ಶಾಂತಿ ಪರ್ವ: ರಾಜಧರ್ಮ ಪರ್ವ
೨೪
12024001 ಯುಧಿಷ್ಠಿರ ಉವಾಚ
12024001a ಭಗವನ್ಕರ್ಮಣಾ ಕೇನ ಸುದ್ಯುಮ್ನೋ ವಸುಧಾಧಿಪಃ|
12024001c ಸಂಸಿದ್ಧಿಂ ಪರಮಾಂ ಪ್ರಾಪ್ತಃ ಶ್ರೋತುಮಿಚ್ಚಾಮಿ ತಂ ನೃಪಮ್||
ಯುಧಿಷ್ಠಿರನು ಹೇಳಿದನು: “ಭಗವನ್! ವಸುಧಾಧಿಪ ನೃಪ ಸುದ್ಯುಮ್ನನು ಯಾವ ಕರ್ಮದಿಂದ ಪರಮ ಸಂಸಿದ್ಧಿಯನ್ನು ಪಡೆದನು ಎನ್ನುವುದನ್ನು ಕೇಳಲು ಬಯಸುತ್ತೇನೆ.”
12024002 ವ್ಯಾಸ ಉವಾಚ
12024002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12024002c ಶಂಖಶ್ಚ ಲಿಖಿತಶ್ಚಾಸ್ತಾಂ ಭ್ರಾತರೌ ಸಂಯತವ್ರತೌ||
ವ್ಯಾಸನು ಹೇಳಿದನು: “ಈ ವಿಷಯದಲ್ಲಿ ಸಂಯತವ್ರತರಾಗಿದ್ದ ಶಂಖ ಮತ್ತು ಲಿಖಿತ ಎನ್ನುವ ಸಹೋದರರ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
12024003a ತಯೋರಾವಸಥಾವಾಸ್ತಾಂ ರಮಣೀಯೌ ಪೃಥಕ್ ಪೃಥಕ್|
12024003c ನಿತ್ಯಪುಷ್ಪಫಲೈರ್ವೃಕ್ಷೈರುಪೇತೌ ಬಾಹುದಾಮನು||
ಅವರಿಗೆ ಬಾಹುದಾನದಿಯ ತೀರದಲ್ಲಿ ನಿತ್ಯಪುಷ್ಪ-ಫಲಗಳ ವೃಕ್ಷಗಳಿಂದ ತುಂಬಿದ್ದ ರಮಣೀಯವಾದ ಪ್ರತ್ಯೇಕ ಆಶ್ರಮಗಳಿದ್ದವು.
12024004a ತತಃ ಕದಾ ಚಿಲ್ಲಿಖಿತಃ ಶಂಖಸ್ಯಾಶ್ರಮಮಾಗಮತ್|
12024004c ಯದೃಚ್ಚಯಾಪಿ ಶಂಖೋಽಥ ನಿಷ್ಕ್ರಾಂತೋಽಭವದಾಶ್ರಮಾತ್||
ಹೀಗಿರಲು ಒಮ್ಮೆ ಲಿಖಿತನು ಶಂಖನ ಆಶ್ರಮಕ್ಕೆ ಬಂದನು. ಅಕಸ್ಮಾತ್ತಾಗಿ ಅದೇ ಸಮದಲ್ಲಿ ಶಂಖನು ಆಶ್ರಮದ ಹೊರಗೆ ಹೋಗಿದ್ದನು.
12024005a ಸೋಽಭಿಗಮ್ಯಾಶ್ರಮಂ ಭ್ರಾತುಃ ಶಂಖಸ್ಯ ಲಿಖಿತಸ್ತದಾ|
12024005c ಫಲಾನಿ ಶಾತಯಾಮಾಸ ಸಮ್ಯಕ್ಪರಿಣತಾನ್ಯುತ||
ಅಣ್ಣ ಶಂಖನ ಆಶ್ರಮಕ್ಕೆ ಬಂದು ಲಿಖಿತನು ಅಲ್ಲಿ ಚೆನ್ನಾಗಿ ಹಣ್ಣಾಗಿದ್ದ ಫಲಗಳನ್ನು ವೃಕ್ಷದಿಂದ ಕೆಳಕ್ಕೆ ಬೀಳಿಸಿದನು.
