Harivamsha: Chapter 60

ಹರಿವಂಶ: ವಿಷ್ಣುಪರ್ವಃ

೬೦

ನಂದವ್ರಜಗಮನಮ್

ವೈಶಂಪಾಯನ ಉವಾಚ|

ಪ್ರಾಗೇವ ವಸುದೇವಸ್ತು ವ್ರಜೇ ಶುಶ್ರಾವ ರೋಹಿಣೀಮ್ |

ಪ್ರಜಾತಾಂ ಪುತ್ರಮೇವಾಗ್ರೇ ಚಂದ್ರಾತ್ಕಾಂತತರಾನನಮ್ ||೨-೬೦-೧

ಸ ನಂದಗೋಪಂ ತ್ವರಿತಃ ಪ್ರೋವಾಚ ಶುಭಯಾ ಗಿರಾ |

ಗಚ್ಛಾನಯಾ ಸಹೈವ ತ್ವಂ ವ್ರಜಮೇವ ಯಶೋದಯಾ ||೨-೬೦-೨

ವೈಶಂಪಾಯನನು ಹೇಳಿದನು: “ಪ್ರಸವದ ಪೂರ್ವದಲ್ಲಿಯೇ ವಸುದೇವನು ರೋಹಿಣಿಯನ್ನು ವ್ರಜಕ್ಕೆ ಕಳುಹಿಸಿದ್ದನು. ಕೃಷ್ಣನ ಜನ್ಮದ ಮೊದಲೇ ಅವಳಿಗೆ ಚಂದ್ರನಿಗಿಂತಲೂ ಅಧಿಕ ಕಾಂತಿಯುಕ್ತ ಮುಖದ ಪುತ್ರನಿಗೆ ಜನ್ಮವಿತ್ತಿದ್ದಳು ಎಂದು ಕೇಳಿದ್ದನು. ಅವನು ತ್ವರೆಮಾಡಿ ನಂದಗೋಪನಿಗೆ ಶುಭ ಮಾತಿನಲ್ಲಿ ಹೇಳಿದನು: “ಕೂಡಲೇ ನೀನು ಈ ಯಶೋದೆಯೊಡನೆ ವ್ರಜಕ್ಕೆ ಹೋಗು!

ತತ್ರ ತೌ ದಾರಕೌ ಗತ್ವಾ ಜಾತಕರ್ಮಾದಿಭಿರ್ಗುಣೈಃ |

ಯೋಜಯಿತ್ವಾ ವ್ರಜೇ ತಾತ ಸಂವರ್ಧಯ ಯಥಾಸುಖಮ್ ||೨-೬೦-೩

ಅಲ್ಲಿ ಈ ಇಬ್ಬರು ಮಕ್ಕಳಿಗೂ ಜಾತಕರ್ಮವೇ ಮೊದಲಾದ ಸಂಸ್ಕಾರಗಳಿಂದ ಸಂಪನ್ನಗೊಳಿಸಿ ವ್ರಜದಲ್ಲಿಯೇ ಯಥಾಸುಖವಾಗಿ ಬೆಳೆಸು.

ರೌಹಿಣೇಯಂ ಚ ಪುತ್ರಂ ಮೇ ಪರಿರಕ್ಷ ಶಿಶುಂ ವ್ರಜೇ |

ಅಹಂ ವಾಚ್ಯೋ ಭವಿಷ್ಯಾಮಿ ಪಿತೃಪಕ್ಷೇಷು ಪುತ್ರಿಣಾಮ್ ||೨-೬೦-೪

ಯೋಽಹಮೇಕಸ್ಯ ಪುತ್ರಸ್ಯ ನ ಪಶ್ಯಾಮಿ ಶಿಶೋರ್ಮುಖಮ್ |

ವ್ರಜದಲ್ಲಿ ನನ್ನ ಪುತ್ರ ಶಿಶು ರೌಹಿಣೇಯನನ್ನು ಪರಿರಕ್ಷಿಸು. ಪುತ್ರರಿರುವ ಪಿತೃಪಕ್ಷದವರಿಗೆ ನಾನು ನಿಂದನೀಯನು. ಏಕೆಂದರೆ ನನ್ನ ಓರ್ವನೇ ಪುತ್ರ ಶಿಶುವಿನ ಮುಖವನ್ನು ಕೂಡ ನಾನು ನೋಡಿಲ್ಲ.

