ಶಾಂತಿ ಪರ್ವ: ರಾಜಧರ್ಮ ಪರ್ವ

೧೭

12017001 ಯುಧಿಷ್ಠಿರ ಉವಾಚ

12017001a ಅಸಂತೋಷಃ ಪ್ರಮಾದಶ್ಚ ಮದೋ ರಾಗೋಽಪ್ರಶಾಂತತಾ|

12017001c ಬಲಂ ಮೋಹೋಽಭಿಮಾನಶ್ಚ ಉದ್ವೇಗಶ್ಚಾಪಿ ಸರ್ವಶಃ||

12017002a ಏಭಿಃ ಪಾಪ್ಮಭಿರಾವಿಷ್ಟೋ ರಾಜ್ಯಂ ತ್ವಮಭಿಕಾಂಕ್ಷಸಿ|

12017002c ನಿರಾಮಿಷೋ ವಿನಿರ್ಮುಕ್ತಃ ಪ್ರಶಾಂತಃ ಸುಸುಖೀ ಭವ||

ಯುಧಿಷ್ಠಿರನು ಹೇಳಿದನು: “ಅಸಂತೋಷ, ಪ್ರಮಾದ, ಮದ, ರಾಗ, ಅಪ್ರಶಾಂತತೆ, ಬಲ, ಮೋಹ, ಅಭಿಮಾನ, ಉದ್ವೇಗ ಈ ಎಲ್ಲ ಪಾಪಗುಣಗಳಿಂದ ನೀನು ಆವಿಷ್ಟನಾಗಿರುವೆ. ಆದುದರಿಂದಲೇ ನೀನು ರಾಜ್ಯದ ಕುರಿತು ಆಸೆಪಡುತ್ತಿದ್ದೀಯೆ! ಆಸೆಗಳನ್ನು ತೊರೆದು ಸಂಸಾರಬಂಧನದಿಂದ ವಿಮುಕ್ತನಾಗಿ ಪ್ರಶಾಂತನಾಗಿ ಸುಖದಿಂದ ಬಾಳು!

12017003a ಯ ಇಮಾಮಖಿಲಾಂ ಭೂಮಿಂ ಶಿಷ್ಯಾದೇಕೋ ಮಹೀಪತಿಃ|

12017003c ತಸ್ಯಾಪ್ಯುದರಮೇವೈಕಂ ಕಿಮಿದಂ ತ್ವಂ ಪ್ರಶಂಸಸಿ||

ಇಡೀ ಭೂಮಂಡಲವನ್ನೆ ಆಳುವ ಮಹೀಪತಿಗೂ ಇರುವುದು ಒಂದೇ ಹೊಟ್ಟೆ. ಹೀಗಿದ್ದರೂ ನೀನು ಏಕೆ ಚಕ್ರಾಧಿಪತ್ಯವನ್ನು ಪ್ರಶಂಸಿಸುತ್ತಿರುವೆ?

12017004a ನಾಹ್ನಾ ಪೂರಯಿತುಂ ಶಕ್ಯಾ ನ ಮಾಸೇನ ನರರ್ಷಭ|

12017004c ಅಪೂರ್ಯಾಂ ಪೂರಯನ್ನಿಚ್ಚಾಮಾಯುಷಾಪಿ ನ ಶಕ್ನುಯಾತ್||

ನರರ್ಷಭ! ಮನುಷ್ಯನ ಆಸೆಗಳನ್ನು ಒಂದು ದಿನದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಪೂರೈಸಲು ಸಾಧ್ಯವಿಲ್ಲ. ಅಪೂರ್ಣವಾಗಿಯೇ ಇರುವ ಈ ಇಚ್ಛೆಗಳನ್ನು ಪೂರೈಸಲು ಇಡೀ ಜೀವಮಾನವೇ ಸಾಕಾಗುವುದಿಲ್ಲ.

12017005a ಯಥೇದ್ಧಃ ಪ್ರಜ್ವಲತ್ಯಗ್ನಿರಸಮಿದ್ಧಃ ಪ್ರಶಾಮ್ಯತಿ|

12017005c ಅಲ್ಪಾಹಾರತಯಾ ತ್ವಗ್ನಿಂ ಶಮಯೌದರ್ಯಮುತ್ಥಿತಮ್||

ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸಮಿದ್ಧವನ್ನು ಹಾಕದೇ ಹೇಗೆ ಪ್ರಶಾಂತಗೊಳಿಸಬಹುದೋ ಹಾಗೆ ಅಲ್ಪಾಹಾರದಿಂದ ಹೊಟ್ಟೆಯಲ್ಲಿ ಉರಿಯುವ ಹಸಿವೆಯೆಂಬ ಅಗ್ನಿಯನ್ನು ಶಮನಗೊಳಿಸಬಹುದು.

