Bhishma Parva: Chapter 35

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೫

ಕ್ಷೇತ್ರ ಕ್ಷೇತ್ರಜ್ಞ ಯೋಗ

Image result for bhagavadgita"06035001 ಶ್ರೀಭಗವಾನುವಾಚ|

06035001a ಇದಂ ಶರೀರಂ ಕೌಂತೇಯ ಕ್ಷೇತ್ರಮಿತ್ಯಭಿಧೀಯತೇ|

06035001c ಏತದ್ಯೋ ವೇತ್ತಿ ತಂ ಪ್ರಾಹುಃ ಕ್ಷೇತ್ರಜ್ಞ ಇತಿ ತದ್ವಿದಃ||

ಶ್ರೀಭಗವಾನನು ಹೇಳಿದನು: “ಕೌಂತೇಯ! ಈ ಶರೀರವನ್ನು ಕ್ಷೇತ್ರವೆಂದು ಕರೆಯುತ್ತಾರೆ. ಇದನ್ನು ಯಾರು ಅರಿಯುತ್ತಾರೋ ಅವರನ್ನು ಕ್ಷೇತ್ರಜ್ಞ ಎಂದು ತದ್ವಿದರು ಕರೆಯುತ್ತಾರೆ.

06035002a ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವಕ್ಷೇತ್ರೇಷು ಭಾರತ|

06035002c ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಂ ಮತಂ ಮಮ||

ಭಾರತ! ಸರ್ವಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನು ನಾನೇ ಎಂದು ತಿಳಿ. ಕ್ಷೇತ್ರ-ಕ್ಷೇತ್ರಜ್ಞರ ಜ್ಞಾನವೇ ಜ್ಞಾನವೆಂದು ನನ್ನ ಮತ.

06035003a ತತ್ ಕ್ಷೇತ್ರಂ ಯಚ್ಚ ಯಾದೃಕ್ಚ ಯದ್ವಿಕಾರಿ ಯತಶ್ಚ ಯತ್|

06035003c ಸ ಚ ಯೋ ಯತ್ಪ್ರಭಾವಶ್ಚ ತತ್ಸಮಾಸೇನ ಮೇ ಶೃಣು||

ಆ ಕ್ಷೇತ್ರವು ಯಾವುದು? ಹೇಗಿರುವಂಥಹುದು? ಅದಕ್ಕೆ ಯಾವ ವಿಕಾರಗಳಿವೆ? ಯಾವುದರಿಂದ ಯಾವುದು ಬಂದಿದೆ? ಆ ಕ್ಷೇತ್ರಜ್ಞನು ಯಾರು? ಅವನ ಪ್ರಭಾವವೇನು? ಅದನ್ನು ಸಂಕ್ಷಿಪ್ತವಾಗಿ ನನ್ನಿಂದ ಕೇಳು.

06035004a ಋಷಿಭಿರ್ಬಹುಧಾ ಗೀತಂ ಚಂದೋಭಿರ್ವಿವಿಧೈಃ ಪೃಥಕ್|

06035004c ಬ್ರಹ್ಮಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ||

ಇದರ ಕುರಿತು ಋಷಿಗಳು ಅನೇಕ ವಿವಿಧ ಛಂದಸ್ಸುಗಳುಳ್ಳ ಗೀತಗಳಿಂದ, ಹೇತುಗಳಿಂದೊಡಗೂಡಿದ ನಿಶ್ಚಯಗಳಿಂದ,  ಬ್ರಹ್ಮಸೂತ್ರದ ಪದಗಳಿಂದ ಹೇಳಿದ್ದಾರೆ.

06035005a ಮಹಾಭೂತಾನ್ಯಹಂಕಾರೋ ಬುದ್ಧಿರವ್ಯಕ್ತಮೇವ ಚ|

06035005c ಇಂದ್ರಿಯಾಣಿ ದಶೈಕಂ ಚ ಪಂಚ ಚೇಂದ್ರಿಯಗೋಚರಾಃ||

06035006a ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿಃ|

06035006c ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಂ||

ಮಹಾಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತ, ಹತ್ತು ಮತ್ತು ಒಂದು ಇಂದ್ರಿಯಗಳು, ಐದು ಇಂದ್ರಿಯಗೋಚರಗಳು, ಇಚ್ಛೆ, ದ್ವೇಷ, ಸುಖ, ದುಃಖ, ಸಂಘಾತ, ಚೇತನ, ಧೃತಿ ಇವೇ ಕ್ಷೇತ್ರವು. ವಿಕಾರಗಳನ್ನೂ ಸೇರಿಸಿ ಸಂಕ್ಷಿಪ್ತವಾಗಿ ಹೇಳಿದ್ದಾಯಿತು.

