ದ್ರೋಣ ಪರ್ವ: ಜಯದ್ರಥವಧ ಪರ್ವ
೭೧
ಕುರು-ಪಾಂಡವರ ದ್ವಂದ್ವ ಯುದ್ಧ (೧-೩೧).
07071001 ಸಂಜಯ ಉವಾಚ|
07071001a ರಾಜನ್ಸಂಗ್ರಾಮಮಾಶ್ಚರ್ಯಂ ಶೃಣು ಕೀರ್ತಯತೋ ಮಮ|
07071001c ಕುರೂಣಾಂ ಪಾಂಡವಾನಾಂ ಚ ಯಥಾ ಯುದ್ಧಮವರ್ತತ||
ಸಂಜಯನು ಹೇಳಿದನು: “ರಾಜನ್! ಕುರುಗಳ ಮತ್ತು ಪಾಂಡವರ ಯುದ್ಧವು ಹೇಗೆ ನಡೆಯಿತು ಎನ್ನುವುದನ್ನು ನಾನು ಹೇಳುತ್ತೇನೆ. ಈ ಆಶ್ಚರ್ಯದಾಯಕ ಸಂಗ್ರಾಮದ ಕುರಿತು ಕೇಳು.
07071002a ಭಾರದ್ವಾಜಂ ಸಮಾಸಾದ್ಯ ವ್ಯೂಹಸ್ಯ ಪ್ರಮುಖೇ ಸ್ಥಿತಂ|
07071002c ಅಯೋಧಯನ್ರಣೇ ಪಾರ್ಥಾ ದ್ರೋಣಾನೀಕಂ ಬಿಭಿತ್ಸವಃ||
ದ್ರೋಣನ ಸೇನೆಯನ್ನು ಭೇದಿಸಲೋಸುಗ ರಣದಲ್ಲಿ ಪಾರ್ಥರು ವ್ಯೂಹದ ಎದಿರು ನಿಂತಿದ್ದ ಭಾರದ್ವಾಜನನ್ನು ಎದುರಿಸಿ ಅವನೊಂದಿಗೆ ಯುದ್ಧಮಾಡತೊಡಗಿದರು.
07071003a ರಕ್ಷಮಾಣಾಃ ಸ್ವಕಂ ವ್ಯೂಹಂ ದ್ರೋಣಸ್ಯಾಪಿ ಚ ಸೈನಿಕಾಃ|
07071003c ಅಯೋಧಯನ್ರಣೇ ಪಾರ್ಥಾನ್ಪ್ರಾರ್ಥಯಂತೋ ಮಹದ್ಯಶಃ||
ತನ್ನ ವ್ಯೂಹವನ್ನೂ ಸೈನಿಕರನ್ನೂ ರಕ್ಷಿಸುತ್ತಾ ರಣದಲ್ಲಿ ಮಹಾ ಯಶಸ್ಸನ್ನು ಬಯಸುತ್ತಾ ದ್ರೋಣನೂ ಕೂಡ ಪಾರ್ಥರೊಂದಿಗೆ ಹೋರಾಡಿದನು.
07071004a ವಿಂದಾನುವಿಂದಾವಾವಂತ್ಯೌ ವಿರಾಟಂ ದಶಭಿಃ ಶರೈಃ|
07071004c ಆಜಘ್ನತುಃ ಸುಸಂಕ್ರುದ್ಧೌ ತವ ಪುತ್ರಹಿತೈಷಿಣೌ||
ನಿನ್ನ ಪುತ್ರರ ಹಿತೈಷಿಗಳಾದ ಅವಂತಿಯ ವಿಂದಾನುವಿಂದರು ಕ್ರುದ್ಧರಾಗಿ ವಿರಾಟನನ್ನು ಹತ್ತು ಶರಗಳಿಂದ ಹೊಡೆದರು.
07071005a ವಿರಾಟಶ್ಚ ಮಹಾರಾಜ ತಾವುಭೌ ಸಮರೇ ಸ್ಥಿತೌ|
07071005c ಪರಾಕ್ರಾಂತೌ ಪರಾಕ್ರಮ್ಯ ಯೋಧಯಾಮಾಸ ಸಾನುಗೌ||
ಮಹಾರಾಜ ವಿರಾಟನಾದರೋ ಸಮರದಲ್ಲಿ ಅನುಗರೊಂದಿಗೆ ನಿಂತಿದ್ದ ಆ ಇಬ್ಬರು ಪರಾಕ್ರಾಂತರನ್ನು ಪರಾಕ್ರಮದೊಂದಿಗೆ ಯುದ್ಧಮಾಡತೊಡಗಿದನು.
