ಜನಮೇಜಯ

ಪಾಂಡವ ಅರ್ಜುನನ ಮೊಮ್ಮಗ ಪರೀಕ್ಷಿತನ ಮಗ ಜನಮೇಜಯ. ರಾಜಾ ಪರೀಕ್ಷಿತನು ತಕ್ಷಕನ ತೇಜಸ್ಸಿನಿಂದ ಹತನಾದ ನಂತರ ಹಸ್ತಿನಾಪುರವಾಸೀ ಸರ್ವ ಜನರೂ ಸೇರಿ ನೃಪನ ಬಾಲಕ ಮಗ ಜನಮೇಜಯನನ್ನು ರಾಜನನ್ನಾಗಿ ಅಭಿಷೇಕಿಸಿದರು. ಬಾಲಕನಾಗಿದ್ದರೂ ಜನಮೇಜಯನು ವಿವೇಕಿಯೂ ಬುದ್ಧಿವಂತನೂ ಆಗಿದ್ದನು. ಅವನ ಮಂತ್ರಿ ಮತ್ತು ಪುರೋಹಿತರೊಡನೆ ಆ ಕುರುಪುಂಗವಾಗ್ರಜನು ತನ್ನ ವೀರ ಪ್ರಪಿತಾಮಹನಂತೆ ರಾಜ್ಯವನ್ನು ಆಳಿದನು. ರಾಜನು ತನ್ನ ಶತ್ರುಗಳನ್ನು ತಡೆಗಟ್ಟಬಲ್ಲ ಎನ್ನುವುದನ್ನು ನೋಡಿದ ನೃಪನ ಮಂತ್ರಿಗಳು ಕಾಶೀರಾಜ ಸುವರ್ಣವರ್ಮನಲ್ಲಿ ಅವನ ಮಗಳು ವಪುಷ್ಠಮೆಯನ್ನು ಅವನಿಗೆ ವಧುವಾಗಿ ಕೇಳಿದರು. ಧಾರ್ಮಿಕವಾಗಿ ಅವನನ್ನು ಪರೀಕ್ಷಿಸಿ ರಾಜನು ಕುರುಪ್ರವೀರನಿಗೆ ವಪುಷ್ಟಮೆಯನ್ನು ಕೊಟ್ಟನು. ಅವಳನ್ನು ಪಡೆದ ಅವನೂ ಕೂಡ ಸಂತಸಗೊಂಡನು. ಇದಕ್ಕೂ ಮೊದಲು ಅವನು ತನ್ನ ಮನಸ್ಸನ್ನು ಯಾರಿಗೂ ಕೊಟ್ಟಿರಲಿಲ್ಲ. ಆ ವೀರ್ಯವಂತನು ಸರೋವರ ಮತ್ತು ಪುಷ್ಪಭರಿತ ವನಗಳಲ್ಲಿ ಪ್ರಸನ್ನ ಮನಸ್ಕನಾಗಿ ವಿಹರಿಸಿದನು. ಹಿಂದೆ ಪುರೂರವನು ಊರ್ವಶಿಯನ್ನು ಹೊಂದಿ ಹೇಗೆ ಆನಂದವನ್ನು ಅನುಭವಿಸಿದನೋ ಹಾಗೆ ಅವನೂ ಸುಖವನ್ನು ಅನುಭವಿಸಿದನು. ಅತೀವ ಸುಂದರಿ ವಪುಷ್ಟಮೆಯಾದರೂ ತನ್ನ ಹಾಗೆಯೇ ರೂಪವಂತನಾದ ಭೂಮಿಪ ಶ್ರೇಷ್ಠ ಪತಿಯನ್ನು ಪಡೆದು ಅಧಿಕ ಪ್ರೇಮದಿಂದ ಅವನನ್ನು ಸಂತೋಷಗೊಳಿಸಿದಳು.

