ಹರಿವಂಶ: ವಿಷ್ಣುಪರ್ವಃ
೬೨
ಯಮಲಾರ್ಜುನಭಂಗಃ
ಯಮಲಾರ್ಜುನಭಂಗ (1-37).
19062001 ವೈಶಂಪಾಯನ ಉವಾಚ |
19062001a ಕಾಲೇ ಗಚ್ಛತಿ ತೌ ಸೌಮ್ಯೌ ದಾರಕೌ ಕೃತನಾಮಕೌ |
19062001c ಕೃಷ್ಣಸಂಕರ್ಷಣೌ ಚೋಭೌ ರಿಂಗಿಣೌ ಸಮಪದ್ಯತಾಮ್ ||
ವೈಶಂಪಾಯನನು ಹೇಳಿದನು: “ಕಾಲವು ಕಳೆದಂತೆ ಕೃಷ್ಣ-ಸಂಕರ್ಷಣ ಎಂಬ ಹೆಸರಿಟ್ಟಿದ್ದ ಆ ಇಬ್ಬರು ಸೌಮ್ಯ ಶಿಶುಗಳು ಅಂಬೆಗಾಲಿಕ್ಕತೊಡಗಿದವು.
19062002a ತಾವನ್ಯೋನ್ಯಗತೌ ಬಾಲೌ ಬಾಲ್ಯಾದೇವೈಕತಾಂ ಗತೌ |
19062002c ಏಕಮೂರ್ತಿಧರೌ ಕಾಂತೌ ಬಾಲಚಂದ್ರಾರ್ಕವರ್ಚಸೌ ||
ಆ ಬಾಲಕರಿಬ್ಬರೂ ಅನ್ಯೋನ್ಯರಾಗಿದ್ದರು. ಬಾಲಕರಿಬ್ಬರೂ ಒಂದೇ ಎಂಬಂತಿದ್ದರು. ಉದಯಿಸುತ್ತಿರುವ ಚಂದ್ರ-ಸೂರ್ಯರ ವರ್ಚಸ್ಸಿನಿಂದ ಕೂಡಿ ಆಕರ್ಷಿತರಾಗಿದ್ದ ಅವರಿಬ್ಬರ ಶರೀರವೂ ಒಂದೇ ಆಗಿ ಕಾಣುತ್ತಿತ್ತು.
19062003a ಏಕನಿರ್ಮಾಣನಿರ್ಮುಕ್ತಾವೇಕಶಯ್ಯಾಸನಾಶನೌ |
19062003c ಏಕವೇಷಹರಾವೇಕಂ ಪುಷ್ಯಮಾನೌ ಶಿಶುವ್ರತಮ್ ||
ಅವರಿಬ್ಬರೂ ಒಂದೇ ರೀತಿಯಲ್ಲಿ ಮಾಡಲ್ಪಟ್ಟಿದ್ದರು. ಒಂದೇ ರೀತಿಯಲ್ಲಿ ನಿರ್ಮುಕ್ತರಾಗಿದ್ದರು. ಒಂದೇ ಹಾಸಿಗೆಯಲ್ಲಿ ಮಲಗುತ್ತಿದ್ದರು. ಒಂದೇ ಆಸನದಲ್ಲಿ ಕುಳಿತುಕೊಳ್ಳುತ್ತಿದ್ದರು ಮತ್ತು ಒಟ್ಟಿಗೇ ಊಟಮಾಡುತ್ತಿದ್ದರು. ಒಂದೇ ರೀತಿಯ ವೇಷಭೂಷಣಗಳನ್ನು ಧರಿಸುತ್ತಿದ್ದರು. ಒಂದೇ ರೀತಿಯ ಶಿಶುಚರ್ಯವನ್ನು ನಡೆಸುತ್ತಿದ್ದರು.
19062004a ಏಕಕಾರ್ಯಾಂತರಗತಾವೇಕದೇಹೌ ದ್ವಿಧಾಕೃತೌ |
19062004c ಏಕಚರ್ಯೌ ಮಹಾವೀರ್ಯಾವೇಕಸ್ಯ ಶಿಶುತಾಂ ಗತೌ ||
ಎರಡಾಗಿದ್ದರೂ ಒಂದೇ ದೇಹವೋ ಎಂಬಂತೆ ಇಬ್ಬರೂ ಒಂದೇ ಕಾರ್ಯದಲ್ಲಿ ತೊಡಗುತ್ತಿದ್ದರು. ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದ ಅವರು ಶಿಶುಗಳಾಗಿದ್ದರೂ ಸಮನಾಗಿ ಮಹಾವೀರ್ಯವಂತರಾಗಿದ್ದರು.