12024006a ತಾನ್ಯುಪಾದಾಯ ವಿಸ್ರಬ್ಧೋ ಭಕ್ಷಯಾಮಾಸ ಸ ದ್ವಿಜಃ|
12024006c ತಸ್ಮಿಂಶ್ಚ ಭಕ್ಷಯತ್ಯೇವ ಶಂಖೋಽಪ್ಯಾಶ್ರಮಮಾಗಮತ್||
ಅವುಗಳನ್ನು ಒಟ್ಟುಹಾಕಿ ಒಂದೆಡೆಯಲ್ಲಿ ಕುಳಿತು ಆ ದ್ವಿಜನು ನಿಶ್ಚಿಂತೆಯಿಂದ ತಿನ್ನುತ್ತಿದ್ದನು. ಅವುಗಳನ್ನು ತಿನ್ನುತ್ತಿರುವಾಗಲೇ ಶಂಖನು ಆಶ್ರಮಕ್ಕೆ ಹಿಂದಿರುಗಿದನು.
12024007a ಭಕ್ಷಯಂತಂ ತು ತಂ ದೃಷ್ಟ್ವಾ ಶಂಖೋ ಭ್ರಾತರಮಬ್ರವೀತ್|
12024007c ಕುತಃ ಫಲಾನ್ಯವಾಪ್ತಾನಿ ಹೇತುನಾ ಕೇನ ಖಾದಸಿ||
ಹಣ್ಣುಗಳನ್ನು ತಿನ್ನುತ್ತಿರುವ ಅವನನ್ನು ನೋಡಿ ಶಂಖನು “ಈ ಹಣ್ಣುಗಳು ಎಲ್ಲಿ ದೊರಕಿದವು? ಏಕೆ ಇವುಗಳನ್ನು ತಿನ್ನುತ್ತಿರುವೆ?” ಎಂದು ತಮ್ಮನನ್ನು ಕೇಳಿದನು.
12024008a ಸೋಽಬ್ರವೀದ್ಭ್ರಾತರಂ ಜ್ಯೇಷ್ಠಮುಪಸ್ಪೃಶ್ಯಾಭಿವಾದ್ಯ ಚ|
12024008c ಇತ ಏವ ಗೃಹೀತಾನಿ ಮಯೇತಿ ಪ್ರಹಸನ್ನಿವ||
ಅವನು ಅಣ್ಣನ ಬಳಿಹೋಗಿ, ಪಾದಗಳನ್ನು ಮುಟ್ಟಿ ನಮಸ್ಕರಿಸಿ, ನಗುತ್ತಾ “ಇವುಗಳನ್ನು ನಾನು ಇಲ್ಲಿಂದಲೇ ತೆಗೆದುಕೊಂಡೆ!” ಎಂದನು.
12024009a ತಮಬ್ರವೀತ್ತದಾ ಶಂಖಸ್ತೀವ್ರಕೋಪಸಮನ್ವಿತಃ|
12024009c ಸ್ತೇಯಂ ತ್ವಯಾ ಕೃತಮಿದಂ ಫಲಾನ್ಯಾದದತಾ ಸ್ವಯಮ್||
12024009e ಗಚ್ಚ ರಾಜಾನಮಾಸಾದ್ಯ ಸ್ವಕರ್ಮ ಪ್ರಥಯಸ್ವ ವೈ||
ಇದನ್ನು ಕೇಳಿ ಶಂಖನು ತೀವ್ರ ಶೋಕಸಮನ್ವಿತನಾಗಿ ತಮ್ಮನಿಗೆ ಹೇಳಿದನು: “ಸ್ವಯಂ ನೀನೇ ಈ ಹಣ್ಣುಗಳನ್ನು ತೆಗೆದುಕೊಂಡಿದುದರಿಂದ ನೀನು ಕಳ್ಳತನ ಮಾಡಿರುವೆ. ಹೋಗು! ರಾಜನಲ್ಲಿಗೆ ಹೋಗಿ ನೀನು ಮಾಡಿದ ಕೆಲಸವನ್ನು ಹೇಳಿಕೋ!