06035007a ಅಮಾನಿತ್ವಮದಂಭಿತ್ವಮಹಿಂಸಾ ಕ್ಷಾಂತಿರಾರ್ಜವಂ|

06035007c ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ||

06035008a ಇಂದ್ರಿಯಾರ್ಥೇಷು ವೈರಾಗ್ಯಮನಹಂಕಾರ ಏವ ಚ|

06035008c ಜನ್ಮಮೃತ್ಯುಜರಾವ್ಯಾಧಿದುಃಖದೋಷಾನುದರ್ಶನಂ||

ಅಮಾನಿತ್ವ (ತನ್ನನ್ನು ತಾನೇ ಮೆಚ್ಚಿಕೊಳ್ಳದಿರುವುದು), ಅದಂಭಿತ್ವ (ತನ್ನ ಧರ್ಮವನ್ನು ಪ್ರಕಟಮಾಡಿಕೊಳ್ಳದಿರುವುದು), ಅಹಿಂಸಾ, ಕ್ಷಾಂತಿ (ಇನ್ನೊಬ್ಬರು ತಪ್ಪು ಮಾಡಿದರೂ ಮನೋವಿಕಾರಗೊಳ್ಳದಿರುವುದು), ಆರ್ಜವ (ಋಜುವಾಗಿರುವುದು, ಕೊಂಕಿಲ್ಲದೇ ಇರುವುದು), ಆಚಾರ್ಯೋಪಾಸನೆ, ಶೌಚ, ಸ್ಥೈರ್ಯ, ಆತ್ಮವಿನಿಗ್ರಹ, ಇಂದ್ರಿಯಾರ್ಥಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು – ಇವೇ ಜನ್ಮ-ಮೃತ್ಯು-ಜರ-ವ್ಯಾಧಿ-ದುಃಖ-ದೋಷಗಳ ದರ್ಶನಗಳು.

06035009a ಅಸಕ್ತಿರನಭಿಷ್ವಂಗಃ ಪುತ್ರದಾರಗೃಹಾದಿಷು|

06035009c ನಿತ್ಯಂ ಚ ಸಮಚಿತ್ತತ್ವವಮಿಷ್ಟಾನಿಷ್ಟೋಪಪತ್ತಿಷು||

06035010a ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ|

06035010c ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ||

06035011a ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವಜ್ಞಾನಾರ್ಥದರ್ಶನಂ|

06035011c ಏತಜ್ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋಽನ್ಯಥಾ||

ಮಕ್ಕಳು, ಹೆಂಡತಿ, ಮನೆ ಮೊದಲಾದವುಗಳಲ್ಲಿ ಅಸಕ್ತಿ, ತಾನು ಬೇರೆಯಲ್ಲವೆಂಬ ಭಾವನೆ, ಬೇಕಾದವುಗಳು ಮತ್ತು ಬೇಡವಾದವುಗಳು ಎರಡರಲ್ಲಿ ಯಾವುದು ಬಂದಾಗಲೂ ಸಮನಾಗಿರುವುದು, ನನ್ನಲ್ಲಿ ಅನನ್ಯಯೋಗದಿಂದ ಬೇರೆ ಎಲ್ಲಿಯೂ ಹೋಗದ ಭಕ್ತಿ, ಏಕಾಂತ ಪ್ರದೇಶಗಳನ್ನು ಸೇವಿಸುವುದು, ಜನಸಂಸದಿಯಲ್ಲಿ ಸಂತೋಷಪಡದಿರುವುದು, ಆಧ್ಯಾತ್ಮ ಜ್ಞಾನದಲ್ಲಿ ನಿತ್ಯನಾಗಿರುವುದು – ಇವು ತತ್ವಜ್ಞಾನಾರ್ಥದರ್ಶನಗಳು. ಇದನ್ನು ಜ್ಞಾನವೆಂದು ಹೇಳುತ್ತಾರೆ. ಇದಕ್ಕೆ ಹೊರತಾಗಿದ್ದುದು ಅಜ್ಞಾನ.

