ಭೀಷ್ಮ ಪರ್ವ:ಭಗವದ್ಗೀತಾ ಪರ್ವ
೩೯
ಶ್ರದ್ಧಾತ್ರಯವಿಭಾಗ ಯೋಗ
06039001 ಅರ್ಜುನ ಉವಾಚ|
06039001a ಯೇ ಶಾಸ್ತ್ರವಿಧಿಮುತ್ಸೃಜ್ಯ ಯಜಂತೇ ಶ್ರದ್ಧಯಾನ್ವಿತಾಃ|
06039001c ತೇಷಾಂ ನಿಷ್ಠಾ ತು ಕಾ ಕೃಷ್ಣ ಸತ್ತ್ವಮಾಹೋ ರಜಸ್ತಮಃ||
ಅರ್ಜುನನು ಹೇಳಿದನು: “ಕೃಷ್ಣ! ಶಾಸ್ತ್ರವಿಧಿಗಳನ್ನು ಬಿಟ್ಟು ಶ್ರದ್ಧಾನ್ವಿತರಾಗಿ ನಿನ್ನನ್ನು ಪೂಜಿಸುವವರ ನಿಷ್ಠೆಯಂಥಹುದು - ಸತ್ತ್ವವೋ, ರಜವೋ ಅಥವಾ ತಮವೋ?”
06039002 ಶ್ರೀಭಗವಾನುವಾಚ|
06039002a ತ್ರಿವಿಧಾ ಭವತಿ ಶ್ರದ್ಧಾ ದೇಹಿನಾಂ ಸಾ ಸ್ವಭಾವಜಾ|
06039002c ಸಾತ್ತ್ವಿಕೀ ರಾಜಸೀ ಚೈವ ತಾಮಸೀ ಚೇತಿ ತಾಂ ಶೃಣು||
ಶ್ರೀಭಗವಾನನು ಹೇಳಿದನು: “ಸ್ವಭಾವದಿಂದ ಹುಟ್ಟುವ ದೇಹಿಗಳ ಆ ಶ್ರದ್ಧೆಯು ಮೂರು ವಿಧವಾಗಿರುತ್ತದೆ - ಸಾತ್ತ್ವಿಕೀ, ರಾಜಸೀ ಮತ್ತು ತಾಮಸೀ. ಅದರ ಕುರಿತು ಕೇಳು.
06039003a ಸತ್ತ್ವಾನುರೂಪಾ ಸರ್ವಸ್ಯ ಶ್ರದ್ಧಾ ಭವತಿ ಭಾರತ|
06039003c ಶ್ರದ್ಧಾಮಯೋಽಯಂ ಪುರುಷೋ ಯೋ ಯಚ್ಛ್ರದ್ಧಃ ಸ ಏವ ಸಃ||
ಭಾರತ! ಎಲ್ಲರ ಶ್ರದ್ಧೆಯೂ ಸತ್ತ್ವಾನುರೂಪವಾಗಿರುತ್ತದೆ. ಶ್ರದ್ಧಾಮಯನಾದ ಇವನು ಪುರುಷನು. ಯಾರಿಗೆ ಯಾವುದರಲ್ಲಿ ಶ್ರದ್ಧೆಯಿರುತ್ತದೆಯೋ ಅವರು ಅದೇ ಆಗುತ್ತಾರೆ.
06039004a ಯಜಂತೇ ಸಾತ್ತ್ವಿಕಾ ದೇವಾನ್ಯಕ್ಷರಕ್ಷಾಂಸಿ ರಾಜಸಾಃ|
06039004c ಪ್ರೇತಾನ್ಭೂತಗಣಾಂಶ್ಚಾನ್ಯೇ ಯಜಂತೇ ತಾಮಸಾ ಜನಾಃ||
ಸಾತ್ತ್ವಿಕರು ದೇವತೆಗಳನ್ನು, ರಾಜಸರು ಯಕ್ಷ-ರಾಕ್ಷಸರನ್ನು ಮತ್ತು ತಾಮಸ ಜನರು ಪ್ರೇತ-ಭೂತಗಣಗಳು ಮತ್ತು ಇತರರನ್ನು ಪೂಜಿಸುತ್ತಾರೆ.
