ಶಾಂತಿ ಪರ್ವ: ರಾಜಧರ್ಮ ಪರ್ವ

೧೨

12012001 ವೈಶಂಪಾಯನ ಉವಾಚ

12012001a ಅರ್ಜುನಸ್ಯ ವಚಃ ಶ್ರುತ್ವಾ ನಕುಲೋ ವಾಕ್ಯಮಬ್ರವೀತ್|

12012001c ರಾಜಾನಮಭಿಸಂಪ್ರೇಕ್ಷ್ಯ ಸರ್ವಧರ್ಮಭೃತಾಂ ವರಮ್||

12012002a ಅನುರುಧ್ಯ ಮಹಾಪ್ರಾಜ್ಞೋ ಭ್ರಾತುಶ್ಚಿತ್ತಮರಿಂದಮಃ|

12012002c ವ್ಯೂಢೋರಸ್ಕೋ ಮಹಾಬಾಹುಸ್ತಾಮ್ರಾಸ್ಯೋ ಮಿತಭಾಷಿತಾ||

ವೈಶಂಪಾಯನನು ಹೇಳಿದನು: “ಅರ್ಜುನನ ಮಾತನ್ನು ಕೇಳಿ ಅರಿಂದಮ ಮಹಾಬಾಹು ವಿಶಾಲವಕ್ಷ ಮಿತಭಾಷೀ ಮಹಾಪ್ರಾಜ್ಞ ನಕುಲನು ಅಣ್ಣನ ಮನಸ್ಸನ್ನು ಬದಲಾಯಿಸಲು ಧರ್ಮಭೃತರಲ್ಲಿ ಶ್ರೇಷ್ಠನಾದ ರಾಜ ಯುಧಿಷ್ಠಿರನನ್ನು ನೋಡಿ ಹೀಗೆ ಹೇಳಿದನು:

12012003a ವಿಶಾಖಯೂಪೇ ದೇವಾನಾಂ ಸರ್ವೇಷಾಮಗ್ನಯಶ್ಚಿತಾಃ|

12012003c ತಸ್ಮಾದ್ವಿದ್ಧಿ ಮಹಾರಾಜ ದೇವಾನ್ಕರ್ಮಪಥಿ ಸ್ಥಿತಾನ್||

“ಮಹಾರಾಜ! ವಿಶಾಖಯೂಪದಲ್ಲಿ ದೇವತೆಗಳೆಲ್ಲರೂ ಅಗ್ನಿಗಳನ್ನು ಪ್ರತಿಷ್ಠಾಪಿಸಿದ್ದರು. ಇದರಿಂದ ದೇವತೆಗಳೂ ಕರ್ಮಪಥದಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಯಬಹುದು.

12012004a ಅನಾಸ್ತಿಕಾನಾಸ್ತಿಕಾನಾಂ ಪ್ರಾಣದಾಃ ಪಿತರಶ್ಚ ಯೇ|

12012004c ತೇಽಪಿ ಕರ್ಮೈವ ಕುರ್ವಂತಿ ವಿಧಿಂ ಪಶ್ಯಸ್ವ ಪಾರ್ಥಿವ||

ಪಾರ್ಥಿವ! ಆಸ್ತಿಕ-ಅನಾಸ್ತಿಕರಿಗೆ ಅನ್ನವನ್ನು ದಯಪಾಲಿಸುವ ಪಿತೃಗಳೂ ಕೂಡ ವಿಧಿದೃಷ್ಟವಾದ ಕರ್ಮಗಳನ್ನೇ ಮಾಡುತ್ತಾರೆ ನೋಡು!

12012004e ವೇದವಾದಾಪವಿದ್ಧಾಂಸ್ತು ತಾನ್ವಿದ್ಧಿ ಭೃಶನಾಸ್ತಿಕಾನ್|

12012005a ನ ಹಿ ವೇದೋಕ್ತಮುತ್ಸೃಜ್ಯ ವಿಪ್ರಃ ಸರ್ವೇಷು ಕರ್ಮಸು|

12012005c ದೇವಯಾನೇನ ನಾಕಸ್ಯ ಪೃಷ್ಠಮಾಪ್ನೋತಿ ಭಾರತ||

ವೇದವಾದಗಳಿಂದ ಮೋಹಗೊಂಡವರು ಹೆಚ್ಚು ನಾಸ್ತಿಕರೆಂದು ತಿಳಿ. ಭಾರತ! ಎಲ್ಲ ಕರ್ಮಗಳಲ್ಲಿ ವೇದೋಕ್ತವಾದವುಗಳನ್ನು ಬಿಟ್ಟುಮಾಡುವ ವಿಪ್ರನು ದೇವಯಾನದ ಮೂಲಕ ಮೇಲಿನ ಸ್ವರ್ಗವನ್ನು ತಲುಪಲಾರ!