07071006a ತೇಷಾಂ ಯುದ್ಧಂ ಸಮಭವದ್ದಾರುಣಂ ಶೋಣಿತೋದಕಂ|
07071006c ಸಿಂಹಸ್ಯ ದ್ವಿಪಮುಖ್ಯಾಭ್ಯಾಂ ಪ್ರಭಿನ್ನಾಭ್ಯಾಂ ಯಥಾ ವನೇ||
ವನದಲ್ಲಿ ಸಿಂಹಕ್ಕೂ ಮದಿಸಿದ ಎರಡು ಸಲಗಗಳಿಗೂ ನಡೆಯುವಂತೆ ಅವರ ನಡುವೆ ನೀರಿನಂತೆ ರಕ್ತವನ್ನು ಸುರಿಸುವ ದಾರುಣವಾದ ಯುದ್ಧವು ನಡೆಯಿತು.
07071007a ಬಾಹ್ಲೀಕಂ ರಭಸಂ ಯುದ್ಧೇ ಯಾಜ್ಞಸೇನಿರ್ಮಹಾಬಲಃ|
07071007c ಆಜಘ್ನೇ ವಿಶಿಖೈಸ್ತೀಕ್ಷ್ಣೈರ್ಘೋರೈರ್ಮರ್ಮಾಸ್ಥಿಭೇದಿಭಿಃ||
ಯುದ್ಧದಲ್ಲಿ ಮಹಾಬಲ ಯಾಜ್ಞಸೇನಿಯು ಬಾಹ್ಲೀಕನನ್ನು ಮರ್ಮ-ಅಸ್ತಿಗಳನ್ನು ಭೇದಿಸಬಲ್ಲ ಘೋರವಾದ ತೀಕ್ಷ್ಣವಾದ ವಿಶಿಖಗಳಿಂದ ಹೊಡೆದನು.
07071008a ಬಾಹ್ಲೀಕೋ ಯಾಜ್ಞಸೇನಿಂ ತು ಹೇಮಪುಂಖೈಃ ಶಿಲಾಶಿತೈಃ|
07071008c ಆಜಘಾನ ಭೃಶಂ ಕ್ರುದ್ಧೋ ನವಭಿರ್ನತಪರ್ವಭಿಃ||
ಆಗ ಬಾಹ್ಲೀಕನು ಕ್ರುದ್ಧನಾಗಿ ಯಾಜ್ಞಸೇನಿಯನ್ನು ಒಂಭತ್ತು ಹೇಮಪುಂಖಗಳಿರುವ ಶಿಲಾಶಿತ ನತಪರ್ವಗಳಿಂದ ಜೋರಾಗಿ ಹೊಡೆದನು.
07071009a ತದ್ಯುದ್ಧಮಭವದ್ಘೋರಂ ಶರಶಕ್ತಿಸಮಾಕುಲಂ|
07071009c ಭೀರೂಣಾಂ ತ್ರಾಸಜನನಂ ಶೂರಾಣಾಂ ಹರ್ಷವರ್ಧನಂ||
ಆಗ ಅಲ್ಲಿ ಹೇಡಿಗಳಿಗೆ ಭಯವನ್ನುಂಟುಮಾಡುವ, ಶೂರರ ಹರ್ಷವನ್ನು ಹೆಚ್ಚಿಸುವ ಶರ-ಶಕ್ತಿ ಸಮೂಹಗಳ ಘೋರ ಯುದ್ಧವು ನಡೆಯಿತು.
07071010a ತಾಭ್ಯಾಂ ತತ್ರ ಶರೈರ್ಮುಕ್ತೈರಂತರಿಕ್ಷಂ ದಿಶಸ್ತಥಾ|
07071010c ಅಭವತ್ಸಂವೃತಂ ಸರ್ವಂ ನ ಪ್ರಾಜ್ಞಾಯತ ಕಿಂ ಚನ||
ಅವರಿಬ್ಬರೂ ಬಿಡುತ್ತಿದ್ದ ಬಾಣಗಳಿಂದ ಅಂತರಿಕ್ಷ ಮತ್ತು ದಿಕ್ಕುಗಳೂ ಮುಚ್ಚಿಹೋಗಿ ಎಲ್ಲಿ ಏನಾಗುತ್ತದೆಯೆಂದು ಯಾರಿಗೂ ತಿಳಿಯುತ್ತಿರಲಿಲ್ಲ.
