ಶಾಂತಿ ಪರ್ವ: ರಾಜಧರ್ಮ ಪರ್ವ

೧೪

12014001 ವೈಶಂಪಾಯನ ಉವಾಚ

12014001a ಅವ್ಯಾಹರತಿ ಕೌಂತೇಯೇ ಧರ್ಮರಾಜೇ ಯುಧಿಷ್ಠಿರೇ|

12014001c ಭ್ರಾತೃಣಾಂ ಬ್ರುವತಾಂ ತಾಂಸ್ತಾನ್ವಿವಿಧಾನ್ವೇದನಿಶ್ಚಯಾನ್||

12014002a ಮಹಾಭಿಜನಸಂಪನ್ನಾ ಶ್ರೀಮತ್ಯಾಯತಲೋಚನಾ|

12014002c ಅಭ್ಯಭಾಷತ ರಾಜೇಂದ್ರಂ ದ್ರೌಪದೀ ಯೋಷಿತಾಂ ವರಾ||

12014003a ಆಸೀನಮೃಷಭಂ ರಾಜ್ಞಾಂ ಭ್ರಾತೃಭಿಃ ಪರಿವಾರಿತಮ್|

12014003c ಸಿಂಹಶಾರ್ದೂಲಸದೃಶೈರ್ವಾರಣೈರಿವ ಯೂಥಪಮ್||

12014004a ಅಭಿಮಾನವತೀ ನಿತ್ಯಂ ವಿಶೇಷೇಣ ಯುಧಿಷ್ಠಿರೇ|

12014004c ಲಾಲಿತಾ ಸತತಂ ರಾಜ್ಞಾ ಧರ್ಮಜ್ಞಾ ಧರ್ಮದರ್ಶಿನೀ||

12014005a ಆಮಂತ್ರ್ಯ ವಿಪುಲಶ್ರೋಣೀ ಸಾಮ್ನಾ ಪರಮವಲ್ಗುನಾ|

12014005c ಭರ್ತಾರಮಭಿಸಂಪ್ರೇಕ್ಷ್ಯ ತತೋ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ವಿವಿಧ ವೇದನಿಶ್ಚಯಗಳ ಕುರಿತು ತಮ್ಮಂದಿರು ಹೇಳುತ್ತಿದ್ದರೂ ಕೌಂತೇಯ ಧರ್ಮರಾಜ ಯುಧಿಷ್ಠಿರನು ಸುಮ್ಮನಿರಲು ಸತ್ಕುಲಸಂಪನ್ನೆ ವಿಶಾಲಾಕ್ಷಿ ಸ್ತ್ರೀಯರಲ್ಲಿ ಶ್ರೇಷ್ಠೆ ನಿತ್ಯವೂ ವಿಶೇಷ ಅಭಿಮಾನದಿಂದ ಯುಧಿಷ್ಠಿರನ ಸೇವೆಗೈಯುತ್ತಿದ್ದ, ವಿಪುಲಶ್ರೋಣೀ ಧರ್ಮಜ್ಞೆ ಧರ್ಮದರ್ಶಿನೀ ದ್ರೌಪದಿಯು ಆನೆಗಳಿಂದ ಸುತ್ತುವರೆಯಲ್ಪಟ್ಟ ಸಲಗದಂತೆ ಸಹೋದರರ ಮಧ್ಯದಲ್ಲಿ ಕುಳಿತಿದ್ದ ಸಿಂಹಶಾರ್ದೂಲ ರಾಜ ಪತಿಯನ್ನು ನೋಡಿ ಸಾಂತ್ವನ ಪೂರ್ಣವಾದ ಈ ಮಧುರ ಮಾತುಗಳನ್ನಾಡಿದಳು:

12014006a ಇಮೇ ತೇ ಭ್ರಾತರಃ ಪಾರ್ಥ ಶುಷ್ಯಂತ ಸ್ತೋಕಕಾ ಇವ|

12014006c ವಾವಾಶ್ಯಮಾನಾಸ್ತಿಷ್ಠಂತಿ ನ ಚೈನಾನಭಿನಂದಸೇ||

“ಪಾರ್ಥ! ನಿನ್ನ ಈ ಸಹೋದರರು ಬಾಡಿದ ಮುಖವುಳ್ಳವರಾಗಿದ್ದಾರೆ. ನಿನ್ನನ್ನು ಬೇಡಿಕೊಳ್ಳುತ್ತಿದ್ದರೂ ನೀನು ಅವರನ್ನು ಅಭಿನಂದಿಸುತ್ತಿಲ್ಲ!

