Mausala Parva: Chapter 8

ಮೌಸಲ ಪರ್ವ

ವಸುದೇವನೊಂದಿಗೆ ಮಾತನಾಡಿ ಅರ್ಜುನನು ಸುಧರ್ಮ ಸಭೆಯಲ್ಲಿ ಬಂದು ಸೇರಿದ ವೃಷ್ಣಿವೀರರ ಅಮಾತ್ಯರಿಗೆ ತಾನೇ ವೃಷ್ಣಿ-ಅಂಧಕ ಜನರನ್ನು ಇಂದ್ರಪ್ರಸ್ಥಕ್ಕೆ ಕೊಂಡೊಯ್ಯುತ್ತೇನೆಂದು ಹೇಳಿದುದು (೧-೧೩). ವಸುದೇವನ ನಿಧನ; ತರ್ಪಣ (೧೪-೨೭). ಮೃತರಾದ ಯಾದವ ವೀರರ ಪ್ರೇತಸಂಸ್ಕಾರಗಳನ್ನು ಪೂರೈಸಿ ಅರ್ಜುನನು ಯಾದವ ಸ್ತ್ರೀಯರು ಮತ್ತು ಪುರಜನರೊಂದಿಗೆ ಇಂದ್ರಪ್ರಸ್ಥದ ಕಡೆ ಪ್ರಯಾಣಿಸಿದುದು; ಅವರು ದ್ವಾರಕೆಯಿಂದ ಹೊರಡುತ್ತಿದ್ದಲೇ ಸಮುದ್ರವು ದ್ವಾರಕೆಯನ್ನು ಮುಳುಗಿಸಿದುದು (೨೮-೪೩). ದಾರಿಯಲ್ಲಿ ದರೋಡೆಕೋರ ಅಭೀರರು ಪಾರ್ಥನನ್ನು ಆಕ್ರಮಣಿಸಿದುದು (೪೪-೫೨). ಅರ್ಜುನನ ಪರಾಭವ (೫೩-೬೪). ವಜ್ರನನ್ನು ಇಂದ್ರಪ್ರಸ್ಥದಲ್ಲಿ ಅಭಿಷೇಕಿಸಿ ಅರ್ಜುನನು ಶೋಕದಿಂದ ವ್ಯಾಸಾಶ್ರಮಕ್ಕೆ ತೆರಳಿದುದು (೬೫-೭೪).

16008001 ವೈಶಂಪಾಯನ ಉವಾಚ|

16008001a ಏವಮುಕ್ತಃ ಸ ಬೀಭತ್ಸುರ್ಮಾತುಲೇನ ಪರಂತಪಃ|

16008001c ದುರ್ಮನಾ ದೀನಮನಸಂ ವಸುದೇವಮುವಾಚ ಹ||

ವೈಶಂಪಾಯನನು ಹೇಳಿದನು: “ದೀನಮನಸ್ಕನಾದ ಸೋದರಮಾವನು ಹೀಗೆ ಹೇಳಲು ಪರಂತಪ ಬೀಭತ್ಸುವು ದುರ್ಮನಸ್ಸಿನಿಂದ ವಸುದೇವನಿಗೆ ಹೇಳಿದನು:

16008002a ನಾಹಂ ವೃಷ್ಣಿಪ್ರವೀರೇಣ ಮಧುಭಿಶ್ಚೈವ ಮಾತುಲ|

16008002c ವಿಹೀನಾಂ ಪೃಥಿವೀಂ ದ್ರಷ್ಟುಂ ಶಕ್ತಶ್ಚಿರಮಿಹ ಪ್ರಭೋ||

“ಪ್ರಭೋ! ಮಾವ! ವೃಷ್ಣಿಪ್ರವೀರರು ಮತ್ತು ಮಧುಗಳಿಂದ ವಿಹೀನವಾದ ಈ ಭೂಮಿಯನ್ನು ನಾನು ಹೆಚ್ಚು ಕಾಲ ನೋಡಲು ಶಕ್ತನಿಲ್ಲ.

16008003a ರಾಜಾ ಚ ಭೀಮಸೇನಶ್ಚ ಸಹದೇವಶ್ಚ ಪಾಂಡವಃ|

16008003c ನಕುಲೋ ಯಾಜ್ಞಸೇನೀ ಚ ಷಡೇಕಮನಸೋ ವಯಮ್||

ರಾಜಾ ಯುಧಿಷ್ಠಿರ, ಭೀಮಸೇನ, ಪಾಂಡವ ಸಹದೇವ, ನಕುಲ ಮತ್ತು ಯಾಜ್ಞಸೇನೀ ಈ ನಾವು ಆರು ಮಂದಿ ಒಂದೇ ಮನಸ್ಸುಳ್ಳವರು.

16008004a ರಾಜ್ಞಃ ಸಂಕ್ರಮಣೇ ಚಾಪಿ ಕಾಲೋಽಯಂ ವರ್ತತೇ ಧ್ರುವಮ್|

16008004c ತಮಿಮಂ ವಿದ್ಧಿ ಸಂಪ್ರಾಪ್ತಂ ಕಾಲಂ ಕಾಲವಿದಾಂ ವರ||

ರಾಜನೂ ಕಾಲಾವತೀತನಾಗುವ ಸಮಯವು ಬಂದಿದೆಯೆನ್ನುವುದು ನಿಶ್ಚಯವೆನಿಸುತ್ತದೆ. ಕಾಲವನ್ನು ಅರಿತವರಲ್ಲಿ ಶ್ರೇಷ್ಠನಾದ ನಿನಗೆ ಬಂದಿರುವ ಕಾಲದ ಕುರಿತು ತಿಳಿದೇ ಇದೆ.

16008005a ಸರ್ವಥಾ ವೃಷ್ಣಿದಾರಾಂಸ್ತು ಬಾಲವೃದ್ಧಾಂಸ್ತಥೈವ ಚ|

16008005c ನಯಿಷ್ಯೇ ಪರಿಗೃಹ್ಯಾಹಮಿಂದ್ರಪ್ರಸ್ಥಮರಿಂದಮ||

ಅರಿಂದಮ! ವೃಷ್ಣಿ ಸ್ತ್ರೀಯರನ್ನೂ, ಬಾಲ-ವೃದ್ಧರನ್ನೂ ನಾನು ಇಂದ್ರಪ್ರಸ್ಥಕ್ಕೆ ಕರೆದುಕೊಂಡು ಹೋಗುತ್ತೇನೆ.”

16008006a ಇತ್ಯುಕ್ತ್ವಾ ದಾರುಕಮಿದಂ ವಾಕ್ಯಮಾಹ ಧನಂಜಯಃ|

16008006c ಅಮಾತ್ಯಾನ್ವೃಷ್ಣಿವೀರಾಣಾಂ ದ್ರಷ್ಟುಮಿಚ್ಚಾಮಿ ಮಾಚಿರಮ್||

16008007a ಇತ್ಯೇವಮುಕ್ತ್ವಾ ವಚನಂ ಸುಧರ್ಮಾಂ ಯಾದವೀಂ ಸಭಾಮ್|

16008007c ಪ್ರವಿವೇಶಾರ್ಜುನಃ ಶೂರಃ ಶೋಚಮಾನೋ ಮಹಾರಥಾನ್||

ಹೀಗೆ ಹೇಳಿ ಧನಂಜಯನು ದಾರುಕನಿಗೆ “ಕೂಡಲೇ ವೃಷ್ಣಿವೀರರ ಅಮಾತ್ಯರನ್ನು ಕಾಣಲು ಬಯಸುತ್ತೇನೆ” ಎಂದನು. ಹೀಗೆ ಹೇಳಿ ಮಹಾರಥರ ಕುರಿತು ಶೋಕಿಸುತ್ತಾ ಆ ಶೂರ ಅರ್ಜುನನು ಯಾದವರ ಸುಧರ್ಮ ಸಭೆಯನ್ನು ಪ್ರವೇಶಿಸಿದನು.

