ಶಾಂತಿ ಪರ್ವ: ರಾಜಧರ್ಮ ಪರ್ವ

೫೬

12056001 ವೈಶಂಪಾಯನ ಉವಾಚ

12056001a ಪ್ರಣಿಪತ್ಯ ಹೃಷೀಕೇಶಮಭಿವಾದ್ಯ ಪಿತಾಮಹಮ್|

12056001c ಅನುಮಾನ್ಯ ಗುರೂನ್ಸರ್ವಾನ್ಪರ್ಯಪೃಚ್ಚದ್ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಹೃಷೀಕೇಶನಿಗೆ ನಮಸ್ಕರಿಸಿ, ಪಿತಾಮಹನಿಗೂ ಅಭಿವಾದನ ಮಾಡಿ, ಸರ್ವ ಗುರುಗಳ ಅನುಮತಿಯನ್ನೂ ಪಡೆದು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸಿದನು:

12056002a ರಾಜ್ಯಂ ವೈ ಪರಮೋ ಧರ್ಮ ಇತಿ ಧರ್ಮವಿದೋ ವಿದುಃ|

12056002c ಮಹಾಂತಮೇತಂ ಭಾರಂ ಚ ಮನ್ಯೇ ತದ್ಬ್ರೂಹಿ ಪಾರ್ಥಿವ||

“ಪಾರ್ಥಿವ! ರಾಜನಿಗೆ ರಾಜ್ಯವೇ ಪರಮ ಧರ್ಮವೆಂದು ಧರ್ಮವನ್ನು ತಿಳಿದವರು ಹೇಳುತ್ತಾರೆ. ಆದರೆ ಈ ರಾಜಧರ್ಮವು ಅತ್ಯಂತ ದೊಡ್ಡ ಹೊಣೆಯೆಂದು ನನಗನ್ನಿಸುತ್ತದೆ. ಅದರ ಕುರಿತು ಹೇಳು!

12056003a ರಾಜಧರ್ಮಾನ್ವಿಶೇಷೇಣ ಕಥಯಸ್ವ ಪಿತಾಮಹ|

12056003c ಸರ್ವಸ್ಯ ಜೀವಲೋಕಸ್ಯ ರಾಜಧರ್ಮಾಃ ಪರಾಯಣಮ್||

ಪಿತಾಮಹ! ವಿಶೇಷವಾಗಿ ರಾಜಧರ್ಮಗಳ ಕುರಿತೇ ಹೇಳು! ಲೋಕದ ಸರ್ವ ಜೀವಿಗಳಿಗೆ ರಾಜಧರ್ಮಗಳೇ ಆಶ್ರಯಸ್ಥಾನವಾಗಿವೆ.

12056004a ತ್ರಿವರ್ಗೋಽತ್ರ ಸಮಾಸಕ್ತೋ ರಾಜಧರ್ಮೇಷು ಕೌರವ|

12056004c ಮೋಕ್ಷಧರ್ಮಶ್ಚ ವಿಸ್ಪಷ್ಟಃ ಸಕಲೋಽತ್ರ ಸಮಾಹಿತಃ||

ಕೌರವ! ರಾಜಧರ್ಮಗಳಲ್ಲಿ ಧರ್ಮ-ಅರ್ಥ-ಕಾಮಗಳೆಂಬ ತ್ರಿವರ್ಗಗಳೂ ಸೇರಿಕೊಂಡಿವೆ. ಸಕಲ ಮೋಕ್ಷಧರ್ಮವೂ ಇದರಲ್ಲಿಯೇ ಸೇರಿಕೊಂಡಿದೆ.

12056005a ಯಥಾ ಹಿ ರಶ್ಮಯೋಽಶ್ವಸ್ಯ ದ್ವಿರದಸ್ಯಾಂಕುಶೋ ಯಥಾ|

12056005c ನರೇಂದ್ರಧರ್ಮೋ ಲೋಕಸ್ಯ ತಥಾ ಪ್ರಗ್ರಹಣಂ ಸ್ಮೃತಮ್||

ಕುದುರೆಗಳಿಗೆ ಕಡಿವಾಣಗಳು ಹೇಗೋ ಮತ್ತು ಆನೆಗೆ ಅಂಕುಶವು ಹೇಗೋ ಹಾಗೆ ರಾಜಧರ್ಮವು ಲೋಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಅವಶ್ಯಕವೆಂದು ಹೇಳುತ್ತಾರೆ.

12056006a ಅತ್ರ ವೈ ಸಂಪ್ರಮೂಢೇ ತು ಧರ್ಮೇ ರಾಜರ್ಷಿಸೇವಿತೇ|

12056006c ಲೋಕಸ್ಯ ಸಂಸ್ಥಾ ನ ಭವೇತ್ಸರ್ವಂ ಚ ವ್ಯಾಕುಲಂ ಭವೇತ್||

ರಾಜರ್ಷಿಗಳು ನಡೆದುಕೊಂಡು ಬಂದಿರುವ ಈ ಧರ್ಮದ ವಿಷಯದಲ್ಲಿ ವಿಮೋಹಗೊಂಡರೆ ಲೋಕದ ವ್ಯವಸ್ಥೆಯೇ ಅಸ್ತವ್ಯಸ್ತವಾಗುತ್ತದೆ. ಎಲ್ಲವೂ ವ್ಯಾಕುಲಗೊಳ್ಳುತ್ತವೆ.

12056007a ಉದಯನ್ಹಿ ಯಥಾ ಸೂರ್ಯೋ ನಾಶಯತ್ಯಾಸುರಂ ತಮಃ|

12056007c ರಾಜಧರ್ಮಾಸ್ತಥಾಲೋಕ್ಯಾಮಾಕ್ಷಿಪಂತ್ಯಶುಭಾಂ ಗತಿಮ್||

ಸೂರ್ಯನು ಉದಯಿಸುತ್ತಿದ್ದಂತೆಯೇ ಅಮಂಗಳಕರ ಕತ್ತಲೆಯು ನಾಶವಾಗುವಂತೆ ರಾಜಧರ್ಮದಿಂದ ಲೋಕದ ಅಮಂಗಳಕರ ಅಪ್ರಕಾಶ ಮಾರ್ಗವು ದೂರವಾಗುತ್ತದೆ.

12056008a ತದಗ್ರೇ ರಾಜಧರ್ಮಾಣಾಮರ್ಥತತ್ತ್ವಂ ಪಿತಾಮಹ|

12056008c ಪ್ರಬ್ರೂಹಿ ಭರತಶ್ರೇಷ್ಠ ತ್ವಂ ಹಿ ಬುದ್ಧಿಮತಾಂ ವರಃ||

ಪಿತಾಮಹ! ಭರತಶ್ರೇಷ್ಠ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಆದುದರಿಂದ ಮೊದಲು ನನಗೆ ರಾಜಧರ್ಮಗಳನ್ನು ತತ್ತ್ವಾರ್ಥಗಳೊಂದಿಗೆ ಹೇಳಿ ತಿಳಿಸು!

12056009a ಆಗಮಶ್ಚ ಪರಸ್ತ್ವತ್ತಃ ಸರ್ವೇಷಾಂ ನಃ ಪರಂತಪ|

12056009c ಭವಂತಂ ಹಿ ಪರಂ ಬುದ್ಧೌ ವಾಸುದೇವೋಽಭಿಮನ್ಯತೇ||

ಪರಂತಪ! ಅನಂತರ ಆಗಮಗಳ ತತ್ತ್ವಗಳೆಲ್ಲವನ್ನೂ ಹೇಳು. ನೀನು ಪರಮ ಬುದ್ಧಿಯುಳ್ಳವನು ಎಂದು ವಾಸುದೇವನ ಅಭಿಪ್ರಾಯವಾಗಿದೆ!”

