ಶಾಂತಿ ಪರ್ವ: ರಾಜಧರ್ಮ ಪರ್ವ

೧೦

12010001 ಭೀಮ ಉವಾಚ

12010001a ಶ್ರೋತ್ರಿಯಸ್ಯೇವ ತೇ ರಾಜನ್ಮಂದಕಸ್ಯಾವಿಪಶ್ಚಿತಃ|

12010001c ಅನುವಾಕಹತಾಬುದ್ಧಿರ್ನೈಷಾ ತತ್ತ್ವಾರ್ಥದರ್ಶಿನೀ||

ಭೀಮಸೇನನು ಹೇಳಿದನು: “ರಾಜನ್! ಶ್ರೋತ್ರಿಯಂತೆಯೇ ನಿನ್ನ ಬುದ್ಧಿಯೂ ಮಂದವಾಗಿಹೋಗಿದೆ! ತತ್ತ್ವಾರ್ಥಗಳನ್ನು ತಿಳಿಯದೇ ಕೇವಲ ಪಠಣಮಾಡುವವನ ಬುದ್ಧಿಯಂತಾಗಿದೆ ನಿನ್ನ ಬುದ್ಧಿಯೂ ಕೂಡ!

12010002a ಆಲಸ್ಯೇ ಕೃತಚಿತ್ತಸ್ಯ ರಾಜಧರ್ಮಾನಸೂಯತಃ|

12010002c ವಿನಾಶೇ ಧಾರ್ತರಾಷ್ಟ್ರಾಣಾಂ ಕಿಂ ಫಲಂ ಭರತರ್ಷಭ||

ಭರತರ್ಷಭ! ರಾಜಧರ್ಮವನ್ನು ನಿಂದಿಸಿ ಆಲಸ್ಯದ ಜೀವನವನ್ನು ನಡೆಸಲು ಯೋಚಿಸಿರುವ ನಿನಗೆ ಧಾರ್ತರಾಷ್ಟ್ರರ ವಿನಾಶದಿಂದ ಯಾವ ಫಲವುಂಟಾಯಿತು?

12010003a ಕ್ಷಮಾನುಕಂಪಾ ಕಾರುಣ್ಯಮಾನೃಶಂಸ್ಯಂ ನ ವಿದ್ಯತೇ|

12010003c ಕ್ಷಾತ್ರಮಾಚರತೋ ಮಾರ್ಗಮಪಿ ಬಂಧೋಸ್ತ್ವದಂತರೇ||

ಕ್ಷತ್ರಧರ್ಮವನ್ನು ಆಚರಿಸುವವನ ಮಾರ್ಗದಲ್ಲಿ ಬಂಧುಗಳ ಕುರಿತು ಕ್ಷಮೆ, ಅನುಕಂಪ, ಕಾರುಣ್ಯ, ಮತ್ತು ಮೃದುತ್ವಗಳು ಇರುವುದಿಲ್ಲ.

12010004a ಯದೀಮಾಂ ಭವತೋ ಬುದ್ಧಿಂ ವಿದ್ಯಾಮ ವಯಮೀದೃಶೀಮ್|

12010004c ಶಸ್ತ್ರಂ ನೈವ ಗ್ರಹೀಷ್ಯಾಮೋ ನ ವಧಿಷ್ಯಾಮ ಕಂ ಚನ||

ನಿನ್ನ ಬುದ್ಧಿಯು ಈ ರೀತಿಯಿದೆಯೆಂದು ಮೊದಲೇ ನಮಗೆ ತಿಳಿದಿದ್ದರೆ ನಾವು ಶಸ್ತ್ರಗಳನ್ನು ಹಿಡಿಯುತ್ತಲೇ ಇರಲಿಲ್ಲ ಮತ್ತು ಯಾರೊಬ್ಬರನ್ನೂ ವಧಿಸುತ್ತಲೂ ಇರಲಿಲ್ಲ.

12010005a ಭೈಕ್ಷ್ಯಮೇವಾಚರಿಷ್ಯಾಮ ಶರೀರಸ್ಯಾ ವಿಮೋಕ್ಷಣಾತ್|

12010005c ನ ಚೇದಂ ದಾರುಣಂ ಯುದ್ಧಮಭವಿಷ್ಯನ್ಮಹೀಕ್ಷಿತಾಮ್||

ಈ ಶರೀರದ ವಿಮೋಚನೆಗಾಗಿ ಭಿಕ್ಷಾವೃತ್ತಿಯನ್ನೇ ಅನುಸರಿಸುತ್ತಿದ್ದೆವು. ಮಹೀಕ್ಷಿತರ ಈ ದಾರುಣ ಯುದ್ಧವೇ ನಡೆಯುತ್ತಿರಲಿಲ್ಲ.