12024010a ಅದತ್ತಾದಾನಮೇವೇದಂ ಕೃತಂ ಪಾರ್ಥಿವಸತ್ತಮ|
12024010c ಸ್ತೇನಂ ಮಾಂ ತ್ವಂ ವಿದಿತ್ವಾ ಚ ಸ್ವಧರ್ಮಮನುಪಾಲಯ||
12024010e ಶೀಘ್ರಂ ಧಾರಯ ಚೌರಸ್ಯ ಮಮ ದಂಡಂ ನರಾಧಿಪ||
“ಪಾರ್ಥಿವಸತ್ತಮ! ದಾನವಾಗಿ ಕೊಟ್ಟಿರದ, ಯಾರನ್ನೂ ಕೇಳದೇ ಮತ್ತು ಯಾರಿಗೂ ಹೇಳದೇ ನಾನು ಫಲವನ್ನು ತಿಂದುಬಿಟ್ಟೆನು. ನನ್ನನ್ನು ನೀನು ಕಳ್ಳನೆಂದು ತಿಳಿದು ಸ್ವಧರ್ಮವನ್ನು ಅನುಸರಿಸು. ನರಾಧಿಪ! ಕಳ್ಳನಿಗೆ ದೊರಕುವ ಶಿಕ್ಷೆಯನ್ನು ನನಗೂ ಶೀಘ್ರವಾಗಿ ನೀಡು!””
12024011a ಇತ್ಯುಕ್ತಸ್ತಸ್ಯ ವಚನಾತ್ಸುದ್ಯುಮ್ನಂ ವಸುಧಾಧಿಪಮ್|
12024011c ಅಭ್ಯಗಚ್ಚನ್ಮಹಾಬಾಹೋ ಲಿಖಿತಃ ಸಂಶಿತವ್ರತಃ||
ಮಹಾಬಾಹೋ! ಅವನ ಮಾತಿನಂತೆ ಸಂಶಿತವ್ರತ ಲಿಖಿತನು ವಸುಧಾಧಿಪ ಸುದ್ಯುಮ್ನನಲ್ಲಿಗೆ ಹೋದನು.
12024012a ಸುದ್ಯುಮ್ನಸ್ತ್ವಂತಪಾಲೇಭ್ಯಃ ಶ್ರುತ್ವಾ ಲಿಖಿತಮಾಗತಮ್|
12024012c ಅಭ್ಯಗಚ್ಚತ್ಸಹಾಮಾತ್ಯಃ ಪದ್ಭ್ಯಾಮೇವ ನರೇಶ್ವರಃ||
ಲಿಖಿತನ ಬರುವಿಕೆಯನ್ನು ದ್ವಾರಪಾಲರಿಂದ ಕೇಳಿದ ನರೇಶ್ವರ ಸುದ್ಯುಮ್ನನು ಅಮಾತ್ಯರೊಂದಿಗೆ ಕಾಲ್ನಡುಗೆಯಲ್ಲಿಯೇ ಬಂದನು.
12024013a ತಮಬ್ರವೀತ್ಸಮಾಗತ್ಯ ಸ ರಾಜಾ ಬ್ರಹ್ಮವಿತ್ತಮಮ್|
12024013c ಕಿಮಾಗಮನಮಾಚಕ್ಷ್ವ ಭಗವನ್ಕೃತಮೇವ ತತ್||
ಆ ಬ್ರಹ್ಮವಿತ್ತಮನನ್ನು ಸ್ವಾಗತಿಸಿ ರಾಜನು “ಭಗವನ್! ನೀನು ಯಾವ ಕಾರಣದಿಂದ ಇಲ್ಲಿಗೆ ಆಗಮಿಸಿರುವೆಯೋ ಆ ಕಾರ್ಯವು ಆದಂತೆಯೇ ತಿಳಿ” ಎಂದನು.
