ಶಾಂತಿ ಪರ್ವ: ರಾಜಧರ್ಮ ಪರ್ವ

೨೭[1]

12027001 ಯುಧಿಷ್ಠಿರ ಉವಾಚ

12027001a ಅಭಿಮನ್ಯೌ ಹತೇ ಬಾಲೇ ದ್ರೌಪದ್ಯಾಸ್ತನಯೇಷು ಚ|

12027001c ಧೃಷ್ಟದ್ಯುಮ್ನೇ ವಿರಾಟೇ ಚ ದ್ರುಪದೇ ಚ ಮಹೀಪತೌ||

12027002a ವಸುಷೇಣೇ ಚ ಧರ್ಮಜ್ಞೇ ಧೃಷ್ಟಕೇತೌ ಚ ಪಾರ್ಥಿವೇ|

12027002c ತಥಾನ್ಯೇಷು ನರೇಂದ್ರೇಷು ನಾನಾದೇಶ್ಯೇಷು ಸಂಯುಗೇ||

12027003a ನ ವಿಮುಂಚತಿ ಮಾಂ ಶೋಕೋ ಜ್ಞಾತಿಘಾತಿನಮಾತುರಮ್|

12027003c ರಾಜ್ಯಕಾಮುಕಮತ್ಯುಗ್ರಂ ಸ್ವವಂಶೋಚ್ಚೇದಕಾರಕಮ್||

ಯುಧಿಷ್ಠಿರನು ಹೇಳಿದನು: “ಬಾಲಕ ಅಭಿಮನ್ಯು, ದ್ರೌಪದಿಯ ಐವರು ಮಕ್ಕಳು, ಧೃಷ್ಟದ್ಯುಮ್ನ, ಮಹೀಪತಿಗಳಾದ ದ್ರುಪದ-ವಿರಾಟರು, ಧರ್ಮಜ್ಞ ಪಾರ್ಥಿವ ವಸುಷೇಣ[2]-ಧೃಷ್ಟಕೇತುಗಳು, ಹಾಗೆಯೇ ನಾನಾದೇಶಗಳಿಂದ ಬಂದಿದ್ದ ಅನ್ಯ ನರೇಂದ್ರರು ಯುದ್ಧದಲ್ಲಿ ಮಡಿದುದರಿಂದ ಜ್ಞಾತಿಘಾತಿಕನಾದ ನನ್ನನ್ನು ಶೋಕವು ಬಿಡುತ್ತಿಲ್ಲ. ರಾಜ್ಯಲೋಭದಿಂದಾಗಿ ನಾನೇ ಈ ಉಗ್ರಕರ್ಮವನ್ನೆಸಗಿದೆನು!

12027004a ಯಸ್ಯಾಂಕೇ ಕ್ರೀಡಮಾನೇನ ಮಯಾ ವೈ ಪರಿವರ್ತಿತಮ್|

12027004c ಸ ಮಯಾ ರಾಜ್ಯಲುಬ್ಧೇನ ಗಾಂಗೇಯೋ ವಿನಿಪಾತಿತಃ||

ಯಾರ ತೊಡೆಯಮೇಲೆ ಹೊರಳಾಡಿ ಆಡುತ್ತಿದ್ದೆನೋ ಆ ಗಾಂಗೇಯನನ್ನೇ ನಾನು ರಾಜಲೋಭದಿಂದ ಕೆಳಗುರುಳಿಸಿದೆನು!

