ಪರಾಶರ
ಋಷಿ ಪರಾಶರನು ವಸಿಷ್ಠನ ಮೊಮ್ಮಗ. ಋಷಿ ಶಕ್ತಿ ಮತ್ತು ಅದೃಶ್ಯಂತಿಯರ ಮಗನು. ಸತ್ಯವತಿಯಲ್ಲಿ ಹುಟ್ಟಿದ ಕೃಷ್ಣದ್ವೈಪಾಯನ ವ್ಯಾಸನ ತಂದೆ.
ವಿಶ್ವಾಮಿತ್ರನ ಉಪಾಯದಂತೆ ರಾಜಾ ಕಲ್ಮಾಷಪಾದನನ್ನು ಆವರಿಸಿದ್ದ ರಾಕ್ಷಸನು ತನ್ನ ನೂರು ಮಕ್ಕಳನ್ನೂ ಭಕ್ಷಿಸಿ ನಾಶಪಡಿಸಲು, ವಸಿಷ್ಠನು ಆತ್ಮಹತ್ಯೆಗೆ ಬಹಳಷ್ಟು ಪ್ರಯತ್ನಿಸಿದನು. ಅವನ ಎಲ್ಲ ಪ್ರಯತ್ನಗಳೂ ವಿಫಲವಾಗಿ ಆಶ್ರಮಾಭಿಮುಖನಾಗಿ ಬರುತ್ತಿರುವಾಗ ಅವನ ಸೊಸೆ, ಶಕ್ತಿಯ ಪತ್ನಿ, ಅದೃಶ್ಯಂತಿಯು ಹಿಂಬಾಲಿಸುತ್ತಿದ್ದಳು. ಆಗ ಹತ್ತಿರದಲ್ಲಿಯೇ ಷಡಂಗಗಳಿಂದ ಅಲಂಕೃತ ಪರಿಪೂರ್ಣಾರ್ಥಗಳಿಂದ ಕೂಡಿದ ವೇದಾಧ್ಯಯನದ ಸ್ವರವನ್ನು ಕೇಳಿದನು. “ನನ್ನನ್ನು ಈ ರೀತಿ ಅನುಸರಿಸುತ್ತಿರುವವರು ಯಾರು?” ಎಂದು ಅವನು ಕೇಳಿದನು. ಅವಳು “ನಾನು ಅದೃಶ್ಯತೀ ಎಂಬ ಹೆಸರಿನ ನಿನ್ನ ಸೊಸೆ. ಶಕ್ತಿಯ ಪತ್ನಿ, ತಪೋನಿರತೆ ತಪಸ್ವಿನೀ!” ಎಂದಳು. ವಸಿಷ್ಠನು ಹೇಳಿದನು: “ಪುತ್ರಿ! ಹಿಂದೆ ಶಕ್ತಿಯಿಂದ ನನಗೆ ಕೇಳಿಬರುತ್ತಿದ್ದಂತೆ ಈಗಲೂ ಹತ್ತಿರದಿಂದ ಕೇಳಿಬರುತ್ತಿರುವ ಈ ವೇದಾಧ್ಯಯನದ ಸ್ವರವು ಯಾರಿಂದ ಕೇಳಿಬರುತ್ತಿದೆ?” ಅದಕ್ಕೆ ಅದೃಶ್ಯಂತಿಯು ಹೇಳಿದಳು: “ಕಳೆದ ಹನ್ನೆರಡು ವರ್ಷಗಳಿಂದ ನಿನ್ನ ಸುತ ಶಕ್ತಿಯ ಗರ್ಭವು ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ಮುನಿ! ಇದು ವೇದಾಭ್ಯಾಸ ಮಾಡುತ್ತಿರುವ ಅವನ ಸ್ವರ.” ಇದನ್ನು ಕೇಳಿದ ಶ್ರೇಷ್ಠಭಾಗ ಋಷಿ ವಸಿಷ್ಠನು ಹೃಷ್ಟನಾಗಿ “ಸಂತಾನವಿದೆ!” ಎಂದು ಹೇಳಿ ಮೃತ್ಯುವಿನ ದಾರಿಯಿಂದ ಹಿಂದುರಿಗಿದನು.
