ಶಾಂತಿ ಪರ್ವ: ರಾಜಧರ್ಮ ಪರ್ವ
೫೧
12051001 ವೈಶಂಪಾಯನ ಉವಾಚ
12051001a ಶ್ರುತ್ವಾ ತು ವಚನಂ ಭೀಷ್ಮೋ ವಾಸುದೇವಸ್ಯ ಧೀಮತಃ|
12051001c ಕಿಂ ಚಿದುನ್ನಾಮ್ಯ ವದನಂ ಪ್ರಾಂಜಲಿರ್ವಾಕ್ಯಮಬ್ರವೀತ್||
ವೈಶಂಪಾಯನನು ಹೇಳಿದನು: “ವಾಸುದೇವನ ಆ ಮಾತನ್ನು ಕೇಳಿದ ಧೀಮಂತ ಭೀಷ್ಮನು ತನ್ನ ಮುಖವನ್ನು ಸ್ವಲ್ಪವೇ ಮೇಲಕ್ಕೆತ್ತಿ ಕೈಜೋಡಿಸಿ ಹೇಳಿದನು:
12051002a ನಮಸ್ತೇ ಭಗವನ್ವಿಷ್ಣೋ ಲೋಕಾನಾಂ ನಿಧನೋದ್ಭವ|
12051002c ತ್ವಂ ಹಿ ಕರ್ತಾ ಹೃಷೀಕೇಶ ಸಂಹರ್ತಾ ಚಾಪರಾಜಿತಃ||
“ಭಗವನ್! ವಿಷ್ಣುವೇ! ಲೋಕಗಳ ಉದ್ಭವ ಮತ್ತು ನಿಧನ! ನಿನಗೆ ನಮಸ್ಕಾರವು! ಹೃಷೀಕೇಶ! ನೀನೇ ಕರ್ತ, ಸಂಹರ್ತ ಮತ್ತು ಅಪರಾಜಿತ!
12051003a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ|
12051003c ಅಪವರ್ಗೋಽಸಿ ಭೂತಾನಾಂ ಪಂಚಾನಾಂ ಪರತಃ ಸ್ಥಿತಃ||
ವಿಶ್ವಕರ್ಮನೇ! ವಿಶ್ವಾತ್ಮನೇ! ವಿಶ್ವಸಂಭವನೇ! ನಿನಗೆ ನಮಸ್ಕಾರಗಳು! ನೀನು ಪಂಚಭೂತಗಳಿಗೂ ಅತೀತನಾಗಿದ್ದು ಪ್ರಾಣಿಗಳ ಮೋಕ್ಷಸ್ವರೂಪನಾಗಿರುವೆ!
12051004a ನಮಸ್ತೇ ತ್ರಿಷು ಲೋಕೇಷು ನಮಸ್ತೇ ಪರತಸ್ತ್ರಿಷು|
12051004c ಯೋಗೇಶ್ವರ ನಮಸ್ತೇಽಸ್ತು ತ್ವಂ ಹಿ ಸರ್ವಪರಾಯಣಮ್||
ಮೂರು ಲೋಕಗಳಲ್ಲಿಯೂ ವ್ಯಾಪಕನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಮೂರು ಗುಣಗಳಿಗೂ ಅತೀತನಾಗಿರುವ ನಿನಗೆ ನಮಸ್ಕರಿಸುತ್ತೇನೆ. ಯೋಗೇಶ್ವರ! ಸರ್ವಕ್ಕೂ ಪರಾಯಣನಾಗಿರುವ ನಿನಗೆ ನಮಸ್ಕರಿಸುತ್ತೇನೆ.
12051005a ಮತ್ಸಂಶ್ರಿತಂ ಯದಾತ್ಥ ತ್ವಂ ವಚಃ ಪುರುಷಸತ್ತಮ|
12051005c ತೇನ ಪಶ್ಯಾಮಿ ತೇ ದಿವ್ಯಾನ್ಭಾವಾನ್ಹಿ ತ್ರಿಷು ವರ್ತ್ಮಸು||
ಪುರುಷಸತ್ತಮ! ನೀನು ನನಗೆ ಸಂಬಂಧಿಸಿದಂತೆ ಕೆಲವು ಮಾತುಗಳನ್ನಾಡಿರುವೆ! ಇದರಿಂದಾಗಿ ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿರುವ ನಿನ್ನ ದಿವ್ಯತೆಯನ್ನು ಕಾಣುತ್ತಿದ್ದೇನೆ.
