Harivamsha: Chapter 61

ಹರಿವಂಶ: ವಿಷ್ಣುಪರ್ವಃ

೬೧

ಶಕಟಭಂಗಪೂತನಾವಧೌ

ಶಕಟಭಂಜನ (1-21) ಮತ್ತು ಪೂತನಾವಧೆ (22-34).

19061001  ವೈಶಂಪಾಯನ ಉವಾಚ |

19061001a ತತ್ರ ತಸ್ಯಾಸತಃ ಕಾಲಃ ಸುಮಹಾನತ್ಯವರ್ತತ |

19061001c ಗೋವ್ರಜೇ ನಂದಗೋಪಸ್ಯ ಬಲ್ಲವತ್ವಂ ಪ್ರಕುರ್ವತಃ ||

ವೈಶಂಪಾಯನನು ಹೇಳಿದನು: “ನಂದಗೋಪನು ಅಲ್ಲಿ ಗೋವ್ರಜದಲ್ಲಿ ಗೋಪಕರ್ಮವನ್ನೆಸಗುತ್ತಾ ವಾಸಿಸಿ ದೀರ್ಘ ಕಾಲವು ಕಳೆಯಿತು.

19061002a ದಾರಕೌ ಕೃತನಾಮಾನೌ ವವೃಧಾತೇ ಸುಖಂ ಚ ತೌ |

19061002c ಜ್ಯೇಷ್ಠಃ  ಸಂಕರ್ಷಣೋ ನಾಮ ಕನೀಯಾನ್ಕೃಷ್ಣ ಏವ ತು ||

ನಾಮಕರಣ ಸಂಸ್ಕಾರಗಳನ್ನು ಮಾಡಿಸಿಕೊಂಡ ಆ ಇಬ್ಬರು ಬಾಲಕರೂ ಸುಖದಿಂದ ಬೆಳೆದರು. ಹಿರಿಯವನ ಹೆಸರು ಸಂಕರ್ಷಣ ಎಂದೂ ಕಿರಿಯವನ ಹೆಸರು ಕೃಷ್ಣ ಎಂದಾಯಿತು.

19061003a ಮೇಘಕೃಷ್ಣಸ್ತು ಕೃಷ್ಣೋಽಭೂದ್ದೇಹಾಂತರಗತೋ ಹರಿಃ |

19061003c ವ್ಯವರ್ಧತ ಗವಾಂ ಮಧ್ಯೇ ಸಾಗರಸ್ಯ ಇವಾಂಬುದಃ ||

ದೇಹಾಂತರಗತನಾಗಿದ್ದ ಹರಿಯು ಕೃಷ್ಣನಾದನು. ಮೇಘವರ್ಣನಾಗಿದ್ದ ಕೃಷ್ಣನಾದರೋ ಸಾಗರದಿಂದ ವೃದ್ಧಿಯಾಗುವ ಮೋಡದಂತೆ ಗೋವುಗಳ ಮಧ್ಯೆ ಬೆಳೆದನು.

19061004a ಶಕಟಸ್ಯ ತ್ವಧಃ ಸುಪ್ತಂ ಕದಾಚಿತ್ಪುತ್ರಗೃದ್ಧಿನೀ |

19061004c ಯಶೋದಾ ತಂ ಸಮುತ್ಸೃಜ್ಯ ಜಗಾಮ ಯಮುನಾಂ ನದೀಮ್ ||

ಮಗನನ್ನು ಅತ್ಯಂತ ಆಸೆಪಡುತ್ತಿದ್ದ ಯಶೋದೆಯು ಒಮ್ಮೆ ಬಂಡಿಯ ಕೆಳಗೆ ಮಲಗಿದ್ದ ಅವನನ್ನು ಅಲ್ಲಿಯೇ ಬಿಟ್ಟು ಯಮುನಾ ನದಿಗೆ ಹೋದಳು.

19061005a ಶಿಶುಲೀಲಾಂ ತತಃ ಕುರ್ವನ್ಸ ಹಸ್ತಚರಣೌ ಕ್ಷಿಪನ್ |

19061005c ರುರೋದ ಮಧುರಂ ಕೃಷ್ಣಃ ಪಾದಾವೂರ್ಧ್ವಂ ಪ್ರಸಾರಯನ್ ||

ಆಗ ಶಿಶುಲೀಲೆಗಳನ್ನಾಡುತ್ತಾ ಕೃಷ್ಣನು ಕೈಕಾಲುಗಳನ್ನು ತೂರಾಡುತ್ತಾ, ಕಾಲನ್ನು ಮೇಲೆ ಮಾಡುತ್ತಾ ಮಧುರವಾಗಿ ಅಳತೊಡಗಿದನು.

