ಭೀಷ್ಮ ಪರ್ವ:ಭಗವದ್ಗೀತಾ ಪರ್ವ
೩೪
ಭಕ್ತಿ ಯೋಗ
06034001 ಅರ್ಜುನ ಉವಾಚ|
06034001a ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ|
06034001c ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ||
ಅರ್ಜುನನು ಹೇಳಿದನು: “ಹೀಗೆ ಸತತಯುಕ್ತರಾಗಿ ನಿನ್ನನ್ನು ಪರ್ಯುಪಾಸನೆಮಾಡುವ ಭಕ್ತರು ಮತ್ತು ಅಕ್ಷರ ಅವ್ಯಕ್ತವಾದುದನ್ನು ಪರ್ಯುಪಾಸನೆ ಮಾಡುವವರು - ಇವರಲ್ಲಿ ಯೋಗವಿತ್ತಮರು ಯಾರು?”
06034002 ಶ್ರೀಭಗವಾನುವಾಚ|
06034002a ಮಯ್ಯಾವೇಶ್ಯ ಮನೋ ಯೇ ಮಾಂ ನಿತ್ಯಯುಕ್ತಾ ಉಪಾಸತೇ|
06034002c ಶ್ರದ್ಧಯಾ ಪರಯೋಪೇತಾಸ್ತೇ ಮೇ ಯುಕ್ತತಮಾ ಮತಾಃ||
ಶ್ರೀಭಗವಾನನು ಹೇಳಿದನು: “ನನ್ನಲ್ಲಿಯೇ ಮನಸ್ಸನ್ನಿಟ್ಟು, ನಿತ್ಯಯುಕ್ತರಾಗಿ ಪರಮ ಶ್ರದ್ಧೆಯಿಂದ ನನ್ನನ್ನು ಉಪಾಸನೆ ಮಾಡುವವರು ಹೆಚ್ಚಿನ ಯೋಗಿಗಳೆಂದು ನನ್ನ ಮತವು.
06034003a ಯೇ ತ್ವಕ್ಷರಮನಿರ್ದೇಶ್ಯಮವ್ಯಕ್ತಂ ಪರ್ಯುಪಾಸತೇ|
06034003c ಸರ್ವತ್ರಗಮಚಿಂತ್ಯಂ ಚ ಕೂಟಸ್ಥಮಚಲಂ ಧ್ರುವಂ||
06034004a ಸಂನಿಯಮ್ಯೇಂದ್ರಿಯಗ್ರಾಮಂ ಸರ್ವತ್ರ ಸಮಬುದ್ಧಯಃ|
06034004c ತೇ ಪ್ರಾಪ್ನುವಂತಿ ಮಾಮೇವ ಸರ್ವಭೂತಹಿತೇ ರತಾಃ||
ಆದರೆ ಅನಿರ್ದೇಶ್ಯವಾದ, ಅವ್ಯಕ್ತವಾದ, ಸರ್ವತ್ರಗವಾದ, ಅಚಿಂತ್ಯವಾದ, ಕೂಟಸ್ಥವಾದ, ಅಚಲವಾದ, ಧ್ರುವವಾದ ಅಕ್ಷರವನ್ನು, ಇಂದ್ರಿಯಗ್ರಾಮವನ್ನು ಸರಿಯಾಗಿ ನಿಯಂತ್ರಿಸಿಕೊಂಡು, ಸರ್ವತ್ರ ಸಮಬುದ್ಧಿಗಳಾಗಿ ಪರ್ಯುಪಾಸನೆ ಮಾಡುವವರೂ ಕೂಡ ನನ್ನನ್ನೇ ಪಡೆಯುವರು.
06034005a ಕ್ಲೇಶೋಽಧಿಕತರಸ್ತೇಷಾಮವ್ಯಕ್ತಾಸಕ್ತಚೇತಸಾಂ|
06034005c ಅವ್ಯಕ್ತಾ ಹಿ ಗತಿರ್ದುಃಖಂ ದೇಹವದ್ಭಿರವಾಪ್ಯತೇ||
ಅವ್ಯಕ್ತಾಸಕ್ತಚೇತಸರಿಗೆ ಕ್ಲೇಶವು ಅಧಿಕ. ಏಕೆಂದರೆ ದೇಹವಂತರಿಗೆ ಅವ್ಯಕ್ತವೆಂಬ ಗತಿಯು ದುಃಖದಿಂದ ದೊರೆಯುತ್ತದೆ.
