ಶಾಂತಿ ಪರ್ವ: ರಾಜಧರ್ಮ ಪರ್ವ
೧೧
12011001 ಅರ್ಜುನ ಉವಾಚ
12011001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|
12011001c ತಾಪಸೈಃ ಸಹ ಸಂವಾದಂ ಶಕ್ರಸ್ಯ ಭರತರ್ಷಭ||
ಅರ್ಜುನನು ಹೇಳಿದನು: “ಭರತರ್ಷಭ! ಈ ವಿಷಯದಲ್ಲಿ ತಾಪಸರು ಮತ್ತು ಶಕ್ರನ ನಡುವೆ ನಡೆದ ಈ ಪುರಾತನ ಐತಿಹಾಸಿಕ ಸಂವಾದವನ್ನು ಉದಾಹರಿಸಿ ಹೇಳುತ್ತಾರೆ.
12011002a ಕೇ ಚಿದ್ಗೃಹಾನ್ಪರಿತ್ಯಜ್ಯ ವನಮಭ್ಯಗಮನ್ದ್ವಿಜಾಃ|
12011002c ಅಜಾತಶ್ಮಶ್ರವೋ ಮಂದಾಃ ಕುಲೇ ಜಾತಾಃ ಪ್ರವವ್ರಜುಃ||
ಹಿಂದೊಮ್ಮೆ ಉತ್ತಮ ಕುಲಗಳಲ್ಲಿ ಹುಟ್ಟಿದ್ದ, ಇನ್ನೂ ಗಡ್ಡ-ಮೀಸೆಗಳು ಹುಟ್ಟಿರದ ಮಂದಬುದ್ಧಿಯ ದ್ವಿಜರು ಮನೆಗಳನ್ನು ತೊರೆದು ವನದ ಕಡೆ ನಡೆದರು.
12011003a ಧರ್ಮೋಽಯಮಿತಿ ಮನ್ವಾನಾ ಬ್ರಹ್ಮಚರ್ಯೇ ವ್ಯವಸ್ಥಿತಾಃ|
12011003c ತ್ಯಕ್ತ್ವಾ ಗೃಹಾನ್ಪಿತೃಂಶ್ಚೈವ ತಾನಿಂದ್ರೋಽನ್ವಕೃಪಾಯತ||
ಮನೆ, ಮತ್ತು ತಂದೆ-ತಾಯಂದಿರನ್ನು ತೊರೆದು ಇದೇ ಧರ್ಮವೆಂದು ತಿಳಿದು ಅವರು ಬ್ರಹ್ಮಚರ್ಯದಲ್ಲಿ ನಿರತರಾಗಿದ್ದರು. ಇಂದ್ರನು ಅವರ ಮೇಲೆ ಕೃಪೆದೋರಿದನು.
12011004a ತಾನಾಬಭಾಷೇ ಭಗವಾನ್ಪಕ್ಷೀ ಭೂತ್ವಾ ಹಿರಣ್ಮಯಃ|
12011004c ಸುದುಷ್ಕರಂ ಮನುಷ್ಯೈಶ್ಚ ಯತ್ಕೃತಂ ವಿಘಸಾಶಿಭಿಃ||
12011005a ಪುಣ್ಯಂ ಚ ಬತ ಕರ್ಮೈಷಾಂ ಪ್ರಶಸ್ತಂ ಚೈವ ಜೀವಿತಮ್|
12011005c ಸಂಸಿದ್ಧಾಸ್ತೇ ಗತಿಂ ಮುಖ್ಯಾಂ ಪ್ರಾಪ್ತಾ ಧರ್ಮಪರಾಯಣಾಃ||
ಅವನು ಬಂಗಾರದ ಪಕ್ಷಿಯಾಗಿ ಅವರಿಗೆ ಹೇಳಿದನು: “ವಿಘಸ[1]ವನ್ನು ತಿನ್ನುವ ಮನುಷ್ಯರ ಜೀವನವನ್ನು ನಡೆಸುವುದು ತುಂಬಾ ಕಷ್ಟವಾದುದು. ಆದರೆ ಆವರ ಕರ್ಮಗಳು ಪುಣ್ಯಕರವೂ ಪ್ರಶಸ್ತ ಜೀವನವೂ ಅಲ್ಲವೇ? ಧರ್ಮಪರಾಯಣರಾದ ಅವರು ಸಿದ್ಧಿಗಳನ್ನು ಪಡೆದು ಶ್ರೇಷ್ಠ ಗತಿಯನ್ನು ಹೊಂದುತ್ತಾರೆ.”