ಗರ್ಭದಲ್ಲಿರುವಾಗಲೇ ಸಾಯಲು ತಯಾರಿರುವ ವಸಿಷ್ಠನನ್ನು ತಡೆಹಿಡಿದುದಕ್ಕಾಗಿ ಅವನು ಪರಾಶರನೆಂದು ಲೋಕದಲ್ಲಿ ಹೇಳಿಸಿಕೊಂಡನು. ತನ್ನ ಮೊಮ್ಮಗನ ಜಾತಕರ್ಮಾದಿ ಕ್ರಿಯೆಗಳನ್ನು ಸ್ವಯಂ ವಸಿಷ್ಠನೇ ನೆರವೇರಿಸಿದನು. ಹುಟ್ಟಿದಾಗಿನಿಂದ ಧರ್ಮಾತ್ಮನಾದ ಅವನು ವಸಿಷ್ಠನೇ ತನ್ನ ತಂದೆಯೆಂದು ತಿಳಿದು ಅವನೊಡನೆ ತಂದೆಯೊಡನೆ ಹೇಗೋ ಹಾಗೆಯೇ ವರ್ತಿಸುತ್ತಿದ್ದನು. ಒಮ್ಮೆ ಅವನು ತಾಯಿಯ ಸಮಕ್ಷಮದಲ್ಲಿ ವಿಪ್ರರ್ಷಿ ವಸಿಷ್ಠನನ್ನು “ತಂದೆ” ಎಂದು ಕರೆದಾಗ ಅದೃಶ್ಯವಂತಿಯು ಕಣ್ಣುಗಳನ್ನು ಕಣ್ಣೀರಿನಿಂದ ತುಂಬಿಸಿಕೊಂಡು ಅವನಿಗೆ ಕೇಳುವಂತೆ ಹೇಳಿದಳು: “ಅವನನ್ನು ಅಪ್ಪಾ ಅಪ್ಪಾ ಎಂದು ಕರೆಯಬೇಡ. ಮಹಾಮುನಿಯು ನಿನ್ನ ತಂದೆಯಲ್ಲ. ನಿನ್ನ ತಂದೆಯನ್ನು ವನದಲ್ಲಿ ರಾಕ್ಷಸರು ಭಕ್ಷಿಸಿದರು. ತಂದೆಯೆಂದು ನೀನು ತಿಳಿದಿರುವವನು ನಿನ್ನ ತಂದೆಯಲ್ಲ! ಈ ಮಹಾತ್ಮನು ನಿನ್ನ ತಂದೆಯ ತಂದೆ.”
ಇದನ್ನು ಕೇಳಿದ ಪರಾಶರನು ದುಃಖಾರ್ತನಾಗಿ ಸರ್ವಲೋಕವಿನಾಶದ ಕುರಿತು ಯೋಚಿಸತೊಡಗಿದನು. ಆಗ ವಸಿಷ್ಠನು ಕಾರಣಗಳನ್ನಿತ್ತು ಪರಾಶರನನ್ನು ತಡೆದನು. ಇದನ್ನು ಕೇಳಿದ ಪರಾಶರನು ಸರ್ವಲೋಕವನ್ನೂ ಪರಾಭವಗೊಳಿಸುವ ತನ್ನ ಕೋಪವನ್ನು ತಡೆಹಿಡಿದಿಟ್ಟುಕೊಂಡನು. ಅನಂತರ ಪರಾಶರನು ರಾಕ್ಷಸಸತ್ರವನ್ನು ನಡೆಸಿದನು. ಶಕ್ತಿಯ ವಧೆಯ ನೆನಪಿನಲ್ಲಿ ಮಹಾಮುನಿಯು ಆ ಯಜ್ಞದಲ್ಲಿ ವೃದ್ಧ, ಬಾಲಕ ರಾಕ್ಷಸರನ್ನು ಸುಟ್ಟುಹಾಕಿದನು. ಅವನ ಎರಡನೆಯ ಪ್ರತಿಜ್ಞೆಯನ್ನು ಭಂಗಗೊಳಿಸಬಾರದೆಂದು ನಿಶ್ಚಯಿಸಿ ವಸಿಷ್ಠನೂ ಕೂಡ ಆ ರಾಕ್ಷಸರ ವಧೆಯನ್ನು ನಿಲ್ಲಿಸಲಿಲ್ಲ. ಆ ಸತ್ರದಲ್ಲಿ ಮೂರು ಪಾವಕಗಳ ಜೊತೆ ಕುಳಿತಿದ್ದ ಆ ಮಹಾಮುನಿಯು ನಾಲ್ಕನೆಯ ಪಾವಕನೋ ಎನ್ನುವಂತೆ ಬೆಳಗುತ್ತಿದ್ದನು. ಆ ಶುಭ್ರ ಯಜ್ಞದಲ್ಲಿ ಶಾಸ್ತ್ರೋಕ್ತವಾಗಿ ಹಾಕಿದ ಹವಿಸ್ಸುಗಳಿಂದ ಬೆಂಕಿಯು ಮಳೆಗಾಲದ ಅಂತ್ಯದಲ್ಲಿ ಆಕಾಶದಲ್ಲಿ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿತ್ತು. ವಸಿಷ್ಠರೇ ಮೊದಲಾದ ಎಲ್ಲ ಮುನಿಗಳೂ ಅವನು ತೇಜಸ್ಸಿನಿಂದ ದಿವಿಯಲ್ಲಿ ದೇದೀಪ್ಯಮಾನನಾದ ಎರಡನೆಯ ಭಾಸ್ಕರನೆಂದು ಅಭಿಪ್ರಾಯಪಟ್ಟರು. ಅನ್ಯರಿಂದ ಪರಮ ದುರ್ಲಭ ಆ ಸತ್ರದ ಬಳಿಗೆ ಉದಾರ ಮನಸ್ಕ ಅತ್ರಿಯು ಬಂದು ಅದನ್ನು ನಿಲ್ಲಿಸಲು ಪ್ರಯತ್ನಿಸಿದನು. ಅದೇ ರೀತಿ ರಾಕ್ಷಸರು ಜೀವಂತವಿರಬೇಕೆಂದು ಬಯಸಿದ ಪುಲಸ್ತ್ಯ, ಪುಲಹ ಮತ್ತು ಕ್ರತು ಆ ಮಹಾಕ್ರತುವಿಗೆ ಬಂದರು. ಆ ರಾಕ್ಷಸರ ವಧೆಯನ್ನು ಕುರಿತು ಅರಿಂದಮ ಪರಾಶರನಲ್ಲಿ ಪುಲಸ್ತ್ಯನು ಈ ಮಾತುಗಳನ್ನಾಡಿದನು: “ಪುತ್ರಕ! ನಿನ್ನನ್ನು ಯಾವುದೂ ತಡೆಹಿಡಿಯುವುದಿಲ್ಲವೇ? ಅಜಾನತ ಅದೋಷಣ ಸರ್ವ ರಾಕ್ಷಸರ ವಧೆಗೈಯುವುದರಲ್ಲಿ ನಿನಗೆ ಯಾವರೀತಿಯ ಆನಂದವು ದೊರೆಯುತ್ತದೆ? ಪರಾಶರ! ನನ್ನ ಕುಲದ ಸರ್ವರನ್ನೂ ಕೊಲ್ಲುವುದರಿಂದ ನೀನು ಅತಿ ದೊಡ್ಡ ಅಧರ್ಮವನ್ನು ಎಸಗುತ್ತಿರುವೆ. ರಾಜ ಕಲ್ಮಾಷಪಾದನು ಸ್ವರ್ಗವನ್ನು ಸೇರುತ್ತಾನೆ. ಮಹಾಮುನಿ ವಸಿಷ್ಠನ ಪುತ್ರರು ಶಕ್ತಿ ಮತ್ತು ಇತರ ಸರ್ವರೂ ಸಂತೋಷದಿಂದ ಸುರರ ಸಹಿತ ವಿನೋದದಿಂದಿದ್ದಾರೆ. ಇದೆಲ್ಲವೂ ಮತ್ತು ಕಾಡಿಸುವ ರಾಕ್ಷಸರ ಸಮುಚ್ಛೇದವೂ ವಸಿಷ್ಠನಿಗೆ ತಿಳಿದಿದ್ದುದೇ ಆಗಿದೆ. ನೀನು ಈ ಕ್ರತುವಿನ ನಿಮಿತ್ತನಾಗಿದ್ದೀಯೆ. ಈ ಸತ್ರವನ್ನು ಮುಗಿಸು. ನಿನಗೆ ಮಂಗಳವಾಗಲಿ. ನಿನ್ನಿಂದಲೇ ಇದು ಸಮಾಪ್ತಿಯಾಗಲಿ.”
