ದ್ರೋಣ ಪರ್ವ: ದ್ರೋಣಾಭಿಷೇಕ ಪರ್ವ
೧೨
ಹನ್ನೊಂದನೆಯ ದಿನದ ಯುದ್ಧ
ಅರ್ಜುನನಿಂದ ಯುಧಿಷ್ಠಿರನಿಗೆ ಆಶ್ವಾಸನೆ (೧-೧೩). ಹನ್ನೊಂದನೆಯ ದಿನದ ಯುದ್ಧಾರಂಭ (೧೪-೨೮).
07012001 ಸಂಜಯ ಉವಾಚ|
07012001a ತತಸ್ತೇ ಸೈನಿಕಾಃ ಶ್ರುತ್ವಾ ತಂ ಯುಧಿಷ್ಠಿರನಿಗ್ರಹಂ|
07012001c ಸಿಂಹನಾದರವಾಂಶ್ಚಕ್ರುರ್ಬಾಣಶಂಖರವೈಃ ಸಹ||
ಸಂಜಯನು ಹೇಳಿದನು: “ಯುಧಿಷ್ಠಿರನ ಸೆರೆಹಿಡಿಯುವುದರ ಕುರಿತು ಅದನ್ನು ಕೇಳಿದ ಸೈನಿಕರು ಸಿಂಹನಾದಗೈದರು. ಬಾಣ ಶಂಖಗಳಿಂದ ತುಮುಲ ಶಬ್ಧಮಾಡಿದರು.
07012002a ತತ್ತು ಸರ್ವಂ ಯಥಾವೃತ್ತಂ ಧರ್ಮರಾಜೇನ ಭಾರತ|
07012002c ಆಪ್ತೈರಾಶು ಪರಿಜ್ಞಾತಂ ಭಾರದ್ವಾಜಚಿಕೀರ್ಷಿತಂ||
ಭಾರತ! ಭಾರದ್ವಾಜನು ಮಾಡಿದ ಪ್ರತಿಜ್ಞೆಯನ್ನು ಸಂಪೂರ್ಣವಾಗಿ ನಡೆದಂತೆ ಆಪ್ತರಿಂದ ಧರ್ಮರಾಜನು ತಿಳಿದುಕೊಂಡನು.
07012003a ತತಃ ಸರ್ವಾನ್ಸಮಾನಾಯ್ಯ ಭ್ರಾತೄನ್ಸೈನ್ಯಾಂಶ್ಚ ಸರ್ವಶಃ|
07012003c ಅಬ್ರವೀದ್ಧರ್ಮರಾಜಸ್ತು ಧನಂಜಯಮಿದಂ ವಚಃ||
ಆಗ ಎಲ್ಲಕಡೆಗಳಿಂದ ತಮ್ಮಂದಿರನ್ನೂ ಸೇನೆಗಳನ್ನೂ ಕರೆಯಿಸಿಕೊಂಡು ಧರ್ಮರಾಜನು ಧನಂಜಯನಿಗೆ ಈ ಮಾತುಗಳನ್ನಾಡಿದನು.
07012004a ಶ್ರುತಂ ತೇ ಪುರುಷವ್ಯಾಘ್ರ ದ್ರೋಣಸ್ಯಾದ್ಯ ಚಿಕೀರ್ಷಿತಂ|
07012004c ಯಥಾ ತನ್ನ ಭವೇತ್ಸತ್ಯಂ ತಥಾ ನೀತಿರ್ವಿಧೀಯತಾಂ||
“ಪುರುಷವ್ಯಾಘ್ರ! ಇಂದು ದ್ರೋಣನು ಮಾಡಿದ ಪ್ರತಿಜ್ಞೆಯನ್ನು ನೀನೂ ಕೇಳಿದೆಯಲ್ಲವೇ? ಅದು ಸತ್ಯವಾಗದ ಹಾಗೆ ನೀತಿಯನ್ನು ರೂಪಿಸಬೇಕಾಗಿದೆ.
