ದ್ರೋಣ ಪರ್ವ: ಜಯದ್ರಥವಧ ಪರ್ವ
೮೩
ದ್ರೌಪದೇಯರು ಸೋಮದತ್ತಿಯ ಮಗ ಶಲನನ್ನು ವಧಿಸಿದುದು (೧-೧೨). ಭೀಮಸೇನನಿಂದ ಬಕನ ತಮ್ಮ ಅಲಂಬುಸನ ಪರಾಜಯ (೧೩-೩೯).
07083001 ಸಂಜಯ ಉವಾಚ|
07083001a ದ್ರೌಪದೇಯಾನ್ಮಹೇಷ್ವಾಸಾನ್ಸೌಮದತ್ತಿರ್ಮಹಾಯಶಾಃ|
07083001c ಏಕೈಕಂ ಪಂಚಭಿರ್ವಿದ್ಧ್ವಾ ಪುನರ್ವಿವ್ಯಾಧ ಸಪ್ತಭಿಃ||
ಸಂಜಯನು ಹೇಳಿದನು: “ಮಹಾಯಶಸ್ವಿ ಸೌಮದತ್ತಿ (ಶಲ) ಯು ಮಹೇಷ್ವಾಸ ದ್ರೌಪದೇಯರು ಒಬ್ಬೊಬ್ಬರನ್ನೂ ಐದೈದು ಬಾಣಗಳಿಂದ ಹೊಡೆದು ಪುನಃ ಏಳರಿಂದ ಗಾಯಗೊಳಿಸಿದನು.
07083002a ತೇ ಪೀಡಿತಾ ಭೃಶಂ ತೇನ ರೌದ್ರೇಣ ಸಹಸಾ ವಿಭೋ|
07083002c ಪ್ರಮೂಢಾ ನೈವ ವಿವಿದುರ್ಮೃಧೇ ಕೃತ್ಯಂ ಸ್ಮ ಕಿಂ ಚನ||
ವಿಭೋ! ರೌದ್ರನಾದ ಅವನಿಂದ ಒಮ್ಮೆಲೇ ತುಂಬಾ ಪೀಡಿತರಾದ ಅವರು ಯುದ್ಧದಲ್ಲಿ ಏನು ಮಾಡಬೇಕೆಂದು ತಿಳಿಯದೇ ಸ್ವಲ್ಪ ಹೊತ್ತು ವಿಮೂಢರಾದರು.
07083003a ನಾಕುಲಿಸ್ತು ಶತಾನೀಕಃ ಸೌಮದತ್ತಿಂ ನರರ್ಷಭಂ|
07083003c ದ್ವಾಭ್ಯಾಂ ವಿದ್ಧ್ವಾನದದ್ಧೃಷ್ಟಃ ಶರಾಭ್ಯಾಂ ಶತ್ರುತಾಪನಃ||
ಶತ್ರುತಾಪನ ನಾಕುಲಿ ಶತಾನೀಕನಾದರೋ ನರರ್ಷಭ ಸೌಮದತ್ತಿಯನ್ನು ಎರಡು ಬಾಣಗಳಿಂದ ಪ್ರಹರಿಸಿ ಹೃಷ್ಟನಾಗಿ ನಾದಗೈದನು.
07083004a ತಥೇತರೇ ರಣೇ ಯತ್ತಾಸ್ತ್ರಿಭಿಸ್ತ್ರಿಭಿರಜಿಹ್ಮಗೈಃ|
07083004c ವಿವ್ಯಧುಃ ಸಮರೇ ತೂರ್ಣಂ ಸೌಮದತ್ತಿಮಮರ್ಷಣಂ||
ಆಗ ಇತರರು ಸಮರದಲ್ಲಿ ತಕ್ಷಣವೇ ಮೂರು ಮೂರು ಜಿಹ್ಮಗಗಳಿಂದ ಪ್ರಯತ್ನಪಟ್ಟು ಅಸಹನಶೀಲ ಸೌಮದತ್ತಿಯನ್ನು ಹೊಡೆದರು.