19061006a ಸ ತತ್ರೈಕೇನ ಪಾದೇನ ಶಕಟಂ ಪರ್ಯವರ್ತಯತ್ |

19061006c ನ್ಯುಬ್ಜಂ ಪಯೋಧರಾಕಾಂಕ್ಷೀ ಚಕಾರ ಚ ರುರೋದ ಚ ||

ಅವನು ಒಂದೇ ಕಾಲಿನಿಂದ ಬಂಡಿಯನ್ನು ಉರುಳಿಸಿದನು. ಮೊಲೆಯ ಹಾಲಿನ ಇಚ್ಛೆಯಿಂದ ಅವನು ಹೀಗೆ ಮಾಡಿದನು ಮತ್ತು ಅಳತೊಡಗಿದನು.

19061007a ಏತಸ್ಮಿನ್ನಂತರೇ ಪ್ರಾಪ್ತಾ ಯಶೋದಾ ಭಯವಿಕ್ಲವಾ |

19061007c ಸ್ನಾತಾ ಪ್ರಸ್ರವದಿಗ್ಧಾಂಗೀ ಬದ್ಧಾವತ್ಸೇವ ಸೌರಭೀ ||

ಈ ಮಧ್ಯೆ ಭಯದಿಂದ ವ್ಯಾಕುಲಳಾಗಿದ್ದ ಯಶೋದೆಯು ಸ್ನಾನಮಾಡಿ ಬಂದಳು. ಕಟ್ಟಿಹಾಕಿದ್ದ ಕರುವಿಗೆ ಹಾಲುಣಿಸುವ ತವಕದಿಂದಿದ್ದ ಹಸುವಿನಂತೆ ಅವಳ ಮೊಲೆಗಳು ಹಾಲಿನಿಂದ ಒದ್ದೆಯಾಗಿದ್ದವು.

19061008a ಸಾ ದದರ್ಶ ವಿಪರ್ಯಸ್ತಂ ಶಕಟಂ ವಾಯುನಾ ವಿನಾ |

19061008c ಹಾಹೇತಿ ಕೃತ್ವಾ ತ್ವರಿತಾ ದಾರಕಂ ಜಗೃಹೇ ತದಾ ||

ಭಿರುಗಾಳಿಯಿಲ್ಲದೇ ಮೊಗಚಿಬಿದ್ದಿದ್ದ ಬಂಡಿಯನ್ನು ನೋಡಿ ಅವಳು ಹಾಹಾಕಾರವನ್ನು ಮಾಡಿ ಮಗನನ್ನು ಎತ್ತಿಕೊಂಡಳು.

19061009a ನ ಸಾ ಬುಬೋಧ ತತ್ತ್ವೇನ ಶಕಟಂ ಪರಿವರ್ತಿತಮ್ |

19061009c ಸ್ವಸ್ತಿ ತೇ ದಾರಕಾಯೇತಿ ಪ್ರೀತಾ ಭೀತಾಪಿ ಸಾಭವತ್ ||

ಬಂಡಿಯು ಮೊಗಚಿಬಿದ್ದುದರ ಕಾರಣವು ಅವಳಿಗೆ ತಿಳಿಯಲಿಲ್ಲ. “ಮಗನೇ! ನಿನಗೆ ಮಂಗಳವಾಗಲಿ!” ಎನ್ನುತ್ತಾ ಪ್ರೀತಳೂ ಭೀತಳೂ ಆದಳು.

19061010a ಕಿಂ ತು ವಕ್ಷ್ಯತಿ ತೇ ಪುತ್ರ ಪಿತಾ ಪರಮಕೋಪನಃ |

19061010c ತ್ವಯ್ಯಧಃ ಶಕಟೇ ಸುಪ್ತೇ ಅಕಸ್ಮಾಚ್ಚ ವಿಲೋಡಿತೇ ||

“ಪುತ್ರ! ಬಂಡಿಯ ಕೆಳಗೆ ನೀನು ಮಲಗಿದ್ದಾಗ ಬಂಡಿಯು ಅಕಸ್ಮಾತ್ತಾಗಿ ಮೊಗಚಿ ಬಿದ್ದಿತು ಎನ್ನುವುದನ್ನು ಕೇಳಿ ಪರಮಕೋಪಿಯಾದ ನಿನ್ನ ಪಿತನು ಏನು ಹೇಳಿಯಾನು?