ಪಾರಿಕ್ಷಿತ ಜನಮೇಜಯನು ಕುರುಕ್ಷೇತ್ರದಲ್ಲಿ ಸಹೋದರರೊಡನೆ ಒಂದು ದೀರ್ಘಯಾಗದಲ್ಲಿ ತೊಡಗಿದ್ದನು. ಶೃತಸೇನ, ಉಗ್ರಸೇನ ಮತ್ತು ಭೀಮಸೇನ ಎನ್ನುವವರು ಅವನ ಮೂವರು ಸಹೋದರರು. ಅವರು ಆ ಸತ್ರದಲ್ಲಿ ಉಪಸ್ಥಿತರಿರಲು ಅಲ್ಲಿಗೆ ಶ್ವಾನ ಸಾರಮೇಯನು ಆಗಮಿಸಿದನು. ಜನಮೇಜಯನ ತಮ್ಮಂದಿರಿಂದ ಪೆಟ್ಟುತಿಂದ ಅವನು ರೋಧಿಸುತ್ತಾ ತನ್ನ ತಾಯಿಯ ಬಳಿ ಹೋದನು. ರೋಧಿಸುತ್ತಿರುವ ಮಗನನ್ನುದ್ದೇಶಿಸಿ ತಾಯಿ ಸರಮೆಯು ಕೇಳಿದಳು: “ಏಕೆ ರೋಧಿಸುತ್ತಿರುವೆ? ನಿನಗೆ ಹೊಡೆದರು?” ತಾಯಿಯು ಹೀಗೆ ಕೇಳಲು ಅವನು ಉತ್ತರಿಸಿದನು: “ಜನಮೇಜಯನ ತಮ್ಮಂದಿರು ನನ್ನನ್ನು ಹೊಡೆದರು.” ತಾಯಿಯು ಅವನಿಗೆ ಪುನಃ ಹೇಳಿದಳು: “ನೀನು ನಿಜಯಾಗಿಯೂ ಏನೋ ಅಪರಾಧವನ್ನು ಮಾಡಿರುವುದರಂದಲೇ ಅವರು ನಿನಗೆ ಹೊಡೆದಿರಬಹುದು.” ಅವನು ಅವಳಿಗೆ ಪುನಃ ಹೇಳಿದನು: “ನಾನೇನೂ ಅಪರಾಧವನ್ನು ಮಾಡಿಲ್ಲ. ನಾನು ಅವಿಸ್ಸಿನ ಕಡೆಗೂ ನೋಡಲಿಲ್ಲ, ಅದನ್ನು ನೆಕ್ಕಲೂ ಇಲ್ಲ.” ಅದನ್ನು ಕೇಳಿದ ಸರಮೆಯು ಪುತ್ರಶೋಕಾರ್ತಳಾಗಿ ತಮ್ಮಂದಿರೊಂದಿಗೆ ದೀರ್ಘಸತ್ರದಲ್ಲಿ ತೊಡಗಿದ್ದ ಜನಮೇಜಯನಲ್ಲಿಗ ಆಗಮಿಸಿದಳು. ಕೃದ್ಧಳಾದ ಅವಳು ಅವನಿಗೆ ಹೇಳಿದಳು: “ಈ ನನ್ನ ಪುತ್ರನು ಯಾವ ಅಪರಾಧವನ್ನೂ ಮಾಡಿಲ್ಲ. ಆದರೂ ಅವನನ್ನು ಏಕೆ ಹೊಡೆದಿರಿ? ಏನೂ ತಪ್ಪು ಮಾಡದ ಇವನನ್ನು ಹೇಗೆ ಹೊಡೆದಿರೋ ಹಾಗೆ ಭವಿಷ್ಯದಲ್ಲಿ ನೀವೂ ಕೂಡ ನಿರೀಕ್ಷೆಪಟ್ಟಿರದ ಭಯವನ್ನು ಅನುಭವಿಸುತ್ತೀರಿ!” ದೇವತೆಗಳ ನಾಯಿ ಸರಮೆಯು ಹೀಗೆ ಹೇಳಲು ಜನಮೇಜಯನು ಅತೀವ ವಿಷಣ್ಣನಾಗಿ ಯೋಚನೆಗೊಳಗಾದನು. ಆ ಸತ್ರವನ್ನು ಸಮಾಪ್ತಿಗೊಳಿಸಿ ಅವನು ಹಸ್ತಿನಾಪುರಕ್ಕೆ ಮರಳಿ, ತನ್ನ ಪಾಪಕೃತ್ಯಗಳನ್ನು ಶಾಂತಗೊಳಿಸಿ ಶಾಪದಿಂದ ಮುಕ್ತಿಸ್ ದೊರಕಿಸುವ ಅನುರೂಪ ಪುರೋಹಿತನನ್ನು ಪಡೆಯುವ ಪರಮ ಯತ್ನವನ್ನು ಮಾಡಿದನು.

