ಶಾಂತಿ ಪರ್ವ: ರಾಜಧರ್ಮ ಪರ್ವ
೩೮
12038001 ಯುಧಿಷ್ಠಿರ ಉವಾಚ
12038001a ಶ್ರೋತುಮಿಚ್ಚಾಮಿ ಭಗವನ್ವಿಸ್ತರೇಣ ಮಹಾಮುನೇ|
12038001c ರಾಜಧರ್ಮಾನ್ದ್ವಿಜಶ್ರೇಷ್ಠ ಚಾತುರ್ವರ್ಣ್ಯಸ್ಯ ಚಾಖಿಲಾನ್||
ಯುಧಿಷ್ಠಿರನು ಹೇಳಿದನು: “ಭಗವನ್! ಮಹಾಮುನೇ! ದ್ವಿಜಶ್ರೇಷ್ಠ! ರಾಜಧರ್ಮಗಳನ್ನೂ ಚಾತುರ್ವರ್ಣಗಳ ಧರ್ಮಗಳನ್ನೂ ಸಂಪೂರ್ಣವಾಗಿ ವಿಸ್ತಾರವಾಗಿ ಕೇಳ ಬಯಸುತ್ತೇನೆ.
12038002a ಆಪತ್ಸು ಚ ಯಥಾ ನೀತಿರ್ವಿಧಾತವ್ಯಾ ಮಹೀಕ್ಷಿತಾ|
12038002c ಧರ್ಮ್ಯಮಾಲಂಬ್ಯ ಪಂಥಾನಂ ವಿಜಯೇಯಂ ಕಥಂ ಮಹೀಮ್||
ಮಹೀಕ್ಷಿತನಾಗಿ ನಾನು ಆಪತ್ಕಾಲಗಳಲ್ಲಿ ಯಾವ ನೀತಿಗಳನ್ನು ಬಳಸಬೇಕು? ಧರ್ಮದ ಮಾರ್ಗವನ್ನೇ ಅನುಸರಿಸಿ ನಾನು ಹೇಗೆ ಈ ಭೂಮಿಯನ್ನು ಜಯಿಸಬಲ್ಲೆ?
12038003a ಪ್ರಾಯಶ್ಚಿತ್ತಕಥಾ ಹ್ಯೇಷಾ ಭಕ್ಷ್ಯಾಭಕ್ಷ್ಯವಿವರ್ಧಿತಾ|
12038003c ಕೌತೂಹಲಾನುಪ್ರವಣಾ ಹರ್ಷಂ ಜನಯತೀವ ಮೇ||
ಭಕ್ಷ್ಯ-ಅಭಕ್ಷ್ಯಗಳಿಂದ ಕೂಡಿದ ಪ್ರಾಯಶ್ಚಿತ್ತ ಪ್ರಕರಣವು ನನ್ನಲ್ಲಿ ಕುತೂಹಲವನ್ನುಂಟುಮಾಡಿದೆ. ಅದನ್ನು ಕೇಳಿ ನನಗೆ ಹರ್ಷವೂ ಆಗುತ್ತಿದೆ.
12038004a ಧರ್ಮಚರ್ಯಾ ಚ ರಾಜ್ಯಂ ಚ ನಿತ್ಯಮೇವ ವಿರುಧ್ಯತೇ|
12038004c ಯೇನ ಮುಹ್ಯತಿ ಮೇ ಚೇತಶ್ಚಿಂತಯಾನಸ್ಯ ನಿತ್ಯಶಃ||
ಧರ್ಮಾಚರಣೆ ಮತ್ತು ರಾಜ್ಯಾಡಳಿತ ಇವೆರಡೂ ನಿತ್ಯವೂ ಒಂದಕ್ಕೊಂದು ವಿರೋಧವಾಗಿಯೇ ಇರುತ್ತವೆ. ಇದನ್ನೇ ಸದಾ ಚಿಂತಿಸುತ್ತಿರುವ ನಾನು ಒಮ್ಮೊಮ್ಮೆ ಮೋಹಿತನಾಗುತ್ತೇನೆ.””
12038005 ವೈಶಂಪಾಯನ ಉವಾಚ
12038005a ತಮುವಾಚ ಮಹಾತೇಜಾ ವ್ಯಾಸೋ ವೇದವಿದಾಂ ವರಃ|
12038005c ನಾರದಂ ಸಮಭಿಪ್ರೇಕ್ಷ್ಯ ಸರ್ವಂ ಜಾನನ್ಪುರಾತನಮ್||
ವೈಶಂಪಾಯನನು ಹೇಳಿದನು: “ಆಗ ಮಹಾತೇಜಸ್ವಿ ವೇದವಿದರಲ್ಲಿ ಶ್ರೇಷ್ಠ ವ್ಯಾಸನು ಸರ್ವಜ್ಞ ಪುರಾತನ ನಾರದನನ್ನು ನೋಡಿ ಯುಧಿಷ್ಠಿರನಿಗೆ ಹೇಳಿದನು:
12038006a ಶ್ರೋತುಮಿಚ್ಚಸಿ ಚೇದ್ಧರ್ಮಾನಖಿಲೇನ ಯುಧಿಷ್ಠಿರ|
12038006c ಪ್ರೈಹಿ ಭೀಷ್ಮಂ ಮಹಾಬಾಹೋ ವೃದ್ಧಂ ಕುರುಪಿತಾಮಹಮ್||
ಯುಧಿಷ್ಠಿರ! ಮಹಾಬಾಹೋ! ಅಖಿಲ ಧರ್ಮಗಳನ್ನೂ ನೀನು ತಿಳಿಯಬಯಸಿದುದ್ದಾದರೆ ವೃದ್ಧ ಕುರುಪಿತಾಮಹ ಭೀಷ್ಮನ ಬಳಿ ಹೋಗು!