07083005a ಸ ತಾನ್ಪ್ರತಿ ಮಹಾರಾಜ ಚಿಕ್ಷಿಪೇ ಪಂಚ ಸಾಯಕಾನ್|
07083005c ಏಕೈಕಂ ಹೃದಿ ಚಾಜಘ್ನೇ ಏಕೈಕೇನ ಮಹಾಯಶಾಃ||
ಮಹಾರಾಜ! ಆ ಮಹಾಯಶನೂ ಕೂಡ ಅವುಗಳಿಗೆ ಪ್ರತಿಯಾಗಿ ಐದು ಸಾಯಕಗಳನ್ನು ಪ್ರಯೋಗಿಸಿ ಒಂದೊಂದರಿಂದ ಒಬ್ಬೊಬ್ಬರ ಹೃದಯವನ್ನೂ ಹೊಡೆದನು.
07083006a ತತಸ್ತೇ ಭ್ರಾತರಃ ಪಂಚ ಶರೈರ್ವಿದ್ಧಾ ಮಹಾತ್ಮನಾ|
07083006c ಪರಿವಾರ್ಯ ರಥೈರ್ವೀರಂ ವಿವ್ಯಧುಃ ಸಾಯಕೈರ್ಭೃಶಂ||
ಆ ಮಹಾತ್ಮನ ಶರಗಳಿಂದ ಗಾಯಗೊಂಡ ಆ ಐವರು ಸಹೋದರರು ರಥಗಳಿಂದ ಆ ವೀರನ ರಥವನ್ನು ಸುತ್ತುವರೆದು ಸಾಯಕಗಳಿಂದ ಬಹುವಾಗಿ ಅವನನ್ನು ಪ್ರಹರಿಸಿದರು.
07083007a ಆರ್ಜುನಿಸ್ತು ಹಯಾಂಸ್ತಸ್ಯ ಚತುರ್ಭಿರ್ನಿಶಿತೈಃ ಶರೈಃ|
07083007c ಪ್ರೇಷಯಾಮಾಸ ಸಂಕ್ರುದ್ಧೋ ಯಮಸ್ಯ ಸದನಂ ಪ್ರತಿ||
ಆರ್ಜುನಿಯಾದರೋ ಸಂಕ್ರುದ್ಧನಾಗಿ ಅವನ ಕುದುರೆಗಳನ್ನು ನಾಲ್ಕು ನಿಶಿತ ಶರಗಳಿಂದ ಯಮಸದನಕ್ಕೆ ಕಳುಹಿಸಿಕೊಟ್ಟನು.
07083008a ಭೈಮಸೇನಿರ್ಧನುಶ್ಚಿತ್ತ್ವಾ ಸೌಮದತ್ತೇರ್ಮಹಾತ್ಮನಃ|
07083008c ನನಾದ ಬಲವನ್ನಾದಂ ವಿವ್ಯಾಧ ಚ ಶಿತೈಃ ಶರೈಃ||
ಭೈಮಸೇನಿಯು ಮಹಾತ್ಮ ಸೌಮದತ್ತಿಯ ಧನುಸ್ಸನ್ನು ಕತ್ತರಿಸಿ ನಿಶಿತ ಶರಗಳಿಂದ ಅವನನ್ನು ಹೊಡೆದು ಜೋರಾಗಿ ಸಿಂಹನಾದಗೈದನು.
07083009a ಯೌಧಿಷ್ಠಿರೋ ಧ್ವಜಂ ತಸ್ಯ ಚಿತ್ತ್ವಾ ಭೂಮಾವಪಾತಯತ್|
07083009c ನಾಕುಲಿಶ್ಚಾಶ್ವಯಂತಾರಂ ರಥನೀಡಾದಪಾಹರತ್||
ಯುಧಿಷ್ಠಿರನ ಮಗನು ಅವನ ಧ್ವಜವನ್ನು ತುಂಡರಿಸಿ ಬೀಳಿಸಿದನು. ನಕುಲನ ಮಗನು ಅವನ ಸಾರಥಿಯನ್ನು ರಥದಿಂದ ಕೆಳಗೆ ಉರುಳಿಸಿದನು.
