Bhishma Parva: Chapter 30

ಭೀಷ್ಮ ಪರ್ವ:ಭಗವದ್ಗೀತಾ ಪರ್ವ

೩೦

ಅಕ್ಷರಬ್ರಹ್ಮ ಯೋಗ

Related image06030001 ಅರ್ಜುನ ಉವಾಚ|

06030001a ಕಿಂ ತದ್ಬ್ರಹ್ಮ ಕಿಮಧ್ಯಾತ್ಮಂ ಕಿಂ ಕರ್ಮ ಪುರುಷೋತ್ತಮ|

06030001c ಅಧಿಭೂತಂ ಚ ಕಿಂ ಪ್ರೋಕ್ತಮಧಿದೈವಂ ಕಿಮುಚ್ಯತೇ||

ಅರ್ಜುನನು ಹೇಳಿದನು: “ಪುರುಷೋತ್ತಮ! ಆ ಬ್ರಹ್ಮವು ಯಾವುದು? ಅಧ್ಯಾತ್ಮವೆಂದರೇನು? ಕರ್ಮವೆಂದರೇನು? ಯಾವುದಕ್ಕೆ ಅಧಿಭೂತವೆಂದು ಹೇಳುತ್ತಾರೆ? ಅಧಿದೈವವೆಂದು ಯಾವುದನ್ನು ಕರೆಯುತ್ತಾರೆ?

06030002a ಅಧಿಯಜ್ಞಃ ಕಥಂ ಕೋಽತ್ರ ದೇಹೇಽಸ್ಮಿನ್ಮಧುಸೂದನ|

06030002c ಪ್ರಯಾಣಕಾಲೇ ಚ ಕಥಂ ಜ್ಞೇಯೋಽಸಿ ನಿಯತಾತ್ಮಭಿಃ||

ಮಧುಸೂದನ! ಈ ದೇಹದಲ್ಲಿ ಯಾರು ಹೇಗೆ ಅಧಿಯಜ್ಞನಾಗಿದ್ದಾನೆ? ಮರಣಕಾಲದಲ್ಲಿ ನಿಯತಾತ್ಮರೂ ಕೂಡ ನಿನ್ನನ್ನು ಹೇಗೆ ಅರಿತುಕೊಳ್ಳುತ್ತಾರೆ?”

06030003 ಶ್ರೀಭಗವಾನುವಾಚ|

06030003a ಅಕ್ಷರಂ ಬ್ರಹ್ಮ ಪರಮಂ ಸ್ವಭಾವೋಽಧ್ಯಾತ್ಮಮುಚ್ಯತೇ|

06030003c ಭೂತಭಾವೋದ್ಭವಕರೋ ವಿಸರ್ಗಃ ಕರ್ಮಸಂಜ್ಞಿತಃ||

ಶ್ರೀಭಗವಾನನು ಹೇಳಿದನು: “ಪರಮ ಅಕ್ಷರವೇ ಬ್ರಹ್ಮ. ಸ್ವಭಾವವನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಇರುವವುಗಳಲ್ಲಿ ಭಾವವನ್ನುಂಟುಮಾಡುವ ವಿಸರ್ಗವೇ (ಅಗಲುವಿಕೆ) ಕರ್ಮವೆಂದು ತಿಳಿಯಲ್ಪಟ್ಟಿದೆ.

06030004a ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಂ|

06030004c ಅಧಿಯಜ್ಞೋಽಹಮೇವಾತ್ರ ದೇಹೇ ದೇಹಭೃತಾಂ ವರ||

ದೇಹಧಾರಿಗಳಲ್ಲಿ ಶ್ರೇಷ್ಠನೇ! ಅಧಿಭೂತವು ಕ್ಷರ (ಕ್ಷಯಿಸುವ, ನಾಶವಾಗುವ) ಭಾವವು. ಪುರುಷ (ಎಲ್ಲವನ್ನೂ ಆವರಿಸಿಕೊಂಡಿರುವವ)ನು ಅಧಿದೈವತವು. ದೇಹದಲ್ಲಿರುವ ಅಧಿಯಜ್ಞವು ನಾನೇ.