12038007a ಸ ತೇ ಸರ್ವರಹಸ್ಯೇಷು ಸಂಶಯಾನ್ಮನಸಿ ಸ್ಥಿತಾನ್|
12038007c ಚೇತ್ತಾ ಭಾಗೀರಥೀಪುತ್ರಃ ಸರ್ವಜ್ಞಃ ಸರ್ವಧರ್ಮವಿತ್||
ಆ ಭಾಗೀರಥೀಪುತ್ರ ಸರ್ವಜ್ಞ ಸರ್ವಧರ್ಮಗಳನ್ನೂ ತಿಳಿದುಕೊಂಡಿರುವ ಭೀಷ್ಮನು ನಿನ್ನ ಮನದಲ್ಲಿ ನೆಲೆಸಿರುವ ಸರ್ವ ಸಂಶಯಗಳನ್ನು ನಿವಾರಿಸುತ್ತಾನೆ.
12038008a ಜನಯಾಮಾಸ ಯಂ ದೇವೀ ದಿವ್ಯಾ ತ್ರಿಪಥಗಾ ನದೀ|
12038008c ಸಾಕ್ಷಾದ್ದದರ್ಶ ಯೋ ದೇವಾನ್ಸರ್ವಾನ್ಶಕ್ರಪುರೋಗಮಾನ್||
12038009a ಬೃಹಸ್ಪತಿಪುರೋಗಾಂಶ್ಚ ದೇವರ್ಷೀನಸಕೃತ್ಪ್ರಭುಃ|
12038009c ತೋಷಯಿತ್ವೋಪಚಾರೇಣ ರಾಜನೀತಿಮಧೀತವಾನ್||
12038010a ಉಶನಾ ವೇದ ಯಚ್ಚಾಸ್ತ್ರಂ ದೇವಾಸುರಗುರುರ್ದ್ವಿಜಃ|
12038010c ತಚ್ಚ ಸರ್ವಂ ಸವೈಯಾಖ್ಯಂ ಪ್ರಾಪ್ತವಾನ್ಕುರುಸತ್ತಮಃ||
ಯಾರ ಜನನಿಯು ದೇವೀ ದಿವ್ಯ ತ್ರಿಪಥಗಾ ಗಂಗಾನದಿಯೋ, ಯಾರು ಇಂದ್ರನೇ ಮೊದಲಾದ ಸರ್ವ ದೇವತೆಗಳನ್ನು ಸಾಕ್ಷಾತ್ ಕಂಡಿರುವನೋ, ಆ ಕುರುಸತ್ತಮ ಪ್ರಭುವು ಬೃಹಸ್ಪತಿಯೇ ಮೊದಲಾದ ದೇವರ್ಷಿಗಳನ್ನು ಉಪಚಾರಗಳಿಂದ ತೃಪ್ತಿಪಡಿಸಿ ರಾಜನೀತಿಯನ್ನೂ, ದೇವಾಸುರರ ಗುರುವಾದ ದ್ವಿಜ ಶುಕ್ರನಿಂದ ಸರ್ವ ಶಾಸ್ತ್ರಗಳನ್ನೂ ವ್ಯಾಖ್ಯಾನ ಸಹಿತವಾಗಿ ತಿಳಿದುಕೊಂಡಿದ್ದಾನೆ.
12038011a ಭಾರ್ಗವಾಚ್ಚ್ಯವನಾಚ್ಚಾಪಿ ವೇದಾನಂಗೋಪಬೃಂಹಿತಾನ್|
12038011c ಪ್ರತಿಪೇದೇ ಮಹಾಬುದ್ಧಿರ್ವಸಿಷ್ಠಾಚ್ಚ ಯತವ್ರತಾತ್||
ಆ ಮಹಾಬುದ್ಧಿಯು ಭಾರ್ಗವ ಚ್ಯವನನಿಂದ ಮತ್ತು ಯತವ್ರತ ವಸಿಷ್ಠನಿಂದ ವೇದಗಳನ್ನು ಅವುಗಳ ಅಂಗಗಳೊಂದಿಗೆ ಪಡೆದಿರುತ್ತಾನೆ.
12038012a ಪಿತಾಮಹಸುತಂ ಜ್ಯೇಷ್ಠಂ ಕುಮಾರಂ ದೀಪ್ತತೇಜಸಮ್|
12038012c ಅಧ್ಯಾತ್ಮಗತಿತತ್ತ್ವಜ್ಞಮುಪಾಶಿಕ್ಷತ ಯಃ ಪುರಾ||
ಭೀಷ್ಮನು ಪಿತಾಮಹಬ್ರಹ್ಮನ ಜ್ಯೇಷ್ಠ ಪುತ್ರ ದೀಪ್ತತೇಜಸ್ವಿ ಅಧ್ಯಾತ್ಮಗತಿಯ ತತ್ತ್ವಗಳನ್ನು ತಿಳಿದುಕೊಂಡಿರುವ ಸನತ್ಕುಮಾರನಿಂದ ಹಿಂದೆ ಶಿಕ್ಷಣವನ್ನು ಪಡೆದಿದ್ದನು.