07012005a ಸಾಂತರಂ ಹಿ ಪ್ರತಿಜ್ಞಾತಂ ದ್ರೋಣೇನಾಮಿತ್ರಕರ್ಶನ|
07012005c ತಚ್ಚಾಂತರಮಮೋಘೇಷೌ ತ್ವಯಿ ತೇನ ಸಮಾಹಿತಂ||
ಅಮಿತ್ರಕರ್ಶನ! ದ್ರೋಣನ ಪ್ರತಿಜ್ಞೆಯಲ್ಲಿ ಒಂದು ಛಿದ್ರವನ್ನಿಟ್ಟಿದ್ದಾರೆಂದು ತಿಳಿದಿದೆ. ಆ ಛಿದ್ರವು ಯಶಸ್ವಿಯಾಗದೇ ಇರುವುದು ನಿನ್ನ ಮೇಲೆ ಅವಲಂಬಿಸಿದೆ.
07012006a ಸ ತ್ವಮದ್ಯ ಮಹಾಬಾಹೋ ಯುಧ್ಯಸ್ವ ಮದನಂತರಂ|
07012006c ಯಥಾ ದುರ್ಯೋಧನಃ ಕಾಮಂ ನೇಮಂ ದ್ರೋಣಾದವಾಪ್ನುಯಾತ್||
ಮಹಾಬಾಹೋ! ದ್ರೋಣನ ಪ್ರತಿಜ್ಞೆಯ ಮೂಲಕವಾಗಿ ದುರ್ಯೋಧನನು ತನ್ನ ಇಚ್ಛೆಯನ್ನು ಪೂರೈಸಿಕೊಳ್ಳದ ಹಾಗೆ ಇಂದು ನೀನು ನನ್ನ ಹತ್ತಿರವಿದ್ದೇ ಯುದ್ಧಮಾಡಬೇಕು!”
07012007 ಅರ್ಜುನ ಉವಾಚ|
07012007a ಯಥಾ ಮೇ ನ ವಧಃ ಕಾರ್ಯ ಆಚಾರ್ಯಸ್ಯ ಕಥಂ ಚನ|
07012007c ತಥಾ ತವ ಪರಿತ್ಯಾಗೋ ನ ಮೇ ರಾಜಂಶ್ಚಿಕೀರ್ಷಿತಃ||
ಅರ್ಜುನನು ಹೇಳಿದನು: “ರಾಜನ್! ಆಚಾರ್ಯರ ವಧೆಯು ಎಂದೂ ಹೇಗೆ ನನ್ನ ಕೆಲಸವಲ್ಲವೋ ಹಾಗೆ ನಿನ್ನನ್ನು ಪರಿತ್ಯಜಿಸುವುದೂ ನಾನು ಇಚ್ಛಿಸುವ ಕೆಲಸವಲ್ಲ.
07012008a ಅಪ್ಯೇವಂ ಪಾಂಡವ ಪ್ರಾಣಾನುತ್ಸೃಜೇಯಮಹಂ ಯುಧಿ|
07012008c ಪ್ರತೀಯಾಂ ನಾಹಮಾಚಾರ್ಯಂ ತ್ವಾಂ ನ ಜಹ್ಯಾಂ ಕಥಂ ಚನ||
ಪಾಂಡವ! ಯುದ್ಧದಲ್ಲಿ ನಾನು ಪ್ರಾಣಗಳನ್ನು ತ್ಯಜಿಸಿಯೇನು. ಆದರೆ ಆಚಾರ್ಯರ ಕುರಿತು ವಿರೋಧಭಾವನೆಯನ್ನು ಮಾತ್ರ ಖಂಡಿತವಾಗಿಯೂ ಇಟ್ಟುಕೊಳ್ಳುವುಲ್ಲ.
07012009a ತ್ವಾಂ ನಿಗೃಹ್ಯಾಹವೇ ರಾಜನ್ಧಾರ್ತರಾಷ್ಟ್ರೋ ಯಮಿಚ್ಚತಿ|
07012009c ನ ಸ ತಂ ಜೀವಲೋಕೇಽಸ್ಮಿನ್ಕಾಮಂ ಪ್ರಾಪ್ತಃ ಕಥಂ ಚನ||
ರಾಜನ್! ನಿನ್ನನ್ನು ಸಮರದಲ್ಲಿ ಬಂಧಿಸಲು ಧಾರ್ತರಾಷ್ಟ್ರನು ಏನು ಇಚ್ಛಿಸಿರುವನೋ ಆ ಬಯಕೆಯನ್ನು ಅವನು ಈ ಜೀವಲೋಕದಲ್ಲಿ ಎಂದೂ ಪೂರೈಸಿಕೊಳ್ಳಲಾರ.