06030005a ಅಂತಕಾಲೇ ಚ ಮಾಮೇವ ಸ್ಮರನ್ಮುಕ್ತ್ವಾ ಕಲೇವರಂ|

06030005c ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ||

ಅಂತ್ಯಕಾಲದಲ್ಲಿ ನನ್ನನ್ನೇ ಸ್ಮರಿಸುತ್ತಾ ಕಲೇವರವನ್ನು ಬಿಡುವವನು ನನ್ನದೇ ಭಾವವನ್ನು ಹೊಂದುತ್ತಾನೆ. ಇದರಲ್ಲಿ ಸಂಶಯವಿಲ್ಲ.

06030006a ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯಂತೇ ಕಲೇವರಂ|

06030006c ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ||

ಕೌಂತೇಯ! ಅಂತ್ಯದಲ್ಲಿ ಯಾವ ಯಾವ ಭಾವವನ್ನು ಸ್ಮರಿಸಿಕೊಂಡು, ಸದಾ ಅದೇ ಭಾವವನ್ನು ಭಾವಿಸುತ್ತಾ, ಶರೀರತ್ಯಾಗ ಮಾಡುವರೋ ಅವರು ಅದೇ ಭಾವವನ್ನು ಹೊಂದುವರು.

06030007a ತಸ್ಮಾತ್ಸರ್ವೇಷು ಕಾಲೇಷು ಮಾಮನುಸ್ಮರ ಯುಧ್ಯ ಚ|

06030007c ಮಯ್ಯರ್ಪಿತಮನೋಬುದ್ಧಿರ್ಮಾಮೇವೈಷ್ಯಸ್ಯಸಂಶಯಃ||

ಆದುದರಿಂದ ಸರ್ವ ಕಾಲಗಳಲ್ಲಿ ನನ್ನನ್ನು ಸ್ಮರಿಸು ಮತ್ತು ಯುದ್ಧಮಾಡು. ನನಗೆ ಅರ್ಪಿಸಿದ ಮನೋಬುದ್ಧಿಯು ನನ್ನನ್ನೇ ಸೇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

06030008a ಅಭ್ಯಾಸಯೋಗಯುಕ್ತೇನ ಚೇತಸಾ ನಾನ್ಯಗಾಮಿನಾ|

06030008c ಪರಮಂ ಪುರುಷಂ ದಿವ್ಯಂ ಯಾತಿ ಪಾರ್ಥಾನುಚಿಂತಯನ್||

ಪಾರ್ಥ! ಅಭ್ಯಾಸಯೋಗಯುಕ್ತನಾಗಿ, ಬೇರೆದಾರಿಯನ್ನು ಹಿಡಿಯದ ಚೇತಸ್ಸಿನಿಂದ ನನ್ನ ಅನುಚಿಂತನೆ ಮಾಡುವವನು ದಿವ್ಯ ಪರಮ ಪುರುಷನನ್ನು ಹೊಂದುವನು.

06030009a ಕವಿಂ ಪುರಾಣಮನುಶಾಸಿತಾರಂ

        ಅಣೋರಣೀಯಾಂಸಮನುಸ್ಮರೇದ್ಯಃ|

06030009c ಸರ್ವಸ್ಯ ಧಾತಾರಮಚಿಂತ್ಯರೂಪಂ

        ಆದಿತ್ಯವರ್ಣಂ ತಮಸಃ ಪರಸ್ತಾತ್||

ಕವಿ, ಪುರಾಣ, ಅನುಶಾಸಿತನೂ, ಅಣುವಿಗಿಂತ ಅಣುವಾಗಿರುವವನೂ, ಎಲ್ಲಕ್ಕೂ ಧಾತೃವೂ, ಅಚಿಂತ್ಯರೂಪನೂ, ಆದಿತ್ಯವರ್ಣನೂ, ತಮಸ್ಸಿನ ಆಚೆಯಿರುವವನೂ (ಆಗಿರುವ ಅವನನ್ನು ಹೊಂದುವನು).