12038013a ಮಾರ್ಕಂಡೇಯಮುಖಾತ್ಕೃತ್ಸ್ನಂ ಯತಿಧರ್ಮಮವಾಪ್ತವಾನ್|
12038013c ರಾಮಾದಸ್ತ್ರಾಣಿ ಶಕ್ರಾಚ್ಚ ಪ್ರಾಪ್ತವಾನ್ಭರತರ್ಷಭ||
ಭರತರ್ಷಭ! ಅವನು ಮಾರ್ಕಂಡೇಯ ಮುಖೇನ ಯತಿಧರ್ಮವನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವನು. ಪರಶುರಾಮನಿಂದ ಮತ್ತು ಇಂದ್ರನಿಂದ ಅಸ್ತ್ರಗಳನ್ನು ಪಡೆದುಕೊಂಡಿರುವನು.
12038014a ಮೃತ್ಯುರಾತ್ಮೇಚ್ಚಯಾ ಯಸ್ಯ ಜಾತಸ್ಯ ಮನುಜೇಷ್ವಪಿ|
12038014c ತಥಾನಪತ್ಯಸ್ಯ ಸತಃ ಪುಣ್ಯಲೋಕಾ ದಿವಿ ಶ್ರುತಾಃ||
ಮನುಷ್ಯನಾಗಿ ಹುಟ್ಟಿದ್ದರೂ ಮೃತ್ಯುವು ಅವನ ಇಚ್ಛೆಯಂತೆಯೇ ಬರುತ್ತದೆ. ಮಕ್ಕಳಿಲ್ಲದವನಾಗಿದ್ದರೂ ಅವನಿಗೆ ದಿವಿಯ ಪುಣ್ಯಲೋಕಗಳು ದೊರೆಯುತ್ತವೆ ಎಂದು ಕೇಳಿದ್ದೇವೆ.
12038015a ಯಸ್ಯ ಬ್ರಹ್ಮರ್ಷಯಃ ಪುಣ್ಯಾ ನಿತ್ಯಮಾಸನ್ಸಭಾಸದಃ|
12038015c ಯಸ್ಯ ನಾವಿದಿತಂ ಕಿಂ ಚಿತ್ಜ್ಞಾನಜ್ಞೇಯೇಷು ವಿದ್ಯತೇ||
12038016a ಸ ತೇ ವಕ್ಷ್ಯತಿ ಧರ್ಮಜ್ಞಃ ಸೂಕ್ಷ್ಮಧರ್ಮಾರ್ಥತತ್ತ್ವವಿತ್|
12038016c ತಮಭ್ಯೇಹಿ ಪುರಾ ಪ್ರಾಣಾನ್ಸ ವಿಮುಂಚತಿ ಧರ್ಮವಿತ್||
ಪುಣ್ಯ ಬ್ರಹ್ಮರ್ಷಿಗಳು ನಿತ್ಯವೂ ಯಾರ ಸಭಾಸದರಾಗಿ ಉಪಸ್ಥಿತರಾಗಿರುತ್ತಿದ್ದರೋ, ತಿಳಿದುಕೊಂಡಿರಬೇಕಾದ ಜ್ಞಾನಗಳಲ್ಲಿ ಯಾರಿಗೆ ಯಾವುದೂ ತಿಳಿಯದೇ ಇಲ್ಲವೋ, ಆ ಧರ್ಮಜ್ಞ ಧರ್ಮದ ಸೂಕ್ಷ್ಮ ಅರ್ಥಗಳನ್ನು ಯಥಾವತ್ತಾಗಿ ತಿಳಿದುಕೊಂಡಿರುವ ಧರ್ಮವಿದುವು ಪ್ರಾಣಗಳನ್ನು ತೊರೆಯುವ ಮೊದಲು ನೀನು ಅವನ ಬಳಿಗೆ ಹೋಗು.”