16008008a ತಮಾಸನಗತಂ ತತ್ರ ಸರ್ವಾಃ ಪ್ರಕೃತಯಸ್ತಥಾ|

16008008c ಬ್ರಾಹ್ಮಣಾ ನೈಗಮಾಶ್ಚೈವ ಪರಿವಾರ್ಯೋಪತಸ್ಥಿರೇ||

ಅವನು ಆಸನ ಗ್ರಹಣ ಮಾಡಲು ಅವನ ಸುತ್ತಲೂ ಪ್ರಜೆಗಳು, ಬ್ರಾಹ್ಮಣರು, ಮಂತ್ರಿಗಳು ಮತ್ತು ವರ್ತಕರು ಕುಳಿತುಕೊಂಡರು.

16008009a ತಾನ್ದೀನಮನಸಃ ಸರ್ವಾನ್ನಿಭೃತಾನ್ಗತಚೇತಸಃ|

16008009c ಉವಾಚೇದಂ ವಚಃ ಪಾರ್ಥಃ ಸ್ವಯಂ ದೀನತರಸ್ತದಾ||

ಒಡೆಯರಿಗಾಗಿ ಚೇತನವನ್ನೇ ಕಳೆದುಕೊಂಡು ದೀನಮನಸ್ಕರಾಗಿದ್ದ ಅವರೆಲ್ಲರಿಗೆ ಸ್ವಯಂ ದೀನನಾಗಿದ್ದ ಪಾರ್ಥನು ಈ ಮಾತನ್ನಾಡಿದನು:

16008010a ಶಕ್ರಪ್ರಸ್ಥಮಹಂ ನೇಷ್ಯೇ ವೃಷ್ಣ್ಯಂಧಕಜನಂ ಸ್ವಯಮ್|

16008010c ಇದಂ ತು ನಗರಂ ಸರ್ವಂ ಸಮುದ್ರಃ ಪ್ಲಾವಯಿಷ್ಯತಿ||

“ಸ್ವಯಂ ನಾನೇ ವೃಷ್ಣಿ-ಅಂಧಕ ಜನರನ್ನು ಇಂದ್ರಪ್ರಸ್ಥಕ್ಕೆ ಕೊಂಡೊಯ್ಯುತ್ತೇನೆ. ಈ ನಗರವೆಲ್ಲವನ್ನೂ ಸಮುದ್ರವು ಮುಳುಗಿಸಲಿಕ್ಕಿದೆ.

16008011a ಸಜ್ಜೀಕುರುತ ಯಾನಾನಿ ರತ್ನಾನಿ ವಿವಿಧಾನಿ ಚ|

16008011c ವಜ್ರೋಽಯಂ ಭವತಾಂ ರಾಜಾ ಶಕ್ರಪ್ರಸ್ಥೇ ಭವಿಷ್ಯತಿ||

ರಥಗಳನ್ನೂ, ವಿವಿಧರತ್ನಗಳನ್ನೂ ಸಜ್ಜುಗೊಳಿಸಿ. ಈ ವಜ್ರನು ಇಂದ್ರಪ್ರಸ್ಥದಲ್ಲಿ ನಿಮ್ಮೆಲ್ಲರ ರಾಜನಾಗುತ್ತಾನೆ.

16008012a ಸಪ್ತಮೇ ದಿವಸೇ ಚೈವ ರವೌ ವಿಮಲ ಉದ್ಗತೇ|

16008012c ಬಹಿರ್ವತ್ಸ್ಯಾಮಹೇ ಸರ್ವೇ ಸಜ್ಜೀಭವತ ಮಾಚಿರಮ್||

ಇಂದಿನಿಂದ ಏಳನೇ ದಿವಸದಂದು ವಿಮಲ ರವಿಯು ಉದಯಿಸುವಾಗ ನಾವೆಲ್ಲರೂ ಇಲ್ಲಿಂದ ಹೊರಡೋಣ! ಸಜ್ಜುಗೊಳಿಸಿ! ತಡಮಾಡಬೇಡಿ!”

16008013a ಇತ್ಯುಕ್ತಾಸ್ತೇನ ತೇ ಪೌರಾಃ ಪಾರ್ಥೇನಾಕ್ಲಿಷ್ಟಕರ್ಮಣಾ|

16008013c ಸಜ್ಜಮಾಶು ತತಶ್ಚಕ್ರುಃ ಸ್ವಸಿದ್ಧ್ಯರ್ಥಂ ಸಮುತ್ಸುಕಾಃ||

ಅಕ್ಲಿಷ್ಟಕರ್ಮಿ ಪಾರ್ಥನು ಹೀಗೆ ಹೇಳಲು ಪೌರರು ತಮ್ಮದೇ ಏಳ್ಗೆಗಾಗಿ ಉತ್ಸಾಹದಿಂದ ತಯಾರಿ ನಡೆಸಿದರು.

16008014a ತಾಂ ರಾತ್ರಿಮವಸತ್ಪಾರ್ಥಃ ಕೇಶವಸ್ಯ ನಿವೇಶನೇ|

16008014c ಮಹತಾ ಶೋಕಮೋಹೇನ ಸಹಸಾಭಿಪರಿಪ್ಲುತಃ||

ಆ ರಾತ್ರಿಯನ್ನು ಪಾರ್ಥನು ಕೇಶವನ ಮನೆಯಲ್ಲಿ ಕಳೆದನು. ಅಲ್ಲಿ ಅವನು ಒಮ್ಮೆಲೇ ಶೋಕಮೋಹಗಳಲ್ಲಿ ಮುಳುಗಿಹೋದನು.

16008015a ಶ್ವೋಭೂತೇಽಥ ತತಃ ಶೌರಿರ್ವಸುದೇವಃ ಪ್ರತಾಪವಾನ್|

16008015c ಯುಕ್ತ್ವಾತ್ಮಾನಂ ಮಹಾತೇಜಾ ಜಗಾಮ ಗತಿಮುತ್ತಮಾಮ್||

ಮರುದಿನ ಬೆಳಿಗ್ಗೆ ಪ್ರತಾಪವಾನ್ ಮಹಾತೇಜಸ್ವಿ ಶೌರಿ ವಸುದೇವನು ತನ್ನನ್ನು ಯೋಗದಲ್ಲಿ ತೊಡಗಿಸಿಕೊಂಡು ಉತ್ತಮ ಗತಿಯನ್ನು ಹೊಂದಿದನು.

16008016a ತತಃ ಶಬ್ಧೋ ಮಹಾನಾಸೀದ್ವಸುದೇವಸ್ಯ ವೇಶ್ಮನಿ|

16008016c ದಾರುಣಃ ಕ್ರೋಶತೀನಾಂ ಚ ರುದತೀನಾಂ ಚ ಯೋಷಿತಾಮ್||

16008017a ಪ್ರಕೀರ್ಣಮೂರ್ಧಜಾಃ ಸರ್ವಾ ವಿಮುಕ್ತಾಭರಣಸ್ರಜಃ|

16008017c ಉರಾಂಸಿ ಪಾಣಿಭಿರ್ಘ್ನಂತ್ಯೋ ವ್ಯಲಪನ್ಕರುಣಂ ಸ್ತ್ರಿಯಃ||

ಆಗ ವಸುದೇವನ ಮನೆಯಲ್ಲಿ ಸ್ತ್ರೀಯರ ದಾರುಣ ಕೂಗು ಮತ್ತು ರೋದನಗಳ ಮಹಾ ಶಬ್ಧವು ಕೇಳಿಬಂದಿತು. ಆ ಎಲ್ಲ ಸ್ತ್ರೀಯರೂ ತಲೆಗೂದಲನ್ನು ಕೆದರಿಕೊಂಡು, ಆಭರಣ-ಹಾರಗಳನ್ನು ಕಳಚಿಕೊಂಡು, ಕೈಗಳಿಂದ ಎದೆಗಳನ್ನು ಹೊಡೆದುಕೊಳ್ಳುತ್ತಾ ದೀನರಾಗಿ ವಿಲಪಿಸುತ್ತಿದ್ದರು.