12056010 ಭೀಷ್ಮ ಉವಾಚ

12056010a ನಮೋ ಧರ್ಮಾಯ ಮಹತೇ ನಮಃ ಕೃಷ್ಣಾಯ ವೇಧಸೇ|

12056010c ಬ್ರಾಹ್ಮಣೇಭ್ಯೋ ನಮಸ್ಕೃತ್ಯ ಧರ್ಮಾನ್ವಕ್ಷ್ಯಾಮಿ ಶಾಶ್ವತಾನ್||

ಭೀಷ್ಮನು ಹೇಳಿದನು: “ಮಹತ್ತರ ಧರ್ಮಕ್ಕೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ.

12056011a ಶೃಣು ಕಾರ್ತ್ಸ್ನ್ಯೇನ ಮತ್ತಸ್ತ್ವಂ ರಾಜಧರ್ಮಾನ್ಯುಧಿಷ್ಠಿರ|

12056011c ನಿರುಚ್ಯಮಾನಾನ್ನಿಯತೋ ಯಚ್ಚಾನ್ಯದಭಿವಾಂಚಸಿ||

ಯುಧಿಷ್ಠಿರ! ನನ್ನಿಂದ ರಾಜಧರ್ಮಗಳ ಕುರಿತು ಸಂಪೂರ್ಣವಾಗಿ ಕೇಳು. ನಾನು ಹೇಳುವಾಗ ಕೂಡ ಮಧ್ಯದಲ್ಲಿ ನೀನು ಬೇಕಾದ ಪ್ರಶ್ನೆಗಳನ್ನು ಕೇಳಬಹುದು!

12056012a ಆದಾವೇವ ಕುರುಶ್ರೇಷ್ಠ ರಾಜ್ಞಾ ರಂಜನಕಾಮ್ಯಯಾ|

12056012c ದೇವತಾನಾಂ ದ್ವಿಜಾನಾಂ ಚ ವರ್ತಿತವ್ಯಂ ಯಥಾವಿಧಿ||

ಕುರುಶ್ರೇಷ್ಠ! ಮೊಟ್ಟಮೊದಲನೆಯದಾಗಿ ರಾಜನು ಯಥಾವಿಧಿಯಾಗಿ ದೇವತೆಗಳನ್ನು ಮತ್ತು ದ್ವಿಜರನ್ನು ತೃಪ್ತಿಗೊಳಿಸುವಂತೆ ನಡೆದುಕೊಳ್ಳಬೇಕು.

12056013a ದೈವತಾನ್ಯರ್ಚಯಿತ್ವಾ ಹಿ ಬ್ರಾಹ್ಮಣಾಂಶ್ಚ ಕುರೂದ್ವಹ|

12056013c ಆನೃಣ್ಯಂ ಯಾತಿ ಧರ್ಮಸ್ಯ ಲೋಕೇನ ಚ ಸ ಮಾನ್ಯತೇ||

ಕುರೂದ್ವಹ! ದೇವತೆಗಳನ್ನು ಮತ್ತು ಬ್ರಾಹ್ಮಣರನ್ನು ಅರ್ಚಿಸಿದ ರಾಜನು ಧರ್ಮದ ಋಣದಿಂದ ಮುಕ್ತನಾಗುತ್ತಾನೆ ಮತ್ತು ಲೋಕದಲ್ಲಿ ಮಾನ್ಯನಾಗುತ್ತಾನೆ.

12056014a ಉತ್ಥಾನೇ ಚ ಸದಾ ಪುತ್ರ ಪ್ರಯತೇಥಾ ಯುಧಿಷ್ಠಿರ|

12056014c ನ ಹ್ಯುತ್ಥಾನಮೃತೇ ದೈವಂ ರಾಜ್ಞಾಮರ್ಥಪ್ರಸಿದ್ಧಯೇ||

ಮಗೂ ಯುಧಿಷ್ಠಿರ! ಸದಾ ಪುರುಷಾರ್ಥಗಳ ಸಿದ್ಧಿಗಾಗಿ ಪ್ರಯತ್ನಶೀಲನಾಗಿರಬೇಕು! ಪುರುಷಪ್ರಯತ್ನವಿಲ್ಲದೇ ರಾಜರಿಗೆ ಕೇವಲ ದೈವವು ಮಾತ್ರ ಪುರುಷಾರ್ಥಗಳನ್ನು ಅನುಗ್ರಹಿಸುವುದಿಲ್ಲ.

12056015a ಸಾಧಾರಣಂ ದ್ವಯಂ ಹ್ಯೇತದ್ದೈವಮುತ್ಥಾನಮೇವ ಚ|

12056015c ಪೌರುಷಂ ಹಿ ಪರಂ ಮನ್ಯೇ ದೈವಂ ನಿಶ್ಚಿತ್ಯಮುಚ್ಯತೇ||

ಸಾಧಾರಣವಾಗಿ ಅದೃಷ್ಟ ಮತ್ತು ಪುರುಷಪ್ರಯತ್ನ ಇವೆರಡೂ ಕಾರ್ಯದ ಸಿದ್ಧಿಗೆ ಕಾರಣಗಳೆನಿಸಿಕೊಳ್ಳುತ್ತವೆ. ಆದರೆ ಇವೆರಡರಲ್ಲಿ ಪುರುಷಪ್ರಯತ್ನವೇ ಶ್ರೇಷ್ಠವೆಂದು ನನಗನ್ನಿಸುತ್ತದೆ. ಏಕೆಂದರೆ ಅದೃಷ್ಟವು ಮೊದಲೇ ನಿಶ್ಚಿತವಾಗಿಬಿಟ್ಟಿರುತ್ತದೆ.

12056016a ವಿಪನ್ನೇ ಚ ಸಮಾರಂಭೇ ಸಂತಾಪಂ ಮಾ ಸ್ಮ ವೈ ಕೃಥಾಃ|

12056016c ಘಟತೇ ವಿನಯಸ್ತಾತ ರಾಜ್ಞಾಮೇಷ ನಯಃ ಪರಃ||

ಮಗೂ! ಪ್ರಾರಂಭಿಸಿದ ಕಾರ್ಯವು ಸಿದ್ಧಿಯಾಗದಿದ್ದರೂ ಸಂತಾಪಪಡಬಾರದು. ಒಂದು ಉಪಾಯವು ಫಲಿಸದಿದ್ದರೆ ಇನ್ನೊಂದು ಉಪಾಯವನ್ನು ಬಳಸಬೇಕಾಗುತ್ತದೆ.

12056017a ನ ಹಿ ಸತ್ಯಾದೃತೇ ಕಿಂ ಚಿದ್ರಾಜ್ಞಾಂ ವೈ ಸಿದ್ಧಿಕಾರಣಮ್|

12056017c ಸತ್ಯೇ ಹಿ ರಾಜಾ ನಿರತಃ ಪ್ರೇತ್ಯ ಚೇಹ ಚ ನಂದತಿ||

ಸತ್ಯವನ್ನು ಬಿಟ್ಟು ಬೇರೆ ಯಾವುದೂ ರಾಜನ ಸಿದ್ಧಿಗೆ ಕಾರಣವಾಗುವುದಿಲ್ಲ. ಸತ್ಯದಲ್ಲಿಯೇ ನಿರತನಾದ ರಾಜನು ಇಹದಲ್ಲಿಯೂ ಪರದಲ್ಲಿಯೂ ಸುಖವನ್ನು ಅನುಭವಿಸುತ್ತಾನೆ.