19061011a ಕಿಂ ಮೇ ಸ್ನಾನೇನ ದುಃಸ್ನಾನಂ ಕಿಂ ಚ ಮೇ ಗಮನೇ ನದೀಮ್ |

19061011c ಪರ್ಯಸ್ತೇ ಶಕಟೇ ಪುತ್ರ ಯಾ ತ್ವಾಂ ಪಶ್ಯಾಮ್ಯಪಾವೃತಮ್ ||

ಸ್ನಾನಮಾಡುವುದರಿಂದ ನನಗೇನಾಗಬೇಕಾಗಿತ್ತು? ನದಿಗೆ ಹೋಗಿ ಅಂತಹ ದುಃಸ್ನಾನವನ್ನು ಮಾಡುವುದಾದರೂ ಏಕೆ ಬೇಕಾಗಿತ್ತು? ಹಿಂದಿರುಗಿ ಬಂದು ನೋಡಿದರೆ ಪುತ್ರ! ಬಂಡಿಯು ಮೊಗಚಿಬಿದ್ದಿದೆ ಮತ್ತು ನೀನು ಯಾವ ಮರೆಯೂ ಇಲ್ಲದೇ ಆಕಾಶದ ಕೆಳಗೆ ಮಲಗಿದ್ದೀಯೆ!

19061012a ಏತಸ್ಮಿನ್ನಂತರೇ ಗೋಭಿರಾಜಗಾಮ ವನೇಚರಃ |

19061012c ಕಾಷಾಯವಾಸಸೀ ಬಿಭ್ರನ್ನಂದಗೋಪೋ ವ್ರಜಾಂತಿಕಮ್ ||

ಈ ಮಧ್ಯೆ ಗೋವುಗಳನ್ನು ವನದಲ್ಲಿ ಮೇಯಿಸಿಕೊಂಡು ಕಾಷಾಯವಸ್ತ್ರವನ್ನುಟ್ಟುಕೊಂಡಿದ್ದ ನಂದಗೋಪನು ವ್ರಜದ ಬಳಿ ಬಂದನು.

19061013a ಸ ದದರ್ಶ ವಿಪರ್ಯಸ್ತಂ ಭಿನ್ನಭಾಂಡಘಟೀಘಟಮ್ |

19061013c ಅಪಾಸ್ತಧೂರ್ವಿಭಿನ್ನಾಕ್ಷಂ ಶಕಟಂ ಚಕ್ರಮೋಲಿನಮ್ ||

ಬಂಡಿಯು ಮೊಗಚಿ ಬಿದ್ದು, ಪಾತ್ರೆ-ಗಡಿಗೆಗಳು ಒಡೆದುದನ್ನು ಅವನು ನೋಡಿದನು. ಅದರ ಮೊಗವು ತುಂಡಾಗಿ ಬಿದ್ದಿತ್ತು. ಬಂಡಿಯ ಚಕ್ರಗಳು ಮೇಲ್ಮುಖವಾಗಿದ್ದವು.

19061014a ಭೀತಸ್ತ್ವರಿತಮಾಗತ್ಯ ಸಹಸಾ ಸಾಶ್ರುಲೋಚನಃ |

19061014c ಅಪಿ ಮೇ ಸ್ವಸ್ತಿ ಪುತ್ರಾಯೇತ್ಯಸಕೃದ್ವಚನಂ ವದನ್ ||

ಭೀತನಾಗಿ ಕಣ್ಣೀರುತುಂಬಿದ್ದ ಅವನು ಬೇಗನೇ ಬಂದು “ನನ್ನ ಮಗನು ಸುರಕ್ಷಿತನಾಗಿದ್ದಾನೆಯೇ?” ಎಂದು ಕೇಳಿದನು.