16008018a ತಂ ದೇವಕೀ ಚ ಭದ್ರಾ ಚ ರೋಹಿಣೀ ಮದಿರಾ ತಥಾ|

16008018c ಅನ್ವಾರೋಢುಂ ವ್ಯವಸಿತಾ ಭರ್ತಾರಂ ಯೋಷಿತಾಂ ವರಾಃ||

ಸ್ತ್ರೀಶ್ರೇಷ್ಠರಾದ ದೇವಕೀ, ಭದ್ರಾ, ರೋಹಿಣೀ ಮತ್ತು ಮದಿರೆಯರು ಪತಿಯ ಚಿತೆಯನ್ನು ಏರುವ ಮನಸ್ಸುಮಾಡಿದರು.

16008019a ತತಃ ಶೌರಿಂ ನೃಯುಕ್ತೇನ ಬಹುಮಾಲ್ಯೇನ ಭಾರತ|

16008019c ಯಾನೇನ ಮಹತಾ ಪಾರ್ಥೋ ಬಹಿರ್ನಿಷ್ಕ್ರಾಮಯತ್ತದಾ||

ಭಾರತ! ಆಗ ಪಾರ್ಥನು ಮನುಷ್ಯರು ಎತ್ತಿಕೊಂಡು ಹೋಗುವ ಬಹುಮಾಲೆಗಳಿಂದ ಅಲಂಕೃತಗೊಂಡ ದೊಡ್ಡ ಯಾನದಲ್ಲಿ ಶೌರಿಯ ಮೃತಶರೀರವನ್ನು ಹೊರತರಿಸಿದನು.

16008020a ತಮನ್ವಯುಸ್ತತ್ರ ತತ್ರ ದುಃಖಶೋಕಸಮಾಹತಾಃ|

16008020c ದ್ವಾರಕಾವಾಸಿನಃ ಪೌರಾಃ ಸರ್ವ ಏವ ನರರ್ಷಭ||

ನರರ್ಷಭ! ದುಃಖ ಶೋಕ ಸಮಾಹತರಾದ ದ್ವಾರಕಾವಾಸೀ ಪೌರರೆಲ್ಲರೂ ಅವನನ್ನು ಅನುಸರಿಸಿದರು.

16008021a ತಸ್ಯಾಶ್ವಮೇಧಿಕಂ ಚತ್ರಂ ದೀಪ್ಯಮಾನಾಶ್ಚ ಪಾವಕಾಃ|

16008021c ಪುರಸ್ತಾತ್ತಸ್ಯ ಯಾನಸ್ಯ ಯಾಜಕಾಶ್ಚ ತತೋ ಯಯುಃ||

ಆ ಯಾನದ ಮುಂದೆ ಅಶ್ವಮೇಧದ ಚತ್ರ, ಉರಿಯುತ್ತಿರುವ ಅಗ್ನಿ, ಮತ್ತು ಯಾಜಕರು ನಡೆದರು.

16008022a ಅನುಜಗ್ಮುಶ್ಚ ತಂ ವೀರಂ ದೇವ್ಯಸ್ತಾ ವೈ ಸ್ವಲಂಕೃತಾಃ|

16008022c ಸ್ತ್ರೀಸಹಸ್ರೈಃ ಪರಿವೃತಾ ವಧೂಭಿಶ್ಚ ಸಹಸ್ರಶಃ||

ಸಹಸ್ರಾರು ಸೊಸೆಯರು ಮತ್ತು ಸಹಸ್ರಾರು ಇತರ ಸ್ತ್ರೀಯರಿಂದ ಪರಿವೃತರಾಗಿ ಅಲಂಕೃತರಾದ ದೇವಿಯರು ಆ ವೀರನನ್ನು ಹಿಂಬಾಲಿಸಿ ಹೋದರು.

16008023a ಯಸ್ತು ದೇಶಃ ಪ್ರಿಯಸ್ತಸ್ಯ ಜೀವತೋಽಭೂನ್ಮಹಾತ್ಮನಃ|

16008023c ತತ್ರೈನಮುಪಸಂಕಲ್ಪ್ಯ ಪಿತೃಮೇಧಂ ಪ್ರಚಕ್ರಿರೇ||

ಜೀವಂತವಾಗಿರುವಾಗ ಆ ಮಹಾತ್ಮನಿಗೆ ಯಾವ ಪ್ರದೇಶವು ಪ್ರಿಯವಾಗಿತ್ತೋ ಅದೇ ಪ್ರದೇಶದಲ್ಲಿ ಸಂಕಲ್ಪಿಸಿ ಪಿತೃಮೇಧವನ್ನು ನೆರವೇರಿಸಿದರು.

16008024a ತಂ ಚಿತಾಗ್ನಿಗತಂ ವೀರಂ ಶೂರಪುತ್ರಂ ವರಾಂಗನಾಃ|

16008024c ತತೋಽನ್ವಾರುರುಹುಃ ಪತ್ನ್ಯಶ್ಚತಸ್ರಃ ಪತಿಲೋಕಗಾಃ||

ಅವನ ನಾಲ್ವರು ವರಾಂಗನೆ ಪತ್ನಿಯರೂ ಚಿತಾಗ್ನಿಗತನಾದ ಆ ವೀರ ಶೂರಪುತ್ರನ ಚಿತೆಯನ್ನು ಏರಿ ಪತಿಯು ಹೋದ ಲೋಕವನ್ನು ಸೇರಿದರು.

16008025a ತಂ ವೈ ಚತಸೃಭಿಃ ಸ್ತ್ರೀಭಿರನ್ವಿತಂ ಪಾಂಡುನಂದನಃ|

16008025c ಅದಾಹಯಚ್ಚಂದನೈಶ್ಚ ಗಂಧೈರುಚ್ಚಾವಚೈರಪಿ||

ಪಾಂಡುನಂದನನು ಹಿಂಬಾಲಿಸಿ ಹೋದ ಆ ನಾಲ್ವರು ಸ್ತ್ರೀಯರನ್ನೂ ಚಂದನ-ಗಂಧಗಳಿಂದ ದಹನಮಾಡಿದನು.

16008026a ತತಃ ಪ್ರಾದುರಭೂಚ್ಛಬ್ಧಃ ಸಮಿದ್ಧಸ್ಯ ವಿಭಾವಸೋಃ|

16008026c ಸಾಮಗಾನಾಂ ಚ ನಿರ್ಘೋಷೋ ನರಾಣಾಂ ರುದತಾಮಪಿ||

ಆಗ ಅಗ್ನಿಯು ಸಮಿತ್ತನ್ನು ಸುಡುತ್ತಿರುವ ಶಬ್ಧ, ಸಾಮಗಾನದ ನಿರ್ಘೋಷ ಮತ್ತು ಮನುಷ್ಯರ ರೋದನಗಳು ಮಾತ್ರ ಕೇಳಿಬರುತ್ತಿದ್ದವು.

16008027a ತತೋ ವಜ್ರಪ್ರಧಾನಾಸ್ತೇ ವೃಷ್ಣಿವೀರಕುಮಾರಕಾಃ|

16008027c ಸರ್ವ ಏವೋದಕಂ ಚಕ್ರುಃ ಸ್ತ್ರಿಯಶ್ಚೈವ ಮಹಾತ್ಮನಃ||

ಅನಂತರ ವಜ್ರನ ನಾಯಕತ್ವದಲ್ಲಿ ವೃಷ್ಣಿವೀರ ಕುಮಾರರು ಮತ್ತು ಸ್ತ್ರೀಯರು ಎಲ್ಲರೂ ಮಹಾತ್ಮ ವಸುದೇವನಿಗೆ ತರ್ಪಣ ಕ್ರಿಯೆಗಳನ್ನು ನಡೆಸಿದರು.