12056018a ಋಷೀಣಾಮಪಿ ರಾಜೇಂದ್ರ ಸತ್ಯಮೇವ ಪರಂ ಧನಮ್|

12056018c ತಥಾ ರಾಜ್ಞಃ ಪರಂ ಸತ್ಯಾನ್ನಾನ್ಯದ್ವಿಶ್ವಾಸಕಾರಣಮ್||

ರಾಜೇಂದ್ರ! ಋಷಿಗಳಿಗೆ ಕೂಡ ಸತ್ಯವೇ ಪರಮ ಧನವು. ಹಾಗೆಯೇ ರಾಜರಿಗೆ ಸತ್ಯವನ್ನು ಬಿಟ್ಟರೆ ಬೇರೆ ಯಾವುದೂ ಪ್ರಜೆಗಳ ವಿಶ್ವಾಸಕ್ಕೆ ಕಾರಣವಾಗುವುದಿಲ್ಲ.

12056019a ಗುಣವಾನ್ಶೀಲವಾನ್ದಾಂತೋ ಮೃದುರ್ಧರ್ಮ್ಯೋ ಜಿತೇಂದ್ರಿಯಃ|

12056019c ಸುದರ್ಶಃ ಸ್ಥೂಲಲಕ್ಷ್ಯಶ್ಚ ನ ಭ್ರಶ್ಯೇತ ಸದಾ ಶ್ರಿಯಃ||

ಗುಣವಂತನೂ, ಶೀಲವಂತನೂ, ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವವನೂ, ವೃದುಸ್ವಭಾವದವನೂ, ದಾನಮಾಡುವ ಉದಾರಬುದ್ಧಿಯುಳ್ಳವನೂ, ಸ್ಥೂಲಲಕ್ಷ್ಯನೂ ಆದ ರಾಜನು ಯಾವಾಗಲೂ ಶ್ರೀಯಿಂದ ಭ್ರಷ್ಟನಾಗುವುದಿಲ್ಲ.

12056020a ಆರ್ಜವಂ ಸರ್ವಕಾರ್ಯೇಷು ಶ್ರಯೇಥಾಃ ಕುರುನಂದನ|

12056020c ಪುನರ್ನಯವಿಚಾರೇಣ ತ್ರಯೀಸಂವರಣೇನ ಚ||

ಕುರುನಂದನ! ಸರ್ವಕಾರ್ಯಗಳಲ್ಲಿ ಸರಳತೆಯನ್ನು ಬಳಸಬೇಕು. ಆದರೆ ನೀತಿಶಾಸ್ತ್ರದ ಪರಾಮರ್ಶೆಯಂತೆ ಮೂರನ್ನು[1] ಮಾತ್ರ ಗುಟ್ಟಾಗಿಡಬೇಕು.

12056021a ಮೃದುರ್ಹಿ ರಾಜಾ ಸತತಂ ಲಂಘ್ಯೋ ಭವತಿ ಸರ್ವಶಃ|

12056021c ತೀಕ್ಷ್ಣಾಚ್ಚೋದ್ವಿಜತೇ ಲೋಕಸ್ತಸ್ಮಾದುಭಯಮಾಚರ||

ರಾಜನು ಮೃದುಸ್ವಭಾವದವನಾಗಿರಬೇಕು. ಆದರೆ ಎಲ್ಲ ಸಂದರ್ಭಗಳಲ್ಲಿಯೂ ಮೃದುವಾಗಿದ್ದರೆ ಎಲ್ಲರೂ ಅವನನ್ನು ಉಲ್ಲಂಘಿಸಬಹುದು. ಹೀಗೆಂದು ರಾಜನು ಸದಾ ಕ್ರೂರಿಯೂ ಆಗಿರಬಾರದು. ಸರ್ವದಾ ಕ್ರೂರಿಯಾಗಿದ್ದರೆ ಜನರು ಉದ್ವಿಗ್ನರಾಗುತ್ತಾರೆ.

12056022a ಅದಂಡ್ಯಾಶ್ಚೈವ ತೇ ನಿತ್ಯಂ ವಿಪ್ರಾಃ ಸ್ಯುರ್ದದತಾಂ ವರ|

12056022c ಭೂತಮೇತತ್ಪರಂ ಲೋಕೇ ಬ್ರಾಹ್ಮಣಾ ನಾಮ ಭಾರತ||

ಭಾರತ! ದಾನಿಗಳಲ್ಲಿ ಶ್ರೇಷ್ಠನೇ! ನೀನು ಎಂದೂ ಬ್ರಾಹ್ಮಣರನ್ನು ದಂಡಿಸಬಾರದು. ಏಕೆಂದರೆ ಬ್ರಾಹ್ಮಣನೆಂಬುವನೇ ಲೋಕದ ಜೀವಿಗಳಲ್ಲಿ ಶ್ರೇಷ್ಠನು.

12056023a ಮನುನಾ ಚಾಪಿ ರಾಜೇಂದ್ರ ಗೀತೌ ಶ್ಲೋಕೌ ಮಹಾತ್ಮನಾ|

12056023c ಧರ್ಮೇಷು ಸ್ವೇಷು ಕೌರವ್ಯ ಹೃದಿ ತೌ ಕರ್ತುಮರ್ಹಸಿ||

ರಾಜೇಂದ್ರ! ಕೌರವ್ಯ! ಈ ಧರ್ಮದ ಕುರಿತು ಮನುವು ಈ ಎರಡು ಶ್ಲೋಕಗಳನ್ನು ಹೇಳಿದ್ದಾನೆ. ಇವೆರಡನ್ನು ನೀನು ಹೃದ್ಗತಮಾಡಿಕೊಳ್ಳಬೇಕು.

12056024a ಅದ್ಭ್ಯೋಽಗ್ನಿರ್ಬ್ರಹ್ಮತಃ ಕ್ಷತ್ರಮಶ್ಮನೋ ಲೋಹಮುತ್ಥಿತಮ್|

12056024c ತೇಷಾಂ ಸರ್ವತ್ರಗಂ ತೇಜಃ ಸ್ವಾಸು ಯೋನಿಷು ಶಾಮ್ಯತಿ||

“ಅಗ್ನಿಯು ನೀರಿನಿಂದ, ಕ್ಷತ್ರಿಯನು ಬ್ರಾಹ್ಮಣನಿಂದ ಮತ್ತು ಲೋಹವು ಕಲ್ಲಿನಿಂದ ಹುಟ್ಟಿವೆ. ಸರ್ವತ್ರವೂ ತಮ್ಮ ತೇಜಸ್ಸನ್ನು ಬೀರುವ ಅಗ್ನಿ, ಕ್ಷತ್ರಿಯ ಮತ್ತು ಲೋಹಗಳು ಅವುಗಳ ಜನ್ಮಸ್ಥಾನಗಳಲ್ಲಿ ಪ್ರಭಾವ ಬೀರುವುದಿಲ್ಲ ಮಾತ್ರವಲ್ಲದೇ ಅವುಗಳಲ್ಲಿ ವಿನಾಶವನ್ನೇ ಹೊಂದುತ್ತವೆ.

12056025a ಅಯೋ ಹಂತಿ ಯದಾಶ್ಮಾನಮಗ್ನಿಶ್ಚಾಪೋಽಭಿಪದ್ಯತೇ|

12056025c ಬ್ರಹ್ಮ ಚ ಕ್ಷತ್ರಿಯೋ ದ್ವೇಷ್ಟಿ ತದಾ ಸೀದಂತಿ ತೇ ತ್ರಯಃ||

ಕಲ್ಲನ್ನು ಒಡೆಯಲು ಹೋದ ಲೋಹವು ಮೊಂಡಾಗುತ್ತದೆ. ನೀರನ್ನು ಸುಡಲು ಹೋದರೆ ಅಗ್ನಿಯೇ ಆರಿಹೋಗುತ್ತದೆ. ಕ್ಷತ್ರಿಯನು ಬ್ರಾಹ್ಮಣನನ್ನು ದ್ವೇಷಿಸಿದರೆ ನಾಶವಾಗುತ್ತಾನೆ. ಹೀಗೆ ಈ ಮೂರೂ ನಾಶಹೊಂದುತ್ತವೆ.”