ಹ್ರಿಯತೇ ಹಿ ಬಲಾತ್ಪ್ರಜ್ಞಾ ಪ್ರಾಜ್ಞಸ್ಯಾಪಿ ತತೋ ಮಮ ||೨-೬೦-೫

ಅಸ್ಮಾದ್ಧಿ ಮೇ ಭಯಂ ಕಂಸಾನ್ನಿರ್ಘೃಣಾದ್ವೈ ಶಿಶೋರ್ವಧೇ |

ನಿರ್ದಯಿ ಕಂಸನು ಆ ಶಿಶುವನ್ನೂ ವಧಿಸಿಬಿಡುತ್ತಾನೋ ಎಂಬ ಭಯವಿದೆ. ಆ ಭಯವು ಪ್ರಾಜ್ಞನಾದ ನನ್ನಿಂದಲೂ ನನ್ನ ಪ್ರಜ್ಞೆಯನ್ನು ಬಲಾತ್ಕಾರವಾಗಿ ಕಸಿದುಕೊಂಡಿತೆ.

ತದ್ಯಥಾ ರೌಹಿಣೇಯಂ ತ್ವಂ ನಂದಗೋಪ ಮಮಾತ್ಮಜಮ್ ||೨-೬೦-೬

ಗೋಪಾಯಸಿ ಯಥಾ ತಾತ ತತ್ತ್ವಾನ್ವೇಷೀ ತಥಾ ಕುರು |

ವಿಘ್ನಾ ಹಿ ಬಹವೋ ಲೋಕೇ ಬಾಲಾನುತ್ತ್ರಾಸಯಂತಿ ಹಿ ||೨-೬೦-೭

ಅಯ್ಯಾ! ನಂದಗೋಪ! ಆದುದರಿಂದ ನನ್ನ ಮಗ ರೌಹಿಣೇಯನನ್ನು ಹೇಗೆ ಸಂರಕ್ಷಿಸುತ್ತೀಯೋ ಹಾಗೆ ಸಂರಕ್ಷಿಸು. ಏಕೆಂದರೆ ಲೋಕದಲ್ಲಿ ಬಾಲಕರನ್ನು ಪೀಡಿಸುವ ಅನೇಕ ವಿಘ್ನಗಳುಂಟಾಗುತ್ತಿವೆ.

ಸ ಚ ಪುತ್ರೋ ಮಮ ಜ್ಯಾಯಾನ್ಕನೀಯಾಂಶ್ಚ ತವಾಪ್ಯಯಮ್ |

ಉಭಾವಪಿ ಸಮಂ ನಾಮ್ನಾ ನಿರೀಕ್ಷಸ್ವ ಯಥಾಸುಖಮ್ ||೨-೬೦-೮

ನನ್ನ ಆ ಪುತ್ರನಾದರೋ ದೊಡ್ಡವನು ಮತ್ತು ನಿನ್ನ ಈ ಪುತ್ರನು ಚಿಕ್ಕವನು. ಅವರಿಬ್ಬರ ಹೆಸರುಗಳೂ ಒಂದೇ ಸಮನಾಗಿರುವಂತೆ[1] ನೀನು ಇವರಿಬ್ಬರನ್ನೂ ಒಂದೇ ದೃಷ್ಟಿಯಿಂದ ನೋಡಿಕೋ.