12024014a ಏವಮುಕ್ತಃ ಸ ವಿಪ್ರರ್ಷಿಃ ಸುದ್ಯುಮ್ನಮಿದಮಬ್ರವೀತ್|
12024014c ಪ್ರತಿಶ್ರೌಷಿ ಕರಿಷ್ಯೇತಿ ಶ್ರುತ್ವಾ ತತ್ಕರ್ತುಮರ್ಹಸಿ||
ಹೀಗೆ ಹೇಳಲು ಆ ವಿಪ್ರರ್ಷಿಯು ಸುದ್ಯುಮ್ನನಿಗೆ ಹೇಳಿದನು: “ಮಾಡುತ್ತೇನೆ ಎಂದು ಮಾತುಕೊಟ್ಟಮೇಲೆ, ನಾನು ಹೇಳುವುದನ್ನು ಕೇಳಿ ಅದರಂತೆಯೇ ಮಾಡಬೇಕಾಗುತ್ತದೆ!
12024015a ಅನಿಸೃಷ್ಟಾನಿ ಗುರುಣಾ ಫಲಾನಿ ಪುರುಷರ್ಷಭ|
12024015c ಭಕ್ಷಿತಾನಿ ಮಯಾ ರಾಜಂಸ್ತತ್ರ ಮಾಂ ಶಾಧಿ ಮಾಚಿರಮ್||
ಪುರುಷರ್ಷಭ! ರಾಜನ್! ಅವನು ಕೊಡದೆಯೇ ಮತ್ತು ಅವನನ್ನು ಕೇಳದೆಯೇ ನಾನು ಅಣ್ಣನ ಫಲಗಳನ್ನು ತಿಂದಿದ್ದೇನೆ. ಆ ಅಪರಾಧಕ್ಕೆ ಕೂಡಲೇ ನನ್ನನ್ನು ಶಿಕ್ಷಿಸು!”
12024016 ಸುದ್ಯುಮ್ನ ಉವಾಚ
12024016a ಪ್ರಮಾಣಂ ಚೇನ್ಮತೋ ರಾಜಾ ಭವತೋ ದಂಡಧಾರಣೇ|
12024016c ಅನುಜ್ಞಾಯಾಮಪಿ ತಥಾ ಹೇತುಃ ಸ್ಯಾದ್ಬ್ರಾಹ್ಮಣರ್ಷಭ||
ಸುದ್ಯುಮ್ನನು ಹೇಳಿದನು: “ಬ್ರಾಹ್ಮಣರ್ಷಭ! ನಿನ್ನನ್ನು ಶಿಕ್ಷಿಸಲು ರಾಜನು ಮಾತ್ರ ಅರ್ಹನೆಂದು ಇರುವುದಾದರೆ ನಿನ್ನನ್ನು ಕ್ಷಮಿಸಿ ಕಳುಹಿಸಿಕೊಡಲೂ ಅವನು ಅರ್ಹನಲ್ಲವೇ?
12024017a ಸ ಭವಾನಭ್ಯನುಜ್ಞಾತಃ ಶುಚಿಕರ್ಮಾ ಮಹಾವ್ರತಃ|
12024017c ಬ್ರೂಹಿ ಕಾಮಾನತೋಽನ್ಯಾಂಸ್ತ್ವಂ ಕರಿಷ್ಯಾಮಿ ಹಿ ತೇ ವಚಃ||
ಶುಚಿಕರ್ಮಾ! ಮಹಾವ್ರತ! ನಿನ್ನನ್ನು ನಾನು ಕ್ಷಮಿಸಿದ್ದೇನೆ ಮತ್ತು ಹಿಂದಿರುಗಲು ಅನುಮತಿಯಿತ್ತಿದ್ದೇನೆ. ಮತ್ತೇನಾದರೂ ಅಭಿಲಾಷೆಗಳಿದ್ದರೆ ಅದನ್ನೂ ಹೇಳು. ನಿನ್ನ ಆ ಮಾತನ್ನೂ ನಡೆಸಿಕೊಡುತ್ತೇನೆ.””