06039005a ಅಶಾಸ್ತ್ರವಿಹಿತಂ ಘೋರಂ ತಪ್ಯಂತೇ ಯೇ ತಪೋ ಜನಾಃ|
06039005c ದಂಭಾಹಂಕಾರಸಂಯುಕ್ತಾಃ ಕಾಮರಾಗಬಲಾನ್ವಿತಾಃ||
06039006a ಕರ್ಶಯಂತಃ ಶರೀರಸ್ಥಂ ಭೂತಗ್ರಾಮಮಚೇತಸಃ|
06039006c ಮಾಂ ಚೈವಾಂತಃಶರೀರಸ್ಥಂ ತಾನ್ವಿದ್ಧ್ಯಾಸುರನಿಶ್ಚಯಾನ್||
ದಂಭಾಹಂಕಾರ ಸಂಯುಕ್ತರಾಗಿ, ಕಾಮರಾಗಬಲಾನ್ವಿತರಾಗಿ, ಶರೀರದಲ್ಲಿರುವ ಭೂತಗ್ರಾಮಗಳನ್ನೂ, ಶರೀರಸ್ಥನಾಗಿರುವ ನನ್ನನ್ನೂ ಒಣಗಿಸಿ ಅಚೇತಸರನ್ನಾಗಿಸಿ ಶಾಸ್ತ್ರವಿಹಿತವಲ್ಲದ ಘೋರ ತಪಸ್ಸನ್ನು ತಪಿಸುವ ಜನರು ಅಸುರ ನಿಶ್ಚಯರೆಂದು ತಿಳಿ.
06039007a ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ|
06039007c ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು||
ಎಲ್ಲರಿಗೂ ಪ್ರಿಯವಾಗಿರುವ ಆಹಾರವೂ, ಯಜ್ಞ-ತಪಸ್ಸು-ದಾನಗಳೂ ಮೂರುವಿಧಗಳಾಗಿವೆ. ಅವುಗಳ ಭೇದವನ್ನು ಕೇಳು.
06039008a ಆಯುಃಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ|
06039008c ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತ್ವಿಕಪ್ರಿಯಾಃ||
ಆಯುಸ್ಸು, ಸತ್ತ್ವ, ಬಲ, ಆರೋಗ್ಯ, ಸುಖ ಮತ್ತು ಪ್ರೀತಿಗಳನ್ನು ವರ್ಧಿಸುವ, ರಸವತ್ತಾದ, ಜಿಡ್ಡುಳ್ಳ, ದೇಹದಲ್ಲಿ ಬಹುಕಾಲವಿರುವ, ಹೃದಯಕ್ಕೆ ಇಷ್ಟವಾಗುವ ಆಹಾರಗಳು ಸಾತ್ತ್ವಿಕನಿಗೆ ಪ್ರಿಯವಾದವುಗಳು.
06039009a ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ|
06039009c ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ||
ಅತಿಯಾಗಿ ಕಟು, ಆಮ್ಲ, ಲವಣ, ಉಷ್ಣ, ತೀಕ್ಷ್ಣ, ರೂಕ್ಷ (ಒಣಗಿರುವ) ಮತ್ತು ಖಾರವಾಗಿರುವ ಆಹಾರವು ರಾಜಸರಿಗೆ ಇಷ್ಟವಾದವು. ಇವು ದುಃಖ, ಶೋಕ, ಅನಾರೋಗ್ಯಗಳನ್ನು ಕೊಡುತ್ತವೆ.
06039010a ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್|
06039010c ಉಚ್ಛಿಷ್ಟಮಪಿ ಚಾಮೇಧ್ಯಂ ಭೋಜನಂ ತಾಮಸಪ್ರಿಯಂ||
ಸ್ವಲ್ಪವಾಗಿ ಬೆಂದಿರುವ, ಸಾರವಿಲ್ಲದ, ಕೆಟ್ಟ ವಾಸನೆಯ, ಹಳಸಿದ (ಬೇಯಿಸಿದ ನಂತರ ಒಂದು ರಾತ್ರಿಯನ್ನು ಕಳೆದ), ಊಟಮಾಡಿ ಮಿಕ್ಕಿದ್ದ, ಯಜ್ಞಕ್ಕೆ ತಕ್ಕುದಲ್ಲದ ಭೋಜನವು ತಾಮಸರಿಗೆ ಪ್ರಿಯವಾಗಿರುತ್ತದೆ.