12014007a ನಂದಯೈತಾನ್ಮಹಾರಾಜ ಮತ್ತಾನಿವ ಮಹಾದ್ವಿಪಾನ್|

12014007c ಉಪಪನ್ನೇನ ವಾಕ್ಯೇನ ಸತತಂ ದುಃಖಭಾಗಿನಃ||

ಮಹಾರಾಜ! ಮದಿಸಿದ ಮಹಾಗಜಗಳಂತಿರುವ ಇವರನ್ನು ಸಂತೋಷಗೊಳಿಸು. ಸತತವೂ ದುಃಖವನ್ನೇ ಅನುಭವಿಸುತ್ತಿರುವ ಅವರನ್ನು ನಿನ್ನ ಮಾತುಗಳಿಂದ ಸಮಾಧಾನಗೊಳಿಸು.

12014008a ಕಥಂ ದ್ವೈತವನೇ ರಾಜನ್ಪೂರ್ವಮುಕ್ತ್ವಾ ತಥಾ ವಚಃ|

12014008c ಭ್ರಾತೃನೇತಾನ್ಸ್ಮ ಸಹಿತಾನ್ಶೀತವಾತಾತಪಾರ್ದಿತಾನ್||

ಹಿಂದೆ ದ್ವೈತವನದಲ್ಲಿ ಸಹೋದರರ ಸಹಿತ ಛಳಿ-ಗಾಳಿ-ಬಿಸಿಲುಗಳಿಂದ ಪೀಡಿತರಾಗಿದ್ದಾಗ ನೀನು ಅವರಿಗೆ ಹೇಳಿದ್ದ ಈ ಮಾತುಗಳು ನಿನಗೆ ಹೇಗೆ ಈಗ ನೆನಪಿಲ್ಲ?

12014009a ವಯಂ ದುರ್ಯೋಧನಂ ಹತ್ವಾ ಮೃಧೇ ಭೋಕ್ಷ್ಯಾಮ ಮೇದಿನೀಮ್|

12014009c ಸಂಪೂರ್ಣಾಂ ಸರ್ವಕಾಮಾನಾಮಾಹವೇ ವಿಜಯೈಷಿಣಃ||

12014010a ವಿರಥಾಂಶ್ಚ ರಥಾನ್ಕೃತ್ವಾ ನಿಹತ್ಯ ಚ ಮಹಾಗಜಾನ್|

12014010c ಸಂಸ್ತೀರ್ಯ ಚ ರಥೈರ್ಭೂಮಿಂ ಸಸಾದಿಭಿರರಿಂದಮಾಃ||

12014011a ಯಜತಾಂ ವಿವಿಧೈರ್ಯಜ್ಞೈಃ ಸಮೃದ್ಧೈರಾಪ್ತದಕ್ಷಿಣೈಃ|

12014011c ವನವಾಸಕೃತಂ ದುಃಖಂ ಭವಿಷ್ಯತಿ ಸುಖಾಯ ನಃ||

“ವಿಜಯೇಚ್ಛುಗಳಾದ ನಾವು ಯುದ್ಧದಲ್ಲಿ ದುರ್ಯೋಧನನನ್ನು ವಧಿಸಿ, ರಥಿಗಳನ್ನು ರಥಹೀನರನ್ನಾಗಿಸಿ, ಮಹಾಗಜಗಳನ್ನು ಸಂಹರಿಸಿ, ಕುದುರೆ ಸವಾರರಿಂದ ಕೂಡಿದ ರಥಗಳಿಂದ ಈ ಭೂಮಿಯನ್ನು ಮುಚ್ಚಿ ಸಕಲ ಕಾಮನವಸ್ತುಗಳಿಂದಲೂ ಸಮೃದ್ಧವಾದ ಈ ಮೇದಿನಿಯನ್ನು ಭೋಗಿಸೋಣ. ಸಮೃದ್ಧ ದಾನ-ದಕ್ಷಿಣೆಗಳಿಂದ ಕೂಡಿದ ವಿವಿಧ ಯಜ್ಞಗಳನ್ನು ಯಜಿಸಿ ವನವಾಸದಲ್ಲಿ ಪಡೆದ ದುಃಖವು ಮುಂದೆ ಸುಖದಲ್ಲಿಯೇ ಕೊನೆಗೊಳ್ಳುವಂತೆ ಮಾಡೋಣ!”