06035012a ಜ್ಞೇಯಂ ಯತ್ತತ್ಪ್ರವಕ್ಷ್ಯಾಮಿ ಯಜ್ಜ್ಞಾತ್ವಾಮೃತಮಶ್ನುತೇ|

06035012c ಅನಾದಿಮತ್ಪರಂ ಬ್ರಹ್ಮ ನ ಸತ್ತನ್ನಾಸದುಚ್ಯತೇ||

ಯಾವುದು ತಿಳಿಯಬೇಕಾದುದೋ ಅದನ್ನು ಹೇಳುತ್ತೇನೆ. ಇದನ್ನು ತಿಳಿದು ಅಮೃತತ್ವವನ್ನು ಪಡೆಯಬಹುದು. ಅದು ಆದಿಯಿಲ್ಲದಿರುವ, ಇದೆ ಮತ್ತು ಇಲ್ಲ ಎಂದೆನಿಸಿಕೊಂಡಿರುವ ಪರಬ್ರಹ್ಮ.

06035013a ಸರ್ವತಃಪಾಣಿಪಾದಂ ತತ್ಸರ್ವತೋಕ್ಷಿಶಿರೋಮುಖಂ|

06035013c ಸರ್ವತಃಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ||

ಎಲ್ಲಕಡೆಯೂ ಅದರ ಪಾದ-ಪಾಣಿಗಳಿವೆ. ಅದು ಎಲ್ಲಕಡೆಯೂ ಕಣ್ಣು, ಶಿರ, ಮುಖಗಳನ್ನು ಹೊಂದಿದೆ. ಎಲ್ಲಕಡೆಯೂ ಕೇಳುತ್ತದೆ. ಲೋಕದಲ್ಲಿ ಎಲ್ಲವನ್ನೂ ಆವರಿಸಿಕೊಂಡಿದೆ.

06035014a ಸರ್ವೇಂದ್ರಿಯಗುಣಾಭಾಸಂ ಸರ್ವೇಂದ್ರಿಯವಿವರ್ಜಿತಂ|

06035014c ಅಸಕ್ತಂ ಸರ್ವಭೃಚ್ಚೈವ ನಿರ್ಗುಣಂ ಗುಣಭೋಕ್ತೃ ಚ||

ಅದು ಸರ್ವೇಂದ್ರಿಯಗಳ ಗುಣಗಳಿಂದ ಕೂಡಿದೆ. ಆದರೆ ಸರ್ವ ಇಂದ್ರಿಯಗಳನ್ನು ವರ್ಜಿಸಿದೆ. ಅದು ಅಸಕ್ತ ಆದರೆ ಎಲ್ಲವನ್ನೂ ಧರಿಸಿದೆ. ಅದು ನಿರ್ಗುಣ. ಆದರೆ ಗುಣಗಳನ್ನು ಭೋಗಿಸುವಂತಹುದು.

06035015a ಬಹಿರಂತಶ್ಚ ಭೂತಾನಾಮಚರಂ ಚರಮೇವ ಚ|

06035015c ಸೂಕ್ಷ್ಮತ್ವಾತ್ತದವಿಜ್ಞೇಯಂ ದೂರಸ್ಥಂ ಚಾಂತಿಕೇ ಚ ತತ್||

ಅದು ಇರುವವುಗಳ ಹೊರಗೂ ಒಳಗೂ ಇರುವುದು. ಚರವೂ ಅಚರವೂ ಆಗಿರುವುದು. ಸೂಕ್ಷ್ಮವಾಗಿರುವುದರಿಂದ ಅದು ಅರಿಯಲಸಾಧ್ಯವಾಗಿರುವುದು. ಅದು ದೂರದಲ್ಲಿರುವುದು. ಹತ್ತಿರದಲ್ಲಿಯೂ ಇರುವುದು.