07083010a ಸಾಹದೇವಿಸ್ತು ತಂ ಜ್ಞಾತ್ವಾ ಭ್ರಾತೃಭಿರ್ವಿಮುಖೀಕೃತಂ|
07083010c ಕ್ಷುರಪ್ರೇಣ ಶಿರೋ ರಾಜನ್ನಿಚಕರ್ತ ಮಹಾಮನಾಃ||
ರಾಜನ್! ಮಹಾಮನಸ್ವಿ ಸಹದೇವನ ಮಗನಾದರೋ ತನ್ನ ಸಹೋದರರು ಅವನನ್ನು ಪರಾಙ್ಮುಖಗೊಳಿಸಿದ್ದಾರೆಂದು ತಿಳಿದು ಕ್ಷುರಪ್ರದಿಂದ ಅವನ ಶಿರವನ್ನು ಕತ್ತರಿಸಿದನು.
07083011a ತಚ್ಚಿರೋ ನ್ಯಪತದ್ಭೂಮೌ ತಪನೀಯವಿಭೂಷಿತಂ|
07083011c ಭ್ರಾಜಯಂತಂ ರಣೋದ್ದೇಶಂ ಬಾಲಸೂರ್ಯಸಮಪ್ರಭಂ||
ಬಂಗಾರದಿಂದ ವಿಭೂಷಿತವಾಗಿದ್ದ ಆ ನೃಪತಿಯ ಶಿರವು ಬಾಲಸೂರ್ಯನ ಸಮನಾದ ಪ್ರಭೆಯಿಂದ ರಣಭೂಮಿಯನ್ನು ಪ್ರಕಾಶಗೊಳಿಸುತ್ತಾ ಭೂಮಿಯ ಮೇಲೆ ಬಿದ್ದಿತು.
07083012a ಸೌಮದತ್ತೇಃ ಶಿರೋ ದೃಷ್ಟ್ವಾ ನಿಪತತ್ತನ್ಮಹಾತ್ಮನಃ|
07083012c ವಿತ್ರಸ್ತಾಸ್ತಾವಕಾ ರಾಜನ್ಪ್ರದುದ್ರುವುರನೇಕಧಾ||
ರಾಜನ್! ಕೆಳಗೆಬಿದ್ದ ಸೌಮದತ್ತಿಯ ಶಿರಸ್ಸನ್ನು ನೋಡಿ ನಿನ್ನವರು ಬೆದರಿ ಅನೇಕ ದಾರಿಗಳಲ್ಲಿ ಓಡಿಹೋದರು.
07083013a ಅಲಂಬುಸಸ್ತು ಸಮರೇ ಭೀಮಸೇನಂ ಮಹಾಬಲಂ|
07083013c ಯೋಧಯಾಮಾಸ ಸಂಕ್ರುದ್ಧೋ ಲಕ್ಷ್ಮಣಂ ರಾವಣಿರ್ಯಥಾ||
ಅಲಂಬುಸನಾದರೋ ಸಂಕ್ರುದ್ಧನಾಗಿ ಸಮರದಲ್ಲಿ ರಾವಣಿ ಇಂದ್ರಜಿತುವು ಲಕ್ಷ್ಮಣನನ್ನು ಹೇಗೋ ಹಾಗೆ ಮಹಾಬಲ ಭೀಮಸೇನನೊಂದಿಗೆ ಯುದ್ಧಮಾಡತೊಡಗಿದನು.
07083014a ಸಂಪ್ರಯುದ್ಧೌ ರಣೇ ದೃಷ್ಟ್ವಾ ತಾವುಭೌ ನರರಾಕ್ಷಸೌ|
07083014c ವಿಸ್ಮಯಃ ಸರ್ವಭೂತಾನಾಂ ಪ್ರಹರ್ಷಶ್ಚಾಭವತ್ತದಾ||
ಆ ಇಬ್ಬರು ನರ-ರಾಕ್ಷಸರೂ ರಣದಲ್ಲಿ ಯುದ್ಧಕ್ಕೆ ತೊಡಗಿರುವುದನ್ನು ನೋಡಿ ಸರ್ವಭೂತಗಳಿಗೆ ವಿಸ್ಮಯವೂ ಹರ್ಷವೂ ಉಂಟಾಯಿತು.