12014012a ಇತ್ಯೇತಾನೇವಮುಕ್ತ್ವಾ ತ್ವಂ ಸ್ವಯಂ ಧರ್ಮಭೃತಾಂ ವರ|

12014012c ಕಥಮದ್ಯ ಪುನರ್ವೀರ ವಿನಿಹಂಸಿ ಮನಾಂಸ್ಯುತ||

ಧರ್ಮಭೃತರಲ್ಲಿ ಶ್ರೇಷ್ಠನೇ! ವೀರ! ಇದೇ ಮುಂತಾಗಿ ಆಗ ಸ್ವಯಂ ನೀನೇ ಮಾತನಾಡಿ ಈಗ ಪುನಃ ನಮ್ಮ ಮನಸ್ಸನ್ನು ಏಕೆ ನೋಯಿಸುತ್ತಿರುವೆ?

12014013a ನ ಕ್ಲೀಬೋ ವಸುಧಾಂ ಭುಂಕ್ತೇ ನ ಕ್ಲೀಬೋ ಧನಮಶ್ನುತೇ|

12014013c ನ ಕ್ಲೀಬಸ್ಯ ಗೃಹೇ ಪುತ್ರಾ ಮತ್ಸ್ಯಾಃ ಪಂಕ ಇವಾಸತೇ||

ಹೇಡಿಯು ವಸುಧೆಯನ್ನು ಭೋಗಿಸಲಾರ. ಹೇಡಿಯು ಧನವನ್ನು ಸಂಗ್ರಹಿಸಲಾರ. ಕೆಸರಿನಲ್ಲಿ ಮೀನುಗಳು ಇರಲಾರದಂತೆ ಹೇಡಿಯ ಮನೆಯಲ್ಲಿ ಪುತ್ರರೂ ಇರಲಾರರು.

12014014a ನಾದಂಡಃ ಕ್ಷತ್ರಿಯೋ ಭಾತಿ ನಾದಂಡೋ ಭೂತಿಮಶ್ನುತೇ|

12014014c ನಾದಂಡಸ್ಯ ಪ್ರಜಾ ರಾಜ್ಞಃ ಸುಖಮೇಧಂತಿ ಭಾರತ||

ಭಾರತ! ದಂಡಧಾರಿಯಲ್ಲದ ಕ್ಷತ್ರಿಯನು ಶೋಭಿಸುವುದಿಲ್ಲ. ದಂಡಧಾರಿಯಲ್ಲದವನು ಭೂಮಿಯನ್ನು ಭೋಗಿಸುವುದಿಲ್ಲ. ದಂಡಧಾರಿಯಲ್ಲದ ರಾಜನ ಪ್ರಜೆಗಳು ಸುಖವಾಗಿರುವುದಿಲ್ಲ.

12014015a ಮಿತ್ರತಾ ಸರ್ವಭೂತೇಷು ದಾನಮಧ್ಯಯನಂ ತಪಃ|

12014015c ಬ್ರಾಹ್ಮಣಸ್ಯೈಷ ಧರ್ಮಃ ಸ್ಯಾನ್ನ ರಾಜ್ಞೋ ರಾಜಸತ್ತಮ||

ರಾಜಸತ್ತಮ! ಸರ್ವಭೂತಗಳಲ್ಲಿ ಮಿತ್ರತ್ವ, ದಾನ, ಅಧ್ಯಯನ ಮತ್ತು ತಪಸ್ಸು ಇವು ಬ್ರಾಹ್ಮಣನ ಧರ್ಮ. ರಾಜನದ್ದಲ್ಲ.

12014016a ಅಸತಾಂ ಪ್ರತಿಷೇಧಶ್ಚ ಸತಾಂ ಚ ಪರಿಪಾಲನಮ್|

12014016c ಏಷ ರಾಜ್ಞಾಂ ಪರೋ ಧರ್ಮಃ ಸಮರೇ ಚಾಪಲಾಯನಮ್||

ದುಷ್ಟನಿಗ್ರಹ, ಶಿಷ್ಟ ಪರಿಪಾಲನೆ ಮತ್ತು ಯುದ್ಧದಲ್ಲಿ ಪಲಾಯನ ಮಾಡದಿರುವುದು - ಇವು ರಾಜರ ಪರಮ ಧರ್ಮ.

