Drona Parva: Chapter 65

ದ್ರೋಣ ಪರ್ವ: ಜಯದ್ರಥವಧ ಪರ್ವ

೬೫

ದುಃಶಾಸನನ ಗಜಸೇನೆಯೊಂದಿಗೆ ಅರ್ಜುನನ ಯುದ್ಧ; ಗಜಸೇನೆಯ ವಿನಾಶ (೧-೩೨).

07065001 ಧೃತರಾಷ್ಟ್ರ ಉವಾಚ|

07065001a ತಸ್ಮಿನ್ಪ್ರಭಗ್ನೇ ಸೈನ್ಯಾಗ್ರೇ ವಧ್ಯಮಾನೇ ಕಿರೀಟಿನಾ|

07065001c ಕೇ ನು ತತ್ರ ರಣೇ ವೀರಾಃ ಪ್ರತ್ಯುದೀಯುರ್ಧನಂಜಯಂ||

ಧೃತರಾಷ್ಟ್ರನು ಹೇಳಿದನು: “ಕಿರೀಟಿಯಿಂದ ವಧಿಸಲ್ಪಟ್ಟ ಆ ಸೇನೆಯ ಅಗ್ರಭಾಗವು ಒಡೆದುಹೋಗಲು ಅಲ್ಲಿ ರಣದಲ್ಲಿ ಯಾವ ವೀರನು ಧನಂಜಯನನ್ನು ಎದುರಿಸಿ ಯುದ್ಧಮಾಡಿದನು?

07065002a ಆಹೋ ಸ್ವಿಚ್ಚಕಟವ್ಯೂಹಂ ಪ್ರವಿಷ್ಟಾ ಮೋಘನಿಶ್ಚಯಾಃ|

07065002c ದ್ರೋಣಮಾಶ್ರಿತ್ಯ ತಿಷ್ಠಂತಃ ಪ್ರಾಕಾರಮಕುತೋಭಯಾಃ||

ಅಯ್ಯೋ! ನಿಶ್ಚಯಗಳು ಕೈಗೊಳ್ಳದೇ ದ್ರೋಣವನ್ನು ಆಶ್ರಯಿಸಿ ನಿಂತಿದ್ದವರು ಪ್ರಾಕಾರ‌ದಂತಿದ್ದ ಭಯವಿಲ್ಲದಿದ್ದ ಶಕಟವ್ಯೂಹವನ್ನು ಪ್ರವೇಶಿಸಿದರೇ?”

07065003 ಸಂಜಯ ಉವಾಚ|

07065003a ತಥಾರ್ಜುನೇನ ಸಂಭಗ್ನೇ ತಸ್ಮಿಂಸ್ತವ ಬಲೇ ತದಾ|

07065003c ಹತವೀರೇ ಹತೋತ್ಸಾಹೇ ಪಲಾಯನಕೃತಕ್ಷಣೇ||

ಸಂಜಯನು ಹೇಳಿದನು: “ಹಾಗೆ ಅರ್ಜುನನಿಂದ ನಿನ್ನ ಸೇನೆಯು ನುಚ್ಚುನೂರಾಗಿ ವೀರರು ಹತರಾಗಲು, ಉತ್ಸಾಹವನ್ನು ಕಳೆದುಕೊಂಡ ಅವರು ಪಲಾಯನಕ್ಕೆ ಸಮಯ ಕಾಯುತ್ತಿದ್ದರು.

07065004a ಪಾಕಶಾಸನಿನಾಭೀಕ್ಷ್ಣಂ ವಧ್ಯಮಾನೇ ಶರೋತ್ತಮೈಃ|

07065004c ನ ತತ್ರ ಕಶ್ಚಿತ್ಸಂಗ್ರಾಮೇ ಶಶಾಕಾರ್ಜುನಮೀಕ್ಷಿತುಂ||

ಪಾಕಶಾಸನಿಯು ಎದಿರು ಬಂದವರೆಲ್ಲರನ್ನೂ ಉತ್ತಮ ಶರಗಳಿಂದ ವಧಿಸುತ್ತಿದ್ದನು. ಆಗ ಸಂಗ್ರಾಮದಲ್ಲಿ ಅರ್ಜುನನನ್ನು ನೋಡಲು ಯಾರಿಗೂ ಶಕ್ಯವಾಗುತ್ತಿರಲಿಲ್ಲ.