12038017a ಏವಮುಕ್ತಸ್ತು ಕೌಂತೇಯೋ ದೀರ್ಘಪ್ರಜ್ಞೋ ಮಹಾದ್ಯುತಿಃ|
12038017c ಉವಾಚ ವದತಾಂ ಶ್ರೇಷ್ಠಂ ವ್ಯಾಸಂ ಸತ್ಯವತೀಸುತಮ್||
ಇದನ್ನು ಕೇಳಿದ ದೀರ್ಘಪ್ರಜ್ಞ ಮಹಾದ್ಯುತಿ ಕೌಂತೇಯನು ಸತ್ಯವತೀ ಸುತ ಮಾತನಾಡುವವರಲ್ಲಿ ಶ್ರೇಷ್ಠ ವ್ಯಾಸನಿಗೆ ಇಂತೆಂದನು:
12038018a ವೈಶಸಂ ಸುಮಹತ್ಕೃತ್ವಾ ಜ್ಞಾತೀನಾಂ ಲೋಮಹರ್ಷಣಮ್|
12038018c ಆಗಸ್ಕೃತ್ಸರ್ವಲೋಕಸ್ಯ ಪೃಥಿವೀನಾಶಕಾರಕಃ||
12038019a ಘಾತಯಿತ್ವಾ ತಮೇವಾಜೌ ಚಲೇನಾಜಿಹ್ಮಯೋಧಿನಮ್|
12038019c ಉಪಸಂಪ್ರಷ್ಟುಮರ್ಹಾಮಿ ತಮಹಂ ಕೇನ ಹೇತುನಾ||
“ರೋಮಾಂಚನಗೊಳ್ಳುವಂಥಹ ಈ ಮಹಾ ಬಂಧುವಧೆಯನ್ನು ನಡೆಸಿ ನಾನು ಸರ್ವಲೋಕಕ್ಕೇ ಪೃಥ್ವೀನಾಶಕಾರಕವಾದ ಅಪರಾಧವನ್ನೆಸಗಿದ್ದೇನೆ. ಋಜುಮಾರ್ಗದಲ್ಲಿಯೇ ಹೋರಾಡುತ್ತಿದ್ದ ಆ ಭೀಷ್ಮನನ್ನು ವಂಚನೆಯಿಂದ ಘಾತಿಗೊಳಿಸಿ ಈಗ ನಾನು ಯಾವ ಮುಖವನ್ನಿಟ್ಟುಕೊಂಡು ಧರ್ಮದ ವಿಷಯವಾಗಿ ಅವನನ್ನು ಪ್ರಶ್ನಿಸಲು ಹೋಗಲಿ? ಅದನ್ನು ಕೇಳುವ ಯೋಗ್ಯತೆಯಾದರೂ ನನಗೆಲ್ಲಿದೆ?”
12038020a ತತಸ್ತಂ ನೃಪತಿಶ್ರೇಷ್ಠಂ ಚಾತುರ್ವರ್ಣ್ಯಹಿತೇಪ್ಸಯಾ|
12038020c ಪುನರಾಹ ಮಹಾಬಾಹುರ್ಯದುಶ್ರೇಷ್ಠೋ ಮಹಾದ್ಯುತಿಃ||
ಆಗ ಚಾತುರ್ವರ್ಣದವರ ಹಿತವನ್ನೇ ಬಯಸುವ ಮಹಾಬಾಹು ಮಹಾದ್ಯುತಿ ಯದುಶ್ರೇಷ್ಠ ಕೃಷ್ಣನು ಆ ನೃಪತಿಶ್ರೇಷ್ಠನಿಗೆ ಹೇಳಿದನು:
12038021a ನೇದಾನೀಮತಿನಿರ್ಬಂಧಂ ಶೋಕೇ ಕರ್ತುಮಿಹಾರ್ಹಸಿ|
12038021c ಯದಾಹ ಭಗವಾನ್ವ್ಯಾಸಸ್ತತ್ಕುರುಷ್ವ ನೃಪೋತ್ತಮ||
“ನೃಪೋತ್ತಮ! ನಿರ್ಬಂಧಪೂರ್ವಕವಾಗಿ ಈ ರೀತಿ ಶೋಕಪಡುವುದು ನಿನಗೆ ಸರಿಯಲ್ಲ. ಭಗವಾನ್ ವ್ಯಾಸನು ಹೇಳಿದಂತೆಯೇ ಮಾಡು!
12038022a ಬ್ರಾಹ್ಮಣಾಸ್ತ್ವಾಂ ಮಹಾಬಾಹೋ ಭ್ರಾತರಶ್ಚ ಮಹೌಜಸಃ|
12038022c ಪರ್ಜನ್ಯಮಿವ ಘರ್ಮಾರ್ತಾ ಆಶಂಸಾನಾ ಉಪಾಸತೇ||
ಮಹಾಬಾಹೋ! ಬೇಸಗೆಯ ಕೊನೆಯಲ್ಲಿ ಜನರು ಮಳೆಗಾಗಿ ಪರ್ಜನ್ಯನನ್ನು ಹೇಗೋ ಹಾಗೆ ಈ ಬ್ರಾಹ್ಮಣರು ಮತ್ತು ಮಹಾತೇಜಸ್ವೀ ಸಹೋದರರು ನಿನ್ನನ್ನೇ ಉಪಾಸಿಸುತ್ತಿದ್ದಾರೆ.
12038023a ಹತಶಿಷ್ಟಾಶ್ಚ ರಾಜಾನಃ ಕೃತ್ಸ್ನಂ ಚೈವ ಸಮಾಗತಮ್|
12038023c ಚಾತುರ್ವರ್ಣ್ಯಂ ಮಹಾರಾಜ ರಾಷ್ಟ್ರಂ ತೇ ಕುರುಜಾಂಗಲಮ್||
ಮಹಾರಾಜ! ಅಳಿದುಳಿದ ರಾಜರೆಲ್ಲರೂ ಮತ್ತು ನಿನ್ನ ರಾಷ್ಟ್ರ ಕುರುಜಾಂಗಲದ ನಾಲ್ಕೂ ವರ್ಣದವರೂ ಇಲ್ಲಿಗೆ ಬಂದು ಸೇರಿದ್ದಾರೆ.