ವರ್ಧಮಾನಾವುಭಾವೇತೌ ಸಮಾನವಯಸೌ ಯಥಾ |

ಶೋಭೇತಾಂ ಗೋವ್ರಜೇ ತಸ್ಮಿನ್ನಂದಗೋಪ ತಥಾ ಕುರು||೨-೬೦-೯

ನಂದಗೋಪ! ಇವರಿಬ್ಬರು ಸಮಾನವಯಸ್ಕರೂ ಗೋವ್ರಜೆಯಲ್ಲಿ ಒಂದೇ ಸಮನಾಗಿ ಬೆಳೆದು ಶೋಭಿಸುವಂತೆ ಮಾಡು.

ಬಾಲ್ಯೇ ಕೇಲಿಕಿಲಃ ಸರ್ವೋ ಬಾಲ್ಯೇ ಮುಹ್ಯತಿ ಮಾನವಃ |

ಬಾಲ್ಯೇ ಚಂಡತಮಃ ಸರ್ವಸ್ತತ್ರ ಯತ್ನಪರೋ ಭವ ||೨-೬೦-೧೦

ಬಾಲ್ಯದಲ್ಲಿ ಎಲ್ಲರೂ ಆಟಗಳಲ್ಲಿಯೇ ಮಗ್ನರಾಗಿರುತ್ತಾರೆ. ಬಾಲ್ಯದಲ್ಲಿ ಮಾನವನು ಮೋಹಿತನಗಿರುತ್ತಾನೆ. ಬಾಲ್ಯದಲ್ಲಿ ಎಲ್ಲರೂ ಸಿಟ್ಟು-ಹಠ ಮಾಡುತ್ತೇವೆ. ಮಕ್ಕಳನ್ನು ರಕ್ಷಿಸುವುದರಲ್ಲಿ ಯತ್ನಪರನಾಗಿರು.

ನ ಚ ವೃಂದಾವನೇ ಕಾರ್ಯೋ ಗವಾಂ ಘೋಷಃ ಕಥಂಚನ |

ಭೇತವ್ಯಂ ತತ್ರ ವಸತಃ ಕೇಶಿನಃ ಪಾಪದರ್ಶಿನಃ ||೨-೬೦-೧೧

ವೃಂದಾವನದಲ್ಲಿ ಯಾವ ಕಾರಣಕ್ಕೂ ಗೋವುಗಳನ್ನು ಮೇಯಿಸಬೇಡ. ಅಲ್ಲಿ ವಾಸಿಸುವ ಪಾಪದರ್ಶೀ ಕೇಶಿನಿಯ ಭಯವಿರಲಿ.

ಸರೀಸೃಪೇಭ್ಯಃ ಕೀಟೇಭ್ಯಃ ಶಕುನಿಭ್ಯಸ್ತಥೈವ ಚ |

ಗೋಷ್ಠೇಷು ಗೋಭ್ಯೋ ವತ್ಸೇಭ್ಯೋ ರಕ್ಷ್ಯೌ ತೇ ದ್ವಾವಿಮೌ ಶಿಶೂ ||೨-೬೦-೧೨

ಸರ್ಪಗಳಿಂದ, ಕೀಟಗಳಿಂದ, ಪಕ್ಷಿಗಳಿಂದ ಮತ್ತು ಗೋವುಗಳು ಮತ್ತು ಹೋರಿಗಳಿಂದ ಈ ಇಬ್ಬರು ಶಿಶು ಮಕ್ಕಳನ್ನೂ ರಕ್ಷಿಸು.