12024018 ವ್ಯಾಸ ಉವಾಚ
12024018a ಚಂದ್ಯಮಾನೋಽಪಿ ಬ್ರಹ್ಮರ್ಷಿಃ ಪಾರ್ಥಿವೇನ ಮಹಾತ್ಮನಾ|
12024018c ನಾನ್ಯಂ ವೈ ವರಯಾಮಾಸ ತಸ್ಮಾದ್ದಂಡಾದೃತೇ ವರಮ್||
ವ್ಯಾಸನು ಹೇಳಿದನು: “ಮಹಾತ್ಮ ಪಾರ್ಥಿವನು ಸಮಾಧಾನ ಪಡಿಸುತ್ತಿದ್ದರೂ ಬ್ರಹ್ಮರ್ಷಿಯು “ಶಿಕ್ಷೆಯ ವರವನ್ನಲ್ಲದೇ ಬೇರೆ ಯಾವ ವರವನ್ನೂ ನಿನ್ನಿಂದ ನಾನು ಸ್ವೀಕರಿಸುವುದಿಲ್ಲ” ಎಂದು ಹಠಹಿಡಿದನು.
12024019a ತತಃ ಸ ಪೃಥಿವೀಪಾಲೋ ಲಿಖಿತಸ್ಯ ಮಹಾತ್ಮನಃ|
12024019c ಕರೌ ಪ್ರಚ್ಚೇದಯಾಮಾಸ ಧೃತದಂಡೋ ಜಗಾಮ ಸಃ||
ಆಗ ಆ ಪೃಥಿವೀಪಾಲನು ಮಹಾತ್ಮ ಲಿಖಿತನ ಎರಡೂ ಕೈಗಳನ್ನೂ ಕತ್ತರಿಸುಂತೆ ಮಾಡಿದನು. ಶಿಕ್ಷೆಯನ್ನು ಪಡೆದ ಅವನು ಹೊರಟುಹೋದನು.
12024020a ಸ ಗತ್ವಾ ಭ್ರಾತರಂ ಶಂಖಮಾರ್ತರೂಪೋಽಬ್ರವೀದಿದಮ್|
12024020c ಧೃತದಂಡಸ್ಯ ದುರ್ಭುದ್ಧೇರ್ಭಗವನ್ ಕ್ಷಂತುಮರ್ಹಸಿ||
ಅವನು ಅಣ್ಣ ಶಂಖನ ಬಳಿ ಹೋಗಿ ಆರ್ತರೂಪನಾಗಿ “ಭಗವನ್! ಶಿಕ್ಷೆಯನ್ನು ಪಡೆದ ಈ ದುರ್ಬುದ್ಧಿಯನ್ನು ಕ್ಷಮಿಸಬೇಕು” ಎಂದು ಕೇಳಿಕೊಂಡನು.
12024021 ಶಂಖ ಉವಾಚ
12024021a ನ ಕುಪ್ಯೇ ತವ ಧರ್ಮಜ್ಞ ನ ಚ ದೂಷಯಸೇ ಮಮ|
12024021c ಧರ್ಮಸ್ತು ತೇ ವ್ಯತಿಕ್ರಾಂತಸ್ತತಸ್ತೇ ನಿಷ್ಕೃತಿಃ ಕೃತಾ||
ಶಂಖನು ಹೇಳಿದನು: “ಧರ್ಮಜ್ಞ! ನಿನ್ನಮೇಲೆ ಕೋಪವಿಲ್ಲ. ನಿನ್ನನ್ನು ದೂಷಿಸುವುದೂ ಇಲ್ಲ. ಧರ್ಮವನ್ನು ಅತಿಕ್ರಮಿಸಿದುದರಿಂದ ನಿನಗೆ ಈ ಪ್ರಾಯಶ್ಚಿತ್ತವಾಯಿತು.