ಪುಲಸ್ತ್ಯ ಮತ್ತು ವಸಿಷ್ಠರಿಂದ ಇದನ್ನು ಕೇಳಿದ ಧೀಮಂತ ಶಾಕ್ತಿ ಪರಾಶರನು ಆ ಸತ್ರವನ್ನು ಅಲ್ಲಿಯೇ ನಿಲ್ಲಿಸಿದನು. ಸರ್ವ ರಾಕ್ಷಸಸತ್ರಕ್ಕಾಗಿ ಸಂಭೃತಗೊಂಡ ಪಾವಕನನ್ನು ಮುನಿಯು ಹಿಮವತ್ ಪರ್ವತದ ಉತ್ತರ ಭಾಗದಲ್ಲಿರುವ ಮಹಾವನದಲ್ಲಿ ವಿಸರ್ಜಿಸಿದನು. ರಾಕ್ಷಸರನ್ನು, ವೃಕ್ಷಗಳನ್ನು ಮತ್ತು ಶಿಲೆಬಂಡೆಗಳನ್ನು ಭಕ್ಷಿಸುತ್ತಿರುವ ಆ ವಹ್ನಿಯು ಈಗಲೂ ಕೂಡ ಪರ್ವ ಪರ್ವಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಋಷಿ ಪರಾಶರನು ತನ್ನ ಶಿಷ್ಯ ಮೈತ್ರೇಯನಿಗೆ ವಿಷ್ಣುಪುರಾಣವನ್ನು ಹೇಳಿದನು. ವಿಷ್ಣುಪುರಾಣದ ಪ್ರಕಾರ ಪರಾಶರನ ರಾಕ್ಷಸ ಯಜ್ಞದಲ್ಲಿ ರಾಕ್ಷಸರೆಲ್ಲ ಸಂಪೂರ್ಣವಾಗಿ ನಾಶವಾಗುತ್ತಿರುವಾಗ ಅವನ ಪಿತಾಮಹ ಮಹಾಮಹಿಮ ವಸಿಷ್ಠನು ಪರಾಶರನಿಗೆ ಹೇಳಿದನು: "ಮಗುವೇ! ರಾಕ್ಷಸರು ನಿನ್ನ ತಂದೆಯ ವಿಷಯದಲ್ಲಿ ಯಾವ ತಪ್ಪನ್ನೂ ಮಾಡಿದವರಲ್ಲ. ಮನುಷ್ಯನು ಕರ್ಮಫಲವನ್ನು ತಾನು ಅನುಭವಿಸುವನು. ಹೀಗಿರುವಲ್ಲಿ ಯಾರು ಯಾರನ್ನು ಕೊಲ್ಲುವರು? ಮೂಢರಿಗೆ ಕೋಪವು ಬರುವುದು. ಜ್ಞಾನಿಗಳಿಗೆ ಅದು ಹೇಗೆ ಬರುವುದು? ಮನುಷ್ಯರು ಬಹುಕಷ್ಟದಿಂದ ಸಂಪಾದಿಸಿದ ಕೀರ್ತಿ-ತಪಸ್ಸುಗಳನ್ನು ಕೋಪವು ನಾಶಮಾಡಿಬಿಡುವುದು. ಸ್ವರ್ಗ-ಮೋಕ್ಷಗಳ ತಡೆಗೆ ಕಾರಣವಾದ ಕೋಪವನ್ನು ಮಹರ್ಷಿಗಳಾದವರು ಯಾವಾಗಲೂ ಬಿಟ್ಟಿರುವರು. ಆ ಕೋಪಕ್ಕೆ ನೀನು ವಶನಾಗಬೇಡ! ದೀನರೂ ತಪ್ಪಿಲ್ಲದವರೂ ಆದ ರಾಕ್ಷಸರನ್ನು ಸುಟ್ಟಿದ್ದು ಸಾಕು! ಈ ಯಾಗವನ್ನು ಇಲ್ಲಿಗೇ ಬಿಡು. ಸಜ್ಜನರಿಗೆ ಕ್ಷಮಾಗುಣವೇ ಮುಖ್ಯವಾದುದು!"