12027005a ಯದಾ ಹ್ಯೇನಂ ವಿಘೂರ್ಣಂತಮಪಶ್ಯಂ ಪಾರ್ಥಸಾಯಕೈಃ|

12027005c ಕಂಪಮಾನಂ ಯಥಾ ವಜ್ರೈಃ ಪ್ರೇಕ್ಷಮಾಣಂ ಶಿಖಂಡಿನಮ್||

12027006a ಜೀರ್ಣಂ ಸಿಂಹಮಿವ ಪ್ರಾಂಶುಂ ನರಸಿಂಹಂ ಪಿತಾಮಹಮ್|

12027006c ಕೀರ್ಯಮಾಣಂ ಶರೈಸ್ತೀಕ್ಷ್ಣೈರ್ದೃಷ್ಟ್ವಾ ಮೇ ವ್ಯಥಿತಂ ಮನಃ||

ಮುದಿಸಿಂಹದಂತಿದ್ದ, ಉನ್ನತ ಕಾಯ ನರಶ್ರೇಷ್ಠ ಪಿತಾಮಹ ಭೀಷ್ಮನು ಅರ್ಜುನನ ವಜ್ರಸದೃಶ ಬಾಣಗಳಿಂದ ಪೀಡಿತನಾಗಿ ಕಂಪಿಸುತ್ತಿರುವಾದ ಶಿಖಂಡಿಯು ಅವನನ್ನು ಎವೆಯಿಕ್ಕದೇ ನೋಡುತ್ತಿದ್ದನು. ಆಗ ಅರ್ಜುನನ ಬಾಣಗಳಿಂದ ಶರೀರಾದ್ಯಂತ ಮುಚ್ಚಲ್ಪಟ್ಟ ನನ್ನ ಆ ನರಸಿಂಹ ಪಿತಾಮಹನನ್ನು ನೋಡಿ ನನ್ನ ಮನಸ್ಸು ಬಹಳವಾಗಿ ವ್ಯಥೆಗೊಂಡಿತ್ತು.

12027007a ಪ್ರಾಙ್ಮುಖಂ ಸೀದಮಾನಂ ಚ ರಥಾದಪಚ್ಯುತಂ ಶರೈಃ|

12027007c ಘೂರ್ಣಮಾನಂ ಯಥಾ ಶೈಲಂ ತದಾ ಮೇ ಕಶ್ಮಲೋಽಭವತ್||

ರಥದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಶರಗಳಿಂದ ಪೀಡಿತನಾಗಿ ಅವನು ಕುಸಿಯುತ್ತಿರಲು ಮತ್ತು ಪರ್ವತದಂತೆ ಕಂಪಿಸುತ್ತಿರಲು ನನಗೆ ಮೂರ್ಛೆಯೇ ಬಂದಂತಾಗಿತ್ತು.

12027008a ಯಃ ಸ ಬಾಣಧನುಷ್ಪಾಣಿರ್ಯೋಧಯಾಮಾಸ ಭಾರ್ಗವಮ್|

12027008c ಬಹೂನ್ಯಹಾನಿ ಕೌರವ್ಯಃ ಕುರುಕ್ಷೇತ್ರೇ ಮಹಾಮೃಧೇ||

12027009a ಸಮೇತಂ ಪಾರ್ಥಿವಂ ಕ್ಷತ್ರಂ ವಾರಾಣಸ್ಯಾಂ ನದೀಸುತಃ|

12027009c ಕನ್ಯಾರ್ಥಮಾಹ್ವಯದ್ವೀರೋ ರಥೇನೈಕೇನ ಸಂಯುಗೇ||

12027010a ಯೇನ ಚೋಗ್ರಾಯುಧೋ ರಾಜಾ ಚಕ್ರವರ್ತೀ ದುರಾಸದಃ|

12027010c ದಗ್ಧಃ ಶಸ್ತ್ರಪ್ರತಾಪೇನ ಸ ಮಯಾ ಯುಧಿ ಘಾತಿತಃ||

ಯಾವ ಕೌರವ್ಯನು ಬಾಣ-ಧನುಷ್ಪಾಣಿಯಾಗಿ ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾರ್ಗವ ಪರುಶುರಾಮನೊಡನೆ ಅನೇಕ ದಿನಗಳು ಹೋರಾಡಿದನೋ ಆ ಮಹಾವೀರ ಉಗ್ರಾಯುಧ ರಾಜಾ ಚಕ್ರವರ್ತಿ ದುರಾಸದ ನದೀಸುತನು ವಾರಾಣಸಿಯಲ್ಲಿ ಕನ್ಯಾರ್ಥಿಗಳಾಗಿ ಕ್ಷತ್ರಿಯ ರಾಜರೆಲ್ಲಾ ಸೇರಿದ್ದಾಗ ಯುದ್ಧದಲ್ಲಿ ಒಂದೇ ರಥದಿಂದ ಶಸ್ತ್ರಪ್ರತಾಪದಿಂದ ಸುಟ್ಟುಹಾಕಿದ್ದನು. ಅವನನ್ನೇ ನಾನು ಯುದ್ಧದಲ್ಲಿ ಕೊಲ್ಲಿಸಿದೆ!