07065005a ತತಸ್ತವ ಸುತೋ ರಾಜನ್ದೃಷ್ಟ್ವಾ ಸೈನ್ಯಂ ತಥಾಗತಂ|

07065005c ದುಃಶಾಸನೋ ಭೃಶಂ ಕ್ರುದ್ಧೋ ಯುದ್ಧಾಯಾರ್ಜುನಮಭ್ಯಯಾತ್||

ಆಗ ರಾಜನ್! ನಿನ್ನ ಮಗ ದುಃಶಾಸನನು ಸೈನ್ಯವು ಹಾಗಾದುದನ್ನು ನೋಡಿ ತುಂಬಾ ಕ್ರುದ್ಧನಾಗಿ ಯುದ್ಧದಲ್ಲಿ ಅರ್ಜುನನನ್ನು ಎದುರಿಸಿದನು.

07065006a ಸ ಕಾಂಚನವಿಚಿತ್ರೇಣ ಕವಚೇನ ಸಮಾವೃತಃ|

07065006c ಜಾಂಬೂನದಶಿರಸ್ತ್ರಾಣಃ ಶೂರಸ್ತೀವ್ರಪರಾಕ್ರಮಃ||

ಅವನು ಕಾಂಚನದ ವಿಚಿತ್ರ ಕವಚದಿಂದ ಆವೃತನಾಗಿದ್ದನು. ಆ ತೀವ್ರಪರಾಕ್ರಮಿಯು ಬಂಗಾರದ ಶಿರಸ್ತ್ರಾಣವನ್ನು ಧರಿಸಿದ್ದನು.

07065007a ನಾಗಾನೀಕೇನ ಮಹತಾ ಗ್ರಸನ್ನಿವ ಮಹೀಮಿಮಾಂ|

07065007c ದುಃಶಾಸನೋ ಮಹಾರಾಜ ಸವ್ಯಸಾಚಿನಮಾವೃಣೋತ್||

ಮಹಾರಾಜ! ಇಡೀ ಭೂಮಿಯನ್ನೇ ನುಂಗಿಬಿಡುವಂತಿದ್ದ ಮಹಾ ಗಜಸೇನೆಯೊಂದಿಗೆ ದುಃಶಾಸನನು ಸವ್ಯಸಾಚಿಯನ್ನು ಆಕ್ರಮಣಿಸಿದನು.

07065008a ಹ್ರಾದೇನ ಗಜಘಂಟಾನಾಂ ಶಂಖಾನಾಂ ನಿನದೇನ ಚ|

07065008c ಜ್ಯಾಕ್ಷೇಪನಿನದೈಶ್ಚೈವ ವಿರಾವೇಣ ಚ ದಂತಿನಾಂ||

07065009a ಭೂರ್ದಿಶಶ್ಚಾಂತರಿಕ್ಷಂ ಚ ಶಬ್ದೇನಾಸೀತ್ಸಮಾವೃತಂ|

07065009c ಸ ಮುಹೂರ್ತಂ ಪ್ರತಿಭಯೋ ದಾರುಣಃ ಸಮಪದ್ಯತ||

ಆನೆಗಳ ಘಂಟೆಗಳ ಮತ್ತು ಶಂಖಗಳ ನಿನಾದದಿಂದ, ಟೇಂಕಾರ ಧ್ವನಿಯಿಂದ ಮತ್ತು ಆನೆಗಳ ಘೀಳಿನಿಂದ ಭೂಮಿ-ದಿಕ್ಕು-ಅಂತರಿಕ್ಷಗಳು ಶಬ್ಧದಿಂದ ತುಂಬಿಕೊಂಡವು. ಆ ಮುಹೂರ್ತವು ಭಯವನ್ನುಂಟು ಮಾಡುವ ದಾರುಣ ಸಮಯವಾಯಿತು.