12012006a ಅತ್ಯಾಶ್ರಮಾನಯಂ ಸರ್ವಾನಿತ್ಯಾಹುರ್ವೇದನಿಶ್ಚಯಾಃ|

12012006c ಬ್ರಾಹ್ಮಣಾಃ ಶ್ರುತಿಸಂಪನ್ನಾಸ್ತಾನ್ನಿಬೋಧ ಜನಾಧಿಪ||

ವೇದನಿಶ್ಚಯಗಳನ್ನು ತಿಳಿದಿರುವ ಮತ್ತು ಶೃತಿಸಂಪನ್ನರಾದ ಬ್ರಾಹ್ಮಣರು ಈ ಗೃಹಸ್ಥಾಶ್ರಮವು ಎಲ್ಲ ಆಶ್ರಮಗಳಿಗಿಂತ ಅತಿಶಯವಾದುದು ಎನ್ನುತ್ತಾರೆ. ನರಾಧಿಪ! ಅವರು ಹೇಳುವುದನ್ನು ಕೇಳು.

12012007a ವಿತ್ತಾನಿ ಧರ್ಮಲಬ್ಧಾನಿ ಕ್ರತುಮುಖ್ಯೇಷ್ವವಾಸೃಜನ್|

12012007c ಕೃತಾತ್ಮಸು ಮಹಾರಾಜ ಸ ವೈ ತ್ಯಾಗೀ ಸ್ಮೃತೋ ನರಃ||

ಮಹಾರಾಜ! ಧರ್ಮದಿಂದ ಗಳಿಸಿದ ವಿತ್ತವನ್ನು ಮುಖ್ಯ ಕ್ರತುಗಳಿಗೆ ಉಪಯೋಗಿಸಿ ಕೃತಾತ್ಮನಾದ ನರನನ್ನೇ ತ್ಯಾಗೀ ಎಂದು ಹೇಳುತ್ತಾರೆ.

12012008a ಅನವೇಕ್ಷ್ಯ ಸುಖಾದಾನಂ ತಥೈವೋರ್ಧ್ವಂ ಪ್ರತಿಷ್ಠಿತಃ|

12012008c ಆತ್ಮತ್ಯಾಗೀ ಮಹಾರಾಜ ಸ ತ್ಯಾಗೀ ತಾಮಸಃ ಪ್ರಭೋ||

ಮಹಾರಾಜ! ಪ್ರಭೋ! ಗೃಹಸ್ಥಾಶ್ರಮದಲ್ಲಿರುವ ಸುಖವನ್ನು ತ್ಯಜಿಸಿ ನಂತರದ ವಾನಪ್ರಸ್ಥ-ಸನ್ಯಾಸ ಆಶ್ರಮಗಳಲ್ಲಿ ನಿಷ್ಠೆಯನ್ನು ಹೊಂದಿ ಆತ್ಮತ್ಯಾಗ ಮಾಡುವವನನ್ನು ತಾಮಸತ್ಯಾಗೀ ಎಂದು ಹೇಳುತ್ತಾರೆ.

12012009a ಅನಿಕೇತಃ ಪರಿಪತನ್ ವೃಕ್ಷಮೂಲಾಶ್ರಯೋ ಮುನಿಃ|

12012009c ಅಪಾಚಕಃ ಸದಾ ಯೋಗೀ ಸ ತ್ಯಾಗೀ ಪಾರ್ಥ ಭಿಕ್ಷುಕಃ||

ಪಾರ್ಥ! ಮನೆಯಿಲ್ಲದೇ ತನ್ನ ಆಹಾರವನ್ನು ತಾನೇ ತಯಾರಿಸದೇ ಭಿಕ್ಷೆಗಾಗಿ ಎಲ್ಲೆಲ್ಲಿಯೋ ತಿರುಗಾಡುತ್ತಾ ಮರಗಳ ಬುಡವನ್ನೇ ಆಶ್ರಯಿಸಿ ಸದಾ ಯೋಗಯುಕ್ತನಾಗಿ ಸರ್ವಕರ್ಮಗಳನ್ನು ತ್ಯಾಗಮಾಡಿದವನನ್ನು ಭಿಕ್ಷುಕನೆಂದು ಹೇಳುತ್ತಾರೆ.