12038024a ಪ್ರಿಯಾರ್ಥಮಪಿ ಚೈತೇಷಾಂ ಬ್ರಾಹ್ಮಣಾನಾಂ ಮಹಾತ್ಮನಾಮ್|
12038024c ನಿಯೋಗಾದಸ್ಯ ಚ ಗುರೋರ್ವ್ಯಾಸಸ್ಯಾಮಿತತೇಜಸಃ||
12038025a ಸುಹೃದಾಂ ಚಾಸ್ಮದಾದೀನಾಂ ದ್ರೌಪದ್ಯಾಶ್ಚ ಪರಂತಪ|
12038025c ಕುರು ಪ್ರಿಯಮಮಿತ್ರಘ್ನ ಲೋಕಸ್ಯ ಚ ಹಿತಂ ಕುರು||
ಪರಂತಪ! ಅಮಿತ್ರಘ್ನ! ಈ ಮಹಾತ್ಮ ಬ್ರಾಹ್ಮಣರ ಸಂತೋಷಕ್ಕಾಗಿ, ಅಮಿತ ತೇಜಸ್ವಿ ಗುರು ವ್ಯಾಸನ ನಿಯೋಗದಂತೆ, ದ್ರೌಪದಿಯೇ ಮೊದಲಾದ ನಮ್ಮ ಸುಹೃದಯರಿಗೆ ಸಂತೋಷವಾಗುವಂತೆ ಮಾಡು. ಲೋಕಕ್ಕೆ ಹಿತವನ್ನುಂಟುಮಾಡು!”
12038026a ಏವಮುಕ್ತಸ್ತು ಕೃಷ್ಣೇನ ರಾಜಾ ರಾಜೀವಲೋಚನಃ|
12038026c ಹಿತಾರ್ಥಂ ಸರ್ವಲೋಕಸ್ಯ ಸಮುತ್ತಸ್ಥೌ ಮಹಾತಪಾಃ||
ಕೃಷ್ಣನು ಹೀಗೆ ಹೇಳಲು ರಾಜೀವಲೋಚನ ರಾಜಾ ಮಹಾತಪಸ್ವಿ ಯುಧಿಷ್ಠಿರನು ಸರ್ವಲೋಕಗಳ ಹಿತಕ್ಕಾಗಿ ಕುಳಿತಲ್ಲಿಂದ ಮೇಲೆದ್ದನು.
12038027a ಸೋಽನುನೀತೋ ನರವ್ಯಾಘ್ರೋ ವಿಷ್ಟರಶ್ರವಸಾ ಸ್ವಯಮ್|
12038027c ದ್ವೈಪಾಯನೇನ ಚ ತಥಾ ದೇವಸ್ಥಾನೇನ ಜಿಷ್ಣುನಾ||
12038028a ಏತೈಶ್ಚಾನ್ಯೈಶ್ಚ ಬಹುಭಿರನುನೀತೋ ಯುಧಿಷ್ಠಿರಃ|
12038028c ವ್ಯಜಹಾನ್ಮಾನಸಂ ದುಃಖಂ ಸಂತಾಪಂ ಚ ಮಹಾಮನಾಃ||
ಹೀಗೆ ಸ್ವಯಂ ಕೃಷ್ಣನಿಂದಲೂ, ದ್ವೈಪಾಯನನಿಂದಲೂ, ದೇವಸ್ಥಾನನಿಂದಲೂ, ಅರ್ಜುನನಿಂದಲೂ ಮತ್ತು ಇತರ ಅನೇಕರಿಂದ ಸಮಾಧಾನಗೊಳಿಸಲ್ಪಟ್ಟ ನರವ್ಯಾಘ್ರ ಯುಧಿಷ್ಠಿರನು ಮಾನಸಿಕ ದುಃಖ-ಸಂತಾಪಗಳನ್ನು ಪರಿತ್ಯಜಿಸಿದನು.
12038029a ಶ್ರುತವಾಕ್ಯಃ ಶ್ರುತನಿಧಿಃ ಶ್ರುತಶ್ರವ್ಯವಿಶಾರದಃ|
12038029c ವ್ಯವಸ್ಯ ಮನಸಃ ಶಾಂತಿಮಗಚ್ಚತ್ಪಾಂಡುನಂದನಃ||
ಶ್ರುತಿಗಳ ವಾಕ್ಯವನ್ನು ಕೇಳಿ, ಶ್ರುತಿಗಳ ಕುರಿತು ಕೇಳುವುದರಲ್ಲಿ ವಿಶಾರದನಾದ ಆ ಶ್ರುತನಿಧಿ ಪಾಂಡುನಂದನನು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಶಾಂತಿಯುತನಾದನು.
12038030a ಸ ತೈಃ ಪರಿವೃತೋ ರಾಜಾ ನಕ್ಷತ್ರೈರಿವ ಚಂದ್ರಮಾಃ|
12038030c ಧೃತರಾಷ್ಟ್ರಂ ಪುರಸ್ಕೃತ್ಯ ಸ್ವಪುರಂ ಪ್ರವಿವೇಶ ಹ||
ಅನಂತರ ನಕ್ಷತ್ರಗಳಿಂದ ಸುತ್ತುವರೆಯಲ್ಪಟ್ಟ ಚಂದ್ರಮನಂತೆ ಆ ರಾಜನು ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ತನ್ನ ಪುರವನ್ನು ಪ್ರವೇಶಿಸಿದನು.
