Bhishma Parva: Chapter 37

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೭

ಪುರುಷೋತ್ತಮ ಯೋಗ

06037001 ಶ್ರೀಭಗವಾನುವಾಚ|

06037001a ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಂ|

06037001c ಚಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್||

ಶ್ರೀಭಗವಾನನು ಹೇಳಿದನು: “ಮೇಲುಗಡೆ ಬೇರುಗಳುಳ್ಳ ಮತ್ತು ಕೆಳಗಡೆ ರೆಂಬೆಗಳುಳ್ಳ ಅಶ್ವತ್ಥವು ಅವ್ಯಯ ಎನ್ನುತ್ತಾರೆ. ಅದರ ಎಲೆಗಳು ಛಂದಸ್ಸುಗಳು. ಇದನ್ನು ತಿಳಿದುಕೊಂಡವನೇ ವೇದವನ್ನು ಬಲ್ಲವನು.

06037002a ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ

         ಗುಣಪ್ರವೃದ್ಧಾ ವಿಷಯಪ್ರವಾಲಾಃ|

06037002c ಅಧಶ್ಚ ಮೂಲಾನ್ಯನುಸಂತತಾನಿ

         ಕರ್ಮಾನುಬಂಧೀನಿ ಮನುಷ್ಯಲೋಕೇ||

ಕೆಳಕ್ಕೂ ಮೇಲಕ್ಕೂ ಅದರ ಶಾಖೆಗಳು ಹಬ್ಬಿಕೊಂಡಿರುತ್ತವೆ. ಗುಣಗಳಿಂದ ಬೆಳೆಯುವ ಅದರಲ್ಲಿ ವಿಷಯಗಳು ಚಿಗುರುಗಳು. ಮನುಷ್ಯಲೋಕದಲ್ಲಿ ಕರ್ಮಾನುಬಂಧಗಳೇ ವ್ಯಾಪಿಸಿಕೊಂಡಿರುವ ಬೇರುಗಳು.

06037003a ನ ರೂಪಮಸ್ಯೇಹ ತಥೋಪಲಭ್ಯತೇ

         ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ|

06037003c ಅಶ್ವತ್ಥಮೇನಂ ಸುವಿರೂಢಮೂಲಂ

         ಅಸಂಗಶಸ್ತ್ರೇಣ ದೃಢೇನ ಚಿತ್ತ್ವಾ||

06037004a ತತಃ ಪದಂ ತತ್ಪರಿಮಾರ್ಗಿತವ್ಯಂ

         ಯಸ್ಮಿನ್ಗತಾ ನ ನಿವರ್ತಂತಿ ಭೂಯಃ|

06037004c ತಮೇವ ಚಾದ್ಯಂ ಪುರುಷಂ ಪ್ರಪದ್ಯೇ

         ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ||

ಇಲ್ಲಿ ಇದರ ರೂಪವು ಹಾಗೆಯೇ ಕಾಣಬರುವುದಿಲ್ಲ. ಇದಕ್ಕೆ ಅಂತವಾಗಲೀ, ಆದಿಯಾಗಲೀ, ನೆಲೆಯಾಗಲೀ ಇಲ್ಲ. ಚೆನ್ನಾಗಿ ಗಟ್ಟಿಯಾಗಿ ಬೇರೂರಿರುವ ಈ ಅಶ್ವತ್ಥವನ್ನು ದೃಢತೆ ಮತ್ತು ಅಸಂಗಗಳೆಂಬ ಶಸ್ತ್ರಗಳಿಂದ ಕತ್ತರಿಸಿ, ಹೋದರೆ ಪುನಃ ಹಿಂದಿರುಗಿ ಬರಲಾರದದಂತಹ ಆ ಪದದ ಕಡೆ ಪ್ರಯಾಣಿಸಬೇಕು. ಹಿಂದೆ ಯಾವಾತನಿಂದ ಹೊರಟು ಬಂದಿರುವೆಯೋ ಅದೇ ಆದ್ಯ ಪುರುಷನನ್ನು ಶರಣುಹೋಗಬೇಕು,