12012010a ಕ್ರೋಧಹರ್ಷಾವನಾದೃತ್ಯ ಪೈಶುನ್ಯಂ ಚ ವಿಶಾಂ ಪತೇ|

12012010c ವಿಪ್ರೋ ವೇದಾನಧೀತೇ ಯಃ ಸ ತ್ಯಾಗೀ ಗುರುಪೂಜಕಃ||

ವಿಶಾಂಪತೇ! ಕ್ರೋಧ-ಹರ್ಷಗಳನ್ನು ಅನಾದರಿಸಿ, ಅದರಲ್ಲೂ ವಿಶೇಷವಾಗಿ, ಇನ್ನೊಬ್ಬರನ್ನು ದ್ವೇಷಿಸುವುದನ್ನು ಬಿಟ್ಟು, ವೇದಾಧ್ಯಯನದಲ್ಲಿ ನಿರತನಾಗಿ ಗುರುಪೂಜಕನಾದ ವಿಪ್ರನೇ ತ್ಯಾಗಿ.

12012011a ಆಶ್ರಮಾಂಸ್ತುಲಯಾ ಸರ್ವಾನ್ಧೃತಾನಾಹುರ್ಮನೀಷಿಣಃ|

12012011c ಏಕತಸ್ತೇ ತ್ರಯೋ ರಾಜನ್ಗೃಹಸ್ಥಾಶ್ರಮ ಏಕತಃ||

ರಾಜನ್! ಒಮ್ಮೆ ವಿದ್ವಾಂಸರು ಒಂದು ಕಡೆ ಗೃಹಸ್ಥಾಶ್ರಮವನ್ನೂ ಮತ್ತೊಂದು ಕಡೆ ಉಳಿದ – ಬ್ರಹ್ಮಚರ್ಯ, ವಾನಪ್ರಸ್ಥ ಮತ್ತು ಸನ್ಯಾಸ – ಈ ಮೂರು ಆಶ್ರಮಗಳನ್ನು ಇಟ್ಟು ಸರ್ವ ಆಶ್ರಮಗಳನ್ನೂ ತುಲನೆಮಾಡಿದರೆಂದು ಹೇಳುತ್ತಾರೆ.

12012012a ಸಮೀಕ್ಷತೇ ತು ಯೋಽರ್ಥಂ ವೈ ಕಾಮಂ ಸ್ವರ್ಗಂ ಚ ಭಾರತ|

12012012c ಅಯಂ ಪಂಥಾ ಮಹರ್ಷೀಣಾಮಿಯಂ ಲೋಕವಿದಾಂ ಗತಿಃ||

ಭಾರತ! ಸಮೀಕ್ಷಿಸಿದಾಗ ಗೃಹಸ್ಥಾಶ್ರಮವೇ ಹೆಚ್ಚಿನದೆಂದು ತಿಳಿಯುತ್ತದೆ. ಏಕೆಂದರೆ ಈ ಆಶ್ರಮದಿಂದ ಇಹದಲ್ಲಿ ಕಾಮಭೋಗಗಳನ್ನೂ ನಂತರ ಸ್ವರ್ಗವನ್ನೂ ಪಡೆಯಬಹುದು. ಇದೇ ಮಹರ್ಷಿಗಳೂ ಲೋಕವಿದರೂ ಬಳಸುವ ಮಾರ್ಗ.

12012013a ಇತಿ ಯಃ ಕುರುತೇ ಭಾವಂ ಸ ತ್ಯಾಗೀ ಭರತರ್ಷಭ|

12012013c ನ ಯಃ ಪರಿತ್ಯಜ್ಯ ಗೃಹಾನ್ವನಮೇತಿ ವಿಮೂಢವತ್||

ಭರತರ್ಷಭ! ಈ ಭಾವದಂತೆ ಮಾಡುವವನೇ ತ್ಯಾಗೀ. ಮನೆಗಳನ್ನು ಪರಿತ್ಯಜಿಸಿ ವಿಮೂಢನಾಗಿ ವನಕ್ಕೆ ಹೋಗುವವನಲ್ಲ!

12012014a ಯದಾ ಕಾಮಾನ್ಸಮೀಕ್ಷೇತ ಧರ್ಮವೈತಂಸಿಕೋಽನೃಜುಃ|

12012014c ಅಥೈನಂ ಮೃತ್ಯುಪಾಶೇನ ಕಂಠೇ ಬಧ್ನಾತಿ ಮೃತ್ಯುರಾಟ್||

ಧರ್ಮದ ಸೋಗಿನಿಂದ ಅರಣ್ಯದಲ್ಲಿ ವಾಸಮಾಡುವವನು ಕಾಮಾಸಕ್ತನಾದರೆ ಮೃತ್ಯುರಾಜನು ಕೂಡಲೇ ಅವನ ಕುತ್ತಿಗೆಯನ್ನು ಮೃತ್ಯುಪಾಶದಿಂದ ಬಂಧಿಸುತ್ತಾನೆ.

