ವ್ಯಾಸ
ವ್ಯಾಸನು ಮಹಾಭಾರತ ಕಥೆಯ ರಚಕ ಮತ್ತು ಆ ಕಥೆಯ ಮುಖ್ಯ ಪಾತ್ರನೂ ಹೌದು. ಅವನು ವಸಿಷ್ಠನ ಮೊಮ್ಮಗ ಪರಾಶರನಿಗೆ ಸತ್ಯವತಿಯಲ್ಲಿ ಹುಟ್ಟಿದ ಮಗ.
ದಾಶರಾಜನ ಸಾಕುಮಗಳು ಸತ್ಯವತಿಯು ಬೆಸ್ತರೊಂದಿಗೆ ವಾಸಿಸುತ್ತಿದ್ದುದರಿಂದ ಕೆಲವು ಕಾಲದವರೆಗೆ ಮೀನಿನ ವಾಸನೆಯನ್ನು ಹೊಂದಿದ್ದಳು. ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ಅವಳನ್ನು ಒಮ್ಮೆ ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ ವಿದ್ವಾಂಸ ಮುನಿಪುಂಗವನು ಅವಳ ಸೌಂದರ್ಯವನ್ನು ಬಯಸಿ ವಾಸವಿ ಕನ್ಯೆಯೊಡನೆ ಕಾರ್ಯನಿರತನಾದನು. ಅವಳು ಹೇಳಿದಳು: “ಭಗವನ್! ನೋಡು! ದಂಡೆಗಳಲ್ಲಿ ಋಷಿಗಳು ನಿಂತಿದ್ದಾರೆ. ಅವರು ನಮ್ಮನ್ನು ನೋಡುತ್ತಿದ್ದಂತೆ ನಾವು ಹೇಗೆ ಪರಸ್ಪರ ಸಮಾಗಮ ಹೊಂದೋಣ?” ಇದನ್ನು ಕೇಳಿದ ಭಗವಾನ್ ಪ್ರಭುವು ಆ ಸ್ಥಳವನ್ನು ಕತ್ತಲೆ ಕವಿಯುವಂತೆ ಮಂಜನ್ನು ನಿರ್ಮಿಸಿದನು. ಪರಮಋಷಿಯು ತಕ್ಷಣವೇ ಸೃಷ್ಟಿಸಿದ ಕತ್ತಲೆಯ ಆವರಣವನ್ನು ಕಂಡು ವಿಸ್ಮಿತ ಮನಸ್ವಿನಿಯು ನಾಚುತ್ತಾ ಹೇಳಿದಳು: “ಭಗವನ್! ಸದಾ ಪಿತೃವಶದಲ್ಲಿದ್ದು ಅವನನ್ನೇ ಅನುಸರಿಸುತ್ತಿರುವ ಕನ್ಯೆಯೆಂದು ನನ್ನನ್ನು ತಿಳಿ. ನಿನ್ನೊಡನೆ ಸೇರುವುದರಿಂದ ನನ್ನ ಕನ್ಯಾಭಾವದಲ್ಲಿ ದೋಷವುಂಟಾಗುವುದಲ್ಲವೇ? ಕನ್ಯತ್ವ ದೂಷಿತ ನಾನು ಹೇಗೆ ಮನೆಗೆ ಹಿಂದಿರುಗಲಿ? ಆಗ ನಾನು ಮನೆಯಲ್ಲಿ ವಾಸಿಸಲು ಉತ್ಸುಕಳಾಗುವುದಿಲ್ಲ. ಇವೆಲ್ಲವನ್ನೂ ಯೋಚಿಸಿ, ನಂತರ ನಿನಗೆ ತಿಳಿದದ್ದನ್ನು ಮಾಡು.”
ಹೀಗೆ ಹೇಳಿದ ಅವಳಲ್ಲಿ ಬಹಳ ಸಂತಸಗೊಂಡ ಆ ಋಷಿಸತ್ತಮನು “ನನ್ನ ಪ್ರಿಯ ಕಾರ್ಯವನ್ನು ಮಾಡಿದ ನಂತರವೂ ನೀನು ಕನ್ಯೆಯಾಗಿಯೇ ಉಳಿಯುವೆ” ಎಂದನು. “ಭಾಮಿನಿ! ನಿನಗಿಷ್ಟವಾದ ವರವನ್ನು ಕೇಳು. ನನ್ನ ಪ್ರಸಾದವು ಈ ಹಿಂದೆ ಎಂದೂ ವೃಥವಾಗಿಲ್ಲ.” ಇದನ್ನು ಕೇಳಿದ ಅವಳು ತನ್ನ ದೇಹವು ಉತ್ತಮ ಸುಗಂಧವನ್ನು ಹೊಂದಲಿ ಎಂದು ವರವನ್ನು ಕೇಳಲು ಅವಳ ಮನಸ್ಸಿನ ಆಕಾಂಕ್ಷೆಯನ್ನು ಭಗವಾನ್ ಪ್ರಭುವು ನೀಡಿದನು. ಈ ವರವನ್ನು ಪಡೆದು ಪ್ರೀತಳಾದ ಅವಳು ಸ್ತ್ರೀಭಾವಗುಣ ಭೂಷಿತಳಾಗಿ ಆ ಅದ್ಭುತ ಕರ್ಮಣಿ ಋಷಿಯ ಬಳಿ ಸಾಗಿ ಕೂಡಿದಳು. ಅಂದಿನಿಂದ ಅವಳು ಗಂಧವತೀ ಎಂಬ ಹೆಸರಿನಿಂದ ಭುವಿಯಲ್ಲಿ ಪ್ರಥಿತಗೊಂಡಳು. ಭುವಿಯಲ್ಲಿ ನರರಿಗೆ ಅವಳ ಸುಗಂಧವು ಒಂದು ಯೋಜನ ದೂರದಿಂದಲೂ ಸೂಸುವಂತಿತ್ತು. ಆದುದರಿಂದ ಅವಳು ಯೋಜನಗಂಧಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾಳೆ. ಭಗವಾನ್ ಪರಾಶರನು ತನ್ನ ನಿವೇಶನಕ್ಕೆ ತೆರಳಿದನು.