ಒಮ್ಮೆ ಬೇಟೆಗೆಂದು ಹೋಗಿದ್ದ ಜನಮೇಜಯನು ತನ್ನ ರಾಜ್ಯದ ಗಡಿಯ ಒಳಗೇ ಇದ್ದ ಒಂದು ಆಶ್ರಮವನ್ನು ಕಂಡನು. ಅಲ್ಲಿ ಶೃತಶ್ರವ ಎಂಬ ಹೆಸರಿನ ಓರ್ವ ಋಷಿಯೊಬ್ಬನು ಸೋಮಶ್ರವ ಎಂಬ ಪುತ್ರನೊಂದಿಗೆ ವಾಸಿಸುತ್ತಿದ್ದನು. ಅವನ ಆ ಮಗನನ್ನು ಜನಮೇಜಯನು ಪೌರೋಹಿತ್ಯಕ್ಕಾಗಿ ಕೇಳಿದನು. ಆ ಋಷಿಯನ್ನು ನಮಸ್ಕರಿಸಿ ಹೇಳಿದನು: “ಭಗವನ್! ನಿನ್ನ ಪುತ್ರನು ನನ್ನ ಪುರೋಹಿತನಾಗಲಿ!” ಈ ಕೇಳಿಕೆಗೆ ಶೃತಶ್ರವನು ಉತ್ತರಿಸಿದನು: “ಜನಮೇಜಯ! ನನ್ನ ತಪೋವೀರ್ಯದಿಂದ ಹುಟ್ಟಿದ, ನನ್ನ ವೀರ್ಯವನ್ನು ಕುಡಿದ ಸರ್ಪವೊಂದರ ಗರ್ಭದಲ್ಲಿ ಜನಿಸಿದ ನನ್ನ ಈ ಮಗನು ಮಹಾತಪಸ್ವಿ ಮತ್ತು ಸ್ವಾಧ್ಯಾಯಸಂಪನ್ನನಾಗಿದ್ದಾನೆ. ಮಹಾದೇವನ ವಿರುದ್ಧ ಕರ್ಮಗಳನ್ನು ಬಿಟ್ಟು ಉಳಿದೆಲ್ಲ ಪಾಪಕೃತ್ಯಗಳನ್ನೂ ಶಾಂತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದರೆ ಅವನು ಒಂದೇ ಒಂದು ವ್ರತವನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಾನೆ. ಬ್ರಾಹ್ಮಣ ಯಾರೇ ಆಗಿರಲಿ, ಯಾವಾಗ ಏನು ಕೇಳಿದರೂ ಅದನ್ನು ಕೊಟ್ಟುಬಿಡುತ್ತಾನೆ. ಅವನು ಈ ನಿಯಮವನ್ನು ಪಲಿಸಲು ನಿನಗೆ ಅಡ್ಡಿಯಿಲ್ಲವಾದರೆ ಅವನನ್ನ ಕರೆದುಕೊಂಡು ಹೋಗು!”

ಜನಮೇಜಯನು “ನೀನು ಹೇಳಿದ ಹಾಗೆಯೇ ಆಗಲಿ ಎಂದು ಉತ್ತರಿಸಿ, ಸೋಮಶ್ರವನನ್ನು ತನ್ನ ಪುರೋಹಿತನನ್ನಾಗಿ ಸ್ವೀಕರಿಸಿ ಹಿಂದಿರುಗಿ ಬಂದು “ಇವನನ್ನು ನಮ್ಮ ಉಪಾಧ್ಯಾಯನನ್ನಾಗಿ ಆರಿಸಿದ್ದೇನೆ. ಅವನು ಹೇಳಿದುದೆಲ್ಲವನ್ನೂ ವಿಚಾರಮಾಡದೇ ನಡೆಸಿಕೊಡಬೇಕು!” ಎಂದು ತನ್ನ ತಮ್ಮಂದಿರಿಗೆ ಆದೇಶವನ್ನಿತ್ತನು. ಅವನ ಸಹೋದರರು ಹೇಳಿದ ಹಾಗೆಯೇ ನಡೆದುಕೊಂಡರು. ಈ ರೀತಿ ತಮ್ಮಂದಿರಿಗೆ ಆದೇಶವನ್ನಿತ್ತು ಅವನು ತಕ್ಷಶಿಲೆಗೆ ಆ ದೇಶದಲ್ಲಿ ತನ್ನ ಆಡಳಿತವನ್ನು ಸ್ಥಾಪಿಸಲು ಹೊರಟು ಹೋದನು.

ಯಾವುದೋ ಒಂದು ಕಾರಣದಿಂದ ತಕ್ಷಕನ ಮೇಲೆ ಸಿಟ್ಟಿಗೆದ್ದಿದ್ದ ಉತ್ತಂಕನು ಅವನ ಮೇಲೆ ಸೇಡು ತೀರಿಸುವ ಉದ್ದೇಶದಿಂದ ಹಸ್ತಿನಾಪುರಕ್ಕೆ ಬಂದು ರಾಜ ಜನಮೇಜಯನ ಬಳಿ ಸಾರಿ, ತಕ್ಷಶಿಲೆಯನ್ನು ಗೆದ್ದು ಹಿಂದಿರುಗಿ, ಸಾಮಂತರು ಮತ್ತು ಮಂತ್ರಿಗಳಿಂದ ಸುತ್ತುವರೆದಿದ್ದ ಆ ವಿಜಯಿಯನ್ನು ಕಂಡು ಸರಿಯಾದ ಸಮಯವನ್ನು ನೋಡಿ ಶಬ್ಧ ಸಂಪನ್ನ ವಾಣಿಯಲ್ಲಿ ಹೇಳಿದನು: “ಪಾರ್ಥಿವಸತ್ತಮ! ಮಾಡಬೇಕಾದ ಮುಖ್ಯ ಕಾರ್ಯವನ್ನು ಬಿಟ್ಟು ಬಾಲಕನಂತೆ ಬೇರೆ ಏನನ್ನೋ ಮಾಡುತ್ತ ಸುಮ್ಮನೆ ಕಾಲಹರಣ ಮಾಡುತ್ತಿರುವೆ.”

