ಶಾಂತಿ ಪರ್ವ: ರಾಜಧರ್ಮ ಪರ್ವ
೨೫
12025001 ವೈಶಂಪಾಯನ ಉವಾಚ
12025001a ಪುನರೇವ ಮಹರ್ಷಿಸ್ತಂ ಕೃಷ್ಣದ್ವೈಪಾಯನೋಽಬ್ರವೀತ್|
12025001c ಅಜಾತಶತ್ರುಂ ಕೌಂತೇಯಮಿದಂ ವಚನಮರ್ಥವತ್||
ವೈಶಂಪಾಯನನು ಹೇಳಿದನು: “ಅಜಾತಶತ್ರು ಕೌಂತೇಯನಿಗೆ ಮಹರ್ಷಿ ಕೃಷ್ಣದ್ವೈಪಾಯನನು ಪುನಃ ಈ ಅರ್ಥವತ್ತಾದ ಮಾತುಗಳನ್ನಾಡಿದನು:
12025002a ಅರಣ್ಯೇ ವಸತಾಂ ತಾತ ಭ್ರಾತೃಣಾಂ ತೇ ತಪಸ್ವಿನಾಮ್|
12025002c ಮನೋರಥಾ ಮಹಾರಾಜ ಯೇ ತತ್ರಾಸನ್ಯುಧಿಷ್ಠಿರ||
12025003a ತಾನಿಮೇ ಭರತಶ್ರೇಷ್ಠ ಪ್ರಾಪ್ನುವಂತು ಮಹಾರಥಾಃ|
12025003c ಪ್ರಶಾಧಿ ಪೃಥಿವೀಂ ಪಾರ್ಥ ಯಯಾತಿರಿವ ನಾಹುಷಃ||
“ಯುಧಿಷ್ಠಿರ! ಮಗೂ! ಭರತಶ್ರೇಷ್ಠ! ಅರಣ್ಯದಲ್ಲಿ ವಾಸಿಸುತ್ತಿರುವಾಗ ತಪಸ್ವಿಗಳಾಗಿದ್ದ ನಿನ್ನ ಮಹಾರಥ ಸಹೋದರರು ಇಟ್ಟುಕೊಂಡಿದ್ದ ಮನೋರಥಗಳನ್ನು ಈಗ ಪೂರೈಸಿಕೊಳ್ಳಲಿ! ಪಾರ್ಥ! ನಹುಷನ ಮಗ ಯಯಾತಿಯಂತೆ ಈ ಭೂಮಿಯ ಮೇಲೆ ಶಾಸನ ಮಾಡು!
12025004a ಅರಣ್ಯೇ ದುಃಖವಸತಿರನುಭೂತಾ ತಪಸ್ವಿಭಿಃ|
12025004c ದುಃಖಸ್ಯಾಂತೇ ನರವ್ಯಾಘ್ರಾಃ ಸುಖಂ ತ್ವನುಭವಂತ್ವಿಮೇ||
ಆ ತಪಸ್ವಿಗಳು ಅರಣ್ಯದಲ್ಲಿ ವಾಸಿಸುತ್ತಿರುವಾಗ ದುಃಖಗಳನ್ನು ಅನುಭವಿಸಿದರು. ಆ ದುಃಖದ ಅಂತ್ಯದಲ್ಲಿ ನರವ್ಯಾಘ್ರರು ಈಗಲಾದರೂ ಸುಖವನ್ನು ಅನುಭವಿಸಲಿ.
12025005a ಧರ್ಮಮರ್ಥಂ ಚ ಕಾಮಂ ಚ ಭ್ರಾತೃಭಿಃ ಸಹ ಭಾರತ|
12025005c ಅನುಭೂಯ ತತಃ ಪಶ್ಚಾತ್ಪ್ರಸ್ಥಾತಾಸಿ ವಿಶಾಂ ಪತೇ||
ಭಾರತ! ವಿಶಾಂಪತೇ! ಧರ್ಮ, ಅರ್ಥ, ಮತ್ತು ಕಾಮಗಳನ್ನು ಸಹೋದರರೊಂದಿಗೆ ಅನುಭವಿಸಿ, ಅದರ ನಂತರ ನೀನು ವಾನಪ್ರಸ್ಥವನ್ನು ಕೈಗೊಳ್ಳಬಹುದು.