12012015a ಅಭಿಮಾನಕೃತಂ ಕರ್ಮ ನೈತತ್ಫಲವದುಚ್ಯತೇ|

12012015c ತ್ಯಾಗಯುಕ್ತಂ ಮಹಾರಾಜ ಸರ್ವಮೇವ ಮಹಾಫಲಮ್||

ಮಹಾರಾಜ! ಅಭಿಮಾನದಿಂದ ಮಾಡಿದ ಕರ್ಮಗಳು ಎಂದಿಗೂ ಫಲವನ್ನು ಕೊಡುವುದಿಲ್ಲವೆಂದು ಹೇಳುತ್ತಾರೆ. ತ್ಯಾಗಬುದ್ಧಿಯಿಂದ ಮಾಡಿದುದೆಲ್ಲವೂ ಮಹಾಫಲಗಳನ್ನು ಕೊಡುತ್ತವೆ.

12012016a ಶಮೋ ದಮಸ್ತಪೋ ದಾನಂ ಸತ್ಯಂ ಶೌಚಮಥಾರ್ಜವಮ್|

12012016c ಯಜ್ಞೋ ಧೃತಿಶ್ಚ ಧರ್ಮಶ್ಚ ನಿತ್ಯಮಾರ್ಷೋ ವಿಧಿಃ ಸ್ಮೃತಃ||

ಶಮ, ದಮ, ತಪಸ್ಸು, ದಾನ, ಸತ್ಯ, ಶೌಚ, ಸರಳತೆ, ಯಜ್ಞ, ಧೃತಿ, ಧರ್ಮ – ಇವು ಋಷಿಗಳ ನಿತ್ಯವಿಧಿಯೆಂದು ಹೇಳುತ್ತಾರೆ.

12012017a ಪಿತೃದೇವಾತಿಥಿಕೃತೇ ಸಮಾರಂಭೋಽತ್ರ ಶಸ್ಯತೇ|

12012017c ಅತ್ರೈವ ಹಿ ಮಹಾರಾಜ ತ್ರಿವರ್ಗಃ ಕೇವಲಂ ಫಲಮ್||

ಮಹಾರಾಜ! ಗೃಹಸ್ಥಾಶ್ರಮದಲ್ಲಿ ಪಿತೃ-ದೇವತೆಗಳು ಮತ್ತು ಅತಿಥಿಗಳ ಪೂಜೆಗಳು ಕೂಡಿಕೊಂಡಿರುವುದರಿಂದ ಅದನ್ನು ಪ್ರಶಂಸಿಸಿದ್ದಾರೆ. ಇದರಲ್ಲಿಯೇ ಧರ್ಮ-ಅರ್ಥ-ಕಾಮಗಳೆಂಬ ಮೂರು ಫಲಗಳು ಪ್ರಾಪ್ತವಾಗುತ್ತವೆ.

12012018a ಏತಸ್ಮಿನ್ವರ್ತಮಾನಸ್ಯ ವಿಧೌ ವಿಪ್ರನಿಷೇವಿತೇ|

12012018c ತ್ಯಾಗಿನಃ ಪ್ರಸೃತಸ್ಯೇಹ ನೋಚ್ಚಿತ್ತಿರ್ವಿದ್ಯತೇ ಕ್ವ ಚಿತ್||

ಗೃಹಸ್ಥಾಶ್ರಮದಲ್ಲಿಯೇ ಇದ್ದುಕೊಂಡು ವೇದವಿಹಿತ ವಿಪ್ರಕರ್ಮಗಳನ್ನು ಫಲಾಪೇಕ್ಷೆಗಳಿಲ್ಲದೇ ನಿಷ್ಠೆಯಿಂದ ಮಾಡುತ್ತಿರುವ ತ್ಯಾಗಿಗೆ ಪರಲೌಕಿಕ ಉನ್ನತಿಯೂ ಕಡಿದುಹೋಗುವುದಿಲ್ಲ.