12010006a ಪ್ರಾಣಸ್ಯಾನ್ನಮಿದಂ ಸರ್ವಮಿತಿ ವೈ ಕವಯೋ ವಿದುಃ|

12010006c ಸ್ಥಾವರಂ ಜಂಗಮಂ ಚೈವ ಸರ್ವಂ ಪ್ರಾಣಸ್ಯ ಭೋಜನಮ್||

ಇವೆಲ್ಲವೂ ಬಲಿಷ್ಠನಾದವನ ಅನ್ನವೆಂದು ತಿಳಿದವರು ಹೇಳುತ್ತಾರೆ. ಸ್ಥಾವರ-ಜಂಗಮಗಳೆಲ್ಲವೂ ಬಲಿಷ್ಠನ ಭೋಜನ!

12010007a ಆದದಾನಸ್ಯ ಚೇದ್ರಾಜ್ಯಂ ಯೇ ಕೇ ಚಿತ್ಪರಿಪಂಥಿನಃ|

12010007c ಹಂತವ್ಯಾಸ್ತ ಇತಿ ಪ್ರಾಜ್ಞಾಃ ಕ್ಷತ್ರಧರ್ಮವಿದೋ ವಿದುಃ||

ರಾಜ್ಯವನ್ನು ಸ್ವೀಕರಿಸುವಾಗ ವಿರೋಧಿಸುವವರನ್ನು ಸಂಹರಿಸಬೇಕೆಂದು ಕ್ಷತ್ರಧರ್ಮವನ್ನು ತಿಳಿದ ಪ್ರಾಜ್ಞರು ಹೇಳುತ್ತಾರೆ.

12010008a ತೇ ಸದೋಷಾ ಹತಾಸ್ಮಾಭೀ ರಾಜ್ಯಸ್ಯ ಪರಿಪಂಥಿನಃ|

12010008c ತಾನ್ಹತ್ವಾ ಭುಂಕ್ತ್ವ ಧರ್ಮೇಣ ಯುಧಿಷ್ಠಿರ ಮಹೀಮಿಮಾಮ್||

ರಾಜ್ಯವನ್ನು ಪಡೆದುಕೊಳ್ಳಲು ಅಡ್ಡಿಯನ್ನುಂಟುಮಾಡಿದ ವೈರಿಗಳನ್ನು ನಾವು ಸಂಹರಿಸಿದ್ದೇವೆ. ಯುಧಿಷ್ಠಿರ! ಧರ್ಮಪೂರ್ವಕವಾಗಿ ಅವರನ್ನು ಸಂಹರಿಸಿ ಪಡೆದ ಈ ಭೂಮಿಯನ್ನು ಭೋಗಿಸು!

12010009a ಯಥಾ ಹಿ ಪುರುಷಃ ಖಾತ್ವಾ ಕೂಪಮಪ್ರಾಪ್ಯ ಚೋದಕಮ್|

12010009c ಪಂಕದಿಗ್ಧೋ ನಿವರ್ತೇತ ಕರ್ಮೇದಂ ನಸ್ತಥೋಪಮಮ್||

ಬಾವಿಯನ್ನು ತೋಡಿ ನೀರನ್ನು ಪಡೆಯದೇ ಕೇವಲ ಕೆಸರನ್ನು ಮೈಗೆ ಹಚ್ಚಿಕೊಂಡು ಮೇಲೆ ಬಂದವನಂತೆ ನಮ್ಮ ಈ ಕರ್ಮವು ಆಗಬಾರದು!

12010010a ಯಥಾರುಹ್ಯ ಮಹಾವೃಕ್ಷಮಪಹೃತ್ಯ ತತೋ ಮಧು|

12010010c ಅಪ್ರಾಶ್ಯ ನಿಧನಂ ಗಚ್ಚೇತ್ಕರ್ಮೇದಂ ನಸ್ತಥೋಪಮಮ್||

ಮಹಾವೃಕ್ಷವನ್ನೇರಿ ಜೇನನ್ನು ಅಪಹರಿಸಿ ಅದನ್ನು ಸವಿಯುವ ಮೊದಲೇ ನಿಧನಹೊಂದಿದವನಂತೆ ನಮ್ಮ ಈ ಕರ್ಮವು ಆಗಬಾರದು!