16008028a ಅಲುಪ್ತಧರ್ಮಸ್ತಂ ಧರ್ಮಂ ಕಾರಯಿತ್ವಾ ಸ ಫಲ್ಗುನಃ|

16008028c ಜಗಾಮ ವೃಷ್ಣಯೋ ಯತ್ರ ವಿನಷ್ಟಾ ಭರತರ್ಷಭ||

ಭರತರ್ಷಭ! ಧರ್ಮದಿಂದ ಲುಪ್ತನಾಗದ ಫಲ್ಗುನನು ಆ ಧರ್ಮಕಾರ್ಯವನ್ನು ಎಸಗಿ ವೃಷ್ಣಿಯರು ನಾಶವಾದ ಸ್ಥಳಕ್ಕೆ ಹೋದನು.

16008029a ಸ ತಾನ್ದೃಷ್ಟ್ವಾ ನಿಪತಿತಾನ್ಕದನೇ ಭೃಶದುಃಖಿತಃ|

16008029c ಬಭೂವಾತೀವ ಕೌರವ್ಯಃ ಪ್ರಾಪ್ತಕಾಲಂ ಚಕಾರ ಚ||

ಕದನದಲ್ಲಿ ಹತರಾಗಿ ಬಿದ್ದಿದ್ದ ಅವರನ್ನು ನೋಡಿ ಕೌರವ್ಯನು ತುಂಬಾ ದುಃಖಿತನಾದನು. ಸಮಯಕ್ಕೆ ತಕ್ಕ ಕಾರ್ಯವನ್ನೆಸಗಲು ಅನುವಾದನು.

16008030a ಯಥಾಪ್ರಧಾನತಶ್ಚೈವ ಚಕ್ರೇ ಸರ್ವಾಃ ಕ್ರಿಯಾಸ್ತದಾ|

16008030c ಯೇ ಹತಾ ಬ್ರಹ್ಮಶಾಪೇನ ಮುಸಲೈರೇರಕೋದ್ಭವೈಃ||

ಹಿರಿಯರಿಂದ ಮೊದಲ್ಗೊಂಡು ಆ ಬ್ರಾಹ್ಮಣ ಶಾಪದಿಂದ ಉದ್ಭವಿಸಿದ್ದ ಎರಕಗಳಿಂದ ಹತರಾದ ಅವರೆಲ್ಲರ ಕ್ರಿಯೆಗಳನ್ನೂ ನಡೆಸಿದನು.

16008031a ತತಃ ಶರೀರೇ ರಾಮಸ್ಯ ವಾಸುದೇವಸ್ಯ ಚೋಭಯೋಃ|

16008031c ಅನ್ವಿಷ್ಯ ದಾಹಯಾಮಾಸ ಪುರುಷೈರಾಪ್ತಕಾರಿಭಿಃ||

ಅನಂತರ ರಾಮ ಮತ್ತು ವಾಸುದೇವ ಇಬ್ಬರ ಶರೀರಗಳನ್ನೂ ಹುಡುಕಿಸಿ ಆಪ್ತಜನರಿಂದ ದಹನಸಂಸ್ಕಾರವನ್ನು ಮಾಡಿಸಿದನು.

16008032a ಸ ತೇಷಾಂ ವಿಧಿವತ್ಕೃತ್ವಾ ಪ್ರೇತಕಾರ್ಯಾಣಿ ಪಾಂಡವಃ|

16008032c ಸಪ್ತಮೇ ದಿವಸೇ ಪ್ರಾಯಾದ್ರಥಮಾರುಹ್ಯ ಸತ್ವರಃ|

ಅವರ ಪ್ರೇತಕಾರ್ಯಗಳನ್ನು ವಿಧಿವತ್ತಾಗಿ ಪೂರೈಸಿ ಸತ್ವರ ಪಾಂಡವನು ಏಳನೆಯ ದಿವಸ ರಥವನ್ನೇರಿ ಹೊರಟನು.

16008032e ಅಶ್ವಯುಕ್ತೈ ರಥೈಶ್ಚಾಪಿ ಗೋಖರೋಷ್ಟ್ರಯುತೈರಪಿ||

16008033a ಸ್ತ್ರಿಯಸ್ತಾ ವೃಷ್ಣಿವೀರಾಣಾಂ ರುದತ್ಯಃ ಶೋಕಕರ್ಶಿತಾಃ|

16008033c ಅನುಜಗ್ಮುರ್ಮಹಾತ್ಮಾನಂ ಪಾಂಡುಪುತ್ರಂ ಧನಂಜಯಮ್||

ಕುದುರೆಗಳು, ಎತ್ತುಗಳು, ಮತ್ತು ಕತ್ತೆಗಳನ್ನು ಹೂಡಿದ ರಥಗಳ ಮೇಲೆ ಶೋಕಕರ್ಶಿತ ವೃಷ್ಣಿವೀರರ ಸ್ತ್ರೀಯರು ರೋದಿಸುತ್ತಾ ಪಾಂಡುಪುತ್ರ ಮಹಾತ್ಮ ಧನಂಜಯನನ್ನು ಅನುಸರಿಸಿ ಹೋದರು.

16008034a ಭೃತ್ಯಾಸ್ತ್ವಂಧಕವೃಷ್ಣೀನಾಂ ಸಾದಿನೋ ರಥಿನಶ್ಚ ಯೇ|

16008034c ವೀರಹೀನಂ ವೃದ್ಧಬಾಲಂ ಪೌರಜಾನಪದಾಸ್ತಥಾ|

16008034e ಯಯುಸ್ತೇ ಪರಿವಾರ್ಯಾಥ ಕಲತ್ರಂ ಪಾರ್ಥಶಾಸನಾತ್||

ಪಾರ್ಥನ ಆಜ್ಞೆಯಂತೆ ವೀರರನ್ನು ಕಳೆದುಕೊಂಡ ವೃಷ್ಣಿ-ಅಂಧಕರ ಸೇವಕರು, ಅಶ್ವಾರೋಹಿಗಳು, ರಥಾರೂಢರು, ವೃದ್ಧ-ಬಾಲಕ ಪೌರಜನರು ಎಲ್ಲರೂ ಸ್ತ್ರೀಯರನ್ನು ಸುತ್ತುವರೆದು ನಡೆದರು.

16008035a ಕುಂಜರೈಶ್ಚ ಗಜಾರೋಹಾ ಯಯುಃ ಶೈಲನಿಭೈಸ್ತಥಾ|

16008035c ಸಪಾದರಕ್ಷೈಃ ಸಂಯುಕ್ತಾಃ ಸೋತ್ತರಾಯುಧಿಕಾ ಯಯುಃ||

ಪರ್ವತದಂತಿದ್ದ ಆನೆಗಳನ್ನೇರಿ, ಪಾದರಕ್ಷಕರೊಂದಿಗೆ ಗಜಾರೋಹಿಗಳೂ ಮೀಸಲು ಪಡೆಗಳೂ ನಡೆದವು.

16008036a ಪುತ್ರಾಶ್ಚಾಂಧಕವೃಷ್ಣೀನಾಂ ಸರ್ವೇ ಪಾರ್ಥಮನುವ್ರತಾಃ|

16008036c ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೈವ ಮಹಾಧನಾಃ||

ಅಂಧಕ-ವೃಷ್ಣಿಯರ ಮಕ್ಕಳೆಲ್ಲರೂ, ಶ್ರೀಮಂತ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ- ಶೂದ್ರರೂ ಪಾರ್ಥನನ್ನು ಅನುಸರಿಸಿ ಹೋದರು.