12011006 ಋಷಯ ಊಚುಃ
12011006a ಅಹೋ ಬತಾಯಂ ಶಕುನಿರ್ವಿಘಸಾಶಾನ್ಪ್ರಶಂಸತಿ|
12011006c ಅಸ್ಮಾನ್ನೂನಮಯಂ ಶಾಸ್ತಿ ವಯಂ ಚ ವಿಘಸಾಶಿನಃ||
ಋಷಿಗಳು ಹೇಳಿದರು: “ಅಯ್ಯೋ! ಈ ಪಕ್ಷಿಯು ವಿಘಸವನ್ನು ಸೇವಿಸುವವರನ್ನು ಪ್ರಶಂಸಿಸುತ್ತಿದೆ! ನಾವೂ ವಿಘಸವನ್ನು ಸೇವಿಸುವರಾಗಬೇಕೆಂದು ಉಪದೇಶಿಸುತ್ತಿದೆ!”
12011007 ಶಕುನಿರುವಾಚ
12011007a ನಾಹಂ ಯುಷ್ಮಾನ್ಪ್ರಶಂಸಾಮಿ ಪಂಕದಿಗ್ಧಾನ್ರಜಸ್ವಲಾನ್|
12011007c ಉಚ್ಚಿಷ್ಟಭೋಜಿನೋ ಮಂದಾನನ್ಯೇ ವೈ ವಿಘಸಾಶಿನಃ||
ಪಕ್ಷಿಯು ಹೇಳಿತು: “ಕೆಸರಿನಿಂದಲೂ ಧೂಳಿನಿಂದಲೂ ಮುಚ್ಚಿರುವ ಪಕ್ಷಿಗಳ ಎಂಜಲನ್ನು ತಿನ್ನುವ ನಿಮ್ಮನ್ನು ನಾನು ಪ್ರಶಂಸಿಸುತ್ತಿಲ್ಲ! ಮೂಢರೇ! ವಿಘಸಾಶಿಗಳು ಬೇರೆಯೇ ಇದ್ದಾರೆ. ಅವರನ್ನು ನಾನು ಪ್ರಶಂಸಿಸುತ್ತಿದ್ದೇನೆ!”
12011008 ಋಷಯ ಊಚುಃ
12011008a ಇದಂ ಶ್ರೇಯಃ ಪರಮಿತಿ ವಯಮೇವಾಭ್ಯುಪಾಸ್ಮಹೇ|
12011008c ಶಕುನೇ ಬ್ರೂಹಿ ಯಚ್ಚ್ರೇಯೋ ಭೃಶಂ ವೈ ಶ್ರದ್ದಧಾಮ ತೇ||
ಋಷಿಗಳು ಹೇಳಿದರು: “ಇದೇ ಪರಮ ಶ್ರೇಯಸ್ಕರವೆಂದು ನಾವು ಈ ಜೀವನವನ್ನು ನಡೆಸುತ್ತಿರುವೆವು. ಪಕ್ಷಿಯೇ! ಇದಕ್ಕಿಂತಲೂ ಶ್ರೇಯಸ್ಕರವಾದುದಿದ್ದರೆ ಹೇಳು. ನಿನ್ನ ಮಾತಿನ ಮೇಲೆ ನಮಗೆ ಶ್ರದ್ಧೆಯಿದೆ!”
12011009 ಶಕುನಿರುವಾಚ
12011009a ಯದಿ ಮಾಂ ನಾಭಿಶಂಕಧ್ವಂ ವಿಭಜ್ಯಾತ್ಮಾನಮಾತ್ಮನಾ|
12011009c ತತೋಽಹಂ ವಃ ಪ್ರವಕ್ಷ್ಯಾಮಿ ಯಾಥಾತಥ್ಯಂ ಹಿತಂ ವಚಃ||
ಪಕ್ಷಿಯು ಹೇಳಿತು: “ನನ್ನ ಮಾತನ್ನು ನೀವು ಶಂಕಿಸದಿದ್ದರೆ ನನ್ನಲ್ಲಿ ನಾನೇ ಯೋಚಿಸಿ ವಿಭಜಿಸಿ ನಿಮಗೆ ಒಳ್ಳೆಯದಾಗುವಂತಹ ಹಿತವಚನವನ್ನು ಹೇಳುತ್ತೇನೆ. ಕೇಳಿ!”