06037005a ನಿರ್ಮಾನಮೋಹಾ ಜಿತಸಂಗದೋಷಾ

         ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ|

06037005c ದ್ವಂದ್ವೈರ್ವಿಮುಕ್ತಾಃ ಸುಖದುಃಖಸಂಜ್ಞೈರ್

         ಗಚ್ಛಂತ್ಯಮೂಢಾಃ ಪದಮವ್ಯಯಂ ತತ್||

ಮಾನ-ಮೋಹಗಳಿಲ್ಲದವರು, ಸಂಗದೋಷಗಳನ್ನು ಗೆದ್ದವರು, ಆಧ್ಯಾತ್ಮನಿತ್ಯರು, ಕಾಮಗಳನ್ನು ಕಳೆದುಕೊಂಡವರು, ದ್ವಂದ್ವಗಳಿಂದ ಮತ್ತು ಸುಖ-ದುಃಖಗಳಿಂದ ವಿಮುಕ್ತರಾದವರು, ಮತ್ತು ಅಮೂಢರು ಆ ಅವ್ಯಯ ಪದವನ್ನು ಸೇರುತ್ತಾರೆ.

06037006a ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ|

06037006c ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ||

ಅಲ್ಲಿ ಸೂರ್ಯನೂ ಬೆಳಗುವುದಿಲ್ಲ. ಚಂದ್ರನೂ ಬೆಳಗುವುದಿಲ್ಲ. ಪಾವಕನೂ ಬೆಳಗುವುದಿಲ್ಲ. ಹೋದ ಸ್ಥಾನದಿಂದ ಹಿಂದಿರುಗದಿರುವ ಅದೇ ನನ್ನ ಪರಮ ಧಾಮವು.

06037007a ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ|

06037007c ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ||

ನನ್ನ ಸನಾತನ ಅಂಶವು ಜೀವಲೋಕದಲ್ಲಿ ಜೀವಭೂತವಾಗಿ ಪ್ರಕೃತಿಯಲ್ಲಿರುವ ಮನಸ್ಸು ಮತ್ತು ಆರು ಇಂದ್ರಿಯಗಳನ್ನು ಸೆಳೆದುಕೊಳ್ಳುತ್ತದೆ.

06037008a ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ಕ್ರಾಮತೀಶ್ವರಃ|

06037008c ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾಶಯಾತ್||

ಈಶ್ವರನು ಶರೀರವನ್ನು ಪಡೆಯುವಾಗ ಮತ್ತು ಶರೀರವನ್ನು ತೊರೆಯುವಾಗ ವಾಯುವು ಗಂಧಗಳನ್ನು ಕೊಂಡೊಯ್ಯುವಂತೆ ಇವುಗಳನ್ನು ಹೊತ್ತುಕೊಂಡು ಹೋಗುತ್ತಾನೆ.

06037009a ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ|

06037009c ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ||

ಕಿವಿ, ಕಣ್ಣು, ಸ್ಪರ್ಶ, ರಸ, ಘ್ರಾಣ ಮತ್ತು ಮನಸ್ಸುಗಳಲ್ಲಿ ಇದ್ದುಕೊಂಡು ವಿಷಯಗಳನ್ನು ಉಪಸೇವಿಸುತ್ತಾನೆ.

06037010a ಉತ್ಕ್ರಾಮಂತಂ ಸ್ಥಿತಂ ವಾಪಿ ಭುಂಜಾನಂ ವಾ ಗುಣಾನ್ವಿತಂ|

06037010c ವಿಮೂಢಾ ನಾನುಪಶ್ಯಂತಿ ಪಶ್ಯಂತಿ ಜ್ಞಾನಚಕ್ಷುಷಃ||

ಬಿಟ್ಟುಹೋಗುವಾಗ, ಇರುವಾಗ, ಅಥವಾ ಗುಣಾನ್ವಿತನಾಗಿ ಭೋಗಿಸುವಾಗಲೂ ಕೂಡ ವಿಮೂಢರು ಇವನನ್ನು ಕಾಣುವುದಿಲ್ಲ. ಆದರೆ ಜ್ಞಾನದೃಷ್ಟಿಯಿರುವವರು ಇವನನ್ನು ನೋಡುತ್ತಾರೆ.