06034006a ಯೇ ತು ಸರ್ವಾಣಿ ಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಾಃ|
06034006c ಅನನ್ಯೇನೈವ ಯೋಗೇನ ಮಾಂ ಧ್ಯಾಯಂತ ಉಪಾಸತೇ||
06034007a ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್|
06034007c ಭವಾಮಿ ನಚಿರಾತ್ಪಾರ್ಥ ಮಯ್ಯಾವೇಶಿತಚೇತಸಾಂ||
ಪಾರ್ಥ! ಆದರೆ ಸರ್ವಕರ್ಮಗಳನ್ನೂ ನನ್ನಲ್ಲಿ ಸಂನ್ಯಾಸಮಾಡಿ, ಮತ್ಪರರಾಗಿ, ಅನನ್ಯವಾಗಿರುವ ಯೋಗದಿಂದ ನನ್ನನ್ನು ಧ್ಯಾನಿಸುತ್ತಾ ಉಪಾಸಿಸುವ, ನನ್ನಲ್ಲಿಯೇ ತಮ್ಮ ಚಿತ್ತವನ್ನು ನೆಟ್ಟಿರುವವರನ್ನು ನಾನು ತಕ್ಷಣವೇ ಮೃತ್ಯುಸಂಸಾರದ ಸಾಗರದಿಂದ ಮೇಲೆತ್ತಿಬಿಡುತ್ತೇನೆ.
06034008a ಮಯ್ಯೇವ ಮನ ಆಧತ್ಸ್ವ ಮಯಿ ಬುದ್ಧಿಂ ನಿವೇಶಯ|
06034008c ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ||
ನನ್ನಲ್ಲಿಯೇ ಮನಸ್ಸನ್ನಿಡು. ನನ್ನಲ್ಲಿ ಬುದ್ಧಿಯನ್ನು ಹೊಗಿಸು. ಹೀಗೆ ಮಾಡಿದ ನಂತರ ನನ್ನಲ್ಲಿಯೇ ನಿವಾಸಮಾಡುವೆ. ಸಂಶಯವಿಲ್ಲ.
06034009a ಅಥ ಚಿತ್ತಂ ಸಮಾಧಾತುಂ ನ ಶಕ್ನೋಷಿ ಮಯಿ ಸ್ಥಿರಂ|
06034009c ಅಭ್ಯಾಸಯೋಗೇನ ತತೋ ಮಾಮಿಚ್ಛಾಪ್ತುಂ ಧನಂಜಯ||
ಧನಂಜಯ! ನನ್ನಲ್ಲಿ ಚಿತ್ತವನ್ನು ಸ್ಥಿರವಾಗಿ ಸಮಾಧಾನಗೊಳಿಸಿಕೊಂಡಿರುವುದಕ್ಕೆ ಶಕ್ತನಾಗದೇ ಇದ್ದರೆ ಅಭ್ಯಾಸಯೋಗದಿಂದ ನನ್ನನ್ನು ಪಡೆಯಲು ಇಚ್ಛಿಸು.
06034010a ಅಭ್ಯಾಸೇಽಪ್ಯಸಮರ್ಥೋಽಸಿ ಮತ್ಕರ್ಮಪರಮೋ ಭವ|
06034010c ಮದರ್ಥಮಪಿ ಕರ್ಮಾಣಿ ಕುರ್ವನ್ಸಿದ್ಧಿಮವಾಪ್ಸ್ಯಸಿ||
ಅಭ್ಯಾಸಮಾಡಲೂ ಅಸಮರ್ಥನಾದರೆ ನನಗಾಗಿ ಕರ್ಮಪರನಾಗು. ಕರ್ಮಗಳನ್ನು ನನಗಾಗಿ ಮಾಡುತ್ತಿದ್ದರೂ ಸಿದ್ಧಿಯನ್ನು ಪಡೆಯುತ್ತೀಯೆ.
06034011a ಅಥೈತದಪ್ಯಶಕ್ತೋಽಸಿ ಕರ್ತುಂ ಮದ್ಯೋಗಮಾಶ್ರಿತಃ|
06034011c ಸರ್ವಕರ್ಮಫಲತ್ಯಾಗಂ ತತಃ ಕುರು ಯತಾತ್ಮವಾನ್||
ಆದರೆ ಇದನ್ನು ಕೂಡ ಮಾಡಲು ಅಶಕ್ತನಾದರೆ ನನ್ನ ಯೋಗವನ್ನು ಆಶ್ರಯಿಸಿ ಯತಾತ್ಮನಾಗಿ ಸರ್ವ ಕರ್ಮಗಳ ಫಲಗಳನ್ನು ತ್ಯಾಗಮಾಡು.