16008037a ದಶ ಷಟ್ಚ ಸಹಸ್ರಾಣಿ ವಾಸುದೇವಾವರೋಧನಮ್|

16008037c ಪುರಸ್ಕೃತ್ಯ ಯಯುರ್ವಜ್ರಂ ಪೌತ್ರಂ ಕೃಷ್ಣಸ್ಯ ಧೀಮತಃ||

ವಾಸುದೇವನ ಹದಿನಾರು ಸಾವಿರ ಪತ್ನಿಯರು ಧೀಮತ ಕೃಷ್ಣನ ಮೊಮ್ಮಗ ವಜ್ರನನ್ನು ಮುಂದಿರಿಸಿಕೊಂಡು ಹೋದರು.

16008038a ಬಹೂನಿ ಚ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

16008038c ಭೋಜವೃಷ್ಣ್ಯಂಧಕಸ್ತ್ರೀಣಾಂ ಹತನಾಥಾನಿ ನಿರ್ಯಯುಃ||

ನಾಥರನ್ನು ಕಳೆದುಕೊಂಡ ಅನೇಕ ಸಾವಿರ, ಅನೇಕ ಕೋಟಿ, ಅನೇಕ ಅರ್ಬುದ ಭೋಜ-ವೃಷ್ಣಿ-ಅಂಧಕ ಸ್ತ್ರೀಯರು ಹಿಂಬಾಲಿಸಿ ಹೋದರು.

16008039a ತತ್ಸಾಗರಸಮಪ್ರಖ್ಯಂ ವೃಷ್ಣಿಚಕ್ರಂ ಮಹರ್ದ್ಧಿಮತ್|

16008039c ಉವಾಹ ರಥಿನಾಂ ಶ್ರೇಷ್ಠಃ ಪಾರ್ಥಃ ಪರಪುರಂಜಯಃ||

ಮಹಾ ಸಾಗರದಂತಿದ್ದ ಆ ವೃಷ್ಣಿಚಕ್ರವನ್ನೂ, ಮಹಾ ಸಂಪತ್ತನ್ನೂ ರಥಿಗಳಲ್ಲಿ ಶ್ರೇಷ್ಠ, ಪರಪುರಂಜಯ ಪಾರ್ಥನು ಕರೆದುಕೊಂಡು ಹೋದನು.

16008040a ನಿರ್ಯಾತೇ ತು ಜನೇ ತಸ್ಮಿನ್ಸಾಗರೋ ಮಕರಾಲಯಃ|

16008040c ದ್ವಾರಕಾಂ ರತ್ನಸಂಪೂರ್ಣಾಂ ಜಲೇನಾಪ್ಲಾವಯತ್ತದಾ||

ಆ ಜನರು ಹೊರಟುಹೋದ ಕೂಡಲೇ ಮಕರಾಲಯ ಸಾಗರವು ರತ್ನಗಳಿಂದ ತುಂಬಿದ್ದ ದ್ವಾರಕೆಯನ್ನು ತನ್ನ ನೀರಿನಿಂದ ಮುಳುಗಿಸಿತು.

16008041a ತದದ್ಭುತಮಭಿಪ್ರೇಕ್ಷ್ಯ ದ್ವಾರಕಾವಾಸಿನೋ ಜನಾಃ|

16008041c ತೂರ್ಣಾತ್ತೂರ್ಣತರಂ ಜಗ್ಮುರಹೋ ದೈವಮಿತಿ ಬ್ರುವನ್||

ಆ ಅದ್ಭುತವನ್ನು ನೋಡಿದ ದ್ವಾರಕಾಪುರವಾಸೀ ಜನರು ಅಯ್ಯೋ ದೈವವೇ ಎನ್ನುತ್ತಾ ಜೋರುಜೋರಾಗಿ ಮುಂದುವರೆದರು.

16008042a ಕಾನನೇಷು ಚ ರಮ್ಯೇಷು ಪರ್ವತೇಷು ನದೀಷು ಚ|

16008042c ನಿವಸನ್ನಾನಯಾಮಾಸ ವೃಷ್ಣಿದಾರಾನ್ಧನಂಜಯಃ||

ಧನಂಜಯನು ಕಾನನಗಳಲ್ಲಿ, ರಮ್ಯ ಪರ್ವತಗಳಲ್ಲಿ ಮತ್ತು ನದೀ ತೀರಗಳಲ್ಲಿ ತಂಗುತ್ತಾ ವೃಷ್ಣಿಸ್ತ್ರೀಯರನ್ನು ಕರೆದುಕೊಂಡು ಹೋದನು.

16008043a ಸ ಪಂಚನದಮಾಸಾದ್ಯ ಧೀಮಾನತಿಸಮೃದ್ಧಿಮತ್|

16008043c ದೇಶೇ ಗೋಪಶುಧಾನ್ಯಾಢ್ಯೇ ನಿವಾಸಮಕರೋತ್ಪ್ರಭುಃ||

ಐದು ನದಿಗಳ ಪ್ರದೇಶವನ್ನು ತಲುಪಿ ಧೀಮಾನ್ ಪ್ರಭು ಅರ್ಜುನನು ಗೋಪಶುಗಳು ಮತ್ತು ಧನ ಸಮೃದ್ಧವಾಗಿದ್ದ ಆ ಪ್ರದೇಶದಲ್ಲಿ ಬೀಡುಬಿಟ್ಟನು.

16008044a ತತೋ ಲೋಭಃ ಸಮಭವದ್ದಸ್ಯೂನಾಂ ನಿಹತೇಶ್ವರಾಃ|

16008044c ದೃಷ್ಟ್ವಾ ಸ್ತ್ರಿಯೋ ನೀಯಮಾನಾಃ ಪಾರ್ಥೇನೈಕೇನ ಭಾರತ||

ಭಾರತ! ಪತಿಗಳನ್ನು ಕಳೆದುಕೊಂಡ ಸ್ತ್ರೀಯರನ್ನು ಪಾರ್ಥನೊಬ್ಬನೇ ಕರೆದುಕೊಂಡು ಹೋಗುತ್ತಿದ್ದಾನೆನ್ನುವುದನ್ನು ನೋಡಿ ದಸ್ಯುಗಳಿಗೆ ಲೋಭವುಂಟಾಯಿತು.

16008045a ತತಸ್ತೇ ಪಾಪಕರ್ಮಾಣೋ ಲೋಭೋಪಹತಚೇತಸಃ|

16008045c ಆಭೀರಾ ಮಂತ್ರಯಾಮಾಸುಃ ಸಮೇತ್ಯಾಶುಭದರ್ಶನಾಃ||

ಆಗ ಲೋಭದಿಂದ ಬುದ್ಧಿಯನ್ನೇ ಕಳೆದುಕೊಂಡು ಅಶುಭರಂತೆ ಕಾಣುತ್ತಿದ್ದ ಆ ಪಾಪಕರ್ಮಿ ಅಭೀರರು ಒಂದಾಗಿ ಸಮಾಲೋಚನೆಮಾಡಿದರು:

16008046a ಅಯಮೇಕೋಽರ್ಜುನೋ ಯೋದ್ಧಾ ವೃದ್ಧಬಾಲಂ ಹತೇಶ್ವರಮ್|

16008046c ನಯತ್ಯಸ್ಮಾನತಿಕ್ರಮ್ಯ ಯೋಧಾಶ್ಚೇಮೇ ಹತೌಜಸಃ||

“ಈ ಯೋಧ ಅರ್ಜುನನೊಬ್ಬನೇ ಗಂಡಸರನ್ನು ಕಳೆದುಕೊಂಡಿರುವ ವೃದ್ಧಬಾಲರನ್ನು ಕರೆದುಕೊಂಡು, ನಮ್ಮ ಈ ಪ್ರದೇಶವನ್ನು ದಾಟಿ, ಹೋಗುತ್ತಿದ್ದಾನೆ! ಅವನಲ್ಲಿದ್ದ ಯೋಧರೂ ಕೂಡ ತಮ್ಮ ತೇಜಸ್ಸನ್ನು ಕಳೆದುಕೊಂಡಿದ್ದಾರೆ!”