19061015a ಪಿಬಂತಂ ಸ್ತನಮಾಲಕ್ಷ್ಯ ಪುತ್ರಂ ಸ್ವಸ್ಥೋಽಬ್ರವೀತ್ಪುನಃ |

19061015c ವೃಷಯುದ್ಧಂ ವಿನಾ ಕೇನ ಪರ್ಯಸ್ತಂ ಶಕಟಂ ಮಮ ||

ಮಗನು ಸುರಕ್ಷಿತನಾಗಿ ಮೊಲೆಯುಣ್ಣುತ್ತಿರುವುದನ್ನು ನೋಡಿ “ಎತ್ತುಗಳು ಜಗಳವಾಡದೇ ನನ್ನ ಈ ಬಂಡಿಯು ಹೇಗೆ ಉರುಳಿ ಬಿದ್ದಿತು” ಎಂದು ಪುನಃ ಕೇಳಿದನು.

19061016a ಪ್ರತ್ಯುವಾಚ ಯಶೋದಾ ತಂ ಭೀತಾ ಗದ್ಗದಭಾಷಿಣೀ |

19061016c ನ ವಿಜಾನಾಮ್ಯಹಂ ಕೇನ ಶಕಟಂ ಪರಿವರ್ತಿತಮ್ ||

ಭೀತಳಾಗಿ ಕಣ್ಣೀರಿನಿಂದ ಗಂಟಲು ಕಟ್ಟಿದ ಯಶೋದೆಯು “ಬಂಡಿಯು ಹೇಗೆ ಉರುಳಿ ಬಿದ್ದಿತು ಎಂತು ತಿಳಿಯಲಿಲ್ಲ” ಎಂದು ಉತ್ತರಿಸಿದಳು.

19061017a ಅಹಂ ನದೀಂ ಗತಾ ಸೌಮ್ಯ ಚೈಲಪ್ರಕ್ಷಾಲನಾರ್ಥಿನೀ |

19061017c ಆಗತಾ ಚ ವಿಪರ್ಯಸ್ತಮಪಶ್ಯಂ ಶಕಟಂ ಭುವಿ ||

“ಸೌಮ್ಯ! ನಾನು ಬಟ್ಟೆಗಳನ್ನು ಒಗೆಯಲು ನದಿಗೆ ಹೋಗಿದ್ದೆ. ಹಿಂದಿರುಗಿದಾಗ ನಾನು ಬಂಡಿಯು ನೆಲದ ಮೇಲೆ ಉರುಳಿಬಿದ್ದುದನ್ನು ನೋಡಿದೆ.”

19061018a ತಯೋಃ ಕಥಯತೋರೇವಮಬ್ರುವಂಸ್ತತ್ರ ದಾರಕಾಃ |

19061018c ಅನೇನ ಶಿಶುನಾ ಯಾನಮೇತತ್ಪಾದೇನ ಲೋಡಿತಮ್ ||

ಅವರಿಬ್ಬರೂ ಹೀಗೆ ಮಾತನಾಡಿಕೊಳ್ಳುತ್ತಿರುವಾಗ ಅಲ್ಲಿದ್ದ ಬಾಲಕರು ಹೇಳಿದರು: “ಈ ಶಿಶುವು ತನ್ನ ಕಾಲಿನಿಂದ ಒದೆದು ಬಂಡಿಯನ್ನು ಉರುಳಿಸಿತು.

19061019a ಅಸ್ಮಾಭಿಃ ಸಂಪತದ್ಭಿಶ್ಚ ದೃಷ್ಟಮೇತದ್ಯದೃಚ್ಛಯಾ |

19061019c ನಂದಗೋಪಸ್ತು ತಚ್ಛ್ರುತ್ವಾ ವಿಸ್ಮಯಂ ಪರಮಂ ಯಯೌ ||

ಇಲ್ಲಿ ಸುಮ್ಮನೇ ಸುತ್ತಾಡುತ್ತಿರುವಾಗ ಇದು ಬಿದ್ದುದನ್ನು ನಾವು ನೋಡಿದೆವು.” ನಂದಗೋಪನಾದರೋ ಇದನ್ನು ಕೇಳಿ ಪರಮ ವಿಸ್ಮಿತನಾದನು.