07071011a ಶೈಬ್ಯೋ ಗೋವಾಸನೋ ಯುದ್ಧೇ ಕಾಶ್ಯಪುತ್ರಂ ಮಹಾರಥಂ|
07071011c ಸಸೈನ್ಯೋ ಯೋಧಯಾಮಾಸ ಗಜಃ ಪ್ರತಿಗಜಂ ಯಥಾ||
ಆನೆಯು ಮತ್ತೊಂದು ಆನೆಯೊಂದಿಗೆ ಹೇಗೋ ಹಾಗೆ ಶೈಬ್ಯ ಗೋವಾಸನು ಯುದ್ಧದಲ್ಲಿ ಸೈನ್ಯದೊಂದಿಗೆ ಮಹಾರಥ ಕಾಶ್ಯಪುತ್ರನೊಡನೆ ಯುದ್ಧಮಾಡಿದನು.
07071012a ಬಾಹ್ಲೀಕರಾಜಃ ಸಂರಬ್ಧೋ ದ್ರೌಪದೇಯಾನ್ಮಹಾರಥಾನ್|
07071012c ಮನಃ ಪಂಚೇಂದ್ರಿಯಾಣೀವ ಶುಶುಭೇ ಯೋಧಯನ್ರಣೇ||
ಮನಸ್ಸು ಪಂಚೇಂದ್ರಿಯಗಳೊಡನೆ ಹೇಗೋ ಹಾಗೆ ಸಂರಬ್ಧನಾದ ಬಾಹ್ಲೀಕ ರಾಜನು ರಣದಲ್ಲಿ ಮಹಾರಥ ದ್ರೌಪದೇಯರೊಡನೆ ಹೋರಾಡುತ್ತಾ ಶೋಭಿಸಿದನು.
07071013a ಅಯೋಧಯಂಸ್ತೇ ಚ ಭೃಶಂ ತಂ ಶರೌಘೈಃ ಸಮಂತತಃ|
07071013c ಇಂದ್ರಿಯಾರ್ಥಾ ಯಥಾ ದೇಹಂ ಶಶ್ವದ್ದೇಹಭೃತಾಂ ವರ||
ದೇಹಧಾರಿಗಳಲ್ಲಿ ಶ್ರೇಷ್ಠನೇ! ಇಂದ್ರಿಯ ವಿಷಯಗಳು ಹೇಗೆ ದೇಹವನ್ನು ಕಲಕುತ್ತಿರುತ್ತವೆಯೋ ಹಾಗೆ ಯುದ್ಧಮಾಡುತ್ತಿದ್ದ ಅವರು ಅವನನ್ನು ಎಲ್ಲ ಕಡೆಗಳಿಂದ ಶರೌಘಗಳಿಂದ ಪೀಡಿಸುತ್ತಿದ್ದರು.
07071014a ವಾರ್ಷ್ಣೇಯಂ ಸಾತ್ಯಕಿಂ ಯುದ್ಧೇ ಪುತ್ರೋ ದುಃಶಾಸನಸ್ತವ|
07071014c ಆಜಘ್ನೇ ಸಾಯಕೈಸ್ತೀಕ್ಷ್ಣೈರ್ನವಭಿರ್ನತಪರ್ವಭಿಃ||
ಯುದ್ಧದಲ್ಲಿ ವಾರ್ಷ್ಣೇಯ ಸಾತ್ಯಕಿಯನ್ನು ನಿನ್ನ ಮಗ ದುಃಶಾಸನನು ತೀಕ್ಷ್ಣ ಸಾಯಕಗಳಿಂದ ಮತ್ತು ಒಂಭತ್ತು ನತಪರ್ವಗಳಿಂದ ಹೊಡೆದನು.
07071015a ಸೋಽತಿವಿದ್ಧೋ ಬಲವತಾ ಮಹೇಷ್ವಾಸೇನ ಧನ್ವಿನಾ|
07071015c ಈಷನ್ಮೂರ್ಚಾಂ ಜಗಾಮಾಶು ಸಾತ್ಯಕಿಃ ಸತ್ಯವಿಕ್ರಮಃ||
ಮಹೇಷ್ವಾಸ ಧನ್ವಿಯಿಂದ ಬಲವತ್ತಾಗಿ ಬಾಣಗಳಿಂದ ಹೊಡೆಯಲ್ಪಟ್ಟು ಅತಿಯಾಗಿ ಗಾಯಗೊಂಡ ಸತ್ಯಮಿಕ್ರಮಿ ಸಾತ್ಯಕಿಯು ಕ್ಷಣಕಾಲ ಮೂರ್ಛಿತನಾದನು.