12051006a ತಚ್ಚ ಪಶ್ಯಾಮಿ ತತ್ತ್ವೇನ ಯತ್ತೇ ರೂಪಂ ಸನಾತನಮ್|
12051006c ಸಪ್ತ ಮಾರ್ಗಾ ನಿರುದ್ಧಾಸ್ತೇ ವಾಯೋರಮಿತತೇಜಸಃ||
ವಾಯುವಿನ ಏಳು ಮಾರ್ಗಗಳನ್ನೂ ತಡೆದಿರುವ ಅಮಿತತೇಜಸ್ವೀ ನಿನ್ನ ಸನಾತನ ರೂಪವನ್ನು ತತ್ತ್ವತಃ ನಾನು ಕಾಣುತ್ತಿದ್ದೇನೆ.
12051007a ದಿವಂ ತೇ ಶಿರಸಾ ವ್ಯಾಪ್ತಂ ಪದ್ಭ್ಯಾಂ ದೇವೀ ವಸುಂಧರಾ|
12051007c ದಿಶೋ ಭುಜೌ ರವಿಶ್ಚಕ್ಷುರ್ವೀರ್ಯೇ ಶಕ್ರಃ ಪ್ರತಿಷ್ಠಿತಃ||
ನಿನ್ನ ಶಿರಸ್ಸು ಸ್ವರ್ಗದಿಂದ ವ್ಯಾಪ್ತವಾಗಿದೆ. ಪಾದಗಳು ದೇವೀ ವಸುಂಧರೆಯಿಂದ ವ್ಯಾಪ್ತವಾಗಿವೆ. ನಿನ್ನ ಭುಜಗಳಲ್ಲಿ ದಿಕ್ಕುಗಳೂ, ಕಣ್ಣುಗಳಲ್ಲಿ ರವಿಯೂ ಮತ್ತು ವೀರ್ಯದಲ್ಲಿ ಶಕ್ರನೂ
ಪ್ರತಿಷ್ಠಿತಗೊಂಡಿದ್ದಾರೆ.
12051008a ಅತಸೀಪುಷ್ಪಸಂಕಾಶಂ ಪೀತವಾಸಸಮಚ್ಯುತಮ್|
12051008c ವಪುರ್ಹ್ಯನುಮಿಮೀಮಸ್ತೇ ಮೇಘಸ್ಯೇವ ಸವಿದ್ಯುತಃ||
ಅಗಸೇ ಹೂವಿನಂತೆ ಶ್ಯಾಮಲವರ್ಣದವನೂ, ಪೀತಾಂಬರವನ್ನು ಧರಿಸಿರುವವನೂ, ಧರ್ಮದಿಂದ ಚ್ಯುತನಾಗದೇ ಇರುವವನೂ ಆದ ನೀನು ನನಗೆ ಮಿಂಚುಗಳಿಂದ ಕೂಡಿರುವ ಕಾಲಮೇಘದಂತೆ ತೋರುತ್ತಿರುವೆ!
12051009a ತ್ವತ್ಪ್ರಪನ್ನಾಯ ಭಕ್ತಾಯ ಗತಿಮಿಷ್ಟಾಂ ಜಿಗೀಷವೇ|
12051009c ಯಚ್ಚ್ರೇಯಃ ಪುಂಡರೀಕಾಕ್ಷ ತದ್ಧ್ಯಾಯಸ್ವ ಸುರೋತ್ತಮ||
ಪುಂಡರೀಕಾಕ್ಷ! ಸುರೋತ್ತಮ! ಸದ್ಗತಿಯನ್ನು ಬಯಸಿ ನಿನ್ನನ್ನೇ ಶರಣುಹೊಂದಿರುವ ಈ ಭಕ್ತನಿಗೆ ಯಾವುದು ಶ್ರೇಯಸ್ಸೆಂದು ನೀನೇ ಹೇಳು!”
12051010 ವಾಸುದೇವ ಉವಾಚ
12051010a ಯತಃ ಖಲು ಪರಾ ಭಕ್ತಿರ್ಮಯಿ ತೇ ಪುರುಷರ್ಷಭ|
12051010c ತತೋ ವಪುರ್ಮಯಾ ದಿವ್ಯಂ ತವ ರಾಜನ್ಪ್ರದರ್ಶಿತಮ್||
ವಾಸುದೇವನು ಹೇಳಿದನು: “ಪುರುಷರ್ಷಭ! ರಾಜನ್! ನಿನಗೆ ನನ್ನಲ್ಲಿ ಪರಮ ಭಕ್ತಿಯಿರುವುದರಿಂದಲೇ ನಾನು ನಿನಗೆ ನನ್ನ ದಿವ್ಯ ರೂಪವನ್ನು ತೋರಿಸಿರುವೆನು!