12011010 ಋಷಯ ಊಚುಃ
12011010a ಶೃಣುಮಸ್ತೇ ವಚಸ್ತಾತ ಪಂಥಾನೋ ವಿದಿತಾಸ್ತವ|
12011010c ನಿಯೋಗೇ ಚೈವ ಧರ್ಮಾತ್ಮನ್ ಸ್ಥಾತುಮಿಚ್ಚಾಮ ಶಾಧಿ ನಃ||
ಋಷಿಗಳು ಹೇಳಿದರು: “ಅಯ್ಯಾ! ನಾವು ನಿನ್ನ ಮಾತನ್ನು ಕೇಳುತ್ತೇವೆ! ನಿನಗೆ ಸಿದ್ಧಿಸಾಧಕ ಮಾರ್ಗಗಳು ತಿಳಿದಿವೆ. ಧರ್ಮಾತ್ಮನ್! ನಮಗೆ ಉಪದೇಶಿಸು. ಅದರಂತೆಯೇ ನಾವು ನಡೆದುಕೊಳ್ಳಲು ಬಯಸುತ್ತೇವೆ.”
12011011 ಶಕುನಿರುವಾಚ
12011011a ಚತುಷ್ಪದಾಂ ಗೌಃ ಪ್ರವರಾ ಲೋಹಾನಾಂ ಕಾಂಚನಂ ವರಮ್|
12011011c ಶಬ್ದಾನಾಂ ಪ್ರವರೋ ಮಂತ್ರೋ ಬ್ರಾಹ್ಮಣೋ ದ್ವಿಪದಾಂ ವರಃ||
ಪಕ್ಷಿಯು ಹೇಳಿತು: “ನಾಲ್ಕು ಕಾಲುಗಳಿರುವ ಪ್ರಾಣಿಗಳಲ್ಲಿ ಗೋವು ಶ್ರೇಷ್ಠವಾದುದು. ಲೋಹಗಳಲ್ಲಿ ಚಿನ್ನವು ಶ್ರೇಷ್ಠವಾದುದು. ಶಬ್ಧಗಳಲ್ಲಿ ಮಂತ್ರವು ಶ್ರೇಷ್ಠವಾದುದು. ಮತ್ತು ಎರಡು ಕಾಲಿರುವ ಮನುಷ್ಯರಲ್ಲಿ ಬ್ರಾಹ್ಮಣರು ಶ್ರೇಷ್ಠ.
12011012a ಮಂತ್ರೋಽಯಂ ಜಾತಕರ್ಮಾದಿ ಬ್ರಾಹ್ಮಣಸ್ಯ ವಿಧೀಯತೇ|
12011012c ಜೀವತೋ ಯೋ ಯಥಾಕಾಲಂ ಶ್ಮಶಾನನಿಧನಾದಿತಿ||
ಬ್ರಾಹ್ಮಣನಿಗೆ ಮಂತ್ರಪೂರ್ವಕವಾದ ಜಾತಕರ್ಮಾದಿ ಸಂಸ್ಕಾರಗಳಿವೆ. ಅವನು ಜೀವಿಸಿರುವಾಗ ಯಥಾಕಾಲದಲ್ಲಿ ಮತ್ತು ನಿಧನದ ನಂತರ ಶ್ಮಶಾನದಲ್ಲಿಯೂ ವಿವಿಧ ಸಂಸ್ಕಾರಗಳಿವೆ.
12011013a ಕರ್ಮಾಣಿ ವೈದಿಕಾನ್ಯಸ್ಯ ಸ್ವರ್ಗ್ಯಃ ಪಂಥಾಸ್ತ್ವನುತ್ತಮಃ|
12011013c ಅಥ ಸರ್ವಾಣಿ ಕರ್ಮಾಣಿ ಮಂತ್ರಸಿದ್ಧಾನಿ ಚಕ್ಷತೇ||
ಬ್ರಾಹ್ಮಣರಿಗೆ ವೈದಿಕ ಕರ್ಮಗಳೇ ಸ್ವರ್ಗದ ಉತ್ತಮ ಮಾರ್ಗವು. ಅವನ ಸರ್ವ ಕರ್ಮಗಳೂ ಮಂತ್ರಸಿದ್ಧ ಎಂದು ಹೇಳುತ್ತಾರೆ.
