ಶಾಂತಿ ಪರ್ವ: ರಾಜಧರ್ಮ ಪರ್ವ
೫೫
12055001 ವೈಶಂಪಾಯನ ಉವಾಚ
12055001a ಅಥಾಬ್ರವೀನ್ಮಹಾತೇಜಾ ವಾಕ್ಯಂ ಕೌರವನಂದನಃ|
12055001c ಹಂತ ಧರ್ಮಾನ್ಪ್ರವಕ್ಷ್ಯಾಮಿ ದೃಢೇ ವಾಙ್ಮನಸೀ ಮಮ||
12055001E ತವ ಪ್ರಸಾದಾದ್ಗೋವಿಂದ ಭೂತಾತ್ಮಾ ಹ್ಯಸಿ ಶಾಶ್ವತಃ||
ವೈಶಂಪಾಯನನು ಹೇಳಿದನು: “ಆಗ ಮಹಾತೇಜಸ್ವಿ ಕೌರವನಂದನನು ಹೇಳಿದನು: “ಗೋವಿಂದ! ಈಗ ನಾನು ಧರ್ಮಗಳ ಪ್ರವಚನವನ್ನು ಮಾಡುತ್ತೇನೆ. ನೀನು ಸರ್ವಭೂತಗಳ ಶಾಶ್ವತ ಆತ್ಮನಾಗಿರುವೆ. ನಿನ್ನ ಪ್ರಸಾದದಿಂದ ನನ್ನ ಮನಸ್ಸು ಮಾತುಗಳೂ ದೃಢವಾಗಿವೆ.
12055002a ಯುಧಿಷ್ಠಿರಸ್ತು ಮಾಂ ರಾಜಾ ಧರ್ಮಾನ್ಸಮನುಪೃಚ್ಚತು|
12055002c ಏವಂ ಪ್ರೀತೋ ಭವಿಷ್ಯಾಮಿ ಧರ್ಮಾನ್ವಕ್ಷ್ಯಾಮಿ ಚಾನಘ||
ಅನಘ! ರಾಜಾ ಯುಧಿಷ್ಠಿರನು ನನ್ನಲ್ಲಿ ಧರ್ಮಗಳ ಕುರಿತು ಪ್ರಶ್ನಿಸಲಿ. ಅದರಿಂದ ನಾನು ಪ್ರೀತನಾಗುತ್ತೇನೆ. ಧರ್ಮಗಳನ್ನು ಹೇಳುತ್ತೇನೆ.
12055003a ಯಸ್ಮಿನ್ರಾಜರ್ಷಭೇ ಜಾತೇ ಧರ್ಮಾತ್ಮನಿ ಮಹಾತ್ಮನಿ|
12055003c ಅಹೃಷ್ಯನ್ನೃಷಯಃ ಸರ್ವೇ ಸ ಮಾಂ ಪೃಚ್ಚತು ಪಾಂಡವಃ||
ಯಾರು ಹುಟ್ಟಿದಾಗ ಸರ್ವ ಋಷಿಗಳೂ ಹರ್ಷಿತರಾದರೋ ಆ ಧರ್ಮಾತ್ಮ ಮಹಾತ್ಮ ಪಾಂಡವ ರಾಜರ್ಷಭನು ನನ್ನಲ್ಲಿ ಪ್ರಶ್ನಿಸಲಿ!