07065010a ತಾನ್ದೃಷ್ಟ್ವಾ ಪತತಸ್ತೂರ್ಣಮಂಕುಶೈರಭಿಚೋದಿತಾನ್|

07065010c ವ್ಯಾಲಂಬಹಸ್ತಾನ್ಸಂರಬ್ಧಾನ್ಸಪಕ್ಷಾನಿವ ಪರ್ವತಾನ್||

07065011a ಸಿಂಹನಾದೇನ ಮಹತಾ ನರಸಿಂಹೋ ಧನಂಜಯಃ|

07065011c ಗಜಾನೀಕಮಮಿತ್ರಾಣಾಮಭಿತೋ ವ್ಯಧಮಚ್ಚರೈಃ||

ಅಂಕುಶಗಳಿಂದ ಚೋದಿತರಾಗಿ ತನ್ನ ಮೇಲೆ ಬೇಗನೆ ಬಂದು ಬೀಳುತ್ತಿದ್ದ ಕೋಪದಿಂದ ಆವೇಶಗೊಂಡಿರುವ, ರೆಕ್ಕೆಗಳುಳ್ಳ ಪರ್ವತಗಳಂತಿದ್ದ ಆ ಆನೆಗಳನ್ನು ನೋಡಿ ನರಸಿಂಹ ಧನಂಜಯನು ಜೋರಾಗಿ ಸಿಂಹನಾದಗೈದು, ಅಮಿತ್ರರ ಆ ಗಜಸೇನೆಯನ್ನು ಶರಗಳಿಂದ ವಧಿಸಲು ಉಪಕ್ರಮಿಸಿದನು.

07065012a ಮಹೋರ್ಮಿಣಮಿವೋದ್ಧೂತಂ ಶ್ವಸನೇನ ಮಹಾರ್ಣವಂ|

07065012c ಕಿರೀಟೀ ತದ್ಗಜಾನೀಕಂ ಪ್ರಾವಿಶನ್ಮಕರೋ ಯಥಾ||

ಭಿರುಗಾಳಿಗೆ ಸಿಲುಕಿದ ಸಮುದ್ರವು ದೊಡ್ಡ ದೊಡ್ಡ ಅಲೆಗಳೊಂದಿಗೆ ಮೇಲುಕ್ಕಿ ಬರುವಂತಿದ್ದ ಆ ಗಜಸೇನೆಯನ್ನು ಕಿರೀಟಿಯು ಮೊಸಳೆಯೋಪಾದಿಯಲ್ಲಿ ಪ್ರವೇಶಿಸಿದನು.

07065013a ಕಾಷ್ಠಾತೀತ ಇವಾದಿತ್ಯಃ ಪ್ರತಪನ್ಯುಗಸಂಕ್ಷಯೇ|

07065013c ದದೃಶೇ ದಿಕ್ಷು ಸರ್ವಾಸು ಪಾರ್ಥಃ ಪರಪುರಂಜಯಃ||

ಯುಗಸಂಕ್ಷಯದಲ್ಲಿ ಆದಿತ್ಯನು ಎಲ್ಲೆಮೀರಿ ಸುಡುವಂತೆ ಪರಪುರಂಜಯ ಪಾರ್ಥನು ಎಲ್ಲ ದಿಕ್ಕುಗಳನ್ನೂ ಸುಡುವಂತೆ ಕಂಡುಬಂದನು.