07071016a ಸಮಾಶ್ವಸ್ತಸ್ತು ವಾರ್ಷ್ಣೇಯಸ್ತವ ಪುತ್ರಂ ಮಹಾರಥಂ|
07071016c ವಿವ್ಯಾಧ ದಶಭಿಸ್ತೂರ್ಣಂ ಸಾಯಕೈಃ ಕಂಕಪತ್ರಿಭಿಃ||
ತಕ್ಷಣವೇ ಎಚ್ಚೆತ್ತು ವಾರ್ಷ್ಣೇಯನು ಹತ್ತು ಕಂಕಪತ್ರಿ ಸಾಯಕಗಳಿಂದ ನಿನ್ನ ಮಹಾರಥ ಪುತ್ರನನ್ನು ಹೊಡೆದನು.
07071017a ತಾವನ್ಯೋನ್ಯಂ ದೃಢಂ ವಿದ್ಧಾವನ್ಯೋನ್ಯಶರವಿಕ್ಷತೌ|
07071017c ರೇಜತುಃ ಸಮರೇ ರಾಜನ್ಪುಷ್ಪಿತಾವಿವ ಕಿಂಶುಕೌ||
ರಾಜನ್! ಅನ್ಯೋನ್ಯರನ್ನು ದೃಢವಾಗಿ ಹೊಡೆದು ಗಾಯಗೊಳಿಸಿ ಗಾಯಗೊಂಡ ಅವರಿಬ್ಬರೂ ಸಮರದಲ್ಲಿ ಹೂಬಿಟ್ಟ ಮುತ್ತುಗದ ಮರಗಳಂತೆ ರಾರಾಜಿಸುತ್ತಿದ್ದರು.
07071018a ಅಲಂಬುಸಸ್ತು ಸಂಕ್ರುದ್ಧಃ ಕುಂತಿಭೋಜಶರಾರ್ದಿತಃ|
07071018c ಅಶೋಭತ ಪರಂ ಲಕ್ಷ್ಮ್ಯಾ ಪುಷ್ಪಾಢ್ಯ ಇವ ಕಿಂಶುಕಃ||
ಕುಂತಿಭೋಜನ ಶರಗಳಿಂದ ಗಾಯಗೊಂಡಿದ್ದ ಅಲಂಬುಸನಾದರೋ ಪರಮ ಸೊಬಗಿನಿಂದ ಹೂಬಿಟ್ಟ ಮುತ್ತುಗದ ಮರದಂತೆ ಶೋಭಿಸಿದನು.
07071019a ಕುಂತಿಭೋಜಂ ತತೋ ರಕ್ಷೋ ವಿದ್ಧ್ವಾ ಬಹುಭಿರಾಯಸೈಃ|
07071019c ಅನದದ್ಭೈರವಂ ನಾದಂ ವಾಹಿನ್ಯಾಃ ಪ್ರಮುಖೇ ತವ||
ಅವನು ಕುಂತಿಭೋಜನನ್ನು ಅನೇಕ ಆಯಸಗಳಿಂದ ಹೊಡೆದು ಗಾಯಗೊಳಿಸಿ ನಿನ್ನ ಸೇನೆಗಳ ಎದಿರು ಭೈರವ ಕೂಗನ್ನು ಕೂಗಿದನು.
07071020a ತತಸ್ತೌ ಸಮರೇ ಶೂರೌ ಯೋಧಯಂತೌ ಪರಸ್ಪರಂ|
07071020c ದದೃಶುಃ ಸರ್ವಭೂತಾನಿ ಶಕ್ರಜಂಭೌ ಯಥಾ ಪುರಾ||
ಹಿಂದೆ ಶಕ್ರ-ಜಂಭಾಸುರರಂತೆ ಸಮರದಲ್ಲಿ ಪರಸ್ಪರರೊಡನೆ ಯುದ್ಧಮಾಡುತ್ತಿದ್ದ ಆ ಇಬ್ಬರು ಶೂರರನ್ನು ಎಲ್ಲರೂ ನೋಡಿದರು.