12011014a ಆಮ್ನಾಯದೃಢವಾದೀನಿ ತಥಾ ಸಿದ್ಧಿರಿಹೇಷ್ಯತೇ|
12011014c ಮಾಸಾರ್ಧಮಾಸಾ ಋತವ ಆದಿತ್ಯಶಶಿತಾರಕಮ್||
12011015a ಈಹಂತೇ ಸರ್ವಭೂತಾನಿ ತದೃತಂ ಕರ್ಮಸಂಗಿನಾಮ್|
12011015c ಸಿದ್ಧಿಕ್ಷೇತ್ರಮಿದಂ ಪುಣ್ಯಮಯಮೇವಾಶ್ರಮೋ ಮಹಾನ್||
ವೇದಗಳು ಇವನ್ನು ದೃಢಪಡಿಸಿವೆ. ಇವುಗಳಿಂದಲೇ ಸಿದ್ಧಿಯೂ ದೊರೆಯುತ್ತದೆ. ಮಾಸ, ಪಕ್ಷ, ಋತು, ಸೂರ್ಯ, ಚಂದ್ರ, ನಕ್ಷತ್ರಗಳು ಸೂಚಿಸುವ ಯಜ್ಞಗಳನ್ನು ಮಾಡಲು ಎಲ್ಲ ಪ್ರಾಣಿಗಳೂ ಇಚ್ಛಿಸುತ್ತವೆ. ಆದುದರಿಂದ ಕರ್ಮಸಂಗಿಗಳ ಗೃಹಸ್ಥಾಶ್ರಮವೇ ಸಿದ್ಧಿಕ್ಷೇತ್ರವೆಂದೂ ಮಹಾ ಪುಣ್ಯಮಯವೆಂದೂ ಹೇಳುತ್ತಾರೆ.
12011016a ಅಥ ಯೇ ಕರ್ಮ ನಿಂದಂತೋ ಮನುಷ್ಯಾಃ ಕಾಪಥಂ ಗತಾಃ|
12011016c ಮೂಢಾನಾಮರ್ಥಹೀನಾನಾಂ ತೇಷಾಮೇನಸ್ತು ವಿದ್ಯತೇ||
ಕರ್ಮವನ್ನು ನಿಂದಿಸಿ ಕೆಟ್ಟದಾರಿಯಲ್ಲಿ ಹೋಗುವ ಮೂಢ ಮನುಷ್ಯರು ಅರ್ಥಹೀನರಾಗುತ್ತಾರೆ ಎಂದು ತಿಳಿಯಬೇಕು.
12011017a ದೇವವಂಶಾನ್ಪಿತೃವಂಶಾನ್ಬ್ರಹ್ಮವಂಶಾಂಶ್ಚ ಶಾಶ್ವತಾನ್|
12011017c ಸಂತ್ಯಜ್ಯ ಮೂಢಾ ವರ್ತಂತೇ ತತೋ ಯಾಂತ್ಯಶ್ರುತೀಪಥಮ್||
ಮೂಢರು ಶಾಶ್ವತರಾದ ದೇವವಂಶಗಳನ್ನು, ಪಿತೃವಂಶಗಳನ್ನು ಮತ್ತು ಬ್ರಹ್ಮವಂಶಗಳನ್ನು ತೃಪ್ತಿಪಡಿಸುವುದನ್ನು ಬಿಟ್ಟು ತಮ್ಮ ವರ್ತನೆಗಳಿಂದ ಶೃತಿಗಳಿಗೆ ವಿರುದ್ಧ ಮಾರ್ಗದಲ್ಲಿ ಹೋಗುತ್ತಾರೆ.