12014017a ಯಸ್ಮಿನ್ ಕ್ಷಮಾ ಚ ಕ್ರೋಧಶ್ಚ ದಾನಾದಾನೇ ಭಯಾಭಯೇ|

12014017c ನಿಗ್ರಹಾನುಗ್ರಹೌ ಚೋಭೌ ಸ ವೈ ಧರ್ಮವಿದುಚ್ಯತೇ||

ಯಾರಲ್ಲಿ ಕ್ಷಮೆ ಮತ್ತು ಕ್ರೋಧಗಳೆರಡೂ, ದಾನ-ಆದಾನಗಳೆರಡೂ, ಭಯ-ಅಭಯಗಳೆರಡೂ, ನಿಗ್ರಹ-ಅನುಗ್ರಹಗಳೆರಡೂ ಇರುತ್ತವೆಯೋ ಆ ರಾಜನೇ ಧರ್ಮವಿದುವೆಂದು ಹೇಳಬಹುದು.

12014018a ನ ಶ್ರುತೇನ ನ ದಾನೇನ ನ ಸಾಂತ್ವೇನ ನ ಚೇಜ್ಯಯಾ|

12014018c ತ್ವಯೇಯಂ ಪೃಥಿವೀ ಲಬ್ಧಾ ನೋತ್ಕೋಚೇನ ತಥಾಪ್ಯುತ||

ನೀನು ಈ ರಾಜ್ಯವನ್ನು ವೇದಾಧ್ಯಯನದಿಂದಾಗಲೀ, ದಾನಗಳಿಂದಾಗಲೀ, ಇತರರನ್ನು ಸಾಂತ್ವನಗೊಳಿಸಿದುದರಿಂದಾಗಲೀ, ಯಜ್ಞ-ಯಾಗಗಳನ್ನು ಮಾಡಿದುದರಿಂದಾಗಲೀ, ಅಥವಾ ಇತರರನ್ನು ಬೇಡಿ ಪಡೆದುಕೊಳ್ಳಲಿಲ್ಲ.

12014019a ಯತ್ತದ್ಬಲಮಮಿತ್ರಾಣಾಂ ತಥಾ ವೀರಸಮುದ್ಯತಮ್|

12014019c ಹಸ್ತ್ಯಶ್ವರಥಸಂಪನ್ನಂ ತ್ರಿಭಿರಂಗೈರ್ಮಹತ್ತರಮ್||

12014020a ರಕ್ಷಿತಂ ದ್ರೋಣಕರ್ಣಾಭ್ಯಾಮಶ್ವತ್ಥಾಮ್ನಾ ಕೃಪೇಣ ಚ|

12014020c ತತ್ತ್ವತ್ತ್ವಯಾ ನಿಹತಂ ವೀರ ತಸ್ಮಾದ್ಭುಂಕ್ತ್ವ ವಸುಂಧರಾಮ್||

ವೀರ! ಅತ್ಯಂತ ವೀರರಾಗಿದ್ದ, ಆನೆ-ಕುದುರೆ-ರಥಗಳೆಂಬ ಮೂರು ಶ್ರೇಷ್ಠ ಸೇನಾಭಾಗಗಳಿಂದ ಸಂಪನ್ನವಾಗಿದ್ದ, ದ್ರೋಣ-ಕರ್ಣ-ಅಶ್ವತ್ಥಾಮ-ಕೃಪರಿಂದ ರಕ್ಷಿತವಾಗಿದ್ದ ಶತ್ರುಸೇನೆಗಳನ್ನು ಸಂಹರಿಸಿ ಗಳಿಸಿದ ಈ ವಸುಂಧರೆಯನ್ನು ನೀನು ಭೋಗಿಸು! 

12014021a ಜಂಬೂದ್ವೀಪೋ ಮಹಾರಾಜ ನಾನಾಜನಪದಾಯುತಃ|

12014021c ತ್ವಯಾ ಪುರುಷಶಾರ್ದೂಲ ದಂಡೇನ ಮೃದಿತಃ ಪ್ರಭೋ||

ಮಹಾರಾಜ! ಪುರುಷಶಾರ್ದೂಲ! ಪ್ರಭೋ! ನಾನಾ ಜನಪದಗಳಿಂದ ಕೂಡಿರುವ ಈ ಜಂಬೂದ್ವೀಪವನ್ನು ನೀನು ದಂಡದಿಂದ ಶತ್ರುಗಳನ್ನು ಮರ್ದಿಸಿ ಪಡೆದುಕೊಂಡಿರುವೆ.