12027011a ಸ್ವಯಂ ಮೃತ್ಯುಂ ರಕ್ಷಮಾಣಃ ಪಾಂಚಾಲ್ಯಂ ಯಃ ಶಿಖಂಡಿನಮ್|

12027011c ನ ಬಾಣೈಃ ಪಾತಯಾಮಾಸ ಸೋಽರ್ಜುನೇನ ನಿಪಾತಿತಃ||

ತನಗೇ ಮೃತ್ಯುವಾಗಿದ್ದ ಪಾಂಚಾಲ್ಯ ಶಿಖಂಡಿಯನ್ನು ಸ್ವಯಂ ತಾನೇ ರಕ್ಷಿಸಿಕೊಂಡು ಬಂದಿದ್ದ ಅವನನ್ನು ಅರ್ಜುನನು ಬಾಣಗಳಿಂದ ಕೆಳಗುರುಳಿಸಿದನು.

12027012a ಯದೈನಂ ಪತಿತಂ ಭೂಮಾವಪಶ್ಯಂ ರುಧಿರೋಕ್ಷಿತಮ್|

12027012c ತದೈವಾವಿಶದತ್ಯುಗ್ರೋ ಜ್ವರೋ ಮೇ ಮುನಿಸತ್ತಮ||

ಮುನಿಸತ್ತಮ! ರಕ್ತದಿಂದ ತೋಯ್ದುಹೋಗಿ ಭೂಮಿಯ ಮೇಲೆ ಅವನು ಬೀಳುತ್ತಲೇ ಉಗ್ರ ಜ್ವರವು ನನ್ನನ್ನು ಆವರಿಸಿತು.

12027012e ಯೇನ ಸಂವರ್ಧಿತಾ ಬಾಲಾ ಯೇನ ಸ್ಮ ಪರಿರಕ್ಷಿತಾಃ||

12027013a ಸ ಮಯಾ ರಾಜ್ಯಲುಬ್ಧೇನ ಪಾಪೇನ ಗುರುಘಾತಿನಾ|

12027013c ಅಲ್ಪಕಾಲಸ್ಯ ರಾಜ್ಯಸ್ಯ ಕೃತೇ ಮೂಢೇನ ಘಾತಿತಃ||

ಬಾಲ್ಯದಲ್ಲಿ ಯಾರಿಂದ ಬೆಳೆಯಿಸಲ್ಪಟ್ಟೆವೋ ಮತ್ತು ಯಾರಿಂದ ಪರಿರಕ್ಷಿತಗೊಂಡೆವೋ ಅವನನ್ನೇ ರಾಜ್ಯಲೋಭದಿಂದ ನಾನು ಅಲ್ಪಕಾಲವೇ ಭೋಗಿಸಬಲ್ಲ ಈ ರಾಜ್ಯಕ್ಕಾಗಿ ಸಂಹರಿಸಿದೆನು. ಆದುದರಿಂದ ನಾನು ಪಾಪಿ, ಗುರುಘಾತಿ ಮತ್ತು ಮೂಢನಾಗಿದ್ದೇನೆ.

12027014a ಆಚಾರ್ಯಶ್ಚ ಮಹೇಷ್ವಾಸಃ ಸರ್ವಪಾರ್ಥಿವಪೂಜಿತಃ|

12027014c ಅಭಿಗಮ್ಯ ರಣೇ ಮಿಥ್ಯಾ ಪಾಪೇನೋಕ್ತಃ ಸುತಂ ಪ್ರತಿ||

ಮಹೇಷ್ವಾಸ, ಸರ್ವಪಾರ್ಥಿವರಿಂದ ಪೂಜಿಸಲ್ಪಡುತ್ತಿದ್ದ ಆಚಾರ್ಯನಿಗೆ ರಣರಂಗದಲ್ಲಿ ಅವನ ಮಗನ ಸಂಬಂಧದಲ್ಲಿ ಪಾಪಿಯಾದ ನಾನು ಸುಳ್ಳನ್ನೇ ಹೇಳಿದೆ.

