ಮೌಸಲ ಪರ್ವ
೪
ವೃಷ್ಣಿ-ಅಂಧಕರ ವಿನಾಶ
ಬಲರಾಮ ಕೃಷ್ಣರ ಆಯುಧ-ಧ್ವಜ-ರಥ-ಕುದುರೆಗಳು ಅದೃಶ್ಯವಾದುದು (೧-೫). ಸಮುದ್ರತೀರದಲ್ಲಿ ಯಾದವರ ಸುರಾಪಾನ ಕೂಟ (೬-೧೫). ಸಾತ್ಯಕಿಯು ಕೃತವರ್ಮನ ಶಿರವನ್ನು ಕತ್ತರಿಸಿದುದು (೧೬-೨೭). ಭೋಜ-ಅಂಧಕರಿಂದ ಸಾತ್ಯಕಿ-ಪ್ರದ್ಯುಮ್ನರ ವಧೆ (೨೮-೩೪). ಎರಕದ ಹುಲ್ಲು ಮುಸಲವಾಗಿ, ಅದರಿಂದಲೇ ವೃಷ್ಣಿ-ಅಂಧಕ-ಭೋಜ-ಯಾದವರು ಪರಸ್ಪರರನ್ನು ಹೊಡೆದು ಸಂಹರಿಸಿದುದು (೩೫-೪೬).
16004001 ವೈಶಂಪಾಯನ ಉವಾಚ|
16004001a ಕಾಲೀ ಸ್ತ್ರೀ ಪಾಂಡುರೈರ್ದಂತೈಃ ಪ್ರವಿಶ್ಯ ಹಸತೀ ನಿಶಿ|
16004001c ಸ್ತ್ರಿಯಃ ಸ್ವಪ್ನೇಷು ಮುಷ್ಣಂತೀ ದ್ವಾರಕಾಂ ಪರಿಧಾವತಿ||
ವೈಶಂಪಾಯನನು ಹೇಳಿದನು: “ದ್ವಾರಕೆಯಲ್ಲಿ ಓಡಾಡಿಕೊಂಡಿದ್ದ ಕಪ್ಪು ಬಣ್ಣದ ಬಿಳಿಯ ಹಲ್ಲುಗಳ ಸ್ತ್ರೀಯೊಬ್ಬಳು ರಾತ್ರಿವೇಳೆಯಲ್ಲಿ ನಗುತ್ತಾ ಸ್ತ್ರೀಯರ ಸ್ವಪ್ನದಲ್ಲಿ ಅವರ ವಸ್ತುಗಳನ್ನು ಕದಿಯುತ್ತಿದ್ದಳು.
16004002a ಅಲಂಕಾರಾಶ್ಚ ಚತ್ರಂ ಚ ಧ್ವಜಾಶ್ಚ ಕವಚಾನಿ ಚ|
16004002c ಹ್ರಿಯಮಾಣಾನ್ಯದೃಶ್ಯಂತ ರಕ್ಷೋಭಿಃ ಸುಭಯಾನಕೈಃ||
ಭಯಾನಕ ರಾಕ್ಷಸರು ಅಲಂಕಾರಗಳನ್ನೂ, ಚತ್ರ-ಧ್ವಜ-ಕವಚಗಳನ್ನೂ ಅಪಹರಿಸಿಕೊಂಡು ಹೋಗುವುದು ಕಾಣುತ್ತಿತ್ತು.
16004003a ತಚ್ಚಾಗ್ನಿದತ್ತಂ ಕೃಷ್ಣಸ್ಯ ವಜ್ರನಾಭಮಯಸ್ಮಯಮ್|
16004003c ದಿವಮಾಚಕ್ರಮೇ ಚಕ್ರಂ ವೃಷ್ಣೀನಾಂ ಪಶ್ಯತಾಂ ತದಾ||
ಕೃಷ್ಣನಿಗೆ ಅಗ್ನಿಯು ಕೊಟ್ಟಿದ್ದ ಲೋಹದ ವಜ್ರನಾಭ ಚಕ್ರವು ವೃಷ್ಣಿಗಳು ನೋಡುತ್ತಿದ್ದಂತೆಯೇ ಆಕಾಶಕ್ಕೆ ಹಾರಿಹೋಯಿತು.
16004004a ಯುಕ್ತಂ ರಥಂ ದಿವ್ಯಮಾದಿತ್ಯವರ್ಣಂ
ಹಯಾಹರನ್ ಪಶ್ಯತೋ ದಾರುಕಸ್ಯ|
16004004c ತೇ ಸಾಗರಸ್ಯೋಪರಿಷ್ಠಾದವರ್ತನ್
ಮನೋಜವಾಶ್ಚತುರೋ ವಾಜಿಮುಖ್ಯಾಃ||
ದಾರುಕನು ನೋಡುತ್ತಿದ್ದಂತೆಯೇ ಸಿದ್ಧಗೊಳಿಸಿದ್ದ ಆದಿತ್ಯ ವರ್ಣದ ದಿವ್ಯ ರಥವನ್ನು ಕುದುರೆಗಳು ಅಪಹರಿಸಿಕೊಂಡು ಹೋದವು. ಮನೋವೇಗದಲ್ಲಿ ಹೋಗಬಲ್ಲ ಆ ನಾಲ್ಕು ಮುಖ್ಯ ಕುದುರೆಗಳು ಸಾಗರದ ಮೇಲೆಯೇ ಓಡಿ ಹೊರಟು ಹೋದವು.