06035016a ಅವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಂ|

06035016c ಭೂತಭರ್ತೃ ಚ ತಜ್ಜ್ಞಾಯಂ ಗ್ರಸಿಷ್ಣು ಪ್ರಭವಿಷ್ಣು ಚ||

ಇರುವವುಗಳಲ್ಲಿ ಅವಿಭಕ್ತವಾಗಿಯೂ ವಿಭಕ್ತವಾಗಿಯೂ ಇರುವುದು. ತಿಳಿಯಬೇಕಾಗಿರುವ ಅದು ಇರುವವನ್ನು ಕಾಪಾಡುತ್ತದೆ. ಎಲ್ಲವನ್ನೂ ಕಬಳಿಸುತ್ತದೆ. ಮತ್ತು ಎಲ್ಲವನ್ನು ಹುಟ್ಟಿಸುತ್ತದೆ ಕೂಡ.

06035017a ಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸಃ ಪರಮುಚ್ಯತೇ|

06035017c ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಂ||

ಅದು ಜ್ಯೋತಿಗಳಿಗೂ ಹೆಚ್ಚಿನ ಜ್ಯೋತಿ. ಕತ್ತಲೆಗೂ ಆಚೆಯಿರುವುದು. ಅದು ಜ್ಞಾನ, ತಿಳಿಯುವಂಥಹುದು, ಮತ್ತು ಜ್ಞಾನದ ಫಲ. ಎಲ್ಲರ ಹೃದಯಗಳಲ್ಲಿ ನೆಲೆಸಿದೆ.

06035018a ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ|

06035018c ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ||

ಹೀಗೆ ಕ್ಷೇತ್ರವನ್ನೂ, ಜ್ಞಾನವನ್ನೂ, ಜ್ಞೇಯವನ್ನೂ ಸಂಕ್ಷಿಪ್ತವಾಗಿ ಹೇಳಿದ್ದಾಯಿತು. ನನ್ನ ಭಕ್ತನು ಇದನ್ನು ತಿಳಿದುಕೊಂಡು ನನ್ನದೇ ಭಾವವನ್ನು ಪಡೆಯುತ್ತಾನೆ.

06035019a ಪ್ರಕೃತಿಂ ಪುರುಷಂ ಚೈವ ವಿದ್ಧ್ಯನಾದೀ ಉಭಾವಪಿ|

06035019c ವಿಕಾರಾಂಶ್ಚ ಗುಣಾಂಶ್ಚೈವ ವಿದ್ಧಿ ಪ್ರಕೃತಿಸಂಭವಾನ್||

ಪ್ರಕೃತಿ ಮತ್ತು ಪುರುಷ ಎರಡೂ ಅನಾದಿಯೆಂದು ತಿಳಿ. ವಿಕಾರಗಳೂ ಗುಣಗಳೂ ಪ್ರಕೃತಿಯಿಂದ ಹುಟ್ಟಿದವೆಂದು ತಿಳಿ.

06035020a ಕಾರ್ಯಕಾರಣಕರ್ತೃತ್ವೇ ಹೇತುಃ ಪ್ರಕೃತಿರುಚ್ಯತೇ|

06035020c ಪುರುಷಃ ಸುಖದುಃಖಾನಾಂ ಭೋಕ್ತೃತ್ವೇ ಹೇತುರುಚ್ಯತೇ||

ಪ್ರಕೃತಿಯು ಕಾರ್ಯ-ಕಾರಣ-ಕರ್ತೃತ್ವಗಳಿಗೆ ಹೇತುವೆಂದೆನಿಸಿಕೊಂಡಿರುವುದು. ಪುರುಷನು ಸುಖ-ದುಃಖಗಳನ್ನು ಅನುಭವಿಸುವುದಕ್ಕೆ ಹೇತುವೆಂದೆನಿಸಿಕೊಂಡಿರುವನು.

06035021a ಪುರುಷಃ ಪ್ರಕೃತಿಸ್ಥೋ ಹಿ ಭುಂಕ್ತೇ ಪ್ರಕೃತಿಜಾನ್ಗುಣಾನ್|

06035021c ಕಾರಣಂ ಗುಣಸಂಗೋಽಸ್ಯ ಸದಸದ್ಯೋನಿಜನ್ಮಸು||

ಪುರುಷನು ಪ್ರಕೃತಿಸ್ಥನಾಗಿಯೇ ಪ್ರಕೃತಿಯಿಂದ ಉಂಟಾದ ಗುಣಗಳನ್ನು ಅನುಭವಿಸುತ್ತಾನೆ. ಈ ಗುಣಸಂಗದ ಕಾರಣದಿಂದಲೇ ಅವನು ಒಳ್ಳೆಯ ಮತ್ತು ಕೆಟ್ಟ ಯೋನಿಗಳಲ್ಲಿ ಜನ್ಮತಾಳುತ್ತಾನೆ.