06030010a ಪ್ರಯಾಣಕಾಲೇ ಮನಸಾಚಲೇನ

        ಭಕ್ತ್ಯಾ ಯುಕ್ತೋ ಯೋಗಬಲೇನ ಚೈವ|

06030010c ಭ್ರುವೋರ್ಮಧ್ಯೇ ಪ್ರಾಣಮಾವೇಶ್ಯ ಸಮ್ಯಕ್

        ಸ ತಂ ಪರಂ ಪುರುಷಮುಪೈತಿ ದಿವ್ಯಂ||

ಮರಣಕಾಲದಲ್ಲಿ ಅಚಲ ಮನಸ್ಸಿನಿಂದ, ಭಕ್ತಿಯಿಂದಲೂ ಯೋಗಬಲದಿಂದಲೂ ಕೂಡಿದವನಾಗಿ, ಹುಬ್ಬುಗಳ ಮಧ್ಯೆ ಪ್ರಾಣವನ್ನು ತಂದವನು ಆ ದಿವ್ಯ ಪರಮ ಪುರುಷನನ್ನು ಹೊಂದುತ್ತಾನೆ.

06030011a ಯದಕ್ಷರಂ ವೇದವಿದೋ ವದಂತಿ

        ವಿಶಂತಿ ಯದ್ಯತಯೋ ವೀತರಾಗಾಃ|

06030011c ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ

        ತತ್ತೇ ಪದಂ ಸಂಗ್ರಹೇಣ ಪ್ರವಕ್ಷ್ಯೇ||

ವೇದವಿದರು ಯಾವ ಅಕ್ಷರವನ್ನು ಹೇಳುತ್ತಾರೋ, ವೀತರಾಗ ಯತಿಗಳು ಯಾವುದನ್ನು ಪ್ರವೇಶಿಸುವರೋ, ಬ್ರಹ್ಮಚರ್ಯವನ್ನು ನಡೆಸುವವರು ಏನನ್ನು ಬಯಸುವರೋ ಆ ಪದವನ್ನು ನಿನಗೆ ಸಂಕ್ಷಿಪ್ತವಾಗಿ ಹೇಳುತ್ತೇನೆ.

06030012a ಸರ್ವದ್ವಾರಾಣಿ ಸಂಯಮ್ಯ ಮನೋ ಹೃದಿ ನಿರುಧ್ಯ ಚ|

06030012c ಮೂರ್ಧ್ನ್ಯಾಧಾಯಾತ್ಮನಃ ಪ್ರಾಣಮಾಸ್ಥಿತೋ ಯೋಗಧಾರಣಾಂ||

06030013a ಓಮಿತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್|

06030013c ಯಃ ಪ್ರಯಾತಿ ತ್ಯಜನ್ದೇಹಂ ಸ ಯಾತಿ ಪರಮಾಂ ಗತಿಂ||

ಸರ್ವ ದ್ವಾರಗಳನ್ನು ಸಂಯಮದಲ್ಲಿಟ್ಟುಕೊಂಡು, ಮನಸ್ಸನ್ನು ಹೃದಯದಲ್ಲಿ ನಿರೋಧಿಸಿ, ಪ್ರಾಣವನ್ನು ಮೂರ್ಧ್ನಿಗೆ ತಂದು, ಯೋಗಧಾರಣೆ ಮಾಡಿ, ಓಂ ಎಂದು ಏಕಾಕ್ಷರ ಬ್ರಹ್ಮನನ್ನು ಹೇಳಿಕೊಳ್ಳುತ್ತಾ, ನನ್ನನ್ನು ಅನುಸ್ಮರಿಸಿಕೊಳ್ಳುತ್ತಾ ಯಾರು ದೇಹವನ್ನು ತ್ಯಜಿಸುತ್ತಾರೋ ಅವರು ಪರಮ ಗತಿಯನ್ನು ಪಡೆಯುತ್ತಾರೆ.

06030014a ಅನನ್ಯಚೇತಾಃ ಸತತಂ ಯೋ ಮಾಂ ಸ್ಮರತಿ ನಿತ್ಯಶಃ|

06030014c ತಸ್ಯಾಹಂ ಸುಲಭಃ ಪಾರ್ಥ ನಿತ್ಯಯುಕ್ತಸ್ಯ ಯೋಗಿನಃ||

ಪಾರ್ಥ! ಅನನ್ಯಚೇತಸನಾಗಿ ಸತತವೂ ನಿತ್ಯವೂ ನನ್ನನ್ನು ಯಾರು ಸ್ಮರಿಸುವನೋ ಆ ನಿತ್ಯಯುಕ್ತ ಯೋಗಿಗೆ ನಾನು ಸುಲಭ.