12056026a ಏತಜ್ಞಾತ್ವಾ ಮಹಾರಾಜ ನಮಸ್ಯಾ ಏವ ತೇ ದ್ವಿಜಾಃ|

12056026c ಭೌಮಂ ಬ್ರಹ್ಮ ದ್ವಿಜಶ್ರೇಷ್ಠಾ ಧಾರಯಂತಿ ಶಮಾನ್ವಿತಾಃ||

ಮಹಾರಾಜ! ಇದನ್ನು ಅರಿತುಕೊಂಡು ನೀನು ದ್ವಿಜರ ಕುರಿತು ಪೂಜ್ಯಭಾವವನ್ನೇ ತಾಳಿಕೊಂಡಿರಬೇಕು. ಶಮಾನ್ವಿತರಾದ ಬ್ರಾಹ್ಮಣರು ಭೂಮಿಯಲ್ಲಿ ಬ್ರಹ್ಮವನ್ನೇ ಧರಿಸಿಕೊಂಡಿರುತ್ತಾರೆ.

12056027a ಏವಂ ಚೈವ ನರವ್ಯಾಘ್ರ ಲೋಕತಂತ್ರವಿಘಾತಕಾಃ|

12056027c ನಿಗ್ರಾಹ್ಯಾ ಏವ ಸತತಂ ಬಾಹುಭ್ಯಾಂ ಯೇ ಸ್ಯುರೀದೃಶಾಃ||

ನರವ್ಯಾಘ್ರ! ಆದರೆ ಬ್ರಾಹ್ಮಣರು ಲೋಕತಂತ್ರವನ್ನು ನಾಶಗೊಳಿಸುವವರಾಗಿದ್ದರೆ ಅವರನ್ನು ಸತತವಾಗಿ ಬಾಹುಬಲದಿಂದ ನಿಗ್ರಹಿಸಬೇಕು.

12056028a ಶ್ಲೋಕೌ ಚೋಶನಸಾ ಗೀತೌ ಪುರಾ ತಾತ ಮಹರ್ಷಿಣಾ|

12056028c ತೌ ನಿಬೋಧ ಮಹಾಪ್ರಾಜ್ಞ ತ್ವಮೇಕಾಗ್ರಮನಾ ನೃಪ||

ಮಗೂ! ನೃಪ! ಮಹಾಪ್ರಾಜ್ಞ! ಇದರ ಕುರಿತಾಗಿ ಹಿಂದೆ ಮಹರ್ಷಿ ಉಶನಸನು ಈ ಎರಡು ಶ್ಲೋಕ ಗೀತೆಗಳನ್ನು ರಚಿಸಿದ್ದಾನೆ. ಅವುಗಳನ್ನು ಏಕಾಗ್ರಚಿತ್ತನಾಗಿ ಕೇಳು!

12056029a ಉದ್ಯಮ್ಯ ಶಸ್ತ್ರಮಾಯಾಂತಮಪಿ ವೇದಾಂತಗಂ ರಣೇ|

12056029c ನಿಗೃಹ್ಣೀಯಾತ್ಸ್ವಧರ್ಮೇಣ ಧರ್ಮಾಪೇಕ್ಷೀ ನರೇಶ್ವರಃ||

“ಶಸ್ತ್ರಗಳನ್ನೆತ್ತಿ ವೇದಾಂತಗನು ರಣದಲ್ಲಿ ಬಂದರೆ ಧರ್ಮಾಪೇಕ್ಷೀ ನರೇಶ್ವರನು ಸ್ವಧರ್ಮವನ್ನನುಸರಿಸಿ ಅವನನ್ನು ಸಂಹರಿಸಬೇಕು.

12056030a ವಿನಶ್ಯಮಾನಂ ಧರ್ಮಂ ಹಿ ಯೋ ರಕ್ಷತಿ ಸ ಧರ್ಮವಿತ್|

12056030c ನ ತೇನ ಭ್ರೂಣಹಾ ಸ ಸ್ಯಾನ್ಮನ್ಯುಸ್ತಂ ಮನುಮೃಚ್ಚತಿ||

ವಿನಾಶವಾಗುತ್ತಿರುವ ಧರ್ಮವನ್ನು ರಕ್ಷಿಸುವವನೇ ಧರ್ಮವಿದುವು. ಆಗ ರಾಜನು ಆ ಬ್ರಾಹ್ಮಣನನ್ನು ಕೊಂದಂತಾಗುವುದಿಲ್ಲ. ಕೋಪವೇ ಬ್ರಾಹ್ಮಣನ ನಾಶಕ್ಕೆ ಕಾರಣವೆನಿಸುತ್ತದೆ.” 

12056031a ಏವಂ ಚೈವ ನರಶ್ರೇಷ್ಠ ರಕ್ಷ್ಯಾ ಏವ ದ್ವಿಜಾತಯಃ|

12056031c ಸ್ವಪರಾದ್ಧಾನಪಿ ಹಿ ತಾನ್ವಿಷಯಾಂತೇ ಸಮುತ್ಸೃಜೇತ್||

ನರಶ್ರೇಷ್ಠ! ಹೀಗಿದ್ದರೂ ಬ್ರಾಹ್ಮಣರನ್ನು ರಕ್ಷಿಸಲೇ ಬೇಕು. ಅಪರಾಧವನ್ನೆಸಗಿದ ಬ್ರಾಹ್ಮಣನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು.

12056032a ಅಭಿಶಸ್ತಮಪಿ ಹ್ಯೇಷಾಂ ಕೃಪಾಯೀತ ವಿಶಾಂ ಪತೇ|

12056032c ಬ್ರಹ್ಮಘ್ನೇ ಗುರುತಲ್ಪೇ ಚ ಭ್ರೂಣಹತ್ಯೇ ತಥೈವ ಚ||

12056033a ರಾಜದ್ವಿಷ್ಟೇ ಚ ವಿಪ್ರಸ್ಯ ವಿಷಯಾಂತೇ ವಿಸರ್ಜನಮ್|

12056033c ವಿಧೀಯತೇ ನ ಶಾರೀರಂ ಭಯಮೇಷಾಂ ಕದಾ ಚನ||

ವಿಶಾಂಪತೇ! ಮಹಾಪಾಪಿಗಳಾದ ಬ್ರಾಹ್ಮಣರ ಮೇಲೂ ಕೃಪೆಯನ್ನೇ ತೋರಬೇಕು. ಬ್ರಹ್ಮಹತ್ಯೆ ಮಾಡಿದ, ಗುರುಪತ್ನೀಸಮಾಗಮ ಮಾಡಿದ, ಭ್ರೂಣಹತ್ಯೆ ಮಾಡಿದ ಮತ್ತು ರಾಜದ್ರೋಹವನ್ನೆಸಗಿದ ವಿಪ್ರನನ್ನು ರಾಜ್ಯದ ಹೊರಗೆ ಕಳುಹಿಸಬೇಕು. ಶಾರೀರಕ ಶಿಕ್ಷೆಯ ಭಯವನ್ನು ಮಾತ್ರ ಯಾವಾಗಲೂ ವಿಧಿಸಬಾರದು.

12056034a ದಯಿತಾಶ್ಚ ನರಾಸ್ತೇ ಸ್ಯುರ್ನಿತ್ಯಂ ಪುರುಷಸತ್ತಮ[2]|

12056034c ನ ಕೋಶಃ ಪರಮೋ ಹ್ಯನ್ಯೋ ರಾಜ್ಞಾಂ ಪುರುಷಸಂಚಯಾತ್||

ಪುರುಷಸತ್ತಮ! ಅಂಥವನು ನಿತ್ಯವೂ ಜನರ ಪ್ರಿಯನಾಗಿರುತ್ತಾನೆ. ರಾಜನಾದವನಿಗೆ ಪ್ರಜೆಗಳ ಪ್ರೀತಿಸಂಚಯವೇ ಉತ್ತಮ ಧನಸಂಗ್ರಹವೆಂದು ಭಾವಿಸಬೇಕು.