06035022a ಉಪದ್ರಷ್ಟಾನುಮಂತಾ ಚ ಭರ್ತಾ ಭೋಕ್ತಾ ಮಹೇಶ್ವರಃ|

06035022c ಪರಮಾತ್ಮೇತಿ ಚಾಪ್ಯುಕ್ತೋ ದೇಹೇಽಸ್ಮಿನ್ಪುರುಷಃ ಪರಃ||

ಈ ದೇಹದಲ್ಲಿರುವ ಪರಮ ಪುರುಷನು ಉಪದ್ರಷ್ಟನು (ತಾನು ಯಾವ ಕೆಲಸವನ್ನೂ ಮಾಡದೇ ಹತ್ತಿರದಲ್ಲಿದ್ದುಕೊಂಡು ಎಲ್ಲವನ್ನೂ ನೋಡುವವನು). ಅನುಮಂತನು (ಮಾಡುತ್ತಿರುವವರನ್ನು ಅನುಮೋದಿಸುವವನು). ಭರ್ತನು. ಭೋಕ್ತ (ಅನುಭವಿಸುವವನು)ನು. ಮಹೇಶ್ವರ. ಪರಮಾತ್ಮ ಎಂದೆನಿಸಿಕೊಂಡಿದ್ದಾನೆ.

06035023a ಯ ಏವಂ ವೇತ್ತಿ ಪುರುಷಂ ಪ್ರಕೃತಿಂ ಚ ಗುಣೈಃ ಸಹ|

06035023c ಸರ್ವಥಾ ವರ್ತಮಾನೋಽಪಿ ನ ಸ ಭೂಯೋಽಭಿಜಾಯತೇ||

ಹೀಗೆ ಪುರುಷನನ್ನೂ ಗುಣಗಳ ಸಹಿತ ಪ್ರಕೃತಿಯನ್ನೂ ಯಾರು ಅರ್ಥಮಾಡಿಕೊಳ್ಳುತ್ತಾರೋ ಅವರು ವರ್ತಮಾನದಲ್ಲಿ ಏನೇ ಆಗಿದ್ದರೂ ಪುನಃ ಹುಟ್ಟುವುದಿಲ್ಲ.

06035024a ಧ್ಯಾನೇನಾತ್ಮನಿ ಪಶ್ಯಂತಿ ಕೇ ಚಿದಾತ್ಮಾನಮಾತ್ಮನಾ|

06035024c ಅನ್ಯೇ ಸಾಂಖ್ಯೇನ ಯೋಗೇನ ಕರ್ಮಯೋಗೇನ ಚಾಪರೇ||

ಕೆಲವರು ಧ್ಯಾನದ ಮೂಲಕ, ಕೆಲವರು ಸಾಂಖ್ಯ ಯೋಗದ ಮೂಲಕ, ಇನ್ನು ಕೆಲವರು ಕರ್ಮಯೋಗದ ಮೂಲಕ ಆತ್ಮನಲ್ಲಿ ಆತ್ಮನನ್ನು ಆತ್ಮನಿಂದ ಕಂಡುಕೊಳ್ಳುತ್ತಾರೆ.

06035025a ಅನ್ಯೇ ತ್ವೇವಮಜಾನಂತಃ ಶ್ರುತ್ವಾನ್ಯೇಭ್ಯ ಉಪಾಸತೇ|

06035025c ತೇಽಪಿ ಚಾತಿತರಂತ್ಯೇವ ಮೃತ್ಯುಂ ಶ್ರುತಿಪರಾಯಣಾಃ||

ಆದರೆ ಬೇರೆ ಕೆಲವರು ತಾವೇ ಇದನ್ನು ತಿಳಿದುಕೊಳ್ಳದೇ ಮತ್ತೊಬ್ಬರಿಂದ ಕೇಳಿ ಉಪಾಸನೆ ಮಾಡುತ್ತಾರೆ. ಅವರೂ ಕೂಡ ಶ್ರುತಿಪರಾಯಣರಾಗಿದ್ದುದರಿಂದ ಮೃತ್ಯುವನ್ನು ದಾಟುತ್ತಾರೆ.