19061020a ಪ್ರಹೃಷ್ಟಶ್ಚೈವ ಭೀತಶ್ಚ ಕಿಮೇತದಿತಿ ಚಿಂತಯನ್ |

19061020c ನ ಚ ತೇ ಶ್ರದ್ಧಧುರ್ಗೋಪಾಃ ಸರ್ವೇ ಮಾನುಷಬುದ್ಧಯಃ ||

ಹರ್ಷಿತನಾದ ಅವನು ಇದು ಏನಾಯಿತು ಎಂದು ಚಿಂತಿಸಿ ಭಯಭೀತನೂ ಆದನು. ಅದು ಮಾನುಷ ಶಿಶುವೆಂದು ತಿಳಿದುಕೊಂಡಿದ್ದ ಎಲ್ಲ ಗೋಪರೂ ಬಾಲಕರ ಆ ಮಾತನ್ನು ನಂಬಲಿಲ್ಲ.

19061021a ಆಶ್ಚರ್ಯಮಿತಿ ತೇ ಸರ್ವೇ ವಿಸ್ಮಯೋತ್ಫುಲ್ಲಲೋಚನಾಃ |

19061021c ಸ್ವೇ ಸ್ಥಾನೇ ಶಕಟಂ ಪ್ರಾಪ್ಯ ಚಕ್ರಬಂಧಮಕಾಕ್ರಯನ್ ||

ಆಶ್ಚರ್ಯವೆಂದು ಹೇಳಿಕೊಂಡು ಅವರೆಲ್ಲರ ಕಣ್ಣುಗಳೂ ಅರಳಿದವು. ಅವರು ಚಕ್ರಗಳನ್ನು ಬಂಡಿಗೆ ಜೋಡಿಸಿ ಅದರ ಸ್ಥಾನದಲ್ಲಿರಿಸಿದರು.

19061022a ಕಸ್ಯಚಿತ್ತ್ವಥ ಕಾಲಸ್ಯ ಶಕುನೀ ವೇಷಧಾರಿಣೀ |

19061022c ಧಾತ್ರೀ ಕಂಸಸ್ಯ ಭೋಜಸ್ಯ ಪೂತನೇತಿ ಪರಿಶ್ರುತಾ ||

ಕೆಲಸಮಯದ ನಂತರ ಪಕ್ಷಿಯ ರೂಪವನ್ನು ತಾಳಬಲ್ಲ ಪೂತಾನಾ ಎಂದು ಪ್ರಸಿದ್ಧಳಾಗಿದ್ದ ಭೋಜ ಕಂಸನ ಮೊಲೆಯುಣಿಸುವ ದಾಸಿಯು ಕಾಣಿಸಿಕೊಂಡಳು.

19061023a ಪೂತನಾ ನಾಮ ಶಕುನೀ ಘೋರಾ ಪ್ರಾಣಭಯಂಕರೀ |

19061023c ಆಜಗಾಮಾರ್ಧರಾತ್ರೇ ವೈ ಪಕ್ಷೌ ಕ್ರೋಧಾದ್ವಿಧುನ್ವತೀ ||

ಪೂತನಾ ಎಂಬ ಹೆಸರಿನ ಆ ಘೋರ ಪ್ರಾಣಭಯಂಕರ ಪಕ್ಷಿಯು ಮಧ್ಯರಾತ್ರಿಯ ವೇಳೆ ಕ್ರೋಧದಿಂದ ತನ್ನ ರೆಕ್ಕೆಗಳನ್ನು ಬೀಸುತ್ತಾ ಆಗಮಿಸಿತು.

19061024a ತತೋಽರ್ಧರಾತ್ರಸಮಯೇ ಪೂತನಾ ಪ್ರತ್ಯದೃಶ್ಯತ |

19061024c ವ್ಯಾಘ್ರಗಂಭೀರನಿರ್ಘೋಷಂ ವ್ಯಾಹರಂತೀ ಪುನಃ ಪುನಃ ||

ಅನಂತರ ಅರ್ಧರಾತ್ರಿಯ ಸಮಯದಲ್ಲಿ ಹುಲಿಯ ಗರ್ಜನೆಯಂತೆ ಪುನಃ ಪುನಃ ಕೂಗುತ್ತಾ ಪೂತನಿಯು ಕಾಣಿಸಿಕೊಂಡಳು.