12017005e ಜಯೋದರಂ ಪೃಥಿವ್ಯಾ ತೇ ಶ್ರೇಯೋ ನಿರ್ಜಿತಯಾ ಜಿತಮ್||

12017006a ಮಾನುಷಾನ್ಕಾಮಭೋಗಾಂಸ್ತ್ವಮೈಶ್ವರ್ಯಂ ಚ ಪ್ರಶಂಸಸಿ|

12017006c ಅಭೋಗಿನೋಽಬಲಾಶ್ಚೈವ ಯಾಂತಿ ಸ್ಥಾನಮನುತ್ತಮಮ್||

ಹೊಟ್ಟೆಯನ್ನು ಗೆಲ್ಲುವುದು ಭೂಮಿಯನ್ನು ಗೆಲ್ಲುವುದಕ್ಕಿಂತಲೂ ಶ್ರೇಯಸ್ಕರವಾದುದು. ಮನುಷ್ಯಲೋಕಕ್ಕೆ ಸಂಬಂಧಿಸಿದ ಭೋಗೈಶ್ವರ್ಯಗಳನ್ನು ನೀನು ಪ್ರಶಂಸಿಸುತ್ತಿರುವೆ! ಆದರೆ ಭೋಗಿಸದಿರುವವರು ಮತ್ತು ಅಬಲರೂ ಕೂಡ ಉತ್ತಮ ಸ್ಥಾನಗಳಿಗೆ ಹೋಗುತ್ತಾರೆ!

12017007a ಯೋಗಕ್ಷೇಮೌ ಚ ರಾಷ್ಟ್ರಸ್ಯ ಧರ್ಮಾಧರ್ಮೌ ತ್ವಯಿ ಸ್ಥಿತೌ|

12017007c ಮುಚ್ಯಸ್ವ ಮಹತೋ ಭಾರಾತ್ತ್ಯಾಗಮೇವಾಭಿಸಂಶ್ರಯ||

ರಾಷ್ಟ್ರದ ಯೋಗ-ಕ್ಷೇಮಗಳೂ, ಧರ್ಮಾಧರ್ಮಗಳೂ ನಿನ್ನಲ್ಲಿಯೇ ನೆಲಸಿವೆ. ತ್ಯಾಗವನ್ನವಲಂಬಿಸಿ ಈ ಮಹಾಭಾರದ ಹೊರೆಯಿಂದ ಮುಕ್ತಿಹೊಂದು!

12017008a ಏಕೋದರಕೃತೇ ವ್ಯಾಘ್ರಃ ಕರೋತಿ ವಿಘಸಂ ಬಹು|

12017008c ತಮನ್ಯೇಽಪ್ಯುಪಜೀವಂತಿ ಮಂದವೇಗಂಚರಾ ಮೃಗಾಃ||

ಒಂದೇ ಹೊಟ್ಟೆಯುಳ್ಳದ್ದಾದರೂ ಹುಲಿಯು ಬಹಳಷ್ಟು ಎಂಜಲನ್ನು ಚೆಲ್ಲುತ್ತದೆ. ಅನ್ಯ ಮೃಗಗಳು ನಿಧಾನವಾಗಿ ಅದನ್ನೇ ಅನುಸರಿಸಿ ಹೋಗಿ, ಅದು ಚೆಲ್ಲಿರುವ ಆಹಾರವನ್ನು ತಿಂದು ತಮ್ಮ ಜೀವನವನ್ನು ನಡೆಸಿಕೊಳ್ಳುತ್ತವೆ.

12017009a ವಿಷಯಾನ್ಪ್ರತಿಸಂಹೃತ್ಯ ಸಂನ್ಯಾಸಂ ಕುರುತೇ ಯತಿಃ|

12017009c ನ ಚ ತುಷ್ಯಂತಿ ರಾಜಾನಃ ಪಶ್ಯ ಬುದ್ಧ್ಯಂತರಂ ಯಥಾ||

ವಿಷಯಗಳಿಂದ ತನ್ನ ಮನಸ್ಸನ್ನು ಸೆಳೆದುಕೊಂಡು ಯತಿಯು ಸಂನ್ಯಾಸದಲ್ಲಿರುತ್ತಾನೆ. ಆದರೆ ರಾಜನು ವಿಷಯಗಳಿಂದ ತೃಪ್ತನೇ ಆಗುವುದಿಲ್ಲ. ಇವರೀರ್ವರ ಬುದ್ಧಿಗಳಲ್ಲಿರುವ ಅಂತರವನ್ನಾದರೂ ನೋಡು!