06035026a ಯಾವತ್ಸಂಜಾಯತೇ ಕಿಂ ಚಿತ್ಸತ್ತ್ವಂ ಸ್ಥಾವರಜಂಗಮಂ|

06035026c ಕ್ಷೇತ್ರಕ್ಷೇತ್ರಜ್ಞಸಮ್ಯೋಗಾತ್ತದ್ವಿದ್ಧಿ ಭರತರ್ಷಭ||

ಭರತರ್ಷಭ! ಹುಟ್ಟುವ ಸ್ಥಾವರ ಜಂಗಮಗಳ ಸತ್ವವು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದ ಆಗುತ್ತದೆ ಎನ್ನುವುದನ್ನು ತಿಳಿದುಕೋ.

06035027a ಸಮಂ ಸರ್ವೇಷು ಭೂತೇಷು ತಿಷ್ಠಂತಂ ಪರಮೇಶ್ವರಂ|

06035027c ವಿನಶ್ಯತ್ಸ್ವವಿನಶ್ಯಂತಂ ಯಃ ಪಶ್ಯತಿ ಸ ಪಶ್ಯತಿ||

ಇರುವ ಎಲ್ಲವುಗಳಲ್ಲಿ ನೆಲೆಸಿರುವ, ಅವು ನಾಶವಾದರೂ ತಾನು ನಾಶವಾಗದೇ ಇರುವ ಪರಮೇಶ್ವರನನ್ನು ಯಾರು ಕಂಡುಕೊಳ್ಳುತ್ತಾರೋ ಅವರೇ ಕಾಣುವವರು.

06035028a ಸಮಂ ಪಶ್ಯನ್ ಹಿ ಸರ್ವತ್ರ ಸಮವಸ್ಥಿತಮೀಶ್ವರಂ|

06035028c ನ ಹಿನಸ್ತ್ಯಾತ್ಮನಾತ್ಮಾನಂ ತತೋ ಯಾತಿ ಪರಾಂ ಗತಿಂ||

ಏಕೆಂದರೆ ಸರ್ವತ್ರ ಸಮನಾಗಿರುವ ಈಶ್ವರನನ್ನು ಸಮನಾಗಿ ಕಾಣುವವರು ತಮ್ಮಿಂದ ತಮ್ಮನ್ನು ಕಳೆದುಕೊಳ್ಳುವುದಿಲ್ಲ. ಅದರಿಂದ ಪರಮ ಗತಿಯನ್ನು ಪಡೆಯುತ್ತಾರೆ.

06035029a ಪ್ರಕೃತ್ಯೈವ ಚ ಕರ್ಮಾಣಿ ಕ್ರಿಯಮಾಣಾನಿ ಸರ್ವಶಃ|

06035029c ಯಃ ಪಶ್ಯತಿ ತಥಾತ್ಮಾನಮಕರ್ತಾರಂ ಸ ಪಶ್ಯತಿ||

ಸರ್ವಪ್ರಕಾರದಲ್ಲಿಯೂ ಪ್ರಕೃತಿಯೇ ಕರ್ಮಗಳನ್ನು ಮಾಡಿಸುತ್ತದೆ ಮತ್ತು ಅಕರ್ತೃವನ್ನು ಕಂಡಿಕೊಂಡಿರುವವರೇ ಕಂಡಿರುವವರು.

06035030a ಯದಾ ಭೂತಪೃಥಗ್ಭಾವಮೇಕಸ್ಥಮನುಪಶ್ಯತಿ|

06035030c ತತ ಏವ ಚ ವಿಸ್ತಾರಂ ಬ್ರಹ್ಮ ಸಂಪದ್ಯತೇ ತದಾ||

ಪ್ರತ್ಯೇಕವಾಗಿ ಇರುವವುಗಳು ಒಂದರಿಂದಲೇ ಆದವೆಂದು ಮತ್ತು ಅದೇ ವಿಸ್ತಾರಗೊಂಡಿದೆ ಎಂದು ಯಾವಾಗ ಕಾಣುತ್ತಾನೋ ಆಗ ಅವನು ಬ್ರಹ್ಮವನ್ನು ಸೇರುತ್ತಾನೆ.