07071021a ಶಕುನಿಂ ರಭಸಂ ಯುದ್ಧೇ ಕೃತವೈರಂ ಚ ಭಾರತ|
07071021c ಮಾದ್ರೀಪುತ್ರೌ ಚ ಸಂರಬ್ಧೌ ಶರೈರರ್ದಯತಾಂ ಮೃಧೇ||
ಭಾರತ! ವೈರವನ್ನು ಸಾಧಿಸಿದ್ದ ರಭಸದ ಶಕುನಿಯನ್ನು ಸಂಗ್ರಾಮದಲ್ಲಿ ಕ್ರುದ್ಧರಾದ ಮಾದ್ರೀಪುತ್ರರಿಬ್ಬರೂ ಶರಗಳಿಂದ ಅರೆದರು.
07071022a ತನ್ಮೂಲಃ ಸ ಮಹಾರಾಜ ಪ್ರಾವರ್ತತ ಜನಕ್ಷಯಃ|
07071022c ತ್ವಯಾ ಸಂಜನಿತೋಽತ್ಯರ್ಥಂ ಕರ್ಣೇನ ಚ ವಿವರ್ಧಿತಃ||
07071023a ಉದ್ಧುಕ್ಷಿತಶ್ಚ ಪುತ್ರೇಣ ತವ ಕ್ರೋಧಹುತಾಶನಃ|
07071023c ಯ ಇಮಾಂ ಪೃಥಿವೀಂ ರಾಜನ್ದಗ್ಧುಂ ಸರ್ವಾನ್ಸಮುದ್ಯತಃ||
ಮಹಾರಾಜ! ರಾಜನ್! ನಿನ್ನಿಂದ ಹುಟ್ಟಿದ, ಕರ್ಣನಿಂದ ವೃದ್ಧಿಸಲ್ಪಟ್ಟ, ನಿನ್ನ ಪುತ್ರರು ಇರಿಸಿಕೊಂಡಿದ್ದ ಕ್ರೋಧವೆಂಬ ಆ ಅಗ್ನಿಯು ಇಡೀ ಭೂಮಿಯನ್ನು ಎಲ್ಲವನ್ನೂ ಭಸ್ಮಮಾಡಲು ತೊಡಗಿತು. ಆ ಮೂಲದಿಂದ ಜನಕ್ಷಯಯವು ನಡೆಯಿತು.
07071024a ಶಕುನಿಃ ಪಾಂಡುಪುತ್ರಾಭ್ಯಾಂ ಕೃತಃ ಸ ವಿಮುಖಃ ಶರೈಃ|
07071024c ನಾಭ್ಯಜಾನತ ಕರ್ತವ್ಯಂ ಯುಧಿ ಕಿಂ ಚಿತ್ ಪರಾಕ್ರಮಂ||
ಪಾಂಡುಪುತ್ರರಿಬ್ಬರ ಶರಗಳಿಂದ ವಿಮುಖನಾಗಿಸಿಕೊಂಡ, ಯುದ್ಧದಲ್ಲಿ ಸ್ವಲ್ಪವೇ ಪರಾಕ್ರಮವುಳ್ಳ ಶಕುನಿಯು ಏನು ಮಾಡಬೇಕೆಂದು ತಿಳಿಯಲಾರದೇ ಹೋದನು.
07071025a ವಿಮುಖಂ ಚೈನಮಾಲೋಕ್ಯ ಮಾದ್ರೀಪುತ್ರೌ ಮಹಾರಥೌ|
07071025c ವವರ್ಷತುಃ ಪುನರ್ಬಾಣೈರ್ಯಥಾ ಮೇಘೌ ಮಹಾಗಿರಿಂ||
ಅವನು ವಿಮುಖನಾಗಿದ್ದುದನ್ನು ನೋಡಿ ಮಹಾರಥ ಮಾದ್ರೀಪುತ್ರರು ಮಹಾಗಿರಿಯ ಮೇಲೆ ಮೋಡಗಳು ಹೇಗೋ ಹಾಗೆ ಅವನ ಮೇಲೆ ಪುನಃ ಬಾಣಗಳ ಮಳೆಯನ್ನು ಸುರಿಸಿದರು.