12014022a ಜಂಬೂದ್ವೀಪೇನ ಸದೃಶಃ ಕ್ರೌಂಚದ್ವೀಪೋ ನರಾಧಿಪ|

12014022c ಅಪರೇಣ ಮಹಾಮೇರೋರ್ದಂಡೇನ ಮೃದಿತಸ್ತ್ವಯಾ||

ನರಾಧಿಪ! ಮಹಾಮೇರುವಿನ ಕೆಳಭಾಗದಲ್ಲಿರುವ ಜಂಬೂದ್ವೀಪದಂತೆಯೇ ಇರುವ ಇನ್ನೊಂದು ದ್ವೀಪ ಕ್ರೌಂಚವನ್ನು ನೀನು ದಂಡದಿಂದ ಮರ್ದಿಸಿ ಪಡೆದುಕೊಂಡಿರುವೆ.

12014023a ಕ್ರೌಂಚದ್ವೀಪೇನ ಸದೃಶಃ ಶಾಕದ್ವೀಪೋ ನರಾಧಿಪ|

12014023c ಪೂರ್ವೇಣ ತು ಮಹಾಮೇರೋರ್ದಂಡೇನ ಮೃದಿತಸ್ತ್ವಯಾ||

ನರಾಧಿಪ! ಮಹಾಮೇರು ಪರ್ವತದ ಪೂರ್ವದಲ್ಲಿರುವ ಮತ್ತು ಕ್ರೌಂಚದ್ವೀಪದಂತಿರುವ ಶಾಕದ್ವೀಪವನ್ನೂ ಕೂಡ ನೀನು ದಂಡದಿಂದ ಶತ್ರುಗಳನ್ನು ಮರ್ದಿಸಿ ಸ್ವಾಧೀನಪಡೆಸಿಕೊಂಡಿರುವೆ.

12014024a ಉತ್ತರೇಣ ಮಹಾಮೇರೋಃ ಶಾಕದ್ವೀಪೇನ ಸಂಮಿತಃ|

12014024c ಭದ್ರಾಶ್ವಃ ಪುರುಷವ್ಯಾಘ್ರ ದಂಡೇನ ಮೃದಿತಸ್ತ್ವಯಾ||

ಪುರುಷವ್ಯಾಘ್ರ! ಮಹಾಮೇರುವಿನ ಉತ್ತರದಲ್ಲಿರುವ ಶಾಕದ್ವೀಪಕ್ಕೆ ಕೂಡಿಕೊಂಡಿರುವ ಭದ್ರಾಶ್ವವನ್ನೂ ನೀನು ದಂಡದಿಂದ ಶತ್ರುಗಳನ್ನು ಮರ್ದಿಸಿ ಪಡೆದುಕೊಂಡಿರುವೆ.

12014025a ದ್ವೀಪಾಶ್ಚ ಸಾಂತರದ್ವೀಪಾ ನಾನಾಜನಪದಾಲಯಾಃ|

12014025c ವಿಗಾಹ್ಯ ಸಾಗರಂ ವೀರ ದಂಡೇನ ಮೃದಿತಾಸ್ತ್ವಯಾ||

ವೀರ! ಅನೇಕ ದೇಶಗಳಿಂದ ಕೂಡಿರುವ ದ್ವೀಪ-ದ್ವೀಪಾಂತರಗಳನ್ನೂ, ಸಮುದ್ರದ ಆಚೆ ಇರುವ ಎಲ್ಲ ಪ್ರದೇಶಗಳನ್ನೂ ದಂಡದಿಂದಲೇ ಅಧಿಕಾರಕ್ಕೊಳಪಡಿಸಿಕೊಂಡಿರುವೆ.

12014026a ಏತಾನ್ಯಪ್ರತಿಮಾನಿ ತ್ವಂ ಕೃತ್ವಾ ಕರ್ಮಾಣಿ ಭಾರತ|

12014026c ನ ಪ್ರೀಯಸೇ ಮಹಾರಾಜ ಪೂಜ್ಯಮಾನೋ ದ್ವಿಜಾತಿಭಿಃ||

ಭಾರತ! ಮಹಾರಾಜ! ಈ ಅಪ್ರತಿಮ ಕರ್ಮಗಳನ್ನು ಮಾಡಿ ದ್ವಿಜರಿಂದ ಗೌರವಿಸಲ್ಪಟ್ಟರೂ ನಿನಗದು ಸಂತೋಷವನ್ನು ನೀಡುತ್ತಿಲ್ಲ!