06035031a ಅನಾದಿತ್ವಾನ್ನಿರ್ಗುಣತ್ವಾತ್ಪರಮಾತ್ಮಾಯಮವ್ಯಯಃ|

06035031c ಶರೀರಸ್ಥೋಽಪಿ ಕೌಂತೇಯ ನ ಕರೋತಿ ನ ಲಿಪ್ಯತೇ||

ಕೌಂತೇಯ! ಅನಾದಿಯಾಗಿರುವುದರಿಂದ ಮತ್ತು ನಿರ್ಗುಣನಾಗಿರುವುದರಿಂದ ಈ ಅವ್ಯಯ ಪರಮಾತ್ಮನು ಶರೀರದಲ್ಲಿದ್ದರೂ ಮಾಡುವುದಿಲ್ಲ, ಮತ್ತು ಕರ್ಮಫಲದಿಂದ ಲಿಪ್ತನಾಗುವುದಿಲ್ಲ.

06035032a ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ|

06035032c ಸರ್ವತ್ರಾವಸ್ಥಿತೋ ದೇಹೇ ತಥಾತ್ಮಾ ನೋಪಲಿಪ್ಯತೇ||

ಎಲ್ಲವನ್ನು ವ್ಯಾಪಿಸಿರುವ ಆಕಾಶವು ತನ್ನ ಸೂಕ್ಷ್ಮತೆಯಿಂದಾಗಿ ಹೇಗೆ ಯಾವುದಕ್ಕೂ ಅಂಟಿಕೊಳ್ಳುವುದಿಲ್ಲವೋ ಹಾಗೆ ದೇಹದಲ್ಲಿ ಸರ್ವತ್ರನಾಗಿರುವ ಆತ್ಮನೂ ಅಂಟಿಕೊಳ್ಳುವುದಿಲ್ಲ.

06035033a ಯಥಾ ಪ್ರಕಾಶಯತ್ಯೇಕಃ ಕೃತ್ಸ್ನಂ ಲೋಕಮಿಮಂ ರವಿಃ|

06035033c ಕ್ಷೇತ್ರಂ ಕ್ಷೇತ್ರೀ ತಥಾ ಕೃತ್ಸ್ನಂ ಪ್ರಕಾಶಯತಿ ಭಾರತ||

ಭಾರತ! ಹೇಗೆ ರವಿಯು ಒಬ್ಬನೇ ಈ ಇಡೀ ಲೋಕವನ್ನು ಬೆಳಗಿಸುತ್ತಾನೋ ಹಾಗೆ ಕ್ಷೇತ್ರಿಯು ಕ್ಷೇತ್ರವೆಲ್ಲವನ್ನೂ ಪ್ರಕಾಶಿಸುತ್ತಾನೆ.

06035034a ಕ್ಷೇತ್ರಕ್ಷೇತ್ರಜ್ಞಯೋರೇವಮಂತರಂ ಜ್ಞಾನಚಕ್ಷುಷಾ|

06035034c ಭೂತಪ್ರಕೃತಿಮೋಕ್ಷಂ ಚ ಯೇ ವಿದುರ್ಯಾಂತಿ ತೇ ಪರಂ||

ಹೀಗೆ ಕ್ಷೇತ್ರ-ಕ್ಷೇತ್ರಜ್ಞರ ನಡುವಿನ ಅಂತರವನ್ನೂ, ಇರುವುದನ್ನು ಪ್ರಕೃತಿಯಿಂದ ಮೋಕ್ಷಗೊಳಿಸುವ ವಿಧಿಯನ್ನು ಯಾರು ಜ್ಞಾನದ ಕಣ್ಣುಗಳಿಂದ ತಿಳಿದುಕೊಂಡಿದ್ದಾರೋ ಅವರು ಪರಮ ಗತಿಯನ್ನು ಹೊಂದುತ್ತಾರೆ.”

ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗೋ ನಾಮ ತ್ರಯೋದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಕ್ಷೇತ್ರಕ್ಷೇತ್ರಜ್ಞವಿಭಾಗಯೋಗವೆಂಬ ಹದಿಮೂರನೇ ಅಧ್ಯಾಯವು.

ಭೀಷ್ಮ ಪರ್ವಣಿ ಪಂಚತ್ರಿಂಶೋಽಧ್ಯಾಯಃ||

ಭೀಷ್ಮ ಪರ್ವದಲ್ಲಿ ಮೂವತ್ತೈದನೇ ಅಧ್ಯಾಯವು.

Image result for flowers against white background

Comments are closed.