12027015a ತನ್ಮೇ ದಹತಿ ಗಾತ್ರಾಣಿ ಯನ್ಮಾಂ ಗುರುರಭಾಷತ|

12027015c ಸತ್ಯವಾಕ್ಯೋ ಹಿ ರಾಜಂಸ್ತ್ವಂ ಯದಿ ಜೀವತಿ ಮೇ ಸುತಃ||

ಆ ಸಮಯದಲ್ಲಿ ಗುರುವು ನನ್ನೊಡನೆ “ರಾಜನ್! ನನ್ನ ಮಗನು ಜೀವಿಸಿರುವನೋ ಇಲ್ಲವೋ ಸತ್ಯವನ್ನೇ ನುಡಿ!” ಎಂದು ಹೇಳಿದ ಮಾತನ್ನು ನೆನಪಿಸಿಕೊಂಡು ನನ್ನ ದೇಹವೇ ಸುಡುತ್ತಿದೆ.

12027015e ಸತ್ಯಂ ಮಾ ಮರ್ಶಯನ್ವಿಪ್ರೋ ಮಯಿ ತತ್ಪರಿಪೃಷ್ಟವಾನ್||

12027016a ಕುಂಜರಂ ಚಾಂತರಂ ಕೃತ್ವಾ ಮಿಥ್ಯೋಪಚರಿತಂ ಮಯಾ|

ಸತ್ಯವನ್ನು ನಿರ್ಣಯಿಸುವ ಸಲುವಾಗಿ ವಿಪ್ರನು ನನ್ನಲ್ಲಿ ಹೀಗೆ ಪ್ರಶ್ನಿಸಿದ್ದನು. ನಾನು ಆನೆಯನ್ನು ನೆಪವಾಗಿ ಮಾಡಿಕೊಂಡು ಸುಳ್ಳಾಗಿ ನಡೆದುಕೊಂಡೆನು.

12027016c ಸುಭೃಶಂ ರಾಜ್ಯಲುಬ್ಧೇನ ಪಾಪೇನ ಗುರುಘಾತಿನಾ||

12027017a ಸತ್ಯಕಂಚುಕಮಾಸ್ಥಾಯ ಮಯೋಕ್ತೋ ಗುರುರಾಹವೇ|

12027017c ಅಶ್ವತ್ಥಾಮಾ ಹತ ಇತಿ ಕುಂಜರೇ ವಿನಿಪಾತಿತೇ||

12027017e ಕಾನ್ನು ಲೋಕಾನ್ಗಮಿಷ್ಯಾಮಿ ಕೃತ್ವಾ ತತ್ಕರ್ಮ ದಾರುಣಮ್||

ರಾಜ್ಯಕ್ಕಾಗಿ ಅತ್ಯಂತ ಲೋಭಿಯಾಗಿದ್ದ ಪಾಪಿ ಗುರುಘಾತಿ ನಾನು ಸತ್ಯವೆಂಬ ನನ್ನ ಅಂಗಿಯನ್ನು ತೆಗೆದುಹಾಕಿ ಯುದ್ಧದಲ್ಲಿ ಆನೆಯು ಕೆಳಗುರುಳಲು ಅಶ್ವತ್ಥಾಮನು ಹತನಾದನೆಂದು ಗುರುವಿಗೆ ಹೇಳಿದೆನು. ಆ ದಾರುಣ ಕರ್ಮವನ್ನೆಸಗಿದ ನಾನು ಯಾವ ಲೋಕಗಳಿಗೆ ಹೋಗುತ್ತೇನೋ!