06037011a ಯತಂತೋ ಯೋಗಿನಶ್ಚೈನಂ ಪಶ್ಯಂತ್ಯಾತ್ಮನ್ಯವಸ್ಥಿತಂ|

06037011c ಯತಂತೋಽಪ್ಯಕೃತಾತ್ಮಾನೋ ನೈನಂ ಪಶ್ಯಂತ್ಯಚೇತಸಃ||

ಪ್ರಯತ್ನಿಸುತ್ತಿರುವ ಯೋಗಿಗಳು ಈತನು ತಮ್ಮಲ್ಲಿರುವುದನ್ನು ಕಂಡುಕೊಳ್ಳುವರು. ಅಕೃತಾತ್ಮರು ಪ್ರಯತ್ನಿಸಿದರೂ, ಅಚೇತಸರಾಗಿರುವುದರಿಂದ ಇವನನ್ನು ಕಾಣದೇ ಇರುವರು.

06037012a ಯದಾದಿತ್ಯಗತಂ ತೇಜೋ ಜಗದ್ಭಾಸಯತೇಽಖಿಲಂ|

06037012c ಯಚ್ಚಂದ್ರಮಸಿ ಯಚ್ಚಾಗ್ನೌ ತತ್ತೇಜೋ ವಿದ್ಧಿ ಮಾಮಕಂ||

ಯಾವ ತೇಜಸ್ಸು ಆದಿತ್ಯನಲ್ಲಿದ್ದುಕೊಂಡು ಅಖಿಲ ಜಗತ್ತನ್ನೂ ಬೆಳಗುತ್ತದೆಯೋ, ಯಾವುದು ಚಂದ್ರ ಮತ್ತು ಅಗ್ನಿಗಳಲ್ಲಿ ಇದೆಯೋ ಆ ತೇಜಸ್ಸು ನನ್ನದೆಂದು ತಿಳಿ.

06037013a ಗಾಮಾವಿಶ್ಯ ಚ ಭೂತಾನಿ ಧಾರಯಾಮ್ಯಹಮೋಜಸಾ|

06037013c ಪುಷ್ಣಾಮಿ ಚೌಷಧೀಃ ಸರ್ವಾಃ ಸೋಮೋ ಭೂತ್ವಾ ರಸಾತ್ಮಕಃ||

ನಾನು ಭೂಮಿಯನ್ನು ಹೊಕ್ಕು ಓಜಸ್ಸಿನಿಂದ ಭೂತಗಳನ್ನು ಪೊರೆಯುತ್ತೇನೆ. ರಸಾತ್ಮಕನಾದ ಸೋಮನಾಗಿ ಸರ್ವ ಔಷಧಿಗಳನ್ನೂ ಪೋಷಿಸುತ್ತೇನೆ.

06037014a ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ|

06037014c ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ||

ನಾನು ಪ್ರಾಣಿಗಳ ದೇಹವನ್ನು ಆಶ್ರಯಿಸಿರುವ ವೈಶ್ವಾನರನಾಗಿ ಪ್ರಾಣಾಪಾನಸಮಾಯುಕ್ತನಾಗಿ ಚತುರ್ವಿಧ ಅನ್ನವನ್ನು ಪಚನಮಾಡುತ್ತೇನೆ.

06037015a ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ

         ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ|

06037015c ವೇದೈಶ್ಚ ಸರ್ವೈರಹಮೇವ ವೇದ್ಯೋ

         ವೇದಾಂತಕೃದ್ವೇದವಿದೇವ ಚಾಹಂ||

ಎಲ್ಲರ ಹೃದಯಗಳಲ್ಲಿ ನಾನು ನೆಲೆಸಿದ್ದೇನೆ. ನೆನಪು, ಜ್ಞಾನ ಮತ್ತು ಅವುಗಳ ಹೋಗುವಿಕೆ ನನ್ನಿಂದಲೇ ಆಗುತ್ತದೆ. ಸರ್ವವೇದಗಳಿಗೂ ನಾನೇ ವೇದ್ಯನು. ವೇದಾಂತವನ್ನು ಮಾಡಿದವನು ನಾನು. ವೇದವಿದನೂ ನಾನು.