07065014a ಖುರಶಬ್ದೇನ ಚಾಶ್ವಾನಾಂ ನೇಮಿಘೋಷೇಣ ತೇನ ಚ|

07065014c ತೇನ ಚೋತ್ಕ್ರುಷ್ಟಶಬ್ದೇನ ಜ್ಯಾನಿನಾದೇನ ತೇನ ಚ|

07065014e ದೇವದತ್ತಸ್ಯ ಘೋಷೇಣ ಗಾಂಡೀವನಿನದೇನ ಚ||

07065015a ಮಂದವೇಗತರಾ ನಾಗಾ ಬಭೂವುಸ್ತೇ ವಿಚೇತಸಃ|

07065015c ಶರೈರಾಶೀವಿಷಸ್ಪರ್ಶೈರ್ನಿರ್ಭಿನ್ನಾಃ ಸವ್ಯಸಾಚಿನಾ||

ಅಶ್ವಗಳ ಗೊರಸಿನ ಶಬ್ಧಗಳಿಂದ, ರಥಚಕ್ರದ ಘೋಷಗಳಿಂದ, ಟೇಂಕಾರದ ಉತ್ಕೃಷ್ಟ ನಿನಾದದಿಂದ, ದೇವದತ್ತ ಶಂಖದ ಘೋಷದಿಂದ, ಗಾಂಡೀವದ ನಿನಾದದಿಂದ ಆನೆಗಳ ವೇಗವು ಕುಂಠಿತವಾಯಿತು. ವಿಷಸರ್ಪಗಳಂತಿದ್ದ ಸವ್ಯಸಾಚಿಯ ಶರಗಳು ತಾಗಿ ಅವು ನಿರ್ಭಿನ್ನವಾಗಿ ಮೂರ್ಛೆಹೋದವು.

07065016a ತೇ ಗಜಾ ವಿಶಿಖೈಸ್ತೀಕ್ಷ್ಣೈರ್ಯುಧಿ ಗಾಂಡೀವಚೋದಿತೈಃ|

07065016c ಅನೇಕಶತಸಾಹಸ್ರೈಃ ಸರ್ವಾಂಗೇಷು ಸಮರ್ಪಿತಾಃ||

07065017a ಆರಾವಂ ಪರಮಂ ಕೃತ್ವಾ ವಧ್ಯಮಾನಾಃ ಕಿರೀಟಿನಾ|

07065017c ನಿಪೇತುರನಿಶಂ ಭೂಮೌ ಚಿನ್ನಪಕ್ಷಾ ಇವಾದ್ರಯಃ||

ಯುದ್ಧದಲ್ಲಿ ಗಾಂಡೀವದಿಂದ ಬಿಡಲ್ಪಟ್ಟ ತೀಕ್ಷ್ಣ ವಿಶಿಖಗಳಿಂದ ಸರ್ವಾಂಗಗಳಲ್ಲಿ ಗಾಯಗೊಂಡು ಅನೇಕ ನೂರು ಸಾವಿರ ಆನೆಗಳು ಜೋರಾಗಿ ಕೂಗಿಕೊಳ್ಳುತ್ತಾ ರೆಕ್ಕೆಗಳನ್ನು ಕತ್ತರಿಸಲ್ಪಟ್ಟ ಗಿರಿಪರ್ವತಗಳಂತೆ ಕಿರೀಟಿಯಿಂದ ವಧಿಸಲ್ಪಟ್ಟು ಭೂಮಿಯ ಮೇಲೆ ಬಿದ್ದವು.

07065018a ಅಪರೇ ದಂತವೇಷ್ಟೇಷು ಕುಂಭೇಷು ಚ ಕಟೇಷು ಚ|

07065018c ಶರೈಃ ಸಮರ್ಪಿತಾ ನಾಗಾಃ ಕ್ರೌಂಚವದ್ವ್ಯನದನ್ಮುಹುಃ||

ಕೆಲವು ಆನೆಗಳು ದಂತಗಳ ಕೆಳಭಾಗದಲ್ಲಿಯೂ, ಕುಂಭಸ್ಥಳದಲ್ಲಿ, ಮತ್ತು ಕಪೋಲಗಳಲ್ಲಿ ಬಾಣಗಳಿಂದ ಚುಚ್ಚಲ್ಪಟ್ಟು ಕ್ರೌಂಚಪಕ್ಷಿಗಳಂತೆ ಮತ್ತೆ ಮತ್ತೆ ಕಿರುಚುತ್ತಿದ್ದವು.