16008047a ತತೋ ಯಷ್ಟಿಪ್ರಹರಣಾ ದಸ್ಯವಸ್ತೇ ಸಹಸ್ರಶಃ|

16008047c ಅಭ್ಯಧಾವಂತ ವೃಷ್ಣೀನಾಂ ತಂ ಜನಂ ಲೋಪ್ತ್ರಹಾರಿಣಃ||

ಆಗ ದಂಡಗಳನ್ನು ಹಿಡಿದ ಸಹಸ್ರಾರು ದರೋಡೆಕೋರ ದಸ್ಯುಗಳು ವೃಷ್ಣಿಗಳ ಜನರನ್ನು ಅಕ್ರಮಣಿಸಿದರು.

16008048a ಮಹತಾ ಸಿಂಹನಾದೇನ ದ್ರಾವಯಂತಃ ಪೃಥಗ್ಜನಮ್|

16008048c ಅಭಿಪೇತುರ್ಧನಾರ್ಥಂ ತೇ ಕಾಲಪರ್ಯಾಯಚೋದಿತಾಃ||

ಕಾಲದ ಬದಲಾವಣೆಯಿಂದ ಪ್ರೇರಿತರಾದ ಅವರು ಮಹಾಸಿಂಹನಾದದೊಂದಿಗೆ ಓಡಿಬಂದು, ದರೋಡೆ ಮಾಡುವ ಸಲುವಾಗಿ, ಸಾಮಾನ್ಯ ಜನರ ಆ ಗುಂಪಿನ ಮೇಲೆ ಎರಗಿದರು.

16008049a ತತೋ ನಿವೃತ್ತಃ ಕೌಂತೇಯಃ ಸಹಸಾ ಸಪದಾನುಗಃ|

16008049c ಉವಾಚ ತಾನ್ಮಹಾಬಾಹುರರ್ಜುನಃ ಪ್ರಹಸನ್ನಿವ||

ಕೂಡಲೇ ಮಹಾಬಾಹು ಕೌಂತೇಯ ಅರ್ಜುನನು ತನ್ನ ಅನುಯಾಯಿಗಳೊಂದಿಗೆ ಹಿಂದಿರುಗಿ ನಗುತ್ತಾ ಅವರಿಗೆ ಹೇಳಿದನು:

16008050a ನಿವರ್ತಧ್ವಮಧರ್ಮಜ್ಞಾ ಯದಿ ಸ್ಥ ನ ಮುಮೂರ್ಷವಃ|

16008050c ನೇದಾನೀಂ ಶರನಿರ್ಭಿನ್ನಾಃ ಶೋಚಧ್ವಂ ನಿಹತಾ ಮಯಾ||

“ಅಧರ್ಮಜ್ಞರೇ! ಸಾವನ್ನು ಬಯಸದಿದ್ದರೆ ಹಿಂದೆ ಸರಿಯಿರಿ! ನನ್ನ ಈ ಶರಗಳಿಂದ ಗಾಯಗೊಂಡು ಶೋಕದಿಂದ ಹತರಾಗಬೇಡಿ!”

16008051a ತಥೋಕ್ತಾಸ್ತೇನ ವೀರೇಣ ಕದರ್ಥೀಕೃತ್ಯ ತದ್ವಚಃ|

16008051c ಅಭಿಪೇತುರ್ಜನಂ ಮೂಢಾ ವಾರ್ಯಮಾಣಾಃ ಪುನಃ ಪುನಃ||

ವೀರ ಅರ್ಜುನನು ಹಾಗೆ ಹೇಳಿದರೂ ಅವನ ಮಾತನ್ನು ಅನಾದರಿಸಿ, ಅವನು ಪುನಃ ಪುನಃ ತಡೆಯುತ್ತಿದ್ದರೂ, ಆ ಮೂಢಜನರು ಆಕ್ರಮಣಿಸಿದರು.

16008052a ತತೋಽರ್ಜುನೋ ಧನುರ್ದಿವ್ಯಂ ಗಾಂಡೀವಮಜರಂ ಮಹತ್|

16008052c ಆರೋಪಯಿತುಮಾರೇಭೇ ಯತ್ನಾದಿವ ಕಥಂ ಚನ||

ಆಗ ಅರ್ಜುನನು ಅಜರವಾಗಿದ್ದ ದಿವ್ಯ ಮಹಾಧನುಸ್ಸು ಗಾಂಡೀವಕ್ಕೆ ಶಿಂಜಿನಿಯನ್ನು ಬಿಗಿಯಲು ಪ್ರಯತ್ನಿಸಿದರೂ ಅದು ಅವನಿಗೆ ಸಾಧ್ಯವಾಗಲಿಲ್ಲ.

16008053a ಚಕಾರ ಸಜ್ಯಂ ಕೃಚ್ಚ್ರೇಣ ಸಂಭ್ರಮೇ ತುಮುಲೇ ಸತಿ|

16008053c ಚಿಂತಯಾಮಾಸ ಚಾಸ್ತ್ರಾಣಿ ನ ಚ ಸಸ್ಮಾರ ತಾನ್ಯಪಿ||

ಆ ತುಮುಲ ಸಂಭ್ರಮದಲ್ಲಿ ಕಷ್ಟಪಟ್ಟು ಶಿಂಜಿನಿಯನ್ನು ಬಿಗಿದು ಅವನು ಅಸ್ತ್ರಗಳ ಕುರಿತು ಯೋಚಿಸಲು, ಅವುಗಳ್ಯಾವುವೂ ಅವನ ಸ್ಮರಣೆಗೆ ಬರಲಿಲ್ಲ.

16008054a ವೈಕೃತ್ಯಂ ತನ್ಮಹದ್ದೃಷ್ಟ್ವಾ ಭುಜವೀರ್ಯೇ ತಥಾ ಯುಧಿ|

16008054c ದಿವ್ಯಾನಾಂ ಚ ಮಹಾಸ್ತ್ರಾಣಾಂ ವಿನಾಶಾದ್ವ್ರೀಡಿತೋಽಭವತ್||

ಯುದ್ಧದ ಸಮಯದಲ್ಲಿದ್ದ ಅವನ ಆ ಮಹಾ ಭುಜವೀರ್ಯವು ಮತ್ತು ದಿವ್ಯ ಮಹಾಸ್ತ್ರಗಳು ಅಸಫಲವಾಗಲು ಅರ್ಜುನನಿಗೆ ನಾಚಿಕೆಯಾಯಿತು.

16008055a ವೃಷ್ಣಿಯೋಧಾಶ್ಚ ತೇ ಸರ್ವೇ ಗಜಾಶ್ವರಥಯಾಯಿನಃ|

16008055c ನ ಶೇಕುರಾವರ್ತಯಿತುಂ ಹ್ರಿಯಮಾಣಂ ಚ ತಂ ಜನಮ್||

ಆನೆ-ಕುದುರೆ-ರಥಗಳನ್ನೇರಿದ್ದ ವೃಷ್ಣಿಯೋಧರು ಎಲ್ಲರೂ ಬಲಾತ್ಕಾರವಾಗಿ ಅಪಹರಿಸುತ್ತಿದ್ದ ಅವರನ್ನು ತಡೆಯಲು ಶಕ್ಯರಾಗಲಿಲ್ಲ.

16008056a ಕಲತ್ರಸ್ಯ ಬಹುತ್ವಾತ್ತು ಸಂಪತತ್ಸು ತತಸ್ತತಃ|

16008056c ಪ್ರಯತ್ನಮಕರೋತ್ಪಾರ್ಥೋ ಜನಸ್ಯ ಪರಿರಕ್ಷಣೇ||

ರಕ್ಷಿಸಲು ಅಲ್ಲಲ್ಲಿ ಅನೇಕ ಸ್ತ್ರೀಯರಿದ್ದರು ಮತ್ತು ಸಂಪತ್ತುಗಳಿತ್ತು. ಪಾರ್ಥನು ಆ ಜನರನ್ನು ರಕ್ಷಿಸಲು ಪ್ರಯತ್ನಿಸಿದನು.