19062005a ಏಕಪ್ರಮಾಣೌ ಲೋಕಾನಾಂ ದೇವವೃತ್ತಾಂತಮಾನುಷೌ |
19062005c ಕೃತ್ಸ್ನಸ್ಯ ಜಗತೋ ಗೋಪಾ ಸಂವೃತ್ತೌ ಗೋಪದಾರಕೌ ||
ಅವರ ಶರೀರಗಳು ಒಂದೇ ಪ್ರಮಾಣದಲ್ಲಿದ್ದವು. ಇಬ್ಬರೂ ದೇವತೆಗಳ ಉದ್ದೇಶಕ್ಕಾಗಿ ಮನುಷ್ಯ ಜನ್ಮವನ್ನು ತಳೆದಿದ್ದರು. ಸಂಪೂರ್ಣ ಜಗತ್ತಿನ ರಕ್ಷಕರಾಗಿದ್ದ ಅವರು ಗೋಪಬಾಲಕರಾಗಿ ಗೋಪರ ಮಧ್ಯೆ ಬೆಳೆಯುತ್ತಿದ್ದರು.
19062006a ಅನ್ಯೋನ್ಯವ್ಯತಿಷಕ್ತಾಭಿಃ ಕ್ರೀಡಾಭಿರಭಿಶೋಭಿತೌ |
19062006c ಅನ್ಯೋನ್ಯಕಿರಣಗ್ರಸ್ತೌ ಚಂದ್ರಸೂರ್ಯಾವಿವಾಂಬರೇ ||
ಅನ್ಯೋನ್ಯರನ್ನು ಪ್ರೀತಿಸುತ್ತಿದ್ದ ಅವರು ಆಡುತ್ತಿದ್ದಾಗ ಅತಿಯಾಗಿ ಶೋಭಿಸುತ್ತಿದ್ದರು. ಅಂಬರದಲ್ಲಿ ಚಂದ್ರ-ಸೂರ್ಯರಂತೆ ಅವರು ಅನ್ಯೋನ್ಯರ ಕಿರಣಗಳನ್ನು ಸೂಸುತ್ತಿದ್ದರು.
19062007a ವಿಸರ್ಪಂತೌ ತು ಸರ್ವತ್ರ ಸರ್ಪಭೋಗಭುಜಾವುಭೌ |
19062007c ರೇಜತುಃ ಪಾಂಸುದಿಗ್ಧಾಂಗೌ ದೃಪ್ತೌ ಕಲಭಕಾವಿವ ||
ಹಾವಿನ ಹೆಡೆಗಳಂತಿದ್ದ ಭುಜಗಳಿಂದ ಅವರಿಬ್ಬರೂ ಎಲ್ಲಕಡೆ ಹರಿದಾಡುತ್ತಿದ್ದರು. ಅಂಗಾಂಗಗಳು ಧೂಳಿನಿಂದ ತುಂಬಿಕೊಂಡಿದ್ದಾಗ ಅವರು ಸೊಕ್ಕಿದ ಆನೆಯ ಮರಿಗಳಂತೆ ತೋರುತ್ತಿದ್ದರು.
19062008a ಕ್ವಚಿದ್ಭಸ್ಮಪ್ರದೀಪ್ತಾಂಗೌ ಕರೀಷಪ್ರೋಕ್ಷಿತೌ ಕ್ವಚಿತ್ |
19062008c ತೌ ತತ್ರ ಪರ್ಯಧಾವೇತಾಂ ಕುಮಾರಾವಿವ ಪಾವಕೀ ||
ಕೆಲವೊಮ್ಮೆ ಅವರ ಅಂಗಾಂಗಗಳು ಬೂದಿಯಿಂದ ಲೇಪಗೊಳ್ಳುತ್ತಿತ್ತು. ಕೆಲವೊಮ್ಮೆ ಸಗಣಿಯಿಂದ ಲೇಪಗೊಳ್ಳುತ್ತಿದ್ದವು. ಪಾವಕನ ಮಗ ಕುಮಾರನಂತೆ ಅವರು ಅಲ್ಲಲ್ಲಿ ಓಡಾಡುತ್ತಿದ್ದರು.