12010011a ಯಥಾ ಮಹಾಂತಮಧ್ವಾನಮಾಶಯಾ ಪುರುಷಃ ಪತನ್|

12010011c ಸ ನಿರಾಶೋ ನಿವರ್ತೇತ ಕರ್ಮೇದಂ ನಸ್ತಥೋಪಮಮ್||

ಯಾವುದೋ ದೊಡ್ಡ ನಿಧಿಯು ಸಿಗುವ ಆಶಯದಿಂದ ಬಹುದೂರ ಹೋಗಿ ನಿರಾಶನಾಗಿ ಹಿಂದಿರುಗಿದವನಂತೆ ನಮ್ಮ ಈ ಕರ್ಮವು ಆಗದಿರಲಿ!

12010012a ಯಥಾ ಶತ್ರೂನ್ಘಾತಯಿತ್ವಾ ಪುರುಷಃ ಕುರುಸತ್ತಮ|

12010012c ಆತ್ಮಾನಂ ಘಾತಯೇತ್ಪಶ್ಚಾತ್ಕರ್ಮೇದಂ ನಸ್ತಥಾವಿಧಮ್||

ಕುರುಸತ್ತಮ! ಶತ್ರುಗಳನ್ನು ಸಂಹರಿಸಿ ನಂತರ ಆತ್ಮಹತ್ಯೆಯನ್ನು ಮಾಡಿಕೊಂಡವನಂತೆ ನಮ್ಮ ಈ ಕರ್ಮವು ಆಗದಿರಲಿ!

12010013a ಯಥಾನ್ನಂ ಕ್ಷುಧಿತೋ ಲಬ್ಧ್ವಾ ನ ಭುಂಜೀತ ಯದೃಚ್ಚಯಾ|

12010013c ಕಾಮೀ ಚ ಕಾಮಿನೀಂ ಲಬ್ಧ್ವಾ ಕರ್ಮೇದಂ ನಸ್ತಥಾವಿಧಮ್||

ಹಸಿವಿನಿಂದ ಬಳಲುತ್ತಿದ್ದವನು ಅನ್ನವನ್ನು ಪಡೆದು ತಿನ್ನಲು ಅಶಕ್ಯನಾದವನಂತೆ, ಕಾಮಿಯು ಕಾಮಿನಿಯನ್ನು ಪಡೆದೂ ಅವಳನ್ನು ಭೋಗಿಸಲು ಅಶಕ್ಯನಾದವನಂತೆ ನಮ್ಮ ಈ ಕರ್ಮವು ಆಗದಿರಲಿ!

12010014a ವಯಮೇವಾತ್ರ ಗರ್ಹ್ಯಾ ಹಿ ಯೇ ವಯಂ ಮಂದಚೇತಸಃ|

12010014c ತ್ವಾಂ ರಾಜನ್ನನುಗಚ್ಚಾಮೋ ಜ್ಯೇಷ್ಠೋಽಯಮಿತಿ ಭಾರತ||

ಭಾರತ! ರಾಜನ್! ಹಿರಿಯವನೆಂದು ತಿಳಿದು ಮಂದಚೇತಸನಾದ ನಿನ್ನನ್ನೇ ಅನುಸರಿಸಿ ಬರುತ್ತಿರುವ ನಾವೇ ನಿಂದನೀಯರು!

12010015a ವಯಂ ಹಿ ಬಾಹುಬಲಿನಃ ಕೃತವಿದ್ಯಾ ಮನಸ್ವಿನಃ|

12010015c ಕ್ಲೀಬಸ್ಯ ವಾಕ್ಯೇ ತಿಷ್ಠಾಮೋ ಯಥೈವಾಶಕ್ತಯಸ್ತಥಾ||

ಬಾಹುಬಲಿಗಳಾದ, ವಿದ್ಯಾವಂತರಾದ, ಜಿತೇಂದ್ರಿಯರಾದ ನಾವೂ ಕೂಡ ಓರ್ವ ಅಸಮರ್ಥ ನಪುಂಸಕನ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ!

