಸಲ್ಪಡುವುದಲ್ಲದೇ ಪರಲೋಕದಲ್ಲಿಯೂ ನರಕಕ್ಕೆ ಹೋಗುತ್ತಾನೆ.

12062005a ಯಾ ಸಂಜ್ಞಾ ವಿಹಿತಾ ಲೋಕೇ ದಾಸೇ ಶುನಿ ವೃಕೇ ಪಶೌ|

12062005c ವಿಕರ್ಮಣಿ ಸ್ಥಿತೇ ವಿಪ್ರೇ ತಾಂ ಸಂಜ್ಞಾಂ ಕುರು ಪಾಂಡವ||

ಪಾಂಡವ! ಲೋಕದಲ್ಲಿ ದಾಸ, ನಾಯಿ, ತೋಳ ಮತ್ತು ಪಶುಗಳಿಗೆ ಯಾವ ನಿಂದಾಸೂಚಕ ಸಂಜ್ಞೆಗಳಿವೆಯೋ ಅವುಗಳು ಕರ್ಮಭ್ರಷ್ಟನಾದ ಬ್ರಾಹ್ಮಣನಿಗೂ ಅನ್ವಯಿಸುತ್ತವೆ.

12062006a ಷಟ್ಕರ್ಮಸಂಪ್ರವೃತ್ತಸ್ಯ ಆಶ್ರಮೇಷು ಚತುರ್ಷ್ವಪಿ|

12062006c ಸರ್ವಧರ್ಮೋಪಪನ್ನಸ್ಯ ಸಂಭೂತಸ್ಯ ಕೃತಾತ್ಮನಃ||

12062007a ಬ್ರಾಹ್ಮಣಸ್ಯ ವಿಶುದ್ಧಸ್ಯ ತಪಸ್ಯಭಿರತಸ್ಯ ಚ|

12062007c ನಿರಾಶಿಷೋ ವದಾನ್ಯಸ್ಯ ಲೋಕಾ ಹ್ಯಕ್ಷರಸಂಜ್ಞಿತಾಃ||

ಷಟ್ಕರ್ಮಗಳಲ್ಲಿ ತೊಡಗಿಕೊಂಡು, ನಾಲ್ಕೂ ಆಶ್ರಮಗಳನ್ನೂ ನಡೆಸಿಕೊಂಡು ಸರ್ವಧರ್ಮೋಪಪನ್ನನಾಗಿರುವ, ಕೃತಾತ್ಮನೂ ಜಿತಚಿತ್ತನೂ, ವಿಶುದ್ಧನೂ, ತಪೋನಿರತನೂ, ಆಶಾರಹಿತನೂ, ಉದಾರನೂ ಆಗಿರುವ ಬ್ರಾಹ್ಮಣನಿಗೆ ಅಕ್ಷರ ಲೋಕಗಳೆಂದು ಹೇಳಲ್ಪಟ್ಟಿದೆ.

12062008a ಯೋ ಯಸ್ಮಿನ್ಕುರುತೇ ಕರ್ಮ ಯಾದೃಶಂ ಯೇನ ಯತ್ರ ಚ|

12062008c ತಾದೃಶಂ ತಾದೃಶೇನೈವ ಸ ಗುಣಂ ಪ್ರತಿಪದ್ಯತೇ||

ಯಾರು ಯಾವ ಆಶ್ರಮದಲ್ಲಿ ಯಾವ ಕರ್ಮವನ್ನು ಯಾವ ಕಾರಣದಿಂದ ಎಲ್ಲಿ ಮಾಡುತ್ತಾರೋ ಅವರು ಆ ಕರ್ಮಕ್ಕೆ ತಕ್ಕುದಾದ ಫಲವನ್ನು ಅದೇ ವಿಧಾನದಲ್ಲಿಯೇ ಪಡೆಯುತ್ತಾರೆ.

12062009a ವೃದ್ಧ್ಯಾ ಕೃಷಿವಣಿಕ್ತ್ವೇನ ಜೀವಸಂಜೀವನೇನ ಚ|

12062009c ವೇತ್ತುಮರ್ಹಸಿ ರಾಜೇಂದ್ರ ಸ್ವಾಧ್ಯಾಯಗಣಿತಂ ಮಹತ್||

ವೈಶ್ಯರಿಗೆ ಹೇಗೆ ಕೃಷಿ, ವಾಣಿಜ್ಯಗಳು ಮತ್ತು ಕ್ಷತ್ರಿಯರಿಗೆ ಪ್ರಜಾಪರಿಪಾಲನೆಯು ಮುಖ್ಯ ಕರ್ಮಗಳೋ ಹಾಗೆ ಬ್ರಾಹ್ಮಣನಿಗೆ ಸ್ವಾಧ್ಯಾಯವು ಮಹತ್ತರ ಕರ್ಮವಾಗಿದೆ.

12062010a ಕಾಲಸಂಚೋದಿತಃ ಕಾಲಃ ಕಾಲಪರ್ಯಾಯನಿಶ್ಚಿತಃ|

12062010c ಉತ್ತಮಾಧಮಮಧ್ಯಾನಿ ಕರ್ಮಾಣಿ ಕುರುತೇಽವಶಃ||

ಕಾಲನಿಂದ ಪ್ರೇರಿತರಾಗಿ ಮತ್ತು ಹಿಂದಿನ ಕರ್ಮಫಲಗಳ ವಾಸನೆಯಿಂದ ಪ್ರಭಾವಿತರಾಗಿ ಮನುಷ್ಯರು ಅವಶರಾಗಿ ಉತ್ತಮ-ಅಧಮ-ಮಧ್ಯಮ ಕರ್ಮಗಳನ್ನು ಮಾಡುತ್ತಾರೆ.

12062011a ಅಂತವಂತಿ ಪ್ರದಾನಾನಿ ಪುರಾ ಶ್ರೇಯಸ್ಕರಾಣಿ ಚ|

12062011c ಸ್ವಕರ್ಮನಿರತೋ ಲೋಕೋ ಹ್ಯಕ್ಷರಃ ಸರ್ವತೋಮುಖಃ||

ದೇಹಪ್ರಾಪ್ತಿಯೆಂಬ ಶ್ರೇಯಸ್ಸಿಗೆ ಹಿಂದಿನ ಕಾರಣಗಳು ದೇಹದೊಡನೆಯೇ ಅಂತ್ಯವಾಗುವವು. ಆದುದರಿಂದ ಸ್ವಕರ್ಮನಿರತನಾದವನು ಸರ್ವತೋಮುಖನಾಗಿ ಅಕ್ಷರ ಲೋಕಗಳನ್ನು ಸೇರುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ದ್ವಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ತೆರಡನೇ ಅಧ್ಯಾಯವು.

Comments are closed.