12027018a ಅಘಾತಯಂ ಚ ಯತ್ಕರ್ಣಂ ಸಮರೇಷ್ವಪಲಾಯಿನಮ್|

12027018c ಜ್ಯೇಷ್ಠಂ ಭ್ರಾತರಮತ್ಯುಗ್ರಂ ಕೋ ಮತ್ತಃ ಪಾಪಕೃತ್ತಮಃ||

ಸಮರದಲ್ಲಿ ಹಿಂದೆಸರಿಯದೇ ಇದ್ದ ಉಗ್ರನಾಗಿದ್ದ ಹಿರಿಯಣ್ಣ ಕರ್ಣನನ್ನು ಕೊಲ್ಲಿಸಿದೆನು. ನನಗಿಂತಲೂ ಹೆಚ್ಚು ಪಾಪಕೃತ್ಯಗಳನ್ನು ಮಾಡಿದವರು ಬೇರೆ ಯಾರಾದರೂ ಇದ್ದಾರೆಯೇ?

12027019a ಅಭಿಮನ್ಯುಂ ಚ ಯದ್ಬಾಲಂ ಜಾತಂ ಸಿಂಹಮಿವಾದ್ರಿಷು|

12027019c ಪ್ರಾವೇಶಯಮಹಂ ಲುಬ್ಧೋ ವಾಹಿನೀಂ ದ್ರೋಣಪಾಲಿತಾಮ್||

ಗಿರಿಯಲ್ಲಿ ಹುಟ್ಟಿದ ಸಿಂಹದಂತಿದ್ದ ಬಾಲಕ ಅಭಿಮನ್ಯುವನ್ನು ನಾನು ರಾಜ್ಯಲುಬ್ಧನಾಗಿ ದ್ರೋಣನಿಂದ ರಕ್ಷಿತಗೊಂಡಿದ್ದ ವಾಹಿನಿಯನ್ನು ಪ್ರವೇಶಿಸಲು ಬಿಟ್ಟೆನು!

12027020a ತದಾಪ್ರಭೃತಿ ಬೀಭತ್ಸುಂ ನ ಶಕ್ನೋಮಿ ನಿರೀಕ್ಷಿತುಮ್|

12027020c ಕೃಷ್ಣಂ ಚ ಪುಂಡರೀಕಾಕ್ಷಂ ಕಿಲ್ಬಿಷೀ ಭ್ರೂಣಹಾ ಯಥಾ||

ಅಂದಿನಿಂದ ನಾನು ಭ್ರೂಣಹತ್ಯೆಯನ್ನು ಮಾಡಿದ ಪಾಪಿಯಂತೆ ಬೀಭತ್ಸುವನ್ನಾಗಲೀ ಪುಂಡರೀಕಾಕ್ಷ ಕೃಷ್ಣನನ್ನಾಗಲೀ ಕಣ್ಣೆತ್ತಿ ನೋಡಲೂ ಅಸಮರ್ಥನಾಗಿದ್ದೇನೆ.

12027021a ದ್ರೌಪದೀಂ ಚಾಪ್ಯದುಃಖಾರ್ಹಾಂ ಪಂಚಪುತ್ರವಿನಾಕೃತಾಮ್|

12027021c ಶೋಚಾಮಿ ಪೃಥಿವೀಂ ಹೀನಾಂ ಪಂಚಭಿಃ ಪರ್ವತೈರಿವ||

ಐದು ಪರ್ವತಗಳನ್ನು ಕಳೆದುಕೊಂಡ ಪೃಥ್ವಿಯಂತೆ ಐದು ಪುತ್ರರನ್ನು ಕಳೆದುಕೊಂಡ ದ್ರೌಪದಿಯ ದುಃಖವನ್ನು ನೋಡಿ ನಾನೂ ಕೂಡ ಶೋಕಿಸುತ್ತಿದ್ದೇನೆ.

12027022a ಸೋಽಹಮಾಗಸ್ಕರಃ ಪಾಪಃ ಪೃಥಿವೀನಾಶಕಾರಕಃ|

12027022c ಆಸೀನ ಏವಮೇವೇದಂ ಶೋಷಯಿಷ್ಯೇ ಕಲೇವರಮ್||

ಆದುದರಿಂದ ನಾನು ಅಪರಾಧಿಯೂ ಪೃಥ್ವಿಯನ್ನು ನಾಶಪಡಿಸಿದ ಪಾಪಿಯೂ ಆಗಿದ್ದೇನೆ. ಅದಕ್ಕಾಗಿ ನಾನು ಇಲ್ಲಿಯೇ ಕುಳಿತುಕೊಂಡು ಈ ಶರೀರವನ್ನು ಶೋಷಿಸಿಬಿಡುತ್ತೇನೆ.