12010016a ಅಗತೀನ್ಕಾಗತೀನಸ್ಮಾನ್ನಷ್ಟಾರ್ಥಾನರ್ಥಸಿದ್ಧಯೇ|

12010016c ಕಥಂ ವೈ ನಾನುಪಶ್ಯೇಯುರ್ಜನಾಃ ಪಶ್ಯಂತಿ ಯಾದೃಶಮ್||

ಅನಾಥರಕ್ಷಕರಾದ ನಾವು ಅರ್ಥಹೀನರಾಗಿರುವುದನ್ನು ಜನಗಳು ಹೇಗೆತಾನೇ ನೋಡದೇ ಇರುತ್ತಾರೆ? ಆದುದರಿಂದ ನಾನು ಹೇಳುವುದು ಯುಕ್ತವೋ ಅಯುಕ್ತವೋ ಎನ್ನುವುದನ್ನು ಎಲ್ಲರೂ ಯೋಚಿಸಿರಿ. ಸಮರ್ಥರಾದವರು ಸ್ವಾರ್ಥಸಿದ್ಧಿಗಾಗಿ ಪ್ರಯತ್ನಿಸಲೇ ಬೇಕೆಂದು ನನ್ನ ಅಭಿಪ್ರಾಯ!

12010017a ಆಪತ್ಕಾಲೇ ಹಿ ಸಂನ್ಯಾಸಃ ಕರ್ತವ್ಯ ಇತಿ ಶಿಷ್ಯತೇ|

12010017c ಜರಯಾಭಿಪರೀತೇನ ಶತ್ರುಭಿರ್ವ್ಯಂಸಿತೇನ ಚ||

ಆಪತ್ಕಾಲದಲ್ಲಿ ಮಾತ್ರ ಸಂನ್ಯಾಸವನ್ನು ತೆಗೆದುಕೊಳ್ಳಬೇಕೆಂದು ಉಪದೇಶವಿದೆ. ಮುಪ್ಪಿನಿಂದ ಗಲಿತ ಶರೀರವುಳ್ಳವನೂ, ಶತ್ರುಗಳಿಂದ ವಂಚಿತನಾದವನೂ ಸಂನ್ಯಾಸವನ್ನು ತೆಗೆದುಕೊಳ್ಳಬಹುದು.

12010018a ತಸ್ಮಾದಿಹ ಕೃತಪ್ರಜ್ಞಾಸ್ತ್ಯಾಗಂ ನ ಪರಿಚಕ್ಷತೇ|

12010018c ಧರ್ಮವ್ಯತಿಕ್ರಮಂ ಚೇದಂ ಮನ್ಯಂತೇ ಸೂಕ್ಷ್ಮದರ್ಶಿನಃ||

ಆದುದರಿಂದ ಕೃತಪ್ರಜ್ಞರು ಇದನ್ನು ತ್ಯಾಗವೆಂದು ಪರಿಗಣಿಸುವುದಿಲ್ಲ. ಸೂಕ್ಷ್ಮದರ್ಶಿಗಳು ಇದನ್ನು ಧರ್ಮದ ಅತಿಕ್ರಮವೆಂದೇ ತಿಳಿಯುತ್ತಾರೆ.

12010019a ಕಥಂ ತಸ್ಮಾತ್ಸಮುತ್ಪನ್ನಸ್ತನ್ನಿಷ್ಠಸ್ತದುಪಾಶ್ರಯಃ|

12010019c ತದೇವ ನಿಂದನ್ನಾಸೀತ ಶ್ರದ್ಧಾ ವಾನ್ಯತ್ರ ಗೃಹ್ಯತೇ||

ಅದರಲ್ಲಿಯೇ ಹುಟ್ಟಿ, ಅದರಲ್ಲಿಯೇ ನಿರತನಾಗಿದ್ದುಕೊಂಡಿರುವ, ಮತ್ತು ಅದನ್ನು ಆಶ್ರಯಿಸಿಯೇ ಜೀವಿಸುತ್ತಿರುವ ಯಾರು ತಾನೇ ಕ್ಷತ್ರಿಯ ಧರ್ಮವನ್ನು ನಿಂದಿಸಬಹುದು? ಅವನಲ್ಲಿ ಶ್ರದ್ಧೆಯಿಲ್ಲವೆಂದಾಯಿತಲ್ಲವೇ?