19062009a ಕ್ವಚಿಜ್ಜಾನುಭಿರುದ್ಘೃಷ್ಟೈಃ ಸರ್ಪಮಾನೌ ವಿರೇಜತುಃ |
19062009c ಕ್ರೀಡಂತೌ ವತ್ಸಶಾಲಾಸು ಶಕೃದ್ದಿಗ್ಧಾಂಗಮೂರ್ಧಜೌ ||
ಕೆಲವೊಮ್ಮೆ ಅವರು ತಮ್ಮ ತೊಡೆಗಳನ್ನೂರಿ ತೆವಳುತ್ತಾ ರಾರಾಜಿಸುತ್ತಿದ್ದರು. ಗೋಕರುಗಳ ಕೊಟ್ಟಿಗೆಯಲ್ಲಿ ಆಟವಾಡುತ್ತಿದ್ದಾಗ ಅವರ ಅಂಗಾಂಗ ಮತ್ತು ನೆತ್ತಿಗಳು ಸಗಣಿಯಿಂದ ಲೇಪಗೊಳ್ಳುತ್ತಿದ್ದವು.
19062010a ಶುಶುಭಾತೇ ಶ್ರಿಯಾ ಜುಷ್ಟಾವಾನಂದಜನನೌ ಪಿತುಃ |
19062010c ಜನಂ ಚ ವಿಪ್ರಕುರ್ವಾಣೌ ವಿಹಸಂತೌ ಕ್ವಚಿತ್ಕ್ವಚಿತ್ ||
ರೂಪದಲ್ಲಿ ಅವರು ಶೋಭಿಸುತ್ತಿದ್ದರು ಮತ್ತು ತಾಯಿ-ತಂದೆಯರಿಗೆ ಆನಂದವನ್ನುಂಟುಮಾಡುತ್ತಿದ್ದರು. ಆಗಾಗ ಅವರು ತುಂಟಾಟಮಾಡಿ ನಗುತ್ತಿದ್ದರು.
19062011a ತೌ ತತ್ರ ಕೌತೂಹಲಿನೌ ಮೂರ್ಧಜವ್ಯಾಕುಲೇಕ್ಷಣೌ |
19062011c ರೇಜತುಶ್ಚಂದ್ರವದನೌ ದಾರಕೌ ಸುಕುಮಾರಕೌ ||
ಕುತೂಹಲರಾಗಿದ್ದಾಗ ಅಲ್ಲಿ ಅವರ ಮುಂಗುರುಗೂದಲುಗಳು ಕಣ್ಣುಗಳ ಮೇಲೆ ಬರುತ್ತಿದ್ದವು. ಆ ಸುಕುಮಾರ ಬಾಲಕರ ಮುಖಗಳು ಚಂದ್ರನಂತೆ ಬೆಳಗುತ್ತಿದ್ದವು.
19062012a ಅತಿಪ್ರಸಕ್ತೌ ತೌ ದೃಷ್ಟ್ವಾ ಸರ್ವವ್ರಜವಿಚಾರಿಣೌ
19062012c ನಾಶಕತ್ತೌ ವಾರಯಿತುಂ ನಂದಗೋಪಃ ಸುದುರ್ಮದೌ ||
ಅವರಿಬ್ಬರೂ ವ್ರಜದಲ್ಲೆಲ್ಲಾ ತಿರುಗಾಡಲು ಅತಿ ಆಸಕ್ತರಾಗಿದ್ದರು. ಅವರು ಎಷ್ಟು ದುರ್ಮದರಾಗಿದ್ದರೆಂದರೆ ನಂದಗೋಪನಿಗೂ ಅವರನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ.
19062013a ತತೋ ಯಶೋದಾ ಸಂಕ್ರುದ್ಧಾ ಕೃಷ್ಣಂ ಕಮಲಲೋಚನಮ್ |
19062013c ಆನಾಯ್ಯ ಶಕಟೀಮೂಲೇ ಭರ್ತ್ಸಯಂತೀ ಪುನಃ ಪುನಃ ||
ಆಗ ಕ್ರುದ್ಧಳಾದ ಯಶೋದೆಯು ಕಮಲಲೋಚನ ಕೃಷ್ಣನನ್ನು ಪುನಃ ಪುನಃ ಬೈಯುತ್ತಾ ಒಂದು ಗಾಡಿಯ ಬಳಿ ಕರೆದುಕೊಂಡು ಹೋದಳು.