12025006a ಅತಿಥೀನಾಂ ಚ ಪಿತೃಣಾಂ ದೇವತಾನಾಂ ಚ ಭಾರತ|
12025006c ಆನೃಣ್ಯಂ ಗಚ್ಚ ಕೌಂತೇಯ ತತಃ ಸ್ವರ್ಗಂ ಗಮಿಷ್ಯಸಿ||
ಭಾರತ! ಕೌಂತೇಯ! ಅತಿಥಿಗಳ, ಪಿತೃಗಳ ಮತ್ತು ದೇವತೆಗಳ ಋಣಮುಕ್ತನಾದ ನಂತರ ಹೋಗು! ಆಗ ಸ್ವರ್ಗಕ್ಕೇ ಹೋಗುತ್ತೀಯೆ!
12025007a ಸರ್ವಮೇಧಾಶ್ವಮೇಧಾಭ್ಯಾಂ ಯಜಸ್ವ ಕುರುನಂದನ|
12025007c ತತಃ ಪಶ್ಚಾನ್ಮಹಾರಾಜ ಗಮಿಷ್ಯಸಿ ಪರಾಂ ಗತಿಮ್||
ಕುರುನಂದನ! ಮಹಾರಾಜ! ಸರ್ವಮೇಧ-ಅಶ್ವಮೇಧ ಯಜ್ಞಗಳನ್ನು ಯಾಜಿಸು. ಅದರನಂತರ ಪರಮ ಗತಿಯನ್ನು ಪಡೆಯುವಿಯಂತೆ.
12025008a ಭ್ರಾತೃಂಶ್ಚ ಸರ್ವಾನ್ಕ್ರತುಭಿಃ ಸಂಯೋಜ್ಯ ಬಹುದಕ್ಷಿಣೈಃ|
12025008c ಸಂಪ್ರಾಪ್ತಃ ಕೀರ್ತಿಮತುಲಾಂ ಪಾಂಡವೇಯ ಭವಿಷ್ಯಸಿ||
ಪಾಂಡವೇಯ! ಬಹುದಕ್ಷಿಣೆಗಳಿಂದ ಯುಕ್ತವಾದ ಆ ಎಲ್ಲ ಕ್ರತುಗಳಲ್ಲಿ ನಿನ್ನ ಸಹೋದರರನ್ನೂ ಜೋಡಿಸಿಕೋ! ಇದರಿಂದ ನೀನು ಅಪಾರ ಕೀರ್ತಿಯನ್ನು ಪಡೆಯುತ್ತೀಯೆ.
12025009a ವಿದ್ಮ ತೇ ಪುರುಷವ್ಯಾಘ್ರ ವಚನಂ ಕುರುನಂದನ|
12025009c ಶೃಣು ಮಚ್ಚ ಯಥಾ ಕುರ್ವನ್ಧರ್ಮಾನ್ನ ಚ್ಯವತೇ ನೃಪಃ||
ಪುರುಷವ್ಯಾಘ್ರ! ಕುರುನಂದನ! ನಿನ್ನ ಮಾತುಗಳು ನಮಗೆ ಚೆನ್ನಾಗಿ ಅರ್ಥವಾಗುತ್ತಿವೆ. ಏನು ಮಾಡಿದರೆ ನೃಪನು ಧರ್ಮಚ್ಯುತನಾಗುವುದಿಲ್ಲ ಎನ್ನುವುದನ್ನು ಕೇಳು.
12025010a ಆದದಾನಸ್ಯ ಚ ಧನಂ ನಿಗ್ರಹಂ ಚ ಯುಧಿಷ್ಠಿರ|
12025010c ಸಮಾನಂ ಧರ್ಮಕುಶಲಾಃ ಸ್ಥಾಪಯಂತಿ ನರೇಶ್ವರ||
ಯುಧಿಷ್ಠಿರ! ನರೇಶ್ವರ! ಧನ ಸಂಗ್ರಹಣೆ ಮತ್ತು ದುಷ್ಟ ನಿಗ್ರಹ ಇವೆರಡೂ ಸಮಾನ ಕ್ಷತ್ರಿಯ ಧರ್ಮಗಳೆಂದು ಧರ್ಮಕುಶಲರು ಸಿದ್ಧಪಡಿಸಿದ್ದಾರೆ.