12027023a ಪ್ರಾಯೋಪವಿಷ್ಟಂ ಜಾನೀಧ್ವಮದ್ಯ ಮಾಂ ಗುರುಘಾತಿನಮ್|

12027023c ಜಾತಿಷ್ವನ್ಯಾಸ್ವಪಿ ಯಥಾ ನ ಭವೇಯಂ ಕುಲಾಂತಕೃತ್||

ಗುರುಘಾತಿಯಾದ ನಾನು ಇಂದು ಪ್ರಾಯೋಪವೇಶವನ್ನು ಮಾಡಿದ್ದೇನೆಂದು ತಿಳಿಯಿರಿ. ಇನ್ನೊಂದು ಜನ್ಮದಲ್ಲಿಯಾದರೂ ನಾನು ಕುಲಾಂತಕನಾಗದೇ ಇರಲಿ.

12027024a ನ ಭೋಕ್ಷ್ಯೇ ನ ಚ ಪಾನೀಯಮುಪಯೋಕ್ಷ್ಯೇ ಕಥಂ ಚನ|

12027024c ಶೋಷಯಿಷ್ಯೇ ಪ್ರಿಯಾನ್ಪ್ರಾಣಾನಿಹಸ್ಥೋಽಹಂ ತಪೋಧನ||

ತಪೋಧನ! ನಾನೂ ಇನ್ನು ಯಾವುದೇ ಕಾರಣಕ್ಕೂ ತಿನ್ನುವುದಿಲ್ಲ ಮತ್ತು ಕುಡಿಯುವುದಿಲ್ಲ. ಇಲ್ಲಿಯೇ ಕುಳಿತು ಪ್ರಿಯ ಪ್ರಾಣಗಳನ್ನು ಬಿಡುತ್ತೇನೆ.

12027025a ಯಥೇಷ್ಟಂ ಗಮ್ಯತಾಂ ಕಾಮಮನುಜಾನೇ ಪ್ರಸಾದ್ಯ ವಃ|

12027025c ಸರ್ವೇ ಮಾಮನುಜಾನೀತ ತ್ಯಕ್ಷ್ಯಾಮೀದಂ ಕಲೇವರಮ್||

ನಿಮಗಿಷ್ಟಬಂದಲ್ಲಿಗೆ ಹೋಗಲು ಅನುಮತಿಯನ್ನು ಕೊಡುತ್ತಿದ್ದೇನೆ. ನೀವೆಲ್ಲರೂ ಪ್ರಸನ್ನರಾಗಿ ಈ ಶರೀರವನ್ನು ತ್ಯಜಿಸಲು ನನಗೆ ಅನುಮತಿಯನ್ನು ನೀಡಿ!””

12027026 ವೈಶಂಪಾಯನ ಉವಾಚ

12027026a ತಮೇವಂವಾದಿನಂ ಪಾರ್ಥಂ ಬಂಧುಶೋಕೇನ ವಿಹ್ವಲಮ್|

12027026c ಮೈವಮಿತ್ಯಬ್ರವೀದ್ವ್ಯಾಸೋ ನಿಗೃಹ್ಯ ಮುನಿಸತ್ತಮಃ||

ವೈಶಂಪಾಯನನು ಹೇಳಿದನು: “ಬಂಧುಶೋಕದಿಂದ ವಿಹ್ವಲನಾಗಿ ಹೀಗೆ ಮಾತನಾಡುತ್ತಿದ್ದ ಪಾರ್ಥನಿಗೆ ಹೀಗೆಂದೂ ಮಾಡಬಾರದೆಂದು ಹೇಳುತ್ತಾ ಮುನಿಸತ್ತಮನು ಅವನನ್ನು ತಡೆದನು.