12011018a ಏತದ್ವೋಽಸ್ತು ತಪೋ ಯುಕ್ತಂ ದದಾನೀತ್ಯೃಷಿಚೋದಿತಮ್|
12011018c ತಸ್ಮಾತ್ತದಧ್ಯವಸತಸ್ತಪಸ್ವಿ ತಪ ಉಚ್ಯತೇ||
ಋಷಿಗಳು ಹಾಕಿಕೊಟ್ಟಿರುವ ಇದೇ ತಪೋಯುಕ್ತವೆನಿಸುತ್ತದೆ. ಅದರಲ್ಲಿಯೇ ನಿರತನಾಗಿರುವವನಿಗೆ ತಪಸ್ವಿ ಮತ್ತು ತಪಸ್ಸು ಎಂದು ಹೇಳುತ್ತಾರೆ.
12011019a ದೇವವಂಶಾನ್ಪಿತೃವಂಶಾನ್ಬ್ರಹ್ಮವಂಶಾಂಶ್ಚ ಶಾಶ್ವತಾನ್|
12011019c ಸಂವಿಭಜ್ಯ ಗುರೋಶ್ಚರ್ಯಾಂ ತದ್ವೈ ದುಷ್ಕರಮುಚ್ಯತೇ||
ಶಾಶ್ವತ ದೇವವಂಶಗಳನ್ನೂ, ಪಿತೃವಂಶಗಳನ್ನೂ ಮತ್ತು ಬ್ರಹ್ಮವಂಶಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ತೃಪ್ತಿಪಡಿಸುವುದು ದುಷ್ಕರವೆಂದು ಗುರುಗಳು ಹೇಳುತ್ತಾರೆ[2].
12011020a ದೇವಾ ವೈ ದುಷ್ಕರಂ ಕೃತ್ವಾ ವಿಭೂತಿಂ ಪರಮಾಂ ಗತಾಃ|
12011020c ತಸ್ಮಾದ್ಗಾರ್ಹಸ್ಥ್ಯಮುದ್ವೋಢುಂ ದುಷ್ಕರಂ ಪ್ರಬ್ರವೀಮಿ ವಃ||
ಇಂತಹ ದುಷ್ಕರ ಕರ್ಮಗಳನ್ನು ಮಾಡಿಯೇ ದೇವತೆಗಳು ಶ್ರೇಷ್ಠ ವೈಭವವನ್ನು ಪಡೆದಿರುತ್ತಾರೆ. ಆದುದರಿಂದ ದುಷ್ಕರವಾದರೂ ಗಾರ್ಹಸ್ಥ್ಯಧರ್ಮವು ಹೆಚ್ಚಿನದೆಂದು ನಾನು ಹೇಳುತ್ತಿದ್ದೇನೆ.
12011021a ತಪಃ ಶ್ರೇಷ್ಠಂ ಪ್ರಜಾನಾಂ ಹಿ ಮೂಲಮೇತನ್ನ ಸಂಶಯಃ|
12011021c ಕುಟುಂಬವಿಧಿನಾನೇನ ಯಸ್ಮಿನ್ಸರ್ವಂ ಪ್ರತಿಷ್ಠಿತಮ್||
ಇಂತಹ ಗೃಹಸ್ಥಾಶ್ರಮದ ತಪಸ್ಸೇ ಶ್ರೇಷ್ಠವಾದುದು ಮತ್ತು ಪ್ರಜೆಗಳ ಹಿತಸಾಧನೆಗೆ ಮೂಲಕಾರಣ ಎನ್ನುವುದರಲ್ಲಿ ಸಂಶಯವಿಲ್ಲ. ಎಲ್ಲ ಕುಟುಂಬವಿಧಿಗಳೂ ಈ ಗೃಹಸ್ಥಾಶ್ರಮದಲ್ಲಿಯೇ ಪ್ರತಿಷ್ಠಿತವಾಗಿವೆ.
12011022a ಏತದ್ವಿದುಸ್ತಪೋ ವಿಪ್ರಾ ದ್ವಂದ್ವಾತೀತಾ ವಿಮತ್ಸರಾಃ|
12011022c ತಸ್ಮಾದ್ವನಂ ಮಧ್ಯಮಂ ಚ ಲೋಕೇಷು ತಪ ಉಚ್ಯತೇ||
ಶೀತೋಷ್ಣ-ಸುಖದುಃಖಗಳೆಂಬ ದ್ವಂದ್ವಗಳಿಗೆ ಅತೀತರಾದ ಮತ್ತು ಮತ್ಸರ ರಹಿತರಾದ ವಿಪ್ರರು ಗೃಹಸ್ಥಾಶ್ರಮವನ್ನೇ ತಪಸ್ಸೆಂದು ಪರಿಗಣಿಸುತ್ತಾರೆ. ಆದುದರಿಂದ ಈ ಮಧ್ಯಮವ್ರತವನ್ನೇ ತಪಸ್ಸೆಂದು ಲೋಕಗಳು ಹೇಳುತ್ತವೆ.