12017010a ಪತ್ರಾಹಾರೈರಶ್ಮಕುಟ್ಟೈರ್ದಂತೋಲೂಖಲಿಕೈಸ್ತಥಾ|

12017010c ಅಬ್ಭಕ್ಷೈರ್ವಾಯುಭಕ್ಷೈಶ್ಚ ತೈರಯಂ ನರಕೋ ಜಿತಃ||

ಎಲೆಗಳನ್ನು ತಿನ್ನುವವರು, ಕಲ್ಲಮೇಲಿಟ್ಟು ಕುಟ್ಟಿದ ಧಾನ್ಯವನ್ನು ತಿನ್ನುವವರು, ಹಲ್ಲಿನಿಂದ ಕಚ್ಚಿ ತಿನ್ನುವುದನ್ನು ಮಾತ್ರ ತಿನ್ನುವವರು, ನೀರನ್ನೇ ಕುಡಿದು ಜೀವಿಸಿರುವವರು, ಮತ್ತು ಗಾಳಿಯನ್ನೇ ಸೇವಿಸಿ ಜೀವಿಸಿರುವವರು ಇವರು ನರಕವನ್ನು ಗೆದ್ದವರು.

12017011a ಯಶ್ಚೇಮಾಂ ವಸುಧಾಂ ಕೃತ್ಸ್ನಾಂ ಪ್ರಶಾಸೇದಖಿಲಾಂ ನೃಪಃ|

12017011c ತುಲ್ಯಾಶ್ಮಕಾಂಚನೋ ಯಶ್ಚ ಸ ಕೃತಾರ್ಥೋ ನ ಪಾರ್ಥಿವಃ||

ಅಖಿಲ ಭೂಮಂಡಲವನ್ನೂ ಆಳುವ ನೃಪ ಮತ್ತು ಕಲ್ಲು-ಕಾಂಚನಗಳನ್ನು ಒಂದಾಗಿಯೇ ಕಾಣುವ ಯತಿ ಇವರಿಬ್ಬರಲ್ಲಿ ರಾಜನು ಎಂದೂ ಕೃತಾರ್ಥನೆನಿಸಿಕೊಳ್ಳಲಾರ!

12017012a ಸಂಕಲ್ಪೇಷು ನಿರಾರಂಭೋ ನಿರಾಶೋ ನಿರ್ಮಮೋ ಭವ|

12017012c ವಿಶೋಕಂ ಸ್ಥಾನಮಾತಿಷ್ಠ ಇಹ ಚಾಮುತ್ರ ಚಾವ್ಯಯಮ್||

ಸಂಕಲ್ಪಗಳನ್ನು ಆರಂಭಿಸಬೇಡ. ಆಸೆ ಮತ್ತು ಮಮತೆಗಳಿಲ್ಲದವನಾಗು. ಶೋಕವಿಲ್ಲದ ಅವ್ಯಯವಾದ ಪರಲೋಕದ ಸ್ಥಾನವನ್ನು ಹೊಂದು.

12017013a ನಿರಾಮಿಷಾ ನ ಶೋಚಂತಿ ಶೋಚಸಿ ತ್ವಂ ಕಿಮಾಮಿಷಮ್|

12017013c ಪರಿತ್ಯಜ್ಯಾಮಿಷಂ ಸರ್ವಂ ಮೃಷಾವಾದಾತ್ಪ್ರಮೋಕ್ಷ್ಯಸೇ||

ಆಸೆಗಳಿಲ್ಲದವರು ಶೋಕಿಸುವುದಿಲ್ಲ. ನೀನೇಕೆ ಆಸೆಗಳಿಗಾಗಿ ಶೋಕಿಸುತ್ತಿರುವೆ? ಆಸೆಗಳೆಲ್ಲವನ್ನೂ ತ್ಯಜಿಸಿದರೆ ಮಿಥ್ಯಾವಾದದಿಂದ ಮುಕ್ತನಾಗುವೆ.