06039011a ಅಫಲಾಕಾಂಕ್ಷಿಭಿರ್ಯಜ್ಞೋ ವಿಧಿದೃಷ್ಟೋ ಯ ಇಜ್ಯತೇ|
06039011c ಯಷ್ಟವ್ಯಮೇವೇತಿ ಮನಃ ಸಮಾಧಾಯ ಸ ಸಾತ್ತ್ವಿಕಃ||
ಯಾಗವನ್ನು ಮಾಡಲೇ ಬೇಕೆಂದು ಮನಸ್ಸನ್ನು ಸಮಾಧಾನಗೊಳಿಸಿಕೊಂಡು ಫಲಾಕಾಂಕ್ಷಿಗಳಾಗಿರದವರಿಂದ ವಿಧಿಧೃಷ್ಟವಾಗಿ ನಡೆಸಿದ ಯಜ್ಞವು ಸಾತ್ವಿಕವು.
06039012a ಅಭಿಸಂಧಾಯ ತು ಫಲಂ ದಂಭಾರ್ಥಮಪಿ ಚೈವ ಯತ್|
06039012c ಇಜ್ಯತೇ ಭರತಶ್ರೇಷ್ಠ ತಂ ಯಜ್ಞಂ ವಿದ್ಧಿ ರಾಜಸಂ||
ಭರತಶ್ರೇಷ್ಠ! ಆದರೆ ಫಲವನ್ನೇ ಮನಸ್ಸಿನಲ್ಲಿಟ್ಟುಕೊಂಡು, ತೋರಿಸುವುದಕ್ಕಾಗಿ ಮಾಡುವ ಯಜ್ಞವು ರಾಜಸವೆಂದು ತಿಳಿ.
06039013a ವಿಧಿಹೀನಮಸೃಷ್ಟಾನ್ನಂ ಮಂತ್ರಹೀನಮದಕ್ಷಿಣಂ|
06039013c ಶ್ರದ್ಧಾವಿರಹಿತಂ ಯಜ್ಞಂ ತಾಮಸಂ ಪರಿಚಕ್ಷತೇ||
ವಿಧಿಗಳಿಲ್ಲದೇ, ಕರೆದು ಆಹಾರವನ್ನು ನೀಡದೇ, ಮಂತ್ರಗಳಿಲ್ಲದೇ, ದಕ್ಷಿಣೆಗಳಿಲ್ಲದೇ, ಶ್ರದ್ಧೆಯಿಲ್ಲದೇ ನಡೆಸಿದ ಯಜ್ಞವು ತಾಮಸವೆಂದೆನಿಸಿಕೊಳ್ಳುತ್ತದೆ.
06039014a ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಂ|
06039014c ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ||
ದೇವ-ದ್ವಿಜ-ಗುರು-ಪ್ರಾಜ್ಞರ ಪೂಜನ, ಶೌಚ, ಆರ್ಜವ, ಬ್ರಹ್ಮಚರ್ಯ, ಮತ್ತು ಅಹಿಂಸೆಗಳನ್ನು ಶಾರೀರ ತಪಸ್ಸು ಎನ್ನುವರು.
06039015a ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|
06039015c ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯಂ ತಪ ಉಚ್ಯತೇ||
ಉದ್ವೇಗಕರವಲ್ಲದ, ಸತ್ಯವೂ, ಪ್ರಿಯಹಿತವೂ ಆಗಿರುವ ವಾಕ್ಯ, ಸ್ವಾಧ್ಯಾಯ ಅಭ್ಯಾಸಗಳನ್ನು ವಾಙ್ಮಯ ತಪಸ್ಸೆಂದು ಹೇಳುತ್ತಾರೆ.