07071026a ಸ ವಧ್ಯಮಾನೋ ಬಹುಭಿಃ ಶರೈಃ ಸನ್ನತಪರ್ವಭಿಃ|
07071026c ಸಂಪ್ರಾಯಾಜ್ಜವನೈರಶ್ವೈರ್ದ್ರೋಣಾನೀಕಾಯ ಸೌಬಲಃ||
ಅನೇಕ ಸನ್ನತಪರ್ವ ಶರಗಳಿಂದ ಹೊಡೆಯಲ್ಪಟ್ಟ ಸೌಬಲನು ವೇಗವಾಗಿ ಹೋಗುವ ಕುದುರೆಗಳ ಸಹಾಯದಿಂದ ದ್ರೋಣನ ಸೇನೆಯನ್ನು ಬಿಟ್ಟು ಓಡಿಹೋದನು.
07071027a ಘಟೋತ್ಕಚಸ್ತಥಾ ಶೂರಂ ರಾಕ್ಷಸಂ ತಮಲಾಯುಧಂ|
07071027c ಅಭ್ಯಯಾದ್ರಭಸಂ ಯುದ್ಧೇ ವೇಗಮಾಸ್ಥಾಯ ಮಧ್ಯಮಂ||
ಆಗ ಘಟೋತ್ಕಚನು ಶೂರ ರಾಕ್ಷಸ ತಮಲಾಯುಧ ರಭಸ ಅಲಂಬುಸನನ್ನು ಯುದ್ಧದಲ್ಲಿ ಮಧ್ಯಮ ವೇಗವನ್ನು ಬಳಸಿ ಆಕ್ರಮಣಿಸಿದನು.
07071028a ತಯೋರ್ಯುದ್ಧಂ ಮಹಾರಾಜ ಚಿತ್ರರೂಪಮಿವಾಭವತ್|
07071028c ಯಾದೃಶಂ ಹಿ ಪುರಾ ವೃತ್ತಂ ರಾಮರಾವಣಯೋರ್ಮೃಧೇ||
ಮಹಾರಾಜ! ಅವರ ಯುದ್ಧವು ಹಿಂದೆ ರಾಮ-ರಾವಣರ ನಡುವೆ ನಡೆದ ಯುದ್ಧದಂತೆ ವಿಚಿತ್ರವಾಗಿ ಕಾಣುತ್ತಿತ್ತು.
07071029a ತತೋ ಯುಧಿಷ್ಠಿರೋ ರಾಜಾ ಮದ್ರರಾಜಾನಮಾಹವೇ|
07071029c ವಿದ್ಧ್ವಾ ಪಂಚಾಶತಾ ಬಾಣೈಃ ಪುನರ್ವಿವ್ಯಾಧ ಸಪ್ತಭಿಃ||
ಆಗ ರಾಜಾ ಯುಧಿಷ್ಠಿರನು ಆಹವದಲ್ಲಿ ಮದ್ರರಾಜನನ್ನು ಐನೂರು ಬಾಣಗಳಿಂದ ಹೊಡೆದು ಪುನಃ ಏಳರಿಂದ ಹೊಡೆದನು.
07071030a ತತಃ ಪ್ರವವೃತೇ ಯುದ್ಧಂ ತಯೋರತ್ಯದ್ಭುತಂ ನೃಪ|
07071030c ಯಥಾ ಪೂರ್ವಂ ಮಹದ್ಯುದ್ಧಂ ಶಂಬರಾಮರರಾಜಯೋಃ||
ನೃಪ! ಆಗ ಅವರ ನಡುವೆ ಹಿಂದೆ ಶಂಬರ ಮತ್ತು ಅಮರರಾಜರ ನಡುವೆ ಮಹಾಯುದ್ಧವು ನಡೆದಂತೆ ಅತ್ಯದ್ಭುತ ಯುದ್ಧವು ನಡೆಯಿತು.
07071031a ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ತವಾತ್ಮಜಃ|
07071031c ಅಯೋಧಯನ್ಭೀಮಸೇನಂ ಮಹತ್ಯಾ ಸೇನಯಾ ವೃತಾಃ||
ನಿನ್ನ ಮಕ್ಕಳಾದ ವಿವಿಂಶತಿ, ಚಿತ್ರಸೇನ ಮತ್ತು ವಿಕರ್ಣರು ಮಹಾಸೇನೆಗಳಿಂದ ಸುತ್ತುವರೆಯಲ್ಪಟ್ಟು ಭೀಮಸೇನನೊಂದಿಗೆ ಯುದ್ಧಮಾಡಿದರು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ವಂದ್ವಯುದ್ಧೇ ಏಕಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ವಂದ್ವಯುದ್ಧ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.