12025011a ದೇಶಕಾಲಪ್ರತೀಕ್ಷೇ ಯೋ ದಸ್ಯೋರ್ದರ್ಶಯತೇ ನೃಪಃ|
12025011c ಶಾಸ್ತ್ರಜಾಂ ಬುದ್ಧಿಮಾಸ್ಥಾಯ ನೈನಸಾ ಸ ಹಿ ಯುಜ್ಯತೇ||
ದೇಶಕಾಲಗಳನ್ನು ನೋಡಿಕೊಂಡು ಶಾಸ್ತ್ರಗಳಲ್ಲಿ ತೋರಿಸಿರುವ ಬುದ್ಧಿಯನ್ನು ಬಳಸಿ ದಸ್ಯುಗಳನ್ನು ಕಾಣುವ ನೃಪನಿಗೆ ಪಾಪವು ತಗಲುವುದಿಲ್ಲ.
12025012a ಆದಾಯ ಬಲಿಷಡ್ಭಾಗಂ ಯೋ ರಾಷ್ಟ್ರಂ ನಾಭಿರಕ್ಷತಿ|
12025012c ಪ್ರತಿಗೃಹ್ಣಾತಿ ತತ್ಪಾಪಂ ಚತುರ್ಥಾಂಶೇನ ಪಾರ್ಥಿವಃ||
ಪ್ರಜೆಗಳ ಆರನೆಯ ಒಂದು ಭಾಗವನ್ನು ಪಡೆದೂ ಯಾವ ರಾಜನು ರಾಷ್ಟ್ರವನ್ನು ರಕ್ಷಿಸುವುದಿಲ್ಲವೋ ಅವನು ಪ್ರಜೆಗಳು ಮಾಡುವ ಪಾಪಗಳ ನಾಲ್ಕನೆಯ ಒಂದು ಭಾಗವನ್ನೂ ಅನುಭವಿಸುತ್ತಾನೆ.
12025013a ನಿಬೋಧ ಚ ಯಥಾತಿಷ್ಠನ್ಧರ್ಮಾನ್ನ ಚ್ಯವತೇ ನೃಪಃ|
12025013c ನಿಗ್ರಹಾದ್ಧರ್ಮಶಾಸ್ತ್ರಾಣಾಮನುರುಧ್ಯನ್ನಪೇತಭೀಃ||
ಹೇಗಿದ್ದರೆ ರಾಜನು ಧರ್ಮಗಳಿಂದ ಚ್ಯುತನಾಗುವುದಿಲ್ಲ, ಧರ್ಮಶಾಸ್ತ್ರಗಳಂತೆ ನಡೆದುಕೊಂಡರೆ ಅಥವಾ ಅವುಗಳಿಗೆ ವಿರೋಧವಾಗಿ ನಡೆದುಕೊಂಡರೆ ಯಾವ ಅಧೋಗತಿಗಿಳಿಯುತ್ತಾನೆ ಎನ್ನುವುದನ್ನು ಕೇಳು.
12025013e ಕಾಮಕ್ರೋಧಾವನಾದೃತ್ಯ ಪಿತೇವ ಸಮದರ್ಶನಃ||
12025014a ದೈವೇನೋಪಹತೇ ರಾಜಾ ಕರ್ಮಕಾಲೇ ಮಹಾದ್ಯುತೇ|
12025014c ಪ್ರಮಾದಯತಿ ತತ್ಕರ್ಮ ನ ತತ್ರಾಹುರತಿಕ್ರಮಮ್||
ಕಾಮ-ಕ್ರೋಧಗಳನ್ನು ಅನಾದರಿಸಿ ತಂದೆಯಂತೆ ಎಲ್ಲರನ್ನೂ ಸಮನಾಗಿ ಕಾಣುವವನಿಗೆ ಪಾಪವಿಲ್ಲ. ಮಹಾದ್ಯುತೇ! ಪ್ರಜೆಗಳ ಕರ್ಮವನ್ನು ಮಾಡುತ್ತಿರುವಾಗಲೇ ರಾಜನು ದೈವವಶನಾದರೆ ಅದನ್ನು ಪ್ರಮಾದವೆಂದಾಗಲೀ ಧರ್ಮದ ಅತಿಕ್ರಮವೆಂದಾಗಲೀ ಹೇಳಲಾಗುವುದಿಲ್ಲ.