06039016a ಮನಃಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ|
06039016c ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ||
ಮನಃಪ್ರಸನ್ನತೆ, ಸೌಮ್ಯತ್ವ, ಮೌನ, ಆತ್ಮವಿನಿಗ್ರಹ, ಭಾವಸಂಶುದ್ಧಿ, ಇವು ಮನಸ್ಸಿನ ತಪಸ್ಸುಗಳೆಂದು ಕರೆಯಲ್ಪಡುತ್ತವೆ.
06039017a ಶ್ರದ್ಧಯಾ ಪರಯಾ ತಪ್ತಂ ತಪಸ್ತತ್ತ್ರಿವಿಧಂ ನರೈಃ|
06039017c ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ತ್ವಿಕಂ ಪರಿಚಕ್ಷತೇ||
ಈ ಮೂರೂವಿಧದ ತಪಸ್ಸುಗಳನ್ನು ಫಲಾಕಾಂಕ್ಷಿಗಳಾಗಿರದ ನರರಿಂದ ತಪಿಸಲ್ಪಟ್ಟರೆ ಅದು ಸಾತ್ತ್ವಿಕ ಎಂದೆನಿಸಿಕೊಳ್ಳುತ್ತದೆ.
06039018a ಸತ್ಕಾರಮಾನಪೂಜಾರ್ಥಂ ತಪೋ ದಂಭೇನ ಚೈವ ಯತ್|
06039018c ಕ್ರಿಯತೇ ತದಿಹ ಪ್ರೋಕ್ತಂ ರಾಜಸಂ ಚಲಮಧ್ರುವಂ||
ಸತ್ಕಾರ-ಮಾನ-ಪೂಜನೆಗಳಿಗಾಗಿ, ತೋರಿಸುವುದಕ್ಕೂ ಮಾಡುವ ಈ ತಪಸ್ಸುಗಳನ್ನು ಚಲಿಸುವ, ಸ್ಥಿರವಲ್ಲದ ರಾಜಸವೆಂದು ಹೇಳುತ್ತಾರೆ.
06039019a ಮೂಢಗ್ರಾಹೇಣಾತ್ಮನೋ ಯತ್ಪೀಡಯಾ ಕ್ರಿಯತೇ ತಪಃ|
06039019c ಪರಸ್ಯೋತ್ಸಾದನಾರ್ಥಂ ವಾ ತತ್ತಾಮಸಮುದಾಹೃತಂ||
ಮೂಢ ವಿಶ್ವಾಸದಿಂದ, ತನಗೇ ತೊಂದರೆಯನ್ನು ಮಾಡಿಕೊಂಡು ಅಥವಾ ಇನ್ನೊಬ್ಬರನ್ನು ಹಾಳುಮಾಡುವುದಕ್ಕಾಗಿ ಮಾಡುವ ತಪಸ್ಸು ತಾಮಸವೆಂದೆನಿಸಿಕೊಳ್ಳುತ್ತದೆ.
06039020a ದಾತವ್ಯಮಿತಿ ಯದ್ದಾನಂ ದೀಯತೇಽನುಪಕಾರಿಣೇ|
06039020c ದೇಶೇ ಕಾಲೇ ಚ ಪಾತ್ರೇ ಚ ತದ್ದಾನಂ ಸಾತ್ತ್ವಿಕಂ ಸ್ಮೃತಂ||
ದಾನಮಾಡಬೇಕೆಂದು, ಪ್ರತಿಯಾಗಿ ಉಪಕಾರಮಾಡಲು ಶಕ್ತನಿಲ್ಲದಿರುವವನಿಗೆ, ಶಕ್ತನಾಗಿದ್ದರೂ ಯಾವ ಅಪೇಕ್ಷೆಯೂ ಇಲ್ಲದೇ, ಸರಿಯಾದ ದೇಶ-ಕಾಲಗಳಲ್ಲಿ ಪಾತ್ರನಿಗೆ ಕೊಡುವ ದಾನವು ಸಾತ್ತ್ವಿಕವೆಂದೆನಿಸಿಕೊಳ್ಳುತ್ತದೆ.