12027027a ಅತಿವೇಲಂ ಮಹಾರಾಜ ನ ಶೋಕಂ ಕರ್ತುಮರ್ಹಸಿ|

12027027c ಪುನರುಕ್ತಂ ಪ್ರವಕ್ಷ್ಯಾಮಿ ದಿಷ್ಟಮೇತದಿತಿ ಪ್ರಭೋ||

“ಮಹಾರಾಜ! ಉಕ್ಕಿಬರುತ್ತಿರುವ ಅಲೆಗಳಂತೆ ಈ ರೀತಿ ನೀನು ಶೋಕಿಸಕೂಡದು. ಪ್ರಭೋ! ಆದುದೆಲ್ಲವೂ ಒಳ್ಳೆಯದಾಯಿತೆಂದೇ ನಾನು ನಿನಗೆ ಪುನಃ ಹೇಳುತ್ತೇನೆ.

12027028a ಸಂಯೋಗಾ ವಿಪ್ರಯೋಗಾಶ್ಚ ಜಾತಾನಾಂ ಪ್ರಾಣಿನಾಂ ಧ್ರುವಮ್|

12027028c ಬುದ್ಬುದಾ ಇವ ತೋಯೇಷು ಭವಂತಿ ನ ಭವಂತಿ ಚ||

ಹುಟ್ಟಿದ ಪ್ರಾಣಿಗಳಿಗೆ ಸೇರುವಿಕೆಯು ಅಗಲಿಕೆಯಿಂದಲೇ ಅಂತ್ಯವಾಗುತ್ತದೆ ಎನ್ನುವುದು ನಿಶ್ಚಯವಾದುದು. ನೀರಿನ ಮೇಲಿನ ಗುಳ್ಳೆಗಳಂತೆ ಪ್ರಾಣಿಗಳು ಹುಟ್ಟುತ್ತಿರುತ್ತವೆ ಮತ್ತು ಸಾಯುತ್ತಿರುತ್ತವೆ.

12027029a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ|

12027029c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್||

ಕೂಡಿಟ್ಟ ಐಶ್ವರ್ಯವು ವಿನಾಶದೊಂದಿಗೆ ಕೊನೆಗೊಳ್ಳುತ್ತವೆ. ಸೇರುವಿಕೆಯು ಅಗಲುವಿಕೆಯಿಂದ ಮತ್ತು ಜನನವು ಮರಣದಿಂದ ಪರ್ಯಾವಸಾನಹೊಂದುತ್ತದೆ.

12027030a ಸುಖಂ ದುಃಖಾಂತಮಾಲಸ್ಯಂ ದಾಕ್ಷ್ಯಂ ದುಃಖಂ ಸುಖೋದಯಮ್|

12027030c ಭೂತಿಃ ಶ್ರೀರ್ಹ್ರೀರ್ಧೃತಿಃ ಸಿದ್ಧಿರ್ನಾದಕ್ಷೇ ನಿವಸಂತ್ಯುತ||

ಆಲಸಿಗೆ ಸುಖವೂ ದುಃಖವಾಗಿ ಪರಿಣಮಿಸುತ್ತದೆ ಮತ್ತು ದಕ್ಷನಾದವನಿಗೆ ದುಃಖವೂ ಸುಖೋದಯಕ್ಕೆ ಕಾರಣವಾಗುತ್ತದೆ. ಐಶ್ವರ್ಯ, ಲಕ್ಷ್ಮಿ, ಲಜ್ಜೆ, ಧೈರ್ಯ ಮತ್ತು ಕೀರ್ತಿಗಳು ದಕ್ಷನಾದವನಲ್ಲಿ ವಾಸಿಸುತ್ತವೆಯೇ ಹೊರತು ಆಲಸಿಯಲ್ಲಲ್ಲ.

12027031a ನಾಲಂ ಸುಖಾಯ ಸುಹೃದೋ ನಾಲಂ ದುಃಖಾಯ ದುರ್ಹೃದಃ|

12027031c ನ ಚ ಪ್ರಜ್ಞಾಲಮರ್ಥೇಭ್ಯೋ ನ ಸುಖೇಭ್ಯೋಽಪ್ಯಲಂ ಧನಮ್||

ಸ್ನೇಹಿತರು ಸುಖವನ್ನು ನೀಡಲು ಸಮರ್ಥರಲ್ಲ. ಶತ್ರುಗಳು ದುಃಖವನ್ನು ನೀಡಲೂ ಸಮರ್ಥರಲ್ಲ. ಪ್ರಜೆಗಳು ಸಂಪತ್ತನ್ನು ನೀಡಲು ಸಮರ್ಥರಲ್ಲ ಮತ್ತು ಧನವು ಸುಖವನ್ನು ನೀಡಲು ಸಮರ್ಥವಲ್ಲ.