12010020a ಶ್ರಿಯಾ ವಿಹೀನೈರಧನೈರ್ನಾಸ್ತಿಕೈಃ ಸಂಪ್ರವರ್ತಿತಮ್|

12010020c ವೇದವಾದಸ್ಯ ವಿಜ್ಞಾನಂ ಸತ್ಯಾಭಾಸಮಿವಾನೃತಮ್||

ಶ್ರೀಯಿಂದ ವಿಹೀನರಾದವರು, ನಿರ್ಧನರು ಮತ್ತು ನಾಸ್ತಿಕರಿಂದ ಸುತ್ತುವರೆಯಲ್ಪಟ್ಟವರು ವೇದವಾಕ್ಯವಾದ ವಿಜ್ಞಾನವನ್ನು ಸತ್ಯದ ಅಭಾಸವೆಂದೂ ಸುಳ್ಳೆಂದೂ ಪ್ರಚಾರಮಾಡುತ್ತಾರೆ.

12010021a ಶಕ್ಯಂ ತು ಮೌಂಡ್ಯಮಾಸ್ಥಾಯ ಬಿಭ್ರತಾತ್ಮಾನಮಾತ್ಮನಾ|

12010021c ಧರ್ಮಚ್ಚದ್ಮ ಸಮಾಸ್ಥಾಯ ಆಸಿತುಂ ನ ತು ಜೀವಿತುಮ್||

ಮುಂಡನಾಗಿ ಧರ್ಮದ ಸೋಗನ್ನು ಹಾಕಿಕೊಂಡು ತನ್ನ ಹೊಟ್ಟೆಯನ್ನು ಮಾತ್ರ ಹೊರೆದುಕೊಳ್ಳುತ್ತಾ ಇರಬಹುದು. ಆದರೆ ಇದರಿಂದ ಕಾಲಕಳೆಯಬಹುದೇ ಹೊರತು ಜೀವನದ ಸಾರ್ಥಕ್ಯವನ್ನು ಹೊಂದಲು ಸಾಧ್ಯವಾಗುವುದಿಲ್ಲ.

12010022a ಶಕ್ಯಂ ಪುನರರಣ್ಯೇಷು ಸುಖಮೇಕೇನ ಜೀವಿತುಮ್|

12010022c ಅಬಿಭ್ರತಾ ಪುತ್ರಪೌತ್ರಾನ್ದೇವರ್ಷೀನತಿಥೀನ್ಪಿತೃನ್||

ಪುತ್ರ-ಪೌತ್ರರನ್ನು ಸಾಕಲಾಗದವನು ಮತ್ತು ದೇವರ್ಷಿ-ಅತಿಥಿ-ಪಿತೃಗಳನ್ನು ತೃಪ್ತಿಪಡಿಸಲಾಗದವನು ಏಕಾಕಿಯಾಗಿ ಅರಣ್ಯದಲ್ಲಿ ಸುಖವಾಗಿ ಜೀವಿಸಬಹುದು.

12010023a ನೇಮೇ ಮೃಗಾಃ ಸ್ವರ್ಗಜಿತೋ ನ ವರಾಹಾ ನ ಪಕ್ಷಿಣಃ|

12010023c ಅಥೈತೇನ ಪ್ರಕಾರೇಣ ಪುಣ್ಯಮಾಹುರ್ನ ತಾನ್ಜನಾಃ||

ಅರಣ್ಯದಲ್ಲಿ ಜೀವಿಸುವುದರಿಂದ ಮಾತ್ರಕ್ಕೆ ಸ್ವರ್ಗವು ದೊರೆಯುವುದಿಲ್ಲ. ಹಾಗಿದ್ದರೆ ಅರಣ್ಯದಲ್ಲಿ ವಾಸಿಸುವ ಜಿಂಕೆ-ಹಂದಿ-ಪಕ್ಷಿಗಳು ಅದೇ ಪ್ರಕಾರವಾಗಿ ಪುಣ್ಯವಂತರೆಂದು ಜನರು ಹೇಳುತ್ತಿದ್ದರು.

12010024a ಯದಿ ಸಂನ್ಯಾಸತಃ ಸಿದ್ಧಿಂ ರಾಜನ್ಕಶ್ಚಿದವಾಪ್ನುಯಾತ್|

12010024c ಪರ್ವತಾಶ್ಚ ದ್ರುಮಾಶ್ಚೈವ ಕ್ಷಿಪ್ರಂ ಸಿದ್ಧಿಮವಾಪ್ನುಯುಃ||

ರಾಜನ್! ಒಂದು ವೇಳೆ ಸಂನ್ಯಾಸದಿಂದ ಸಿದ್ಧಿಯು ದೊರಕುತ್ತದೆಯೆಂತಾದರೆ ಪರ್ವತ-ವೃಕ್ಷಗಳು ಕ್ಷಿಪ್ರವಾಗಿ ಸಿದ್ಧಿಯನ್ನು ಪಡೆದುಕೊಂಡು ಬಿಡುತ್ತಿದ್ದವು!