07083015a ಆರ್ಷ್ಯಶೃಂಗಿಂ ತತೋ ಭೀಮೋ ನವಭಿರ್ನಿಶಿತೈಃ ಶರೈಃ|
07083015c ವಿವ್ಯಾಧ ಪ್ರಹಸನ್ರಾಜನ್ರಾಕ್ಷಸೇಂದ್ರಮಮರ್ಷಣಂ||
ರಾಜನ್! ಆಗ ಭೀಮನು ಜೋರಾಗಿ ನಗುತ್ತಾ ಒಂಭತ್ತು ನಿಶಿತ ಶರಗಳಿಂದ ಅಸಹನಶೀಲ ರಾಕ್ಷಸೇಂದ್ರ ಆರ್ಷ್ಯಶೃಂಗಿಯನ್ನು ಹೊಡೆದನು.
07083016a ತದ್ರಕ್ಷಃ ಸಮರೇ ವಿದ್ಧಂ ಕೃತ್ವಾ ನಾದಂ ಭಯಾವಹಂ|
07083016c ಅಭ್ಯದ್ರವತ್ತತೋ ಭೀಮಂ ಯೇ ಚ ತಸ್ಯ ಪದಾನುಗಾಃ||
ಸಮರದಲ್ಲಿ ಪ್ರಹೃತನಾದ ಆ ರಾಕ್ಷಸನು ಭಯಾನಕವಾಗಿ ಗರ್ಜನೆ ಮಾಡುತ್ತಾ ಭೀಮ ಮತ್ತು ಅವನ ಅನುಯಾಯಿಗಳ ಮೇಲೆ ಎರಗಿದನು.
07083017a ಸ ಭೀಮಂ ಪಂಚಭಿರ್ವಿದ್ಧ್ವಾ ಶರೈಃ ಸನ್ನತಪರ್ವಭಿಃ|
07083017c ಭೀಮಾನುಗಾಂ ಜಘಾನಾಶು ರಥಾಂಸ್ತ್ರಿಂಶದರಿಂದಮಃ|
07083017e ಪುನಶ್ಚತುಃಶತಾನ್ ಹತ್ವಾ ಭೀಮಂ ವಿವ್ಯಾಧ ಪತ್ರಿಣಾ||
ಆ ಅರಿಂದಮನು ಭೀಮನನ್ನು ಐದು ಸನ್ನತಪರ್ವ ಶರಗಳಿಂದ ಹೊಡೆದು ಭೀಮನನ್ನು ಅನುಸರಿಸಿ ಬಂದಿದ್ದ ಮುನ್ನೂರು ರಥಿಕರನ್ನು ಸಂಹರಿಸಿದನು. ಪುನಃ ನಾಲ್ಕುನೂರು ಮಂದಿಯನ್ನು ಸಂಹರಿಸಿ ಭೀಮನನ್ನು ಪತ್ರಿಗಳಿಂದ ಹೊಡೆದನು.
07083018a ಸೋಽತಿವಿದ್ಧಸ್ತದಾ ಭೀಮೋ ರಾಕ್ಷಸೇನ ಮಹಾಬಲಃ|
07083018c ನಿಷಸಾದ ರಥೋಪಸ್ಥೇ ಮೂರ್ಚಯಾಭಿಪರಿಪ್ಲುತಃ||
ಹಾಗೆ ರಾಕ್ಷಸನಿಂದ ಗಾಯಗೊಂಡ ಮಹಾಬಲ ಭೀಮನು ಒಂದು ಕ್ಷಣ ಮೂರ್ಛೆಹೋಗಿ ರಥದಲ್ಲಿಯೇ ಒರಗಿದನು.
07083019a ಪ್ರತಿಲಭ್ಯ ತತಃ ಸಂಜ್ಞಾಂ ಮಾರುತಿಃ ಕ್ರೋಧಮೂರ್ಚಿತಃ|
07083019c ವಿಕೃಷ್ಯ ಕಾರ್ಮುಕಂ ಘೋರಂ ಭಾರಸಾಧನಮುತ್ತಮಂ|
07083019e ಅಲಂಬುಸಂ ಶರೈಸ್ತೀಕ್ಷ್ಣೈರರ್ದಯಾಮಾಸ ಸರ್ವತಃ||
ಆಗ ಪುನಃ ಸಂಜ್ಞೆಗಳನ್ನು ಪಡೆದುಕೊಂಡು ಮಾರುತಿಯು ಕ್ರೋಧಮೂರ್ಛಿತನಾಗಿ, ಭಾರವನ್ನು ಹೊರಬಲ್ಲ ಉತ್ತಮ ಘೋರ ಕಾರ್ಮುಕವನ್ನು ಎಳೆದು ತೀಕ್ಷ್ಣ ಶರಗಳಿಂದ ಅಲಂಬುಸನನ್ನು ಎಲ್ಲಕಡೆಗಳಿಂದ ಹೊಡೆಯತೊಡಗಿದನು.