12012019a ಅಸೃಜದ್ಧಿ ಪ್ರಜಾ ರಾಜನ್ಪ್ರಜಾಪತಿರಕಲ್ಮಷಃ|

12012019c ಮಾಂ ಯಕ್ಷ್ಯಂತೀತಿ ಶಾಂತಾತ್ಮಾ ಯಜ್ಞೈರ್ವಿವಿಧದಕ್ಷಿಣೈಃ||

12012020a ವೀರುಧಶ್ಚೈವ ವೃಕ್ಷಾಂಶ್ಚ ಯಜ್ಞಾರ್ಥಂ ಚ ತಥೌಷಧೀಃ|

12012020c ಪಶೂಂಶ್ಚೈವ ತಥಾ ಮೇಧ್ಯಾನ್ಯಜ್ಞಾರ್ಥಾನಿ ಹವೀಂಷಿ ಚ||

ರಾಜನ್! ವಿವಿಧ ದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳಿಂದ ನನ್ನನ್ನು ಆರಾಧಿಸುತ್ತಾರೆ ಎಂದೇ ಶಾಂತಾತ್ಮಾ ಅಕಲ್ಮಷ ಪ್ರಜಾಪತಿಯು ಪ್ರಜೆಗಳನ್ನು ಸೃಷ್ಟಿಸಿದನು. ಯಜ್ಞಕ್ಕಾಗಿಯೇ ಅವನು ಔಷಧಿ-ಲತೆಗಳನ್ನೂ, ವೃಕ್ಷಗಳನ್ನೂ, ಪಶುಗಳನ್ನೂ ಮತ್ತು ಮೇಧ-ಅನ್ನಗಳನ್ನೂ, ಹವಿಸ್ಸುಗಳನ್ನೂ ಸೃಷ್ಟಿಸಿದನು.

12012021a ಗೃಹಸ್ಥಾಶ್ರಮಿಣಸ್ತಚ್ಚ ಯಜ್ಞಕರ್ಮ ವಿರೋಧಕಮ್|

12012021c ತಸ್ಮಾದ್ಗಾರ್ಹಸ್ಥ್ಯಮೇವೇಹ ದುಷ್ಕರಂ ದುರ್ಲಭಂ ತಥಾ||

ಗೃಹಸ್ಥಾಶ್ರಮಿಗೆ ಯಜ್ಞಕರ್ಮಗಳು ಮಾಡಲೇ ಬೇಕಾದ ಒಂದು ಬಂಧನ[1]. ಇದರಿಂದಾಗಿ ಗೃಹಸ್ಥಾಶ್ರಮವು ದುಷ್ಕರವೂ ದುರ್ಲಭವೂ ಆಗಿರುತ್ತದೆ.

12012022a ತತ್ಸಂಪ್ರಾಪ್ಯ ಗೃಹಸ್ಥಾ ಯೇ ಪಶುಧಾನ್ಯಸಮನ್ವಿತಾಃ|

12012022c ನ ಯಜಂತೇ ಮಹಾರಾಜ ಶಾಶ್ವತಂ ತೇಷು ಕಿಲ್ಬಿಷಮ್||

ಮಹಾರಾಜ! ಪಶುಧಾನ್ಯಗಳನ್ನು ಸಂಪಾದಿಸಿದ ಯಾವ ಗೃಹಸ್ಥನು ಯಜ್ಞ ಮಾಡುವುದಿಲ್ಲವೋ ಅವನು ಶಾಶ್ವತ ಪಾಪಿಯಾಗುತ್ತಾನೆ.

12012023a ಸ್ವಾಧ್ಯಾಯಯಜ್ಞಾ ಋಷಯೋ ಜ್ಞಾನಯಜ್ಞಾಸ್ತಥಾಪರೇ|

12012023c ಅಥಾಪರೇ ಮಹಾಯಜ್ಞಾನ್ಮನಸೈವ ವಿತನ್ವತೇ||

ಋಷಿಗಳು ಸ್ವಾಧ್ಯಾಯವೆಂಬ ಯಜ್ಞವನ್ನು ಮಾಡುತ್ತಾರೆ. ಇನ್ನು ಕೆಲವರು ಜ್ಞಾನಯಜ್ಞವನ್ನು ಮಾಡುತ್ತಾರೆ. ಇನ್ನೂ ಇತರರು ಮನಸ್ಸಿನಲ್ಲಿಯೇ ಮಹಾಯಜ್ಞಗಳನ್ನು ಮಾಡುತ್ತಿರುತ್ತಾರೆ.

12012024a ಏವಂ ದಾನಸಮಾಧಾನಂ ಮಾರ್ಗಮಾತಿಷ್ಠತೋ ನೃಪ|

12012024c ದ್ವಿಜಾತೇರ್ಬ್ರಹ್ಮಭೂತಸ್ಯ ಸ್ಪೃಹಯಂತಿ ದಿವೌಕಸಃ||

ನೃಪ! ಹೀಗೆ ದಾನ-ಸಮಾಧಾನಗಳ ಮಾರ್ಗವನ್ನು ಹಿಡಿದಿರುವ ಬ್ರಹ್ಮಭೂತ ದ್ವಿಜರನ್ನು ನೋಡಲು ದೇವತೆಗಳೂ ಅಪೇಕ್ಷಿಸುತ್ತಾರೆ.