06034012a ಶ್ರೇಯೋ ಹಿ ಜ್ಞಾನಮಭ್ಯಾಸಾಜ್ಜ್ಞಾನಾದ್ಧ್ಯಾನಂ ವಿಶಿಷ್ಯತೇ|
06034012c ಧ್ಯಾನಾತ್ಕರ್ಮಫಲತ್ಯಾಗಸ್ತ್ಯಾಗಾಚ್ಚಾಂತಿರನಂತರಂ||
ಏಕೆಂದರೆ ಅಭ್ಯಾಸಕ್ಕಿಂತ ಜ್ಞಾನವು ಶ್ರೇಯಸ್ಕರವು. ಜ್ಞಾನಕ್ಕಿಂತ ಧ್ಯಾನವು ಹೆಚ್ಚಿನದು. ಧ್ಯಾನಕ್ಕಿಂತ ಕರ್ಮಫಲತ್ಯಾಗವು ಹೆಚ್ಚಿನದು. ತ್ಯಾಗದ ನಂತರ ಶಾಂತಿ.
06034013a ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ|
06034013c ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ||
06034014a ಸಂತುಷ್ಟಃ ಸತತಂ ಯೋಗೀ ಯತಾತ್ಮಾ ದೃಢನಿಶ್ಚಯಃ|
06034014c ಮಯ್ಯರ್ಪಿತಮನೋಬುದ್ಧಿರ್ಯೋ ಮದ್ಭಕ್ತಃ ಸ ಮೇ ಪ್ರಿಯಃ||
ಇರುವ ಯಾವುದನ್ನೂ ದ್ವೇಷಿಸದೇ, ಮಿತ್ರನೂ ಕರುಣಿಯೂ ಆಗಿ, ನನ್ನದೆನ್ನುವುದನ್ನು ಬಿಟ್ಟು, ನಿರಹಂಕಾರನಾಗಿ, ದುಃಖ-ಸುಖಗಳಲ್ಲಿ ಸಮನಾಗಿ, ಕ್ಷಮಿಸುವವನಾಗಿ, ಸತತವೂ ಸಂತುಷ್ಟನಾಗಿ, ಯೋಗಿಯಾಗಿರುವ, ಧೃಢನಿಶ್ಚಯಿಯಾಗಿ ಪ್ರಯತ್ನಿಸುತ್ತಿರುವವನು, ಮನೋಬುದ್ಧಿಗಳನ್ನು ನನಗೆ ಅರ್ಪಿಸಿರುವವನು, ನನ್ನ ಭಕ್ತನು ನನಗೆ ಪ್ರಿಯ.
06034015a ಯಸ್ಮಾನ್ನೋದ್ವಿಜತೇ ಲೋಕೋ ಲೋಕಾನ್ನೋದ್ವಿಜತೇ ಚ ಯಃ|
06034015c ಹರ್ಷಾಮರ್ಷಭಯೋದ್ವೇಗೈರ್ಮುಕ್ತೋ ಯಃ ಸ ಚ ಮೇ ಪ್ರಿಯಃ||
ಯಾರಿಂದ ಲೋಕವು ಉದ್ವಿಗ್ನವಾಗುವುದಿಲ್ಲವೋ ಮತ್ತು ಯಾರು ಲೋಕದಿಂದ ಉದ್ವಿಗ್ನಗೊಳ್ಳುವುದಿಲ್ಲವೋ, ಯಾರು ಹರ್ಷ-ಅಮರ್ಷ (ತಡೆದುಕೊಳ್ಳಲಾರದೇ ಇರುವುದು)-ಭಯ-ಉದ್ವೇಗಳಿಂದ ಮುಕ್ತರಾಗಿದ್ದಾರೋ ಅವರು ನನಗೆ ಪ್ರಿಯರು.
06034016a ಅನಪೇಕ್ಷಃ ಶುಚಿರ್ದಕ್ಷ ಉದಾಸೀನೋ ಗತವ್ಯಥಃ|
06034016c ಸರ್ವಾರಂಭಪರಿತ್ಯಾಗೀ ಯೋ ಮದ್ಭಕ್ತಃ ಸ ಮೇ ಪ್ರಿಯಃ||
ಬೇಕು ಎಂಬ ಅಪೇಕ್ಷೆಗಳಿಲ್ಲದವನು, ಶುಚಿ, ದಕ್ಷ, ಉದಾಸೀನನು (ಮಿತ್ರ-ಶತ್ರು ಪಕ್ಷಗಳಲ್ಲಿಲ್ಲದಿರುವವನು), ವ್ಯಥೆಗಳನ್ನು ಕಳೆದುಕೊಂಡವನು, ಫಲದ ಆಸೆಯಿಂದ ಮಾಡುವ ಎಲ್ಲ ಕರ್ಮಗಳನ್ನೂ ಪರಿತ್ಯಜಿಸಿದವನು ನನ್ನ ಭಕ್ತ. ನನಗೆ ಪ್ರಿಯನಾದವನು.