06039021a ಯತ್ತು ಪ್ರತ್ಯುಪಕಾರಾರ್ಥಂ ಫಲಮುದ್ದಿಶ್ಯ ವಾ ಪುನಃ|
06039021c ದೀಯತೇ ಚ ಪರಿಕ್ಲಿಷ್ಟಂ ತದ್ದಾನಂ ರಾಜಸಂ ಸ್ಮೃತಂ||
ಆದರೆ ಪ್ರತ್ಯುಪಕಾರವನ್ನು ಪಡೆಯಲೋಸುಗ, ಅಥವ ಪುನಃ ಫಲವನ್ನು ಉದ್ದೇಶಿಸಿ, ಕಷ್ಟಪಟ್ಟು ಕೊಡುವ ದಾನವು ರಾಜಸವೆಂದೆನಿಸಿಕೊಳ್ಳುತ್ತದೆ.
06039022a ಅದೇಶಕಾಲೇ ಯದ್ದಾನಮಪಾತ್ರೇಭ್ಯಶ್ಚ ದೀಯತೇ|
06039022c ಅಸತ್ಕೃತಮವಜ್ಞಾತಂ ತತ್ತಾಮಸಮುದಾಹೃತಂ||
ಸರಿಯಾಗಿಲ್ಲದ ದೇಶ-ಕಾಲಗಳಲ್ಲಿ, ಅಪಾತ್ರನಿಗೆ, ಸತ್ಕಾರಗಳಿಲ್ಲದೇ, ಅವಹೇಳನೆ ಮಾಡುತ್ತಾ ಕೊಡುವ ದಾನವು ತಾಮಸದ ಉದಾಹರಣೆಯು.
06039023a ಓಂ ತತ್ಸದಿತಿ ನಿರ್ದೇಶೋ ಬ್ರಹ್ಮಣಸ್ತ್ರಿವಿಧಃ ಸ್ಮೃತಃ|
06039023c ಬ್ರಾಹ್ಮಣಾಸ್ತೇನ ವೇದಾಶ್ಚ ಯಜ್ಞಾಶ್ಚ ವಿಹಿತಾಃ ಪುರಾ||
ಓಂ, ತತ್ ಮತ್ತು ಸತ್ ಎಂದು ಬ್ರಹ್ಮಕ್ಕೆ ಮೂರು ವಿಧದ ನಿರ್ದೇಶಗಳನ್ನು ಹೇಳಿದ್ದಾರೆ. ಹಿಂದೆ ಇವುಗಳಿಂದಲೇ ಬ್ರಾಹ್ಮಣರನ್ನೂ, ವೇದಗಳನ್ನೂ, ಯಜ್ಞಗಳನ್ನೂ ಮಾಡಲಾಗಿತ್ತು.
06039024a ತಸ್ಮಾದೋಂ ಇತ್ಯುದಾಹೃತ್ಯ ಯಜ್ಞದಾನತಪಃಕ್ರಿಯಾಃ|
06039024c ಪ್ರವರ್ತಂತೇ ವಿಧಾನೋಕ್ತಾಃ ಸತತಂ ಬ್ರಹ್ಮವಾದಿನಾಂ||
ಆದುದರಿಂದ ಬ್ರಹ್ಮವಾದಿಗಳ ವಿಧಾನೋಕ್ತ ಯಜ್ಞ-ದಾನ-ತಪಃ-ಕ್ರಿಯೆಗಳು ಓಂ ಎಂದು ಹೇಳಿಯೇ ಪ್ರಾರಂಭವಾಗುತ್ತವೆ.
06039025a ತದಿತ್ಯನಭಿಸಂಧಾಯ ಫಲಂ ಯಜ್ಞತಪಃಕ್ರಿಯಾಃ|
06039025c ದಾನಕ್ರಿಯಾಶ್ಚ ವಿವಿಧಾಃ ಕ್ರಿಯಂತೇ ಮೋಕ್ಷಕಾಂಕ್ಷಿಭಿಃ||
ತತ್ ಎಂದು ಹೇಳಿ ಫಲವನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ಮೋಕ್ಷಕಾಂಕ್ಷಿಗಳು ವಿವಿಧ ಯಜ್ಞ-ತಪಸ್ಸು-ಕ್ರಿಯೆಗಳನ್ನೂ ದಾನಕ್ರಿಯೆಗಳನ್ನೂ ಮಾಡುತ್ತಾರೆ.