07065019a ಗಜಸ್ಕಂಧಗತಾನಾಂ ಚ ಪುರುಷಾಣಾಂ ಕಿರೀಟಿನಾ|

07065019c ಆಚ್ಚಿದ್ಯಂತೋತ್ತಮಾಂಗಾನಿ ಭಲ್ಲೈಃ ಸನ್ನತಪರ್ವಭಿಃ||

ಕಿರೀಟಿಯು ಆನೆಗಳ ಹೆಗಲ ಮೇಲಿದ್ದ ಪುರುಷರ ಶಿರಗಳನ್ನು ಸನ್ನತಪರ್ವ ಭಲ್ಲಗಳಿಂದ ಕತ್ತರಿಸುತ್ತಿದ್ದನು.

07065020a ಸಕುಂಡಲಾನಾಂ ಪತತಾಂ ಶಿರಸಾಂ ಧರಣೀತಲೇ|

07065020c ಪದ್ಮಾನಾಮಿವ ಸಂಘಾತೈಃ ಪಾರ್ಥಶ್ಚಕ್ರೇ ನಿವೇದನಂ||

ಧರಣೀತಲದಲ್ಲಿ ಕುಂಡಲಗಳೊಂದಿಗೆ ಬೀಳುತ್ತಿದ್ದ ಶಿರಸ್ಸುಗಳು ಪಾರ್ಥನು ಪದ್ಮಗಳ ರಾಶಿಗಳಿಂದ ಭೂಮಿಯನ್ನು ಪೂಜಿಸುತ್ತಿರುವನೋ ಎಂಬಂತೆ ತೋರುತ್ತಿದ್ದವು.

07065021a ಯಂತ್ರಬದ್ಧಾ ವಿಕವಚಾ ವ್ರಣಾರ್ತಾ ರುಧಿರೋಕ್ಷಿತಾಃ|

07065021c ಭ್ರಮತ್ಸು ಯುಧಿ ನಾಗೇಷು ಮನುಷ್ಯಾ ವಿಲಲಂಬಿರೇ||

ರಣದಲ್ಲಿ ತಿರುಗುತ್ತಿದ್ದ ಆನೆಗಳ ಮೇಲೆ ಯಂತ್ರಗಳಿಗೆ ಕಟ್ಟಲ್ಪಟ್ಟಿರುವರೋ ಎಂಬಂತೆ ಕವಚಗಳನ್ನು ಕಳೆದುಕೊಂಡು, ಗಾಯಗಳಿಂದ ಆರ್ತರಾಗಿ, ರಕ್ತದಿಂದ ತೋಯ್ದು ಮನುಷ್ಯರು ನೇತಾಡುತ್ತಿದ್ದರು.

07065022a ಕೇ ಚಿದೇಕೇನ ಬಾಣೇನ ಸುಮುಕ್ತೇನ ಪತತ್ರಿಣಾ|

07065022c ದ್ವೌ ತ್ರಯಶ್ಚ ವಿನಿರ್ಭಿನ್ನಾ ನಿಪೇತುರ್ಧರಣೀತಲೇ||

ಚೆನ್ನಾಗಿ ಪ್ರಯೋಗಿಸಲ್ಪಟ್ಟ ಒಂದೇ ಪತತ್ರಿಯಿಂದ ಕೆಲವೊಮ್ಮೆ ಒಬ್ಬರೇ ತುಂಡಾಗಿ ಮತ್ತು ಇನ್ನು ಕೆಲವೊಮ್ಮೆ ಇಬ್ಬರು ಮೂರುಮಂದಿ ಒಟ್ಟಿಗೇ ಕತ್ತರಿಸಲ್ಪಟ್ಟು ಬೀಳುತ್ತಿದ್ದರು.