16004005a ತಾಲಃ ಸುಪರ್ಣಶ್ಚ ಮಹಾಧ್ವಜೌ ತೌ
ಸುಪೂಜಿತೌ ರಾಮಜನಾರ್ದನಾಭ್ಯಾಮ್|
16004005c ಉಚ್ಚೈರ್ಜಹ್ರುರಪ್ಸರಸೋ ದಿವಾನಿಶಂ
ವಾಚಶ್ಚೋಚುರ್ಗಮ್ಯತಾಂ ತೀರ್ಥಯಾತ್ರಾ||
ಬಲರಾಮ ಮತ್ತು ಜನಾರ್ದನರು ಪೂಜಿಸುತ್ತಿದ್ದ ಆ ಎರಡು ಮಹಾಧ್ವಜಗಳನ್ನು – ತಾಲ ಮತ್ತು ಗರುಡ ಧ್ವಜಗಳನ್ನು – “ನೀವೂ ತೀರ್ಥಯಾತ್ರೆಗೆ ಹೋಗಬೇಕು” ಎಂದು ಹಗಲೂ ರಾತ್ರಿಯೂ ಜೋರಾಗಿ ಕೂಗಿಕೊಳ್ಳುತ್ತಿದ್ದ ಅಪ್ಸರೆಯರು ಅಪಹರಿಸಿಕೊಂಡು ಹೋದರು.
16004006a ತತೋ ಜಿಗಮಿಷಂತಸ್ತೇ ವೃಷ್ಣ್ಯಂಧಕಮಹಾರಥಾಃ|
16004006c ಸಾಂತಃಪುರಾಸ್ತದಾ ತೀರ್ಥಯಾತ್ರಾಮೈಚ್ಚನ್ನರರ್ಷಭಾಃ||
ಆಗ ವೃಷ್ಣಿ-ಅಂಧಕ ಮಹಾರಥ ನರರ್ಷಭರು ಮತ್ತು ಅವರ ಸ್ತ್ರೀಯರು ತೀರ್ಥಯಾತ್ರೆಗೆ ಹೋಗಲು ನಿಶ್ಚಯಿಸಿದರು.
16004007a ತತೋ ಭೋಜ್ಯಂ ಚ ಭಕ್ಷ್ಯಂ ಚ ಪೇಯಂ ಚಾಂಧಕವೃಷ್ಣಯಃ|
16004007c ಬಹು ನಾನಾವಿಧಂ ಚಕ್ರುರ್ಮದ್ಯಂ ಮಾಂಸಮನೇಕಶಃ||
ಅನಂತರ ಅಂಧಕ-ವೃಷ್ಣಿಗಳು ಅನೇಕ ವಿಧದ ಭೋಜನಗಳನ್ನೂ, ಭಕ್ಷ್ಯಗಳನ್ನೂ, ಪಾನೀಯಗಳನ್ನೂ ಮತ್ತು ಅನೇಕ ಮಾಂಸ ಪದಾರ್ಥಗಳನ್ನೂ ತಯಾರಿಸಿದರು.
16004008a ತತಃ ಸೀಧುಷು ಸಕ್ತಾಶ್ಚ ನಿರ್ಯಯುರ್ನಗರಾದ್ಬಹಿಃ|
16004008c ಯಾನೈರಶ್ವೈರ್ಗಜೈಶ್ಚೈವ ಶ್ರೀಮಂತಸ್ತಿಗ್ಮತೇಜಸಃ||
ಅತಿಯಾಗಿ ಕುಡಿಯಬಲ್ಲ ಆ ತಿಗ್ಮತೇಜಸ್ವಿಗಳು ಶ್ರೀಮಂತಿಕೆಯಿಂದ ರಥ-ಕುದುರೆ-ಆನೆಗಳ ಮೇಲೆ ಕುಳಿತು ನಗರದಿಂದ ಹೊರ ಹೊರಟರು.
16004009a ತತಃ ಪ್ರಭಾಸೇ ನ್ಯವಸನ್ಯಥೋದ್ದೇಶಂ ಯಥಾಗೃಹಮ್|
16004009c ಪ್ರಭೂತಭಕ್ಷ್ಯಪೇಯಾಸ್ತೇ ಸದಾರಾ ಯಾದವಾಸ್ತದಾ||
ಪ್ರಭಾಸ ಕ್ಷೇತ್ರಕ್ಕೆ ಬಂದು ಅಲ್ಲಿ ತಮಗಾಗಿಯೇ ನಿರ್ಮಿಸಿಕೊಂಡಿದ್ದ ಮನೆಗಳಲ್ಲಿ ಯಾದವರು ತಮ್ಮ ಭಕ್ಷ್ಯ-ಪಾನೀಯಗಳು ಮತ್ತು ಪತ್ನಿಯರೊಂದಿಗೆ ಬೀಡುಬಿಟ್ಟರು.