12012025a ಸ ರತ್ನಾನಿ ವಿಚಿತ್ರಾಣಿ ಸಂಭೃತಾನಿ ತತಸ್ತತಃ|

12012025c ಮಖೇಷ್ವನಭಿಸಂತ್ಯಜ್ಯ ನಾಸ್ತಿಕ್ಯಮಭಿಜಲ್ಪಸಿ||

12012025e ಕುಟುಂಬಮಾಸ್ಥಿತೇ ತ್ಯಾಗಂ ನ ಪಶ್ಯಾಮಿ ನರಾಧಿಪ||

ಅಲ್ಲಲ್ಲಿಂದ ಸಂಗ್ರಹಿಸಿರುವ ವಿಚಿತ್ರ ರತ್ನಗಳನ್ನು ನಾವು ಯಜ್ಞಗಳ ಮೂಲಕವಾಗಿ ಹಂಚಬೇಕಾಗಿದೆ. ಹೀಗಿರುವಾಗ ನೀನು ನಾಸ್ತಿಕನಂತೆ ಮಾತನಾಡುತ್ತಿರುವೆ! ನರಾಧಿಪ! ಕುಟುಂಬದಲ್ಲಿದ್ದುಕೊಂಡು ಸರ್ವಸಂಗಪರಿತ್ಯಾಗಿಯಾಗುವುದನ್ನು ನಾನೆಲ್ಲೂ ನೋಡಿಲ್ಲ.

12012026a ರಾಜಸೂಯಾಶ್ವಮೇಧೇಷು ಸರ್ವಮೇಧೇಷು ವಾ ಪುನಃ|

12012026c ಯ ಚಾನ್ಯೇ ಕ್ರತವಸ್ತಾತ ಬ್ರಾಹ್ಮಣೈರಭಿಪೂಜಿತಾಃ||

12012026e ತೈರ್ಯಜಸ್ವ ಮಹಾರಾಜ ಶಕ್ರೋ ದೇವಪತಿರ್ಯಥಾ||

ಮಹಾರಾಜ! ದೇವಪತಿ ಶಕ್ರನಂತೆ ರಾಜಸೂಯ, ಅಶ್ವಮೇಧ, ಸರ್ವಮೇಧ ಅಥವಾ ಬ್ರಾಹ್ಮಣರಿಂದ ಪೂಜಿತವಾದ ಇನ್ನು ಬೇರೆ ಯಾವುದೇ ಕ್ರತುಗಳನ್ನು ಯಾಜಿಸು.

12012027a ರಾಜ್ಞಃ ಪ್ರಮಾದದೋಷೇಣ ದಸ್ಯುಭಿಃ ಪರಿಮುಷ್ಯತಾಮ್|

12012027c ಅಶರಣ್ಯಃ ಪ್ರಜಾನಾಂ ಯಃ ಸ ರಾಜಾ ಕಲಿರುಚ್ಯತೇ||

ಪ್ರಮಾದದೋಷದಿಂದ ಯಾವ ರಾಜನು ಪ್ರಜೆಗಳಿಗೆ ಕಳ್ಳ-ಕಾಕರಿಂದ ರಕ್ಷಣೆಯನ್ನು ನೀಡುವುದಿಲ್ಲವೋ ಅಂತಹ ರಾಜನಿಗೆ ಕಲಿ ಎಂದು ಕರೆಯುತ್ತಾರೆ.

12012028a ಅಶ್ವಾನ್ಗಾಶ್ಚೈವ ದಾಸೀಶ್ಚ ಕರೇಣೂಶ್ಚ ಸ್ವಲಂಕೃತಾಃ|

12012028c ಗ್ರಾಮಾನ್ಜನಪದಾಂಶ್ಚೈವ ಕ್ಷೇತ್ರಾಣಿ ಚ ಗೃಹಾಣಿ ಚ||

12012029a ಅಪ್ರದಾಯ ದ್ವಿಜಾತಿಭ್ಯೋ ಮಾತ್ಸರ್ಯಾವಿಷ್ಟಚೇತಸಃ|

12012029c ವಯಂ ತೇ ರಾಜಕಲಯೋ ಭವಿಷ್ಯಾಮೋ ವಿಶಾಂ ಪತೇ||

ವಿಶಾಂಪತೇ! ಕುದುರೆಗಳು, ಗೋವುಗಳು, ದಾಸಿಯರು, ಅಲಂಕೃತ ಆನೆಗಳು, ಗ್ರಾಮಗಳು, ಜನಪದಗಳು, ಕ್ಷೇತ್ರಗಳು ಮತ್ತು ಗೃಹಗಳನ್ನು ಮಾತ್ಸರ್ಯವಿಲ್ಲದೇ ದ್ವಿಜರಿಗೆ ಕೊಡದೇ ಇದ್ದರೆ ನಾವೂ ಕೂಡ ಕಲಿರಾಜರಾಗುತ್ತೇವೆ.