ಹೀಗೆಂದು ತಾತ ವಸಿಷ್ಠನು ಹೇಳಲು ಅದಕ್ಕೆ ಒಪ್ಪಿಕೊಂಡು ಪರಾಶರನು ಆ ಕ್ಷಣದಲ್ಲಿಯೇ ರಾಕ್ಷಸಯಾಗವನ್ನು ನಿಲ್ಲಿಸಿದನು. ಆಗ ಅಲ್ಲಿಗೆ ಬಂದ ಪುಲಸ್ತ್ಯ ಮುನಿಯು ಹೇಳಿದನು: "ಪರಾಶರ! ಮಹಾಕೋಪವಿದ್ದಿದ್ದರೂ ಗುರು ವಸಿಷ್ಠನ ಮಾತಿನಿಂದ ಕ್ಷಮಾಗುಣವನ್ನು ನೀನು ಪಡೆದಿರುವುದರಿಂದ ನೀನು ಸಮಸ್ತ ಶಾಸ್ತ್ರಗಳನ್ನೂ ತಿಳಿಯುವೆ! ಕೋಪವಿದ್ದಿದ್ದರೂ ನನ್ನ ವಂಶವನ್ನು ನಾಶಮಾಡದೇ ಇದ್ದಿದುದರಿಂದ ನಿನಗೆ ಇನ್ನೊಂದು ವರವನ್ನು ಕೊಡುತ್ತೇನೆ. ನೀನು ವೇದಕ್ಕೆ ಸಮಾನವಾದ ಪುರಾಣವನ್ನು ರಚಿಸುತ್ತೀಯೆ ಮತ್ತು ದೇವತೆಗಳ ಪರಮಾರ್ಥ ತತ್ತ್ವಗಳನ್ನು ತಿಳಿಯುತ್ತೀಯೆ! ನನ್ನ ಅನುಗ್ರಹದಿಂದ ನಿನಗೆ ಪ್ರವೃತ್ತಿ-ನಿವೃತ್ತಿ ಕರ್ಮಗಳ ವಿಷಯದಲ್ಲಿ ಸಂದೇಹವಿಲ್ಲದ ದೋಷರಹಿತ ಬುದ್ಧಿಯು ಉಂಟಾಗುವುದು!"