16004010a ನಿವಿಷ್ಟಾಂಸ್ತಾನ್ನಿಶಮ್ಯಾಥ ಸಮುದ್ರಾಂತೇ ಸ ಯೋಗವಿತ್|
16004010c ಜಗಾಮಾಮಂತ್ರ್ಯ ತಾನ್ವೀರಾನುದ್ಧವೋಽರ್ಥವಿಶಾರದಃ||
ಅವರು ಸಮುದ್ರತೀರದಲ್ಲಿ ಬೀಡು ಬಿಟ್ಟಿದ್ದಾರೆಂದು ಕೇಳಿದ ಯೋಗವಿದು ಅರ್ಥವಿಶಾರದ ಉದ್ಧವನು ಅವರನ್ನು ಬೀಳ್ಕೊಡಲು ಅಲ್ಲಿಗೆ ಹೋದನು.
16004011a ತಂ ಪ್ರಸ್ಥಿತಂ ಮಹಾತ್ಮಾನಮಭಿವಾದ್ಯ ಕೃತಾಂಜಲಿಮ್|
16004011c ಜಾನನ್ವಿನಾಶಂ ವೃಷ್ಣೀನಾಂ ನೈಚ್ಚದ್ವಾರಯಿತುಂ ಹರಿಃ||
ಅಲ್ಲಿಂದ ಕೈಮುಗಿದುಕೊಂಡು ಹೊರಟ ಆ ಮಹಾತ್ಮನನ್ನು ಅಭಿವಂದಿಸಿದ ಹರಿಯು ವೃಷ್ಣಿಗಳ ವಿನಾಶವಾಗುತ್ತದೆಯೆಂದು ತಿಳಿದಿದ್ದರೂ ಅದನ್ನು ತಡೆಯಲಿಲ್ಲ.
16004012a ತತಃ ಕಾಲಪರೀತಾಸ್ತೇ ವೃಷ್ಣ್ಯಂಧಕಮಹಾರಥಾಃ|
16004012c ಅಪಶ್ಯನ್ನುದ್ಧವಂ ಯಾಂತಂ ತೇಜಸಾವೃತ್ಯ ರೋದಸೀ||
ಕಾಲವು ಮುಗಿದುಹೋದ ವೃಷ್ಣಿ-ಅಂಧಕ ಮಹಾರಥರು ಭೂಮ್ಯಾಕಾಶಗಳನ್ನು ತನ್ನ ತೇಜಸ್ಸಿನಿಂದ ತುಂಬಿಕೊಳ್ಳುತ್ತಾ ಹೋಗುತ್ತಿದ್ದ ಉದ್ಧವನನ್ನು ನೋಡಿದರು.
16004013a ಬ್ರಾಹ್ಮಣಾರ್ಥೇಷು ಯತ್ಸಿದ್ಧಮನ್ನಂ ತೇಷಾಂ ಮಹಾತ್ಮನಾಮ್|
16004013c ತದ್ವಾನರೇಭ್ಯಃ ಪ್ರದದುಃ ಸುರಾಗಂಧಸಮನ್ವಿತಮ್||
ಆ ಮಹಾತ್ಮರು ಬ್ರಾಹ್ಮಣರಿಗಾಗಿ ಸಿದ್ಧಪಡಿಸಿದ್ದ ಆಹಾರವನ್ನು ಸುರೆಯೊಂದಿಗೆ ಕಲಸಿ ಅಲ್ಲಿದ್ದ ಮಂಗಗಳಿಗೆ ತಿನ್ನಿಸಿದರು.
16004014a ತತಸ್ತೂರ್ಯಶತಾಕೀರ್ಣಂ ನಟನರ್ತಕಸಂಕುಲಮ್|
16004014c ಪ್ರಾವರ್ತತ ಮಹಾಪಾನಂ ಪ್ರಭಾಸೇ ತಿಗ್ಮತೇಜಸಾಮ್||
ಆಗ ಪ್ರಭಾಸದಲ್ಲಿ ಆ ಮಹಾತೇಜಸ್ವಿಗಳ ಅತಿದೊಡ್ಡ ಸುರಾಪಾನ ಕೂಟವು ಪ್ರಾರಂಭವಾಯಿತು. ನೂರಾರು ತೂರ್ಯಗಳು ಮೊಳಗಿದವು, ನಾಟಕ-ನರ್ತನಗಳು ನಡೆಯುತ್ತಿದ್ದವು.
16004015a ಕೃಷ್ಣಸ್ಯ ಸನ್ನಿಧೌ ರಾಮಃ ಸಹಿತಃ ಕೃತವರ್ಮಣಾ|
16004015c ಅಪಿಬದ್ಯುಯುಧಾನಶ್ಚ ಗದೋ ಬಭ್ರುಸ್ತಥೈವ ಚ||
ಕೃಷ್ಣನ ಸನ್ನಿಧಿಯಲ್ಲಿ ಬಲರಾಮನು ಕುಡಿಯ ತೊಡಗಿದನು, ಮತ್ತು ಅವನೊಡನೆ ಕೃತವರ್ಮ, ಯುಯುಧಾನ ಸಾತ್ಯಕಿ, ಗದ, ಬಭ್ರುಗಳೂ ಕುಡಿಯ ತೊಡಗಿದರು.