12055004a ಸರ್ವೇಷಾಂ ದೀಪ್ತಯಶಸಾಂ ಕುರೂಣಾಂ ಧರ್ಮಚಾರಿಣಾಮ್|
12055004c ಯಸ್ಯ ನಾಸ್ತಿ ಸಮಃ ಕಶ್ಚಿತ್ಸ ಮಾಂ ಪೃಚ್ಚತು ಪಾಂಡವಃ||
ಯಾರು ಎಲ್ಲ ಧರ್ಮಚಾರೀ ಕುರುಗಳ ಯಶಸ್ಸನ್ನು ಬೆಳಗಿಸಿದನೋ ಮತ್ತು ಯಾರಿಗೆ ಸಮನಾದವರು ಬೇರೆ ಯಾರೂ ಇಲ್ಲವೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055005a ಧೃತಿರ್ದಮೋ ಬ್ರಹ್ಮಚರ್ಯಂ ಕ್ಷಮಾ ಧರ್ಮಶ್ಚ ನಿತ್ಯದಾ|
12055005c ಯಸ್ಮಿನ್ನೋಜಶ್ಚ ತೇಜಶ್ಚ ಸ ಮಾಂ ಪೃಚ್ಚತು ಪಾಂಡವಃ||
ಯಾರಲ್ಲಿ ನಿತ್ಯವೂ ಧೃತಿ, ದಮ, ಬ್ರಹ್ಮಚರ್ಯ, ಕ್ಷಮೆ, ಧರ್ಮ, ಓಜಸ್ಸು ಮತ್ತು ತೇಜಸ್ಸುಗಳು ನೆಲಸಿವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055006a ಸತ್ಯಂ ದಾನಂ ತಪಃ ಶೌಚಂ ಶಾಂತಿರ್ದಾಕ್ಷ್ಯಮಸಂಭ್ರಮಃ|
12055006c ಯಸ್ಮಿನ್ನೇತಾನಿ ಸರ್ವಾಣಿ ಸ ಮಾಂ ಪೃಚ್ಚತು ಪಾಂಡವಃ||
ಯಾರಲ್ಲಿ ಸತ್ಯ, ದಾನ, ತಪಸ್ಸು, ಶೌಚ, ಶಾಂತಿ, ದಕ್ಷತೆ ಮತ್ತು ಅಸಂಭ್ರಮ ಈ ಸರ್ವ ಗುಣಗಳೂ ಇವೆಯೋ ಆ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055007a ಯೋ ನ ಕಾಮಾನ್ನ ಸಂರಂಭಾನ್ನ ಭಯಾನ್ನಾರ್ಥಕಾರಣಾತ್|
12055007c ಕುರ್ಯಾದಧರ್ಮಂ ಧರ್ಮಾತ್ಮಾ ಸ ಮಾಂ ಪೃಚ್ಚತು ಪಾಂಡವಃ||
ಯಾರು ಕಾಮ, ಕ್ರೋಧ, ಭಯ ಮತ್ತು ಅರ್ಥಕ್ಕಾಗಿ ಅಧರ್ಮವನ್ನು ಎಸಗಲಿಲ್ಲವೋ ಆ ಧರ್ಮಾತ್ಮ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055008a ಸಂಬಂಧಿನೋಽತಿಥೀನ್ಭೃತ್ಯಾನ್ಸಂಶ್ರಿತೋಪಾಶ್ರಿತಾಂಶ್ಚ ಯಃ|
12055008c ಸಂಮಾನಯತಿ ಸತ್ಕೃತ್ಯ ಸ ಮಾಂ ಪೃಚ್ಚತು ಪಾಂಡವಃ||
ಸಂಬಂಧಿಗಳನ್ನೂ, ಅತಿಥಿಗಳನ್ನೂ, ಸೇವಕರನ್ನೂ, ಮತ್ತು ಆಶ್ರಿತರನ್ನು ಸತ್ಕರಿಸಿ ಸನ್ಮಾನಿಸುವ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055009a ಸತ್ಯನಿತ್ಯಃ ಕ್ಷಮಾನಿತ್ಯೋ ಜ್ಞಾನನಿತ್ಯೋಽತಿಥಿಪ್ರಿಯಃ|
12055009c ಯೋ ದದಾತಿ ಸತಾಂ ನಿತ್ಯಂ ಸ ಮಾಂ ಪೃಚ್ಚತು ಪಾಂಡವಃ||
ಸತ್ಯನಿತ್ಯನೂ, ಕ್ಷಮಾನಿತ್ಯನೂ, ಜ್ಞಾನನಿತ್ಯನೂ, ಅತಿಥಿಪ್ರಿಯನೂ, ಸದಾ ಸತ್ಪುರುಷರಿಗೆ ದಾನನೀಡುವವನೂ ಆದ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!
12055010a ಇಜ್ಯಾಧ್ಯಯನನಿತ್ಯಶ್ಚ ಧರ್ಮೇ ಚ ನಿರತಃ ಸದಾ|
12055010c ಶಾಂತಃ ಶ್ರುತರಹಸ್ಯಶ್ಚ ಸ ಮಾಂ ಪೃಚ್ಚತು ಪಾಂಡವಃ||
ನಿತ್ಯವೂ ಅಧ್ಯಯನ-ಯಾಗಗಳಲ್ಲಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವ, ಶ್ರುತಿಗಳ ರಹಸ್ಯಗಳನ್ನು ತಿಳಿದಿರುವ ಶಾಂತ ಪಾಂಡವನು ನನ್ನಲ್ಲಿ ಪ್ರಶ್ನಿಸಲಿ!”