12017014a ಪಂಥಾನೌ ಪಿತೃಯಾನಶ್ಚ ದೇವಯಾನಶ್ಚ ವಿಶ್ರುತೌ|

12017014c ಈಜಾನಾಃ ಪಿತೃಯಾನೇನ ದೇವಯಾನೇನ ಮೋಕ್ಷಿಣಃ||

ಪಿತೃಯಾನ ಮಾತು ದೇವಯಾನಗಳೆಂಬ ಎರಡು ದಾರಿಗಳಿವೆ ಎಂದು ಕೇಳಿದ್ದೇವೆ. ಯಜ್ಞಗಳನ್ನು ಮಾಡಿದವರು ಪಿತೃಯಾನದಲ್ಲಿಯೂ, ಮೋಕ್ಷವನ್ನು ಪಡೆದವರು ದೇವಯಾನದಲ್ಲಿಯೂ ಹೋಗುತ್ತಾರೆ.

12017015a ತಪಸಾ ಬ್ರಹ್ಮಚರ್ಯೇಣ ಸ್ವಾಧ್ಯಾಯೇನ ಚ ಪಾವಿತಾಃ|

12017015c ವಿಮುಚ್ಯ ದೇಹಾನ್ವೈ ಭಾಂತಿ ಮೃತ್ಯೋರವಿಷಯಂ ಗತಾಃ||

ತಪಸ್ಸು, ಬ್ರಹ್ಮಚರ್ಯ ಮತ್ತು ಸ್ವಾಧ್ಯಾಯಗಳಿಂದ ಪವಿತ್ರರಾದವರು ದೇಹಗಳನ್ನು ತೊರೆದು ಮೃತ್ಯುವಿಗೆ ತುತ್ತಾಗದೇ ಹೊಳೆಯುತ್ತಾ ಬ್ರಹ್ಮಲೋಕವನ್ನು ಸೇರುತ್ತಾರೆ.

12017016a ಆಮಿಷಂ ಬಂಧನಂ ಲೋಕೇ ಕರ್ಮೇಹೋಕ್ತಂ ತಥಾಮಿಷಮ್|

12017016c ತಾಭ್ಯಾಂ ವಿಮುಕ್ತಃ ಪಾಶಾಭ್ಯಾಂ ಪದಮಾಪ್ನೋತಿ ತತ್ಪರಮ್||

ಲೋಕದಲ್ಲಿ ಆಸೆಯು ಒಂದು ಬಂಧನ. ಫಲಸಂಬಂಧಿತ ಕರ್ಮಗಳೂ ಆಸೆಗಳೇ. ಈ ಎರಡರ ಪಾಶಗಳಿಂದ ವಿಮುಕ್ತನಾದವನು ಶ್ರೇಷ್ಠ ಪರಮಪದವನ್ನು ಪಡೆಯುತ್ತಾನೆ.

12017017a ಅಪಿ ಗಾಥಾಮಿಮಾಂ ಗೀತಾಂ ಜನಕೇನ ವದಂತ್ಯುತ|

12017017c ನಿರ್ದ್ವಂದ್ವೇನ ವಿಮುಕ್ತೇನ ಮೋಕ್ಷಂ ಸಮನುಪಶ್ಯತಾ||

ದ್ವಂದ್ವಗಳಿಂದ ಮುಕ್ತನಾಗಿ, ಮೋಕ್ಷವನ್ನು ಚೆನ್ನಾಗಿ ತಿಳಿದುಕೊಂಡಿದ್ದ ಜನಕನು ಇದರ ಕುರಿತು ಹೇಳಿದ ಈ ಶ್ಲೋಕಗಳನ್ನು ಉದಾಹರಿಸುತ್ತಾರೆ.

12017018a ಅನಂತಂ ಬತ ಮೇ ವಿತ್ತಂ ಯಸ್ಯ ಮೇ ನಾಸ್ತಿ ಕಿಂ ಚನ|

12017018c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ||

“ನನ್ನಲ್ಲಿರುವ ಸಂಪತ್ತು ಅನಂತವಾದುದು ಎಂದು ಹೇಳುತ್ತಾರೆ. ಆದರೆ ನನ್ನಲ್ಲಿ ಏನೂ ಇಲ್ಲ. ಮಿಥಿಲೆಯೇ ಹತ್ತಿ ಉರಿದುಹೋದರೂ ಯಾವುದೂ ನನ್ನನ್ನು ಸುಡುವುದಿಲ್ಲ!