ಆ ವಿಪ್ರನು ಈ ರೀತಿ ಹೇಳಲು ಪ್ರಸನ್ನಾತ್ಮ ರಾಜ ಜನಮೇಜಯನು ಮುನಿಯನ್ನು ಸರಿಯಾದ ರೀತಿಯಲ್ಲಿ ಪೂಜಿಸಿ ಉತ್ತರಿಸಿದನು: “ಪ್ರಜೆಗಳನ್ನು ಪರಿಪಾಲಿಸುವ ನನ್ನ ಕ್ಷಾತ್ರಧರ್ಮವನ್ನು ಪರಿಪಾಲಿಸುತ್ತಿದ್ದೇನೆ. ದ್ವಿಜೇಂದ್ರ! ನೀನು ಯಾವ ಕಾರ್ಯದ ಕುರಿತು ಹೇಳುತ್ತಿರುವೆ ಎನ್ನುವುದನ್ನು ವಿವರಿಸಿ ಹೇಳು”

ನೃಪೋತ್ತಮನ ಈ ಮಾತುಗಳನ್ನು ಕೇಳಿ ಪುಣ್ಯಕೃತರಲ್ಲಿ ವರಿಷ್ಠ ದ್ವಿಜೋತ್ತಮನು ರಾಜನಿಗೆ ಹೇಳಿದನು: “ನೃಪತಿ! ನಿನ್ನದೇ ಆದ ಒಂದು ಕಾರ್ಯವಿದೆ. ನಿನ್ನ ತಂದೆಯು ಯಾವ ನಾಗೇಂದ್ರ ತಕ್ಷಕನಿಂದ ಹಿಂಸೆಗೊಳಗಾಗಿದ್ದನೋ ಆ ದುರಾತ್ಮ ಪನ್ನಗನ ಮೇಲೆ ನೀನು ಪ್ರತೀಕಾರ ಮಾಡಬೇಕು. ನನ್ನ ವಿಚಾರದಲ್ಲಿ ನಿನ್ನ ಮಹಾತ್ಮ ತಂದೆಯ ಮರಣದ ಸೇಡನ್ನು ತೀರಿಸಿಕೊಳ್ಳುವ ಕಾಲವು ಬಂದಿದೆ. ಅನಪರಾಧಿಯಾದ ಆ ರಾಜನು ದುಷ್ಟಾಂತರಾತ್ಮನಿಂದ ಕಡಿಯಲ್ಪಟ್ಟು ಮಿಂಚಿನಿಂದ ಹೊಡೆಯಲ್ಪಟ್ಟ ವೃಕ್ಷದಂತೆ ಪಂಚಭೂತಗಳಲ್ಲಿ ಒಂದಾದನು. ತನ್ನ ಬಲದರ್ಪದಿಂದ ಉನ್ಮತ್ತನಾದ ಆ ಪನ್ನಗಾಧಮ ತಕ್ಷಕನು ನಿನ್ನ ತಂದೆಯನ್ನು ಕಚ್ಚುವ ಪಾಪ ಕಾರ್ಯವನ್ನು ಮಾಡಿದ್ದಾನೆ. ರಾಜರ್ಷಿಗಳ ವಂಶೋದ್ಧಾರಕ ಅಮರಪ್ರತಿಮ ನೃಪನನ್ನು ರಕ್ಷಿಸಲು ಬರುತ್ತಿದ್ದ ಕಾಶ್ಯಪನನ್ನು ಕೂಡ ಹಿಂದೆ ಕಳುಹಿಸಿದನು. ನಿನ್ನಿಂದ ನೆರವೇರಿಸಲ್ಪಡುವ ಸರ್ಪಸತ್ರದಲ್ಲಿ ಆ ಪಾಪಿಯನ್ನು ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಸುಟ್ಟುಹಾಕಬೇಕು. ಇದರಿಂದ ನಿನ್ನ ತಂದೆಯ ಮರಣದ ಸೇಡು ತೀರುತ್ತದೆ ಮತ್ತು ನನಗೆ ಪ್ರಿಯವಾದ ಒಂದು ದೊಡ್ಡ ಕೆಲಸವನ್ನು ಮಾಡಿಕೊಟ್ಟಹಾಗೂ ಆಗುತ್ತದೆ. ಒಮ್ಮೆ ನಾನು ಗುರುದಕ್ಷಿಣೆಯನ್ನು ತರುವಾಗ ಆ ದುರಾತ್ಮನು ವಿಘ್ನವನ್ನು ತಂದೊಡ್ಡಿದ್ದನು.”

