ಶಾಂತಿ ಪರ್ವ: ರಾಜಧರ್ಮ ಪರ್ವ
೧೩
12013001 ಸಹದೇವ ಉವಾಚ
12013001a ನ ಬಾಹ್ಯಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ಭಾರತ|
12013001c ಶಾರೀರಂ ದ್ರವ್ಯಮುತ್ಸೃಜ್ಯ ಸಿದ್ಧಿರ್ಭವತಿ ವಾ ನ ವಾ||
ಸಹದೇವನು ಹೇಳಿದನು: “ಭಾರತ! ಬಾಹ್ಯದ್ರವ್ಯಗಳನ್ನು ತ್ಯಜಿಸುವುದರಿಂದ ಸಿದ್ಧಿಯಾಗುವುದಿಲ್ಲ. ಶಾರೀರಿಕ ದ್ರವ್ಯಗಳಾದ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಸಿದ್ಧಿಯುಂಟಾಗಬಹುದು ಅಥವಾ ಆಗದೆಯೂ ಇರಬಹುದು.
12013002a ಬಾಹ್ಯದ್ರವ್ಯವಿಮುಕ್ತಸ್ಯ ಶಾರೀರೇಷು ಚ ಗೃಧ್ಯತಃ|
12013002c ಯೋ ಧರ್ಮೋ ಯತ್ಸುಖಂ ವಾ ಸ್ಯಾದ್ದ್ವಿಷತಾಂ ತತ್ತಥಾಸ್ತು ನಃ||
ಬಾಹ್ಯದ್ರವ್ಯಗಳಿಂದ ವಿಹೀನನಾಗಿ ಶಾರೀರಿಕ ದ್ರವ್ಯಗಳಲ್ಲಿ ಆಸಕ್ತಿಯಿರುವವನ ಧರ್ಮವು ಯಾವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಅದು ನಮ್ಮ ಶತ್ರುಗಳ ಧರ್ಮ-ಸುಖಗಳಾಗಲಿ.
12013003a ಶಾರೀರಂ ದ್ರವ್ಯಮುತ್ಸೃಜ್ಯ ಪೃಥಿವೀಮನುಶಾಸತಃ|
12013003c ಯೋ ಧರ್ಮೋ ಯತ್ಸುಖಂ ವಾ ಸ್ಯಾತ್ಸುಹೃದಾಂ ತತ್ತಥಾಸ್ತು ನಃ||
ಶಾರೀರಿಕ ದ್ರವ್ಯಗಳನ್ನು ತ್ಯಜಿಸಿ ಪೃಥ್ವಿಯನ್ನು ಆಳುವವನ ಧರ್ಮವು ಯಾವುದೋ ಮತ್ತು ಅಂಥವನಿಗೆ ಯಾವ ಸುಖವು ದೊರೆಯುವುದೋ ಆ ಧರ್ಮ-ಸುಖಗಳು ನಮ್ಮ ಆತ್ಮೀಯರದ್ದಾಗಲಿ.
12013004a ದ್ವ್ಯಕ್ಷರಸ್ತು ಭವೇನ್ಮೃತ್ಯುಸ್ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್|
12013004c ಮಮೇತಿ ಚ ಭವೇನ್ಮೃತ್ಯುರ್ನ ಮಮೇತಿ ಚ ಶಾಶ್ವತಮ್||
“ಮಮ” ಎನ್ನುವ ಎರಡಕ್ಷರಗಳನ್ನು ಅನುಸಂಧಾನ ಮಾಡುವುದರಿಂದ ಮೃತ್ಯುವುಂಟಾಗುತ್ತದೆ. “ನ ಮಮ” ಎಂಬ ಮೂರಕ್ಷರಗಳನ್ನು ಅನುಸಂಧಾನಮಾಡುವುದರಿಂದ ಶಾಶ್ವತ ಬ್ರಹ್ಮಲೋಕವು ಪ್ರಾಪ್ತವಾಗುತ್ತದೆ.