16008057a ಮಿಷತಾಂ ಸರ್ವಯೋಧಾನಾಂ ತತಸ್ತಾಃ ಪ್ರಮದೋತ್ತಮಾಃ|

16008057c ಸಮಂತತೋಽವಕೃಷ್ಯಂತ ಕಾಮಾಚ್ಚಾನ್ಯಾಃ ಪ್ರವವ್ರಜುಃ||

ಸರ್ವ ಯೋಧರು ನೋಡುತ್ತಿದ್ದಂತೆಯೇ ದಸ್ಯುಗಳು ಎಲ್ಲಕಡೆಗಳಿಂದ ಬಂದು ಆ ಉತ್ತಮ ಸ್ತ್ರೀಯರನ್ನು ಎಳೆದುಕೊಂಡು ಹೋದರು ಮತ್ತು ಅನ್ಯರು ಭಯದಿಂದ ಎತ್ತಲೋ ಓಡಿ ಹೋದರು.

16008058a ತತೋ ಗಾಂಡೀವನಿರ್ಮುಕ್ತೈಃ ಶರೈಃ ಪಾರ್ಥೋ ಧನಂಜಯಃ|

16008058c ಜಘಾನ ದಸ್ಯೂನ್ಸೋದ್ವೇಗೋ ವೃಷ್ಣಿಭೃತ್ಯೈಃ ಸಹ ಪ್ರಭುಃ||

ವೃಷ್ಣಿಸೇವಕರೊಡನೆ ಉದ್ವೇಗಗೊಂಡ ಪ್ರಭು ಪಾರ್ಥ ಧನಂಜಯನು ಗಾಂಡೀವದಿಂದ ಪ್ರಯೋಗಿಸಿದ ಶರಗಳಿಂದ ಆ ದಸ್ಯುಗಳನ್ನು ಸಂಹರಿಸಿದನು.

16008059a ಕ್ಷಣೇನ ತಸ್ಯ ತೇ ರಾಜನ್ ಕ್ಷಯಂ ಜಗ್ಮುರಜಿಹ್ಮಗಾಃ|

16008059c ಅಕ್ಷಯಾ ಹಿ ಪುರಾ ಭೂತ್ವಾ ಕ್ಷೀಣಾಃ ಕ್ಷತಜಭೋಜನಾಃ||

ರಾಜನ್! ಆದರೆ ಕ್ಷಣದಲ್ಲಿಯೇ ಅವನಲ್ಲಿದ್ದ ಜಿಹ್ಮಗಗಳು ಮುಗಿದುಹೋದವು. ಮೊದಲು ಅಕ್ಷಯವಾಗಿದ್ದ ಆ ರಕ್ತವನ್ನು ಕುಡಿಯುವ ಶರಗಳು ಈಗ ಮುಗಿದುಹೋದವು.

16008060a ಸ ಶರಕ್ಷಯಮಾಸಾದ್ಯ ದುಃಖಶೋಕಸಮಾಹತಃ|

16008060c ಧನುಷ್ಕೋಟ್ಯಾ ತದಾ ದಸ್ಯೂನವಧೀತ್ಪಾಕಶಾಸನಿಃ||

ಶರಗಳು ಮುಗಿದುಹೋಗಲು ದುಃಖಶೋಕಗಳಿಂದ ಸಮಾಹತನಾಗಿ ಪಾಕಶಾಸನಿಯು ತನ್ನ ಧನುಸ್ಸಿನ ತುದಿಯಿಂದಲೇ ದಸ್ಯುಗಳನ್ನು ವಧಿಸತೊಡಗಿದನು.

16008061a ಪ್ರೇಕ್ಷತಸ್ತ್ವೇವ ಪಾರ್ಥಸ್ಯ ವೃಷ್ಣ್ಯಂಧಕವರಸ್ತ್ರಿಯಃ|

16008061c ಜಗ್ಮುರಾದಾಯ ತೇ ಮ್ಲೇಚ್ಚಾಃ ಸಮಂತಾಜ್ಜನಮೇಜಯ||

ಜನಮೇಜಯ! ಆದರೆ ಪಾರ್ಥನು ನೋಡುತ್ತಿದ್ದಂತೆಯೇ ಮ್ಲೇಚ್ಛರು ವೃಷ್ಣಿ-ಅಂಧಕರ ಶ್ರೇಷ್ಠ ಸ್ತ್ರೀಯರನ್ನು ಎತ್ತಿಕೊಂಡು ಎಲ್ಲ ಕಡೆಗಳಲ್ಲಿ ಓಡಿ ಹೋದರು.

16008062a ಧನಂಜಯಸ್ತು ದೈವಂ ತನ್ಮನಸಾಚಿಂತಯತ್ಪ್ರಭುಃ|

16008062c ದುಃಖಶೋಕಸಮಾವಿಷ್ಟೋ ನಿಃಶ್ವಾಸಪರಮೋಽಭವತ್||

ಪ್ರಭು ಧನಂಜಯನಾದರೋ ಅದು ದೈವವೆಂದು ಮನಸಾ ಯೋಚಿಸಿದನು. ಪರಮ ದುಃಖ ಶೋಕ ಸಮಾವಿಷ್ಟನಾಗಿ ನಿಟ್ಟುಸಿರು ಬಿಟ್ಟನು.

16008063a ಅಸ್ತ್ರಾಣಾಂ ಚ ಪ್ರಣಾಶೇನ ಬಾಹುವೀರ್ಯಸ್ಯ ಸಂಕ್ಷಯಾತ್|

16008063c ಧನುಷಶ್ಚಾವಿಧೇಯತ್ವಾಚ್ಚರಾಣಾಂ ಸಂಕ್ಷಯೇಣ ಚ||

16008064a ಬಭೂವ ವಿಮನಾಃ ಪಾರ್ಥೋ ದೈವಮಿತ್ಯನುಚಿಂತಯನ್|

16008064c ನ್ಯವರ್ತತ ತತೋ ರಾಜನ್ನೇದಮಸ್ತೀತಿ ಚಾಬ್ರವೀತ್||

ಅಸ್ತ್ರಗಳ ವಿನಾಶ, ಬಾಹುವೀರ್ಯದ ಕುಂಠಿತ, ಧನುಸ್ಸಿನ ಅವಿಧೇಯತೆ ಮತ್ತು ಶರಗಳು ಮುಗಿದುಹೋದುದು ಇವುಗಳಿಂದ ವಿಮನಸ್ಕನಾದ ಪಾರ್ಥನು ಇದು ದೈವವೆಂದೇ ಆಲೋಚಿಸಿದನು. ರಾಜನ್! ಅನಂತರ ಅವನು “ಎಲ್ಲವೂ ಹೋಯಿತು!” ಎಂದು ಹೇಳಿ ಹಿಂದಿರುಗಿದನು.

16008065a ತತಃ ಸ ಶೇಷಮಾದಾಯ ಕಲತ್ರಸ್ಯ ಮಹಾಮತಿಃ|

16008065c ಹೃತಭೂಯಿಷ್ಠರತ್ನಸ್ಯ ಕುರುಕ್ಷೇತ್ರಮವಾತರತ್||

ಅನಂತರ ಆ ಮಹಾಮತಿಯು ಉಳಿದಿದ್ದ ಸ್ತ್ರೀಯರನ್ನೂ, ಅಪಹರಿಸಲ್ಪಡದೇ ಇದ್ದ ಸ್ವಲ್ಪ ರತ್ನಗಳನ್ನೂ ಕುರುಕ್ಷೇತ್ರಕ್ಕೆ ಬಂದು ಇಳಿಸಿದನು.