06037016a ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ|

06037016c ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋಽಕ್ಷರ ಉಚ್ಯತೇ||

ಲೋಕದಲ್ಲಿ ಈ ಇಬ್ಬರು ಪುರುಷರಿದ್ದಾರೆ - ಕ್ಷರ ಮತ್ತು ಅಕ್ಷರ. ಸರ್ವಭೂತಗಳು ಕ್ಷರ. ಅವುಗಳಲ್ಲಿರುವ ಕೂಟಸ್ಥನು ಅಕ್ಷರ.

06037017a ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ|

06037017c ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ||

ಆದರೆ ಪರಮಾತ್ಮನೆನಿಸಿಕೊಂಡಿರುವ ಉತ್ತಮ ಪುರುಷನು ಬೇರೆ. ಆ ಅವ್ಯಯ ಈಶ್ವರನು ಲೋಕತ್ರಯಗಳನ್ನು ಪ್ರವೇಶಿಸಿ ಧರಿಸಿಕೊಂಡಿರುತ್ತಾನೆ.

06037018a ಯಸ್ಮಾತ್ ಕ್ಷರಮತೀತೋಽಹಮಕ್ಷರಾದಪಿ ಚೋತ್ತಮಃ|

06037018c ಅತೋಽಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ||

ಕ್ಷರವನ್ನು ದಾಟಿ ಅಕ್ಷರಕ್ಕಿಂತಲೂ ಉತ್ತಮನಾಗಿರುವುದರಿಂದ ನಾನು ಲೋಕದಲ್ಲಿಯೂ ವೇದಗಳಲ್ಲಿಯೂ ಪುರುಷೋತ್ತಮನೆಂದು ಪ್ರಥಿತನಾಗಿದ್ದೇನೆ.

06037019a ಯೋ ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಂ|

06037019c ಸ ಸರ್ವವಿದ್ಭಜತಿ ಮಾಂ ಸರ್ವಭಾವೇನ ಭಾರತ||

ಭಾರತ! ಅಸಮ್ಮೂಢನಾಗಿ ನಾನೇ ಪುರುಷೋತ್ತಮನೆಂದು ತಿಳಿದಿರುವ ಸರ್ವವಿದುವು ಸರ್ವಭಾವದಿಂದ ನನ್ನನ್ನು ಭಜಿಸುತ್ತಾನೆ.

06037020a ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ|

06037020c ಏತದ್ಬುದ್ಧ್ವಾ ಬುದ್ಧಿಮಾನ್ಸ್ಯಾತ್ಕೃತಕೃತ್ಯಶ್ಚ ಭಾರತ||

ಭಾರತ! ಅನಘ! ಈ ಗುಹ್ಯತಮ ಶಾಸ್ತ್ರವನ್ನು ನಾನು ಹೇಳಿದ್ದಾಯಿತು. ಇದನ್ನು ಅರಿತುಕೊಂಡವನು ಬುದ್ಧಿವಂತನೂ ಕೃತಕೃತ್ಯನೂ ಆಗುತ್ತಾನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಪುರುಷೋತ್ತಮಯೋಗೋ ನಾಮ ಪಂಚದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಪುರುಷೋತ್ತಮಯೋಗವೆಂಬ ಹದಿನೈದನೇ ಅಧ್ಯಾಯವು.

ಭೀಷ್ಮ ಪರ್ವಣಿ ಸಪ್ತತ್ರಿಂಶೋಽಧ್ಯಾಯಃ||

ಭೀಷ್ಮ ಪರ್ವದಲ್ಲಿ ಮೂವತ್ತೇಳನೇ ಅಧ್ಯಾಯವು.

Image result for flowers against white background"

Comments are closed.