ನಂದಗೋಪ ಗತಾ ರಾತ್ರಿಃ ಶೀಘ್ರಯಾನೋ ವ್ರಜಾಶುಗಃ |

ಇಮೇ ತ್ವಾಂ ವ್ಯಾಹರಂತೀವ ಪಕ್ಷಿಣಃ ಸವ್ಯದಕ್ಷಿಣಮ್ ||೨-೬೦-೧೩

ನಂದಗೋಪ! ರಾತ್ರಿಯು ಕಳೆದುಹೋಯಿತು. ಶೀಘ್ರವಾಗಿ ವೇಗ ವಾಹನದಲಿ ಇಲ್ಲಿಂದ ಹೊರಡು. ಈ ಎಡ-ಬಲಬದಿಗಳಲ್ಲಿ ಹಾರುವ ಪಕ್ಷಿಗಳು ಇಗೋ ನಿನ್ನನ್ನು ಬೀಳ್ಕೊಡುತ್ತಿವೆ!”

ರಹಸ್ಯಂ ವಸುದೇವೇನ ಸೋಽನುಜ್ಞಾತೋ ಮಹಾತ್ಮನಾ |

ಯಾನಂ ಯಶೋದಯಾ ಸಾರ್ಧಮಾರುರೋಹ ಮುದಾನ್ವಿತಃ ||೨-೬೦-೧೪

ಮಹಾತ್ಮ ವಸುದೇವನಿಂದ ರಹಸ್ಯದಲ್ಲಿ ಹೀಗೆ ಅನುಜ್ಞೆಯನ್ನು ಪಡೆದ ನಂದಗೋಪನು ಮುದಾನ್ವಿತನಾಗಿ ಯಶೋದೆಯೊಡನೆ ಯಾನವನ್ನೇರಿದನು.

ಕುಮಾರಸ್ಕಂಧವಾಹ್ಯಾಯಾಂ ಶಿಬಿಕಾಯಾಂ ಸಮಾಹಿತಃ |

ಸಂವೇಶಯಾಮಾಸ ಶಿಶುಂ ಶಯನೀಯಂ ಮಹಾಮತಿಃ ||೨-೬೦-೧೫

ಸಮಾಹಿತನಾದ ಮಹಾಮತಿ ನಂದಗೋಪನು ತನ್ನ ಆ ಶಯನೀಯ ಶಿಶುವನ್ನು ಕುಮಾರರು ತಮ್ಮ ಭುಜಗಳ ಮೇಲೆ ಎತ್ತಿಕೊಂಡು ಹೋಗುತ್ತಿದ್ದ ಶಿಬಿಕೆಯಲ್ಲಿ ಮಲಗಿಸಿದನು.

ಜಗಾಮ ಚ ವಿವಿಕ್ತೇನ ಶೀತಲಾನಿಲಸರ್ಪಿಣಾ |

ಬಹೂದಕೇನ ಮಾರ್ಗೇಣ ಯಮುನಾತೀರಗಾಮಿನಾ ||೨-೬೦-೧೬

ಹೀಗೆ ಬಹೂದಕದ ಮಾರ್ಗದಲ್ಲಿ ನಿರ್ಜನವಾಗಿದ್ದ ಮತ್ತು ಶೀತಲ ಗಾಳಿಯು ಬೀಸುತ್ತಿದ್ದ ಯಮುನೆಯ ತೀರದಲ್ಲಿಯೇ ಸಾಗುತ್ತಾ ಹೊರಟನು.

ಸ ದದರ್ಶ ಶುಭೇ ದೇಶೇ ಗೋವರ್ಧನಸಮೀಪಗೇ |

ಯಮುನಾತೀರಸಂಬದ್ಧಂ ಶೀತಮಾರುತಸೇವಿತಮ್ ||೨-೬೦-೧೭

ಅವನು ಗೋವರ್ಧನದ ಸಮೀಪದಲ್ಲಿದ್ದ ಯಮುನಾತೀರಕ್ಕೆ ಹೊಂದಿಕೊಂಡಿದ್ದ ಶೀತಲ ಗಾಳಿಯು ಬೀಸುತ್ತಿದ್ದ ಶುಭ ವ್ರಜವನ್ನು ನೋಡಿದನು.