12013005a ಬ್ರಹ್ಮಮೃತ್ಯೂ ಚ ತೌ ರಾಜನ್ನಾತ್ಮನ್ಯೇವ ಸಮಾಶ್ರಿತೌ|
12013005c ಅದೃಶ್ಯಮಾನೌ ಭೂತಾನಿ ಯೋಧಯೇತಾಮಸಂಶಯಮ್||
ರಾಜನ್! ಈ ಬ್ರಹ್ಮ-ಮೃತ್ಯುಗಳು ಭೂತಗಳ ಆತ್ಮದಲ್ಲಿಯೇ ಅದೃಶ್ಯರಾಗಿ ಇದ್ದುಕೊಂಡು ಪರಸ್ಪರರ ವಿರುದ್ಧವಾಗಿ ಹೋರಾಡುತ್ತಿರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
12013006a ಅವಿನಾಶೋಽಸ್ಯ ಸತ್ತ್ವಸ್ಯ ನಿಯತೋ ಯದಿ ಭಾರತ|
12013006c ಭಿತ್ತ್ವಾ ಶರೀರಂ ಭೂತಾನಾಂ ನ ಹಿಂಸಾ ಪ್ರತಿಪತ್ಸ್ಯತೇ||
ಭಾರತ! ಈ ಸತ್ತ್ವವು ಅವಿನಾಶೀ ಎಂದು ನಿಯಮವಿರುವುದರಿಂದ ಜೀವಿಗಳ ಶರೀರವನ್ನು ಕತ್ತರಿಸಿದರೂ ಆ ಸತ್ತ್ವಕ್ಕೆ ಹಿಂಸೆಯಾಗುವುದಿಲ್ಲ ಎಂದಲ್ಲವೇ?
12013007a ಅಥಾಪಿ ಚ ಸಹೋತ್ಪತ್ತಿಃ ಸತ್ತ್ವಸ್ಯ ಪ್ರಲಯಸ್ತಥಾ|
12013007c ನಷ್ಟೇ ಶರೀರೇ ನಷ್ಟಂ ಸ್ಯಾದ್ವೃಥಾ ಚ ಸ್ಯಾತ್ಕ್ರಿಯಾಪಥಃ||
ಆದರೆ ಶರೀರದೊಂದಿಗೆ ಸತ್ತ್ವವು ಹುಟ್ಟುತ್ತದೆ ಮತ್ತು ಅದರೊಂದಿಗೆ ವಿನಾಶವೂ ಆಗುತ್ತದೆ ಎಂದು ತಿಳಿದುಕೊಂಡರೆ ನಾವು ಮಾಡುವ ಕ್ರಿಯೆಗಳೆಲ್ಲವೂ ವ್ಯರ್ಥವೇ ಎಂದಾಯಿತಲ್ಲವೇ?
12013008a ತಸ್ಮಾದೇಕಾಂತಮುತ್ಸೃಜ್ಯ ಪೂರ್ವೈಃ ಪೂರ್ವತರೈಶ್ಚ ಯಃ|
12013008c ಪಂಥಾ ನಿಷೇವಿತಃ ಸದ್ಭಿಃ ಸ ನಿಷೇವ್ಯೋ ವಿಜಾನತಾ||
ಆದುದರಿಂದ ತಿಳಿದವನು ಏಕಾಂತವನ್ನು ತ್ಯಜಿಸಿ ನಮ್ಮ ಪೂರ್ವಜರು ಮತ್ತು ಅವರ ಪೂರ್ವಜರು ಹಾಗೂ ಸತ್ಪುರುಷರು ಅನುಸರಿಸುವ ಮಾರ್ಗವನ್ನೇ ಅನುಸರಿಸಬೇಕು.
12013009a ಲಬ್ಧ್ವಾಪಿ ಪೃಥಿವೀಂ ಕೃತ್ಸ್ನಾಂ ಸಹಸ್ಥಾವರಜಂಗಮಾಮ್|
12013009c ನ ಭುಂಕ್ತೇ ಯೋ ನೃಪಃ ಸಮ್ಯಗ್ನಿಷ್ಫಲಂ ತಸ್ಯ ಜೀವಿತಮ್||
ಸ್ಥಾವರ-ಜಂಗಮಗಳೊಡನೆ ಇಡೀ ಪೃಥ್ವಿಯನ್ನು ಪಡೆದರೂ ಯಾವ ನೃಪನು ಅದನ್ನು ಭೋಗಿಸುವುದಿಲ್ಲವೋ ಅಂಥವನ ಜೀವನವು ಸಂಪೂರ್ಣವಾಗಿ ನಿಷ್ಫಲವೇ ಸರಿ.