12027032a ಯಥಾ ಸೃಷ್ಟೋಽಸಿ ಕೌಂತೇಯ ಧಾತ್ರಾ ಕರ್ಮಸು ತತ್ಕುರು|

12027032c ಅತ ಏವ ಹಿ ಸಿದ್ಧಿಸ್ತೇ ನೇಶಸ್ತ್ವಮಾತ್ಮನಾ ನೃಪ||

ಕೌಂತೇಯ! ನೃಪ! ಬ್ರಹ್ಮನು ಯಾವ ಕರ್ಮಕ್ಕೆಂದು ನಿನ್ನನ್ನು ಸೃಷ್ಟಿಸಿರುವನೋ ಅದನ್ನೇ ಮಾಡು. ಅದರಿಂದಲೇ ನಿನಗೆ ಸಿದ್ಧಿಯಾಗುತ್ತದೆ. ಏಕೆಂದರೆ ನೀನು ಮಾಡಬೇಕಾದ ಕರ್ಮಗಳ ಮೇಲೆ ನಿನಗೆ ಅಧಿಕಾರವಿಲ್ಲ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಸಪ್ತವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.

[1] ಈ ಅಧ್ಯಾಯದ ಮೊದಲು ಭಾರತದರ್ಶನದಲ್ಲಿ ಯುಧಿಷ್ಠಿರನು ಅರ್ಜುನನ ಮಾತುಗಳಿಗೆ ಉತ್ತರವಾಗಿ ಸರ್ವತ್ಯಾಗದ ಮಹತ್ವವನ್ನು ಪುನಃ ಪ್ರತಿಪಾದಿಸಿದ ಸುಮಾರು ೩೦ ಶ್ಲೋಕಗಳ ಇನ್ನೊಂದು ಅಧ್ಯಾಯವಿದೆ. ಪುಣೆಯ ಈ ಸಂಪುಟದಲ್ಲಿರದ ಈ ಅಧ್ಯಾಯದಲ್ಲಿರುವ ಧರ್ಮರಾಜನ ಅಭಿಪ್ರಾಯಗಳ ಸಾರಾಂಶವೆಂದರೆ: ಹಣವನ್ನು ಗಳಿಸಿದರೆ ಯಜ್ಞಮಾಡಬೇಕು ಮತ್ತು ದಾನಮಾಡಬೇಕು. ಕೆಸರನ್ನು ತುಳಿದು ತೊಳೆದುಕೊಳ್ಳುವುದಕ್ಕಿಂತ ತುಳಿಯದಿರುವುದೇ ಮೇಲಲ್ಲವೇ? ಹಾಗೆಯೇ ಧನಸಂಗ್ರಹಕ್ಕೆ ಕೈಹಾಕದಿರುವುದೇ ಮೇಲು. ಯಜ್ಞಮಾಡುವುದು ಕಷ್ಟವೇ. ಪಾತ್ರಾಪಾರವಿವೇಕವು ಕಷ್ಟಸಾಧ್ಯವಾದುದರಿಂದ ದಾನಮಾಡುವುದೂ ದುಷ್ಕರವೇ. ಈ ಯಜ್ಞ-ದಾನಾದಿಗಳಿಗಿಂತಲೂ ಶ್ರೇಷ್ಠ ಜ್ಞಾನಮಾರ್ಗವನ್ನು ಅವಲಂಬಿಸಲು ಸಾಧ್ಯವಿರುವಾಗ ಈ ಧನ-ಸಂಗ್ರಹ ಮತ್ತು ಯಜ್ಞ-ದಾನಗಳ ಗೊಂದಲವೇಕೆ?

[2] ಕರ್ಣ

Comments are closed.