07012010a ಪ್ರಪತೇದ್ದೌಃ ಸನಕ್ಷತ್ರಾ ಪೃಥಿವೀ ಶಕಲೀಭವೇತ್|
07012010c ನ ತ್ವಾಂ ದ್ರೋಣೋ ನಿಗೃಹ್ಣೀಯಾಜ್ಜೀವಮಾನೇ ಮಯಿ ಧ್ರುವಂ||
ನಕ್ಷತ್ರಸಹಿತವಾಗಿ ಆಕಾಶವೇ ಕೆಳಗೆ ಬೀಳಬಹುದು. ಭೂಮಿಯು ಚೂರುಚೂರಾಗಬಹುದು. ಆದರೆ ನಾನು ಜೀವಿಸಿರುವಾಗ ದ್ರೋಣರು ನಿನ್ನನ್ನು ಸೆರೆಹಿಡಿಯಲಾರರು. ಇದು ಖಂಡಿತ.
07012011a ಯದಿ ತಸ್ಯ ರಣೇ ಸಾಹ್ಯಂ ಕುರುತೇ ವಜ್ರಭೃತ್ಸ್ವಯಂ|
07012011c ದೇವೈರ್ವಾ ಸಹಿತೋ ದೈತ್ಯೈರ್ನ ತ್ವಾಂ ಪ್ರಾಪ್ಸ್ಯತ್ಯಸೌ ಮೃಧೇ||
ಒಂದುವೇಳೆ ಅವನಿಗೆ ರಣದಲ್ಲಿ ಸಹಾಯವಾಗಿ ಸ್ವಯಂ ವಜ್ರಭೃತುವು ದೇವ ಅಥವಾ ದೈತ್ಯರೊಂದಿಗೆ ಬಂದರೂ ಕೂಡ ಅವನು ನಿನ್ನನ್ನು ಯುದ್ಧದಲ್ಲಿ ಬಂಧಿಸಲಾರನು.
07012012a ಮಯಿ ಜೀವತಿ ರಾಜೇಂದ್ರ ನ ಭಯಂ ಕರ್ತುಮರ್ಹಸಿ|
07012012c ದ್ರೋಣಾದಸ್ತ್ರಭೃತಾಂ ಶ್ರೇಷ್ಠಾತ್ಸರ್ವಶಸ್ತ್ರಭೃತಾಮಪಿ||
ರಾಜೇಂದ್ರ! ನಾನು ಜೀವಿಸಿರುವಾಗ ನೀನು ಅಸ್ತ್ರಭೃತರಲ್ಲಿ ಶ್ರೇಷ್ಠ ದ್ರೋಣರಿಗಾಗಲೀ ಸರ್ವ ಶಸ್ತ್ರಭೃತರಿಗಾಗಲೀ ಭಯಪಡಬಾರದು.
07012013a ನ ಸ್ಮರಾಮ್ಯನೃತಾಂ ವಾಚಂ ನ ಸ್ಮರಾಮಿ ಪರಾಜಯಂ|
07012013c ನ ಸ್ಮರಾಮಿ ಪ್ರತಿಶ್ರುತ್ಯ ಕಿಂ ಚಿದಪ್ಯನಪಾಕೃತಂ||
ಸುಳ್ಳುಹೇಳಿರುವುದು ನೆನಪಿಲ್ಲ. ಪರಾಜಯಗೊಂಡಿದುದು ನೆನಪಿಲ್ಲ. ಎಂದಾದರೂ ಪ್ರತಿಜ್ಞೆಯನ್ನು ಸುಳ್ಳಾಗಿಸಿ ನಡೆದುಕೊಂಡಿದುದರ ನೆನಪಿಲ್ಲ.””
07012014 ಸಂಜಯ ಉವಾಚ|
07012014a ತತಃ ಶಂಖಾಶ್ಚ ಭೇರ್ಯಶ್ಚ ಮೃದಂಗಾಶ್ಚಾನಕೈಃ ಸಹ|
07012014c ಪ್ರಾವಾದ್ಯಂತ ಮಹಾರಾಜ ಪಾಂಡವಾನಾಂ ನಿವೇಶನೇ||
ಸಂಜಯನು ಹೇಳಿದನು: “ಮಹಾರಾಜ! ಆಗ ಪಾಂಡವರ ಶಿಬಿರದಲ್ಲಿ ಶಂಖ, ಭೇರಿ, ಮೃದಂಗ, ಅನಕಗಳನ್ನು ಒಟ್ಟಿಗೇ ಬಾರಿಸಲಾಯಿತು.