12056035a ದುರ್ಗೇಷು ಚ ಮಹಾರಾಜ ಷಟ್ಸು ಯೇ ಶಾಸ್ತ್ರನಿಶ್ಚಿತಾಃ|

12056035c ಸರ್ವೇಷು ತೇಷು ಮನ್ಯಂತೇ ನರದುರ್ಗಂ ಸುದುಸ್ತರಮ್||

ಮಹಾರಾಜ! ಆರು ದುರ್ಗ[3]ಗಳಲ್ಲಿ ಮನುಷ್ಯದುರ್ಗವೇ ಎಲ್ಲ ದುರ್ಗಗಳಿಗಿಂತ ದುಸ್ತರವಾದುದೆಂದು ಶಾಸ್ತ್ರನಿಶ್ಚಿತವಾಗಿದೆ.

12056036a ತಸ್ಮಾನ್ನಿತ್ಯಂ ದಯಾ ಕಾರ್ಯಾ ಚಾತುರ್ವರ್ಣ್ಯೇ ವಿಪಶ್ಚಿತಾ|

12056036c ಧರ್ಮಾತ್ಮಾ ಸತ್ಯವಾಕ್ಚೈವ ರಾಜಾ ರಂಜಯತಿ ಪ್ರಜಾಃ||

ಆದುದರಿಂದ ರಾಜನು ನಿತ್ಯವೂ ಚಾತುರ್ವಣ್ಯಗಳ ಮೇಲೆ ದಯಾಪರನಾಗಿರಬೇಕು. ಸತ್ಯವಾಕ್ಯ ಧರ್ಮಾತ್ಮ ರಾಜನು ಪ್ರಜೆಗಳನ್ನು ರಂಜಿಸುತ್ತಾನೆ.

12056037a ನ ಚ ಕ್ಷಾಂತೇನ ತೇ ಭಾವ್ಯಂ ನಿತ್ಯಂ ಪುರುಷಸತ್ತಮ|

12056037c ಅಧರ್ಮ್ಯೋ ಹಿ ಮೃದೂ ರಾಜಾ ಕ್ಷಮಾವಾನಿವ ಕುಂಜರಃ||

ಪುರುಷಸತ್ತಮ! ಆದರೆ ನೀನು ನಿತ್ಯವೂ ಕ್ಷಮಾವಂತನಾಗಿರಕೂಡದು. ಮೃದುವಾಗಿರುವುದು ಆನೆಗೆ ಹೇಗೋ ಹಾಗೆ ಸದಾ ಕ್ಷಮಾವಂತನಾಗಿರುವುದು ರಾಜನಿಗೂ ಅಧರ್ಮ.

12056038a ಬಾರ್ಹಸ್ಪತ್ಯೇ ಚ ಶಾಸ್ತ್ರೇ ವೈ ಶ್ಲೋಕಾ ವಿನಿಯತಾಃ ಪುರಾ|

12056038c ಅಸ್ಮಿನ್ನರ್ಥೇ ಮಹಾರಾಜ ತನ್ಮೇ ನಿಗದತಃ ಶೃಣು||

ಮಹಾರಾಜ! ಇದೇ ಅರ್ಥಕೊಡುವ ಶ್ಲೋಕಗಳನ್ನು ಹಿಂದೆ ಬೃಹಸ್ಪತಿಯು ತನ್ನ ಶಾಸ್ತ್ರದಲ್ಲಿ ಹೇಳಿದ್ದನು. ಅದನ್ನು ಪುನಃ ಕೇಳು.

12056039a ಕ್ಷಮಮಾಣಂ ನೃಪಂ ನಿತ್ಯಂ ನೀಚಃ ಪರಿಭವೇಜ್ಜನಃ|

12056039c ಹಸ್ತಿಯಂತಾ ಗಜಸ್ಯೇವ ಶಿರ ಏವಾರುರುಕ್ಷತಿ||

“ಮಾವಟಿಗನು ಆನೆಯ ಶಿರವನ್ನೇ ಏರಿ ಕುಳಿತುಕೊಳ್ಳುವಂತೆ ಕ್ಷಮಾವಂತನಾದ ನೃಪನನ್ನು ನೀಚ ಜನರು ನಿತ್ಯವೂ ತಿರಸ್ಕರಿಸುತ್ತಿರುತ್ತಾರೆ.”

12056040a ತಸ್ಮಾನ್ನೈವ ಮೃದುರ್ನಿತ್ಯಂ ತೀಕ್ಷ್ಣೋ ವಾಪಿ ಭವೇನ್ನೃಪಃ|

12056040c ವಸಂತೇಽರ್ಕ ಇವ ಶ್ರೀಮಾನ್ನ ಶೀತೋ ನ ಚ ಘರ್ಮದಃ||

ವಸಂತ ಋತುವಿನಲ್ಲಿ ಶ್ರೀಮಾನ್ ಸೂರ್ಯನು ಅತ್ಯಂತ ಶೀತಲನೂ ಪ್ರಖರನೂ ಆಗಿರುವುದಿಲ್ಲವೋ ಹಾಗೆ ನೃಪನೂ ಕೂಡ ನಿತ್ಯವೂ ಅತ್ಯಂತ ಮೃದುವಾಗಿಯೂ ತೀಕ್ಷ್ಣನಾಗಿಯೂ ಇರಬಾರದು.

12056041a ಪ್ರತ್ಯಕ್ಷೇಣಾನುಮಾನೇನ ತಥೌಪಮ್ಯೋಪದೇಶತಃ|

12056041c ಪರೀಕ್ಷ್ಯಾಸ್ತೇ ಮಹಾರಾಜ ಸ್ವೇ ಪರೇ ಚೈವ ಸರ್ವದಾ||

ಮಹಾರಾಜ! ಪ್ರತ್ಯಕ್ಷ್ಯ[4], ಅನುಮಾನ[5], ಉಪಮಾನ[6] ಮತ್ತು ಉಪದೇಶ[7]ಗಳಿಂದ ಸರ್ವದಾ ತನ್ನವರು ಯಾರು ಮತ್ತು ಶತ್ರುಗಳು ಯಾರು ಎನ್ನುವುದನ್ನು ಪರೀಕ್ಷಿಸುತ್ತಿರಬೇಕು.

12056042a ವ್ಯಸನಾನಿ ಚ ಸರ್ವಾಣಿ ತ್ಯಜೇಥಾ ಭೂರಿದಕ್ಷಿಣ|

12056042c ನ ಚೈವ ನ ಪ್ರಯುಂಜೀತ ಸಂಗಂ ತು ಪರಿವರ್ಜಯೇತ್||

ಭೂರಿದಕ್ಷಿಣ! ಎಲ್ಲ ವ್ಯಸನಗಳನ್ನೂ[8] ತ್ಯಜಿಸಿಬಿಡಬೇಕು. ಆದರೆ ಇವುಗಳಲ್ಲಿ ಕೆಲವನ್ನು ಕೆಲವು ಸಮಯಗಳಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಇಟ್ಟುಕೊಂಡಿರಬಾರದು.