12025015a ತರಸಾ ಬುದ್ಧಿಪೂರ್ವಂ ವಾ ನಿಗ್ರಾಹ್ಯಾ ಏವ ಶತ್ರವಃ|
12025015c ಪಾಪೈಃ ಸಹ ನ ಸಂದಧ್ಯಾದ್ರಾಷ್ಟ್ರಂ ಪಣ್ಯಂ ನ ಕಾರಯೇತ್||
ಮೊದಲೇ ಯೋಚಿಸಿಯೋ ಅಥವಾ ತಕ್ಷಣವೋ ಶತ್ರುಗಳನ್ನು ನಿಗ್ರಹಿಸಲೇಬೇಕು. ಪಾಪಿಗಳೊಂದಿಗೆ ಸಂಧಿಮಾಡಿಕೊಳ್ಳಬಾರದು. ರಾಷ್ಟ್ರವನ್ನು ಮಾರುಕಟ್ಟೆಯ ವಸ್ತುವನ್ನಾಗಿ ಮಾಡಬಾರದು.
12025016a ಶೂರಾಶ್ಚಾರ್ಯಾಶ್ಚ ಸತ್ಕಾರ್ಯಾ ವಿದ್ವಾಂಸಶ್ಚ ಯುಧಿಷ್ಠಿರ|
12025016c ಗೋಮತೋ ಧನಿನಶ್ಚೈವ ಪರಿಪಾಲ್ಯಾ ವಿಶೇಷತಃ||
ಯುಧಿಷ್ಠಿರ! ಶೂರರನ್ನೂ, ಆರ್ಯರನ್ನೂ, ವಿದ್ವಾಂಸರನ್ನೂ ಸತ್ಕರಿಸಬೇಕು. ಗೋವುಗಳನ್ನು ಪಡೆದಿರುವವರಿಗೂ ಧನಿಗಳಿಗೂ ವಿಶೇಷವಾದ ರಕ್ಷಣೆಯನ್ನು ನೀಡಬೇಕು.
12025017a ವ್ಯವಹಾರೇಷು ಧರ್ಮ್ಯೇಷು ನಿಯೋಜ್ಯಾಶ್ಚ ಬಹುಶ್ರುತಾಃ|
12025017c ಗುಣಯುಕ್ತೇಽಪಿ ನೈಕಸ್ಮಿನ್ವಿಶ್ವಸ್ಯಾಚ್ಚ ವಿಚಕ್ಷಣಃ||
ಧರ್ಮದ ವ್ಯವಹಾರಗಳಲ್ಲಿ ಸಕಲಶಾಸ್ತ್ರಜ್ಞರನ್ನೂ ನಿಯೋಜಿಸಬೇಕು. ಗುಣಯುಕ್ತನಾದರೂ ಒಬ್ಬನಲ್ಲಿಯೇ ರಾಜನು ವಿಶ್ವಾಸವನ್ನಿಡಬಾರದು.
12025018a ಅರಕ್ಷಿತಾ ದುರ್ವಿನೀತೋ ಮಾನೀ ಸ್ತಬ್ಧೋಽಭ್ಯಸೂಯಕಃ|
12025018c ಏನಸಾ ಯುಜ್ಯತೇ ರಾಜಾ ದುರ್ದಾಂತ ಇತಿ ಚೋಚ್ಯತೇ||
ಪ್ರಜೆಗಳನ್ನು ರಕ್ಷಿಸದ, ಉದ್ಧತನಾದ, ದುರಭಿಮಾನೀ, ಮಾನ್ಯರಲ್ಲಿ ಅವಿನೀತನಾಗಿರುವ, ಅನ್ಯರಲ್ಲಿ ದೋಷವನ್ನೇ ಹುಡುಕುವ ರಾಜನು ಪಾಪಯುಕ್ತನನೆಂದು ಹೇಳುತ್ತಾರೆ.