16004016a ತತಃ ಪರಿಷದೋ ಮಧ್ಯೇ ಯುಯುಧಾನೋ ಮದೋತ್ಕಟಃ|
16004016c ಅಬ್ರವೀತ್ಕೃತವರ್ಮಾಣಮವಹಸ್ಯಾವಮನ್ಯ ಚ||
ಆಗ ಆ ಪರಿಷತ್ತಿನಲ್ಲಿ ಅಮಲೇರಿದ್ದ ಯುಯುಧಾನನು ಕೃತವರ್ಮನನ್ನು ಹೀಯಾಳಿಸಿ ನಗುತ್ತಾ ಹೀಗೆ ಹೇಳಿದನು:
16004017a ಕಃ ಕ್ಷತ್ರಿಯೋ ಮನ್ಯಮಾನಃ ಸುಪ್ತಾನ್ ಹನ್ಯಾನ್ಮೃತಾನಿವ|
16004017c ನ ತನ್ಮೃಷ್ಯಂತಿ ಹಾರ್ದಿಕ್ಯ ಯಾದವಾ ಯತ್ತ್ವಯಾ ಕೃತಮ್||
“ಮೃತರಂತೆ ಮಲಗಿದ್ದವರನ್ನು ಸಂಹರಿಸಿದ ಯಾರು ತಾನೇ ತನ್ನನ್ನು ಕ್ಷತ್ರಿಯನೆಂದು ಕರೆದುಕೊಳ್ಳುತ್ತಾನೆ? ಹಾರ್ದಿಕ್ಯ! ನಿನ್ನ ಆ ಕೃತ್ಯವನ್ನು ಯಾದವರು ಎಂದೂ ಕ್ಷಮಿಸುವುದಿಲ್ಲ!”
16004018a ಇತ್ಯುಕ್ತೇ ಯುಯುಧಾನೇನ ಪೂಜಯಾಮಾಸ ತದ್ವಚಃ|
16004018c ಪ್ರದ್ಯುಮ್ನೋ ರಥಿನಾಂ ಶ್ರೇಷ್ಠೋ ಹಾರ್ದಿಕ್ಯಮವಮನ್ಯ ಚ||
ಯುಯುಧಾನನು ಹೀಗೆ ಹೇಳಲು ರಥಿಗಳಲ್ಲಿ ಶ್ರೇಷ್ಠ ಪ್ರದ್ಯುಮ್ನನು ಅವನ ಮಾತನ್ನು ಗೌರವಿಸಿದನು ಮತ್ತು ಹಾರ್ದಿಕ್ಯನನ್ನು ಅಪಮಾನಿಸಿದನು.
16004019a ತತಃ ಪರಮಸಂಕ್ರುದ್ಧಃ ಕೃತವರ್ಮಾ ತಮಬ್ರವೀತ್|
16004019c ನಿರ್ದಿಶನ್ನಿವ ಸಾವಜ್ಞಂ ತದಾ ಸವ್ಯೇನ ಪಾಣಿನಾ||
ಆಗ ಪರಮ ಸಂಕ್ರುದ್ಧನಾದ ಕೃತವರ್ಮನು ತನ್ನ ಎಡಗೈಯನ್ನು ಚಾಚಿ ತೋರಿಸಿ ಹೀಯಾಳಿಸುತ್ತಾ ಹೇಳಿದನು:
16004020a ಭೂರಿಶ್ರವಾಶ್ಚಿನ್ನಬಾಹುರ್ಯುದ್ಧೇ ಪ್ರಾಯಗತಸ್ತ್ವಯಾ|
16004020c ವಧೇನ ಸುನೃಶಂಸೇನ ಕಥಂ ವೀರೇಣ ಪಾತಿತಃ||
“ವೀರನಾದವನು ಹೇಗೆ ತಾನೇ ಯುದ್ಧದಲ್ಲಿ ಬಾಹುಗಳು ಕತ್ತರಿಸಲ್ಪಟ್ಟು ಪ್ರಾಯೋಪವೇಶಮಾಡಿದ್ದ ಭೂರಿಶ್ರವನನ್ನು ಹಿಂಸಾತ್ಮಕವಾಗಿ ಕೊಂದು ಕೆಳಗುರುಳಿಸಿದನು?”
16004021a ಇತಿ ತಸ್ಯ ವಚಃ ಶ್ರುತ್ವಾ ಕೇಶವಃ ಪರವೀರಹಾ|
16004021c ತಿರ್ಯಕ್ಸರೋಷಯಾ ದೃಷ್ಟ್ಯಾ ವೀಕ್ಷಾಂ ಚಕ್ರೇ ಸ ಮನ್ಯುಮಾನ್||
ಅವನ ಈ ಮಾತನ್ನು ಕೇಳಿ ಪರವೀರಹ ಕೇಶವನು ತೀವ್ರ ರೋಷದಿಂದ ಕೋಪದೃಷ್ಟಿಯಲ್ಲಿ ಅವನನ್ನು ನೋಡಿದನು.