ವಿರುತಶ್ವಾಪದೈ ರಮ್ಯಂ ಲತಾವಲ್ಲೀಮಹಾದ್ರುಮಮ್ |

ಗೋಭಿಸ್ತೃಣವಿಲಗ್ನಾಭಿಃ ಸ್ಯಂದಂತೀಭಿರಲಂಕೃತಮ್ ||೨-೬೦-೧೮

ಬೇರೆಯೇ ಭಾಷೆಯನ್ನು ಮಾತನಾಡುವ ಕಾಡುಜನರಿಂದ ಆ ದೇಶವು ರಮ್ಯವಾಗಿತ್ತು. ಲತೆಗಳು ಅಪ್ಪಿಕೊಂಡಿದ್ದ ಮಹಾವೃಕ್ಷಗಳಿದ್ದವು. ಹುಲ್ಲು ಮೇಯುತ್ತಿದ್ದ ಮತ್ತು ಕೆನೆಗಳಿಂದ ಹಾಲುಸುರಿಸುತ್ತಿದ್ದ ಗೋವುಗಳಿಂದ ಅಲಂಕೃತಗೊಂಡಿತ್ತು.

ಸಮಪ್ರಚಾರಂ ಚ ಗವಾಂ ಸಮತೀರ್ಥಜಲಾಶಯಮ್ |

ವೃಷಾಣಾಂ ಸ್ಕಂಧಘಾತೈಶ್ಚ ವಿಷಾಣೋದ್ಘೃಷ್ಟಪಾದಪಮ್ ||೨-೬೦-೧೯

ಗೋವುಗಳಿಗೆ ಮೇವಲು ಸಮತಟ್ಟಾದ ಪ್ರದೇಶವಿತ್ತು ಮತ್ತು ಜಲಾಯಗಳಿಗೆ ಇಳಿಯುವಲ್ಲಿಯೂ ಸಮತಟ್ಟಾಗಿತ್ತು. ಅಲ್ಲಿ ಮರಗಳ ಮೇಲೆ ಗೂಳಿಗಳು ತಮ್ಮ ಭುಜಗಳನ್ನು ತಿಕ್ಕಿ ತಿಕ್ಕಿ ಮತ್ತು ಕೋಡಿನಿಂದ ತಿವಿದ ಗುರುತುಗಳಿದ್ದವು.

ಭಾಸಾಮಿಷಾದಾನುಸೃತೈಃ ಶ್ಯೇನೈಶ್ಚಾಮಿಷಗೃಧ್ನುಭಿಃ |

ಸೃಗಾಲಮೃಗಸಿಂಹೈಶ್ಚ ವಸಾಮೇದಾಶಿಭಿರ್ವೃತಮ್ ||೨-೬೦-೨೦

ಕಾಗೆಗಳು, ಗಿಡುಗಗಳು ಮತ್ತು ಮಾಂಸತಿನ್ನುವ ಹದ್ದುಗಳಿದ್ದವು. ನರಿಗಳೂ, ಸಿಂಹಗಳೂ ಮತ್ತು ಮಾಂಸ-ಮೇದ-ಕೊಬ್ಬುಗಳನ್ನು ತಿನ್ನುವ ಇತರ ಪ್ರಾಣಿಗಳೂ ತುಂಬಿಕೊಂಡಿದ್ದವು.

ಶಾರ್ದೂಲಶಬ್ದಾಭಿರುತಂ ನಾನಾಪಕ್ಷಿಸಮಾಕುಲಮ್ |

ಸ್ವಾದುವೃಕ್ಷಫಲಂ ರಮ್ಯಂ ಪರ್ಯಾಪ್ತತೃಣವೀರುಧಮ್ ||೨-೬೦-೨೧

ಆ ಪ್ರದೇಶದಲ್ಲಿ ಹುಲಿಯ ಗರ್ಜನೆಗಳು ಮೊಳಗುತ್ತಿದ್ದವು. ನಾನಾ ಪಕ್ಷಿಗಳ ಸಮಾಕುಲಗಳಿದ್ದವು. ರುಚಿಕರ ಫಲವುಳ್ಳ ವೃಕ್ಷಗಳಿದ್ದವು ಮತ್ತು ಹುಲ್ಲು-ಔಷಧ ಲತೆಗಳು ತುಂಬಿಕೊಂಡಿದ್ದವು.