12010025a ಏತೇ ಹಿ ನಿತ್ಯಸಂನ್ಯಾಸಾ ದೃಶ್ಯಂತೇ ನಿರುಪದ್ರವಾಃ|

12010025c ಅಪರಿಗ್ರಹವಂತಶ್ಚ ಸತತಂ ಚಾತ್ಮಚಾರಿಣಃ||

ಇವುಗಳು ನಿತ್ಯ ಸಂನ್ಯಾಸಿಗಳಂತೆಯೇ ತೋರುತ್ತವೆ. ಯಾರಿಗೂ ಉಪದ್ರವವನ್ನು ಕೊಡುವುದಿಲ್ಲ. ಯಾರಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಸತತವೂ ಆತ್ಮವ್ರತದಲ್ಲಿಯೇ ಇರುತ್ತವೆ.

12010026a ಅಥ ಚೇದಾತ್ಮಭಾಗ್ಯೇಷು ನಾನ್ಯೇಷಾಂ ಸಿದ್ಧಿಮಶ್ನುತೇ|

12010026c ತಸ್ಮಾತ್ಕರ್ಮೈವ ಕರ್ತವ್ಯಂ ನಾಸ್ತಿ ಸಿದ್ಧಿರಕರ್ಮಣಃ||

ನಮ್ಮ ಭಾಗ್ಯಗಳಲ್ಲಿ ಅನ್ಯರ ಸಿದ್ಧಿಗಳು ಪಾಲ್ಗೊಳ್ಳುವುದಿಲ್ಲ. ಆದುದರಿಂದ ಕರ್ಮ-ಕರ್ತವ್ಯಗಳಿಂದಲೇ ಸಿದ್ಧಿಯು ನಮಗೆ ದೊರೆಯುತ್ತದೆ. ಕರ್ಮಗಳನ್ನು ತ್ಯಜಿಸುವುದರಿಂದಲ್ಲ!

12010027a ಔದಕಾಃ ಸೃಷ್ಟಯಶ್ಚೈವ ಜಂತವಃ ಸಿದ್ಧಿಮಾಪ್ನುಯುಃ|

12010027c ಯೇಷಾಮಾತ್ಮೈವ ಭರ್ತವ್ಯೋ ನಾನ್ಯಃ ಕಶ್ಚನ ವಿದ್ಯತೇ||

ಅನ್ಯರ ಭರಣ-ಪೋಷಣ ಮಾಡದೇ ತನ್ನನ್ನೇ ನೋಡಿಕೊಳ್ಳುವುದರಿಂದ ಸಿದ್ಧಿಯು ದೊರೆಯುತ್ತದೆ ಎಂತಾದರೆ ಭೂಮಿಯ ಮೇಲಿರುವ ಎಲ್ಲ ಜಲಚರ ಪ್ರಾಣಿಗಳೂ ಸಿದ್ಧಿಯನ್ನು ಪಡೆಯಬೇಕಾಗಿದ್ದಿತು.

12010028a ಅವೇಕ್ಷಸ್ವ ಯಥಾ ಸ್ವೈಃ ಸ್ವೈಃ ಕರ್ಮಭಿರ್ವ್ಯಾಪೃತಂ ಜಗತ್|

12010028c ತಸ್ಮಾತ್ಕರ್ಮೈವ ಕರ್ತವ್ಯಂ ನಾಸ್ತಿ ಸಿದ್ಧಿರಕರ್ಮಣಃ||

ತಮ್ಮ ತಮ್ಮ ಕರ್ಮಗಳಿಂದ ಈ ಅಖಂಡ ವಿಶ್ವವೂ ಬಂಧಿಸಿಕೊಂಡಿರುವುದನ್ನು ನೋಡು. ಆದುದರಿಂದ ಕರ್ಮವೇ ಕರ್ತವ್ಯ. ಕರ್ಮಗಳನ್ನು ಮಾಡದೇ ಇರುವುದರಿಂದ ಸಿದ್ಧಿಯು ಇಲ್ಲ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮವಾಕ್ಯೇ ದಶಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮವಾಕ್ಯ ಎನ್ನುವ ಹತ್ತನೇ ಅಧ್ಯಾಯವು.

Comments are closed.