12014027a ಸ ತ್ವಂ ಭ್ರಾತೃನಿಮಾನ್ದೃಷ್ಟ್ವಾ ಪ್ರತಿನಂದಸ್ವ ಭಾರತ|

12014027c ಋಷಭಾನಿವ ಸಂಮತ್ತಾನ್ಗಜೇಂದ್ರಾನೂರ್ಜಿತಾನಿವ||

ಭಾರತ! ನಿನ್ನೊಡನೆ ಸಹಕರಿಸಿದ ಈ ನಿನ್ನ ಮದಿಸಿದ ಆನೆಗಳಂತೆ ಮತ್ತು ಗೂಳಿಗಳಂತಿರುವ ಸಹೋದರರನ್ನು ನೋಡಿ ಆನಂದಿಸು!

12014028a ಅಮರಪ್ರತಿಮಾಃ ಸರ್ವೇ ಶತ್ರುಸಾಹಾಃ ಪರಂತಪಾಃ|

12014028c ಏಕೋಽಪಿ ಹಿ ಸುಖಾಯೈಷಾಂ ಕ್ಷಮಃ ಸ್ಯಾದಿತಿ ಮೇ ಮತಿಃ||

ಅಮರರಂತಿರುವ, ಶತ್ರುಗಳ ವೇಗವನ್ನು ತಡೆಯಬಲ್ಲ, ಪರಂತಪರು ಒಬ್ಬೊಬ್ಬರೂ ನನ್ನನ್ನು ಸುಖದಿಂದಿಟ್ಟಿರಲು ಸಮರ್ಥರೆಂದು ನನಗನ್ನಿಸುತ್ತದೆ.

12014029a ಕಿಂ ಪುನಃ ಪುರುಷವ್ಯಾಘ್ರಾಃ ಪತಯೋ ಮೇ ನರರ್ಷಭಾಃ|

12014029c ಸಮಸ್ತಾನೀಂದ್ರಿಯಾಣೀವ ಶರೀರಸ್ಯ ವಿಚೇಷ್ಟನೇ||

ಶರೀರದ ಸರ್ವೇಂದ್ರಿಯಗಳೂ ಮನುಷ್ಯನನ್ನು ಸುಖಪಡಿಸಲು ಶ್ರಮಿಸುವಂತೆ ಈ ಎಲ್ಲ ಪುರುಷವ್ಯಾಘ್ರ ನರರ್ಷಭ ಪತಿಗಳೂ ಪ್ರಯತ್ನಿಸುತ್ತಿದ್ದಾರೆ!

12014030a ಅನೃತಂ ಮಾಬ್ರವೀಚ್ಚ್ವಶ್ರೂಃ ಸರ್ವಜ್ಞಾ ಸರ್ವದರ್ಶಿನೀ|

12014030c ಯುಧಿಷ್ಠಿರಸ್ತ್ವಾಂ ಪಾಂಚಾಲಿ ಸುಖೇ ಧಾಸ್ಯತ್ಯನುತ್ತಮೇ||

12014031a ಹತ್ವಾ ರಾಜಸಹಸ್ರಾಣಿ ಬಹೂನ್ಯಾಶುಪರಾಕ್ರಮಃ|

12014031c ತದ್ವ್ಯರ್ಥಂ ಸಂಪ್ರಪಶ್ಯಾಮಿ ಮೋಹಾತ್ತವ ಜನಾಧಿಪ||

ಸರ್ವದರ್ಶಿನಿಯಾದ ಸರ್ವಜ್ಞೆ ನನ್ನ ಅತ್ತೆ ಕುಂತಿಯು ನನಗೆ ಈ ಸತ್ಯವನ್ನೇ ಹೇಳುತ್ತಿದ್ದಳು: “ಪಾಂಚಾಲೀ! ಅನುತ್ತಮೇ! ತನ್ನ ಪರಾಕ್ರಮದಿಂದ ಸಹಸ್ರಾರು ರಾಜರನ್ನು ಸಂಹರಿಸಿ ಯುಧಿಷ್ಠಿರನು ನಿನಗೆ ಸುಖವನ್ನು ನೀಡುತ್ತಾನೆ!” ಜನಾಧಿಪ! ಆದರೆ ನಿನ್ನ ಮೋಹದಿಂದಾಗಿ ಆ ಮಾತು ವ್ಯರ್ಥವಾಯಿತೆಂದೇ ನನಗನ್ನಿಸುತ್ತಿದೆ.