16004022a ಮಣಿಃ ಸ್ಯಮಂತಕಶ್ಚೈವ ಯಃ ಸ ಸತ್ರಾಜಿತೋಽಭವತ್|
16004022c ತಾಂ ಕಥಾಂ ಸ್ಮಾರಯಾಮಾಸ ಸಾತ್ಯಕಿರ್ಮಧುಸೂದನಮ್||
ಆಗ ಸಾತ್ಯಕಿಯು ಮಧುಸೂದನನಿಗೆ ಸತ್ರಾಜಿತನ ಸ್ಯಮಂತಕ ಮಣಿಯ ಪ್ರಕರಣದಲ್ಲಿ ಕೃತವರ್ಮನು ನಡೆದುಕೊಂಡ ರೀತಿಯ ಕುರಿತು ನಡೆದುದನ್ನು ನೆನಪಿಸಿಕೊಟ್ಟನು.
16004023a ತಚ್ಛೃತ್ವಾ ಕೇಶವಸ್ಯಾಂಕಮಗಮದ್ರುದತೀ ತದಾ|
16004023c ಸತ್ಯಭಾಮಾ ಪ್ರಕುಪಿತಾ ಕೋಪಯಂತೀ ಜನಾರ್ದನಮ್||
ಅದನ್ನು ಕೇಳಿ ಕುಪಿತಳಾದ ಸತ್ಯಭಾಮೆಯು ರೋದಿಸುತ್ತ ಬಂದು ಕೇಶವನ ತೊಡೆಯ ಮೇಲೆ ಕುಳಿತುಕೊಂಡು ಕೃತವರ್ಮನ ಮೇಲೆ ಜನಾರ್ದನನ ಕೋಪವನ್ನು ಇನ್ನೂ ಹೆಚ್ಚಿಸಿದಳು.
16004024a ತತ ಉತ್ಥಾಯ ಸಕ್ರೋಧಃ ಸಾತ್ಯಕಿರ್ವಾಕ್ಯಮಬ್ರವೀತ್|
16004024c ಪಂಚಾನಾಂ ದ್ರೌಪದೇಯಾನಾಂ ಧೃಷ್ಟದ್ಯುಮ್ನಶಿಖಂಡಿನೋಃ||
16004025a ಏಷ ಗಚ್ಚಾಮಿ ಪದವೀಂ ಸತ್ಯೇನ ಚ ತಥಾ ಶಪೇ|
16004025c ಸೌಪ್ತಿಕೇ ಯೇ ಚ ನಿಹತಾಃ ಸುಪ್ತಾನೇನ ದುರಾತ್ಮನಾ||
16004026a ದ್ರೋಣಪುತ್ರಸಹಾಯೇನ ಪಾಪೇನ ಕೃತವರ್ಮಣಾ|
16004026c ಸಮಾಪ್ತಮಾಯುರಸ್ಯಾದ್ಯ ಯಶಶ್ಚಾಪಿ ಸುಮಧ್ಯಮೇ||
ಆಗ ಸಾತ್ಯಕಿಯು ಕ್ರೋಧದಿಂದ ಮೇಲೆದ್ದು ಹೀಗೆ ಹೇಳಿದನು: “ಆ ರಾತ್ರಿ ಪಾಪಿ ದ್ರೋಣಪುತ್ರನ ಸಹಾಯದಿಂದ ಮಲಗಿದ್ದವರನ್ನು ಸಂಹರಿಸಿದ ಈ ದುರಾತ್ಮ ಕೃತವರ್ಮನನ್ನು ಆ ಐವರು ದ್ರೌಪದೇಯರ ಮತ್ತು ಧೃಷ್ಟದ್ಯುಮ್ನ-ಶಿಖಂಡಿಯರ ಪದವಿಗೆ ಕಳುಹಿಸುತ್ತೇನೆಂದು ಸತ್ಯ ಶಪಥಮಾಡುತ್ತೇನೆ! ಸುಮಧ್ಯಮೇ ಸತ್ಯಭಾಮಾ! ಇಂದು ಇವನ ಯಶಸ್ಸು ಮತ್ತು ಆಯಸ್ಸು ಮುಗಿದುಹೋಯಿತು!”
16004027a ಇತೀದಮುಕ್ತ್ವಾ ಖಡ್ಗೇನ ಕೇಶವಸ್ಯ ಸಮೀಪತಃ|
16004027c ಅಭಿದ್ರುತ್ಯ ಶಿರಃ ಕ್ರುದ್ಧಶ್ಚಿಚ್ಚೇದ ಕೃತವರ್ಮಣಃ||
ಹೀಗೆ ಹೇಳಿ ಕ್ರುದ್ಧ ಸಾತ್ಯಕಿಯು ಖಡ್ಗದಿಂದ ಕೇಶವನ ಸಮೀಪದಲ್ಲಿದ್ದ ಕೃತವರ್ಮನನ್ನು ಆಕ್ರಮಣಿಸಿ ಅವನ ಶಿರವನ್ನು ಕತ್ತರಿಸಿದನು.