19062014a ದಾಮ್ನಾ ಚೈವೋದರೇ ಬದ್ಧ್ವಾ ಪ್ರತ್ಯಬಂಧದುಲೂಖಲೇ |
19062014c ಯದಿ ಶಕ್ತೋಽಸಿ ಗಚ್ಛೇತಿ ತಮುಕ್ತ್ವಾ ಕರ್ಮ ಸಾಕರೋತ್ ||
ಅವನ ಹೊಟ್ಟೆಗೆ ಒಂದು ಹಗ್ಗವನ್ನು ಕಟ್ಟಿ ಆ ಹಗ್ಗವನ್ನು ಒರಳಿನ ಕಲ್ಲಿಗೆ ಕಟ್ಟಿಹಾಕಿದಳು. ಹಾಗೆ ಮಾಡಿ “ಸಾಧ್ಯವಾದರೆ ಇದನ್ನು ಬಿಡಿಸಿಕೊಂಡು ಹೋಗು!” ಎಂದು ತನ್ನ ಕಾರ್ಯಗಳಲ್ಲಿ ತೊಡಗಿದಳು.
19062015a ವ್ಯಗ್ರಾಯಾಂ ತು ಯಶೋದಾಯಾಂ ನಿರ್ಜಗಾಮ ತತೋಽಂಗಣಾತ್ |
19062015c ಶಿಶುಲೀಲಾಂ ತತಃ ಕುರ್ವನ್ಕೃಷ್ಣೋ ವಿಸ್ಮಾಪಯನ್ವ್ರಜಮ್ ||
ಯಶೋದೆಯು ತನ್ನ ಕಾರ್ಯಗಳಲ್ಲಿ ಮಗ್ನಳಾಗಿರಲು ಕೃಷ್ಣನು ಶಿಶುಲೀಲೆಯನ್ನು ಮಾಡುತ್ತಾ ವ್ರಜದ ಜನರನ್ನು ವಿಸ್ಮಯಗೊಳಿಸುತ್ತಾ ಅಂಗಳದಿಂದ ಹೊರ ಹೊರಟನು.
19062016a ಸೋಽಂಗಣಾನ್ನಿಸ್ಸೃತಃ ಕೃಷ್ಣಃ ಕರ್ಷಮಾಣ ಉಲೂಖಲಮ್ |
19062016c ಯಮಲಾಭ್ಯಾಂ ಪ್ರವೃದ್ಧಾಭ್ಯಾಮರ್ಜುನಾಭ್ಯಾಂ ಚರನ್ವನೇ |
19062016e ಮಧ್ಯಾನ್ನಿಶ್ಚಕ್ರಾಮ ತಯೋಃ ಕರ್ಷಮಾಣ ಉಲೂಖಲಮ್ ||
ಕೃಷ್ಣನು ಒರಳಿನ ಕಲ್ಲನ್ನು ಎಳೆಯುತ್ತಾ ಅಂಗಳದಿಂದ ಹೊರಬಂದು ವನದಲ್ಲಿ ಬೆಳೆದಿದ್ದ ಎರಡು ಅರ್ಜುನ ವೃಕ್ಷಗಳ ಕಡೆ ಹೋದನು. ಅವನು ಒರಳಿನ ಕಲ್ಲನ್ನು ಎಳೆಯುತ್ತಾ ಆ ಮರಗಳ ಮಧ್ಯದಿಂದ ಹೋದನು.
19062017a ತತ್ತಸ್ಯ ಕರ್ಷತೋ ಭದ್ಧಂ ತಿರ್ಯಗ್ಗತಮುಲೂಖಲಮ್ |
19062017c ಲಗ್ನಂ ತಾಭ್ಯಾಂ ಸಮೂಲಾಭ್ಯಾಮರ್ಜುನಾಭ್ಯಾಂ ಚಕರ್ಷ ಚ ||
ಅವನು ಎಳೆದುಕೊಂಡು ಹೋಗುತ್ತಿದ್ದಂತೆ ಅವನಿಗೆ ಕಟ್ಟುಹಾಕಿದ್ದ ಆ ಒರಳಿನ ಕಲ್ಲು ಮರಗಳಿಗೆ ಅಡ್ಡವಾಗಿ ಸಿಲುಕಿಕೊಂಡಿತು. ಆಗ ಅವನು ಅದಕ್ಕೆ ಸಿಲುಕಿಕೊಂಡಿದ್ದ ಆ ಅರ್ಜುನ ವೃಕ್ಷಗಳನ್ನು ಬೇರುಗಳ ಸಹಿತ ಎಳೆದನು.
