ತ್ರಿತಾಖ್ಯಾನ
ತ್ರಿತಾಖ್ಯಾನ ಪೂರ್ವಯುಗದಲ್ಲಿ ಆದಿತ್ಯಸನ್ನಿಭರಾದ ಮೂವರು ಸಹೋದರ ಮುನಿಗಳಿದ್ದರು: ಏಕತ, ದ್ವಿತ ಮತ್ತು ತ್ರಿತ. ಅವರೆಲ್ಲರೂ ಪ್ರಜಾಪತಿಯ ಸಮನಾಗಿದ್ದರು ಮತ್ತು ಹಾಗೆಯೇ ಪ್ರಜಾವಂತರಾಗಿದ್ದರು. ತಪಸ್ಸಿನಿಂದಾಗಿ ಎಲ್ಲರೂ ಬ್ರಹ್ಮಲೋಕವನ್ನು ಗೆದ್ದ ಬ್ರಹ್ಮವಾದಿಗಳಾಗಿದ್ದರು. ಸದಾ ಧರ್ಮರತನಾಗಿದ್ದ ಅವರ ತಂದೆ ಗೌತಮನು ಅವರ ತಪಸ್ಸು-ನಿಯಮ-ದಮಗಳಿಂದ ಪ್ರೀತನಾಗಿದ್ದನು. ದೀರ್ಘಕಾಲದವರೆಗೆ ಅವರಿಗೆ ಪ್ರೀತಿಯನ್ನಿತ್ತು ಭಗವಾನ್ ಗೌತಮನು ತನಗೆ ಅನುರೂಪ ಸ್ಥಾನಕ್ಕೆ ಹೊರಟುಹೋದನು. ಅವನು ಸ್ವರ್ಗಕ್ಕೆ ಹೋಗಲು ಆ ಮಹಾತ್ಮನಿಂದ ಮೊದಲು ಯಜ್ಞಯಾಗಾದಿಗಳನ್ನು ನಡೆಸಿಕೊಳ್ಳುತ್ತಿದ್ದ ರಾಜರುಗಳು ಅವನ ಪುತ್ರರನ್ನು ಗೌರವಿಸತೊಡಗಿದರು.…