ತಂದೆಯ ಶುಶ್ರೂಷೆ ಮಾಡಲೋಸುಗ ನದಿಯಲ್ಲಿ ದೋಣಿಯನ್ನು ನಡೆಸುತ್ತಿದ್ದ ದಾಶರಾಜನ ಸಾಕುಮಗಳು ಸತ್ಯವತಿಯನ್ನು ತೀರ್ಥಯಾತ್ರೆ ಮಾಡುತ್ತಾ ತಿರುಗುತ್ತಿದ್ದ ಪರಾಶರನು ಒಮ್ಮೆ ನೋಡಿದನು. ಸಿದ್ಧರ ಮನವನ್ನೂ ಸೆಳೆಯುವ ಆ ಅತೀವ ರೂಪಸಂಪನ್ನೆಯನ್ನು ನೋಡಿದ ಆ ಧೀಮಂತ ವಿದ್ವಾಂಸ ಮುನಿಪುಂಗವನು ಅವಳ ಸೌಂದರ್ಯವನ್ನು ಬಯಸಿ ವಾಸವಿ ಕನ್ಯೆಯೊಡನೆ ಕಾರ್ಯನಿರತನಾದನು. ಅವಳು ಹೇಳಿದಳು: “ಭಗವನ್! ನೋಡು! ದಂಡೆಗಳಲ್ಲಿ ಋಷಿಗಳು ನಿಂತಿದ್ದಾರೆ. ಅವರು ನಮ್ಮನ್ನು ನೋಡುತ್ತಿದ್ದಂತೆ ನಾವು ಹೇಗೆ ಪರಸ್ಪರ ಸಮಾಗಮ ಹೊಂದೋಣ?” ಇದನ್ನು ಕೇಳಿದ ಭಗವಾನ್ ಪ್ರಭುವು ಆ ಸ್ಥಳವನ್ನು ಕತ್ತಲೆ ಕವಿಯುವಂತೆ ಮಂಜನ್ನು ನಿರ್ಮಿಸಿದನು. ಪರಮಋಷಿಯು ತಕ್ಷಣವೇ ಸೃಷ್ಟಿಸಿದ ಕತ್ತಲೆಯ ಆವರಣವನ್ನು ಕಂಡು ವಿಸ್ಮಿತ ಮನಸ್ವಿನಿಯು ನಾಚುತ್ತಾ ಹೇಳಿದಳು: “ಭಗವನ್! ಸದಾ ಪಿತೃವಶದಲ್ಲಿದ್ದು ಅವನನ್ನೇ ಅನುಸರಿಸುತ್ತಿರುವ ಕನ್ಯೆಯೆಂದು ನನ್ನನ್ನು ತಿಳಿ. ನಿನ್ನೊಡನೆ ಸೇರುವುದರಿಂದ ನನ್ನ ಕನ್ಯಾಭಾವದಲ್ಲಿ ದೋಷವುಂಟಾಗುವುದಲ್ಲವೇ? ಕನ್ಯತ್ವ ದೂಷಿತ ನಾನು ಹೇಗೆ ಮನೆಗೆ ಹಿಂದಿರುಗಲಿ? ಆಗ ನಾನು ಮನೆಯಲ್ಲಿ ವಾಸಿಸಲು ಉತ್ಸುಕಳಾಗುವುದಿಲ್ಲ. ಇವೆಲ್ಲವನ್ನೂ ಯೋಚಿಸಿ, ನಂತರ ನಿನಗೆ ತಿಳಿದದ್ದನ್ನು ಮಾಡು.”
ಹೀಗೆ ಹೇಳಿದ ಅವಳಲ್ಲಿ ಬಹಳ ಸಂತಸಗೊಂಡ ಆ ಋಷಿಸತ್ತಮನು “ನನ್ನ ಪ್ರಿಯ ಕಾರ್ಯವನ್ನು ಮಾಡಿದ ನಂತರವೂ ನೀನು ಕನ್ಯೆಯಾಗಿಯೇ ಉಳಿಯುವೆ” ಎಂದನು. “ಭಾಮಿನಿ! ನಿನಗಿಷ್ಟವಾದ ವರವನ್ನು ಕೇಳು. ನನ್ನ ಪ್ರಸಾದವು ಈ ಹಿಂದೆ ಎಂದೂ ವೃಥವಾಗಿಲ್ಲ.” ಇದನ್ನು ಕೇಳಿದ ಅವಳು ತನ್ನ ದೇಹವು ಉತ್ತಮ ಸುಗಂಧವನ್ನು ಹೊಂದಲಿ ಎಂದು ವರವನ್ನು ಕೇಳಲು ಅವಳ ಮನಸ್ಸಿನ ಆಕಾಂಕ್ಷೆಯನ್ನು ಪರಾಶರನು ನೀಡಿದನು. ಪರಾಶರನನ್ನು ಸೇರಿದ ದಿನವೇ ಅವಳು ಆ ಯಮುನಾ ದ್ವೀಪದಲ್ಲಿ ವೀರ್ಯವಂತ ಪಾರಶರ್ಯನಿಗೆ ಜನ್ಮವಿತ್ತಳು. ಅವನೇ ಕೃಷ್ಣದ್ವೈಪಾಯನ ವ್ಯಾಸ.