19062018a ತಾವರ್ಜುನೌ ಕೃಷ್ಯಮಾಣೌ ತೇನ ಬಾಲೇನ ರಂಹಸಾ |
19062018c ಸಮೂಲವಿಟಪೌ ಭಗ್ನೌ ಸ ತು ಮಧ್ಯೇ ಜಹಾಸ ವೈ ||
ಆ ಬಾಲಕನು ಜೋರಾಗಿ ಎಳೆಯಲು ಅರ್ಜುನ ವೃಕ್ಷಗಳೆರಡೂ ಬೇರುಸಹಿತ ಕಿತ್ತು ಬಿದ್ದಿತು ಮತ್ತು ಅವುಗಳ ಮಧ್ಯದಲ್ಲಿ ಕುಳಿತು ಅವನು ನಗತೊಡಗಿದನು.
19062019a ನಿದರ್ಶನಾರ್ಥಂ ಗೋಪಾಣಾಂ ದಿವ್ಯಂ ಸ್ವಬಲಮಾಸ್ಥಿತಃ |
19062019c ತದ್ದಾಮ ತಸ್ಯ ಬಾಲಸ್ಯ ಪ್ರಭಾವಾದಭವ್ದ್ದೃಢಮ್ ||
ಅವನು ಗೋಪರಿಗೆ ತನ್ನ ದಿವ್ಯ ಬಲವನ್ನು ತೋರಿಸಲೋಸುಗ ಹೀಗೆ ಮಾಡಿದನು. ಆ ಬಾಲಕನ ಪ್ರಭಾವದಿಂದ ಹಗ್ಗವೂ ತುಂಡಾಗದೇ ದೃಢವಾಗಿಯೇ ಇದ್ದಿತು.
19062020a ಯಮುನಾತೀರಮಾರ್ಗಸ್ಥಾ ಗೋಪ್ಯಸ್ತಂ ದದೃಶುಃ ಶಿಶುಮ್ |
19062020c ಕ್ರಂದಂತ್ಯೋ ವಿಸ್ಮಯಂತ್ಯಶ್ಚ ಯಶೋದಾಂ ಯಯುರಂಗನಾಃ ||
ಯಮುನಾ ತೀರದ ಕಡೆ ಹೋಗುತ್ತಿದ್ದ ಗೋಪಿಯರು ಆ ಶಿಶುವನ್ನು ನೋಡಿದರು. ವಿಸ್ಮಯದಿಂದ ಕೂಗಿಕೊಳ್ಳುತ್ತಾ ಆ ಸ್ತ್ರೀಯರು ಯಶೋದೆಯ ಬಳಿ ಓಡಿಬಂದರು.
19062021a ತಾಸ್ತು ಸಂಭ್ರಾಂತವದನಾ ಯಶೋದಾಮೂಚುರಂಗನಾಃ |
19062021c ಏಹ್ಯಾಗಚ್ಛ ಯಶೋದೇ ತ್ವಂ ಸಂಭ್ರಮಾತ್ಕಿಂ ವಿಲಂಬಸೇ ||
ಮುಖದಲ್ಲಿ ಭ್ರಾಂತಗೊಂಡವರಂತಿದ್ದ ಆ ಅಂಗನೆಯರು ಯಶೋದೆಗೆ ಹೇಳಿದರು: “ಯಶೋದೇ! ಇಲ್ಲಿ ಬಾ! ಭಯದಿಂದ ತಡಮಾಡುತ್ತಿದ್ದೀಯಾ?
19062022a ಯೌ ತಾವರ್ಜುನವೃಕ್ಷೌ ತು ವ್ರಜೇ ಸತ್ಯೋಪಯಾಚನೌ |
19062022c ಪುತ್ರಸ್ಯೋಪರಿ ತಾವೇತೌ ಪತಿತೌ ತೇ ಮಹೀರುಹೌ ||
ವ್ರಜದಲ್ಲಿ ನಮ್ಮ ಯಾಚನೆಗಳನ್ನು ಸತ್ಯಗೊಳಿಸುತ್ತಿದ್ದ ಆ ಎರಡು ಅರ್ಜುನ ವೃಕ್ಷಗಳು ನಿನ್ನ ಮಗನ ಮೇಲೆ ಬಿದ್ದಿವೆ!