19061025a ನಿಲಿಲ್ಯೇ ಶಕಟಸ್ಯಾಕ್ಷೇ ಪ್ರಸ್ರವೋತ್ಪೀಡವರ್ಷಿಣೀ |

19061025c ದದೌ ಸ್ತನಂ ಚ ಕೃಷ್ಣಾಯ ತಸ್ಮಿನ್ಸುಪ್ತೇ ಜನೇ ನಿಶಿ ||

ಬಂಡಿಯ ಮೂಕಿಯ ಮೇಲೆ ನಿಂತು, ಮೊಲೆಗಳು ಹಾಲುಸುರಿಸುತ್ತಿರುವುದರಿಂದ ಪೀಡಿತಳಾದ ಅವಳು ರಾತ್ರಿವೇಳೆ ಜನರು ಮಲಗಿದ್ದಾಗ ಮೊಲೆಯನ್ನು ಕೃಷ್ಣನಿಗೆ ನೀಡಿದಳು.

19061026a ತಸ್ಯಾಃ ಸ್ತನಂ ಪಪೌ ಕೃಷ್ಣಃ ಪ್ರಾಣೈಃ ಸಹ ವಿನದ್ಯ ಚ |

19061026c ಛಿನ್ನಸ್ತನೀ ತು ಸಹಸಾ ಪಪಾತ ಶಕುನೀ ಭುವಿ ||

ಕೃಷ್ಣನು ಅವಳ ಸ್ತನವನ್ನು ಪ್ರಾಣಗಳೊಂದಿಗೆ ಕುಡಿದನು. ತನ್ನ ಮೊಲೆಗಳು ಕತ್ತರಿಸಿಹೋಗಲು ಆ ಪಕ್ಷಿಣಿಯು ಜೋರಾಗಿ ಚೀರುತ್ತಾ ಕೂಡಲೇ ನೆಲದ ಮೇಲೆ ಬಿದ್ದಳು.

19061027a ತೇನ ಶಬ್ದೇನ ವಿತ್ರಸ್ತಾಸ್ತತೋ ಬುಬುಧಿರೇ ಭಯಾತ್ |

19061027c ಸ ನಂದಗೋಪೋ ಗೋಪಾ ವೈ ಯಶೋದಾ ಚ ಸುವಿಕ್ಲವಾ ||

ಆ ಶಬ್ದದಿಂದ ನಡುಗಿ ಭಯಗೊಂಡ ನಂದಗೋಪಾ, ಯಶೋದಾ ಮತ್ತು ಗೋಪರು ವ್ಯಾಕುಲಗೊಂಡು ಎಚ್ಚೆತ್ತರು.

19061028a ತೇ ತಾಮಪಶ್ಯನ್ಪತಿತಾಂ ವಿಸಂಜ್ಞಾಂ ವಿಪಯೋಧರಾಮ್ |

19061028c ಪೂತನಾಂ ಪತಿತಾಂ ಭೂಮೌ ವಜ್ರೇಣೇವ ವಿದಾರಿತಾಮ್ ||

ವಜ್ರದಿಂದ ಸೀಳಲ್ಪಟ್ಟಂತೆ ಮೊಲೆಗಳನ್ನು ಕಳೆದುಕೊಂಡು ಮೂರ್ಛೆತಪ್ಪಿ ನೆಲದ ಮೇಲೆ ಬಿದ್ದಿದ್ದ ಪೂತನಿಯನ್ನು ಅವರು ನೋಡಿದರು.

19061029a ಇದಂ ಕಿಂ ತ್ವಿತಿ ಸಂತ್ರಸ್ತಾಃ ಕಸ್ಯೇದಂ ಕರ್ಮ ಚೇತ್ಯಪಿ |

19061029c ನಂದಗೋಪಂ ಪುರಸ್ಕೃತ್ಯ ಗೋಪಾಸ್ತೇ ಪರ್ಯವಾರಯನ್ ||

“ಇದು ಏನು? ಇದು ಯಾರ ಕೆಲಸ?” ಎಂದು ಹೇಳಿಕೊಳ್ಳುತ್ತಾ ಭಯಭೀತರಾದ ಗೋಪರು ನಂದಗೋಪನನ್ನು ಮುಂದಿರಿಸಿಕೊಂಡು ಪೂತನಿಯನ್ನು ಸುತ್ತುವರೆದರು.