12038031a ಪ್ರವಿವಿಕ್ಷುಃ ಸ ಧರ್ಮಜ್ಞಃ ಕುಂತೀಪುತ್ರೋ ಯುಧಿಷ್ಠಿರಃ|
12038031c ಅರ್ಚಯಾಮಾಸ ದೇವಾಂಶ್ಚ ಬ್ರಾಹ್ಮಣಾಂಶ್ಚ ಸಹಸ್ರಶಃ||
ಪುರ ಪ್ರವೇಶಮಾಡುವಾಗ ಧರ್ಮಜ್ಞ ಕುಂತೀಪುತ್ರ ಯುಧಿಷ್ಠಿರನು ದೇವತೆಗಳನ್ನೂ, ಸಹಸ್ರಾರು ಬ್ರಾಹ್ಮಣರನ್ನೂ ಅರ್ಚಿಸಿದನು.
12038032a ತತೋ ರಥಂ ನವಂ ಶುಭ್ರಂ ಕಂಬಲಾಜಿನಸಂವೃತಮ್|
12038032c ಯುಕ್ತಂ ಷೋಡಶಭಿರ್ಗೋಭಿಃ ಪಾಂಡುರೈಃ ಶುಭಲಕ್ಷಣೈಃ||
12038033a ಮಂತ್ರೈರಭ್ಯರ್ಚಿತಃ ಪುಣ್ಯೈಃ ಸ್ತೂಯಮಾನೋ ಮಹರ್ಷಿಭಿಃ|
12038033c ಆರುರೋಹ ಯಥಾ ದೇವಃ ಸೋಮೋಽಮೃತಮಯಂ ರಥಮ್||
ಅನಂತರ ದೇವ ಸೋಮನು ಅಮೃತಮಯ ರಥವನ್ನು ಏರುವಂತೆ ಅವನು ಹೊಸತಾದ, ಶುಭ್ರವಾದ, ಕಂಬಳಿ-ಜಿನಗಳನ್ನು ಹೊದೆಸಿದ್ದ, ಶುಭಲಕ್ಷಣಗಳುಳ್ಳ ಬಿಳಿಯಾದ ಹದಿನಾರು ಎತ್ತುಗಳನ್ನು ಕಟ್ಟಿದ್ದ, ಮಂತ್ರಗಳಿಂದ ಅರ್ಚಿತಗೊಂಡಿದ್ದ, ಪುಣ್ಯ ಮಹರ್ಷಿಗಳಿಂದ ಸ್ತುತಿಸಲ್ಪಡುತ್ತಿದ್ದ ರಥವನ್ನು ಏರಿದನು.
12038034a ಜಗ್ರಾಹ ರಶ್ಮೀನ್ಕೌಂತೇಯೋ ಭೀಮೋ ಭೀಮಪರಾಕ್ರಮಃ|
12038034c ಅರ್ಜುನಃ ಪಾಂಡುರಂ ಚತ್ರಂ ಧಾರಯಾಮಾಸ ಭಾನುಮತ್||
ಕೌಂತೇಯ ಭೀಮಪರಾಕ್ರಮಿ ಭೀಮನು ಕಡಿವಾಣಗಳನ್ನು ಹಿಡಿದನು. ಅರ್ಜುನನು ಭಾನುವಂತೆ ಬಿಳುಪಾದ ಚತ್ರವನ್ನು ಹಿಡಿದನು.
12038035a ಧ್ರಿಯಮಾಣಂ ತು ತಚ್ಚತ್ರಂ ಪಾಂಡುರಂ ತಸ್ಯ ಮೂರ್ಧನಿ|
12038035c ಶುಶುಭೇ ತಾರಕಾರಾಜಸಿತಮಭ್ರಮಿವಾಂಬರೇ||
ಅವನ ನೆತ್ತಿಯ ಮೇಲೆ ಹಿಡಿದಿದ್ದ ಆ ಬಿಳುಪಾದ ಕೊಡೆಯು ಆಕಾಶದಲ್ಲಿ ನಕ್ಷತ್ರಗಳಿಂದ ಸಮಾಕುಲವಾದ ಬಿಳಿಯ ಮೋಡದಂತೆ ಪ್ರಕಾಶಿಸುತ್ತಿತ್ತು.
12038036a ಚಾಮರವ್ಯಜನೇ ಚಾಸ್ಯ ವೀರೌ ಜಗೃಹತುಸ್ತದಾ|
12038036c ಚಂದ್ರರಶ್ಮಿಪ್ರಭೇ ಶುಭ್ರೇ ಮಾದ್ರೀಪುತ್ರಾವಲಂಕೃತೇ||
ವೀರರಾದ ಮಾದ್ರೀಪುತ್ರರಿಬ್ಬರೂ ಚಂದ್ರನ ಕಿರಣಗಳ ಪ್ರಭೆಯುಳ್ಳ ಅಲಂಕೃತವಾದ ಚಾಮರ-ಬೀಸಣಿಗೆಗಳನ್ನು ಹಿಡಿದಿದ್ದರು.
12038037a ತೇ ಪಂಚ ರಥಮಾಸ್ಥಾಯ ಭ್ರಾತರಃ ಸಮಲಂಕೃತಾಃ|
12038037c ಭೂತಾನೀವ ಸಮಸ್ತಾನಿ ರಾಜನ್ದದೃಶಿರೇ ತದಾ||
ರಾಜನ್! ಹಾಗೆ ಸಮಲಂಕೃತರಾಗಿ ರಥದಲ್ಲಿದ್ದ ಆ ಐವರು ಸಹೋದರರು ಪಂಚಮಹಾಭೂತಗಳಂತೆಯೇ ಕಾಣುತ್ತಿದ್ದರು.