12051011a ನ ಹ್ಯಭಕ್ತಾಯ ರಾಜೇಂದ್ರ ಭಕ್ತಾಯಾನೃಜವೇ ನ ಚ|
12051011c ದರ್ಶಯಾಮ್ಯಹಮಾತ್ಮಾನಂ ನ ಚಾದಾಂತಾಯ ಭಾರತ||
ರಾಜೇಂದ್ರ! ಭಾರತ! ನನ್ನ ಭಕ್ತನಲ್ಲದವನಿಗೆ, ಭಕ್ತನಾಗಿದ್ದರೂ ಕುಟಿಲಸ್ವಭಾವವಿದ್ದವನಿಗೆ ಮತ್ತು ಮನಃಶಾಂತಿಯಿಲ್ಲದವನಿಗೆ ನನ್ನ ಈ ದಿವ್ಯರೂಪವನ್ನು ತೋರಿಸುವುದಿಲ್ಲ.
12051012a ಭವಾಂಸ್ತು ಮಮ ಭಕ್ತಶ್ಚ ನಿತ್ಯಂ ಚಾರ್ಜವಮಾಸ್ಥಿತಃ|
12051012c ದಮೇ ತಪಸಿ ಸತ್ಯೇ ಚ ದಾನೇ ಚ ನಿರತಃ ಶುಚಿಃ||
ನೀನಾದರೋ ನನ್ನ ಭಕ್ತನಾಗಿರುವೆ. ನಿತ್ಯವೂ ಸರಳಸ್ವಭಾವದಿಂದಿರುವೆ. ನಿತ್ಯವೂ ನೀನು ಜಿತೇಂದ್ರಿಯ ಮತ್ತು ಶುಚಿಯಾಗಿದ್ದುಕೊಂಡು ಸತ್ಯ-ದಾನಗಳಲ್ಲಿ ನಿರತನಾಗಿರುವೆ!
12051013a ಅರ್ಹಸ್ತ್ವಂ ಭೀಷ್ಮ ಮಾಂ ದ್ರಷ್ಟುಂ ತಪಸಾ ಸ್ವೇನ ಪಾರ್ಥಿವ|
12051013c ತವ ಹ್ಯುಪಸ್ಥಿತಾ ಲೋಕಾ ಯೇಭ್ಯೋ ನಾವರ್ತತೇ ಪುನಃ||
ಭೀಷ್ಮ! ಪಾರ್ಥಿವ! ನಿನ್ನ ತಪಸ್ಸಿನಿಂದಲೇ ನೀನು ನನ್ನನ್ನು ನೋಡಲು ಅರ್ಹನಾಗಿರುವೆ. ಯಾವಲೋಕಗಳಿಂದ ನೀನು ಪುನಃ ಹಿಂದಿರುಗುವುದಿಲ್ಲವೋ ಅಂಥಹ ಉತ್ತಮ ಲೋಕಕ್ಕೇ ನೀನು ತೆರಳುತ್ತೀಯೆ.
12051014a ಪಂಚಾಶತಂ ಷಟ್ಚ ಕುರುಪ್ರವೀರ| ಶೇಷಂ ದಿನಾನಾಂ ತವ ಜೀವಿತಸ್ಯ|
12051014c ತತಃ ಶುಭೈಃ ಕರ್ಮಫಲೋದಯೈಸ್ತ್ವಂ| ಸಮೇಷ್ಯಸೇ ಭೀಷ್ಮ ವಿಮುಚ್ಯ ದೇಹಮ್||
ಕುರುಪ್ರವೀರ! ಭೀಷ್ಮ! ನಿನ್ನ ಜೀವಿತದಲ್ಲಿ ಇನ್ನು ಐವತ್ತಾರು ದಿನಗಳು ಮಾತ್ರವೇ ಉಳಿದಿವೆ. ಅದರ ನಂತರ ನಿನ್ನ ಶುಭಕರ್ಮಗಳ ಫಲವಾಗಿ ಈ ದೇಹವನ್ನು ವಿಸರ್ಜಿಸಿ ಉತ್ತಮ ಲೋಕವನ್ನು ಪಡೆಯುವೆ!