ಗೋವ್ರಜಂ ಗೋರುತಂ ರಮ್ಯಂ ಗೋಪನಾರೀಭಿರಾವೃತಮ್ |

ಹಂಭಾರವೈಶ್ಚ ವತ್ಸಾನಾಂ ಸರ್ವತಃ ಕೃತನಿಃಸ್ವನಮ್ ||೨-೬೦-೨೨

ಗೋವುಗಳು ಅಲ್ಲಿ ತಿರುಗಾಡುತ್ತಿದ್ದವು. ಗೋವುಗಳ ರಮ್ಯ ಕೂಗು ಕೇಳಿಬರುತ್ತಿತ್ತು. ಗೋಪನಾರಿಯರಿಂದ ತುಂಬಿಕೊಂಡಿತ್ತು. ಎಲ್ಲಕಡೆಗಳಲ್ಲಿ ಕರುಗಳ ಕೂಗುಗಳು ಕೇಳಿಬರುತ್ತಿದ್ದವು.

ಶಕಟಾವರ್ತವಿಪುಲಂ ಕಂಟಕೀವಾಟಸಂಕುಲಮ್ |

ಪರ್ಯಂತೇಷ್ವಾವೃತಂ ವನ್ಯೈರ್ಬೃಹದ್ಭಿಃ ಪತಿತೈರ್ದ್ರುಮೈಃ ||೨-೬೦-೨೩

ಅಲ್ಲಿ ಅನೇಕ ಬಂಡಿಗಳ ಗುಂಪುಗಳಿದ್ದವು. ಮುಳ್ಳಿನ ಮರಗಳ ಸಂಕುಲಗಳೂ ಇದ್ದವು. ಅದರ ಸುತ್ತಲೂ ಬಿದ್ದ ಮರಗಳಿಂದ ತುಂಬಿದ ದೊಡ್ಡ ವನಗಳಿದ್ದವು.

ವತ್ಸಾನಾಂ ರೋಪಿತಃ ಕೀಲೈರ್ದಾಮಭಿಶ್ಚ ವಿಭೂಷಿತಮ್ |

ಕರೀಷಾಕೀರ್ಣವಸುಧಂ ಕಟಚ್ಛನ್ನಕುಟೀಮಠಮ್ ||೨-೬೦-೨೪

ಕರುಗಳನ್ನು ಕಟ್ಟಲು ಗೂಟಗಳು ಮತ್ತು ಹಗ್ಗಗಳಿಂದ ವಿಭೂಷಿತವಾಗಿತ್ತು. ಹುಲ್ಲಿನ ಗುಡಿಸಲುಗಳಿದ್ದವು ಮತ್ತು ಎಲ್ಲಕಡೆ ಒಣಗಿದ ಬೆರಣಿಗಳಿದ್ದವು.

ಕ್ಷೇಮ್ಯಪ್ರಚಾರಬಹುಲಂ ಹೃಷ್ಟಪುಷ್ಟಜನಾವೃತಮ್ |

ದಾಮನೀಪಾಶಬಹುಲಂ ಗರ್ಗರೋದ್ಗಾರನಿಃಸ್ವನಮ್ ||೨-೬೦-೨೫

ಕ್ಷೇಮದಿಂದ ತಿರುಗಾಡಲು ಅಲ್ಲಿ ಸಾಕಷ್ಟು ಸ್ಥಳವಿದ್ದಿತು ಮತ್ತು ಹೃಷ್ಟಪುಷ್ಟಜನರಿಂದ ತುಂಬಿಕೊಂಡಿತ್ತು. ಮೊಸರುಕಡೆಯುವ ಕಡೆಗೋಲುಗಳು, ಕಡಗೋಲುಗಳಿಗೆ ಕಟ್ಟಿದ ಹಗ್ಗಗಳು ಮತ್ತು ಮೊಸರು ಕಡೆಯುವ ಶಬ್ಧವು ಎಲ್ಲೆಡೆಯೂ ಕೇಳಿಬರುತ್ತಿತ್ತು.