07083020a ಸ ವಿದ್ಧೋ ಬಹುಭಿರ್ಬಾಣೈರ್ನೀಲಾಂಜನಚಯೋಪಮಃ|
07083020c ಶುಶುಭೇ ಸರ್ವತೋ ರಾಜನ್ಪ್ರದೀಪ್ತ ಇವ ಕಿಂಶುಕಃ||
ರಾಜನ್! ಅಂಜನದ ರಾಶಿಯಂತೆ ನೀಲ ಮೈವರ್ಣದ ಅವನು ಅನೇಕ ಬಾಣಗಳಿಂದ ಗಾಯಗೊಂಡು ಕುಂಶುಕದ ಮರದಂತೆ ಎಲ್ಲಕಡೆಗಳಲ್ಲಿ ಶೋಭಿಸಿದನು.
07083021a ಸ ವಧ್ಯಮಾನಃ ಸಮರೇ ಭೀಮಚಾಪಚ್ಯುತೈಃ ಶರೈಃ|
07083021c ಸ್ಮರನ್ಭ್ರಾತೃವಧಂ ಚೈವ ಪಾಂಡವೇನ ಮಹಾತ್ಮನಾ||
07083022a ಘೋರಂ ರೂಪಮಥೋ ಕೃತ್ವಾ ಭೀಮಸೇನಮಭಾಷತ|
ಭೀಮಸೇನನ ಚಾಪದಿಂದ ಬಿಡಲ್ಪಟ್ಟ ಶರಗಳಿಂದ ಗಾಯಗೊಂಡ ಅವನು ಮಹಾತ್ಮ ಪಾಂಡವನಿಂದಾದ ತನ್ನ ಸಹೋದರನ ವಧೆಯನ್ನು ಸ್ಮರಿಸಿಕೊಂಡು, ಘೋರರೂಪವನ್ನು ತಾಳಿ ಭೀಮಸೇನನಿಗೆ ಹೇಳಿದನು:
07083022c ತಿಷ್ಠೇದಾನೀಂ ರಣೇ ಪಾರ್ಥ ಪಶ್ಯ ಮೇಽದ್ಯ ಪರಾಕ್ರಮಂ||
07083023a ಬಕೋ ನಾಮ ಸುದುರ್ಬುದ್ಧೇ ರಾಕ್ಷಸಪ್ರವರೋ ಬಲೀ|
07083023c ಪರೋಕ್ಷಂ ಮಮ ತದ್ವೃತ್ತಂ ಯದ್ಭ್ರಾತಾ ಮೇ ಹತಸ್ತ್ವಯಾ||
“ಪಾರ್ಥ! ಈ ರಣದಲ್ಲಿ ನಿಲ್ಲು! ಇಂದು ನನ್ನ ಪರಾಕ್ರಮವನ್ನು ನೋಡು! ಸುದುರ್ಬುದ್ಧೇ! ನನ್ನ ಪರೋಕ್ಷದಲ್ಲಿ ನನ್ನ ಸಹೋದರ ಬಕನೆಂಬ ಹೆಸರಿನ ಬಲಶಾಲೀ ರಾಕ್ಷಸಪ್ರವರನನ್ನು ಸಂಹರಿಸಿದ್ದೀಯೆ!”
07083024a ಏವಮುಕ್ತ್ವಾ ತತೋ ಭೀಮಮಂತರ್ಧಾನಗತಸ್ತದಾ|
07083024c ಮಹಾತಾ ಶರವರ್ಷೇಣ ಭೃಶಂ ತಂ ಸಮವಾಕಿರತ್||
ಭೀಮನಿಗೆ ಹೀಗೆ ಹೇಳಿ ಅವನು ಅಂತರ್ಧಾನನಾಗಿ ಮಹಾ ಶರವರ್ಷಗಳಿಂದ ಅವನನ್ನು ತುಂಬಾ ಮುಸುಕಿ ಹಾಕಿದನು.