ಉತ್ತಂಕನ ಈ ಮಾತುಗಳನ್ನು ಕೇಳಿದ ನೃಪತಿಯು ಅಗ್ನಿಯಲ್ಲಿ ತುಪ್ಪವನ್ನು ಹವಿಸ್ಸನ್ನಾಗಿ ಹಾಕಿದಾಗ ಅದು ಹೇಗೆ ಪ್ರಜ್ವಲಿಸುತ್ತದೆಯೋ ಹಾಗೆ ತಕ್ಷಕನ ಮೇಲೆ ಸಿಟ್ಟಿಗೆದ್ದನು. ಬಹು ದುಃಖಿತನಾದ ರಾಜನು ಉತ್ತಂಕನ ಸನ್ನಿಧಿಯಲ್ಲಿಯೇ ತನ್ನ ತಂದೆಯು ಸ್ವರ್ಗಗತಿಯನ್ನು ಪಡೆದುದರ ಕುರಿತು ತನ್ನ ಮಂತ್ರಿಗಳಲ್ಲಿ ಕೇಳಿದನು. ಉತ್ತಂಕನಿಂದ ತನ್ನ ತಂದೆಯ ವೃತ್ತಾಂತವನ್ನು ಕೇಳಿದ ರಾಜೇಂದ್ರನು ದುಃಖಶೋಕದಲ್ಲಿ ಮುಳುಗಿದನು.

ಪರಿಕ್ಷಿತನ ನಿಧನದ ಕುರಿತು ನೃಪತಿಯು ಮಂತ್ರಿಗಳಲ್ಲಿ ಕೇಳಿ ತಿಳಿದುಕೊಂಡ ಜನಮೇಜಯನು ಕೈ ಹಿಂಡಿಕೊಳ್ಳುತ್ತಾ ದುಃಖಾರ್ತನಾಗಿ ರೋದಿಸಿದನು. ಆ ರಾಜೀವಲೋಚನ ರಾಜ ಮಹೀಪಾಲನು ದೀರ್ಘವಾದ ಬಿಸಿ ನಿಟ್ಟುಸಿರು ಬಿಟ್ಟು ಕಣ್ಣುಗಳಿಂದ ಕಣ್ಣೀರು ಸುರಿಸುತ್ತಾ, ದುಃಖಶೋಕಸಮನ್ವಿತನಾಗಿ ಹೇಳಿದನು: “ನನ್ನ ತಂದೆಯು ಸ್ವರ್ಗಗತಿಯನ್ನು ಹೇಗೆ ಪಡೆದ ಎನ್ನುವುದನ್ನು ನಿಮ್ಮಿಂದ ಕೇಳಿದೆ. ಈಗ ನನ್ನ ಮನಸ್ಸಿನ ಧೃಢ ನಿಶ್ವಯವನ್ನು ತಿಳಿಯಿರಿ. ನನ್ನ ತಂದೆಗೆ ಹಿಂಸೆಕೊಟ್ಟ ದುರಾತ್ಮ ತಕ್ಷಕನಿಗೆ ಪ್ರತೀಕಾರವನ್ನೆಸಗುವ ಕಾರ್ಯದಲ್ಲಿ ವಿಳಂಬಮಾಡಬಾರದು. ಅವನೇ ಋಷಿ ಶೃಂಗಿಯ ಮಾತುಗಳು ನಿಜವಾಗುವಂತೆ ಮಾಡಿದನು ಮತ್ತು ನನ್ನ ತಂದೆಯನ್ನು ಸುಟ್ಟುಹಾಕಿದನು. ಈ ಪಾಪಿಯು ಹೊರಟು ಹೋಗಿದ್ದರೆ ನನ್ನ ತಂದೆಯು ಬದುಕಿರುತ್ತಿದ್ದನು. ಕಾಶ್ಯಪನ ಅನುಗ್ರಹದಿಂದ ಮತ್ತು ಮಂತ್ರಿಗಳ ಕಾಳಜಿಯಂತೆ ಪಾರ್ಥಿವನು ಬದುಕಿದ್ದರೆ ಅವನು ಏನನ್ನು ಕಳೆದುಕೊಳ್ಳುತ್ತಿದ್ದ? ಅಪರಾಜಿತ ರಾಜನಿಗೆ ಪುನರ್ಜೀವನವನ್ನು ಕೊಡಲು ಬರುತ್ತಿದ್ದ ದ್ವಿಜಸತ್ತಮ ಕಾಶ್ಯಪನನ್ನು ಅವನೇ ಮೋಹದಿಂದ ತಡೆಗಟ್ಟಿದನು. ನೃಪನನ್ನು ಬದುಕಿಸಬಾರದೆಂದು ಆ ದ್ವಿಜನಿಗೆ ಸಂಪತ್ತನ್ನಿತ್ತ ದುರಾತ್ಮ ತಕ್ಷಕನ ದುಷ್ಕರ್ಮವು ಮಹತ್ತರವಾದದ್ದು. ಉತ್ತಂಕನಿಗೆ ಪ್ರಿಯವಾದದನ್ನು ಮಾಡಲು, ನಿಮ್ಮನ್ನೆಲ್ಲ ಮತ್ತು ನನ್ನನ್ನು ಸಂತಸಗೊಳಿಸಲೋಸುಗ ನಾನು ನನ್ನ ತಂದೆಯ ಸೇಡನ್ನು ತೀರಿಸಿಕೊಳ್ಳುತ್ತೇನೆ.”