12056043a ನಿತ್ಯಂ ಹಿ ವ್ಯಸನೀ ಲೋಕೇ ಪರಿಭೂತೋ ಭವತ್ಯುತ|

12056043c ಉದ್ವೇಜಯತಿ ಲೋಕಂ ಚಾಪ್ಯತಿದ್ವೇಷೀ ಮಹೀಪತಿಃ||

ನಿತ್ಯವೂ ವ್ಯಸನಿಯಾಗಿದ್ದುಕೊಂಡು ಬೇರೆಯವರನ್ನು ಸದಾ ದ್ವೇಷಿಸುತ್ತಾ ಲೋಕವನ್ನೇ ಉದ್ವೇಗಗೊಳಿಸುವ ರಾಜನು ಜನರ ತಿರಸ್ಕಾರಕ್ಕೆ ಪಾತ್ರನಾಗುತ್ತಾನೆ.

12056044a ಭವಿತವ್ಯಂ ಸದಾ ರಾಜ್ಞಾ ಗರ್ಭಿಣೀಸಹಧರ್ಮಿಣಾ|

12056044c ಕಾರಣಂ ಚ ಮಹಾರಾಜ ಶೃಣು ಯೇನೇದಮಿಷ್ಯತೇ||

ಮಹಾರಾಜ! ರಾಜನಾದವನು ಸದಾ ಗರ್ಭಿಣೀ ಸ್ತ್ರೀಯಂತೆ ವ್ಯವಹರಿಸಬೇಕು. ಇದಕ್ಕೆ ಕಾರಣವನ್ನು ಹೇಳುತ್ತೇನೆ, ಕೇಳು.

12056045a ಯಥಾ ಹಿ ಗರ್ಭಿಣೀ ಹಿತ್ವಾ ಸ್ವಂ ಪ್ರಿಯಂ ಮನಸೋಽನುಗಮ್|

12056045c ಗರ್ಭಸ್ಯ ಹಿತಮಾಧತ್ತೇ ತಥಾ ರಾಜ್ಞಾಪ್ಯಸಂಶಯಮ್||

12056046a ವರ್ತಿತವ್ಯಂ ಕುರುಶ್ರೇಷ್ಠ ನಿತ್ಯಂ ಧರ್ಮಾನುವರ್ತಿನಾ|

12056046c ಸ್ವಂ ಪ್ರಿಯಂ ಸಮಭಿತ್ಯಜ್ಯ ಯದ್ಯಲ್ಲೋಕಹಿತಂ ಭವೇತ್||

ಕುರುಶ್ರೇಷ್ಠ! ಗರ್ಭಿಣೀ ಸ್ತ್ರೀಯು ಹೇಗೆ ತನ್ನ ಮನೋಕಾಮನೆಗಳನ್ನು ದೂರೀಕರಿಸಿ ಗರ್ಭಸ್ಥವಾಗಿರುವ ಶಿಶುವಿನ ಹಿತದಲ್ಲಿಯೇ ಆಸಕ್ತಳಾಗಿರುವಳೋ ಹಾಗೆ ರಾಜನೂ ಕೂಡ ನಿಸ್ಸಂಶಯವಾಗಿ ತನ್ನ ಸಂತೋಷವನ್ನು ದೂರೀಕರಿಸಿ ಲೋಕಹಿತಕ್ಕಾಗಿ ನಿತ್ಯವೂ ಧರ್ಮನಿರತನಾಗಿರಬೇಕು.

12056047a ನ ಸಂತ್ಯಾಜ್ಯಂ ಚ ತೇ ಧೈರ್ಯಂ ಕದಾ ಚಿದಪಿ ಪಾಂಡವ|

12056047c ಧೀರಸ್ಯ ಸ್ಪಷ್ಟದಂಡಸ್ಯ ನ ಹ್ಯಾಜ್ಞಾ ಪ್ರತಿಹನ್ಯತೇ||

ಪಾಂಡವ! ರಾಜನು ಎಂದೂ ತನ್ನ ಧೈರ್ಯವನ್ನು ತೊರೆಯಬಾರದು. ಧೀರನಾದ ಮತ್ತು ಸ್ಪಷ್ಟವಾದ ಶಿಕ್ಷೆಯನ್ನು ನೀಡುವವನ ಆಜ್ಞೆಗಳನ್ನು ಯಾರೂ ಉಲ್ಲಂಘಿಸುವುದಿಲ್ಲ.

12056048a ಪರಿಹಾಸಶ್ಚ ಭೃತ್ಯೈಸ್ತೇ ನ ನಿತ್ಯಂ ವದತಾಂ ವರ|

12056048c ಕರ್ತವ್ಯೋ ರಾಜಶಾರ್ದೂಲ ದೋಷಮತ್ರ ಹಿ ಮೇ ಶೃಣು||

ವಾಗ್ಮಿಗಳಲ್ಲಿ ಶ್ರೇಷ್ಠನೇ! ಸೇವಕರೊಡನೆ ನಿತ್ಯವೂ ಪರಿಹಾಸಗಳಲ್ಲಿ ತೊಡಗಬಾರದು. ಇದು ರಾಜನ ಕರ್ತ್ಯವ್ಯ. ರಾಜಶಾರ್ದೂಲ! ಇದರಲ್ಲಿ ದೋಷವೇನೆನ್ನುವುದನ್ನು ಕೇಳು.

12056049a ಅವಮನ್ಯಂತಿ ಭರ್ತಾರಂ ಸಂಹರ್ಷಾದುಪಜೀವಿನಃ|

12056049c ಸ್ವೇ ಸ್ಥಾನೇ ನ ಚ ತಿಷ್ಠಂತಿ ಲಂಘಯಂತಿ ಹಿ ತದ್ವಚಃ||

ರಾಜನ ಆಶ್ರಯದಿಂದಲೇ ಜೀವನವನ್ನು ನಡೆಸುವ ಸೇವಕರು ನಿಕಟ ಸಂಪರ್ಕದಿಂದಾಗಿ ತಮ್ಮ ಒಡೆಯನನ್ನೇ ಕೀಳುಭಾವನೆಯಿಂದ ಕಾಣುತ್ತಾರೆ. ಅವನಿಗೆ ಮರ್ಯಾದೆಯನ್ನು ಕೊಡದೇ, ಅವರು ತಮ್ಮ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡುವುದಿಲ್ಲ. ಅವನ ಆಜ್ಞೆಯನ್ನೂ ಉಲ್ಲಂಘಿಸುತ್ತಾರೆ.

12056050a ಪ್ರೇಷ್ಯಮಾಣಾ ವಿಕಲ್ಪಂತೇ ಗುಹ್ಯಂ ಚಾಪ್ಯನುಯುಂಜತೇ|

12056050c ಅಯಾಚ್ಯಂ ಚೈವ ಯಾಚಂತೇಽಭೋಜ್ಯಾನ್ಯಾಹಾರಯಂತಿ ಚ||

ಒಂದು ಕೆಲಸಕ್ಕೆ ಕಳುಹಿಸಿದರೆ ಬೇರೆಯದನ್ನೇ ಮಾಡಿಬರುತ್ತಾರೆ. ಗುಟ್ಟುಗಳನ್ನು ಬಯಲುಮಾಡುತ್ತಾರೆ. ಕೇಳಬಾರದವುಗಳನ್ನು ಕೇಳುತ್ತಾರೆ. ರಾಜನ ಭೋಜನವನ್ನೂ ಊಟಮಾಡುತ್ತಾರೆ.

12056051a ಕ್ರುಧ್ಯಂತಿ ಪರಿದೀಪ್ಯಂತಿ ಭೂಮಿಮಧ್ಯಾಸತೇಽಸ್ಯ ಚ|

12056051c ಉತ್ಕೋಚೈರ್ವಂಚನಾಭಿಶ್ಚ ಕಾರ್ಯಾಣ್ಯನುವಿಹಂತಿ ಚ||

ರಾಜನು ಸಲಿಗೆಯಲ್ಲಿರುವ ಸೇವಕರು ಕುಪಿತರಾಗುತ್ತಾರೆ. ರಾಜನ ಆಸನದಲ್ಲಿಯೇ ಕುಳಿತುಕೊಳ್ಳಲು ನೋಡುತ್ತಾರೆ. ರಾಜನಿರುವನೆಂಬ ಪರಿವೆಯೇ ಇಲ್ಲದೇ ಜೋರಾಗಿ ಮಾತನಾಡುತ್ತಾರೆ. ಲಂಚ-ಮೋಸಗಳಿಂದ ರಾಜನ ಕಾರ್ಯಗಳನ್ನು ಹಾಳುಮಾಡುತ್ತಾರೆ.