12055011 ವಾಸುದೇವ ಉವಾಚ
12055011a ಲಜ್ಜಯಾ ಪರಯೋಪೇತೋ ಧರ್ಮಾತ್ಮಾ ಸ ಯುಧಿಷ್ಠಿರಃ|
12055011c ಅಭಿಶಾಪಭಯಾದ್ಭೀತೋ ಭವಂತಂ ನೋಪಸರ್ಪತಿ||
ವಾಸುದೇವನು ಹೇಳಿದನು: “ಧರ್ಮಾತ್ಮ ಯುಧಿಷ್ಠಿರನು ಅತ್ಯಂತ ಲಜ್ಜಿತನಾಗಿದ್ದಾನೆ. ಅಭಿಶಾಪದ ಭಯದಿಂದ ಭೀತನಾಗಿ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ.
12055012a ಲೋಕಸ್ಯ ಕದನಂ ಕೃತ್ವಾ ಲೋಕನಾಥೋ ವಿಶಾಂ ಪತೇ|
12055012c ಅಭಿಶಾಪಭಯಾದ್ಭೀತೋ ಭವಂತಂ ನೋಪಸರ್ಪತಿ||
ಜನಸಂಹಾರದ ಕದನವನ್ನು ಮಾಡಿದ ಲೋಕನಾಥ ವಿಶಾಂಪತಿಯು ಅಭಿಶಾಪದ ಭಯದಿಂದ ಭೀತನಾಗಿ ನಿನ್ನ ಸಮೀಪಕ್ಕೆ ಬರುತ್ತಿಲ್ಲ.
12055013a ಪೂಜ್ಯಾನ್ಮಾನ್ಯಾಂಶ್ಚ ಭಕ್ತಾಂಶ್ಚ ಗುರೂನ್ಸಂಬಂಧಿಬಾಂಧವಾನ್|
12055013c ಅರ್ಘ್ಯಾರ್ಹಾನಿಷುಭಿರ್ಹತ್ವಾ ಭವಂತಂ ನೋಪಸರ್ಪತಿ||
ಅರ್ಘ್ಯಾದಿಗಳನ್ನಿತ್ತು ಸತ್ಕರಿಸಲು ಅರ್ಹರಾದ ಪೂಜ್ಯರನ್ನೂ, ಮಾನ್ಯರನ್ನೂ, ಭಕ್ತರನ್ನೂ, ಗುರುಗಳನ್ನೂ, ಸಂಬಂಧಿ-ಬಾಂಧವರನ್ನೂ ಬಾಣಗಳಿಂದ ಸಂಹರಿಸಿದ ಕಾರಣದಿಂದ ಅವನು ನಿನ್ನ ಸಮೀಪಕ್ಕೆ ಬರುತ್ತಿಲ್ಲ.”
12055014 ಭೀಷ್ಮ ಉವಾಚ
12055014a ಬ್ರಾಹ್ಮಣಾನಾಂ ಯಥಾ ಧರ್ಮೋ ದಾನಮಧ್ಯಯನಂ ತಪಃ|
12055014c ಕ್ಷತ್ರಿಯಾಣಾಂ ತಥಾ ಕೃಷ್ಣ ಸಮರೇ ದೇಹಪಾತನಮ್||
ಭೀಷ್ಮನು ಹೇಳಿದನು: “ಕೃಷ್ಣ! ಬ್ರಾಹ್ಮಣರಿಗೆ ದಾನ-ಅಧ್ಯಯನ-ತಪಸ್ಸುಗಳು ಹೇಗೆ ಧರ್ಮವೋ ಹಾಗೆ ಸಮರದಲ್ಲಿ ಶಸ್ತ್ರಗಳ ಮೂಲಕ ಸಂಹರಿಸುವುದು ಕ್ಷತ್ರಿಯರ ಧರ್ಮ!
12055015a ಪಿತೃನ್ಪಿತಾಮಹಾನ್ಪುತ್ರಾನ್ಗುರೂನ್ಸಂಬಂಧಿಬಾಂಧವಾನ್|
12055015c ಮಿಥ್ಯಾಪ್ರವೃತ್ತಾನ್ಯಃ ಸಂಖ್ಯೇ ನಿಹನ್ಯಾದ್ಧರ್ಮ ಏವ ಸಃ||
ಮಿಥ್ಯರಾಗಿ ನಡೆದುಕೊಳ್ಳುವ ಪಿತೃಗಳನ್ನು, ಪಿತಾಮಹರನ್ನು, ಪುತ್ರರನ್ನು, ಗುರುಗಳನ್ನು ಮತ್ತು ಸಂಬಂಧಿ-ಬಾಂಧವರನ್ನು ಯುದ್ಧದಲ್ಲಿ ಸಂಹರಿಸುವುದು ಅವನಿಗೆ ಧರ್ಮವೇ ಆಗಿದೆ.