12024022a ಸ ಗತ್ವಾ ಬಾಹುದಾಂ ಶೀಘ್ರಂ ತರ್ಪಯಸ್ವ ಯಥಾವಿಧಿ|
12024022c ದೇವಾನ್ಪಿತೃನೃಷೀಂಶ್ಚೈವ ಮಾ ಚಾಧರ್ಮೇ ಮನಃ ಕೃಥಾಃ||
ಶೀಘ್ರದಲ್ಲಿಯೇ ನೀನು ಬಹುದಾನದಿಗೆ ಹೋಗಿ ಯಥಾವಿಧಿಯಾಗಿ ದೇವತೆಗಳಿಗೂ, ಪಿತೃಗಳಿಗೂ, ಋಷಿಗಳಿಗೂ ತರ್ಪಣಗಳನ್ನು ನೀಡು. ನಿನ್ನ ಮನಸ್ಸನ್ನು ಅಧರ್ಮದಲ್ಲಿ ತೊಡಗಿಸಬೇಡ!””
12024023 ವ್ಯಾಸ ಉವಾಚ
12024023a ತಸ್ಯ ತದ್ವಚನಂ ಶ್ರುತ್ವಾ ಶಂಖಸ್ಯ ಲಿಖಿತಸ್ತದಾ|
12024023c ಅವಗಾಹ್ಯಾಪಗಾಂ ಪುಣ್ಯಾಮುದಕಾರ್ಥಂ ಪ್ರಚಕ್ರಮೇ||
ವ್ಯಾಸನು ಹೇಳಿದನು: “ಶಂಖನ ಆ ಮಾತನ್ನು ಕೇಳಿದ ಲಿಖಿತನು ಪುಣ್ಯ ನದಿಯಲ್ಲಿ ಮಿಂದು ತರ್ಪಣಗಳನ್ನು ಕೊಡಲು ಪ್ರಾರಂಭಿಸಿದನು.
12024024a ಪ್ರಾದುರಾಸ್ತಾಂ ತತಸ್ತಸ್ಯ ಕರೌ ಜಲಜಸಂನಿಭೌ|
12024024c ತತಃ ಸ ವಿಸ್ಮಿತೋ ಭ್ರಾತುರ್ದರ್ಶಯಾಮಾಸ ತೌ ಕರೌ||
ಕೂಡಲೇ ಅವನಿಗೆ ಕಮಲದಂತಹ ಕೈಗಳು ಹುಟ್ಟಿಕೊಂಡವು. ವಿಸ್ಮಿತನಾದ ಅವನು ತನ್ನ ಆ ಎರಡೂ ಕೈಗಳನ್ನೂ ಅಣ್ಣನಿಗೆ ತೋರಿಸಿದನು.
12024025a ತತಸ್ತಮಬ್ರವೀಚ್ಚಂಖಸ್ತಪಸೇದಂ ಕೃತಂ ಮಯಾ|
12024025c ಮಾ ಚ ತೇಽತ್ರ ವಿಶಂಕಾ ಭೂದ್ದೈವಮೇವ ವಿಧೀಯತೇ||
ಆಗ ಶಂಖನು “ನನ್ನ ತಪಸ್ಸಿನಿಂದಾಗಿ ನಾನೇ ಇದನ್ನು ಹೀಗೆ ಮಾಡಿದೆನು. ಇದರಲ್ಲಿ ಶಂಕೆತಾಳದಿರು. ದೈವವೇ ಎಲ್ಲವನ್ನೂ ಮಾಡಿಸುತ್ತದೆ!” ಎಂದು ಹೇಳಿದನು.
12024026 ಲಿಖಿತ ಉವಾಚ
12024026a ಕಿಂ ನು ನಾಹಂ ತ್ವಯಾ ಪೂತಃ ಪೂರ್ವಮೇವ ಮಹಾದ್ಯುತೇ|
12024026c ಯಸ್ಯ ತೇ ತಪಸೋ ವೀರ್ಯಮೀದೃಶಂ ದ್ವಿಜಸತ್ತಮ||
ಲಿಖಿತನು ಹೇಳಿದನು: “ಮಹಾದ್ಯುತೇ! ದ್ವಿಜಸತ್ತಮ! ನಿನ್ನ ತಪಸ್ಸಿನ ವೀರ್ಯವು ಈ ತರಹನಾಗಿತ್ತೆಂದರೆ ಮೊದಲೇ ನೀನು ನನ್ನನ್ನು ಪವಿತ್ರನನ್ನಾಗಿ ಮಾಡಬಹುದಿತ್ತಲ್ಲವೇ?”