06039026a ಸದ್ಭಾವೇ ಸಾಧುಭಾವೇ ಚ ಸದಿತ್ಯೇತತ್ಪ್ರಯುಜ್ಯತೇ|
06039026c ಪ್ರಶಸ್ತೇ ಕರ್ಮಣಿ ತಥಾ ಸಚ್ಛಬ್ದಃ ಪಾರ್ಥ ಯುಜ್ಯತೇ||
ಪಾರ್ಥ! ಸತ್ ಎನ್ನುವುದು ಸದ್ಭಾವದಲ್ಲಿಯೂ, ಸಾಧುಭಾವಲ್ಲಿಯೂ ಬಳಕೆಯಾಗುತ್ತದೆ. ಮತ್ತು ಪ್ರಶಸ್ತವಾದ ಕರ್ಮಗಳಲ್ಲಿ ಸತ್ ಶಬ್ಧವು ಪ್ರಯೋಗವಾಗುತ್ತದೆ.
06039027a ಯಜ್ಞೇ ತಪಸಿ ದಾನೇ ಚ ಸ್ಥಿತಿಃ ಸದಿತಿ ಚೋಚ್ಯತೇ|
06039027c ಕರ್ಮ ಚೈವ ತದರ್ಥೀಯಂ ಸದಿತ್ಯೇವಾಭಿಧೀಯತೇ||
ಯಜ್ಞ, ತಪಸ್ಸು ಮತ್ತು ದಾನಗಳಲ್ಲಿ ನೆಲೆಸಿರುವುದನ್ನು ಸತ್ ಎನ್ನುತ್ತಾರೆ. ಅದೇ ಅರ್ಥದಲ್ಲಿ ಮಾಡುವ ಕರ್ಮಗಳೂ ಸತ್ ಎಂದೇ ಹೇಳಲ್ಪಡುತ್ತದೆ.
06039028a ಅಶ್ರದ್ಧಯಾ ಹುತಂ ದತ್ತಂ ತಪಸ್ತಪ್ತಂ ಕೃತಂ ಚ ಯತ್|
06039028c ಅಸದಿತ್ಯುಚ್ಯತೇ ಪಾರ್ಥ ನ ಚ ತತ್ಪ್ರೇತ್ಯ ನೋ ಇಹ||
ಪಾರ್ಥ! ಶ್ರದ್ಧೆಯಿಲ್ಲದೇ ನೀಡಿದ ಆಹುತಿ, ಕೊಟ್ಟ ದಾನ, ತಪಿಸಿದ ತಪಸ್ಸು, ಮತ್ತು ಮಾಡಿದ ಯಾವುದೂ ಅಸತ್ ಎಂದೆನಿಸಿಕೊಳ್ಳುತ್ತದೆ. ಅದು ಸತ್ತಮೇಲೂ ಇರುವುದಿಲ್ಲ. ಇಲ್ಲಿಯೂ ಇರುವುದಿಲ್ಲ.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಶ್ರದ್ಧಾತ್ರಯವಿಭಾಗಯೋಗೋ ನಾಮ ಸಪ್ತದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಶ್ರದ್ಧಾತ್ರಯವಿಭಾಗಯೋಗವೆಂಬ ಹದಿನೇಳನೇ ಅಧ್ಯಾಯವು.
ಭೀಷ್ಮ ಪರ್ವಣಿ ಏಕಾನಚತ್ವಾರಿಂಶೋಽಧ್ಯಾಯಃ||
ಭೀಷ್ಮ ಪರ್ವದಲ್ಲಿ ಮೂವತ್ತೊಂಭತ್ತನೇ ಅಧ್ಯಾಯವು.