12025019a ಯೇಽರಕ್ಷ್ಯಮಾಣಾ ಹೀಯಂತೇ ದೈವೇನೋಪಹತೇ ನೃಪೇ|
12025019c ತಸ್ಕರೈಶ್ಚಾಪಿ ಹನ್ಯಂತೇ ಸರ್ವಂ ತದ್ರಾಜಕಿಲ್ಬಿಷಮ್||
ರಾಜನಿಂದ ರಕ್ಷಿಸಲ್ಪಡದ ಪ್ರಜೆಗಳು ದೈವಿಕ ಆಪತ್ತಿನಿಂದಲೂ ಕಳ್ಳ-ಕಾಕರಿಂದಲೂ ವಿನಾಶಹೊಂದುತ್ತಾರೆ. ಅವರ ವಿನಾಶಕ್ಕೆ ಕಾರಣನಾದ ನೃಪನೇ ಮಹಾಪಾಪಕ್ಕೆ ಗುರಿಯಾಗುತ್ತಾನೆ.
12025020a ಸುಮಂತ್ರಿತೇ ಸುನೀತೇ ಚ ವಿಧಿವಚ್ಚೋಪಪಾದಿತೇ|
12025020c ಪೌರುಷೇ ಕರ್ಮಣಿ ಕೃತೇ ನಾಸ್ತ್ಯಧರ್ಮೋ ಯುಧಿಷ್ಠಿರ||
ಯುಧಿಷ್ಠಿರ! ಚೆನ್ನಾಗಿ ಸಮಾಲೋಚಿಸಿ, ನೀತಿಯನ್ನನುಸರಿಸಿ, ಸರ್ವಪ್ರಕಾರದಿಂದಲೂ ಮನುಷ್ಯಪ್ರಯತ್ನವನ್ನು ಮಾಡಿದರೆ ರಾಜನು ಅಧರ್ಮಿಯೆಂದೆನಿಸಿಕೊಳ್ಳುವುದಿಲ್ಲ.
12025021a ವಿಪದ್ಯಂತೇ ಸಮಾರಂಭಾಃ ಸಿಧ್ಯಂತ್ಯಪಿ ಚ ದೈವತಃ|
12025021c ಕೃತೇ ಪುರುಷಕಾರೇ ತು ನೈನಃ ಸ್ಪೃಶತಿ ಪಾರ್ಥಿವಮ್||
ಉತ್ತಮವಾಗಿ ಆರಂಭಿಸಿದ ಕಾರ್ಯಗಳು ದೈವವಶದಿಂದ ಸಿದ್ಧಿಯಾಗದೆಯೂ ಇರಬಹುದು. ಆದರೆ ಪುರುಷಪ್ರಯತ್ನವನ್ನು ಮಾಡಿದ ಪಾರ್ಥಿವನಿಗೆ ಪಾಪವು ತಗಲುವುದಿಲ್ಲ.
12025022a ಅತ್ರ ತೇ ರಾಜಶಾರ್ದೂಲ ವರ್ತಯಿಷ್ಯೇ ಕಥಾಮಿಮಾಮ್|
12025022c ಯದ್ವೃತ್ತಂ ಪೂರ್ವರಾಜರ್ಷೇರ್ಹಯಗ್ರೀವಸ್ಯ ಪಾರ್ಥಿವ||
12025023a ಶತ್ರೂನ್ಹತ್ವಾ ಹತಸ್ಯಾಜೌ ಶೂರಸ್ಯಾಕ್ಲಿಷ್ಟಕರ್ಮಣಃ|
12025023c ಅಸಹಾಯಸ್ಯ ಧೀರಸ್ಯ ನಿರ್ಜಿತಸ್ಯ ಯುಧಿಷ್ಠಿರ||
ರಾಜಶಾರ್ದೂಲ! ಪಾರ್ಥಿವ! ಇದಕ್ಕೆ ಸಂಬಂಧಿಸಿದಂತೆ ಹಿಂದಿನ ರಾಜರ್ಷಿ ಹಯಗ್ರೀವನ ಕಥೆಯನ್ನು ನಿನಗೆ ಹೇಳುತ್ತೇನೆ. ಯುಧಿಷ್ಠಿರ! ಆ ಅಕ್ಲಿಷ್ಟಕರ್ಮಿಯು ಅಸಹಾಯಕನಾಗಿದ್ದೂ ಧೀರನಾಗಿ ಶೂರತನದಿಂದ ಶತ್ರುಗಳನ್ನು ಸಂಹರಿಸಿ ಜಯಿಸಿದುದನ್ನು ಹೇಳುತ್ತೇನೆ.