06030015a ಮಾಮುಪೇತ್ಯ ಪುನರ್ಜನ್ಮ ದುಃಖಾಲಯಮಶಾಶ್ವತಂ|

06030015c ನಾಪ್ನುವಂತಿ ಮಹಾತ್ಮಾನಃ ಸಂಸಿದ್ಧಿಂ ಪರಮಾಂ ಗತಾಃ||

ನನ್ನನ್ನು ಸೇರಿ ಪರಮ ಗತಿಯನ್ನು ಸಾಧಿಸಿ ಪಡೆದ ಮಹಾತ್ಮರು ದುಃಖದ ಆಲಯವಾಗಿರುವ, ಅಶಾಶ್ವತವಾಗಿರುವ ಪುನರ್ಜನ್ಮವನ್ನು ಪಡೆಯುವುದಿಲ್ಲ.

06030016a ಆ ಬ್ರಹ್ಮಭುವನಾಲ್ಲೋಕಾಃ ಪುನರಾವರ್ತಿನೋಽರ್ಜುನ|

06030016c ಮಾಮುಪೇತ್ಯ ತು ಕೌಂತೇಯ ಪುನರ್ಜನ್ಮ ನ ವಿದ್ಯತೇ||

ಅರ್ಜುನ! ಬ್ರಹ್ಮಭುವನದವರೆಗಿನ ಲೋಕಗಳು ಪುನರಾವೃತ್ತಿಗೊಳ್ಳುವವು. ಆದರೆ ಕೌಂತೇಯ! ನನ್ನನ್ನು ಸೇರಿದವರಿಗೆ ಪುನರ್ಜನ್ಮವೆನ್ನುವುದಿರುವುದಿಲ್ಲ.

06030017a ಸಹಸ್ರಯುಗಪರ್ಯಂತಮಹರ್ಯದ್ಬ್ರಹ್ಮಣೋ ವಿದುಃ|

06030017c ರಾತ್ರಿಂ ಯುಗಸಹಸ್ರಾಂತಾಂ ತೇಽಹೋರಾತ್ರವಿದೋ ಜನಾಃ||

ಆಹೋರಾತ್ರಗಳನ್ನು ತಿಳಿದ ಜನರು ಬ್ರಹ್ಮನ ಹಗಲು ಸಹಸ್ರ ಯುಗ ಪರ್ಯಂತ ಮತ್ತು ರಾತ್ರಿಯು ಸಹಸ್ರಯುಗಳ ನಂತರ ಕೊನೆಗೊಳ್ಳುತ್ತದೆ ಎನ್ನುವುದನ್ನು ತಿಳಿದಿರುತ್ತಾರೆ.

06030018a ಅವ್ಯಕ್ತಾದ್ವ್ಯಕ್ತಯಃ ಸರ್ವಾಃ ಪ್ರಭವಂತ್ಯಹರಾಗಮೇ|

06030018c ರಾತ್ರ್ಯಾಗಮೇ ಪ್ರಲೀಯಂತೇ ತತ್ರೈವಾವ್ಯಕ್ತಸಂಜ್ಞಕೇ||

ಹಗಲು ಬರುವಾಗ ಎಲ್ಲವೂ ಅವ್ಯಕ್ತದಿಂದ ವ್ಯಕ್ತವಾಗುತ್ತವೆ. ಮತ್ತು ರಾತ್ರಿಯು ಬರಲು ಅದೇ ಅವ್ಯಕ್ತದಲ್ಲಿ ಪ್ರಲಯವಾಗುತ್ತವೆ.

06030019a ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ|

06030019c ರಾತ್ರ್ಯಾಗಮೇಽವಶಃ ಪಾರ್ಥ ಪ್ರಭವತ್ಯಹರಾಗಮೇ||

ಪಾರ್ಥ! ಈ ಭೂತಗ್ರಾಮಗಳು ಹೀಗೆ ಆಗುತ್ತಾ ಪ್ರಲಯವಾಗುತ್ತವೆ. ರಾತ್ರಿ ಬರಲು ಅವಶವಾಗುತ್ತವೆ. ಹಗಲಾಗಲು ಹುಟ್ಟುತ್ತವೆ.

06030020a ಪರಸ್ತಸ್ಮಾತ್ತು ಭಾವೋಽನ್ಯೋಽವ್ಯಕ್ತೋಽವ್ಯಕ್ತಾತ್ಸನಾತನಃ|

06030020c ಯಃ ಸ ಸರ್ವೇಷು ಭೂತೇಷು ನಃಶ್ಯತ್ಸು ನ ವಿನಶ್ಯತಿ||

ಆದರೆ ಆ ಅವ್ಯಕ್ತಕ್ಕಿಂತಲೂ ಅವ್ಯಕ್ತವಾದ, ಸನಾತನ ಭಾವವು ಆ ಎಲ್ಲ ಭೂತಗಳು ನಶಿಸಿದರೂ ವಿನಾಶವಾಗುವುದಿಲ್ಲ.

06030021a ಅವ್ಯಕ್ತೋಽಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಂ|

06030021c ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ||

ಅವ್ಯಕ್ತ ಮತ್ತು ಅಕ್ಷರವೆಂದು ಏನನ್ನು ಹೇಳುತ್ತಾರೋ ಅದು ಪರಮ ಗತಿ. ಇದನ್ನು ಸೇರಿದರೆ ಹಿಂದಿರುಗುವುದಲ್ಲ. ಇದೇ ನನ್ನ ಪರಮ ಧಾಮ.

06030022a ಪುರುಷಃ ಸ ಪರಃ ಪಾರ್ಥ ಭಕ್ತ್ಯಾ ಲಭ್ಯಸ್ತ್ವನನ್ಯಯಾ|

06030022c ಯಸ್ಯಾಂತಃಸ್ಥಾನಿ ಭೂತಾನಿ ಯೇನ ಸರ್ವಮಿದಂ ತತಂ||

ಪಾರ್ಥ! ಆ ಪರಮ ಪುರುಷನು ಅನನ್ಯ ಭಕ್ತಿಯಿಂದ ದೊರೆಯುತ್ತಾನೆ. ಇವನಲ್ಲಿಯೇ ಸರ್ವ ಭೂತಗಳಿರುವವು. ಆತನಿಂದಲೇ ಇವೆಲ್ಲವೂ ವ್ಯಾಪವಾಗಿರುವುದು.

06030023a ಯತ್ರ ಕಾಲೇ ತ್ವನಾವೃತ್ತಿಮಾವೃತ್ತಿಂ ಚೈವ ಯೋಗಿನಃ|

06030023c ಪ್ರಯಾತಾ ಯಾಂತಿ ತಂ ಕಾಲಂ ವಕ್ಷ್ಯಾಮಿ ಭರತರ್ಷಭ||

ಭರತರ್ಷಭ! ಯಾವ ಕಾಲದಲ್ಲಿ ಯೋಗಿಗಳು ಪ್ರಯಾಣಿಸುತ್ತಿರುವಾಗ ಆವೃತ್ತಿ-ಅನಾವೃತ್ತಿಗಳನ್ನು ಹೊಂದುತ್ತಾರೋ ಆ ಕಾಲದ ಕುರಿತು ನಿನಗೆ ಹೇಳುತ್ತೇನೆ.

06030024a ಅಗ್ನಿರ್ಜ್ಯೋತಿರಹಃ ಶುಕ್ಲಃ ಷಣ್ಮಾಸಾ ಉತ್ತರಾಯಣಂ|

06030024c ತತ್ರ ಪ್ರಯಾತಾ ಗಚ್ಛಂತಿ ಬ್ರಹ್ಮ ಬ್ರಹ್ಮವಿದೋ ಜನಾಃ||

ಅಗ್ನಿ, ಜ್ಯೋತಿ, ಅಹಸ್ಸು, ಶುಕ್ಲ, ಮತ್ತು ಉತ್ತರಾಯಣದ ಆರು ಮಾಸಗಳಲ್ಲಿ ಪ್ರಯಾಣ ಮಾಡಿದ ಬ್ರಹ್ಮವಿದ ಜನರು ಬ್ರಹ್ಮನನ್ನು ಸೇರುತ್ತಾರೆ.