12012030a ಅದಾತಾರೋಽಶರಣ್ಯಾಶ್ಚ ರಾಜಕಿಲ್ಬಿಷಭಾಗಿನಃ|

12012030c ದುಃಖಾನಾಮೇವ ಭೋಕ್ತಾರೋ ನ ಸುಖಾನಾಂ ಕದಾ ಚನ||

ದಾನಮಾಡದಿರುವವರು ಮತ್ತು ರಕ್ಷಣೆನೀಡದಿರುವವರು ರಾಜಕಿಲ್ಬಿಷಗಳಿಗೆ ಭಾಗಿಗಳಾಗುತ್ತಾರೆ ಮತ್ತು ದುಃಖವನ್ನೇ ಅನುಭವಿಸುತ್ತಾರೆಯೇ ಹೊರತು ಎಂದೂ ಸುಖಿಗಳಾಗುವುದಿಲ್ಲ.

12012031a ಅನಿಷ್ಟ್ವಾ ಚ ಮಹಾಯಜ್ಞೈರಕೃತ್ವಾ ಚ ಪಿತೃಸ್ವಧಾಮ್|

12012031c ತೀರ್ಥೇಷ್ವನಭಿಸಂತ್ಯಜ್ಯ ಪ್ರವ್ರಜಿಷ್ಯಸಿ ಚೇದಥ||

12012032a ಚಿನ್ನಾಭ್ರಮಿವ ಗಂತಾಸಿ ವಿಲಯಂ ಮಾರುತೇರಿತಮ್|

12012032c ಲೋಕಯೋರುಭಯೋರ್ಭ್ರಷ್ಟೋ ಹ್ಯಂತರಾಲೇ ವ್ಯವಸ್ಥಿತಃ||

ಇಷ್ಟಿಗಳನ್ನು ಮತ್ತು ಮಹಾಯಜ್ಞಗಳನ್ನು ಮಾಡದೇ, ಪಿತೃಗಳನ್ನು ಪೂಜಿಸದೇ, ತೀರ್ಥಗಳಲ್ಲಿ ಮೀಯದೇ ನೀನು ಅರಣ್ಯಕ್ಕೆ ಹೊರಟೆಯೆಂದಾದರೆ ಭಿರುಗಾಳಿಯ ಹೊಡೆತಕ್ಕೆ ಸಿಲುಕಿ ಒಡೆದು ಚದುರಿಹೋಗುವ ಮೋಡದಂತೆ ನಾಶವಾಗುವೆ. ಇಹ-ಪರ ಲೋಕಗಳೆರಡರಿಂದಲೂ ಭ್ರಷ್ಟನಾಗಿ ಮಧ್ಯದಲ್ಲಿಯೇ ಸಿಲುಕಿಗೊಳ್ಳುವೆ!

12012033a ಅಂತರ್ಬಹಿಶ್ಚ ಯತ್ಕಿಂ ಚಿನ್ಮನೋವ್ಯಾಸಂಗಕಾರಕಮ್|

12012033c ಪರಿತ್ಯಜ್ಯ ಭವೇತ್ತ್ಯಾಗೀ ನ ಯೋ ಹಿತ್ವಾ ಪ್ರತಿಷ್ಠತೇ||

ಬಹಿರಂಗವಾಗಿ ಮತ್ತು ಅಂತರಂಗವಾಗಿ ಮನಸ್ಸನ್ನು ಯಾವಾಗಲೂ ಸಂಗದಲ್ಲಿ ತೊಡಗಿಸುವಂತಹ ಅಹಂಕಾರ-ಮಮಕಾರಗಳನ್ನು ತೊರೆಯುವುದರಿಂದ ಮಾತ್ರ ತ್ಯಾಗೀ ಎನಿಸಿಕೊಳ್ಳುತ್ತಾನೆಯೇ ಹೊರತು ಕೇವಲ ಗೃಹಸ್ಥಾಶ್ರಮವನ್ನು ತೊರೆಯುವುದರಿಂದಲ್ಲ.

12012034a ಏತಸ್ಮಿನ್ವರ್ತಮಾನಸ್ಯ ವಿಧೌ ವಿಪ್ರನಿಷೇವಿತೇ|

12012034c ಬ್ರಾಹ್ಮಣಸ್ಯ ಮಹಾರಾಜ ನೋಚ್ಚಿತ್ತಿರ್ವಿದ್ಯತೇ ಕ್ವ ಚಿತ್||

ಮಹಾರಾಜ! ಇಂತಹ ಗೃಹಸ್ಥಾಶ್ರಮದಲ್ಲಿದ್ದುಕೊಂಡು ವೇದಪ್ರಣೀತವಾದ ಮತ್ತು ವಿಪ್ರರು ಗೌರವಿಸುವ ರೀತಿಯಲ್ಲಿ ನಡೆದುಕೊಂಡ ಬ್ರಾಹ್ಮಣನಿಗೆ ಎಂದೂ ಪತನವೆನ್ನುವುದಿರುವುದಿಲ್ಲ.