12056052a ಜರ್ಜರಂ ಚಾಸ್ಯ ವಿಷಯಂ ಕುರ್ವಂತಿ ಪ್ರತಿರೂಪಕೈಃ|

12056052c ಸ್ತ್ರೀರಕ್ಷಿಭಿಶ್ಚ ಸಜ್ಜಂತೇ ತುಲ್ಯವೇಷಾ ಭವಂತಿ ಚ||

ರಾಜಾಜ್ಞೆಯ ನಕಲುಗಳನ್ನು ತಮಗೆ ಇಚ್ಛೆಬಂದಂತೆ ಹೊರಡಿಸಿ ದೇಶವನ್ನು ಶಿಥಿಲಗೊಳಿಸುತ್ತಾರೆ. ಪಹರೆಯವರ ಸ್ತ್ರೀವೇಷವನ್ನೇ ಧರಿಸಿ ಅಂತಃಪುರದ ಒಳಗೆ ಹೋಗುತ್ತಾರೆ.

12056053a ವಾತಂ ಚ ಷ್ಠೀವನಂ ಚೈವ ಕುರ್ವತೇ ಚಾಸ್ಯ ಸಂನಿಧೌ|

12056053c ನಿರ್ಲಜ್ಜಾ ನರಶಾರ್ದೂಲ ವ್ಯಾಹರಂತಿ ಚ ತದ್ವಚಃ||

ನರಶಾರ್ದೂಲ! ರಾಜನು ಸಲಿಗೆಯಿಂದಿದ್ದ ಸೇವಕರು ಅವನ ಸನ್ನಿಧಿಯಲ್ಲಿಯೇ ಆಕಳಿಸುತ್ತಾರೆ ಮತ್ತು ಉಗುಳುತ್ತಾರೆ. ನಾಚಿಕೆಗೆಟ್ಟವರಾಗಿ ರಾಜನ ಮಾತುಗಳನ್ನು ಹೊರಹಾಕುತ್ತಾರೆ.

12056054a ಹಯಂ ವಾ ದಂತಿನಂ ವಾಪಿ ರಥಂ ನೃಪತಿಸಂಮತಮ್|

12056054c ಅಧಿರೋಹಂತ್ಯನಾದೃತ್ಯ ಹರ್ಷುಲೇ ಪಾರ್ಥಿವೇ ಮೃದೌ||

ಹಾಸ್ಯಪ್ರವೃತ್ತಿಯವನೂ ಅತಿಮೃದುಸ್ವಭಾವದವನೂ ಆದ ರಾಜನ ಸೇವಕರು ರಾಜನಿಗೆಂದಿರುವ ಕುದುರೆ, ಆನೆ ಅಥವಾ ರಥವನ್ನು ಅವನನ್ನೇ ಅನಾದರಿಸಿ ತಮಗಾಗಿ ಬಳಸಿಕೊಳ್ಳುತ್ತಾರೆ ಕೂಡ.

12056055a ಇದಂ ತೇ ದುಷ್ಕರಂ ರಾಜನ್ನಿದಂ ತೇ ದುರ್ವಿಚೇಷ್ಟಿತಮ್|

12056055c ಇತ್ಯೇವಂ ಸುಹೃದೋ ನಾಮ ಬ್ರುವಂತಿ ಪರಿಷದ್ಗತಾಃ||

ಗಣ್ಯರಿರುವ ರಾಜಸಭೆಯಲ್ಲಿಯೂ ಅವರು ಸ್ನೇಹಿತರಂತೆ ಅತಿ ಸಲುಗೆಯಿಂದ “ರಾಜನ್! ಇದು ನಿನಗೆ ಕಷ್ಟವಾದುದು! ನೀನು ಮಾಡಿದ ಇದು ಸರಿಯಲ್ಲ!” ಎಂದು ಹೇಳುತ್ತಿರುತ್ತಾರೆ.

12056056a ಕ್ರುದ್ಧೇ ಚಾಸ್ಮಿನ್ಹಸಂತ್ಯೇವ ನ ಚ ಹೃಷ್ಯಂತಿ ಪೂಜಿತಾಃ|

12056056c ಸಂಘರ್ಷಶೀಲಾಶ್ಚ ಸದಾ ಭವಂತ್ಯನ್ಯೋನ್ಯಕಾರಣಾತ್||

ರಾಜನು ಕ್ರುದ್ಧನಾದರೆ ಇವರು ನಗುತ್ತಾರೆ. ರಾಜನು ಗೌರವಿಸಿದರೆ ಸಂತೋಷಪಡುವುದಿಲ್ಲ. ಸ್ವಾರ್ಥಕ್ಕಾಗಿ ಸದಾ ಸಂಘರ್ಷಶೀಲರಾಗಿಯೇ ಇರುತ್ತಾರೆ.

12056057a ವಿಸ್ರಂಸಯಂತಿ ಮಂತ್ರಂ ಚ ವಿವೃಣ್ವಂತಿ ಚ ದುಷ್ಕೃತಮ್|

12056057c ಲೀಲಯಾ ಚೈವ ಕುರ್ವಂತಿ ಸಾವಜ್ಞಾಸ್ತಸ್ಯ ಶಾಸನಮ್||

ಗುಪ್ತಸಮಾಲೋಚನೆಗಳನ್ನು ಬಹಿರಂಗಗೊಳಿಸುತ್ತಾರೆ. ಮಾಡಿದ ತಪ್ಪುಗಳನ್ನು ಹೊರಹಾಕುತ್ತಾರೆ. ರಾಜಶಾಸನವನ್ನು ಮತ್ತು ಆಜ್ಞೆಯನ್ನು ಕೂಡ ಆಟವೋ ಎನ್ನುವಂತೆ ಅಸಡ್ಡೆಯಿಂದ ಮಾಡುತ್ತಾರೆ.

12056057E ಅಲಂಕರಣಭೋಜ್ಯಂ ಚ ತಥಾ ಸ್ನಾನಾನುಲೇಪನಮ್|

12056058a ಹೇಲಮಾನಾ ನರವ್ಯಾಘ್ರ ಸ್ವಸ್ಥಾಸ್ತಸ್ಯೋಪಶೃಣ್ವತೇ||

ರಾಜನ ಅಲಂಕಾರ, ಭೋಜನ, ಸ್ನಾನ ಮತ್ತು ಗಂಧಾನುಲೇಪನಗಳ ವಿಷಯಗಳಲ್ಲಿಯೂ ಸೇವಕರು ಅವನಿಗೆ ಕೇಳಿಸುವಂತೆಯೇ ನಿರ್ಭಯರಾಗಿ ಕುತ್ಸಿತ ಮಾತುಗಳನ್ನಾಡುತ್ತಿರುತ್ತಾರೆ.

12056058c ನಿಂದಂತಿ ಸ್ವಾನಧೀಕಾರಾನ್ಸಂತ್ಯಜಂತಿ ಚ ಭಾರತ|

12056059a ನ ವೃತ್ತ್ಯಾ ಪರಿತುಷ್ಯಂತಿ ರಾಜದೇಯಂ ಹರಂತಿ ಚ||

ಭಾರತ! ವಹಿಸಿಕೊಟ್ಟಿರುವ ಕಾರ್ಯಗಳನ್ನು ದೂಷಿಸುತ್ತಾರೆ. ವಹಿಸಿದ ಕಾರ್ಯಗಳನ್ನು ಪೂರೈಸದೇ ಮಧ್ಯದಲ್ಲಿಯೇ ಬಿಟ್ಟುಬಿಡುತ್ತಾರೆ. ವೇತನದಲ್ಲಿ ತೃಪ್ತಿಯಿರುವುದಿಲ್ಲ. ರಾಜನು ಕೊಟ್ಟ ದಾನಗಳನ್ನೂ ಕದಿಯುತ್ತಾರೆ.