12013010a ಅಥ ವಾ ವಸತೋ ರಾಜನ್ವನೇ ವನ್ಯೇನ ಜೀವತಃ|
12013010c ದ್ರವ್ಯೇಷು ಯಸ್ಯ ಮಮತಾ ಮೃತ್ಯೋರಾಸ್ಯೇ ಸ ವರ್ತತೇ||
ರಾಜನ್! ವನದಲ್ಲಿ ವಾಸವಾಗಿರಲಿ ಅಥವಾ ವನ್ಯಪದಾರ್ಥಗಳಿಂದ ಜೀವನ ನಡೆಸುತ್ತಿರಲಿ – ಯಾರ ಮಮತೆಯು ದ್ರವ್ಯಗಳ ಮೇಲಿರುವುದೋ ಅವನು ಮೃತ್ಯುವಶನಾದಂತೆಯೇ ಸರಿ.
12013011a ಬಾಹ್ಯಾಭ್ಯಂತರಭೂತಾನಾಂ ಸ್ವಭಾವಂ ಪಶ್ಯ ಭಾರತ|
12013011c ಯೇ ತು ಪಶ್ಯಂತಿ ತದ್ಭಾವಂ ಮುಚ್ಯಂತೇ ಮಹತೋ ಭಯಾತ್||
ಭಾರತ! ಜೀವಿಗಳ ಹೊರಗಿನ ಮತ್ತು ಒಳಗಿನ ಸ್ವಭಾವವನ್ನು ನೋಡು. ಅವುಗಳ ಭಾವಗಳನ್ನು ತಿಳಿದವನು ಮಹಾಭಯದಿಂದ ಮುಕ್ತನಾಗುತ್ತಾನೆ.
12013012a ಭವಾನ್ಪಿತಾ ಭವಾನ್ಮಾತಾ ಭವಾನ್ಭ್ರಾತಾ ಭವಾನ್ಗುರುಃ|
12013012c ದುಃಖಪ್ರಲಾಪಾನಾರ್ತಸ್ಯ ತಸ್ಮಾನ್ಮೇ ಕ್ಷಂತುಮರ್ಹಸಿ||
ನೀನೇ ನನ್ನ ತಂದೆ, ತಾಯಿ, ಅಣ್ಣ ಮತ್ತು ಗುರು. ದುಃಖದಿಂದ ಪ್ರಲಪಿಸುತ್ತಿರುವ ಈ ಆರ್ತನನ್ನು ನೀನು ಕ್ಷಮಿಸಬೇಕು.
12013013a ತಥ್ಯಂ ವಾ ಯದಿ ವಾತಥ್ಯಂ ಯನ್ಮಯೈತತ್ಪ್ರಭಾಷಿತಮ್|
12013013c ತದ್ವಿದ್ಧಿ ಪೃಥಿವೀಪಾಲ ಭಕ್ತ್ಯಾ ಭರತಸತ್ತಮ||
ಭರತಸತ್ತಮ! ಪೃಥ್ವೀಪಾಲಕ! ಕೇವಲ ಭಕ್ತಿಯಿಂದ ನಾನು ನಿಜವಾಗಿರುವ ಅಥವಾ ಸುಳ್ಳಾಗಿರುವ ಈ ಮಾತುಗಳನ್ನಾಡಿದ್ದೇನೆಂದು ನೀನು ತಿಳಿದುಕೊಳ್ಳಬೇಕು.””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸಹದೇವವಾಕ್ಯೇ ತ್ರಯೋದಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸಹದೇವವಾಕ್ಯ ಎನ್ನುವ ಹದಿಮೂರನೇ ಅಧ್ಯಾಯವು.