ಹೀಗೆ ಹೇಳಿ ಮಂತ್ರಿಗಳಿಂದ ಅನುಮೋದಿಸಲ್ಪಟ್ಟ ಶ್ರೀಮಾನ್ ಪಾರ್ಥಿವನು ಸರ್ಪಸತ್ರದ ಪ್ರತಿಜ್ಞೆಯನ್ನು ಕೈಗೊಂಡನು. ಭರತಶಾರ್ದೂಲ ಪರಿಕ್ಷಿತನ ಮಗ ವಸುಧಾಧಿಪ ರಾಜನು ಪುರೋಹಿತರನ್ನೂ ಮತ್ತು ಯಾಗ ಪ್ರವೀಣ ಋತ್ವಿಜರನ್ನೂ ಕರೆಯಿಸಿ ಈ ಸಂಪನ್ನ ಮಾತುಗಳನ್ನು ಹೇಳಿದನು: “ನನ್ನ ತಂದೆಗೆ ಹಿಂಸೆಯನ್ನಿತ್ತ ದುರಾತ್ಮ ತಕ್ಷಕನ ಸೇಡನ್ನು ತೀರಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ನೀವು ನನಗೆ ಹೇಳಿ. ಬಂಧುಗಳ ಸಮೇತ ಪನ್ನಗ ತಕ್ಷಕನನ್ನು ಹಿಂದೆ ತನ್ನ ವಿಷಾಗ್ನಿಯಲ್ಲಿ ನನ್ನ ತಂದೆಯನ್ನು ಹೇಗೆ ಸುಟ್ಟನೋ ಹಾಗೆಯೇ ಉರಿಯುತ್ತಿರುವ ಅಗ್ನಿಯಲ್ಲಿ ಎಳೆದು ತಂದು ಹಾಕಬಲ್ಲ ಯೋಜನೆಯನ್ನು ಹೇಳಿ. ಆ ಪಾಪಿ ಪನ್ನಗನನ್ನು ನಾನೂ ಕೂಡ ಭಸ್ಮಮಾಡಲು ಬಯಸುತ್ತೇನೆ.”

ಋತ್ವಿಜರು ಹೇಳಿದರು: “ನಿನಗಾಗಿಯೇ ದೇವನಿರ್ಮಿತ ಮಹಾಸತ್ರವೊಂದಿದೆ ರಾಜನ್! ಇದು ಸರ್ಪಸತ್ರವೆಂದು ಪುರಾಣಗಳಲ್ಲಿ ವರ್ಣಿತಗೊಂಡಿದೆ. ನಿನ್ನನ್ನು ಬಿಟ್ಟು ಬೇರೆ ಯಾರೂ ಈ ಸತ್ರವನ್ನು ಕೈಗೊಳ್ಳಲು ಅಸಮರ್ಥರು ಎಂದು ಪೌರಾಣಿಕರು ಹೇಳುತ್ತಾರೆ ಮತ್ತು ಇದನ್ನು ನಡೆಸುವ ಕ್ರಮವು ನಮ್ಮಲ್ಲಿದೆ.”

ಇದನ್ನು ಕೇಳಿದ ರಾಜರ್ಷಿ ಸತ್ತಮನು ಆ ಸರ್ಪ ತಕ್ಷಕನು ಉರಿಯುತ್ತಿರುವ ಅಗ್ನಿಯಲ್ಲಿ ಬೀಳುತ್ತಿರುವುದನ್ನು ಕಲ್ಪಿಸಿಕೊಂಡನು. ಆಗ ಮಂತ್ರವಿದ್ವಾಂಸಿ ಬ್ರಾಹ್ಮಣರನ್ನುದ್ದೇಶಿಸಿ ರಾಜನು ಹೇಳಿದನು: “ಆ ಸತ್ರವನ್ನು ನಾನು ಕೈಗೊಳ್ಳುತ್ತೇನೆ. ಅದಕ್ಕೆ ಬೇಕಾದ ಸಲಕರಣೆಗಳನ್ನು ಸಂಗ್ರಹಿಸಿರಿ.”