12024027 ಶಂಖ ಉವಾಚ
12024027a ಏವಮೇತನ್ಮಯಾ ಕಾರ್ಯಂ ನಾಹಂ ದಂಡಧರಸ್ತವ|
12024027c ಸ ಚ ಪೂತೋ ನರಪತಿಸ್ತ್ವಂ ಚಾಪಿ ಪಿತೃಭಿಃ ಸಹ||
ಶಂಖನು ಹೇಳಿದನು: “ಹೀಗೆ ಮಾಡುವುದೇ ನನ್ನ ಕರ್ತವ್ಯವಾಗಿತ್ತು. ನಿನಗೆ ಶಿಕ್ಷೆಯನ್ನು ವಿಧಿಸುವವನು ನಾನಲ್ಲ! ನಿನಗೆ ದಂಡವನ್ನಿತ್ತು ಆ ನರಪತಿಯೂ, ಪಿತೃಗಳೊಂದಿಗೆ ನೀನೂ ಪವಿತ್ರರಾದಿರಿ!””
12024028 ವ್ಯಾಸ ಉವಾಚ
12024028a ಸ ರಾಜಾ ಪಾಂಡವಶ್ರೇಷ್ಠ ಶ್ರೇಷ್ಠೋ ವೈ ತೇನ ಕರ್ಮಣಾ|
12024028c ಪ್ರಾಪ್ತವಾನ್ಪರಮಾಂ ಸಿದ್ಧಿಂ ದಕ್ಷಃ ಪ್ರಾಚೇತಸೋ ಯಥಾ||
ವ್ಯಾಸನು ಹೇಳಿದನು: “ಪಾಂಡವಶ್ರೇಷ್ಠ! ದಂಡಧಾರಣೆಯ ಆ ಶ್ರೇಷ್ಠ ಕರ್ಮದಿಂದಾಗಿ ರಾಜಾ ಸುದ್ಯುಮ್ನನು ದಕ್ಷ ಪ್ರಾಚೇತಸನಂತೆ ಪರಮ ಸಿದ್ಧಿಯನ್ನು ಪಡೆದನು.
12024029a ಏಷ ಧರ್ಮಃ ಕ್ಷತ್ರಿಯಾಣಾಂ ಪ್ರಜಾನಾಂ ಪರಿಪಾಲನಮ್|
12024029c ಉತ್ಪಥೇಽಸ್ಮಿನ್ಮಹಾರಾಜ ಮಾ ಚ ಶೋಕೇ ಮನಃ ಕೃಥಾಃ||
ಮಹಾರಾಜ! ಪ್ರಜೆಗಳ ಪರಿಪಾಲನೆಯೇ ಕ್ಷತ್ರಿಯರ ಧರ್ಮ. ಆದುದರಿಂದ ಇದರ ಕುರಿತು ಶೋಕಿಸಬೇಡ!
12024030a ಭ್ರಾತುರಸ್ಯ ಹಿತಂ ವಾಕ್ಯಂ ಶೃಣು ಧರ್ಮಜ್ಞಸತ್ತಮ|
12024030c ದಂಡ ಏವ ಹಿ ರಾಜೇಂದ್ರ ಕ್ಷತ್ರಧರ್ಮೋ ನ ಮುಂಡನಮ್||
ಧರ್ಮಜ್ಞ! ಸತ್ತಮ! ತಮ್ಮನ ಹಿತವಾಕ್ಯವನ್ನು ಕೇಳು. ರಾಜೇಂದ್ರ! ದಂಡವೇ ಕ್ಷತ್ರಧರ್ಮ. ಮುಂಡನವಲ್ಲ!””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಚತುರ್ವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.