12025024a ಯತ್ಕರ್ಮ ವೈ ನಿಗ್ರಹೇ ಶಾತ್ರವಾಣಾಂ| ಯೋಗಶ್ಚಾಗ್ರ್ಯಃ ಪಾಲನೇ ಮಾನವಾನಾಮ್|
12025024c ಕೃತ್ವಾ ಕರ್ಮ ಪ್ರಾಪ್ಯ ಕೀರ್ತಿಂ ಸುಯುದ್ಧೇ| ವಾಜಿಗ್ರೀವೋ ಮೋದತೇ ದೇವಲೋಕೇ||
ಮಾನವರ ಯೋಗಪಾಲನೆಯಲ್ಲಿ ಅಗ್ರಗಣ್ಯನಾದ ಅವನು ಶತ್ರುಗಳನ್ನು ನಿಗ್ರಹಿಸುವ ಕರ್ಮವನ್ನೆಸಗಿದನು. ಉತ್ತಮ ಯುದ್ಧದಲ್ಲಿ ಈ ಕರ್ಮವನ್ನೆಸಗಿ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025025a ಸಂತ್ಯಕ್ತಾತ್ಮಾ ಸಮರೇಷ್ವಾತತಾಯೀ| ಶಸ್ತ್ರೈಶ್ಚಿನ್ನೋ ದಸ್ಯುಭಿರರ್ದ್ಯಮಾನಃ|
12025025c ಅಶ್ವಗ್ರೀವಃ ಕರ್ಮಶೀಲೋ ಮಹಾತ್ಮಾ| ಸಂಸಿದ್ಧಾತ್ಮಾ ಮೋದತೇ ದೇವಲೋಕೇ||
ಸಮರದಲ್ಲಿ ದಸ್ಯುಗಳ ಶಸ್ತ್ರಗಳಿಂದ ಛಿನ್ನನಾಗಿ ಈ ಆತತಾಯಿಯು ಅಸುನೀಗಿದ ಈ ಕರ್ಮಶೀಲ ಮಹಾತ್ಮ ಸಿದ್ಧಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025026a ಧನುರ್ಯೂಪೋ ರಶನಾ ಜ್ಯಾ ಶರಃ ಸ್ರುಕ್| ಸ್ರುವಃ ಖಡ್ಗೋ ರುಧಿರಂ ಯತ್ರ ಚಾಜ್ಯಮ್|
12025026c ರಥೋ ವೇದೀ ಕಾಮಗೋ ಯುದ್ಧಮಗ್ನಿಶ್| ಚಾತುರ್ಹೋತ್ರಂ ಚತುರೋ ವಾಜಿಮುಖ್ಯಾಃ||
12025027a ಹುತ್ವಾ ತಸ್ಮಿನ್ಯಜ್ಞವಹ್ನಾವಥಾರೀನ್| ಪಾಪಾನ್ಮುಕ್ತೋ ರಾಜಸಿಂಹಸ್ತರಸ್ವೀ|
12025027c ಪ್ರಾಣಾನ್ಹುತ್ವಾ ಚಾವಭೃಥೇ ರಣೇ ಸ| ವಾಜಿಗ್ರೀವೋ ಮೋದತೇ ದೇವಲೋಕೇ||
ಧನುಸ್ಸೇ ಯೂಪಸ್ತಂಭವಾಗಿದ್ದ, ಮೌರ್ವಿಯೇ ರಜ್ಜುವಾಗಿದ್ದ, ಬಾಣವೇ ಸ್ರುಕ್ಕಾಗಿದ್ದ, ಖಡ್ಗವೇ ಸ್ರುವವಾಗಿದ್ದ, ರಕ್ತವೇ ಆಜ್ಯವಾಗಿದ್ದ, ಬೇಕಾದಲ್ಲಿ ಹೋಗುತ್ತಿದ್ದ ರಥವೇ ವೇದಿಯಾಗಿದ್ದ, ಯುದ್ಧವೇ ಅಗ್ನಿಯಾಗಿದ್ದ, ನಾಲ್ಕು ಕುದುರೆಗಳು ನಾಲ್ಕು ಹೋತೃಗಳಾಗಿದ್ದ ಆ ಯಜ್ಞದಲ್ಲಿ ವೇಗಶಾಲೀ ರಾಜಸಿಂಹನು ಶತ್ರುಗಳನ್ನು ಆಹುತಿಯನ್ನಾಗಿತ್ತು ಪಾಪದಿಂದ ಮುಕ್ತನಾಗಿ ರಣದ ಅವಭೃತದಲ್ಲಿ ತನ್ನ ಪ್ರಾಣವನ್ನೇ ಹೋಮಮಾಡಿದ ಹಯಗ್ರೀಯನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025028a ರಾಷ್ಟ್ರಂ ರಕ್ಷನ್ಬುದ್ಧಿಪೂರ್ವಂ ನಯೇನ| ಸಂತ್ಯಕ್ತಾತ್ಮಾ ಯಜ್ಞಶೀಲೋ ಮಹಾತ್ಮಾ|
12025028c ಸರ್ವಾಽಲ್ಲೋಕಾನ್ವ್ಯಾಪ್ಯ ಕೀರ್ತ್ಯಾ ಮನಸ್ವೀ| ವಾಜಿಗ್ರೀವೋ ಮೋದತೇ ದೇವಲೋಕೇ||
ಯಜ್ಞಶೀಲ ಮಹಾತ್ಮ ಮನನಶೀಲ ಹಯಗ್ರೀವನು ಬುದ್ಧಿಪೂರ್ವಕ ಸುನೀತಿಯಿಂದ ರಾಷ್ಟ್ರವನ್ನು ರಕ್ಷಿಸುತ್ತಾ ಪ್ರಾಣವನ್ನು ತೊರೆದು ತನ್ನ ಕೀರ್ತಿಯು ಸರ್ವ ಲೋಕಗಳಲ್ಲಿ ವ್ಯಾಪಿಸುವಂತೆ ಮಾಡಿ ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025029a ದೈವೀಂ ಸಿದ್ಧಿಂ ಮಾನುಷೀಂ ದಂಡನೀತಿಂ| ಯೋಗನ್ಯಾಯೈಃ ಪಾಲಯಿತ್ವಾ ಮಹೀಂ ಚ|
12025029c ತಸ್ಮಾದ್ರಾಜಾ ಧರ್ಮಶೀಲೋ ಮಹಾತ್ಮಾ| ಹಯಗ್ರೀವೋ ಮೋದತೇ ಸ್ವರ್ಗಲೋಕೇ||
ಧರ್ಮಶೀಲ ಮಹಾತ್ಮ ರಾಜಾ ಹಯಗ್ರೀವನು ದೈವೀ ಸಿದ್ಧಿಯನ್ನೂ ಮಾನುಷ ದಂಡನೀತಿಯನ್ನೂ ಬಳಸಿ ಯೋಗ-ನ್ಯಾಯಗಳಿಂದ ಭೂಮಿಯನ್ನು ಆಳಿ ಸ್ವರ್ಗಲೋಕದಲ್ಲಿ ಮೋದಿಸುತ್ತಿದ್ದಾನೆ.
12025030a ವಿದ್ವಾಂಸ್ತ್ಯಾಗೀ ಶ್ರದ್ದಧಾನಃ ಕೃತಜ್ಞಸ್| ತ್ಯಕ್ತ್ವಾ ಲೋಕಂ ಮಾನುಷಂ ಕರ್ಮ ಕೃತ್ವಾ|
12025030c ಮೇಧಾವಿನಾಂ ವಿದುಷಾಂ ಸಂಮತಾನಾಂ| ತನುತ್ಯಜಾಂ ಲೋಕಮಾಕ್ರಮ್ಯ ರಾಜಾ||
ವಿದ್ವಾಂಸನೂ, ತ್ಯಾಗಿಯೂ, ಶದ್ಧಾಳುವೂ, ಕೃತಜ್ಞನೂ ಆಗಿದ್ದ ರಾಜಾ ಹಯಗ್ರೀವನು ಮಾನುಷ ಕರ್ಮವನ್ನು ಮಾಡಿ ದೇಹವನ್ನು ತ್ಯಜಿಸಿ ಮೇಧಾವಿಗಳಿಗೂ, ಸರ್ವಸನ್ಮಾನ್ಯರಿಗೂ, ಜ್ಞಾನಿಗಳಿಗೂ ದೊರಕುವ ಲೋಕವನ್ನು ಆಕ್ರಮಣಿಸಿದ್ದಾನೆ.