07083025a ಭೀಮಸ್ತು ಸಮರೇ ರಾಜನ್ನದೃಶ್ಯೇ ರಾಕ್ಷಸೇ ತದಾ|
07083025c ಆಕಾಶಂ ಪೂರಯಾಮಾಸ ಶರೈಃ ಸನ್ನತಪರ್ವಭಿಃ||
ರಾಜನ್! ರಾಕ್ಷಸನು ಅದೃಶ್ಯನಾಗಲು ಭೀಮನಾದರೋ ಆಕಾಶವನ್ನು ಸನ್ನತಪರ್ವ ಶರಗಳಿಂದ ತುಂಬಿಬಿಟ್ಟನು.
07083026a ಸ ವಧ್ಯಮಾನೋ ಭೀಮೇನ ನಿಮೇಷಾದ್ರಥಮಾಸ್ಥಿತಃ|
07083026c ಜಗಾಮ ಧರಣೀಂ ಕ್ಷುದ್ರಃ ಖಂ ಚೈವ ಸಹಸಾಗಮತ್||
ಭೀಮನಿಂದ ಹೊಡೆಯಲ್ಪಟ್ಟ ಆ ಕ್ಷುದ್ರನು ಆಕಾಶವನ್ನೇರಿದ್ದರೂ ನಿಮಿಷಮಾತ್ರದಲ್ಲಿ ಭೂಮಿಗಿಳಿದು ಒಮ್ಮೆಲೇ ರಥವನ್ನೇರಿದನು.
07083027a ಉಚ್ಚಾವಚಾನಿ ರೂಪಾಣಿ ಚಕಾರ ಸುಬಹೂನಿ ಚ|
07083027c ಉಚ್ಚಾವಚಾಸ್ತಥಾ ವಾಚೋ ವ್ಯಾಜಹಾರ ಸಮಂತತಃ||
ಪುನಃ ಮೇಲೇರಿ ಅನೇಕ ರೂಪಗಳನ್ನು ಧರಿಸಿ, ಜೋರಾಗಿ ಗರ್ಜಿಸುತ್ತಾ, ಎಲ್ಲಾಕಡೆ ಸಂಚರಿಸುತ್ತಿದ್ದನು.
07083028a ತೇನ ಪಾಂಡವಸೈನ್ಯಾನಾಂ ಮೃದಿತಾ ಯುಧಿ ವಾರಣಾಃ|
07083028c ಹಯಾಶ್ಚ ಬಹವೋ ರಾಜನ್ಪತ್ತಯಶ್ಚ ತಥಾ ಪುನಃ|
07083028e ರಥೇಭ್ಯೋ ರಥಿನಃ ಪೇತುಸ್ತಸ್ಯ ನುನ್ನಾಃ ಸ್ಮ ಸಾಯಕೈಃ||
ರಾಜನ್! ಅವನ ಸಾಯಕಗಳಿಂದ ಯುದ್ಧದಲ್ಲಿ ಪಾಂಡವಸೇನೆಯ ಅನೇಕ ಆನೆಗಳು, ಕುದುರೆಗಳು ಮತ್ತು ಪದಾತಿಗಳು ಹತವಾದವು; ರಥಗಳಿಂದ ರಥಿಗಳು ಕೆಳಗುರುಳಿದರು.
07083029a ಶೋಣಿತೋದಾಂ ರಥಾವರ್ತಾಂ ಹಸ್ತಿಗ್ರಾಹಸಮಾಕುಲಾಂ|
07083029c ಚತ್ರಹಂಸಾಂ ಕರ್ದಮಿನೀಂ ಬಾಹುಪನ್ನಗಸಂಕುಲಾಂ||
07083030a ನದೀಂ ಪ್ರವರ್ತಯಾಮಾಸ ರಕ್ಷೋಗಣಸಮಾಕುಲಾಂ|
07083030c ವಹಂತೀಂ ಬಹುಧಾ ರಾಜಂಶ್ಚೇದಿಪಾಂಚಾಲಸೃಂಜಯಾನ್||
ರಾಜನ್! ಆ ರಾಕ್ಷಸನು ರಕ್ತವೇ ನೀರಾದ, ರಥಗಳೇ ಸುಳಿಗಳಾಗಿರುವ, ಆನೆಗಳೇ ಮೊಸಳೆಗಳ ಸಮಾಕುಲಗಳಂತಿರುವ, ಚತ್ರಗಳೇ ಹಂಸಗಳಂತಿರುವ, ಕೆಸರಿರುವ, ಬಾಹುಗಳೇ ಹಾವುಗಳ ಸಂಕುಲಗಳಂತಿರುವ, ಅನೇಕ ಚೇದಿ-ಪಾಂಚಾಲ-ಸೃಂಜಯರು ತೇಲುತ್ತಿರುವ ನದಿಯನ್ನೇ ಹರಿಸಿದನು.