12012035a ನಿಹತ್ಯ ಶತ್ರೂಂಸ್ತರಸಾ ಸಮೃದ್ಧಾನ್

ಶಕ್ರೋ ಯಥಾ ದೈತ್ಯಬಲಾನಿ ಸಂಖ್ಯೇ|

12012035c ಕಃ ಪಾರ್ಥ ಶೋಚೇನ್ನಿರತಃ ಸ್ವಧರ್ಮೇ

ಪೂರ್ವೈಃ ಸ್ಮೃತೇ ಪಾರ್ಥಿವ ಶಿಷ್ಟಜುಷ್ಟೇ||

ಪಾರ್ಥ! ಯುದ್ಧದಲ್ಲಿ ಶಕ್ರನು ಹೇಗೆ ದೈತ್ಯಬಲಗಳನ್ನೋ ಹಾಗೆ ಸಮೃದ್ಧರಾಗಿದ್ದ ಶತ್ರುಗಳನ್ನು ಬೇಗನೆ ಸಂಹರಿಸಿ ಶೋಕಿಸುತ್ತಿರುವ ನಿನ್ನಂತೆ ಈ ಹಿಂದೆ ರಾಜರಿಗೆ ತಕ್ಕದೆನಿಸಿದ ಸ್ವಧರ್ಮದಲ್ಲಿ ನಿರತನಾಗಿದ್ದ ಯಾವ ರಾಜನು ತಾನೇ ಶೋಕಿಸಿದ್ದನು?

12012036a ಕ್ಷಾತ್ರೇಣ ಧರ್ಮೇಣ ಪರಾಕ್ರಮೇಣ

ಜಿತ್ವಾ ಮಹೀಂ ಮಂತ್ರವಿದ್ಭ್ಯಃ ಪ್ರದಾಯ|

12012036c ನಾಕಸ್ಯ ಪೃಷ್ಠೇಽಸಿ ನರೇಂದ್ರ ಗಂತಾ

ನ ಶೋಚಿತವ್ಯಂ ಭವತಾದ್ಯ ಪಾರ್ಥ||

ಪಾರ್ಥ! ನರೇಂದ್ರ! ಕ್ಷಾತ್ರಧರ್ಮದ ಪ್ರಕಾರ ಪರಾಕ್ರಮದಿಂದ ಈ ಮಹಿಯನ್ನು ಗೆದ್ದು, ಮಂತ್ರವತ್ತಾಗಿ ಅದನ್ನು ದ್ವಿಜರಿಗೆ ದಾನಮಾಡಿ, ನಾಕಕ್ಕಿಂತಲೂ ಮೇಲಿರುವ ಲೋಕಗಳಿಗೆ ಹೋಗುತ್ತೀಯೆ. ಆದುದರಿಂದ ನೀನು ಶೋಕಿಸುವ ಅವಶ್ಯಕತೆಯಿಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ನಕುಲವಾಕ್ಯೇ ದ್ವಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ನಕುಲವಾಕ್ಯ ಎನ್ನುವ ಹನ್ನೆರಡನೇ ಅಧ್ಯಾಯವು.

[1] ಸಾಧಾರಣವಾಗಿ ವಿರೋಧಕಂ ಎಂಬ ಶಬ್ಧಕ್ಕೆ ವಿರೋಧ ಅಥವಾ ತೊಂದರೆಯನ್ನುಂಟುಮಾಡುವುದು ಎಂಬ ಅರ್ಥವಿದೆ. ಆದರೆ ಈ ಶ್ಲೋಕದಲ್ಲಿ ಈ ಶಬ್ಧಕ್ಕೆ ವ್ಯಾಖ್ಯಾನಕಾರರು – ನಿಗಡಂ ವಿಶೇಷಣಂ ರೋಧಕಂ – ಸರಪಳಿಯಂತೆ ವಿಶೇಷವಾಗಿ ಬಂಧಿಸತಕ್ಕುದು – ಎಂಬ ಅರ್ಥವನ್ನು ಕೊಟ್ಟಿದ್ದಾರೆ. ಗೃಹಸ್ಥನಿಗೆ ಯಜ್ಞಕರ್ಮವು ಒಂದು ಬಂಧನ. ಮಾಡಲೇ ಬೇಕಾದ ಕರ್ಮ ಎಂದು ಅರ್ಥೈಸಿದ್ದಾರೆ.

Comments are closed.