12014032a ಯೇಷಾಮುನ್ಮತ್ತಕೋ ಜ್ಯೇಷ್ಠಃ ಸರ್ವೇ ತಸ್ಯೋಪಚಾರಿಣಃ|

12014032c ತವೋನ್ಮಾದೇನ ರಾಜೇಂದ್ರ ಸೋನ್ಮಾದಾಃ ಸರ್ವಪಾಂಡವಾಃ||

ಅಣ್ಣನು ಮರುಳಾದರೆ ತಮ್ಮಂದಿರೂ ಅವನನ್ನು ಅನುಸರಿಸುತ್ತಾರೆ. ರಾಜೇಂದ್ರ! ನಿನ್ನ ಮರುಳುತನದಿಂದಾಗಿ ಪಾಂಡವರೆಲ್ಲರೂ ಮರುಳಾಗುತ್ತಾರೆ!

12014033a ಯದಿ ಹಿ ಸ್ಯುರನುನ್ಮತ್ತಾ ಭ್ರಾತರಸ್ತೇ ಜನಾಧಿಪ|

12014033c ಬದ್ಧ್ವಾ ತ್ವಾಂ ನಾಸ್ತಿಕೈಃ ಸಾರ್ಧಂ ಪ್ರಶಾಸೇಯುರ್ವಸುಂಧರಾಮ್||

ಜನಾಧಿಪ! ಒಂದುವೇಳೆ ನಿನ್ನ ಸಹೋದರರು ಮರುಳಾಗಿರದಿದ್ದರೆ ಇಷ್ಟರಲ್ಲಿ ಉಳಿದ ನಾಸ್ತಿಕರೊಂದಿಗೆ ನಿನ್ನನ್ನು ಬಂಧಿಸಿ ಭೂಮಿಯನ್ನು ಆಳುತ್ತಿದ್ದರು!

12014034a ಕುರುತೇ ಮೂಢಮೇವಂ ಹಿ ಯಃ ಶ್ರೇಯೋ ನಾಧಿಗಚ್ಚತಿ|

12014034c ಧೂಪೈರಂಜನಯೋಗೈಶ್ಚ ನಸ್ಯಕರ್ಮಭಿರೇವ ಚ||

12014034e ಭೇಷಜೈಃ ಸ ಚಿಕಿತ್ಸ್ಯಃ ಸ್ಯಾದ್ಯ ಉನ್ಮಾರ್ಗೇಣ ಗಚ್ಚತಿ||

ಈ ರೀತಿ ಮೂಢನಂತೆ ನಡೆದುಕೊಳ್ಳುವವನಿಗೆ ಎಂದಿಗೂ ಶ್ರೇಯಸ್ಸು ದೊರೆಯುವುದಿಲ್ಲ. ಹೀಗೆ ಅಪಮಾರ್ಗದಲ್ಲಿ ಹೋಗುವವನಿಗೆ ಧೂಪಗಳಿಂದಲೂ, ಕಣ್ಣಿಗೆ ಅಂಜನಾದಿಗಳನ್ನು ಹಚ್ಚುವುದರಿಂದಲೂ, ಮೂಗಿಗೆ ಚೂರ್ಣವನ್ನು ಹಾಕುವುದರಿಂದಲೂ, ಮತ್ತು ಇತರ ಔಷಧಿಗಳಿಂದಲೂ ಚಿಕೆತ್ಸೆಗಳನ್ನು ನಡೆಸಬೇಕಾಗುತ್ತದೆ!