19062023a ದೃಢೇನ ದಾಮ್ನಾ ತತ್ರೈವ ಬದ್ಧೋ ವತ್ಸ ಇವೋದರೇ |
19062023c ಜಹಾಸ ವೃಕ್ಷಯೋರ್ಮಧ್ಯೇ ತವ ಪುತ್ರಃ ಸ ಬಾಲಕಃ ||
ನಿನ್ನ ಮಗನ ಹೊಟ್ಟೆಗೆ ಕಟ್ಟಿದ್ದ ಹಗ್ಗವು ತುಂಡಾಗದೇ ದೃಢವಾಗಿಯೇ ಇದೆ. ನಿನ್ನ ಬಾಲಕ ಪುತ್ರನಾದರೋ ಆ ಮರಗಳ ಮಧ್ಯೆ ಕುಳಿತು ನಗುತ್ತಿದ್ದಾನೆ!
19062024a ಉತ್ತಿಷ್ಠ ಗಚ್ಛ ದುರ್ಮೇಧೇ ಮೂಢೇ ಪಂಡಿತಮಾನಿನಿ |
19062024c ಪುತ್ರಮಾನಯ ಜೀವಂತಂ ಮುಕ್ತಂ ಮೃತ್ಯುಮುಖಾದಿವ ||
ದುರ್ಬುದ್ಧಿಯವಳೇ! ಮೂಢಳೇ! ಪಂಡಿತೆಯೆಂದು ಅಭಿಮಾನವುಳ್ಳವಳೇ! ಏಳು! ಹೋಗು! ನಿನ್ನ ಮಗನನ್ನು ಮೃತ್ಯುವಿನ ಬಾಯಿಯಿಂದ ಬಿಡಿಸಿ ತರುವಂತೆ ಜೀವಂತವಾಗಿ ಕರೆದುಕೊಂಡು ಬಾ!”
19062025a ಸಾ ಭೀತಾ ಸಹಸೋತ್ಥಾಯ ಹಾಹಾಕಾರಂ ಪ್ರಕುರ್ವತೀ |
19062025c ತಂ ದೇಶಮಗಮದ್ಯತ್ರ ಪಾತಿತೌ ತಾವುಭೌ ದ್ರುಮೌ ||
ಅವಳು ಭೀತಳಾಗಿ ಒಡನೆಯೇ ಎದ್ದು ಹಾಹಾಕಾರಗೈಯುತ್ತಾ ಆ ಎರಡು ಮರಗಳು ಬಿದ್ದಿದ್ದ ಪ್ರದೇಶಕ್ಕೆ ಆಗಮಿಸಿದಳು.
19062026a ಸಾ ದದರ್ಶ ತಯೋರ್ಮಧ್ಯೇ ದ್ರುಮಯೋರಾತ್ಮಜಂ ಶಿಶುಮ್ |
19062026c ದಾಮ್ನಾ ನಿಬದ್ಧಮುದರೇ ಕರ್ಷಮಾಣಮುಲೂಖಲಮ್ ||
ಆ ಮರಗಳ ಮಧ್ಯೆ ಹೊಟ್ಟೆಯನ್ನು ಕಟ್ಟಿದ್ದ ಹಗ್ಗದಿಂದ ಒರಳಿನ ಕಲ್ಲನ್ನು ಎಳೆಯುತ್ತಿದ್ದ ತನ್ನ ಶಿಶುವನ್ನು ಅವಳು ನೋಡಿದಳು.
19062027a ಸಾ ಗೋಪೀ ಗೋಪವೃದ್ಧಶ್ಚ ಸಮುವಾಚ ವ್ರಜಸ್ತದಾ |
19062027c ಪರ್ಯಾಗಚ್ಛಂತ ತೇ ದ್ರಷ್ಟುಂ ಗೋಪೇಷು ಮಹದದ್ಭುತಮ್ ||
ಆ ಗೋಪಿಯರು ವ್ರಜದಲ್ಲಿದ್ದ ಗೋಪವೃದ್ಧರಿಗೆ ಇದನ್ನು ವರದಿಮಾಡಿದರು. ಅವರು ಗೋಪರ ಮಧ್ಯೆ ನಡೆದ ಈ ಮಹಾ ಅದ್ಭುತವನ್ನು ನೋಡಲು ಬಂದು ಸೇರಿದರು.
19062028a ಜಜಲ್ಪುಸ್ತೇ ಯಥಾಕಾಮಂ ಗೋಪಾ ವನವಿಚಾರಿಣಃ |
19062028c ಕೇನೇಮೌ ಪಾತಿತೌ ವೃಕ್ಷೌ ಘೋಷಸ್ಯಾಯತನೋಪಮೌ ||
ವನಚಾರೀ ಗೋಪರು ತಮಗಿಷ್ಟಬಂದಂತೆ ಮಾತನಾಡಿಕೊಳ್ಳತೊಡಗಿದರು: “ಈ ಎರಡು ಮರಗಳು ಹೇಗೆ ಉರುಳಿ ಬಿದ್ದವು? ಇವೆರಡೂ ವ್ರಜದ ದೇವಾಲಯಗಳಂತಿದ್ದವು!