06034017a ಯೋ ನ ಹೃಷ್ಯತಿ ನ ದ್ವೇಷ್ಟಿ ನ ಶೋಚತಿ ನ ಕಾಂಕ್ಷತಿ|
06034017c ಶುಭಾಶುಭಪರಿತ್ಯಾಗೀ ಭಕ್ತಿಮಾನ್ಯಃ ಸ ಮೇ ಪ್ರಿಯಃ||
ಯಾರು ಹರ್ಷಿಸುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಶೋಕಿಸುವುದಿಲ್ಲವೋ, ಆಸೆಪಡುವುದಿಲ್ಲವೋ ಆ ಶುಭಾಶುಭ ಪರಿತ್ಯಾಗೀ ಭಕ್ತಿಮಾನನು ನನಗೆ ಪ್ರಿಯನಾದವನು.
06034018a ಸಮಃ ಶತ್ರೌ ಚ ಮಿತ್ರೇ ಚ ತಥಾ ಮಾನಾವಮಾನಯೋಃ|
06034018c ಶೀತೋಷ್ಣಸುಖದುಃಖೇಷು ಸಮಃ ಸಂಗವಿವರ್ಜಿತಃ||
06034019a ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನ ಕೇನ ಚಿತ್|
06034019c ಅನಿಕೇತಃ ಸ್ಥಿರಮತಿರ್ಭಕ್ತಿಮಾನ್ಮೇ ಪ್ರಿಯೋ ನರಃ||
ಶತ್ರು ಮತ್ತು ಮಿತ್ರರಲ್ಲಿ ಹಾಗೂ ಮಾನ-ಅಪಮಾನಗಳಲ್ಲಿ ಸಮನಾಗಿರುವ, ಶೀತ-ಉಷ್ಣಗಳಲ್ಲಿ, ಸುಖ-ದುಃಖಗಳಲ್ಲಿ ಸಮನಾಗಿದ್ದು ಸಂಗವನ್ನು ವಿವರ್ಜಿಸಿರುವ, ನಿಂದನೆ-ಸ್ತುತಿಗಳಲ್ಲಿ ಮೌನಿಯಾಗಿದ್ದುಕೊಂಡು ಸಮವೆಂದು ಸ್ವೀಕರಿಸುವ, ಯಾವುದರಿಂದಲೂ ಸಂತುಷ್ಟನಾಗುವ, ಇಂಥದೇ ಸ್ಥಾನವೆಂದಿಲ್ಲದಿರುವ, ಸ್ಥಿರಮತಿ, ಭಕ್ತಿಮಾನ ನರನು ನನಗೆ ಪ್ರಿಯನಾದವನು.
06034020a ಯೇ ತು ಧರ್ಮ್ಯಾಮೃತಮಿದಂ ಯಥೋಕ್ತಂ ಪರ್ಯುಪಾಸತೇ|
06034020c ಶ್ರದ್ದಧಾನಾ ಮತ್ಪರಮಾ ಭಕ್ತಾಸ್ತೇಽತೀವ ಮೇ ಪ್ರಿಯಾಃ||
ಆದರೆ ಈಗ ಹೇಳಿದ ಧರ್ಮ್ಯಾಮೃತವನ್ನು ಶ್ರದ್ಧೆಯುಳ್ಳವರಾಗಿ ಮತ್ಪರರಾಗಿ ಯಾರು ಪರ್ಯುಪಾಸನೆ ಮಾಡುತ್ತಾರೋ ಅವರು ನನಗೆ ಬಹಳ ಪ್ರಿಯರಾಗಿರುವರು.”
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಭಕ್ತಿಯೋಗೋ ನಾಮ ದ್ವಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಭಕ್ತಿಯೋಗವೆಂಬ ಹನ್ನೆರಡನೇ ಅಧ್ಯಾಯವು.
ಭೀಷ್ಮ ಪರ್ವಣಿ ಚತುಸ್ತ್ರಿಂಶೋಽಧ್ಯಾಯಃ||
ಭೀಷ್ಮ ಪರ್ವದಲ್ಲಿ ಮೂವತ್ನಾಲ್ಕನೇ ಅಧ್ಯಾಯವು.