ಸರ್ಪಸತ್ರಕ್ಕೆ ಜನಮೇಜಯನು ದೀಕ್ಷಿತನಾಗಿದ್ದಾನೆಂದು ಕೇಳಿದ ಋಷಿವಿದ್ವಾಂಸ ಕೃಷ್ಣದ್ವೈಪಾಯನನು ಅಲ್ಲಿಗೆ ಬಂದನು. ಪಾಂಡವ ಪಿತಾಮಹನು ಯಮುನಾನದಿಯ ಒಂದು ದ್ವೀಪದಲ್ಲಿ ಗುಪ್ತವಾಗಿ ಶಕ್ತಿಪುತ್ರ ಪರಾಶರನಿಗೆ ಓರ್ವ ಕನ್ಯೆಯಲ್ಲಿ ಜನಿಸಿದ್ದನು. ಹುಟ್ಟಿದ ತಕ್ಷಣವೇ ತನ್ನ ಇಷ್ಟಮಾತ್ರದಿಂದ ದೇಹವನ್ನು ಬೆಳೆಯಿಸಿಕೊಂಡ ಆ ಮಹಾಯಶನು ವೇದ-ವೇದಾಂಗಗಳನ್ನು ಮತ್ತು ಇತಿಹಾಸಗಳನ್ನು ಗೆದ್ದಿದ್ದನು. ತಪಸ್ಸಿನಲ್ಲಿ, ವೇದಾಧ್ಯಯನದಲ್ಲಿ, ವ್ರತೋಪವಾಸಗಳಲ್ಲಿ, ಸಂತಾನದಲ್ಲಿ ಅಥವಾ ಸಿಟ್ಟಿನಲ್ಲಿ ಅವನನ್ನು ಮೀರಿದವರ್ಯಾರೂ ಇರಲಿಲ್ಲ. ಶುಚಿಯೂ, ಸತ್ಯವ್ರತನೂ, ಕವಿಯೂ, ಬ್ರಹ್ಮರ್ಷಿಯೂ, ಪರಾವರಜ್ಞನೂ, ವೇದವಿದರಲ್ಲಿ ಶ್ರೇಷ್ಠನೂ ಆದ ಅವನು ವೇದವನ್ನು ನಾಲ್ಕು ಭಾಗಗಳನ್ನಾಗಿ ವಿಂಗಡಿಸಿದನು. ಪಾಂಡು, ಧೃತರಾಷ್ಟ್ರ, ಮತ್ತು ವಿದುರರಿಗೆ ಜನ್ಮವಿತ್ತು ಅವನು ಮಹಾಯಶಸ್ವಿ ಪುಣ್ಯಕೀರ್ತಿಮಯ ಶಂತನು ಸಂತತಿಯನ್ನು ಮುಂದುವರಿಸಿದನು. ತನ್ನ ವೇದವೇದಾಂಗಪಾರಂಗತ ಶಿಷ್ಯರೊಂದಿಗೆ ಅವನು ರಾಜರ್ಷಿ ಜನಮೇಜಯನ ಯಜ್ಞಶಾಲೆಯನ್ನು ಪ್ರವೇಶಿಸಿದನು. ಅಲ್ಲಿ ದೇವತೆಗಳಿಂದ ಸುತ್ತುವರಿದ ಪುರಂದರನಂತೆ ಅನೇಕ ಸದಸ್ಯರಿಂದ, ಮೂರ್ಧಾವಸಿಕ್ತ ನಾನಾ ಜನಪದೇಶ್ವರರಿಂದ, ಮತ್ತು ಯಜ್ಞಕಾರ್ಯ ಕುಶಲ ದೇವಕಲ್ಪ ಋತ್ವಿಜರಿಂದ ಆವೃತನಾಗಿ ಕುಳಿತಿದ್ದ ರಾಜ ಜನಮೇಜಯನನ್ನು ಕಂಡನು. ಭರತಸತ್ತಮ ರಾಜರ್ಷಿ ಜನಮೇಜಯನು ಆಗಮಿಸುತ್ತಿದ್ದ ಋಷಿಯನ್ನು ಕಂಡು ಅತ್ಯಂತ ಹರ್ಷಿತನಾಗಿ ತನ್ನ ಸಂಗಾತಿಗಳೊಂದಿಗೆ ಮುಂದೆಬಂದು ಬರಮಾಡಿಕೊಂಡನು. ಸದಸ್ಯರ ಅನುಮತಿಯಂತೆ ಶಕ್ರನು ಬೃಹಸ್ಪತಿಗೆ ನೀಡುವ ಹಾಗೆ ಪ್ರಭುವು ಅವನಿಗೆ ಕಾಂಚನ ಆಸನವನ್ನಿತ್ತನು. ಅಲ್ಲಿ ಕುಳಿತುಕೊಂಡ ದೇವರ್ಷಿಗಣಪೂಜಿತ ವರದನನ್ನು ರಾಜೇಂದ್ರನು ಶಾಸ್ತ್ರೋಕ್ತ ಕರ್ಮಗಳಿಂದ ಪೂಜಿಸಿದನು. ಪಿತಾಮಹ ಕೃಷ್ಣನಿಗೆ ವಿಧಿವತ್ತಾಗಿ ಪಾದ್ಯ, ಆಚಮನೀಯ, ಅರ್ಘ್ಯ ಮತ್ತು ಗೋವುಗಳನ್ನು ನಿವೇದಿಸಿದನು. ಸುಪ್ರೀತ ವ್ಯಾಸನು ಪಾಂಡವ್ಯ ಜನಮೇಜಯನ ಪೂಜೆ-ಗೋವುಗಳನ್ನು ಪ್ರತಿಗ್ರಹಿಸಿದನು. ಪ್ರಪಿತಾಮಹನನ್ನು ಈ ರೀತಿಯಾಗಿ ಪೂಜಿಸಿ, ಅವನ ಕೆಳಗಿನ ಸ್ಥಾನದಲ್ಲಿ ಕುಳಿತುಕೊಂಡು ಅನಾಮಯನ ಕುಶಲವನ್ನು ವಿಚಾರಿಸಿದನು. ಆ ಭಗವಾನನೂ ಕೂಡ ಅವನನ್ನು ನೋಡಿ ಕುಶಲವನ್ನು ವಿಚಾರಿಸಿ, ತನ್ನನ್ನು ಪೂಜಿಸಿದ ಸರ್ವ ಸದಸ್ಯರುಗಳಿಗೆ ನಮಸ್ಕರಿಸಿದನು. ಎಲ್ಲ ಸದಸ್ಯರುಗಳು ದ್ವಿಜಶ್ರೇಷ್ಠನನ್ನು ಸತ್ಕರಿಸಿದ ನಂತರ ಜನಮೇಜಯನು ಅಂಜಲೀಬದ್ಧನಾಗಿ ಕೇಳಿಕೊಂಡನು: “ಕುರುಗಳನ್ನೂ ಪಾಂಡವರನ್ನೂ ನೀನು ಪ್ರತ್ಯಕ್ಷವಾಗಿ ನೋಡಿದ್ದೀಯೆ. ದ್ವಿಜ! ನಿನ್ನಿಂದ ಅವರ ಚರಿತ್ರೆಯನ್ನು ಕೇಳಲು ಬಯಸುತ್ತೇನೆ. ಆ ಅಕ್ಲಿಷ್ಟಕರ್ಮಿಗಳಲ್ಲಿ ಭೇದವು ಹೇಗೆ ಉಂಟಾಯಿತು? ಸರ್ವ ಭೂತಾಂತಕಾರಕ ಆ ಮಹಾಯುದ್ಧವು ನನ್ನ ದೈವಪ್ರೇರಿತ ಚೇತನ ಪಿತಾಮಹರ ಮಧ್ಯೆ ಹೇಗೆ ನಡೆಯುಮತಾಯಿತು? ಅವೆಲ್ಲವನ್ನೂ ನನಗೆ ಹೇಳು. ಯಾಕೆಂದರೆ ನಿನಗೊಬ್ಬನಿಗೇ ಇವೆಲ್ಲ ಚೆನ್ನಾಗಿ ತಿಳಿದಿವೆ.”