12011023a ದುರಾಧರ್ಷಂ ಪದಂ ಚೈವ ಗಚ್ಚಂತಿ ವಿಘಸಾಶಿನಃ|
12011023c ಸಾಯಂಪ್ರಾತರ್ವಿಭಜ್ಯಾನ್ನಂ ಸ್ವಕುಟುಂಬೇ ಯಥಾವಿಧಿ||
12011024a ದತ್ತ್ವಾತಿಥಿಭ್ಯೋ ದೇವೇಭ್ಯಃ ಪಿತೃಭ್ಯಃ ಸ್ವಜನಸ್ಯ ಚ|
12011024c ಅವಶಿಷ್ಟಾನಿ ಯೇಽಶ್ನಂತಿ ತಾನಾಹುರ್ವಿಘಸಾಶಿನಃ||
ವಿಘಸಾಶಿಗಳು ಸಾಮಾನ್ಯರು ಜಯಿಸಲು ಅಸಾಧ್ಯವಾದ ಪುಣ್ಯಲೋಕಗಳಿಗೆ ಹೋಗುತ್ತಾರೆ. ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ತಮ್ಮ ಕುಟುಂಬದಲ್ಲಿ ಯಥಾವಿಧಿಯಾಗಿ ಆಹಾರವನ್ನು ವಿಭಾಗಿಸಿ, ದೇವ-ಪಿತೃಗಳಿಗೆ ನಿವೇದನೆ ಮಾಡಿ, ಅತಿಥಿಗಳಿಗೂ ಮತ್ತು ಬಂಧುವರ್ಗದವರಿಗೂ ಭೋಜನಮಾಡಿಸಿ ಉಳಿದುದನ್ನು ಯಾರು ತಿನ್ನುತ್ತಾರೆಯೋ ಅವರನ್ನೇ ವಿಘಸಾಶಿಗಳೆಂದು ಕರೆಯುತ್ತಾರೆ.
12011025a ತಸ್ಮಾತ್ಸ್ವಧರ್ಮಮಾಸ್ಥಾಯ ಸುವ್ರತಾಃ ಸತ್ಯವಾದಿನಃ|
12011025c ಲೋಕಸ್ಯ ಗುರವೋ ಭೂತ್ವಾ ತೇ ಭವಂತ್ಯನುಪಸ್ಕೃತಾಃ||
ಆದುದರಿಂದ ಸುವ್ರತ ಸತ್ಯವಾದೀ ವಿಘಸಾಶಿಗಳು ಸ್ವಧರ್ಮದಲ್ಲಿಯೇ ನಿರತರಾಗಿದ್ದುಕೊಂಡು ಯಾವುದೇ ಸಂಶಯಗಳಿಲ್ಲದೇ, ಲೋಕದ ಗುರುಗಳಾಗಿ ವಿರಾಜಿಸುತ್ತಾರೆ.
12011026a ತ್ರಿದಿವಂ ಪ್ರಾಪ್ಯ ಶಕ್ರಸ್ಯ ಸ್ವರ್ಗಲೋಕೇ ವಿಮತ್ಸರಾಃ|
12011026c ವಸಂತಿ ಶಾಶ್ವತೀರ್ವರ್ಷಾ ಜನಾ ದುಷ್ಕರಕಾರಿಣಃ||
ಮಾತ್ಸರ್ಯವಿಲ್ಲದೇ ಇಂತಹ ದುಷ್ಕರ ಗ್ರಹಸ್ಥಾಶ್ರಮಧರ್ಮವನ್ನು ಅನುಸರಿಸಿ ಈ ವಿಘಸಾಶಿಗಳು ತ್ರಿದಿವವನ್ನು ಸೇರಿ ಶಕ್ರನ ಸ್ವರ್ಗಲೋಕದಲ್ಲಿ ಶಾಶ್ವತಕಾಲಗಳ ಪರ್ಯಂತ ವಾಸಮಾಡುತ್ತಾರೆ.”