19061030a ನಾಧ್ಯಗಚ್ಛಂತ ಚ ತದಾ ಹೇತುಂ ತತ್ರ ಕದಾಚನ |

19061030c ಆಶ್ಚರ್ಯಮಾಶ್ಚರ್ಯಮಿತಿ ಬ್ರುವಂತೋಽನುಯಯುರ್ಗೃಹಾನ್ ||

ಆಗ ಅವರಿಗೆ ಅದರ ಕುರಿತಾದ ಯಾವ ಕಾರಣವೂ ತಿಳಿಯಲಿಲ್ಲ. “ಇದು ಆಶ್ಚರ್ಯ! ಇದು ಆಶ್ಚರ್ಯ!” ಎಂದು ಹೇಳಿಕೊಳ್ಳುತ್ತಾ ಅವರು ಮನೆಗಳಿಗೆ ತೆರಳಿದರು.

19061031a ಗತೇಷು ತೇಷು ಗೋಪೇಷು ವಿಸ್ಮಿತೇಷು ಯಥಾಗೃಹಮ್ |

19061031c ಯಶೋದಾಂ ನಂದಗೋಪಸ್ತು ಪಪ್ರಚ್ಛ ಗತಸಂಭ್ರಮಃ ||

ವಿಸ್ಮಿತರಾದ ಆ ಗೋಪರು ತಮ್ಮ ತಮ್ಮ ಮನೆಗಳಿಗೆ ತೆರಳಿದ ನಂತರ ಭಯಗೊಂಡ ನಂದಗೋಪನಾದರೋ ಯಶೋದೆಯನ್ನು ಪ್ರಶ್ನಿಸಿದನು.

19061032a ಕೋಽಯಂ ವಿಧಿರ್ನ ಜಾನಾಮಿ ವಿಸ್ಮಯೋ ಮೇ ಮಹಾನಯಮ್ |

19061032c ಪುತ್ರಸ್ಯ ಮೇ ಭಯಂ ತೀವ್ರಂ ಭೀರುತ್ವಂ ಸಮುಪಾಗತಮ್ ||

“ಇದು ಯಾವ ವಿಧಿಯೆಂದು ತಿಳಿಯಲಾರೆನು. ನನಗೆ ಅತಿದೊಡ್ಡ ವಿಸ್ಮಯವಾಗಿದೆ. ಭೀರು! ನನ್ನ ಪುತ್ರನಿಗಾಗಿ ತೀವ್ರ ಭಯವು ಉಂಟಾಗಿದೆ.”

19061033a ಯಶೋದಾ ತ್ವಬ್ರವೀದ್ಭೀತಾ ನಾರ್ಯ ಜಾನಾಮಿ ಕಿಂ ತ್ವಿದಮ್ |

19061033c ದಾರಕೇಣ ಸಹಾನೇನ ಸುಪ್ತಾ ಶಬ್ದೇನ ಬೋಧಿತಾ ||

ಭೀತಳಾದ ಯಶೋದೆಯು “ಆರ್ಯ! ಇದು ಏನೆಂದು ನನಗೂ ತಿಳಿಯದು. ಮಗನೊಂದಿಗೆ ಮಲಗಿಕೊಂಡಿದ್ದೆ ಮತ್ತು ಈ ಶಬ್ದದಿಂದ ನನಗೆ ಎಚ್ಚರವಾಯಿತು.”

19061034a ಯಶೋದಾಯಾಮಜಾನಂತ್ಯಾಂ ನಂದಗೋಪಃ ಸಬಾಂಧವಃ |

19061034c ಕಂಸಾದ್ಭಯಂ ಚಕಾರೋಗ್ರಂ ವಿಸ್ಮಯಂ ಚ ಜಗಾಮ ಹ ||

ಯಶೋದೆಗೂ ಅದು ಏನೆಂದು ತಿಳಿಯಲಿಲ್ಲ ಎಂದಾಗ ಬಾಂಧವರೊಂದಿಗೆ ನಂದಗೋಪನು ವಿಸ್ಮಿತನಾದನು. ಕಂಸನಿಂದಾಗಿ ಅವರು ಉಗ್ರ ಭಯವನ್ನು ಹೊಂದಿದರು.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಶಿಶುಚರ್ಯಾಯಾಂ ಶಕಟಭಂಗಪೂತನಾವಧೇ ಏಕಷಷ್ಟಿತಮೋಽಧ್ಯಾಯಃ

Comments are closed.