19062029a ವಿನಾ ವಾತಂ ವಿನಾ ವರ್ಷಮ್ವಿದ್ಯುತ್ಪ್ರಪತನಂ ವಿನಾ |
19062029c ವಿನಾ ಹಸ್ತಿಕೃತಂ ದೋಷಮ್ಕೇನೇಮೌ ಪಾತಿತೌ ದ್ರುಮೌ ||
ಗಾಳಿಯಿಲ್ಲದೇ, ಮಳೆಯಿಲ್ಲದೇ, ಮಿಂಚು ಬಡಿಯದೇ, ಆನೆಯ ಹಾಳಿಯಿಲ್ಲದೇ ಈ ಎರಡು ವೃಕ್ಷಗಳು ಯಾವ ದೋಷದಿಂದ ಕೆಳಕ್ಕುರುಳಿದವು?
19062030a ಅಹೋ ಬತ ನ ಶೋಭೇತಾಂ ವಿಮೂಲಾವರ್ಜುನಾವಿಭೌ |
19062030c ಭೂಮೌ ನಿಪತಿತೌ ವೃಕ್ಷೌ ವಿತೋಯೌ ಜಲದಾವಿವ |
19062030e ಯದೀಮೌ ಘೋಷರಚಿತೌ ಘೋಷಕಲ್ಯಾಣಕಾರಿಣೌ ||
ಅಯ್ಯೋ! ಬೇರುಸಹಿತ ಕಿತ್ತುಬಿದ್ದಿರುವ ಈ ಅರ್ಜುನ ವೃಕ್ಷಗಳು ಶೋಭಿಸುತ್ತಿಲ್ಲ! ಕೆಳಗೆ ಬಿದ್ದಿರುವ ಈ ಮರಗಳು ನೀರಿಲ್ಲದ ಮೋಡಗಳಂತೆ ಕಾಣುತ್ತಿವೆ. ಈ ಎರಡು ವೃಕ್ಷಗಳು ಈ ಗೋವಲದಲ್ಲಿದ್ದುಕೊಂಡು ಗೋವಲಕ್ಕೆ ಕಲ್ಯಾಣಕಾರಿಗಳಾಗಿದ್ದವು!
19062031a ನಂದಗೋಪ ಪ್ರಸನ್ನೌ ತೇ ದ್ರುಮಾವೇವಂ ಗತಾವಪಿ |
19062031c ಯಚ್ಚ ತೇ ದಾರಕೋ ಮುಕ್ತೋ ವಿಪುಲಾಭ್ಯಾಮಪಿ ಕ್ಷಿತೌ ||
ನಂದಗೋಪ! ಈ ಮರಗಳೆರಡೂ ಹೋದವೆಂದು ನೀನು ಪ್ರಸನ್ನನಾಗಿರಬಹುದು! ಆದರೂ ನಿನ್ನ ಮಗನು ಗಾಯಗೊಳ್ಳದೇ ಉಳಿದುಕೊಂಡಿದ್ದಾನೆ!
19062032a ಔತ್ಪಾತಿಕಮಿದಂ ಘೋಷೇ ತೃತೀಯಂ ವರ್ತತೇ ತ್ವಿಹ |
19062032c ಪೂತನಾಯಾ ವಿನಾಶಶ್ಚ ದ್ರುಮಯೋಃ ಶಕಟಸ್ಯ ಚ ||
ಈ ಗೋವಲದಲ್ಲಿ ನಡೆದ ಮೂರನೆಯ ಉತ್ಪಾತವು ಇದು: ಪೂತನಿಯ, ಈ ಮರಗಳ ಮತ್ತು ಬಂಡಿಯ ವಿನಾಶ!
19062033a ಅಸ್ಮಿನ್ ಸ್ಥಾನೇ ಚ ವಾಸೋಽಯಂ ಘೋಷಸ್ಯಾಸ್ಯ ನ ಯುಜ್ಯತೇ |
19062033c ಉತ್ಪಾತಾ ಹ್ಯತ್ರ ದಿಶ್ಯಂತೇ ಕಥಯಂತೋ ನ ಶೋಭನಮ್ ||
ಗೋವುಗಳೊಂದಿಗೆ ಈ ಪ್ರದೇಶದಲ್ಲಿ ವಾಸಿಸುವುದು ಸರಿಯಲ್ಲ. ಏಕೆಂದರೆ ಇಲ್ಲಿ ಉತ್ಪಾತಗಳು ಕಾಣತೊಡಗಿವೆ. ಇವು ಒಳ್ಳೆಯದಲ್ಲ.”