16004028a ತಥಾನ್ಯಾನಪಿ ನಿಘ್ನಂತಂ ಯುಯುಧಾನಂ ಸಮಂತತಃ|
16004028c ಅಭ್ಯಧಾವದ್ಧೃಷೀಕೇಶೋ ವಿನಿವಾರಯಿಷುಸ್ತದಾ||
ಹಾಗೆಯೇ ಸುತ್ತಲಿದ್ದ ಇತರರನ್ನೂ ಸಂಹರಿಸುತ್ತಿದ್ದ ಯುಯುಧಾನನನ್ನು ತಡೆಯಲು ಹೃಷೀಕೇಶನು ಧಾವಿಸಿದನು.
16004029a ಏಕೀಭೂತಾಸ್ತತಃ ಸರ್ವೇ ಕಾಲಪರ್ಯಾಯಚೋದಿತಾಃ|
16004029c ಭೋಜಾಂಧಕಾ ಮಹಾರಾಜ ಶೈನೇಯಂ ಪರ್ಯವಾರಯನ್||
ಮಹಾರಾಜ! ಆಗ ಕಾಲಪಲ್ಲಟದಿಂದ ಪ್ರಚೋದಿತ ಭೋಜ-ಅಂಧಕರೆಲ್ಲರೂ ಒಂದಾಗಿ ಶೈನೇಯ ಸಾತ್ಯಕಿಯನ್ನು ಸುತ್ತುವರೆದರು.
16004030a ತಾನ್ದೃಷ್ಟ್ವಾ ಪತತಸ್ತೂರ್ಣಮಭಿಕ್ರುದ್ಧಾನ್ಜನಾರ್ದನಃ|
16004030c ನ ಚುಕ್ರೋಧ ಮಹಾತೇಜಾ ಜಾನನ್ಕಾಲಸ್ಯ ಪರ್ಯಯಮ್||
ಕ್ರುದ್ಧರಾದ ಅವರು ಸಾತ್ಯಕಿಯ ಮೇಲೆ ಬೀಳುತ್ತಿರುವುದನ್ನು ನೋಡಿಯೂ ಮಹಾತೇಜಸ್ವಿ ಜನಾರ್ದನನು ಕಾಲದ ಬದಲಾವಣೆಯನ್ನು ತಿಳಿದು ಕ್ರೋಧಿತನಾಗಲಿಲ್ಲ.
16004031a ತೇ ತು ಪಾನಮದಾವಿಷ್ಟಾಶ್ಚೋದಿತಾಶ್ಚೈವ ಮನ್ಯುನಾ|
16004031c ಯುಯುಧಾನಮಥಾಭ್ಯಘ್ನನ್ನುಚ್ಚಿಷ್ಟೈರ್ಭಾಜನೈಸ್ತದಾ||
ಪಾನಮದದಿಂದ ಆವಿಷ್ಟರಾಗಿದ್ದ ಅವರು ಕೋಪದಿಂದ ಪ್ರಚೋದಿತರಾಗಿ ಯುಯುಧಾನನನ್ನು ಎಂಜಲು ಆಹಾರಗಳಿದ್ದ ಪಾತ್ರೆಗಳಿಂದಲೇ ಹೊಡೆಯತೊಡಗಿದರು.
16004032a ಹನ್ಯಮಾನೇ ತು ಶೈನೇಯೇ ಕ್ರುದ್ಧೋ ರುಕ್ಮಿಣಿನಂದನಃ|
16004032c ತದಂತರಮುಪಾಧಾವನ್ಮೋಕ್ಷಯಿಷ್ಯನ್ಶಿನೇಃ ಸುತಮ್||
ಶೈನೇಯನನ್ನು ಹಾಗೆ ಹೊಡೆಯುತ್ತಿರಲು ಕ್ರುದ್ಧನಾದ ರುಕ್ಮಿಣೀನಂದನ ಪ್ರದ್ಯುಮ್ನನು ಓಡಿ ಬಂದು ಶೈನಿಯ ಮಗ ಸಾತ್ಯಕಿಯನ್ನು ಬಿಡಿಸಲು ಪ್ರಯತ್ನಿಸಿದನು.
16004033a ಸ ಭೋಜೈಃ ಸಹ ಸಂಯುಕ್ತಃ ಸಾತ್ಯಕಿಶ್ಚಾಂಧಕೈಃ ಸಹ|
16004033c ಬಹುತ್ವಾನ್ನಿಹತೌ ತತ್ರ ಉಭೌ ಕೃಷ್ಣಸ್ಯ ಪಶ್ಯತಃ||
ಸಾತ್ಯಕಿ-ಪ್ರದ್ಯುಮ್ನರಿಬ್ಬರೂ ಒಂದಾಗಿ ಭೋಜ-ಅಂಧಕರೊಂದಿಗೆ ಸೆಣೆಸಾಡಿದರು. ಆದರೆ ಅನೇಕರಿದ್ದ ಭೋಜ-ಅಂಧಕರು ಅವರಿಬ್ಬರನ್ನೂ, ಕೃಷ್ಣನು ನೋಡುತ್ತಿದ್ದಂತೆಯೇ, ಸಂಹರಿಸಿದರು.