07012015a ಸಿಂಹನಾದಶ್ಚ ಸಂಜಜ್ಞೇ ಪಾಂಡವಾನಾಂ ಮಹಾತ್ಮನಾಂ|
07012015c ಧನುರ್ಜ್ಯಾತಲಶಬ್ದಶ್ಚ ಗಗನಸ್ಪೃಕ್ಸುಭೈರವಃ||
ಮಹಾತ್ಮ ಪಾಂಡವರ ಸಿಂಹನಾದವೂ ಸೇರಿಕೊಂಡು ಕೇಳಿಬಂದಿತು. ಧನುಸ್ಸಿನ ಭಯಂಕರ ಟೇಂಕಾರ ಶಬ್ಧವು ಗಗನದಲ್ಲಿ ಮೊಳಗಿತು.
07012016a ತಂ ಶ್ರುತ್ವಾ ಶಂಖನಿರ್ಘೋಷಂ ಪಾಂಡವಸ್ಯ ಮಹಾತ್ಮನಃ|
07012016c ತ್ವದೀಯೇಷ್ವಪ್ಯನೀಕೇಷು ವಾದಿತ್ರಾಣ್ಯಭಿಜಘ್ನಿರೇ||
ಮಹಾತ್ಮ ಪಾಂಡವರ ಶಂಖನಿರ್ಘೋಷವನ್ನು ಕೇಳಿ ನಿನ್ನವರ ಸೇನೆಗಳಲ್ಲಿಯೂ ಕೂಡ ವಾದಿತ್ರಾದಿ ವಾದ್ಯಗಳನ್ನು ಬಾರಿಸಲಾಯಿತು.
07012017a ತತೋ ವ್ಯೂಢಾನ್ಯನೀಕಾನಿ ತವ ತೇಷಾಂ ಚ ಭಾರತ|
07012017c ಶನೈರುಪೇಯುರನ್ಯೋನ್ಯಂ ಯೋತ್ಸ್ಯಮಾನಾನಿ ಸಂಯುಗೇ||
ಭಾರತ! ಆಗ ನಿನ್ನ ಮತ್ತು ಅವರ ಸೇನೆಗಳನ್ನು ವ್ಯೂಹಗಳಲ್ಲಿ ರಚಿಸಲಾಯಿತು. ಮೆಲ್ಲ ಮೆಲ್ಲನೆ ರಣರಂಗದಲ್ಲಿ ಅನ್ಯೋನ್ಯರೊಡನೆ ಯುದ್ಧಮಾಡತೊಡಗಿದರು.
07012018a ತತಃ ಪ್ರವವೃತೇ ಯುದ್ಧಂ ತುಮುಲಂ ಲೋಮಹರ್ಷಣಂ|
07012018c ಪಾಂಡವಾನಾಂ ಕುರೂಣಾಂ ಚ ದ್ರೋಣಪಾಂಚಾಲ್ಯಯೋರಪಿ||
ಆಗ ಪಾಂಡವ-ಕೌರವರ ಮತ್ತು ದ್ರೋಣ-ಪಾಂಚಾಲ್ಯರ ರೋಮಾಂಚಕಾರಿ ತುಮುಲ ಯುದ್ಧವು ನಡೆಯಿತು.
07012019a ಯತಮಾನಾಃ ಪ್ರಯತ್ನೇನ ದ್ರೋಣಾನೀಕವಿಶಾತನೇ|
07012019c ನ ಶೇಕುಃ ಸೃಂಜಯಾ ರಾಜಂಸ್ತದ್ಧಿ ದ್ರೋಣೇನ ಪಾಲಿತಂ||
ರಾಜನ್! ದ್ರೋಣನ ಸೇನೆಯನ್ನು ನಾಶಗೊಳಿಸಲು ಪ್ರಯತ್ನಿಸಿದರೂ ದ್ರೋಣನಿಂದ ಪಾಲಿತವಾದ ಸೇನೆಯನ್ನು ವಿನಾಶಗೊಳಿಸಲು ಸೃಂಜಯರು ಶಕ್ಯರಾಗಲಿಲ್ಲ.