ತಕ್ರಾನಿಃಸ್ರಾವಮಲಿನಂ ದಧಿಮಂದಾರ್ದ್ರಮೃತ್ತಿಕಮ್ |

ಮಂಥಾನವಲಯೋದ್ಗಾರೈರ್ಗೋಪೀನಾಂ ಜನಿತಸ್ವನಮ್ ||೨-೬೦-೨೬

ಸಾಕಷ್ಟು ಮಜ್ಜಿಗೆಯು ಹರಿಯುತ್ತಿತ್ತು. ನೆಲವು ಮೊಸರಿನ ರಾಶಿಗಳಿಂದ ಒದ್ದೆಯಾಗಿತ್ತು. ಗೋಪಿಯರು ಮೊಸರನ್ನು ಕಡೆಯುವಾಗ ಅವರ ಕೈಬಳೆಗಳ ಧ್ವನಿಯು ಕೇಳಿಬರುತ್ತಿತ್ತು.

ಕಾಕಪಕ್ಷಧರೈರ್ಬಾಲೈರ್ಗೋಪಾಲಕ್ರೀಡನಾಕುಲಮ್|

ಸಾರ್ಗಲದ್ವಾರಗೋವಾಟಂ ಮಧ್ಯೇ ಗೋಸ್ಥಾನಸಂಕುಲಮ್ ||೨-೬೦-೨೭

ಅಲ್ಲಿ ಕಾಕಪಕ್ಷಧರ[2] ಗೋಪಾಲ ಬಾಲಕರು ಒಟ್ಟಾಗಿ ಆಡುತ್ತಿದ್ದರು. ಕೊಟ್ಟಿಗೆಗಳಿಂದ ತುಂಬಿತ್ತು ಮತ್ತು ಮಧ್ಯದಲ್ಲಿ ಗೋಸ್ಥಾನಸಂಕುಲಗಳಿದ್ದವು.

ಸರ್ಪಿಷಾ ಪಚ್ಯಮಾನೇನ ಸುರಭೀಕೃತಮಾರುತಮ್ |

ನೀಲಪೀತಾಂಬರಾಭಿಶ್ಚ ತರುಣೀಭಿರಲಂಕೃತಮ್ ||೨-೬೦-೨೮

ತುಪ್ಪವು ಕುದಿಯುತ್ತಿರುವ ಸುವಾಸನೆಯು ಗಾಳಿಯಲ್ಲಿತ್ತು. ನೀಲ ಪೀತಾಂಬರಗಳನ್ನು ಉಟ್ಟಿದ್ದ ತರುಣಿಯರು ಅಲಂಕೃತರಾಗಿದ್ದರು.