12055016a ಸಮಯತ್ಯಾಗಿನೋ ಲುಬ್ಧಾನ್ಗುರೂನಪಿ ಚ ಕೇಶವ|
12055016c ನಿಹಂತಿ ಸಮರೇ ಪಾಪಾನ್ಕ್ಷತ್ರಿಯೋ ಯಃ ಸ ಧರ್ಮವಿತ್||
ಕೇಶವ! ಲುಬ್ಧರಾಗಿ ಒಪ್ಪಂದಗಳನ್ನು ತ್ಯಜಿಸುವ ಪಾಪಿ ಗುರುಗಳನ್ನೂ ಕೂಡ ಸಮರದಲ್ಲಿ ಸಂಹರಿಸುವ ಕ್ಷತ್ರಿಯನು ಧರ್ಮವಿದುವೇ ಆಗಿರುತ್ತಾನೆ.
12055017a ಆಹೂತೇನ ರಣೇ ನಿತ್ಯಂ ಯೋದ್ಧವ್ಯಂ ಕ್ಷತ್ರಬಂಧುನಾ|
12055017c ಧರ್ಮ್ಯಂ ಸ್ವರ್ಗ್ಯಂ ಚ ಲೋಕ್ಯಂ ಚ ಯುದ್ಧಂ ಹಿ ಮನುರಬ್ರವೀತ್||
ಕ್ಷತ್ರಬಂಧುವು ರಣಕ್ಕೆ ಆಹ್ವಾನಿಸಿದಾಗ ನಿತ್ಯವೂ ಯುದ್ಧಮಾಡಬೇಕು. ಕ್ಷತ್ರಿಯನಿಗೆ ಯುದ್ಧವೇ ಧರ್ಮ, ಸ್ವರ್ಗ ಮತ್ತು ಯಶಸ್ಸನ್ನು ಉಂಟುಮಾಡುವವು ಎಂದು ಮನುವೇ ಹೇಳಿದ್ದಾನೆ.””
12055018 ವೈಶಂಪಾಯನ ಉವಾಚ
12055018a ಏವಮುಕ್ತಸ್ತು ಭೀಷ್ಮೇಣ ಧರ್ಮರಾಜೋ ಯುಧಿಷ್ಠಿರಃ|
12055018c ವಿನೀತವದುಪಾಗಮ್ಯ ತಸ್ಥೌ ಸಂದರ್ಶನೇಽಗ್ರತಃ||
ವೈಶಂಪಾಯನನು ಹೇಳಿದನು: “ಭೀಷ್ಮನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ವಿನೀತನಾಗಿ ಭೀಷ್ಮನ ಸಮೀಪಕ್ಕೆ ಹೋಗಿ ಅವನ ದೃಷ್ಟಿಗೆ ಅಭಿಮುಖನಾಗಿ ನಿಂತುಕೊಂಡನು.
12055019a ಅಥಾಸ್ಯ ಪಾದೌ ಜಗ್ರಾಹ ಭೀಷ್ಮಶ್ಚಾಭಿನನಂದ ತಮ್|
12055019c ಮೂರ್ಧ್ನಿ ಚೈನಮುಪಾಘ್ರಾಯ ನಿಷೀದೇತ್ಯಬ್ರವೀತ್ತದಾ||
ಅವನು ಭೀಷ್ಮನ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿದನು. ಭೀಷ್ಮನು ಯುಧಿಷ್ಠಿರನ ನೆತ್ತಿಯನ್ನು ಆಘ್ರಾಣಿಸಿ, ಆಶ್ವಾಸನೆಯನ್ನಿತ್ತು, ಕುಳಿತುಕೊಳ್ಳಲು ಹೇಳಿದನು.
12055020a ತಮುವಾಚಾಥ ಗಾಂಗೇಯ ಋಷಭಃ ಸರ್ವಧನ್ವಿನಾಮ್|
12055020c ಪೃಚ್ಚ ಮಾಂ ತಾತ ವಿಸ್ರಬ್ಧಂ ಮಾ ಭೈಸ್ತ್ವಂ ಕುರುಸತ್ತಮ||
ಕುರುಸತ್ತಮ! ಆಗ ಸರ್ವಧನ್ವಿಗಳ ಋಷಭ ಗಾಂಗೇಯನು “ಮಗೂ! ನಿರ್ಭಯನಾಗಿ ಶ್ರದ್ಧೆಯಿಂದ ನನ್ನನ್ನು ಪ್ರಶ್ನಿಸು! ಭಯಪಡಬೇಡ!” ಎಂದನು.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾಶಾಸನೇ ಪಂಚಪಂಚಶತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾಶಾಸನ ಎನ್ನುವ ಐವತ್ತೈದನೇ ಅಧ್ಯಾಯವು.