16008066a ಏವಂ ಕಲತ್ರಮಾನೀಯ ವೃಷ್ಣೀನಾಂ ಹೃತಶೇಷಿತಮ್|

16008066c ನ್ಯವೇಶಯತ ಕೌರವ್ಯಸ್ತತ್ರ ತತ್ರ ಧನಂಜಯಃ||

ಅಪಹರಿಸಲ್ಪಡದೇ ಉಳಿದಿದ್ದ ವೃಷ್ಣಿ ಸ್ತ್ರೀಯರನ್ನು ಕರೆದುಕೊಂಡು ಬಂದು ಕೌರವ್ಯ ಧನಂಜಯನು ಅಲ್ಲಲ್ಲಿ ನೆಲೆಗೊಳಿಸಿದನು.

16008067a ಹಾರ್ದಿಕ್ಯತನಯಂ ಪಾರ್ಥೋ ನಗರಂ ಮಾರ್ತಿಕಾವತಮ್|

16008067c ಭೋಜರಾಜಕಲತ್ರಂ ಚ ಹೃತಶೇಷಂ ನರೋತ್ತಮಃ||

ನರೋತ್ತಮ ಪಾರ್ಥನು ಅಪಹರಿಸದೆ ಉಳಿದಿದ್ದ ಭೋಜರಾಜನ ಸ್ತ್ರೀಯರನ್ನು ಹಾರ್ದಿಕ್ಯ ಕೃತವರ್ಮನ ಮಗನ ಜೊತೆಗೆ ಮಾರ್ತಿಕಾವತಕ್ಕೆ ಕಳುಹಿಸಿದನು.

16008068a ತತೋ ವೃದ್ಧಾಂಶ್ಚ ಬಾಲಾಂಶ್ಚ ಸ್ತ್ರಿಯಶ್ಚಾದಾಯ ಪಾಂಡವಃ|

16008068c ವೀರೈರ್ವಿಹೀನಾನ್ಸರ್ವಾಂಸ್ತಾನ್ಶಕ್ರಪ್ರಸ್ಥೇ ನ್ಯವೇಶಯತ್||

ಅನಂತರ ವೀರರಿಂದ ವಿಹೀನರಾಗಿದ್ದ ಎಲ್ಲ ವೃದ್ಧರನ್ನೂ, ಬಾಲಕರನ್ನೂ, ಮತ್ತು ಸ್ತ್ರೀಯರನ್ನೂ ಪಾಂಡವನು ಇಂದ್ರಪ್ರಸ್ಥದಲ್ಲಿ ವಾಸಿಸುವಂತೆ ಮಾಡಿದನು.

16008069a ಯೌಯುಧಾನಿಂ ಸರಸ್ವತ್ಯಾಂ ಪುತ್ರಂ ಸಾತ್ಯಕಿನಃ ಪ್ರಿಯಮ್|

16008069c ನ್ಯವೇಶಯತ ಧರ್ಮಾತ್ಮಾ ವೃದ್ಧಬಾಲಪುರಸ್ಕೃತಮ್||

ಸಾತ್ಯಕಿಯ ಪ್ರಿಯಪುತ್ರ ಯೌಯುಧಾನಿಯನ್ನು ವೃದ್ಧ-ಬಾಲಕರೊಂದಿಗೆ ಸರಸ್ವತೀ ತೀರದಲ್ಲಿ ಧರ್ಮಾತ್ಮ ಅರ್ಜುನನು ನೆಲೆಸುವಂತೆ ಮಾಡಿದನು.

16008070a ಇಂದ್ರಪ್ರಸ್ಥೇ ದದೌ ರಾಜ್ಯಂ ವಜ್ರಾಯ ಪರವೀರಹಾ|

16008070c ವಜ್ರೇಣಾಕ್ರೂರದಾರಾಸ್ತು ವಾರ್ಯಮಾಣಾಃ ಪ್ರವವ್ರಜುಃ||

ಆ ಪರವೀರಹನು ಇಂದ್ರಪ್ರಸ್ಥವನ್ನು ವಜ್ರನಿಗೆ ಕೊಟ್ಟನು. ವಜ್ರನು ತಡೆಯಲು ಪ್ರಯತ್ನಿಸಿದರೂ ಅಕ್ರೂರನ ಪತ್ನಿಯರು ವನವನ್ನು ಸೇರಿದರು.

16008071a ರುಕ್ಮಿಣೀ ತ್ವಥ ಗಾಂಧಾರೀ ಶೈಬ್ಯಾ ಹೈಮವತೀತ್ಯಪಿ|

16008071c ದೇವೀ ಜಾಂಬವತೀ ಚೈವ ವಿವಿಶುರ್ಜಾತವೇದಸಮ್||

ರುಕ್ಮಿಣೀ, ಗಾಂಧಾರೀ, ಶೈಬ್ಯೆ, ಹೈಮವತೀ, ಮತ್ತು ದೇವೀ ಜಾಂಬವತಿಯರು ಅಗ್ನಿಪ್ರವೇಶ ಮಾಡಿದರು.

16008072a ಸತ್ಯಭಾಮಾ ತಥೈವಾನ್ಯಾ ದೇವ್ಯಃ ಕೃಷ್ಣಸ್ಯ ಸಂಮತಾಃ|

16008072c ವನಂ ಪ್ರವಿವಿಶೂ ರಾಜಂಸ್ತಾಪಸ್ಯೇ ಕೃತನಿಶ್ಚಯಾಃ||

ರಾಜನ್! ತಪಸ್ಸಿನ ನಿಶ್ಚಯವನ್ನು ಮಾಡಿದ ಸತ್ಯಭಾಮೆ ಮತ್ತು ಕೃಷ್ಣನ ಇತರ ಪತ್ನಿಯರು ವನವನ್ನು ಪ್ರವೇಶಿಸಿದರು.

16008073a ದ್ವಾರಕಾವಾಸಿನೋ ಯೇ ತು ಪುರುಷಾಃ ಪಾರ್ಥಮನ್ವಯುಃ|

16008073c ಯಥಾರ್ಹಂ ಸಂವಿಭಜ್ಯೈನಾನ್ವಜ್ರೇ ಪರ್ಯದದಜ್ಜಯಃ||

ಪಾರ್ಥನನ್ನು ಅನುಸರಿಸಿ ಬಂದಿದ್ದ ದ್ವಾರಕಾವಾಸಿ ಪುರುಷರನ್ನು ಯಥಾರ್ಹವಾಗಿ ವಿಂಗಡಿಸಿ ಜಯನು ವಜ್ರನಿಗೆ ಒಪ್ಪಿಸಿದನು.

16008074a ಸ ತತ್ಕೃತ್ವಾ ಪ್ರಾಪ್ತಕಾಲಂ ಬಾಷ್ಪೇಣಾಪಿಹಿತೋಽರ್ಜುನಃ|

16008074c ಕೃಷ್ಣದ್ವೈಪಾಯನಂ ರಾಜನ್ದದರ್ಶಾಸೀನಮಾಶ್ರಮೇ||

ರಾಜನ್! ಸಮಯದೊಡನೆ ಬಂದಿದ್ದ ಆ ಎಲ್ಲ ಕಾರ್ಯಗಳನ್ನೂ ಪೂರೈಸಿ ಕಣ್ಣೀರುತುಂಬಿದ ಅರ್ಜುನನು ಆಶ್ರಮದಲ್ಲಿ ಕುಳಿತಿದ್ದ ಕೃಷ್ಣದ್ವೈಪಾಯನನನ್ನು ಕಂಡನು.”

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ವೃಷ್ಣಿಕಲತ್ರಾದ್ಯಾನಯನೇ ಅಷ್ಟಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ವೃಷ್ಣಿಕಲತ್ರಾದ್ಯಾನಯನ ಎನ್ನುವ ಎಂಟನೇ ಅಧ್ಯಾಯವು.

Related image

Comments are closed.