12011027a ತತಸ್ತೇ ತದ್ವಚಃ ಶ್ರುತ್ವಾ ತಸ್ಯ ಧರ್ಮಾರ್ಥಸಂಹಿತಮ್|
12011027c ಉತ್ಸೃಜ್ಯ ನಾಸ್ತಿಕಗತಿಂ ಗಾರ್ಹಸ್ಥ್ಯಂ ಧರ್ಮಮಾಶ್ರಿತಾಃ||
ಆ ಪಕ್ಷಿಯ ಧರ್ಮಾರ್ಥಗಳಿಂದ ಕೂಡಿದ ಮಾತುಗಳನ್ನು ಕೇಳಿ ಆ ಬ್ರಾಹ್ಮಣರು ನಾಸ್ತಿಕಗತಿಯನ್ನು ಬಿಟ್ಟು ಗೃಹಸ್ಥಧರ್ಮವನ್ನು ಆಶ್ರಯಿಸಿದರು.
12011028a ತಸ್ಮಾತ್ತ್ವಮಪಿ ದುರ್ಧರ್ಷ ಧೈರ್ಯಮಾಲಂಬ್ಯ ಶಾಶ್ವತಮ್|
12011028c ಪ್ರಶಾಧಿ ಪೃಥಿವೀಂ ಕೃತ್ಸ್ನಾಂ ಹತಾಮಿತ್ರಾಂ ನರೋತ್ತಮ||
ನರೋತ್ತಮ! ದುರ್ಧರ್ಷ! ನೀನೂ ಕೂಡ ಧೈರ್ಯವನ್ನು ತಾಳಿ ಶತ್ರುಗಳಿಂದ ರಹಿತವಾಗಿರುವ ಈ ಇಡೀ ಭೂಮಿಯನ್ನು ಆಳು!””
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ಋಷಿಶಕುನಿಸಂವಾದಕಥನೇ ಏಕಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನವಾಕ್ಯೇ ಋಷಿ-ಶಕುನಿಸಂವಾದಕಥನ ಎನ್ನುವ ಹನ್ನೊಂದನೇ ಅಧ್ಯಾಯವು.
[1] ವಿಘಸ ಎಂದರೆ ಯಜ್ಞಶೇಷ ಅಥವಾ ಭೋಜನ ಶೇಷ. ಯಜ್ಞಮಾಡಿ ಹೋಮಶೇಷವನ್ನು ಪ್ರಸಾದರೂಪವಾಗಿ ಉಣ್ಣುವವರು ಮತ್ತು ಅತಿಥಿ-ಅಭ್ಯಾಗತರನ್ನು ಸತ್ಕರಿಸಿ ಭೋಜನ ನೀಡಿ ನಂತರ ಉಳಿದ ಅನ್ನವನ್ನು ಭಕ್ಷಿಸುವವರು ವಿಘಸಾಶಿಗಳು. ವಿಘಸವು ಅಮೃತಸಮಾನ – ಅಮೃತಂ ವಿಘಸೋ ಯಜ್ಞ ಶೇಷಭೋಜನ ಶೇಷಯೋಃ|| (ಅಮರ ಕೋಶ)
[2] ದಿನದ ಕಾಲವನ್ನು ವಿಭಜಿಸಿ ಯಜ್ಞಗಳ ಮೂಲಕ ದೇವತೆಗಳನ್ನು, ಸ್ವಾಧ್ಯಾಯ-ಬ್ರಹ್ಮಯಜ್ಞಾದಿಗಳ ಮೂಲಕ ಬ್ರಹ್ಮವಂಶೀಯ ಋಷಿಗಳನ್ನೂ, ಮತ್ತು ಶ್ರಾದ್ಧ-ತರ್ಪಣಾದಿಗಳ ಮೂಲಕ ಪಿತೃಗಳನ್ನೂ ತೃಪ್ತಿಪಡಿಸುವುದು ಮತ್ತು ಗುರುಶುಶ್ರೂಷೆಮಾಡುವುದು ದುಷ್ಕರವೆಂದು ವಿಧ್ವಾಂಸರು ಹೇಳುತ್ತಾರೆ.