07065023a ಮೌರ್ವೀಂ ಧನುರ್ಧ್ವಜಂ ಚೈವ ಯುಗಾನೀಷಾಸ್ತಥೈವ ಚ|

07065023c ರಥಿನಾಂ ಕುಟ್ಟಯಾಮಾಸ ಭಲ್ಲೈಃ ಸನ್ನತಪರ್ವಭಿಃ||

ಅವನು ಸನ್ನತಪರ್ವ ಭಲ್ಲಗಳಿಂದ ರಥಿಗಳ ಶಿಂಜಿನಿಯನ್ನೂ, ಧನುಸ್ಸು-ಧ್ವಜಗಳನ್ನೂ, ನೊಗ-ಈಷಾದಂಡಗಳನ್ನೂ ತುಂಡರಿಸಿದನು.

07065024a ನ ಸಂದಧನ್ನ ಚಾಪ್ಯಸ್ಯನ್ನ ವಿಮುಂಚನ್ನ ಚೋದ್ಧರನ್|

07065024c ಮಂಡಲೇನೈವ ಧನುಷಾ ನೃತ್ಯನ್ಪಾರ್ಥಃ ಸ್ಮ ದೃಶ್ಯತೇ||

ಧನುಸ್ಸನ್ನು ಮಂಡಲಾಕಾರವಾಗಿರಿಸಿಕೊಂಡ ಪಾರ್ಥನು ನರ್ತಿಸುತ್ತಿರುವವನಂತೆ ತೋರುತ್ತಿದ್ದನು. ಅವನು ಚಾಪಕ್ಕೆ ಬಾಣಗಳನ್ನು ಹೂಡುವುದೂ, ಪ್ರಯೋಗಿಸುವುದೂ ಕಾಣುತ್ತಲೇ ಇರಲಿಲ್ಲ.

07065025a ಅತಿವಿದ್ಧಾಶ್ಚ ನಾರಾಚೈರ್ವಮಂತೋ ರುಧಿರಂ ಮುಖೈಃ|

07065025c ಮುಹೂರ್ತಾನ್ನಿಪತಂತ್ಯನ್ಯೇ ವಾರಣಾ ವಸುಧಾತಲೇ||

ನಾರಾಚಗಳಿಂದ ಅತಿಯಾಗಿ ಗಾಯಗೊಂಡು ಬಾಯಿಯಿಂದ ರಕ್ತವನ್ನು ಕಾರುತ್ತಾ ಅನ್ಯ ಆನೆಗಳು ವಸುಧಾತಲದಲ್ಲಿ ಬೀಳುತ್ತಿದ್ದವು.

07065026a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ|

07065026c ಅದೃಶ್ಯಂತ ಮಹಾರಾಜ ತಸ್ಮಿನ್ಪರಮಸಂಕುಲೇ||

ಮಹಾರಾಜ! ಆ ಪರಮ ಸಂಕುಲಯುದ್ಧದಲ್ಲಿ ಅಗಣಿತ ಕಬಂಧಗಳು ಮೇಲೆದ್ದು ಕುಣಿಯುತ್ತಿರುವುದು ಎಲ್ಲ ಕಡೆ ಕಂಡುಬಂದಿತು.

07065027a ಸಚಾಪಾಃ ಸಾಂಗುಲಿತ್ರಾಣಾಃ ಸಖಡ್ಗಾಃ ಸಾಂಗದಾ ರಣೇ|

07065027c ಅದೃಶ್ಯಂತ ಭುಜಾಶ್ಚಿನ್ನಾ ಹೇಮಾಭರಣಭೂಷಿತಾಃ||

ಚಾಪಗಳೊಂದಿಗೆ, ಅಂಗುಲಿತ್ರಾಣಗಳೊಂದಿಗೆ, ಖಡ್ಗಗಳೊಂದಿಗೆ, ಅಂಗದಗಳೊಂದಿಗೆ ಹೇಮಾಭರಣ ಭೂಷಿತ ಭುಜಗಳು ತುಂಡಾಗಿ ಬಿದ್ದಿರುವುದು ಕಂಡುಬಂದಿತು.