06030025a ಧೂಮೋ ರಾತ್ರಿಸ್ತಥಾ ಕೃಷ್ಣಃ ಷಣ್ಮಾಸಾ ದಕ್ಷಿಣಾಯನಂ|

06030025c ತತ್ರ ಚಾಂದ್ರಮಸಂ ಜ್ಯೋತಿರ್ಯೋಗೀ ಪ್ರಾಪ್ಯ ನಿವರ್ತತೇ||

ಧೂಮ, ರಾತ್ರಿ, ಕೃಷ್ಣಪಕ್ಷ, ಮತ್ತು ದಕ್ಷಿಣಾಯನದ ಆರು ಮಾಸಗಳಲ್ಲಿ ಪ್ರಯಾಣಿಸಿದ ಯೋಗಿಯು ಚಂದ್ರನ ಜ್ಯೋತಿಯನ್ನು ಸೇರಿ ಮರಳಿ ಬರುತ್ತಾರೆ.

06030026a ಶುಕ್ಲಕೃಷ್ಣೇ ಗತೀ ಹ್ಯೇತೇ ಜಗತಃ ಶಾಶ್ವತೇ ಮತೇ|

06030026c ಏಕಯಾ ಯಾತ್ಯನಾವೃತ್ತಿಮನ್ಯಯಾವರ್ತತೇ ಪುನಃ||

ಶುಕ್ಲ-ಕೃಷ್ಣಗಳೆಂಬ ಈ ಎರಡು ಗತಿಗಳು ಜಗತ್ತಿಗೆ ಶಾಶ್ವತವಾಗಿರುತ್ತವೆ. ಒಂದರಿಂದ ಅನಾವೃತ್ತಿಯನ್ನು ಹೊಂದುತ್ತಾರೆ. ಇನ್ನೊಂದರಿಂದ ಪುನಃ ಮರಳಿ ಬರುತ್ತಾರೆ.

06030027a ನೈತೇ ಸೃತೀ ಪಾರ್ಥ ಜಾನನ್ಯೋಗೀ ಮುಹ್ಯತಿ ಕಶ್ಚನ|

06030027c ತಸ್ಮಾತ್ಸರ್ವೇಷು ಕಾಲೇಷು ಯೋಗಯುಕ್ತೋ ಭವಾರ್ಜುನ||

ಪಾರ್ಥ! ಅರ್ಜುನ! ಈ ಎರಡು ಸೃತಿಗಳನ್ನು ಸರಿಯಾಗಿ ತಿಳಿದುಕೊಂಡವನು ಯಾವಾಗಲೂ ಮೋಸಹೋಗುವುದಿಲ್ಲ. ಆದುದರಿಂದ ಎಲ್ಲ ಕಾಲಗಳಲ್ಲಿ ಯೋಗಯುಕ್ತನಾಗಿರು.

06030028a ವೇದೇಷು ಯಜ್ಞೇಷು ತಪಃಸು ಚೈವ

        ದಾನೇಷು ಯತ್ಪುಣ್ಯಫಲಂ ಪ್ರದಿಷ್ಟಂ|

06030028c ಅತ್ಯೇತಿ ತತ್ಸವಮಿದಂ ವಿದಿತ್ವಾ

        ಯೋಗೀ ಪರಂ ಸ್ಥಾನಮುಪೈತಿ ಚಾದ್ಯಂ||

ಇದನ್ನು ತಿಳಿದ ಯೋಗಿಯು ವೇದಗಳ, ಯಜ್ಞಗಳ, ತಪಸ್ಸಿನ, ಮತ್ತು ದಾನಗಳ ಹೇಳಿದುದಕಿಂಥ ಹೆಚ್ಚು ಪುಣ್ಯಫಲವನ್ನು ಮತ್ತು ಪರಮ ಸ್ಥಾನವನ್ನು ಪಡೆಯುತ್ತಾನೆ.”

ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಅಕ್ಷರಬ್ರಹ್ಮಯೋಗೋ ನಾಮ ಅಷ್ಟಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಅಕ್ಷರಬ್ರಹ್ಮಯೋಗವೆಂಬ ಎಂಟನೇ ಅಧ್ಯಾಯವು.

ಭೀಷ್ಮಪರ್ವಣಿ ತ್ರಿಂಶೋಽಧ್ಯಾಯಃ||

ಭೀಷ್ಮಪರ್ವದಲ್ಲಿ ಮೂವತ್ತನೇ ಅಧ್ಯಾಯವು.

Related image

Comments are closed.