07012020a ತಥೈವ ತವ ಪುತ್ರಸ್ಯ ರಥೋದಾರಾಃ ಪ್ರಹಾರಿಣಃ|
07012020c ನ ಶೇಕುಃ ಪಾಂಡವೀಂ ಸೇನಾಂ ಪಾಲ್ಯಮಾನಾಂ ಕಿರೀಟಿನಾ||
ಹಾಗೆಯೇ ನಿನ್ನ ಮಗನ ರಥೋದಾರ ಪ್ರಹಾರಿಗಳೂ ಕೂಡ ಕಿರೀಟಿಯಿಂದ ಪಾಲಿತಗೊಂಡ ಪಾಂಡವರ ಸೇನೆಯನ್ನು ನಾಶಗೊಳಿಸಲು ಶಕ್ಯರಾಗಲಿಲ್ಲ.
07012021a ಆಸ್ತಾಂ ತೇ ಸ್ತಿಮಿತೇ ಸೇನೇ ರಕ್ಷ್ಯಮಾಣೇ ಪರಸ್ಪರಂ|
07012021c ಸಂಪ್ರಸುಪ್ತೇ ಯಥಾ ನಕ್ತಂ ವನರಾಜ್ಯೌ ಸುಪುಷ್ಪಿತೇ||
ರಾತ್ರಿವೇಳೆ ಸುಪುಷ್ಪಿತ ವನರಾಜಿಗಳು ಹಂದಾಡದೇ ನಿದ್ರಿಸುತ್ತಿರುವಂತೆ ಪರಸ್ಪರರಿಂದ ರಕ್ಷಿಸಲ್ಪಟ್ಟ ಆ ಸೇನೆಗಳು ಸ್ತಿಮಿತವಾಗಿಬಿಟ್ಟಿದ್ದವು.
07012022a ತತೋ ರುಕ್ಮರಥೋ ರಾಜನ್ನರ್ಕೇಣೇವ ವಿರಾಜತಾ|
07012022c ವರೂಥಿನಾ ವಿನಿಷ್ಪತ್ಯ ವ್ಯಚರತ್ಪೃತನಾಂತರೇ||
ಆಗ ರಾಜನ್! ರುಕ್ಮರಥ ದ್ರೋಣನು ಸೂರ್ಯನಂತೆ ವಿರಾಜಿಸುತ್ತಾ ಸೈನ್ಯದ ಗುಂಪಿನಿಂದ ಹೊರಬಂದು ಸೇನಾವಿಭಾಗಗಳ ಮುಂಭಾಗದಲ್ಲಿ ಸಂಚರಿಸತೊಡಗಿದನು.
07012023a ತಮುದ್ಯತಂ ರಥೇನೈಕಮಾಶುಕಾರಿಣಮಾಹವೇ|
07012023c ಅನೇಕಮಿವ ಸಂತ್ರಾಸಾನ್ಮೇನಿರೇ ಪಾಂಡುಸೃಂಜಯಾಃ||
ಆಹವದಲ್ಲಿ ಒಂದೇರಥದಲ್ಲಿ ಕುಳಿತು ಬಾಣಗಳ ಮಳೆಯನ್ನು ಅವ್ಯಾಹತವಾಗಿ ಸುರಿಸಲು ಅನೇಕ ದ್ರೋಣರು ತಮ್ಮೊಡನೆ ಹೋರಾಡುತ್ತಿರುವರೋ ಏನೋ ಎಂದು ಪಾಂಡು-ಸೃಂಜಯರು ಅಂದುಕೊಂಡರು.
07012024a ತೇನ ಮುಕ್ತಾಃ ಶರಾ ಘೋರಾ ವಿಚೇರುಃ ಸರ್ವತೋದಿಶಂ|
07012024c ತ್ರಾಸಯಂತೋ ಮಹಾರಾಜ ಪಾಂಡವೇಯಸ್ಯ ವಾಹಿನೀಂ||
ಮಹಾರಾಜ! ಅವನು ಬಿಟ್ಟ ಘೋರ ಶರಗಳು ಎಲ್ಲ ದಿಕ್ಕುಗಳಲ್ಲಿ ಹರಡಿ ಪಾಂಡವೇಯನ ಸೇನೆಯನ್ನು ಬಹುವಾಗಿ ಭಯಪಡಿಸಿದವು.