12014035a ಸಾಹಂ ಸರ್ವಾಧಮಾ ಲೋಕೇ ಸ್ತ್ರೀಣಾಂ ಭರತಸತ್ತಮ|

12014035c ತಥಾ ವಿನಿಕೃತಾಮಿತ್ರೈರ್ಯಾಹಮಿಚ್ಚಾಮಿ ಜೀವಿತುಮ್||

ಭರತಸತ್ತಮ! ನಾನು ಲೋಕದ ಸ್ತ್ರೀಯರೆಲ್ಲೆಲ್ಲಾ ಅಧಮಳೆಂದು ಭಾವಿಸುತ್ತೇನೆ. ಶತ್ರುಗಳಿಂದ ಈ ರೀತಿ ಮೋಸಗೊಂಡೆನಾದರೂ ಜೀವಿಸಿರಲು ಇಚ್ಛಿಸುತ್ತೇನೆ!

12014036a ಏತೇಷಾಂ ಯತಮಾನಾನಾಮುತ್ಪದ್ಯಂತೇ ತು ಸಂಪದಃ|

12014036c ತ್ವಂ ತು ಸರ್ವಾಂ ಮಹೀಂ ಲಬ್ಧ್ವಾ ಕುರುಷೇ ಸ್ವಯಮಾಪದಮ್||

ಇವರು ನಿನ್ನನ್ನು ಸಮಾಧಾನ ಪಡೆಸಲು ಪ್ರಯತ್ನಿಸುತ್ತಿದ್ದಾರೆ. ನೀನಾದರೋ ಇಡೀ ಭೂಮಿಯನ್ನೇ ಪಡೆದರೂ ಸ್ವಯಂ ನಿನಗೇ ಆಪತ್ತನ್ನು ತಂದುಕೊಳ್ಳುತ್ತಿದ್ದೀಯೆ!

12014037a ಯಥಾಸ್ತಾಂ ಸಂಮತೌ ರಾಜ್ಞಾಂ ಪೃಥಿವ್ಯಾಂ ರಾಜಸತ್ತಮೌ|

12014037c ಮಾಂಧಾತಾ ಚಾಂಬರೀಷಶ್ಚ ತಥಾ ರಾಜನ್ವಿರಾಜಸೇ||

ರಾಜನ್! ರಾಜಸತ್ತಮರಾದ ಮಾಂಧಾತಾ-ಅಂಬರೀಷರಂತೆ ಎಲ್ಲ ರಾಜರಿಂದಲೂ ಪುರಸ್ಕೃತರಾಗಿ ರಾಜ್ಯಭಾರಮಾಡಿ ನೀನೂ ಕೂಡ ವಿರಾಜಿಸು!

12014038a ಪ್ರಶಾಧಿ ಪೃಥಿವೀಂ ದೇವೀಂ ಪ್ರಜಾ ಧರ್ಮೇಣ ಪಾಲಯನ್|

12014038c ಸಪರ್ವತವನದ್ವೀಪಾಂ ಮಾ ರಾಜನ್ವಿಮನಾ ಭವ||

ರಾಜನ್! ಧರ್ಮದಿಂದ ಪ್ರಜೆಗಳನ್ನು ಪಾಲಿಸುತ್ತಾ ಈ ಪರ್ವತ-ವನ-ದ್ವೀಪಗಳಿಂದ ಕೂಡಿದ ದೇವೀ ಪೃಥ್ವಿಯನ್ನು ಆಳುವುದರ ಕುರಿತು ಉದಾಸೀನನಾಗಬೇಡ.

12014039a ಯಜಸ್ವ ವಿವಿಧೈರ್ಯಜ್ಞೈರ್ಜುಹ್ವನ್ನಗ್ನೀನ್ಪ್ರಯಚ್ಚ ಚ|

12014039c ಪುರಾಣಿ ಭೋಗಾನ್ವಾಸಾಂಸಿ ದ್ವಿಜಾತಿಭ್ಯೋ ನೃಪೋತ್ತಮ||

ನೃಪಸತ್ತಮ! ವಿವಿಧ ಯಜ್ಞಗಳಿಂದ ದೇವತೆಗಳನ್ನು ಆರಾಧಿಸು. ಪುರಗಳನ್ನೂ, ಭೋಗವಸ್ತುಗಳನ್ನೂ, ವಸ್ತ್ರಗಳನ್ನೂ ಬ್ರಾಹ್ಮಣರಿಗೆ ದಾನಮಾಡು!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದ್ರೌಪದೀವಾಕ್ಯೇ ಚತುರ್ದಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದ್ರೌಪದೀವಾಕ್ಯ ಎನ್ನುವ ಹದಿನಾಲ್ಕನೇ ಅಧ್ಯಾಯವು.

Comments are closed.