ಅವನ ಆ ಮಾತುಗಳನ್ನು ಕೇಳಿದ ಕೃಷ್ಣದ್ವೈಪಾಯನನು ಅಲ್ಲಿಯೇ ಕುಳಿತಿದ್ದ ಶಿಷ್ಯ ವೈಶಂಪಾಯನನಿಗೆ ಆದೇಶವನ್ನಿತ್ತನು: “ಹಿಂದೆ ಕುರು-ಪಾಂಡವರಲ್ಲಿ ಹೇಗೆ ಭೇದವುಂಟಾಯಿತು ಎನ್ನುವುದೆಲ್ಲವನ್ನೂ ನಾನು ನಿನಗೆ ಹೇಗೆ ಹೇಳಿದ್ದೆನೋ ಹಾಗೆಯೇ ಹೇಳು.” ಗುರುವಿನ ವಚನವನ್ನು ಸ್ವೀಕರಿಸಿದ ಆ ವಿಪ್ರರ್ಷಭನು ಕುರು-ಪಾಂಡವರಲ್ಲಾದ ಭೇದ ಮತ್ತು ನಂತರದ ರಾಜ್ಯವಿನಾಶದ ಸಹಿತ ಆ ಪುರಾತನ ಇತಿಹಾಸ ಸರ್ವವನ್ನೂ ಅಲ್ಲಿ ನೆರೆದಿದ್ದ ಸದಸ್ಯರು ಮತ್ತು ಕ್ಷತ್ರಿಯ ರಾಜರೆಲ್ಲರಿಗೆ ಹೇಳತೊಡಗಿದನು.

Comments are closed.