07065028a ಸೂಪಸ್ಕರೈರಧಿಷ್ಠಾನೈರೀಷಾದಂಡಕಬಂಧುರೈಃ|

07065028c ಚಕ್ರೈರ್ವಿಮಥಿತೈರಕ್ಷೈ ಭಗ್ನೈಶ್ಚ ಬಹುಧಾ ಯುಗೈಃ||

07065029a ವರ್ಮಚಾಪಶರೈಶ್ಚೈವ ವ್ಯವಕೀರ್ಣೈಸ್ತತಸ್ತತಃ|

07065029c ಸ್ರಗ್ಭಿರಾಭರಣೈರ್ವಸ್ತ್ರೈಃ ಪತಿತೈಶ್ಚ ಮಹಾಧ್ವಜೈಃ||

07065030a ನಿಹತೈರ್ವಾರಣೈರಶ್ವೈಃ ಕ್ಷತ್ರಿಯೈಶ್ಚ ನಿಪಾತಿತೈಃ|

07065030c ಅದೃಶ್ಯತ ಮಹೀ ತತ್ರ ದಾರುಣಪ್ರತಿದರ್ಶನಾ||

ಛಿನ್ನ ಛಿನ್ನವಾದ ರಥೋಪಕರಣಗಳಿಂದಲೂ, ಆಸನಗಳಿಂದಲೂ, ಈಷಾದಂಡಗಳಿಂದಲೂ, ನೊಗಗಳಿಂದಲೂ, ಅಲ್ಲಲ್ಲಿ ಹರಡಿ ಬಿದ್ದಿರುವ ಕವಚ-ಚಾಪ-ಶರಗಳಿಂದಲೂ, ಕೆಳಗೆ ಬಿದ್ದಿದ್ದ ಹಾರ-ಆಭರಣ-ವಸ್ತ್ರಗಳಿಂದಲೂ, ಧ್ವಜಗಳಿಂದಲೂ, ಹತರಾಗಿ ಬಿದ್ದಿದ್ದ ಆನೆ-ಕುದುರೆ-ಕ್ಷತ್ರಿಯರಿಂದಲೂ ಆ ರಣಭೂಮಿಯು ನೋಡಲು ದಾರುಣವಾಗಿ ತೋರುತ್ತಿತ್ತು.

07065031a ಏವಂ ದುಃಶಾಸನಬಲಂ ವಧ್ಯಮಾನಂ ಕಿರೀಟಿನಾ|

07065031c ಸಂಪ್ರಾದ್ರವನ್ಮಹಾರಾಜ ವ್ಯಥಿತಂ ವೈ ಸನಾಯಕಂ||

ಮಹಾರಾಜ! ಹೀಗೆ ಕಿರೀಟಿಯಿಂದ ವಧಿಸಲ್ಪಟ್ಟ ಆ ದುಃಶಾಸನನ ಸೇನೆಯು ವ್ಯಥಿತಗೊಂಡು ನಾಯಕನೊಂದಿಗೆ ಓಡಿಹೋಯಿತು.

07065032a ತತೋ ದುಃಶಾಸನಸ್ತ್ರಸ್ತಃ ಸಹಾನೀಕಃ ಶರಾರ್ದಿತಃ|

07065032c ದ್ರೋಣಂ ತ್ರಾತಾರಮಾಕಾಂಕ್ಷಂ ಶಕಟವ್ಯೂಹಮಭ್ಯಗಾತ್||

ಆಗ ಶರಾರ್ದಿತನಾದ ದುಃಶಾಸನನು ಸೇನೆಯೊಂದಿಗೆ ದ್ರೋಣನನ್ನು ರಕ್ಷಕನಾಗಿ ಬಯಸುತ್ತಾ ಶಕಟವ್ಯೂಹವನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದುಃಶಾಸನಸೈನ್ಯಪರಾಭವೇ ಪಂಚಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದುಃಶಾಸನಸೈನ್ಯಪರಾಭವ ಎನ್ನುವ ಅರವತ್ತೈದನೇ ಅಧ್ಯಾಯವು.

Related image

Comments are closed.