12017019a ಪ್ರಜ್ಞಾಪ್ರಾಸಾದಮಾರುಹ್ಯ ನಶೋಚ್ಯಾನ್ಶೋಚತೋ ಜನಾನ್|

12017019c ಜಗತೀಸ್ಥಾನಿವಾದ್ರಿಸ್ಥೋ ಮಂದಬುದ್ಧೀನವೇಕ್ಷತೇ||

ಪರ್ವತದ ಮೇಲೆ ನಿಂತು ಕೆಳಗಿನ ಜಗತ್ತನ್ನು ನೋಡುವಂತೆ ಪ್ರಜ್ಞೆಯೆಂಬ ಪ್ರಾಸಾದವನ್ನೇರಿ ಶೋಕರಹಿತನಾದ ಜ್ಞಾನಿಯು ಶೋಕಿಸುತ್ತಿರುವ ಮಂದಬುದ್ಧಿಯ ಜನರನ್ನು ನೋಡುತ್ತಿರುತ್ತಾನೆ.

12017020a ದೃಶ್ಯಂ ಪಶ್ಯತಿ ಯಃ ಪಶ್ಯನ್ಸ ಚಕ್ಷುಷ್ಮಾನ್ಸ ಬುದ್ಧಿಮಾನ್|

12017020c ಅಜ್ಞಾತಾನಾಂ ಚ ವಿಜ್ಞಾನಾತ್ಸಂಬೋಧಾದ್ಬುದ್ಧಿರುಚ್ಯತೇ||

ನೋಡಿ ಅದನ್ನು ಅರ್ಥಮಾಡಿಕೊಂಡವನೇ ಕಣ್ಣುಗಳುಳ್ಳವನು ಮತ್ತು ಬುದ್ಧಿವಂತನು. ತಿಳಿಯದೇ ಇರುವುದನ್ನು ಅನುಭವ ಪೂರ್ವಕವಾಗಿ ತಿಳಿಸುವುದೇ ಬುದ್ಧಿ ಎಂದೆನಿಸಿಕೊಳ್ಳುತ್ತದೆ.

12017021a ಯಸ್ತು ವಾಚಂ ವಿಜಾನಾತಿ ಬಹುಮಾನಮಿಯಾತ್ಸ ವೈ|

12017021c ಬ್ರಹ್ಮಭಾವಪ್ರಸೂತಾನಾಂ ವೈದ್ಯಾನಾಂ ಭಾವಿತಾತ್ಮನಾಮ್||

ಯಾರು ಬ್ರಹ್ಮಭಾವವನ್ನು ಹೊಂದಿರುವ, ವೈದ್ಯರ ಮತ್ತು ಭಾವಿತಾತ್ಮರ ಮಾತುಗಳನ್ನು ತಿಳಿದುಕೊಳ್ಳುತ್ತಾರೋ ಅವರು ಹೆಚ್ಚು ಗೌರವಕ್ಕೆ ಪಾತ್ರರು.

12017022a ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ|

12017022c ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ||

ಯಾವಾಗ ಇರುವವುಗಳ ಪ್ರತ್ಯೇಕತೆಗಳು ಒಂದರಲ್ಲಿಯೇ ನೆಲೆಗೊಂಡಿವೆಯೆನ್ನುವುದನ್ನು ಕಾಣುತ್ತಾನೋ ಆಗಲೇ ವಿಸ್ತಾರವಾದ ಬ್ರಹ್ಮದ ಅನುಭವವುಂಟಾಗುತ್ತದೆ.

12017023a ತೇ ಜನಾಸ್ತಾಂ ಗತಿಂ ಯಾಂತಿ ನಾವಿದ್ವಾಂಸೋಽಲ್ಪಚೇತಸಃ|

12017023c ನಾಬುದ್ಧಯೋ ನಾತಪಸಃ ಸರ್ವಂ ಬುದ್ಧೌ ಪ್ರತಿಷ್ಠಿತಮ್||

ವಿದ್ವಾಂಸನಲ್ಲದವನು, ಸಣ್ಣಬುದ್ಧಿಯುಳ್ಳವನು, ತಿಳಿಯದವನು, ತಪಸ್ಸು ಮಾಡದವನು ಆ ಗತಿಯನ್ನು ಹೊಂದಲಾರ. ಎಲ್ಲವೂ ಬುದ್ಧಿಯಲ್ಲಿಯೇ ಪ್ರತಿಷ್ಠಿತವಾಗಿವೆ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ಸಪ್ತದಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಹದಿನೇಳನೇ ಅಧ್ಯಾಯವು.

Comments are closed.