16004034a ಹತಂ ದೃಷ್ಟ್ವಾ ತು ಶೈನೇಯಂ ಪುತ್ರಂ ಚ ಯದುನಂದನಃ|
16004034c ಏರಕಾಣಾಂ ತದಾ ಮುಷ್ಟಿಂ ಕೋಪಾಜ್ಜಗ್ರಾಹ ಕೇಶವಃ||
ಶೈನೇಯನೂ ತನ್ನ ಮಗನೂ ಹತರಾದುದನ್ನು ನೋಡಿದ ಯದುನಂದನ ಕೇಶವನು ಕೋಪದಿಂದ ಒಂದು ಮುಷ್ಟಿ ಎರಕ ಹುಲ್ಲನ್ನು ಹಿಡಿದುಕೊಂಡನು.
16004035a ತದಭೂನ್ಮುಸಲಂ ಘೋರಂ ವಜ್ರಕಲ್ಪಮಯೋಮಯಮ್|
16004035c ಜಘಾನ ತೇನ ಕೃಷ್ಣಸ್ತಾನ್ಯೇಽಸ್ಯ ಪ್ರಮುಖತೋಽಭವನ್||
ಅದು ಲೋಹಮಯವಾದ ವಜ್ರದಂಥಹ ಘೋರ ಮುಸಲವಾಯಿತು. ಅದರಿಂದ ಕೃಷ್ಣನು ತನ್ನ ಎದುರಿದ್ದ ಅನ್ಯರೆಲ್ಲರನ್ನೂ ಸಂಹರಿಸಿದನು.
16004036a ತತೋಽಂಧಕಾಶ್ಚ ಭೋಜಾಶ್ಚ ಶೈನೇಯಾ ವೃಷ್ಣಯಸ್ತಥಾ|
16004036c ಜಘ್ನುರನ್ಯೋನ್ಯಮಾಕ್ರಂದೇ ಮುಸಲೈಃ ಕಾಲಚೋದಿತಾಃ||
ಅನಂತರ ಅಂಧಕರು, ಭೋಜರು, ಶೈನೇಯರು, ಮತ್ತು ವೃಷ್ಣಿಗಳು ಕಾಲಚೋದಿತರಾಗಿ ಮುಸಲಗಳಿಂದ ಅನ್ಯೋನ್ಯರನ್ನು ಆಕ್ರಮಣಿಸಿ ಸಂಹರಿಸಿದರು.
16004037a ಯಸ್ತೇಷಾಮೇರಕಾಂ ಕಶ್ಚಿಜ್ಜಗ್ರಾಹ ರುಷಿತೋ ನೃಪ|
16004037c ವಜ್ರಭೂತೇವ ಸಾ ರಾಜನ್ನದೃಶ್ಯತ ತದಾ ವಿಭೋ||
ನೃಪ! ವಿಭೋ! ರಾಜನ್! ಅವರಲ್ಲಿ ರೋಷದಿಂದ ಯಾರು ಆ ಎರಕದ ಹುಲ್ಲನ್ನು ಹಿಡಿದರೋ ಅವರ ಕೈಯಲ್ಲೆಲ್ಲಾ ಆ ಹುಲ್ಲು ವಜ್ರಾಯುಧದಂತೆ ಕಾಣುತ್ತಿತ್ತು.
16004038a ತೃಣಂ ಚ ಮುಸಲೀಭೂತಮಪಿ ತತ್ರ ವ್ಯದೃಶ್ಯತ|
16004038c ಬ್ರಹ್ಮದಂಡಕೃತಂ ಸರ್ವಮಿತಿ ತದ್ವಿದ್ಧಿ ಪಾರ್ಥಿವ||
ಪಾರ್ಥಿವ! ಹುಲ್ಲೂ ಮುಸಲವಾದುದು ಕಂಡುಬಂದಿತೆಂದರೆ ಅದೆಲ್ಲವೂ ಆ ಋಷಿಗಳ ಶಾಪದಿಂದ ಆಯಿತೆಂದು ತಿಳಿದುಕೋ.
16004039a ಆವಿಧ್ಯಾವಿಧ್ಯ ತೇ ರಾಜನ್ಪ್ರಕ್ಷಿಪಂತಿ ಸ್ಮ ಯತ್ತೃಣಮ್|
16004039c ತದ್ವಜ್ರಭೂತಂ ಮುಸಲಂ ವ್ಯದೃಶ್ಯತ ತದಾ ದೃಢಮ್||
ರಾಜನ್! ಆ ಹುಲ್ಲನ್ನು ಎಸೆದಾಗಲೆಲ್ಲ ಅದು ವಜ್ರದಂಥಹ ಗಟ್ಟಿಯಾದ ಮುಸಲ ರೂಪವನ್ನು ತಾಳುತ್ತಿತ್ತು.
16004040a ಅವಧೀತ್ಪಿತರಂ ಪುತ್ರಃ ಪಿತಾ ಪುತ್ರಂ ಚ ಭಾರತ|
16004040c ಮತ್ತಾಃ ಪರಿಪತಂತಿ ಸ್ಮ ಪೋಥಯಂತಃ ಪರಸ್ಪರಮ್||
ಭಾರತ! ಮಗನು ತಂದೆಯನ್ನೂ, ತಂದೆಯು ಮಗನನ್ನೂ ಮತ್ತರಾಗಿ ಪರಸ್ಪರರನ್ನು ಹೊಡೆದು ಉರುಳಿಸಿದರು.