07012025a ಮಧ್ಯಂ ದಿನಮನುಪ್ರಾಪ್ತೋ ಗಭಸ್ತಿಶತಸಂವೃತಃ|
07012025c ಯಥಾದೃಶ್ಯತ ಘರ್ಮಾಂಶುಸ್ತಥಾ ದ್ರೋಣೋಽಪ್ಯದೃಶ್ಯತ||
ನೂರಾರು ಕಿರಣಗಳ ಸೂರ್ಯನು ಮಧ್ಯಾಹ್ನದ ಹೊತ್ತು ತನ್ನ ಉಷ್ಣತೆಯಿಂದ ಸುಡುವಂತೆ ದ್ರೋಣನು ಕಂಡನು.
07012026a ನ ಚೈನಂ ಪಾಂಡವೇಯಾನಾಂ ಕಶ್ಚಿಚ್ಚಕ್ನೋತಿ ಮಾರಿಷ|
07012026c ವೀಕ್ಷಿತುಂ ಸಮರೇ ಕ್ರುದ್ಧಂ ಮಹೇಂದ್ರಮಿವ ದಾನವಾಃ||
ಮಾರಿಷ! ಸಮರದಲ್ಲಿ ಕ್ರುದ್ಧನಾದ ಮಹೇಂದ್ರನನ್ನು ದಾನವರು ಹೇಗೋ ಹಾಗೆ ಅವನನ್ನು ನೋಡಲು ಪಾಂಡವರು ಯಾರೂ ಶಕ್ಯರಾಗಿರಲಿಲ್ಲ.
07012027a ಮೋಹಯಿತ್ವಾ ತತಃ ಸೈನ್ಯಂ ಭಾರದ್ವಾಜಃ ಪ್ರತಾಪವಾನ್|
07012027c ಧೃಷ್ಟದ್ಯುಮ್ನಬಲಂ ತೂರ್ಣಂ ವ್ಯಧಮನ್ನಿಶಿತೈಃ ಶರೈಃ||
ಪ್ರತಾಪವಾನ್ ಭಾರದ್ವಾಜನು ಬೇಗನೇ ಸೇನೆಗಳನ್ನು ಮೂರ್ಛೆಗೊಳಿಸಿ ಧೃಷ್ಟದ್ಯುಮ್ನನ ಸೇನೆಯನ್ನು ನಿಶಿತ ಶರಗಳಿಂದ ವಧಿಸಿದನು.
07012028a ಸ ದಿಶಃ ಸರ್ವತೋ ರುದ್ಧ್ವಾ ಸಂವೃತ್ಯ ಖಮಜಿಹ್ಮಗೈಃ|
07012028c ಪಾರ್ಷತೋ ಯತ್ರ ತತ್ರೈವ ಮಮೃದೇ ಪಾಂಡುವಾಹಿನೀಂ||
ಜಿಹ್ಮಗಗಳಿಂದ ಅವನು ಎಲ್ಲ ದಿಕ್ಕುಗಳನ್ನೂ ಆಕಾಶವನ್ನೂ ತುಂಬಿಸಿಬಿಟ್ಟನು. ಪಾರ್ಷತನು ಎಲ್ಲಿದ್ದನೋ ಅಲ್ಲಲ್ಲಿಯೇ ಪಾಂಡವ ವಾಹಿನಿಯನ್ನು ಮರ್ದಿಸಿದನು.”
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ದ್ರೋಣಾಭಿಷೇಕ ಪರ್ವಣಿ ಅರ್ಜುನಕೃತಯುಧಿಷ್ಠಿರಾಶ್ವಾಸನೇ ದ್ವಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ದ್ರೋಣಾಭಿಷೇಕ ಪರ್ವದಲ್ಲಿ ಅರ್ಜುನಕೃತಯುಧಿಷ್ಠಿರಾಶ್ವಾಸನ ಎನ್ನುವ ಹನ್ನೆರಡನೇ ಅಧ್ಯಾಯವು.