ವನ್ಯಪುಷ್ಪಾವತಂಸಾಭಿರ್ಗೋಪಕನ್ಯಾಭಿರಾವೃತಮ್ |

ಶಿರೋಭಿರ್ಧೃತಕುಂಭಭಿರ್ಬದ್ಧೈರಗ್ರಸ್ತನಾಂಬರೈಃ ||೨-೬೦-೨೯

ಯಮುನಾತೀರಮಾರ್ಗೇಣ ಜಲಹಾರೀಭಿರಾವೃತಮ್ |

ವನಪುಷ್ಪಗಳನ್ನು ಮುಡಿದು ತಲೆಯಮೇಲೆ ಮೊಸರಿನ ಕೊಡಗಳನ್ನು ಹೊತ್ತ ಗೋಪಕನ್ಯೆಯರಿಂದ ಆ ಪ್ರದೇಶವು ತುಂಬಿಕೊಂಡಿತ್ತು.  ಅವರ ಸ್ತನಗಳು ಕುಪ್ಪುಸಗಳಿಂದ ಕಟ್ಟಲ್ಪಟ್ಟಿದ್ದವು ಮತ್ತು ಮೇಲೆ ಸೆರಗುಗಳಿದ್ದವು. ಯಮುನಾತೀರಮಾರ್ಗದಲ್ಲಿ ನೀರನ್ನು ಹೊತ್ತು ತರುತ್ತಿದ್ದರು.

ಸ ತತ್ರ ಪ್ರವಿಶನ್ ಹೃಷ್ಟೋ ಗೋವ್ರಜಂ ಗೋಪನಾದಿತಮ್ ||೨-೬೦-೩೦

ಪ್ರತ್ಯುದ್ಗತೋ ಗೋಪವೃದ್ಧೈಃ ಸ್ತ್ರೀಭಿರ್ವೃದ್ಧಾಭಿರೇವ ಚ |

ನಿವೇಶಂ ರೋಚಯಾಮಾಸ ಪರಿವರ್ತೇ ಸುಖಾಶ್ರಯೇ ||೨-೬೦-೩೧

ಗೋಪರ ನಾದಗಳಿಂದ ತುಂಬಿದ್ದ ಗೋವ್ರಜವನ್ನು ಪ್ರವೇಶಿಸಿ ಅವನು ಹೃಷ್ಟನಾದನು. ಗೋಪವೃದ್ಧರು ಮತ್ತು ವೃದ್ಧ ಸ್ತ್ರೀಯರಿಂದ ಸ್ವಾಗತಿಸಲ್ಪಟ್ಟ ಅವನು ಆ ಸುಖಾಶ್ರಯ ಆವಾಸಸ್ಥಾನದಲ್ಲಿ ವಾಸಿಸಲು ಇಷ್ಟಪಟ್ಟನು.

ಸಾ ಯತ್ರ ರೋಹಿಣೀ ದೇವೀ ವಸುದೇವಸುಖಾವಹಾ |

ತತ್ರ ತಂ ಬಾಲಸೂರ್ಯಾಭಂ ಕೃಷ್ಣಂ ಗೂಢಂ ನ್ಯವೇಶಯತ್ ||೨-೬೦-೩೨

ವಸುದೇವನಿಗೆ ಸುಖವನ್ನು ತರುವ ದೇವೀ ರೋಹಿಣಿಯು ಎಲ್ಲಿದ್ದಳೋ ಅಲ್ಲಿ ಬಾಲಸೂರ್ಯನ ಕಾಂತಿಯಿದ್ದ ಕೃಷ್ಣನನ್ನು ಗೂಢವಾಗಿ ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ವಿಷ್ಣುಪರ್ವಣಿ ಗೋವ್ರಜಗಮನಂ ನಾಮ ಷಷ್ಟಿತಮೋಽಧ್ಯಾಯಃ

 

[1] ಕೃಷ್ಣ ಎಂದರೆ ಆಕರ್ಷಿಸುವನು, ಸಂಕರ್ಷಣ ಎಂದರೆ ಆಕರ್ಷಿಸಿದವನು.

[2] ತಲೆಯ ಹಿಂಭಾಗದಲ್ಲಿ ಕೂದಲನ್ನು ಉದ್ದ ಬಿಟ್ಟಿದ್ದ (ಗೀತಾ ಪ್ರೆಸ್). ಕಾಗೆಯ ರೆಕ್ಕೆಗಳನ್ನು ಮುಡಿದಿದ್ದ (ಬಿಬೇಕ್ ದೆಬ್ರೊಯ್).

Comments are closed.