12038038a ಆಸ್ಥಾಯ ತು ರಥಂ ಶುಭ್ರಂ ಯುಕ್ತಮಶ್ವೈರ್ಮಹಾಜವೈಃ|
12038038c ಅನ್ವಯಾತ್ಪೃಷ್ಠತೋ ರಾಜನ್ಯುಯುತ್ಸುಃ ಪಾಂಡವಾಗ್ರಜಮ್||
ರಾಜನ್! ಯುಯುತ್ಸುವು ಮಹಾವೇಗದ ಕುದುರೆಗಳನ್ನು ಕಟ್ಟಿದ್ದ ಶುಭ್ರ ರಥದಲ್ಲಿ ಕುಳಿತು ಪಾಂಡವಾಗ್ರಜನನ್ನು ಹಿಂಬಾಲಿಸಿ ಹೋದನು.
12038039a ರಥಂ ಹೇಮಮಯಂ ಶುಭ್ರಂ ಸೈನ್ಯಸುಗ್ರೀವಯೋಜಿತಮ್|
12038039c ಸಹ ಸಾತ್ಯಕಿನಾ ಕೃಷ್ಣಃ ಸಮಾಸ್ಥಾಯಾನ್ವಯಾತ್ಕುರೂನ್||
ಸೈನ್ಯ-ಸುಗ್ರೀವರನ್ನು ಕಟ್ಟಿದ್ದ ಹೇಮಮಯ ರಥದಲ್ಲಿ ಸಾತ್ಯಕಿಯೊಂದಿಗೆ ಕುಳಿತಿದ್ದ ಕೃಷ್ಣನು ಕುರುಗಳನ್ನು ಹಿಂಬಾಲಿಸಿ ಹೋದನು.
12038040a ನರಯಾನೇನ ತು ಜ್ಯೇಷ್ಠಃ ಪಿತಾ ಪಾರ್ಥಸ್ಯ ಭಾರತ|
12038040c ಅಗ್ರತೋ ಧರ್ಮರಾಜಸ್ಯ ಗಾಂಧಾರೀಸಹಿತೋ ಯಯೌ||
ಭಾರತ! ಪಾರ್ಥನ ಜ್ಯೇಷ್ಠ ಪಿತ ಧೃತರಾಷ್ಟ್ರನು ಗಾಂಧಾರಿಯ ಸಹಿತ ಮನುಷ್ಯರು ಹೊತ್ತಿದ್ದ ಪಲ್ಲಕ್ಕಿಯಲ್ಲಿ ಕುಳಿತು ಧರ್ಮರಾಜನ ರಥದ ಮುಂಭಾಗದಲ್ಲಿ ಹೋಗುತ್ತಿದ್ದನು.
12038041a ಕುರುಸ್ತ್ರಿಯಶ್ಚ ತಾಃ ಸರ್ವಾಃ ಕುಂತೀ ಕೃಷ್ಣಾ ಚ ದ್ರೌಪದೀ|
12038041c ಯಾನೈರುಚ್ಚಾವಚೈರ್ಜಗ್ಮುರ್ವಿದುರೇಣ ಪುರಸ್ಕೃತಾಃ||
ಕುಂತಿ, ಕೃಷ್ಣೆ ದ್ರೌಪದಿ ಮತ್ತು ಎಲ್ಲ ಕುರುಸ್ತ್ರೀಯರು ವಿದುರನನನ್ನು ಮುಂದಿಟ್ಟುಕೊಂಡು ತಮತಮಗೆ ಯೋಗ್ಯವಾದ ಪಲ್ಲಕ್ಕಿಗಳಲ್ಲಿ ಕುಳಿತು ಹೋದರು.
12038042a ತತೋ ರಥಾಶ್ಚ ಬಹುಲಾ ನಾಗಾಶ್ಚ ಸಮಲಂಕೃತಾಃ|
12038042c ಪಾದಾತಾಶ್ಚ ಹಯಾಶ್ಚೈವ ಪೃಷ್ಠತಃ ಸಮನುವ್ರಜನ್||
ಅವರ ಹಿಂದೆ ಅನೇಕ ಸಮಲಂಕೃತ ರಥಗಳೂ, ಆನೆಗಳೂ, ಪದಾತಿಗಳೂ ಮತ್ತು ಕುದುರೆಗಳೂ ಸಾಗುತ್ತಿದ್ದವು.
12038043a ತತೋ ವೈತಾಲಿಕೈಃ ಸೂತೈರ್ಮಾಗಧೈಶ್ಚ ಸುಭಾಷಿತೈಃ|
12038043c ಸ್ತೂಯಮಾನೋ ಯಯೌ ರಾಜಾ ನಗರಂ ನಾಗಸಾಹ್ವಯಮ್||
ಆಗ ವೈತಾಲಿಕರು ಮತ್ತು ಸೂತ-ಮಾಗಧರು ಸುಂದರ ವಾಣಿಯಲ್ಲಿ ಸ್ತುತಿಸುತ್ತಿರುವಾಗ ರಾಜನು ಹಸ್ತಿನಾಪುರ ನಗರಕ್ಕೆ ಪ್ರಯಾಣಿಸಿದನು.