07083031a ತಂ ತಥಾ ಸಮರೇ ರಾಜನ್ವಿಚರಂತಮಭೀತವತ್|
07083031c ಪಾಂಡವಾ ಭೃಶಸಂವಿಗ್ನಾಃ ಪ್ರಾಪಶ್ಯಂಸ್ತತ್ಸ್ಯ ವಿಕ್ರಮಂ||
ರಾಜನ್! ಹೀಗೆ ಸಮರದಲ್ಲಿ ಭೀತಿಯಿಲ್ಲದೇ ಸಂಚರಿಸುತ್ತಿದ್ದ ಅವನ ವಿಕ್ರಮವನ್ನು ಪಾಂಡವರು ತುಂಬಾ ಸಂವಿಗ್ನರಾಗಿ ನೋಡತೊಡಗಿದರು.
07083032a ತಾವಕಾನಾಂ ತು ಸೈನ್ಯಾನಾಂ ಪ್ರಹರ್ಷಃ ಸಮಜಾಯತ|
07083032c ವಾದಿತ್ರನಿನದಶ್ಚೋಗ್ರಃ ಸುಮಹಾಽಲ್ಲೋಮಹರ್ಷಣಃ||
ನಿನ್ನವರ ಸೇನೆಗಳಲ್ಲಂತೂ ತುಂಬಾ ಹರ್ಷದ ವಾದ್ಯದ ಜೋರಾದ ಧ್ವನಿಯು, ಲೋಮಹರ್ಷಣ ಮಹಾಧ್ವನಿಯು ಹುಟ್ಟಿಕೊಂಡಿತು.
07083033a ತಂ ಶ್ರುತ್ವಾ ನಿನದಂ ಘೋರಂ ತವ ಸೈನ್ಯಸ್ಯ ಪಾಂಡವಃ|
07083033c ನಾಮೃಷ್ಯತ ಯಥಾ ನಾಗಸ್ತಲಶಬ್ದಂ ಸಮೀರಿತಂ||
ನಿನ್ನ ಸೇನೆಯ ಆ ಘೋರ ನಿನಾದವನ್ನು ಕೇಳಿ ಚಪ್ಪಾಳೆಯ ಶಬ್ಧವನ್ನು ಆನೆಗಳು ಸಹಿಸಿಕೊಳ್ಳಲಾರದಂತೆ ಪಾಂಡವನು ಸಹಿಸಿಕೊಳ್ಳಲಿಲ್ಲ.
07083034a ತತಃ ಕ್ರೋಧಾಭಿತಾಮ್ರಾಕ್ಷೋ ನಿರ್ದಹನ್ನಿವ ಪಾವಕಃ|
07083034c ಸಂದಧೇ ತ್ವಾಷ್ಟ್ರಮಸ್ತ್ರಂ ಸ ಸ್ವಯಂ ತ್ವಷ್ಟೇವ ಮಾರಿಷ||
ಮಾರಿಷ! ಆಗ ಕ್ರೋಧದಿಂದ ಕಣ್ಣುಗಳು ಕೆಂಪಾದ ಅವನು ಸುಡುತ್ತಿರುವ ಪಾವಕನಂತೆ, ಸ್ವಯಂ ತ್ವಷ್ಟನಂತೆ ತ್ವಾಷ್ಟ್ರ ಅಸ್ತ್ರವನ್ನು ಹೂಡಿದನು.