16004041a ಪತಂಗಾ ಇವ ಚಾಗ್ನೌ ತೇ ನ್ಯಪತನ್ಕುಕುರಾಂಧಕಾಃ|
16004041c ನಾಸೀತ್ಪಲಾಯನೇ ಬುದ್ಧಿರ್ವಧ್ಯಮಾನಸ್ಯ ಕಸ್ಯ ಚಿತ್||
ಬೆಂಕಿಯಲ್ಲಿ ಬೀಳುವ ಪತಂಗಗಳಂತೆ ಕುಕುರ-ಅಂಧಕರು ಕೆಳಗುರುಳಿದರು. ಅಲ್ಲಿ ವಧಿಸಲ್ಪಡುತ್ತಿದ್ದ ಯಾರೂ ಪಲಾಯನದ ಕುರಿತು ಯೋಚಿಸಲಿಲ್ಲ.
16004042a ತಂ ತು ಪಶ್ಯನ್ಮಹಾಬಾಹುರ್ಜಾನನ್ಕಾಲಸ್ಯ ಪರ್ಯಯಮ್|
16004042c ಮುಸಲಂ ಸಮವಷ್ಟಭ್ಯ ತಸ್ಥೌ ಸ ಮಧುಸೂದನಃ||
ಕಾಲದ ತಿರುವನ್ನು ನೋಡಿ ತಿಳಿದುಕೊಂಡ ಮಹಾಬಾಹು ಮಧುಸೂದನನು ಮುಸಲವನ್ನು ತಿರುಗಿಸುತ್ತಾ ನಿಂತನು.
16004043a ಸಾಂಬಂ ಚ ನಿಹತಂ ದೃಷ್ಟ್ವಾ ಚಾರುದೇಷ್ಣಂ ಚ ಮಾಧವಃ|
16004043c ಪ್ರದ್ಯುಮ್ನಂ ಚಾನಿರುದ್ಧಂ ಚ ತತಶ್ಚುಕ್ರೋಧ ಭಾರತ||
ಭಾರತ! ಸಾಂಬ, ಚಾರುದೇಷ್ಣ, ಪ್ರದ್ಯುಮ್ನ ಮತ್ತು ಅನಿರುದ್ಧರು ಹತರಾದುದನ್ನು ನೋಡಿ ಮಾಧವನು ಕುಪಿತನಾದನು.
16004044a ಗದಂ ವೀಕ್ಷ್ಯ ಶಯಾನಂ ಚ ಭೃಶಂ ಕೋಪಸಮನ್ವಿತಃ|
16004044c ಸ ನಿಃಶೇಷಂ ತದಾ ಚಕ್ರೇ ಶಾಙ್ರಚಕ್ರಗದಾಧರಃ||
ಗದನೂ ಮಲಗಿದ್ದುದನ್ನು ನೋಡಿ ತುಂಬಾ ಕೋಪಸಮನ್ವಿತನಾದ ಶಾಂಙ್ರಚಕ್ರಗದಾಧರನು ಎಲ್ಲರನ್ನೂ ನಿಃಶೇಷರನ್ನಾಗಿ ಮಾಡಿದನು.
16004045a ತಂ ನಿಘ್ನಂತಂ ಮಹಾತೇಜಾ ಬಭ್ರುಃ ಪರಪುರಂಜಯಃ|
16004045c ದಾರುಕಶ್ಚೈವ ದಾಶಾರ್ಹಮೂಚತುರ್ಯನ್ನಿಬೋಧ ತತ್||
ಅವರನ್ನು ಸಂಹರಿಸುತ್ತಿದ್ದ ಆ ಮಹಾತೇಜಸ್ವಿ ದಾಶಾರ್ಹನನ್ನು ಪರಪುರಂಜಯ ಬಭ್ರು ಮತ್ತು ದಾರುಕರು ನೋಡಿ ಹೀಗೆಂದರು:
16004046a ಭಗವನ್ಸಂಹೃತಂ ಸರ್ವಂ ತ್ವಯಾ ಭೂಯಿಷ್ಠಮಚ್ಯುತ|
16004046c ರಾಮಸ್ಯ ಪದಮನ್ವಿಚ್ಚ ತತ್ರ ಗಚ್ಚಾಮ ಯತ್ರ ಸಃ||
“ಭಗವನ್! ನೀನು ಹೆಚ್ಚಾಗಿ ಎಲ್ಲರನ್ನೂ ಸಂಹರಿಸಿದ್ದೀಯೆ! ಈಗ ಬಲರಾಮನು ಹಿಡಿದ ದಾರಿಯಲ್ಲಿಯೇ ನಡೆದು ಅವನಿದ್ದಲ್ಲಿಗೆ ಹೋಗೋಣ!””
ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಕೃತವರ್ಮಾದೀನಾಂ ಪರಸ್ಪರಹನನೇ ಚತುರ್ಥೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಕೃತವರ್ಮಾದೀನಾಂ ಪರಸ್ಪರಹನನ ಎನ್ನುವ ನಾಲ್ಕನೇ ಅಧ್ಯಾಯವು.