12038044a ತತ್ಪ್ರಯಾಣಂ ಮಹಾಬಾಹೋರ್ಬಭೂವಾಪ್ರತಿಮಂ ಭುವಿ|
12038044c ಆಕುಲಾಕುಲಮುತ್ಸೃಷ್ಟಂ ಹೃಷ್ಟಪುಷ್ಟಜನಾನ್ವಿತಮ್||
ಹೃಷ್ಟ-ಪುಷ್ಟ ಜನರಿಂದಲೂ ಜಯಘೋಷಮಾಡುತ್ತಿದ್ದ ಜನರಿಂದಲೂ ಸಮಾಕುಲವಾಗಿದ್ದ ಆ ಮಹಾಬಾಹುವಿನ ಪ್ರಯಾಣವು ಭುವಿಯಲ್ಲಿಯೇ ಅಪ್ರತಿಮವಾಗಿತ್ತು.
12038045a ಅಭಿಯಾನೇ ತು ಪಾರ್ಥಸ್ಯ ನರೈರ್ನಗರವಾಸಿಭಿಃ|
12038045c ನಗರಂ ರಾಜಮಾರ್ಗಶ್ಚ ಯಥಾವತ್ಸಮಲಂಕೃತಮ್||
ಪಾರ್ಥನು ಪ್ರಯಾಣಿಸುತ್ತಿರುವಾಗ ನಗರವಾಸಿಗಳು ನಗರವನ್ನೂ ರಾಜಮಾರ್ಗವನ್ನೂ ಯಥಾವತ್ತಾಗಿ ಅಲಂಕರಿಸಿದ್ದರು.
12038046a ಪಾಂಡುರೇಣ ಚ ಮಾಲ್ಯೇನ ಪತಾಕಾಭಿಶ್ಚ ವೇದಿಭಿಃ|
12038046c ಸಂವೃತೋ ರಾಜಮಾರ್ಗಶ್ಚ ಧೂಪನೈಶ್ಚ ಸುಧೂಪಿತಃ||
ಬಿಳಿಯ ಹೂಮಾಲೆಗಳಿಂದಲೂ, ಪತಾಕೆಗಳಿಂದಲೂ ಅಲಂಕೃತ ರಾಜಮಾರ್ಗವು ಧೂಪಗಳಿಂದ ಸುಗಂಧಮಯವಾಗಿತ್ತು.
12038047a ಅಥ ಚೂರ್ಣೈಶ್ಚ ಗಂಧಾನಾಂ ನಾನಾಪುಷ್ಪೈಃ ಪ್ರಿಯಂಗುಭಿಃ|
12038047c ಮಾಲ್ಯದಾಮಭಿರಾಸಕ್ತೈ ರಾಜವೇಶ್ಮಾಭಿಸಂವೃತಮ್||
ಚೂರ್ಣಗಳಿಂದಲೂ, ಗಂಧಗಳಿಂದಲೂ, ನಾನಾ ಪುಷ್ಪಗಳ ಗುಚ್ಚಗಳಿಂದಲೂ, ಮಾಲೆಗಳಿಂದಲೂ ರಾಜನ ಅರಮನೆಯು ಅಲಂಕರಿಸಲ್ಪಟ್ಟಿತ್ತು.
12038048a ಕುಂಭಾಶ್ಚ ನಗರದ್ವಾರಿ ವಾರಿಪೂರ್ಣಾ ದೃಢಾ ನವಾಃ|
12038048c ಕನ್ಯಾಃ ಸುಮನಸಶ್ಚಾಗಾಃ ಸ್ಥಾಪಿತಾಸ್ತತ್ರ ತತ್ರ ಹ||
ನಗರದ್ವಾರದಲ್ಲಿ ನೀರಿನಿಂದ ತುಂಬಿದ್ದ ಗಟ್ಟಿಯಾದ ಹೊಸ ಕುಂಭಗಳನ್ನಿಟ್ಟಿದ್ದರು ಮತ್ತು ಸುಮನಸರಾದ ಕನ್ಯೆಯರೂ ಅಲ್ಲಲ್ಲಿ ನಿಂತಿದ್ದರು.
12038049a ತಥಾ ಸ್ವಲಂಕೃತದ್ವಾರಂ ನಗರಂ ಪಾಂಡುನಂದನಃ|
12038049c ಸ್ತೂಯಮಾನಃ ಶುಭೈರ್ವಾಕ್ಯೈಃ ಪ್ರವಿವೇಶ ಸುಹೃದ್ವೃತಃ||
ಹಾಗೆ ಸ್ವಲಂಕೃತವಾದ ನಗರದ್ವಾರವನ್ನು ಸುಹೃದಯರೊಂದಿಗೆ ಪಾಂಡುನಂದನನು ಶುಭವಾಕ್ಯಗಳಿಂದ ಸ್ತುತಿಸಲ್ಪಡುತ್ತಾ ಪ್ರವೇಶಿಸಿದನು."
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಪ್ರವೇಶೇ ಅಷ್ಠಾತ್ರಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಪ್ರವೇಶ ಎನ್ನುವ ಮೂವತ್ತೆಂಟನೇ ಅಧ್ಯಾಯವು.