12056059c ಕ್ರೀಡಿತುಂ ತೇನ ಚೇಚ್ಚಂತಿ ಸಸೂತ್ರೇಣೇವ ಪಕ್ಷಿಣಾ|

12056059E ಅಸ್ಮತ್ಪ್ರಣೇಯೋ ರಾಜೇತಿ ಲೋಕೇ ಚೈವ ವದಂತ್ಯುತ||

ದಾರಕ್ಕೆ ಕಟ್ಟಿದ ಪಕ್ಷಿಯಂತೆ ರಾಜನನ್ನು ಆಡಿಸಲು ಬಯಸುತ್ತಾರೆ. ರಾಜನು ನಾನು ಹೇಳಿದಂತೆ ಕೇಳುತ್ತಾನೆ ಎಂದು ಜನರೊಂದಿಗೆ ಆಡಿಕೊಳ್ಳುತ್ತಿರುತ್ತಾರೆ.

12056060a ಏತೇ ಚೈವಾಪರೇ ಚೈವ ದೋಷಾಃ ಪ್ರಾದುರ್ಭವಂತ್ಯುತ|

12056060c ನೃಪತೌ ಮಾರ್ದವೋಪೇತೇ ಹರ್ಷುಲೇ ಚ ಯುಧಿಷ್ಠಿರ||

ಯುಧಿಷ್ಠಿರ! ರಾಜನು ಅತಿಮೃದುವಾಗಿಯೂ ಹಾಸ್ಯಪ್ರವೃತ್ತಿಯುಳ್ಳವನಾಗಿಯೂ ಇದ್ದರೆ ಇದಕ್ಕೂ ಮೀರಿ ಇತರ ದೋಷಗಳೂ ಉಂಟಾಗುತ್ತವೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಷಟ್ ಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಐವತ್ತಾರನೇ ಅಧ್ಯಾಯವು.

[1] ತನ್ನಲ್ಲಿರುವ ನ್ಯೂನತೆಗಳು, ಸೇನಾಪತಿಗಳೊಡನೆ ಮಾಡುವ ಗುಪ್ತ ಸಮಾಲೋಚನೆಗಳು ಮತ್ತು ಶತ್ರುಪಕ್ಷದಲ್ಲಿರುವ ನ್ಯೂನತೆಗಳನ್ನು ಕಂಡುಹಿಡಿಯುವ ಉಪಾಯಗಳು – ಈ ಮೂರನ್ನು ಗೌಪ್ಯವಾಗಿಡಬೇಕು.

[2] ದಯಿತಾಶ್ಚ ನರಾಸ್ತೇ ಸ್ಯುರ್ಭಕ್ತಿಮಂತೋ ದ್ವಿಜೇಷು ಯೇ| ಅರ್ಥಾತ್: ಬ್ರಾಹ್ಮಣರಲ್ಲಿ ಭಕ್ತಿಭಾವವುಳ್ಳ ರಾಜರು ಪ್ರಜೆಗಳಿಗೂ ಪ್ರೀತಿಪಾತ್ರರಾಗಿರುತ್ತಾರೆ ಎಂಬ ಪಾಠಾಂತರವಿದೆ (ಭಾರತ ದರ್ಶನ).

[3] ಮರುಭೂಮಿ, ನೀರು, ಪೃಥ್ವೀ, ಅರಣ್ಯ, ಪರ್ವತ ಮತ್ತು ಮನುಷ್ಯ – ಇವುಗಳೇ ಆರು ದುರ್ಗಗಳು.

[4] ಪ್ರತ್ಯಕ್ಷ ಪ್ರಮಾಣವೆಂದರೆ ಉಪಕಾರ-ಅಪಕಾರಾದಿಗಳು.

[5] ಅನುಮಾನವೆಂದರೆ ನೇತ್ರವಕ್ತ್ರವಿಕಾರೇಣ ಜ್ಞಾಯತೇಽಂತರ್ಗತಂ ಮನಃ – ಕಣ್ಣು, ಮುಖಗಳ ವಿಕಾರದಿಂದಲೇ ಮನಸ್ಸಿನ ಇಂಗಿತವನ್ನು ತಿಳಿಯುವುದು.

[6] ಉಪಮಾನ ಪ್ರಮಾಣವೆಂದರೆ ಹೋಲಿಕೆಯಿಂದ ವಿಷಯಗಳನ್ನು ತಿಳಿಯುವುದು.

[7] ಉಪದೇಶವೆಂದರೆ ಆಪ್ತರು ಹೇಳುವ ಮಾತುಗಳಿಂದ ನಿರ್ಧರಿಸುವುದು.

[8] ವ್ಯಸನಗಳು ಹದಿನೆಂಟು. ಕಾಮಜ ವ್ಯಸನಗಳು ಹತ್ತು ಮತ್ತು ಕ್ರೋಧಜ ವ್ಯಸನಗಳು ಎಂಟು. ಬೇಟೆಯಾಡುವುದು, ಜೂಜಾಡುವುದು, ಹಗಲಿನಲ್ಲಿ ಮಲಗುವುದು, ಇತರರನ್ನು ಯಾವಾಗಲೂ ನಿಂದಿಸುತ್ತಿರುವುದು, ಸರ್ವದ ಸ್ತ್ರೀ-ಸಹವಾಸದಲ್ಲಿಯೇ ಇರುವುದು, ಮದದಿಂದ ಕೊಬ್ಬಿರುವವನಂತೆ ವ್ಯವಹರಿಸುವುದು, ವಾದ್ಯ-ಗೀತ-ನೃತ್ಯಗಳಲ್ಲಿಯೇ ಸರ್ವದಾ ಆಸಕ್ತನಾಗಿರುವುದು, ಮತ್ತು ಸುರಾಪಾನಮಾಡುವುದು – ಇವು ಹತ್ತು ಕಾಮಜ ವ್ಯಸನಗಳು. ಚಾಡಿಕೋರತನ, ಸಾಹಸ, ದ್ರೋಹ, ಈರ್ಷ್ಯೆ, ಇತರರಲ್ಲಿ ದೋಷವನ್ನೆಣಿಸುವುದು, ಪುರುಷಾರ್ಥಗಳನ್ನು ದೂಷಿಸುವುದು, ಕಠಿನವಾದ ಮಾತು, ಉಗ್ರವಾದ ಶಿಕ್ಷೆಯನ್ನು ವಿಧಿಸುವುದ್ – ಇವು ಎಂಟೂ ಕ್ರೋಧಜ ವ್ಯಸನಗಳು. ಮೃಗಯಾಕ್ಷಾ ದಿವಾಸ್ವಾಪಃ ಪರಿವಾರಸ್ತ್ರಿಯೋಮದಃ| ತೌರ್ಯತ್ರಿಕಂ ವೃಥಾ ಪಾನಂ ಕಾಮಜೋ ದಶಮೋ ಗುಣಃ|| ಪೈಶುನ್ಯಂ ಸಾಹಸಂ ಕ್ರೋಧಂ ಈರ್ಷ್ಯಾಸೂಯಾರ್ಥದೂಷಣಮ್| ವಾಗ್ದಂಡಜಂ ಚ ಪಾರುಷ್ಯಂ ಕ್ರೋಧಜೋಽಇ ಗುಣೋಽಷ್ಟಕಃ||

Comments are closed.