19062034a ನಂದಗೋಪಸ್ತು ಸಹಸಾ ಮುಕ್ತ್ವಾ ಕೃಷ್ಣಮುಲೂಖಲಾತ್ |
19062034c ನಿವೇಶ್ಯ ಚಾಂಕೇ ಸುಚಿರಂ ಮೃತಂ ಪುನರಿವಾಗತಮ್ ||
ನಂದಗೋಪನಾದರೋ ಕೂಡಲೇ ಕೃಷ್ಣನನ್ನು ಒರಳಿನ ಕಲ್ಲಿನಿಂದ ಬಿಡುಗಡೆ ಮಾಡಿ, ಅವನು ಮೃತನಾಗಿ ಪುನಃ ಹುಟ್ಟಿರುವನೋ ಎನ್ನುವಂತೆ ಅವನನ್ನು ಬಹುಕಾಲದವರೆಗೆ ಮಡಿಲಲ್ಲಿ ಇಟ್ಟುಕೊಂಡಿದ್ದನು.
19062035a ನಾತೃಪ್ಯತ್ಪ್ರೇಕ್ಷಮಾಣೋ ವೈ ಕೃಷ್ಣಂ ಕಮಲಲೋಚನಮ್ |
19062035c ತತೋ ಯಶೋದಾಂ ಗರ್ಹನ್ವೈ ನಂದಗೋಪೋ ವಿವೇಶ ಹ |
19062035e ಸ ಚ ಗೋಪಜನಃ ಸರ್ವೋ ವ್ರಜಮೇವ ಜಗಾಮ ಹ ||
ಕಮಲಲೋಚನ ಕೃಷ್ಣನನ್ನು ಎಷ್ಟು ನೋಡಿದರೂ ಅವನಿಗೆ ತೃಪ್ತಿಯಾಗಲಿಲ್ಲ. ಅನಂತರ ನಂದಗೋಪನು ಯಶೋದೆಯನ್ನು ಬೈಯುತ್ತಾ ಮನೆಯನ್ನು ಪ್ರವೇಶಿಸಿದನು. ಎಲ್ಲ ಗೋಪಜನರೂ ವ್ರಜದಲ್ಲಿ ತಮ್ಮ ಮನೆಗಳಿಗೆ ತೆರಳಿದರು.
19062036a ಸ ಚ ತೇನೈವ ನಾಮ್ನಾ ತು ಕೃಷ್ಣೋ ವೈ ದಾಮಬಂಧನಾತ್ |
19062036c ಗೋಷ್ಠೇ ದಾಮೋದರ ಇತಿ ಗೋಪೀಭಿಃ ಪರಿಗೀಯತೇ ||
ಹಗ್ಗದಿಂದ ಅವನ ಹೊಟ್ಟೆಯನ್ನು ಕಟ್ಟಿದುದರಿಂದ ಆ ಗೋವ್ರಜದಲ್ಲಿ ಗೋಪಿಯರು ಕೃಷ್ಣನನ್ನು ದಾಮೋದರ ಎಂಬ ಹೆಸರಿನಿಂದಲೇ ಕರೆದರು.
19062037a ಏತದಾಶ್ಚರ್ಯಭೂತಂ ಹಿ ಬಾಲಸ್ಯಾಸೀದ್ವಿಚೇಷ್ಟಿತಮ್ |
19062037c ಕೃಷ್ಣಸ್ಯ ಭರತಶ್ರೇಷ್ಠ ಘೋಷೇ ನಿವಸತಸ್ತದಾ ||
ಭರತಶ್ರೇಷ್ಠ! ಶಿಶುವಾಗಿ ಗೋವಲದಲ್ಲಿ ವಾಸಿಸುತ್ತಿದ್ದಾಗ ಕೃಷ್ಣನು ಈ ಆಶ್ಚರ್ಯಕರ ಚೇಷ್ಟೆಗಳನ್ನು ಮಾಡಿದನು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಾಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ಯಮಲಾರ್ಜುನಭಂಗೇ ನಾಮ ದ್ವಿಷಷ್ಟಿತಮೋಽಧ್ಯಾಯಃ