07083035a ತತಃ ಶರಸಹಸ್ರಾಣಿ ಪ್ರಾದುರಾಸನ್ಸಮಂತತಃ|
07083035c ತೈಃ ಶರೈಸ್ತವ ಸೈನ್ಯಸ್ಯ ವಿದ್ರಾವಃ ಸುಮಹಾನಭೂತ್||
ಆಗ ಸಾವಿರಾರು ಶರಗಳು ಸುತ್ತಲೂ ಹೊರಬಂದು ಹರಡಿಕೊಂಡವು. ಆ ಶರಗಳಿಂದಾಗಿ ನಿನ್ನ ಸೈನ್ಯವು ಓಡಿಹೋಯಿತು. ಅದೊಂದು ಅತಿ ದೊಡ್ಡದಾಗಿತ್ತು.
07083036a ತದಸ್ತ್ರಂ ಪ್ರೇಷಿತಂ ತೇನ ಭೀಮಸೇನೇನ ಸಂಯುಗೇ|
07083036c ರಾಕ್ಷಸಸ್ಯ ಮಹಾಮಾಯಾಂ ಹತ್ವಾ ರಾಕ್ಷಸಮಾರ್ದಯತ್||
ಸಂಯುಗದಲ್ಲಿ ಆ ಅಸ್ತ್ರವನ್ನು ಪ್ರಯೋಗಿಸಿ ಭೀಮಸೇನನು ರಾಕ್ಷಸನ ಮಹಾಮಾಯೆಯನ್ನು ನಾಶಗೊಳಿಸಿ ರಾಕ್ಷಸನನ್ನು ಪೀಡಿಸಿದನು.
07083037a ಸ ವಧ್ಯಮಾನೋ ಬಹುಧಾ ಭೀಮಸೇನೇನ ರಾಕ್ಷಸಃ|
07083037c ಸಂತ್ಯಜ್ಯ ಸಮ್ಯುಗೇ ಭೀಮಂ ದ್ರೋಣಾನೀಕಮುಪಾದ್ರವತ್||
ಭೀಮಸೇನನಿಂದ ಬಹಳವಾಗಿ ವಧಿಸಲ್ಪಟ್ಟ ರಾಕ್ಷಸನು ಸಂಯುಗದಲ್ಲಿ ಭೀಮನನ್ನು ಬಿಟ್ಟು ದ್ರೋಣನ ಸೇನೆಯ ಕಡೆ ಓಡಿ ಹೋದನು.
07083038a ತಸ್ಮಿಂಸ್ತು ನಿರ್ಜಿತೇ ರಾಜನ್ರಾಕ್ಷಸೇಂದ್ರೇ ಮಹಾತ್ಮನಾ|
07083038c ಅನಾದಯನ್ಸಿಂಹನಾದೈಃ ಪಾಂಡವಾಃ ಸರ್ವತೋದಿಶಂ||
ರಾಜನ್! ಹೀಗೆ ಆ ರಾಕ್ಷಸೇಂದ್ರನನ್ನು ಮಹಾತ್ಮನು ಸೋಲಿಸಲು ಪಾಂಡವರು ಎಲ್ಲ ದಿಕ್ಕುಗಳಲ್ಲಿ ಸಿಂಹನಾದಗೈದರು.
07083039a ಅಪೂಜಯನ್ಮಾರುತಿಂ ಚ ಸಂಹೃಷ್ಟಾಸ್ತೇ ಮಹಾಬಲಂ|
07083039c ಪ್ರಹ್ರಾದಂ ಸಮರೇ ಜಿತ್ವಾ ಯಥಾ ಶಕ್ರಂ ಮರುದ್ಗಣಾಃ||
ಸಮರದಲ್ಲಿ ಪ್ರಹ್ರಾದನನ್ನು ಗೆದ್ದ ಶಕ್ರನನ್ನು ಮರುದ್ಗಣಗಳು ಹೇಗೋ ಹಾಗೆ ಸಂತೋಷದಿಂದ ಆ ಮಹಾಬಲ ಮಾರುತಿಯನ್ನು ಗೌರವಿಸಿದರು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಅಲಂಬುಷಪರಾಜಯೇ ತ್ರ್ಯಾಶೀತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಅಲಂಬುಷಪರಾಜಯ ಎನ್ನುವ ಎಂಭತ್ಮೂರನೇ ಅಧ್ಯಾಯವು.