12051015a ಏತೇ ಹಿ ದೇವಾ ವಸವೋ ವಿಮಾನಾನ್ಯ್| ಆಸ್ಥಾಯ ಸರ್ವೇ ಜ್ವಲಿತಾಗ್ನಿಕಲ್ಪಾಃ|
12051015c ಅಂತರ್ಹಿತಾಸ್ತ್ವಾಂ ಪ್ರತಿಪಾಲಯಂತಿ| ಕಾಷ್ಠಾಂ ಪ್ರಪದ್ಯಂತಮುದಕ್ಪತಂಗಮ್||
ಪ್ರಜ್ವಲಿಸುತ್ತಿರುವ ಅಗ್ನಿಗಳಂತಿರುವ ಈ ದೇವತೆಗಳು ಮತ್ತು ವಸುಗಳು ವಿಮಾನಸ್ಥರಾಗಿ, ಯಾರಿಗೂ ಕಾಣದಂತೆ, ಸೂರ್ಯನು ಉತ್ತರಕ್ಕೆ ತೆರಳುವುದನ್ನೇ ಕಾಯುತ್ತಿದ್ದಾರೆ ಮತ್ತು ನಿನ್ನ ಪ್ರತ್ಯಾಗಮನವನ್ನು ಎದಿರುನೋಡುತ್ತಿದ್ದಾರೆ!
12051016a ವ್ಯಾವೃತ್ತಮಾತ್ರೇ ಭಗವತ್ಯುದೀಚೀಂ| ಸೂರ್ಯೇ ದಿಶಂ ಕಾಲವಶಾತ್ಪ್ರಪನ್ನೇ|
12051016c ಗಂತಾಸಿ ಲೋಕಾನ್ಪುರುಷಪ್ರವೀರ| ನಾವರ್ತತೇ ಯಾನುಪಲಭ್ಯ ವಿದ್ವಾನ್||
ಪುರುಷಪ್ರವೀರ! ಭಗವಾನ್ ಸೂರ್ಯನು ಕಾಲವಶನಾಗಿ ದಕ್ಷಿಣಾಯನದಿಂದ ಹಿಂದಿರುಗಿದ ಕೂಡಲೇ ಉತ್ತರಾಯಣಕ್ಕೆ ಕಾಲಿಟ್ಟೊಡನೆಯೇ ನೀನು ಲೋಕಗಳಿಗೆ ತೆರಳುತ್ತೀಯೆ ಮತ್ತು ವಿದ್ವಾನರಂತೆ ಆ ಲೋಕಗಳನ್ನು ಪಡೆದು ಮರಳಿ ಬರುವುದಿಲ್ಲ.
12051017a ಅಮುಂ ಚ ಲೋಕಂ ತ್ವಯಿ ಭೀಷ್ಮ ಯಾತೇ| ಜ್ಞಾನಾನಿ ನಂಕ್ಷ್ಯಂತ್ಯಖಿಲೇನ ವೀರ|
12051017c ಅತಃ ಸ್ಮ ಸರ್ವೇ ತ್ವಯಿ ಸಂನಿಕರ್ಷಂ| ಸಮಾಗತಾ ಧರ್ಮವಿವೇಚನಾಯ||
ಭೀಷ್ಮ! ವೀರ! ಈ ಲೋಕದಿಂದ ನೀನು ಹೊರಟು ಹೋಗಲು ನಿನ್ನಲ್ಲಿರುವ ಅಖಿಲ ಜ್ಞಾನಗಳು ನಷ್ಟವಾಗಿ ಹೋಗುತ್ತವೆ. ಆದುದರಿಂದಲೇ ಇವರೆಲ್ಲರೂ ಧರ್ಮದ ಕುರುತಾದ ಚರ್ಚೆಗಾಗಿಯೇ ನಿನ್ನ ಬಳಿ ಬಂದು ಸೇರಿದ್ದಾರೆ.
12051018a ತಜ್ಜ್ಞಾತಿಶೋಕೋಪಹತಶ್ರುತಾಯ| ಸತ್ಯಾಭಿಸಂಧಾಯ ಯುಧಿಷ್ಠಿರಾಯ|
12051018c ಪ್ರಬ್ರೂಹಿ ಧರ್ಮಾರ್ಥಸಮಾಧಿಯುಕ್ತಮ್| ಅರ್ಥ್ಯಂ ವಚೋಽಸ್ಯಾಪನುದಾಸ್ಯ ಶೋಕಮ್||
ಜ್ಞಾತಿವಧೆಯ ಶೋಕದಿಂದಾಗಿ ಶಾಸ್ತ್ರಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸತ್ಯಸಂಧ ಯುಧಿಷ್ಠಿರನಿಗೆ ಧರ್ಮಾರ್ಥಸಮಾಧಿಯುಕ್ತವಾದ ಅರ್ಥಬದ್ಧವಾದ ಮಾತುಗಳನ್ನಾಡಿ ಅವನ ಶೋಕವನ್ನು ಹೋಗಲಾಡಿಸು!””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಏಕಪಂಚಶತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ತೊಂದನೇ ಅಧ್ಯಾಯವು.