ಈ ರೀತಿ ಅನುತ್ತಮ ವರವನ್ನು ಪಡೆದ ಸತ್ಯವತಿಯು ಹರ್ಷಿತಳಾದಳು. ಪರಾಶರನನ್ನು ಸೇರಿದ ದಿನವೇ ಅವಳು ಆ ಯಮುನಾ ದ್ವೀಪದಲ್ಲಿ ವೀರ್ಯವಂತ ಪಾರಶರ್ಯನಿಗೆ ಜನ್ಮವಿತ್ತಳು. ತಪಸ್ಸನ್ನೇ ಮನದಲ್ಲಿಟ್ಟುಕೊಂಡಿದ್ದ ಅವನು ತಾಯಿಯ ಎದುರು ನಿಂತು “ನೀನು ಎಂದು ನನ್ನನ್ನು ನೆನೆದುಕೊಳ್ಳುತ್ತೀಯೋ ಆಗ ನಿನಗೆ ಕಾಣಿಸಿಕೊಳ್ಳುತ್ತೇನೆ ಮತ್ತು ಬೇಕಾದ ಕಾರ್ಯವನ್ನು ನಡೆಸಿಕೊಡುತ್ತೇನೆ” ಎಂದು ಹೇಳಿದನು.
ಈ ರೀತಿ ದ್ವೈಪಾಯನನು ಪರಾಶರನಿಂದ ಸತ್ಯವತಿಯಲ್ಲಿ ಜನಿಸಿದನು. ದ್ವೀಪದಲ್ಲಿ ಅವನ ಜನ್ಮವಾದುದರಿಂದ ಅವನು ದ್ವೈಪಾಯನನಾದನು. ಯುಗಯುಗದಲ್ಲಿಯೂ ಧರ್ಮದ ಒಂದೊಂದು ಕಾಲು ಕುಂಟಾಗುವುದೆಂದೂ ಮತ್ತು ಮನುಷ್ಯರ ಆಯಸ್ಸು ಮತ್ತು ಶಕ್ತಿಯು ಯುಗನಿಯಮಗಳನ್ನು ಅನುಸರಿಸಿದೆ ಎಂದು ತಿಳಿದ ಅವನು ಬ್ರಹ್ಮ ಮತ್ತು ಬ್ರಾಹ್ಮಣರಿಗೆ ಅನುಗ್ರಹಕಾರ್ಯ ಮಾಡಬೇಕೆಂದು ಬಯಸಿ ವೇದಗಳನ್ನು ವಿಂಗಡಿಸಿದನು, ಮತ್ತು ಇದರಿಂದಲೇ ಅವನು ವ್ಯಾಸನೆಂದು ಪ್ರಸಿದ್ಧನಾದನು. ಆ ವರಿಷ್ಠ ವರದ ಪ್ರಭುವು ವೇದಗಳನ್ನು ಮತ್ತು ಐದನೆಯದಾದ ಮಹಾಭಾರತವನ್ನು ಸುಮಂತ, ಜೈಮಿನಿ, ಪೈಲ, ತನ್ನ ಮಗ ಶುಕ ಮತ್ತು ವೈಶಂಪಾಯನನಿಗೆ ಹೇಳಿಕೊಟ್ಟನು. ಇವರು ತಮ್ಮ ತಮ್ಮ ಶೈಲಿಗಳಲ್ಲಿ ಭಾರತವನ್ನು ಪ್ರಕಾಶಿಸಿದರು.
ಮಹಾಭಾರತದ ಶಾಂತಿಪರ್ವದಲ್ಲಿ ವ್ಯಾಸನೇ ತನ್ನ ಶಿಷ್ಯರಿಗೆ ಹೇಳಿದಂತೆ ವ್ಯಾಸನ ಮೊದಲನೆಯ ಜನ್ಮವು ಪದ್ಮಕಲ್ಪದ ಸೃಷ್ಟಿಯ ಆದಿಯಲ್ಲಿ ಸ್ವಯಂ ನಾರಾಯಣನಿಂದ ಆಯಿತು. ಆಗ ಅವನ ಹೆಸರು ಅಪಾಂತರತಮ ಎಂದಿದ್ದಿತು.