12025031a ಸಮ್ಯಗ್ವೇದಾನ್ಪ್ರಾಪ್ಯ ಶಾಸ್ತ್ರಾಣ್ಯಧೀತ್ಯ| ಸಮ್ಯಗ್ರಾಷ್ಟ್ರಂ ಪಾಲಯಿತ್ವಾ ಮಹಾತ್ಮಾ|
12025031c ಚಾತುರ್ವರ್ಣ್ಯಂ ಸ್ಥಾಪಯಿತ್ವಾ ಸ್ವಧರ್ಮೇ| ವಾಜಿಗ್ರೀವೋ ಮೋದತೇ ದೇವಲೋಕೇ||
ಸರ್ವವೇದಗಳನ್ನೂ ಪಡೆದು ಶಾಸ್ತ್ರಗಳನ್ನು ತಿಳಿದುಕೊಂಡು ಸಂಪೂರ್ಣ ರಾಷ್ಟ್ರವನ್ನು ಪಾಲಿಸುತ್ತ, ಸ್ವಧರ್ಮದಿಂದ ಚಾತುರ್ವರ್ಣಗಳನ್ನು ಸಂಸ್ಥಾಪಿಸಿ ಆ ಮಹಾತ್ಮ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025032a ಜಿತ್ವಾ ಸಂಗ್ರಾಮಾನ್ಪಾಲಯಿತ್ವಾ ಪ್ರಜಾಶ್ಚ| ಸೋಮಂ ಪೀತ್ವಾ ತರ್ಪಯಿತ್ವಾ ದ್ವಿಜಾಗ್ರ್ಯಾನ್|
12025032c ಯುಕ್ತ್ಯಾ ದಂಡಂ ಧಾರಯಿತ್ವಾ ಪ್ರಜಾನಾಂ| ಯುದ್ಧೇ ಕ್ಷೀಣೋ ಮೋದತೇ ದೇವಲೋಕೇ||
ಸಂಗ್ರಾಮಗಳನ್ನು ಗೆದ್ದು, ಪ್ರಜೆಗಳನ್ನು ಪಾಲಿಸಿ, ಸೋಮವನ್ನು ಕುಡಿದು, ದ್ವಿಜಾಗ್ರರಿಗೆ ತರ್ಪಣೆಗಳನ್ನಿತ್ತು, ದಂಡನೀತಿಯನ್ನು ಧರಿಸಿ ಪ್ರಜೆಗಳನ್ನು ಪಾಲಿಸಿ, ಯುದ್ಧದಲ್ಲಿ ಅಸುನೀಗಿದ ಹಯಗ್ರೀವನು ದೇವಲೋಕದಲ್ಲಿ ಮೋದಿಸುತ್ತಿದ್ದಾನೆ.
12025033a ವೃತ್ತಂ ಯಸ್ಯ ಶ್ಲಾಘನೀಯಂ ಮನುಷ್ಯಾಃ| ಸಂತೋ ವಿದ್ವಾಂಸಶ್ಚಾರ್ಹಯಂತ್ಯರ್ಹಣೀಯಾಃ|
12025033c ಸ್ವರ್ಗಂ ಜಿತ್ವಾ ವೀರಲೋಕಾಂಶ್ಚ ಗತ್ವಾ| ಸಿದ್ಧಿಂ ಪ್ರಾಪ್ತಃ ಪುಣ್ಯಕೀರ್ತಿರ್ಮಹಾತ್ಮಾ||
ಸಂತರೂ ವಿದ್ವಾಂಸರೂ ಆದ ಮನುಷ್ಯರು ಯಾರ ನಡತೆಯನ್ನು ಅರ್ಹರೀತಿಯಲ್ಲಿ ಶ್ಲಾಘಿಸುತ್ತಿರುವರೋ ಆ ಮಹಾತ್ಮನು ಸ್ವರ್ಗವನ್ನು ಗೆದ್ದು, ವೀರಲೋಕಗಳನ್ನು ಸೇರಿ, ಸಿದ್ಧಿಯನ್ನು ಪಡೆದು ಪುಣ್ಯಕೀರ್ತಿಯನ್ನೂ ಪಡೆದನು.””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಪಂಚವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ತೈದನೇ ಅಧ್ಯಾಯವು.